ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನದಿಯು ಜನರ ಬಳಿ ಬಂದಾಗ…..

ಗ್ರಾಮಸ್ಥರು ನಿಸರ್ಗದ ವಿರುದ್ಧ ಕೆಲಸ ಮಾಡದೆ, ನಿಸರ್ಗದೊಂದಿಗೆ ಒಗ್ಗೂಡಿ ಕೆಲಸ ಮಾಡಲು ನಿಶ್ಚಯಿಸಿದಾಗ, ಪೂರ್ವ ರಾಜಸ್ಥಾನದ ನಂದುವಾಲಿ ನದಿಯು ಪುನಃ ಹರಿಯಲು ಪ್ರಾರಂಭಿಸಿತು.  ನದಿಯ ದಡಗಳಲ್ಲಿ ವಾಸವಾಗಿರುವ ಜನಕ್ಕೆ ನದಿಯು ಈಗ ಜೀವಸೆಲೆಯಾಗಿದೆ.

Photos for - a river comes to life copyಗಜಾನಂದ ಶರ್ಮಾ ಈ ವರ್ಷದ ಮುಂಗಾರಿನ ಬಗ್ಗೆ ಉತ್ಸುಕರಾಗಿದ್ದಾರೆ.  ತಮ್ಮ ಹೊಲದಲ್ಲಿ ಹರಿಯುವ ಸಣ್ಣ ತೊರೆಯ ಮೇಲೆ ಅಣೆಕಟ್ಟೊಂದನ್ನು ನಿರ್ಮಿಸುತ್ತಿದ್ದಾರೆ.  “ಮಳೆಯ ನಂತರ, ಭೂಮಿಯು ನೀರಿನಿಂದ ತುಂಬುತ್ತದೆ, ನಂತರ ಗೋಧಿ ನಾಟಿ ಮಾಡಿದರೆ, ಈ ಪ್ರದೇಶದಲ್ಲೇ ದಾಖಲೆ ಗೋಧಿಯ ಫಸಲನ್ನು ನಾನು ಪಡೆಯಬಹುದು,” ಎಂದು ಅವರು ಭವಿಷ್ಯ ನುಡಿಯುತ್ತಾರೆ.  ಈ ಭವಿಷ್ಯವಾಣಿಯು ಅವರ ಜ್ಯೋತಿಷ್ಯ ಜ್ಞಾನದಿಂದ ಬಂದದ್ದಲ್ಲ, ಬದಲಿಗೆ ವರ್ಷಾಂತರಗಳಲ್ಲಿ ಭೂವಿಜ್ಞಾನದಿಂದ ಪಡೆದ ಜ್ಞಾನದಿಂದ ಬಂದ ತಿಳುವಳಿಕೆಯಾಗಿದೆ.

ನದಿ ಅಥವಾ ತೊರೆಯ ನೈಸರ್ಗಿಕ ಹರಿವಿಗೆ ಲಂಬವಾಗಿ ನಿರ್ಮಿತವಾದ ಸಿಮೆಂಟ್ ಗೋಡೆಯೇ ಅಣೆಕಟ್ಟು.  ಹೆಚ್ಚುವರಿ ನೀರು ಗೋಡೆಗಳ ಮೇಲಿಂದ ಹರಿದು ಹೋದರೆ, ಅದರಲ್ಲಿ ಹಿಡಿದಿಟ್ಟುಕೊಂಡ ನೀರು ನಿಧಾನವಾಗಿ ಭೂಮಿಯೊಳಗೆ ಇಳಿದು, ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಬಾವಿಗಳನ್ನು ತುಂಬುತ್ತದೆ/ಮರುಪೂರಣಗೊಳಿಸುತ್ತದೆ.  ಮೇಲ್ದಂಡೆಯಿಂದ ಫಲವತ್ತಾದ ಹೂಳನ್ನೂ ನೀರು ತಂದು, ಅದರಡಿಯ ಭೂಮಿಯನ್ನು ಸಿರಿವಂತಗೊಳಿಸುತ್ತದೆ.  ಈ ಮಳೆಗಾಲದಲ್ಲಿ, ರಾಜಸ್ಥಾನದ ಅಲ್ವರ್ ಜಿಲ್ಲೆಯ ಸರಿಸ್ಕಾ ಹುಲಿ ವನ್ಯಧಾಮದ ದಕ್ಷಿಣ ಅಂಚಿನಲ್ಲಿನ ಘೇವರ್ ಗ್ರಾಮದಲ್ಲಿರುವ ಶರ್ಮಾರ ಹೊಲವು ಇದಕ್ಕೆ ಸಾಕ್ಷಿಯಾಗಲಿದೆ.  ಕೆಳದಂಡೆಯಲ್ಲಿರುವ ಹನ್ನೆರಡಕ್ಕೂ ಹೆಚ್ಚು ಬಾವಿಗಳನ್ನು ಅಣೆಕಟ್ಟು ಮರುಪೂರಣಗೊಳಿಸಲಿದ್ದು, ಈ ಕಾರಣಕ್ಕಾಗಿ ನೆರೆಹೊರೆಯ ರೈತರೂ ಶ್ರಮದಾನ ಹಾಗೂ ಹಣದ ಸಹಾಯದ ಮೂಲಕ ಅಣೆಕಟ್ಟು ಕಟ್ಟಲು ತಮ್ಮ ಕೊಡುಗೆಯನ್ನು ನೀಡಿದ್ದಾರೆ.

