ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩೨: ಅಭಿವೃದ್ಧಿಯಾದರೂ ಮಾಲಿನ್ಯಕ್ಕೆ ಕೆರೆಗಳೇ ತಾಣ!

ಕೆರೆಗಳು ಅಭಿವೃದ್ಧಿಯಾದರೂ ಅವುಗಳಿಗೆ ಯಾವ ನೀರು ಬಿಡಬೇಕು ಎಂಬುವ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗುವ ಕೆರೆಗಳಿಗೆ ಹಿಂದಿನ ಮಾಲಿನ್ಯವೇ ಹರಿಯುತ್ತಿದೆ. ಒಳಚರಂಡಿ ನೀರೇ ಕೆರೆಗಳ ತಾಣವಾಗಿದೆ. ಅದಕ್ಕೇ, ಅನುಷ್ಠಾನ ಸಂಸ್ಥೆಗಳ/ಕೆರೆಯ ಅಭಿರಕ್ಷಕರ  ಜೊತೆಗೆ ಸಮನ್ವಯದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಎಸ್‌ಟಿಪಿಗಳನ್ನು ಸ್ಥಾಪಿಸಬೇಕು ಮತ್ತು ಸಂಸ್ಕರಣೆ ಮಾಡದ ಕೊಳಚೆ ನೀರನ್ನು ಕೆರೆಗಳಿಗೆ ಬಿಡದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ೨೦೧೫ನೇ (ಸಿಎಜಿ) ವರ್ಷದ ವರದಿಯಲ್ಲಿ ಕೆರೆಗಳ ಅಭಿವೃದ್ಧಿಯಾದ ಮೇಲೆ ಅವುಗಳನ್ನು ಹೇಗೆ ನಿರ್ವಹಿಸಬೇಕು, ಮಾಲಿನ್ಯ ಬೀರುತ್ತಿರುವ ಕಾಮಗಾರಿಗಳನ್ನು ವಿವರಿಸಲಾಗಿದೆ.

Dasarahalli-Polluteಸರ್ಕಾರಿ ಆದೇಶದ (ಏಪ್ರಿಲ್ ೨೦೧೦) ಅನ್ವಯ, ಕೊಳಚೆ ನೀರನ್ನು ತೆಗೆದ ನಂತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕೆರೆಗಳ ಅಭಿವೃದ್ದಿಗೆ ಜವಾಬ್ದಾರರಾಗಿರುವ ಸಂಸ್ಥೆಗಳು ಯಾವುದೇ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೊದಲು ಕೆರೆಗಳಿಗೆ ಶುದ್ಧ ನೀರಿನ ನಿಯಮಿತ ಒಳಹರಿವು  ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಕೊಳಚೆ ನೀರಿನ ಒಳಹರಿವನ್ನು ನಿಲ್ಲಿಸಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಮುಖ್ಯಸ್ಥರಾಗಿರುವ ಅಪೆಕ್ಸ್ ಸಮಿತಿಯು ಸಹ ಸೂಚನೆ ನೀಡಿತ್ತು (ಮೇ ೨೦೧೩).  ಆದರೆ, ಮುಂದಿನ ಕಂಡಿಕೆಗಳಲ್ಲಿ ವಿವರಿಸಿರುವಂತೆ, ಈ ಷರತ್ತುಗಳನ್ನು ಪಾಲಿಸಿರಲಿಲ್ಲ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಒಳಚರಂಡಿ ಜಾಲದ ದುರಸ್ತಿ ಬೆಂಗಳೂರಿನ ಅನುಷ್ಠಾನ ಸಂಸ್ಥೆಗಳು ಕೊಳಚೆ ನೀರು ಸೇರುವುದು ಮುಂದುವರೆದಿದ್ದ ಕೆರೆಗಳಲ್ಲಿ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದನ್ನು ಲೆಕ್ಕಪರಿಶೋಧನೆಯು ಗಮನಿಸಿತು.  