ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿಗಾಗಿ ಸ್ನೇಹಸಂಬಂಧಗಳನ್ನು ಬೆಸೆದುಕೊಂಡ ಬುಂದೇಲ್ಖಂಡ್ ಮಹಿಳೆಯರು

ಮಹಿಳೆಯರು ಕೇವಲ ನೀರಿನ ಹೊಣೆಗಾರಿಕೆಯನ್ನು ಹೊರುವುದಿಲ್ಲ, ನೀರಿನ ಅಭಾವದ ಪರಿಣಾಮಗಳನ್ನೂ ಅವರು ಎದುರಿಸುತ್ತಾರೆ.  ಈ ಮಹಿಳೆಯರು ‘ಜಲ ಸಹೇಲಿ’ (ನೀರಿನ ಸ್ನೇಹಿತೆಯರು) ಆದಾಗ ಏನಾಗುವರೆಂಬುದಕ್ಕೆ ಈ ವಿಡಿಯೋವನ್ನು ನೋಡಿ. 

ಉತ್ತರ ಪ್ರದೇಶದ ಬುಂದೇಲ್ಖಂಡ್‌ನ ಸಿರ್ಕೂ ಎಂಬ ೩೯ ವರ್ಷದ ಮಹಿಳೆಯು ನೀರನ್ನು ತರಲು ದಿನವೂ ೮ ಕಿಲೋಮೀಟರ್ ನಡೆಯುತ್ತಾಳೆ.  ಮಹಿಳೆಯಾಗಿ, ತನ್ನ ಕುಟುಂಬಕ್ಕೆ ನೀರು ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳುವುದು ಆಕೆಯ ಹೊಣೆಗಾರಿಕೆಯೇ ಆಗಿತ್ತು.  ಈ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸುವ ತನಕ, ಇದು ಆಕೆಯ ಸಮಯ ಹಾಗೂ ಈಗಾಗಲೇ ಹದಗೆಟ್ಟ ಆರೋಗ್ಯದ ಮೇಲೂ ಮತ್ತಷ್ಟು ಒತ್ತಡ ಹೇರಿತು.

Bundelkhand women forge friendships for water - 2ಮೂರು ವರ್ಷಗಳ ಕೆಳಗೆ, ತಮ್ಮ ಮೇಲೆ ಅತಿ ಹೆಚ್ಚು ಪರಿಣಾಮ ಬೀರುವ ನೀರಿನ ವಿಷಯಗಳನ್ನು ಕುರಿತಾಗಿ ಕ್ರಮ ಕೈಗೊಳ್ಳಲು ಆಕೆಯೊಂದಿಗೆ ಕೆಲವು ಮಹಿಳೆಯರು ಸೇರಿ ‘ಪಾನಿ ಪಂಚಾಯತ್’ ಎಂಬ ಅನೌಪಚಾರಿಕ ನೀರಿನ ಸಮಿತಿಯನ್ನು ಹುಟ್ಟುಹಾಕಿದರು.  ಮೂಲಭೂತ ಹಕ್ಕಾಗಿ ನೀರು ಲಭ್ಯವಾಗುವಂತೆ, ತಮ್ಮ ಗ್ರಾಮಗಳಲ್ಲಿನ ಜಲ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸೃಷ್ಟಿಯ ಮೂಲಕ ಎಲ್ಲರಿಗೂ ನೀರು ದೊರೆಯುವಂತೆ ಮಾಡುವ ಸರಳ ಧ್ಯೇಯವನ್ನು ಅವರು ಹೊಂದಿದ್ದರು.  ಪರಮಾರ್ಥ್ ಸಮಾಜ್ ಸೇವಿ ಸಂಸ್ಥಾನ್ ಎಂಬ ಸ್ಥಳೀಯ ಸಂಸ್ಥೆಯ ನೆರವಿನೊಂದಿಗೆ, ಈ ನಿಟ್ಟಿನಲ್ಲಿ ಅವರು ಹೆಜ್ಜೆ ಹಾಕತೊಡಗಿದರು.