Photos for - a river comes to life - 3 copyಅಣೆಕಟ್ಟುಗಳಲ್ಲದೆ, ಈ ಪ್ರದೇಶದಲ್ಲಿ ಅನೇಕಾ ಜೊಹಾಡ್‌ಗಳು (ಕೊಳಗಳು), ಮೇಧ್‌ಬಂಧಿ (ಬದುಗಳು) ಹಾಗೂ ೧೬೦ ಚದರ ಕಿಲೋಮೀಟರ್ ತ್ರಿಜ್ಯದಲ್ಲಿರುವ ೨೦ ಗ್ರಾಮಗಳನ್ನು ಹೆಚ್ಚುವರಿ ನೀರಿರುವ ಪ್ರದೇಶವಾಗಿಸಿದೆ.  ಇಲ್ಲಿನ ನಿಸರ್ಗ ಶ್ರೀಮಂತಿಕೆಗೆ ಅತ್ಯಂತ ಸ್ಪಷ್ಟವಾದ ಸೂಚಕವೆಂದರೆ, ಅಂತರ್ಜಲ ಮಟ್ಟ ಹೆಚ್ಚಿ, ತನ್ನ ಕಾಲುವೆಗಳಲ್ಲೂ ಹರಿದು ಬಂದು, ಸಂಪೂರ್ಣವಾಗಿ ಒಣಗಿದ ನಂದುವಾಲಿ ನದಿಯು ಮರುಜೀವ ಪಡೆದಿರುವುದು.

ಹದಗೆಟ್ಟ ಪರಿಸ್ಥಿತಿ ಇದ್ದ ಕಾಲವೊಂದಿತ್ತು…….

ತಮ್ಮ ಹೊಲಗಳಲ್ಲಿ ಹಾಗೂ ಬಾವಿಗಳಲ್ಲಿ ಬೀಳುವ ಮಳೆಯಿಂದ ಮಾತ್ರವೇ ಬೆಳೆಗಳನ್ನು ಬೆಳೆಯಬಹುದೆಂದು ರೈತರು ನಂಬಿದ ಕಾಲವೊಂದಿತ್ತು.  ನೆಲದಡಿಯ ನೀರಿನ ಚಲನೆಯ ಬಗ್ಗೆ, ಹಾಗೂ ಅದನ್ನು ಹೆಚ್ಚಿಸುವ ಬಗ್ಗೆ ಅವರಿಗೆ ಅಷ್ಟೇನೂ ತಿಳುವಳಿಕೆ ಇರಲಿಲ್ಲ.

“ನಾವು ಮಳೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದೆವು, ಫಸಲೂ ಅತ್ಯಂತ ಕಡಿಮೆ ಬರುತ್ತಿತ್ತು.  ಹೊಲದ ಮೂರನೆಯ ಒಂದು ಭಾಗ ಮಾತ್ರ ಉಳುಮೆ ಮಾಡುವ ಪರಿಸ್ಥಿತಿ ಇತ್ತು.  ಬಾವಿಗಳು ಆಗಾಗ ಒಣಗುತ್ತಿತ್ತು, ಹಾಗೂ ಜೀವನೋಪಾಯಕ್ಕಾಗಿ ಬೇರೆ ದಾರಿ ಇಲ್ಲದೆ ವಲಸೆ ಹೋಗುತ್ತಿದ್ದೆವು,” ಎಂದು ದೆಹಲಿಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಐದು ವರ್ಷ ಮಾಡಿಕೊಂಡಿದ್ದನ್ನು ಶರ್ಮಾ ನೆನಪು ಮಾಡಿಕೊಳ್ಳುತ್ತಾರೆ.