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಡಿಸೆಂಬರ್ ೨೦೧೪ಕ್ಕೆ ಪೂರ್ಣಗೊಳ್ಳಲು ನಿಗದಿಯಾಗಿದ್ದ ಪ್ರಮುಖ ಪ್ರದೇಶಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಪೂರ್ಣ ಒಳಚರಂಡಿ ಜಾಲವನ್ನು ದುರಸ್ತಿ ಮಾಡದಿದ್ದು ಇದಕ್ಕೆ ಕಾರಣವಾಗಿತ್ತು.  ಆಗಸ್ಟ್ ೨೦೧೪ರಲ್ಲಿದ್ದಂತೆ ಪ್ರಮುಖ ಪ್ರದೇಶಗಳ ಒಳಚರಂಡಿ ಪೈಪುಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು (ಅಕ್ಟೋಬರ್ ೨೦೧೪). ಆದರೆ, ಪ್ರಮುಖ ಪ್ರದೇಶಗಳಲ್ಲಿನ ಲೆಕ್ಕಪರಿಶೋಧನೆ ಮಾಡಿದ ಕೆರೆಗಳ ಜಂಟಿ ಭೌತಿಕ ಪರಿಶೀಲನೆಯಲ್ಲಿ ಅದು ಕಂಡುಬರಲಿಲ್ಲ. ನೀರಿನ ಸಂಪನ್ಮೂಲಗಳಿಗೆ ಕೊಳಚೆ ನೀರು ಹರಿಯದಂತೆ ಖಚಿತಪಡಿಸಿಕೊಳ್ಳಲಾಗುವುದೆಂದು ಮುಕ್ತಾಯದ ಸಮಾವೇಶದಲ್ಲಿ (ಫೆಬ್ರವರಿ ೨೦೧೫) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು.  ಹೀಗೆ, ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವವರೆಗೆ ಕೊಳಚೆ ನೀರು ಕೆರೆಗಳನ್ನು ಪ್ರವೇಶಿಸುವ ಸಮಸ್ಯೆಯು ಮುಂದುವರೆಯುವುದರಿಂದ ಅಂತಹ ಕೆರೆಗಳಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು ಹೆಚ್ಚಾಗಿ ನಿಷ್ಫಲವಾಗುತ್ತವೆ.  ಕೊಳಚೆ ನೀರಿನ ಮಾರ್ಗಾಂತರಣ ಕಾಲುವೆಗಳ ಅಸಮರ್ಪಕ ನಿರ್ಮಾಣ  ಅನುಷ್ಠಾನ ಸಂಸ್ಥೆಗಳು ೧೩  ಕೆರೆಗಳ (ಬಿ.ನಾರಾಯಣಪುರ, ಚಿನ್ನಪ್ಪನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ದೊಡ್ಡಾನೆಕುಂದಿ, ಗಂಗಾಶೆಟ್ಟಿ, ಜಕ್ಕೂರು-ಸಂಪಿಗೇಹಳ್ಳಿ, ಕೈಗೊಂಡನಹಳ್ಳಿ, ಕಸವನಹಳ್ಳಿ, ಕೌದೇನಹಳ್ಳಿ, ರಾಚೇನಹಳ್ಳಿ, ವಿಭೂತಿಪುರ ಮತ್ತು ಯಲಹಂಕ) ಸವಿವರ ಯೋಜನಾ ವರದಿಗಳಲ್ಲಿ/ಅಂದಾಜುಗಳಲ್ಲಿ ಕೊಳಚೆ ನೀರಿನ ಮಾರ್ಗಾಂತರಣ ಕಾಲುವೆಗಳ ನಿರ್ಮಾಣವನ್ನು ಪ್ರಸ್ತಾಪಿಸಿದ್ದವು.  ಇವುಗಳಲ್ಲಿ ೧೨ ಕೆರೆಗಳಲ್ಲಿ (ದೊಡ್ಡಾನೆಕುಂದಿ ಕೆರೆಯನ್ನು ಹೊರತುಪಡಿಸಿ) ಅನುಷ್ಠಾನ ಸಂಸ್ಥೆಗಳು ಕೆರೆಗೆ ಮಳೆನೀರನ್ನು ತರುವ ಯಾವುದೇ ಬೇರೆ ಒಳಹರಿವು ಇಲ್ಲದಿದ್ದರೂ ಸಹ ಕೆರೆಯನ್ನು ಪ್ರವೇಶಿಸುವ ಕೊಳಚೆ ನೀರನ್ನು ಬಾಕ್ಸ್ ಚರಂಡಿ ಅಥವ ರಿಇನ್‌ಫೋರ್ಸಡ್ ಸಿಮೆಂಟ್ ಕಾಂಕ್ರಿಟ್ ಮಾರ್ಗಾಂತರಣ ಕಾಲುವೆಗಳ ಮೂಲಕ ಮಾರ್ಗಾಂತರಣ ಮಾಡಿದ್ದವು. ತತ್ಪರಿಣಾಮವಾಗಿ ಜೀರ್ಣೋದ್ಧಾರಗೊಂಡ ಕೆರೆಗಳು ಒಣಗಿಹೋದವು ಹಾಗೂ ಮಾರ್ಗಾಂತರಣ ಮಾಡಿದ ಕೊಳಚೆ ನೀರು ಕೆಳಗಿನ ಕೆರೆಯ ನೀರನ್ನು ಮಲಿನಗೊಳಿಸುತ್ತಿತ್ತು.