ಪಾನಿ ಪಂಚಾಯತ್ ಸಂಘಟನ್’ ಇಬ್ಬರು ಮಹಿಳೆಯರನ್ನು ‘ಜಲ ಸಹೇಲಿ’ ಅಥವಾ ‘ಜಲ ಸ್ನೇಹಿತೆ’ಯರಾಗಿ ನೇಮಕ ಮಾಡಿತು.  ನೀರಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳನ್ನು ನಿಭಾಯಿಸುವ ವಿಧಾನವನ್ನು ಚರ್ಚಿಸಿ, ನಿರ್ಧರಿಸಲು, ಹೊಸ ಹ್ಯಾಂಡ್‌ಪಂಪ್‌ನ್ನು ನಿರ್ಮಾಣ ಮಾಡುವ ಸ್ಥಳದ ಬಗ್ಗೆ ನಿರ್ಣಯ ತೆಗೆದುಕೊಳ್ಳಲು, ನಿರ್ಜೀವವಾದ ‘ತಾಲಾಬ್’ ಅಥವಾ ಗ್ರಾಮದ ಕೆರೆಯನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳನ್ನು ಚರ್ಚಿಸಲು ಹಾಗೂ ಸುಧಾರಿತ ನೀರಾವರಿಯನ್ನು ತರಲು ಚೆಕ್‌ಡ್ಯಾಮ್‌ಗಳು ಬೇಕಾದ ಸ್ಥಳಗಳನ್ನು ನಿಷ್ಕರ್ಷೆ ಮಾಡಲು ಅವರು ಈಗ ಭೇಟಿ ಮಾಡುತ್ತಾರೆ. ಈ ಎಲ್ಲ ಕೆಲಸಗಳೂ ಗ್ರಾಮ ಪಂಚಾಯತಿಯ ಮೂಲಕ ಬ್ಲಾಕ್ ಮಟ್ಟದಲ್ಲಿ ಮಾಡಲಾಗುತ್ತದೆ.

ಇಂದು, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದ ೭ ಜಿಲ್ಲೆಗಳ ಆದ್ಯಂತ ೫೦೦ ಸಹೇಲಿಗಳಿದ್ದಾರೆ.  ಕೇವಲ ಸಭೆಗಳನ್ನು ನಡೆಸಲು ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ರಾಜ್ಯ ಮಟ್ಟದ ಅಧಿಕಾರಿಗಳಿಗೂ ತಮ್ಮ ಧ್ವನಿ ತಲಪುವಂತೆ ಖಚಿತಪಡಿಸಿಕೊಳ್ಳುತ್ತಾರೆ.  ಅತ್ಯವಶ್ಯಕವಾಗಿ ದುರಸ್ತಿಯ ಅಗತ್ಯವಿದ್ದ ನೀರಿನ ಆಗರಗಳ ಪುನರುಜ್ಜೀವನಕ್ಕಾಗಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದಾರೆ.

Bundelkhand women forge friendships for water - 1“ಮಳೆ ಕಡಿಮೆ ಆಗಿದೆ, ಸ್ವಚ್ಛ ನೀರಿನ ಸಮಸ್ಯೆ ಯಾವಾಗಲೂ ಇತ್ತು.  ಹಾಗಾಗಿ, ನೀರೇ ನಮ್ಮ ಆದ್ಯತೆ ಆಯಿತು,” ಎಂದು ಸಿರ್ಕೂ ನೆನಪಿಸಿಕೊಳ್ಳುತ್ತಾರೆ. ನಾಚಿ ನಗುತ್ತ, “ನಮ್ಮ ಮನೆಯ ನಾಲ್ಕು ಗೋಡೆಗಳ ಆಚೆ ಏನಿದೆ ಎಂದು ಮೊದಲು ನಮಗೆ ಗೊತ್ತೇ ಇರಲಿಲ್ಲ; ಈಗ, ನಾವು ಪ್ರಯಾಣ ಮಾಡುತ್ತೇವೆ, ನೀರಿನ ಬಗ್ಗೆ ಜನರನ್ನು ಭೇಟಿ ಮಾಡಿ ಮಾತನಾಡುತ್ತೇವೆ,” ಎಂದು ಆಕೆ ಹೇಳುತ್ತಾಳೆ.