ಕೆಳಜಾತಿಯ ಕುಟುಂಬಗಳ ಪರಿಸ್ಥಿತಿಯು ಇನ್ನೂ ಹದಗೆಟ್ಟಿತ್ತು.  ಅವರ ಬಳಿ ಭೂಮಿ ಇರಲಿಲ್ಲ ಅಥವಾ ಗ್ರಾಮಕ್ಕೆ ಸೇರಿದ ಸಮುದಾಯ ಭೂಮಿಯ ಬಂಜರು ಭೂಮಿಯನ್ನು ಅವರಿಗೆ ನಿಯೋಜಿಸಲಾಗಿತ್ತು.  ಹೆಚ್ಚಿನ ಮೇಲ್ಜಾತಿಯ ಕುಟುಂಬಗಳಿದ್ದ ನಂದೂ ಗ್ರಾಮಕ್ಕೆ ೨.೫ ಕಿಲೋಮೀಟರ್ ನಡೆದುಕೊಂಡು ಬರುತ್ತಿದ್ದ ಮಹಿಳೆಯರು ಗ್ರಾಮದ ಪ್ರಾಣಿ ತ್ಯಾಜ್ಯ ನಿರ್ವಹಣೆ ಮಾಡಿದುದಕ್ಕೆ ಪ್ರತಿಫಲವಾಗಿ, ಅವರಿಗೆ ಮಜ್ಜಿಗೆಯನ್ನು ನೀಡುತ್ತಿದ್ದರು. ಪುರುಷರು ಇತರರ ಹೊಲದಲ್ಲಿ ದುಡಿದರೆ, ಉತ್ತಮ ಮಳೆಯಾದ ವರ್ಷದಲ್ಲಿ ಬೆಳೆದ ಫಸಲಿನ ಸಣ್ಣ ಭಾಗವನ್ನು ನೀಡಲಾಗುತ್ತಿತ್ತು.  ಹೊಲಗಳು ಹಾಗೂ ಜಾನುವಾರುಗಳನ್ನು ಹೊಂದಿದವರೂ ಕಷ್ಟವನ್ನು ಅನುಭವಿಸಿ, ಎಮ್ಮೆಗಳಿಗೆ ಮೇವನ್ನು ನೀಡಲು ಸಾಧ್ಯವಾಗದೆ, ಅವುಗಳನ್ನು ಬೇರೆ ದಾರಿ ಇಲ್ಲದೆ ಮಾರಾಟ ಮಾಡುವ ಪರಿಸ್ಥಿತಿ ಇತ್ತು.  ಮೇವಿನ ಸಾಗಣೆಯಲ್ಲಿ ಬಹಳಷ್ಟು ಹಣ ವ್ಯಯವಾಗುತ್ತಿತ್ತು.  ಹಾಗಾಗಿ, ಅನೇಕ ಕುಟುಂಬಗಳು ಎಮ್ಮೆಗಳ ಬದಲು ಮೇಕೆಗಳನ್ನು ಸಾಕಲು ಪ್ರಾರಂಭಿಸಿದರು.

ಇಂದು, ಘೇವರ್ ಗ್ರಾಮದಲ್ಲಿ ಪಕ್ಕಾ ಮನೆಗಳು, ಜಾನುವಾರುಗಳ ಉತ್ತಮ ಸಂಖ್ಯೆ ಹಾಗೂ ಹೇರಳವಾದ ಸಂಖ್ಯೆಯಲ್ಲಿ ಹೊಲಗಳಿವೆ.  ನಗರ ಜೀವನಕ್ಕಿಂತ ಭಿನ್ನವಾದ ಅನುಭವವನ್ನು ಪಡೆಯುವ ಅವಕಾಶಕ್ಕಾಗಿ ಹುಡುಕುತ್ತಿರುವ ನಗರ ನಿವಾಸಿಗಳಿಗೆ ಗ್ರಾಮೀಣ ಜೀವನದ ಅನುಭವವನ್ನು ನೀಡುವ ಪ್ರವಾಸಿ ಧಾಮವೂ ಗ್ರಾಮದ ಹೊರವಲಯದಲ್ಲಿ ಬಂದಿದೆ.  ಕಳೆದ ವರ್ಷ ೪೦ ಪ್ರತಿಶತಕ್ಕಿಂತ ಹೆಚ್ಚಿನ ಮಳೆಯ ಅಭಾವ ಉಂಟಾದರೂ, ೪೦-೫೦ ಅಡಿ ಆಳದಲ್ಲಿ ನೀರು ಲಭ್ಯವಿದೆ.

ಆದರೆ. ಘೇವರ್ ಹಾಗೂ ಸುತ್ತಮುತ್ತಲಿನ ಗ್ರಾಮಗಳು ವೈಶಿಷ್ಟ್ಯತೆಯನ್ನು ಪಡೆದಿರುವುದು ಅವುಗಳ ಜಲ ಮರುಪೂರಣ ರಚನೆಗಳು ಅಥವಾ ಗಳಿಸಿದ ಸಂಪತ್ತಿನಿಂದ ಮಾತ್ರವಲ್ಲ.  ಹಾಗಿದಿದ್ದರೆ, ರಾಜಸ್ಥಾನದ ಅನೇಕ ಪ್ರದೇಶಗಳಲ್ಲಿ ಬಿರುಸಿನ ಜಲಾನಯನ ನಿರ್ವಹಣಾ ಚಟುವಟಿಕೆಗಳು ಹಾಗೂ ತದನಂತರದ ಕೃಷಿ ಬೆಳವಣಿಗೆಯಾಗಿದೆ.  ಆದರೆ, ಅದರ ನಿಜವಾದ ಪರೀಕ್ಷೆಯಾಗುವುದು ಈ ರಚನೆಗಳು ಶಿಥಿಲಗೊಂಡು, ಆರ್ಥಿಕ ನೆರವು ಹಿಂಪಡೆದ ಸಂದರ್ಭದಲ್ಲಿ.

Photos for - a river comes to life - 4 copyಬದಲಾವಣೆಯ ಪ್ರಾರಂಭ 

ನಂದೂ ಗ್ರಾಮದ ನಿವಾಸಿಗಳಾದ ಕುಂಜ್ ಬಿಹಾರಿ ಹಾಗೂ ಸತೀಶ್ ಕುಮಾರ್ ಎಂಬ ಸಹೋದರರು ತಮ್ಮ ಪ್ರದೇಶವನ್ನು ಹೆಚ್ಚುವರಿ ನೀರಿರುವ ಪ್ರದೇಶವನ್ನಾಗಿ ಮಾಡುವ ಆಶಯವನ್ನು ಹೊಂದಿದ್ದರು.  ಆದರೆ ದುರ್ಬಲವಾದ ಸ್ಥಳೀಯ ಆರ್ಥಿಕತೆ ಹಾಗೂ ವಿಭಜಿತ ಸಮಾಜವು ಅವರ ಆಶೋತ್ತರಗಳಿಗೆ ಅತ್ಯಂತ ದೊಡ್ಡ ತೊಡಕಾಗಿದ್ದವು.