ಇವುಗಳಲ್ಲಿ ಜಂಟಿ ಭೌತಿಕ ಪರಿಶೀಲನೆ ನಡೆಸಿದ ಏಳು ಕೆರೆಗಳಲ್ಲಿ (ದೊಡ್ಡಾನೆಕುಂದಿ (‘೧.೨೬ ಕೋಟಿ), ಜಕ್ಕೂರು-ಸಂಪಿಗೇಹಳ್ಳಿ (‘೦.೨೪ ಕೋಟಿ), ಕೈಗೊಂಡನಹಳ್ಳಿ (‘೧.೧೫ ಕೋಟಿ), ಕೌದೇನಹಳ್ಳಿ (‘೦.೨೧ ಕೋಟಿ), ರಾಚೇನಹಳ್ಳಿ (‘೦.೯೫ ಕೋಟಿ), ವಿಭೂತಿಪುರ (‘೦.೦೪ ಕೋಟಿ) ಮತ್ತು ಯಲಹಂಕ (‘೨.೨೬ ಕೋಟಿ)) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೂ ಸಹ ಸಮಾನಾಂತರದಲ್ಲಿ ಒಳಚರಂಡಿ ಪೈಪ್‌ಲೈನನ್ನು ಅಳವಡಿಸಿರುವುದನ್ನು ಗಮನಿಸಲಾಯಿತು. ಹೀಗೆ ಕೊಳಚೆ ನೀರಿನ ಮಾರ್ಗಾಂತರಣ ಕಾಲುವೆಯ ಮೇಲೆ ಮಾಡಿದ ಅಂದಾಜು ವೆಚ್ಚವಾದ ೬.೧೧ ಕೋಟಿಯು ಅನಾವಶ್ಯಕವಾಗಿತ್ತು ಏಕೆಂದರೆ ಅವುಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಮನ್ವಯ ಮಾಡದೇ ಕೈಗೆತ್ತಿಕೊಳ್ಳಲಾಗಿತ್ತು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಳಚರಂಡಿ ಕಾಮಗಾರಿಯು ನಿರೀಕ್ಷೆಯಂತೆ ಪೂರ್ಣಗೊಂಡಿರಲಿಲ್ಲ ವಾದ್ದರಿಂದ ಕೆಲವು ಕೆರೆಗಳಲ್ಲಿ ಮಾರ್ಗಾಂತರಣ ಚರಂಡಿಗಳನ್ನು ಹಾಕಲಾಗಿದೆ ಮತ್ತು ಮಳೆಗಾಲದ ಮೊದಲ ಕೆಲವು ಮಳೆಗಳಲ್ಲಿ ಕೊಳಚೆ ನೀರು ಮಿಶ್ರಿತ ಮಳೆ ನೀರು ಕೆರೆಗೆ ಸೇರದಂತೆ ತಡೆಯಲು ಮಾರ್ಗಾಂತರಣ ಚರಂಡಿಗಳು ಅವಶ್ಯಕವಾಗಿದ್ದವು ಎಂದು ಬಿಡಿಎ ತಿಳಿಸಿತು (ಫೆಬ್ರವರಿ ೨೦೧೫). ರಸ್ತೆಗಳು, ಸಾಮಾನ್ಯ ಉಪಯುಕ್ತತೆಯ ಪ್ರದೇಶಗಳು ಮತ್ತು ಟ್ರಂಕ್‌ಲೈನ್‌ಗಿಂತ ಬಹಳ ಕೆಳಮಟ್ಟದಲ್ಲಿರುವ ಕೆರೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಒಳಚರಂಡಿ ಲೈನ್‌ಗಳನ್ನು ಹಾಕುತ್ತದೆ ಎಂದು ಸಹ ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ ೨೦೧೫).  