ಈ ಪಯಣ ಪ್ರಾರಂಭವಾಗಿ ಈಗಾಗಲೇ ಮೂರು ವರ್ಷಗಳು ಸಂದಿವೆ.  ಈಗ, ಈ ‘ಜಲ ಸಹೇಲಿ’ಯರು ಹೆಚ್ಚು ಸ್ವಾವಲಂಬಿ ಹಾಗೂ ಆತ್ಮವಿಶ್ವಾಸಿಗಳಾಗಿದ್ದಾರೆ, ಆದರೆ ಬದಲಾವಣೆಯ ಪ್ರಕ್ರಿಯೆಯು ಸುಲಭವಾಗಿ ಇರಲಿಲ್ಲ.  ತಮ್ಮ ಕುಟುಂಬದ ಪುರುಷರಿಗೇ ‘ಪರ್ದಾ’ ಅಥವಾ ಮುಖಪರದೆಯಿಂದ ಹೊರಬರುತ್ತಿರುವ ತಮ್ಮ ಮನೆಯ ಹೆಂಗಸರ ಬಗ್ಗೆ ಅಳುಕಿತ್ತು.  ಗ್ರಾಮದಲ್ಲಿನ ಇತರರು ಅವರನ್ನು ‘ನೇತಾಜಿ’ ಎಂದು ಹಂಗಿಸಿ, ಅವರಲ್ಲಿ ಪುಟಿದೆದ್ದ ಹುಮ್ಮಸ್ಸನ್ನು ಹತ್ತಿಕ್ಕಲು ಪ್ರಯತ್ನಿಸಿದರು.  ಅದನ್ನೆಲ್ಲ ಲೆಕ್ಕಿಸದೆ, ಮಹಿಳೆಯರು ಹಾಗೂ ವೃದ್ಧರನ್ನು ಭೇಟಿ ಮಾಡುವುದನ್ನು ಅವರು ಮುಂದುವರೆಸಿ, ಅವರಿಗೆ ನೀರಿನ ಮಹತ್ವದ ಬಗ್ಗೆ ಮನವರಿಕೆ ಮಾಡುವುದರೊಂದಿಗೆ, ಮುಂದಿನ ಪೀಳಿಗೆಗಳಿಗೂ ಇದನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಅವರ ಎಡಬಿಡದ ಪ್ರಯತ್ನಗಳ ಫಲವಾಗಿ, ಪರಿಸ್ಥಿತಿ ಇಂದು ಬದಲಾಗಿದೆ.  ಪುರುಷರು ಅವರ ಮಾತುಗಳನ್ನು ಕೇಳುತ್ತಾರೆ, ಹಾಗೆಯೇ ಗ್ರಾಮದ ‘ಪ್ರಧಾನ್’ ಅಥವಾ ‘ಮುಖ್ಯಸ್ಥ’ನೂ ಕೇಳುತ್ತಾರೆ.  ಸರ್ಕಾರಿ ಅನುದಾನಗಳು ಹಾಗೂ ‘ಶ್ರಮದಾನ’ ಅಥವಾ ಸಮುದಾಯದವರು ಸ್ವಪ್ರೇರಣೆಯಿಂದ ನೀಡುವ ಕೊಡುಗೆಗಳೊಂದಿಗೆ, ಅವರು ಚೆಕ್‌ಡ್ಯಾಮ್‌ಗಳ ನಿರ್ಮಾಣವನ್ನು ಮಾಡಿದ್ದಾರೆ.  ನೀರನ್ನು ಕುರಿತಾಗಿ ಯಾವುದೇ ರೀತಿಯ ಮಹತ್ತರ ನಿರ್ಣಯಗಳನ್ನು ತೆಗೆದುಕೊಳ್ಳುವ ಮುನ್ನ, ಅವರು ಸಿದ್ಧಪಡಿಸಿದ ಗ್ರಾಮ ಜಲ ಸುರಕ್ಷಾ ಯೋಜನೆ (ಡಬ್ಲ್ಯುಎಸ್‌ಪಿ)ಯನ್ನು ‘ಪಂಚಾಯತ್’ ಗಣನೆಗೆ ತೆಗೆದುಕೊಳ್ಳುತ್ತದೆ.

ನೀಲಿ ಸೀರೆಗಳನ್ನು ಉಟ್ಟ ಅವರು, ಜಗತ್ತನ್ನು ಬದಲಾಯಿಸಲು ತಮ್ಮ ‘ನೀರಿನ’ ಉದ್ದೇಶವನ್ನು ಪ್ರದರ್ಶಿಸುತ್ತಾ, ‘ಬದ್ಲೇಂಗೆ ಜ಼ಮಾನ’ ಅಥವಾ ‘ಜಗತ್ತನ್ನು ಬದಲಾಯಿಸೋಣ’ ಎಂಬ ತಮ್ಮ ಘೋಷವಾಕ್ಯವನ್ನು ಕೂಗುತ್ತಾರೆ.  ಈ ದಿಟ್ಟ ಮಹಿಳೆಯರು ತಮ್ಮ ಕಥೆ ಇಲ್ಲಿ ಹೇಳುತ್ತಾರೆ, ನೋಡಿ!

ನೀರಿನ ಮೇಲೆ ಹಕ್ಕು ಮೊದಲು ಮಹಿಳೆಯರದು ಯೋಜನೆಯನ್ನು ಸ್ಥಾಪನೆ ಮಾಡಿದುದರ ಸಲುವಾಗಿ ಐರೋಪ್ಯ ಒಕ್ಕೂಟದ ನೆರವಿಗಾಗಿ ಪರಮಾರ್ಥ್ ಸಮಾಜ್ ಸೇವಿ ಸಂಸ್ಥಾನ್ ಚಿರಋಣಿಯಾಗಿದೆ’.

ಮೂಲ ಆಂಗ್ಲ ಲೇಖನ: ಉಷಾ ದೆವಾನಿ, ಸಬಿತಾ ಕೌಶಲ್

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

(ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ : http://www.indiawaterportal.org/articles/bundelkhand-women-forge-friendships-water)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*