“ನಾನು ಸ್ಥಳೀಯನೇ ಆಗಿದ್ದರೂ, ಜನರ ವಿಶ್ವಾಸವನ್ನು ಗಳಿಸಲು ನನಗೆ ಒಂದು ವರ್ಷವಾಯಿತು.  ಜೋಹಾಡ್ಗಳು ಈ ಪ್ರದೇಶದ ಪರಂಪರೆಯಾಗಿದ್ದರೂ, ಸಾಂಪ್ರದಾಯಿಕ ಜ್ಞಾನದ ನಾಶದಿಂದ, ಜೋಹಾಡ್‌ಗಳ ನಿರ್ಮಾಣ ಮಾಡಿ, ಅರಣ್ಯ ಸಂರಕ್ಷಣೆ ಮಾಡುವುದರಿಂದ ಬಾವಿಗಳಲ್ಲಿ ಹೆಚ್ಚಿನ ನೀರು ಬರುವುದೆಂದು ಜನರು ನಂಬಲು ಸಿಧ್ದರಿರಲಿಲ್ಲ.  ಮಾಡಾಬೇಕಿದ್ದ ನಿಜವಾದ ಕಾರ್ಯವೆಂದರೆ ಎಲ್ಲ ಜಾತಿಯವರನ್ನೂ ಒಟ್ಟಿಗೆ ಸೇರಿಸಿ, ಒಟ್ಟಾಗಿ ಕೆಲಸ ಮಾಡುವುದಾಗಿತ್ತು,” ಎನ್ನುತ್ತಾರೆ ಕುಂಜ್ ಬಿಹಾರಿ. 

ಗ್ರಾಮಸ್ಥರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತೊಂದು ಸವಾಲಾಗಿತ್ತು.  ಪ್ರಾರಂಭದಲ್ಲಿ ಕಾಮಗಾರಿಗೆ ನೆರವು ನೀಡಿದ ಸಂಭವ್ ಟ್ರಸ್ಟ್, ಪುನರುಜ್ಜೀವನ ಕಾರ್ಯಕ್ಕೆ ಸೊಸೈಟಿ ಭಾಗಶಃ ಹಣ ಒದಗಿಸಬೇಕೆಂದು ಸ್ಪಷ್ಟವಾಗಿ ತಿಳಿಸಿತು.  ಗ್ರಾಮಸ್ಥರ ಬಳಿ ನೀಡಲು ಹಣವಿಲ್ಲದಿದ್ದರೂ, ಶ್ರಮದಾನದ ಮೂಲಕ ತಮ್ಮ ಭಾಗವಾದ ೨೫ ಪ್ರತಿಶತದ ಕೊಡುಗೆಯನ್ನು ನೀಡಿದರು.

ಘೇವರ್ ಗ್ರಾಮದಲ್ಲಿ ನಿರ್ಮಾಣ ಮಾಡಿದ ಮೊದಲ ಜೊಹಾಡ್ ನೀಡಿದ ಉತ್ತಮ ಪ್ರತಿಫಲವು ಇದಕ್ಕೆ ನೆರವಾಯಿತು.  “ಮೊದಲ ವರ್ಷದಲ್ಲಿ, ಜೊಹಾಡ್‌ನ ಬಳಿಯಿದ್ದ ಬಾವಿಯ ನೀರಿನ ಮಟ್ಟವು ೫೦ ಅಡಿಯಷ್ಟು ಏರಿತು.  ಇದು ನಾವು ವಿವರಿಸಲು ಹೊರಟ ವಿಚಾರದ ಮೊದಲ ನೈಜ ಸಾಕ್ಷಿಯಾಯಿತು.  ಗ್ರಾಮಸ್ಥರು ಒಮ್ಮೆ ನಮ್ಮನ್ನು ನಂಬಲು ಪ್ರಾರಂಭ ಮಾಡುತ್ತಿದ್ದಂತೆ, ಎಲ್ಲ ಸಾಮಾಜಿಕ ಕಟ್ಟಳೆಗಳೂ ಮುರಿದುಬಿದ್ದವು, ಏಕೆಂದರೆ ಎಲ್ಲರಿಗೂ ಏಳಿಗೆ ಹೊಂದುವ ಅಭಿಲಾಷೆ ಇತ್ತು.  ಎಲ್ಲ ನಿಬಂಧನೆಗಳನ್ನೂ ಪೂರೈಸಲು ಅವರು ಸಿದ್ಧರಿದ್ದರು,” ಎನ್ನುತ್ತಾರೆ ಕುಂಜ್ ಬಿಹಾರಿ.