ಉತ್ತರಗಳನ್ನು ಒಪ್ಪಲಾಗುವುದಿಲ್ಲ – ಏಕೆಂದರೆ ಮಾರ್ಗಾಂತರಣ ಚರಂಡಿಗಳು ಕೆರೆ ಅಂಗಳಗಳು ಒಣಗುವಲ್ಲಿ ಪರಿಣಮಿಸಿ, ಗುಣಲಕ್ಷಣಗಳನ್ನು ಕಳೆದುಕೊಂಡು ಕೊನೆಗೆ ನೀರಿನ ಸಂಪನ್ಮೂಲದ ನμದಲ್ಲಿ ಪರಿಣಮಿಸಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸಮಾನಾಂತರದಲ್ಲಿ ಒಳಚರಂಡಿ ಲೈನ್‌ಗಳನ್ನು ಹಾಕಿದ್ದ ಕಡೆ ವೆಚ್ಚವನ್ನು ನಿμಲಗೊಳಿಸಿತು.  ೫.೬.೩ ಕೊಳಚೆ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆಯಲ್ಲಿ ಅಸಮರ್ಪಕತೆ ಕರ್ನಾಟಕ ರಾಜ್ಯದಲ್ಲಿ, ೨೧೯ ಸ್ಥಳೀಯ ಸಂಸ್ಥೆಗಳಲ್ಲಿ ಕೇವಲ ೫೫ ಸ್ಥಳೀಯ ಸಂಸ್ಥೆಗಳು ಮಾತ್ರ ಎಸ್‌ಟಿಪಿಗಳನ್ನು ಹೊಂದಿವೆ. ನೀರಿನ ಮೂಲಗಳಿಗೆ ಕೊಳಚೆ ನೀರಿನ ಪ್ರವೇಶವನ್ನು ತಪ್ಪಿಸಲು ಎಸ್‌ಟಿಪಿಗಳನ್ನು ಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿತು (ಮೇ ೨೦೧೪). ಸವಿವರ ಯೋಜನಾ ವರದಿಗಳು ಕೆರೆಯ ಎಲ್ಲಾ ಒಳಹರಿವುಗಳ ಆಧಾರದ ಮೇಲೆ ಎಸ್‌ಟಿಪಿಗಳ ಸ್ಥಾಪನೆಯನ್ನು ಒದಗಿಸಿದ್ದವು. ಇದು, ಕೆರೆಯನ್ನು ಪ್ರವೇಶಿಸುವ ಎಲ್ಲ ಕೊಳಚೆನೀರನ್ನು ಸಂಸ್ಕರಣ ಮಾಡಿ, ನಂತರ ಸಂಸ್ಕರಣವಾದ ನೀರು ಮಾತ್ರ ಕೆರೆಯನ್ನು ಪ್ರವೇಶಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ ಹಾಗೂ ಕೆರೆಗಳ ಜೈವಿಕ ಆರೋಗ್ಯವನ್ನು ಸುಧಾರಿಸುತ್ತದೆ. ಬೆಂಗಳೂರಿನಲ್ಲಿ ಸರಿಸುಮಾರು ಪ್ರತಿದಿನವು ೯೦೦ ಮಿಲಿಯನ್ ಲೀಟರ್‌ಗಳಷ್ಟು (ಎಮ್‌ಎಲ್‌ಡಿ) ನೀರನ್ನು ಬಳಸಲಾಗುತ್ತದೆ. ಇದರಲ್ಲಿ ಶೇಕಡಾ ೮೦ರಷ್ಟು ನೀರು ಕೊಳಚೆ ನೀರಾಗಿ ಉತ್ಪತ್ತಿಯಾಗುತ್ತದೆ.  ಪೂರ್ಣ ಕೊಳಚೆ ನೀರನ್ನು ನೀರಿನ ಮೂಲಗಳಿಗೆ ಬಿಡುವ ಮೊದಲು ಅದನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಎರಡನೆಯ ಮಟ್ಟಕ್ಕೆ ಸಂಸ್ಕರಿಸಬೇಕೆಂದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೀತಿಯು ನಿಗದಿಪಡಿಸುತ್ತದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅಸ್ತಿತ್ವದಲ್ಲಿರುವ ಎಸ್‌ಟಿಪಿಗಳಿಂದ ಪ್ರತಿದಿನ ೭೨೧ ಎಮ್‌ಎಲ್‌ಡಿಗಳಷ್ಟು ನೀರನ್ನು ಸಂಸ್ಕರಿಸುವ ಸಾಮರ್ಥ್ಯವಿದ್ದರೂ ಸಹ, ಕೇವಲ ೫೨೧ ಎಮ್‌ಎಲ್‌ಡಿ ಕೊಳಚೆ ನೀರನ್ನು ಸಂಸ್ಕರಿಸುತ್ತಿತ್ತು ಮತ್ತು ಉಳಿದ ಕೊಳಚೆ ನೀರನ್ನು (೨೦೦ ಎಮ್‌ಎಲ್‌ಡಿ) ಹಾಗೆಯೇ ಕೆರೆಗಳಿಗೆ ಬಿಡಲಾಗುತ್ತಿತ್ತು. ೩೩೯ ಎಮ್‌ಎಲ್‌ಡಿ ಸಾಮರ್ಥ್ಯದ ಹೆಚ್ಚುವರಿ ಎಸ್‌ಟಿಪಿಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು (ನವೆಂಬರ್ ೨೦೧೪). ತಮ್ಮದೇ ಎಸ್‌ಟಿಪಿಗಳನ್ನು (೫೦ ವಾಸದ ಮನೆಗಳಿರುವ ಅಥವಾ ಪ್ರತಿದಿನ ೫೦ ಚದರ ಮೀಟರ್‌ಗಳಷ್ಟು ಕೊಳಚೆನೀರನ್ನು ಉತ್ಪಾದಿಸುವ ಅಪಾರ್ಟ್‌ಮೆಂಟ್‌ಗಳು ತಮ್ಮ ಆವರಣದಲ್ಲಿಯೇ ಎಸ್‌ಟಿಪಿಯನ್ನು ಸ್ಥಾಪಿಸಬೇಕು.) ಹೊಂದಿದ ಅಪಾರ್ಟ್‌ಮೆಂಟ್ ಸಂಕೀರ್ಣಗಳ ಸಂಬಂಧವಾಗಿ, ಅಂತಹ ಅಪಾರ್ಟ್‌ಮೆಂಟ್‌ಗಳಿಂದ ಸಂಸ್ಕರಣೆಯಾದ ನೀರನ್ನು ಚರಂಡಿಗೆ ಬಿಡುವ ಬದಲು ಕೆರೆಗಳಿಗೆ ಬಿಡಬೇಕು ಎಂದು ಮುಕ್ತಾಯದ ಸಮಾವೇಶದಲ್ಲಿ (ಫೆಬ್ರವರಿ ೨೦೧೫) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು. ಆದರೆ, ಅಂತಹ ಎಲ್ಲ ಅಪಾರ್ಟ್‌ಮೆಂಟ್‌ಗಳಿಂದ ಸಂಸ್ಕರಣೆಯಾದ ನೀರನ್ನು ಮಾತ್ರ ಕೆರೆಗಳಿಗೆ ಬಿಡಲಾಗುತ್ತದೆ ಎನ್ನುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳು ಖಚಿತಪಡಿಸಿಕೊಳ್ಳುವ ಅಗತ್ಯವಿದೆ.