ನಿಸರ್ಗದೊಂದಿಗೆ ಸಮಾಜದ ಸಂಬಂಧವನ್ನು ಬೆಸೆಯಲು ಚಾಲ್ತಿಯಲ್ಲಿದ್ದ ಪದ್ಧತಿಗಳನ್ನು ಸಹೋದರರು ನೆನಪಿಸಿಕೊಂಡು, ಅವರ ತಿಳುವಳಿಕೆಯನ್ನು ತಮಗೆ ಹಂಚಲು ಗ್ರಾಮದ ಹಿರಿಯರ ಮೇಲೂ ಅವಲಂಬಿಸಿದರು.  ಹಿಂದಿನ ಕಾಲದಲ್ಲಿ, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನಗಳನ್ನು ಜೋಹಾಡ್ಗಳ ಬಲವರ್ಧನೆ ಹಾಗೂ ಗಿಡ ನೆಡುವಂತಹ ಸ್ವಯಂಸೇವಾ ಕಾರ್ಯಕ್ಕೆಂದು ಮೀಸಲಿಡುತ್ತಿದ್ದರು.  “ದೈಹಿಕ ಶ್ರಮದೊಂದಿಗೆ ನಾವು ಈ ಸಂಪ್ರದಾಯಗಳನ್ನೂ ಪುನಶ್ಚೇತನಗೊಳಿಸಿದೆವು.  ಇಷ್ಟೊಂದು ವರ್ಷಗಳ ನಂತರ, ಸಾಮಾಜಿಕ ಒಗ್ಗಟ್ಟು, ಪರಿಸರ ಹಾಗೂ ಕೃಷಿ ಉತ್ಪಾದನೆಯ ನಡುವಣ ಸಂಬಂಧದ ಅರಿವು ಎಲ್ಲರಿಗೂ ಆಗಿದೆ,” ಎಂದು ಕುಂಜ್ ಬಿಹಾರಿ ಹೇಳುತ್ತಾರೆ.

ಪರಂಪರೆಯೊಂದಿಗೆ ಮರುಜೋಡಣೆ

ಧಾಕ್ (ಬ್ಯುಟಿಯಾ ಮೊನೊಸ್ಪರ್ಮ) ಮರದಿಂದ ಹೊಸ ಕೆಂಪು ಎಲೆಗಳು ಚಿಗುರತೊಡಗಿವೆ, ಆದರೆ ಕದಮ್ (ನಿಯೊಲ್ಮಾರ್ಕಿಯಾ ಕದಂಬ), ಧೋಂಕ್ (ಅನೊಗೈಸ್ಸಸ್ ಪೆಂಡ್ಯುಲ) ಹಾಗೂ ಖೇಜ್ರಿ (ಪ್ರೊಸ್ಪೊಸಿಸ್ ಸಿನೆರರಿಯಾ) ಮರಗಳ ಮೇಲಾವರಣವು ಒಗ್ಗೂಡಿ, ನಮ್ಮನ್ನು ಬೇಸಿಗೆಯ ಪ್ರಖರವಾದ ಸೂರ್ಯನಿಂದ ರಕ್ಷಿಸುವಷ್ಟು ಬೆಳೆದಿವೆ.  ನಂದೂ ಗ್ರಾಮದ ಉತ್ತರಕ್ಕಿರುವ ಜಹಾಜ್ ಪ್ರದೇಶದ ಹನುಮಾನ್ ಗುಡಿಯತ್ತ ನಾವು ಕ್ರಮಿಸುತ್ತಿರುವಂತೆ, ನವಿಲುಗಳ ಕೇಕೆ ಮುಗಿಲು ಮುಟ್ಟುತ್ತದೆ. ಬಂಡೆಗಳು ಹಾಗೂ ಪೊದೆಗಳಿಂದ ತುಂಬಿದ, ಡಾಂಬಾರಿಲ್ಲದ ರಸ್ತೆಯು, ತೇವಯುಕ್ತ ಮಣ್ಣಿನ ದಾರಿಯತ್ತ ಹೊರಳಿ, ಕೊನೆಗೆ ಅದು ನೀರಿನೊಂದಿಗೆ ವಿಲೀನವಾಗುತ್ತದೆ. ಇದು, ಈ ಪ್ರದೇಶದ  ಹಲವಾರು ಗ್ರಾಮಗಳ ಹೊಲಗಳು, ಬಾವಿಗಳನ್ನು ಪೋಷಿಸುವ ನಂದುವಾಲಿ ನದಿಯ ಉಗಮಸ್ಥಾನವಾಗಿದೆ. ಮಂಗ್ಲಾಸರ್ ಅಣೆಕಟ್ಟಿನತ್ತದ ನಂದುವಾಲಿಯ ಪಯಣದಲ್ಲಿ ಸುಮಾರು ೨೦ ಸಣ್ಣ ತೊರೆಗಳು ಅದರ ಒಡಲನ್ನು ಸೇರುತ್ತವೆ.

ನದಿಯ ಹರಿವಿನ ದಾರಿಯು ಒಂದೊಮ್ಮೆ ಸಂಪೂರ್ಣವಾಗಿ ಒಣಗಿತ್ತು ಎನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟ, ಆದರೆ ಅದು ಮತ್ತೆ ಏಕೆ ಹರಿಯುತ್ತಿದೆ ಎಂದು ಅರಿತುಕೊಳ್ಳುವುದು ಸುಲಭ.  ನಂದುವಾಲಿಯನ್ನು ಪುನರುಜ್ಜೀವನಗೊಳಿಸುವ ಯೋಜನೆ ಇಲ್ಲದಿದ್ದರೂ, ಗ್ರಾಮಸ್ಥರ ಸಂರಕ್ಷಣಾ ಯತ್ನಗಳಿಗೆ ಪ್ರಕೃತಿಯು ಸಕಾರಾತ್ಮಕವಾಗಿ ಸ್ಪಂದಿಸಿದೆ.