 ಎಸ್ಟಿಪಿಗಳನ್ನು ಸ್ಥಾಪಿಸದೇ ಇದ್ದ ಎರಡು ಪ್ರಕರಣಗಳಿದ್ದವು:

  1. ಗುತ್ತಿಗೆ ಷರತ್ತುಗಳ ಅನ್ವಯ ಕೆರೆಯನ್ನು ಬಾಡಿಗೆಗೆ ನೀಡುವಾಗ ಎಸ್‌ಟಿಪಿಗಳನ್ನು ಒದಗಿಸುವುದು ಒಂದು ಪೂರ್ವಾಪೇಕ್ಷಿತ ಷರತ್ತಾಗಿದ್ದರೂ ಸಹ, ಬೆಂಗಳೂರಿನ ನಾಗಾವರ ಕೆರೆಯಲ್ಲಿ ಕೆರೆಯ ಗುತ್ತಿಗೆದಾರರು ಐದು ಎಮ್‌ಎಲ್‌ಡಿ ಎಸ್‌ಟಿಪಿಯನ್ನು ಒದಗಿಸಿರಲಿಲ್ಲ (ಒಳಹರಿವಿನ ವಾಯುವ್ಯ ಭಾಗದಲ್ಲಿ)
  2.  ಬೆಳಗಾವಿಯ ಕೋಟೆಕೆರೆ ಕೆರೆಯಲ್ಲಿ ಎಸ್‌ಟಿಪಿಯ ಸ್ಥಾಪನೆಯನ್ನು ಒಳಗೊಂಡಿದ್ದ ಜೀರ್ಣೋದ್ಧಾರ ಕಾಮಗಾರಿಗಳನ್ನು ‘೫.೭೩ ಕೋಟಿ ವೆಚ್ಚವನ್ನು ಭರಿಸಿ ಪೂರ್ಣಗೊಳಿಸಲಾಯಿತು (ಮೇ ೨೦೦೯). ಆದರೆ, ಎಸ್‌ಟಿಪಿ ಘಟಕವನ್ನು ಕೈಬಿಡಲಾಯಿತು ಮತ್ತು ಕೊಳಚೆನೀರು ಕೆರೆಯನ್ನು ಮಲಿನಗೊಳಿಸುತ್ತಿರುವುದನ್ನು ಜಂಟಿ ಭೌತಿಕ ಪರಿಶೀಲನೆಯಲ್ಲಿ (ಮಾರ್ಚ್ ೨೦೧೪) ಗಮನಿಸಲಾಯಿತು.

ಆಯವ್ಯಯ ಹಂಚಿಕೆಯನ್ನು ಗಮನಿಸಿಕೊಂಡು ಆದ್ಯತೆಯ ಆಧಾರದ ಮೇಲೆ ಬೇರೆ ಕೆರೆಗಳಲ್ಲೂ ಎಸ್‌ಟಿಪಿಗಳನ್ನು ಸ್ಥಾಪಿಸುವುದನ್ನು ವಿಸ್ತರಿಸಲಾಗುವುದೆಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ತಿಳಿಸಿತು (ಮಾರ್ಚ್ ೨೦೧೫).

ಎಸ್ಟಿಪಿಗಳ ಅಸಮರ್ಪಕ ಕಾರ್ಯನಿರ್ವಹಣೆ

ಬೆಂಗಳೂರಿನಲ್ಲಿ ಪರೀಕ್ಷಾ-ತನಿಖೆ ನಡೆಸಿದ ಕೆರೆಗಳ ಎಸ್‌ಟಿಪಿಗಳ ಕಾರ್ಯನಿರ್ವಹಣೆಯನ್ನು ಲೆಕ್ಕಪರಿಶೊಧನೆಯು ಪರಿಶೀಲಿಸಿತು.  ಈ ಕೆಳಗಿನ ನ್ಯೂನತೆಗಳನ್ನು ಗಮನಿಸಲಾಯಿತು:

  • ಕೆರೆಯನ್ನು ಸೇರುತ್ತಿದ್ದ ಕೊಳಚೆ ನೀರು ೨.೩ ಎಮ್‌ಎಲ್‌ಡಿಯಷ್ಟಿದ್ದರೂ ಸಹ, ಬಿಬಿಎಂಪಿಯಿಂದ ದಾಸರಹಳ್ಳಿ ಕೆರೆಯಲ್ಲಿ ಸ್ಥಾಪಿಸಲಾಗಿದ್ದ ಎಸ್‌ಟಿಪಿಯು ಕಡಿಮೆ ಸಾಮರ್ಥ್ಯದ ಒಂದು ಎಮ್‌ಎಲ್‌ಡಿ ಆಗಿತ್ತು. ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಕೊರತೆಯನ್ನು ಒಪ್ಪಿಕೊಂಡಿತು (ಮಾರ್ಚ್ ೨೦೧೫) ಮತ್ತು ಕಡಿಮೆ ಸಾಮರ್ಥ್ಯದ್ದು ಒಣಹವೆಯ ಹರಿವಿಗೆ ಮಾತ್ರ ಎಂದು ವಿವರಿಸಿತು.  ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಒಣಹವೆಯಲ್ಲಿ ಹರಿಯುವ ಕೊಳಚೆ ನೀರು ಮಾತ್ರ ಅಗತ್ಯತೆಗಿಂತ ಕಡಿಮೆ ಸಾಮರ್ಥ್ಯದ ಸ್ಥಾಪನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ.
  • ವೆಂಗಯ್ಯನಕೆರೆಯಲ್ಲಿ ಕೆರೆಗೆ ಸಂಸ್ಕರಣೆಯಾದ ನೀರನ್ನು ಬಿಡಲು ೨೦ ಎಮ್‌ಎಲ್‌ಡಿಯ ಎಸ್‌ಟಿಪಿಯನ್ನು ಸ್ಥಾಪಿಸಲಾಗಿತ್ತು. ಜಂಟಿ ಭೌತಿಕ ಪರಿಶೀಲನೆಯ ಅವಧಿಯಲ್ಲಿ ಎಸ್‌ಟಿಪಿಯು ತನ್ನ ಪೂರ್ಣ ಸಾಮರ್ಥ್ಯಕ್ಕೆ ಕೆಲಸ ಮಾಡದಿರುವುದನ್ನು ಮತ್ತು ಸಂಸ್ಕರಣೆಯಾದ ನೀರನ್ನು ಕಚ್ಚಾ ಕೊಳಚೆ ನೀರು ತುಂಬಿರುವ ಮಳೆನೀರಿನ ಚರಂಡಿಯ ಮೂಲಕ ಅದೇ ಒಳಹರಿವಿನಲ್ಲಿ ಕೆರೆಗೆ ಬಿಡುತ್ತಿದ್ದುದನ್ನು ಗಮನಿಸಲಾಯಿತು. ಸಂಸ್ಕರಣೆಯಾದ ನೀರು ಮಿಶ್ರಣವಾಗುತ್ತಿದ್ದರಿಂದ ಕೊಳಚೆ ನೀರು ನಿಸ್ಸಾರವಾಗುತ್ತಿತ್ತು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಉತ್ತರಿಸಿತು (ನವೆಂಬರ್ ೨೦೧೪). ಉತ್ತರವನ್ನು ಒಪ್ಪಲಾಗುವುದಿಲ್ಲ, ಏಕೆಂದರೆ ಸಂಸ್ಕರಣೆಯಾದ ನೀರಿನ ಜೊತೆ ಕೊಳಚೆ ನೀರು ಮಿಶ್ರಿತವಾದರೆ ಕೊಳಚೆ ನೀರನ್ನು ಸಂಸ್ಕರಿಸುವ ಉದ್ದೇಶವನ್ನೇ ವ್ಯರ್ಥಗೊಳಿಸಿದಂತಾಗುವುದು.