Photos for - a river comes to life - 5 copyಹಿಂದಿನ ಕಾಲದಲ್ಲಿ, ನಿರ್ದಿಷ್ಟ ಉದ್ದೇಶಗಳಿಗಾಗಿ ಗುರುತಿಸಲಾದ ಅರಣ್ಯಗಳು ಹಾಗೂ ಗೋಮಾಳಗಳು ಈ ಪ್ರದೇಶದಲ್ಲಿ ಇತ್ತು.  ಎಂದೂ ನಾಶ ಮಾಡಬಾರದ ದೇವ್ ಬನಿವಾಸ್ ಎಂಬ ಪವಿತ್ರ ವನ ಒಂದೆಡೆಯಾದರೆ, ರಖತ್ ಬನಿ ಎಂಬ ರಕ್ಷಿತ ಅರಣ್ಯ ಪ್ರದೇಶವನ್ನು ಬರಗಾಲದಲ್ಲಿ ಮಾತ್ರ ಬಳಸಿಕೊಳ್ಳಲು ಅನುಮತಿ ಇತ್ತು.  ಎರಡು ಗ್ರಾಮಗಳನ್ನು ಬೇರ್ಪಡಿಸುವ ಅರಣ್ಯ ಪ್ರದೇಶವನ್ನು ಕಾನ್ಕರ್ ಎಂದರೆ, ಚಾರಾಘ  ಗ್ರಾಮದ ಹುಲ್ಲುಗಾವಲಾಗಿತ್ತು.  ಪ್ರತಿ ಜಾತಿಗೂ ಒಂದೊಂದು ಪವಿತ್ರ ಮರದ ತಳಿಗಳನ್ನು ನೆಡುವ ಪದ್ಧತಿಯನ್ನು ಧಾರದಿ ಪ್ರಥಾ ಎನ್ನಲಾಗುತ್ತಿತ್ತು.  “ನಮ್ಮ ಜಾತಿಯವರಿಗೆ ಖೇಜ್ರಿ ಎಂಬುದು ಧಾರದಿ ಆಗಿದೆ. ಶುಭ ಸಮಾರಂಭಗಳಲ್ಲಿ ನಾವು ಅದಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ, ಅದನ್ನು ನೆಟ್ಟು, ಪೋಷಿಸುತ್ತೇವೆ ಹಾಗೂ ನಮ್ಮೆದುರು ಅದಕ್ಕೆ ಯಾರೂ ಹಾನಿ ಮಾಡಲು ಬಿಡುವುದಿಲ್ಲ,” ಎನ್ನುತ್ತಾರೆ ಕುಂಜ್ ಬಿಹಾರಿ.

ಈ ಗ್ರಾಮಗಳಲ್ಲಿ, ಈ ಎಲ್ಲ ಸಾಂಪ್ರದಾಯಿಕ ಆಚರಣೆಗಳನ್ನು ಪುನರುಜ್ಜೀವನಗೊಳಿಸಿ, ವಿಶೇಷ ಅರಣ್ಯ-ರಕ್ಷಣಾ ಸಮಿತಿಗಳನ್ನು ರಚಿಸಲಾಯಿತು – ನಿಯಮಗಳನ್ನು ಪಾಲಿಸದೆ ಇದ್ದವರಿಗೆ ಈ ಸಮಿತಿಗಳು ದಂಡ ವಿಧಿಸತೊಡಗಿದವು.  ಬೇಳೆಕಾಳುಗಳು ಹಾಗೂ ತುಪ್ಪದ ಬದಲಿಗೆ ಮರಗಳನ್ನು ಕಡಿಯಲು ಅನುಮತಿ ನೀಡುತ್ತಿದ್ದ ಭ್ರಷ್ಟ ಅರಣ್ಯಾಧಿಕಾರಿಗಳ ನಡೆಗೆ ಇದು ತಡೆಹಾಕಿತು.

ಅದೃಷ್ಟವಶಾತ್, ಅಂತಹ ಯತ್ನಗಳಿಗೆ ಪರಿಸರವು ಉತ್ತಮವಾಗಿ ಸ್ಪಂದಿಸಿತು.  ಇಂದು, ಮರಗಳಿಲ್ಲದ ಕಂದಾಯ ಭೂಮಿಯನ್ನು ನೋಡುವುದೇ ವಿರಳ. ಎಳೆಯ ಅರಳಿ ಮರಗಳಿರುವ ಪೀಪಲ್‌ವಾಣಿ ಎಂಬ ಸಾಲನ್ನು ಗ್ರಾಮಸ್ಥರು ಈಗ ರಕ್ಷಿಸುತ್ತಿದ್ದಾರೆ.  ತೋಪಿನ ರಕ್ಷಣೆಗಿಂತ, ಮೇಯಿಸುವಿಕೆಯಿಂದ ರಕ್ಷಣೆ ನೀಡಿರುವುದು ಹಸಿರಿನ ರಕ್ಷಣೆ ಮಾಡಲು ನೆರವಾಗಿದೆ.  ಅರಣ್ಯ, ನೀರು ಹಾಗೂ ಕೃಷಿಯ ನಡುವಣ ಸಂಬಂಧವನ್ನು ಗ್ರಾಮಸ್ಥರು ಒಮ್ಮೆ ಕಂಡುಕೊಂಡ ನಂತರ, ಅವರು ನಿಸರ್ಗದೊಂದಿಗೆ ಕೆಲಸ ಮಾಡಲು ಸಿದ್ಧರಾದರು,” ಎಂದು ಕುಂಜ್ ಬಿಹಾರಿ ಹೇಳುತ್ತಾರೆ.