  • ನಾಗಾವರ ಕೆರೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ೬೦ ಎಮ್‌ಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿಯೊಂದನ್ನು ನಿರ್ಮಿಸಿತು ಮತ್ತು ಪದೇಪದೇ ಆಗುತ್ತಿದ್ದ ವಿದ್ಯುತ್ ವೈಫಲ್ಯದಿಂದ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಬಾಧಿತ ವಿದ್ಯುಚ್ಛಕ್ತಿ ಸರಬರಾಜನ್ನು ಒದಗಿಸದಿದ್ದುದರಿಂದ ಈ ತರಹ ಆಗುತ್ತಿತ್ತು ಮತ್ತು ಅದನ್ನು ಒದಗಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತಿಳಿಸಿತು (ನವೆಂಬರ್ ೨೦೧೪).
  • ಜಕ್ಕೂರು-ಸಂಪಿಗೇಹಳ್ಳಿ ಕೆರೆಯಲ್ಲಿಯೂ ಸಹ ಕೊಳಚೆ ನೀರಿನ ಸಂಸ್ಕರಣೆಯು ಸ್ಥಾಪಿತ ೧೦ ಎಮ್‌ಎಲ್‌ಡಿ ಸಾಮರ್ಥ್ಯದ ಮಟ್ಟಕ್ಕಿರಲಿಲ್ಲ. ಇದು ಕೆರೆಯಲ್ಲಿನ ಜಲಚರಗಳನ್ನು ಬಾಧಿಸಿತು ಮತ್ತು ಜನವರಿ ೨೦೧೫ರ ಅವಧಿಯಲ್ಲಿ ಮೀನುಗಳ ಸಾಮೂಹಿಕ ಸಾವಿನ ವರದಿಯಾಗಿತ್ತು.

ಈ ಎಲ್ಲ ದೃಷ್ಟಾಂತಗಳು ಎಸ್‌ಟಿಪಿಗಳ ಕಾರ್ಯನಿರ್ವಹಣೆಯು ಪರಿಣಾಮಕಾರಿಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ ಹಾಗೂ ಈ ಎಸ್‌ಟಿಪಿಗಳ ಕಡಿಮೆ ಬಳಕೆ ಮತ್ತು ಕಡಿಮೆ ಸಾಮರ್ಥ್ಯದ ಕಾರಣದಿಂದ ಕೆರೆಗಳನ್ನು ಪ್ರವೇಶಿಸುತ್ತಿದ್ದ ಕೊಳಚೆ ನೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮುಕ್ತಾಯದ ಸಭೆಯಲ್ಲಿ (ಫೆಬ್ರವರಿ ೨೦೧೫) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಕೊಳಚೆ ನೀರನ್ನು ಕೆರೆಗಳಿಗೆ ಬಿಡುವ ಮೊದಲು ನಿರೀಕ್ಷಿತ ಮಟ್ಟಕ್ಕೆ ಸಂಸ್ಕರಣೆಯಾಗುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ನೇರ ಮೇಲ್ವಿಚಾರಣೆಯ ಅಗತ್ಯತೆಯಿದೆಯೆಂದು ತಿಳಿಸಿದರು. ದಾಸರಹಳ್ಳಿ ಕೆರೆಯ ಮುಖ್ಯ ಚರಂಡಿಯಲ್ಲಿ (ಕೆರೆಯ ಒಂದನೆಯ ಒಳಹರಿವು) ಪೀಣ್ಯ ಕೈಗಾರಿಕಾ ಪ್ರದೇಶದ ಎಲ್ಲ ತ್ಯಾಜ್ಯವು ಹರಿಯುತ್ತಿರುವುದು ದಪ್ಪ ಮಂದವಾದ ಕರಿಯ ನೀರಿನಿಂದ ಸ್ಪಷ್ಟವಾಗುತ್ತಿತ್ತು. ಇದು ಒಂದು ಕೆರೆಯ ಉದಾಹರಣೆ ಅಷ್ಟೇ. ಅಭಿವೃದ್ಧಿಯಾಗಿರುವ ಕೆರೆಗಳ ಸ್ಥಿತಿಯೆಲ್ಲ ಇದೆ ಎಂಬುದೇ ಶೋಚನೀಯ.

 ಚಿತ್ರ-ಲೇಖನ: ಕೆರೆ ಮಂಜುನಾಥ್

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*