ಈ ಪರಿವರ್ತನೆಯ ದೃಢ ಸೂಚಕವೆಂದರೆ, ಹೊರಗೆ ವಲಸೆ ಹೋಗುವುದು ನಿಂತಿರುವುದರೊಂದಿಗೆ, ಊರಿಗೆ ವಲಸೆ ಬರುವುದು ಪ್ರಾರಂಭವಾಗಿದೆ.  ೫೦ ಕಿಲೋಮೀಟರ್‌ಗಳಷ್ಟು ದೂರವಿರುವ ಗ್ರಾಮಗಳಿಂದಲೂ ಜನರು ಈ ಗ್ರಾಮದ ಹೊಲಗಳನ್ನು ಗುತ್ತಿಗೆಗೆ ತೆಗೆದುಕೊಳ್ಳುತ್ತಿದ್ದಾರೆ.  “ಉನ್ನತ ಶಿಕ್ಷಣ ಅಥವಾ ಕೆಲಸಗಳಿಗಾಗಿ ಈಗ ಕೇವಲ ಯುವಕರು ಮಾತ್ರ ಹೊರಗೆ ಹೋಗುತ್ತಿದ್ದಾರೆ.  ೨೦ ವರ್ಷಗಳ ಕೆಳಗೆ ಕೇವಲ ಉಳಿವಿಗಾಗಿ ವಲಸೆ ಹೋಗುತ್ತಿದ್ದಕ್ಕಿಂತಲೂ ಇದು ವಿಭಿನ್ನವಾಗಿದೆ,” ಎನ್ನುತ್ತಾರೆ ಕುಂಜ್ ಬಿಹಾರಿ.

ಈ ಪ್ರದೇಶದಲ್ಲಿ ರೈಕಾ ಸಮುದಾಯದ ೧೫ ಕುಟುಂಬಗಳಿವೆ.  ಜಾತಿ ವ್ಯವಸ್ಥೆಯ ಅತ್ಯಂತ ತಳ ಮಟ್ಟದಲ್ಲಿರುವ ಅಲೆಮಾರಿ ಒಂಟೆಗಾಹಿಗಳಾದ ರೈಕಾಗಳು, ಒಂಟೆಗಳನ್ನು ಆಗಾಗ ಮಾರಾಟ ಮಾಡುವ ಮೂಲಕ ದೊರಕುವ ಹಣದಿಂದ ತಮ್ಮ ಜೀವನವನ್ನು ಸಾಗಿಸುತ್ತಾರೆ. ಆದರೀಗ ಅವರು ಇಲ್ಲೇ ನೆಲೆಸಿದ್ದು, ೨೦ ಭಿಗಾ ನೆಲದಲ್ಲಿ ತರಕಾರಿ, ಗೋಧಿ ಹಾಗೂ ಸಾಸಿವೆ ಬೆಳೆದು, ಅದರಿಂದ ಉತ್ತಮ ಹಣ ಗಳಿಸುತ್ತಿದ್ದಾರೆ.  “ಈ ಭೂಮಿಗೆ ಮೊದಲು ಯಾವುದೇ ನೀರಾವರಿಯ ಮೂಲವಿರಲಿಲ್ಲ, ಆದರೆ ಹತ್ತಿರವೇ ಜೋಹಾಡ್ ಒಂದರ ನಿರ್ಮಾಣ ಮಾಡಿದ ನಂತರ, ಅಂತರ್ಜಲ ಮಟ್ಟ ಏರಿದೆ. ಈಗ ಬೆಳೆಗಳಿಗೆ ವರ್ಷವಿಡೀ ನೀರಾವರಿ ಒದಗಿಸುವಂತಹ ಬಾವಿಗಳು ನಮ್ಮಲ್ಲಿವೆ,” ಎನ್ನುತ್ತಾರೆ ೩೦ ವರ್ಷದ ಜೈ ಸಿಂಗ್ ರೈಕಾ.  ಒಂಟೆಗಳಿಗೆ ಬದಲಾಗಿ ಈಗ ಎಮ್ಮೆಗಳನ್ನು ಸಾಕಲಾಗುತ್ತಿದ್ದು, ಸಮುದಾಯದ ಜನರು ಈಗ ಪಕ್ಕಾ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

Photos for - a river comes to life - 6 copyಚೇತರಿಕೆಯ ಹಾದಿಯಲ್ಲಿ ಸಮಾಜ

ಕ್ರಮೇಣ, ಜಲ ಸಂರಕ್ಷಣೆಯಿಂದ ಕೃಷಿ ಉತ್ಪಾದನೆ ಸುಧಾರಣೆ ಆದಾಗ, ಸ್ಥಳೀಯರು ಆರ್ಥಿಕ ಹೊಣೆಗಾರಿಕೆಯನ್ನು ವಹಿಸಿಕೊಂಡರು.  ಕಳೆದ ಮೂರು ವರ್ಷಗಳಿಂದ, ನಿರ್ಮಾಣ ಮಾಡಲಾಗುತ್ತಿರುವ ಅಣೆಕಟ್ಟುಗಳು ಹಾಗೂ ಜೋಹಾಡ್ಗಳಿಗಾಗಿ ಸಂಭಾವ್ ಟ್ರಸ್ಟ್ ಹಣ ಖರ್ಚು ಮಾಡುತ್ತಿಲ್ಲ.

ಸ್ಥಳೀಯರು ಈ ರಚನೆಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು ಹಾಗೂ ಅರಣ್ಯಗಳ ರಕ್ಷಣೆಯನ್ನೂ ತಾವಾಗೇ ಮಾಡುತ್ತಿದ್ದಾರೆ; ಅಗತ್ಯ ಬಂದಾಗ, ಕುಂಜ್ ಬಿಹಾರಿ ತಾಂತ್ರಿಕ ಮಾರ್ಗದರ್ಶಿಯಾಗಿ ನೆರವಾಗುತ್ತಾರೆ.  “ಇಲ್ಲಿ ಎಲ್ಲರೂ ಇಂಜಿನಿಯರುಗಳು. ಅವರಿಗೆ ಮೇಲ್ಮೈ ನೀರಿನ ಹಾಗೂ ಅಂತರ್ಜಲದ ಪಥವು ತಿಳಿದಿರುವುದಷ್ಟೇ ಅಲ್ಲ, ಆದರೆ ನಿರ್ಮಾಣ ಮಾಡಬಹುದಾದ ರಚನೆಗಳ ಅಂಶಗಳ ಬಗ್ಗೆಯೂ ತಿಳಿದಿದೆ,” ಎನ್ನುತ್ತಾರೆ ಕುಂಜ್ ಬಿಹಾರಿ.

ಈ ತಿಳುವಳಿಕೆಯು ಸರ್ಕಾರಿ ಕಾಮಗಾರಿಗಳ ಉತ್ತಮ ಮೇಲ್ವಿಚಾರಣೆ ಮಾಡುವಂತೆಯೂ ಆಗಿದೆ, ಏಕೆಂದರೆ ಲೆಕ್ಕಪತ್ರ ಹಾಗೂ ಇಂಜಿನಿಯರಿಂಗ್‌ನಲ್ಲಿನ  ಅಸಾಂಗತ್ಯಗಳ ಬಗೆಗೆ ಗ್ರಾಮಸ್ಥರಿಗೆ ಅರಿವಿದೆ.  “ಅನೇಕ ಸಲ, ಗ್ರಾಮೀಣ ಉದ್ಯೋಗ ಯೋಜನೆಯ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿರುತ್ತದೆ.  ಅದರ ಬಗೆಗೆ ನಾವು ಆಕ್ಷೇಪಣೆ ಎತ್ತಲು ಪ್ರಾರಂಭಿಸಿದ ನಂತರ, ನಮ್ಮ ಗ್ರಾಮಗಳಿಗೆ ಅಷ್ಟಾಗಿ ಕಾಮಗಾರಿಗಳು ಮಂಜೂರು ಆಗುತ್ತಿಲ್ಲ.  ಅದರ ಬಗ್ಗೆ ನಮಗೆ ಸಂತೋಷವೇ.  ಕನಿಷ್ಠ ಪಕ್ಷ, ಸಾರ್ವಜನಿಕ ಹಣ ಪೋಲಾಗುತ್ತಿಲ್ಲ,” ಎನ್ನುತ್ತಾರೆ ಶರ್ಮಾ.

Photos for - a river comes to life - 7 copyಈ ಯಶೋಗಾಥೆಯು ವ್ಯಾಪಕವಾಗಿ ಹರಡಿದೆ.  ಇಂದು, ಸತೀಶ ಹಾಗೂ ಕುಂಜ್ ಬಿಹಾರಿ ಇಬ್ಬರೂ, ನೆರೆಯ ಪ್ರದೇಶಗಳಲ್ಲಿ ನಡೆಯುತ್ತಿರುವ ಇದೇ ರೀತಿಯ ಯತ್ನಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.  ತನ್ನ ಹರಿವಿನ ಹಾದಿಯಲ್ಲಿನ ಹೊಲಗಳು ಹಾಗೂ ಜೀವನಗಳನ್ನು ನಂದುವಾಲಿ ಹಸನಾಗಿಸುವಂತೆ, ಅದರ ದಂಡೆಯ ಮೇಲೆ ವಾಸಿಸುವ ಜನರು ಇತರರನ್ನು ತಮ್ಮ ತಿಳುವಳಿಕೆಯೊಂದಿಗೆ ಸಶಕ್ತಗೊಳಿಸುತ್ತಿದ್ದಾರೆ.

ಮೂಲ ಆಂಗ್ಲ ಲೇಖನ: ಮನು ಮೌದ್ಗಿಲ್

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ
(ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/river-comes-people)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*