ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಶೌಚಾಲಯದಿಂದ ಕೊಳಾಯಿಗೆ: ಕುಡಿಯುವ ನೀರಿನ ಭವಿಷ್ಯ ಇದೇ ಏನು?

ಸಿಂಗಾಪುರ್ ಅದನ್ನು ಮಾಡಿದೆ, ಅಮೇರಿಕಾದ ಆರೆಂಜ್ ಕೌಂಟಿಯಲ್ಲೂ ಕೂಡ ಆಗಿದೆ.  ಗಗನಯಾತ್ರಿಗಳೂ ಕೂಡ ಇದನ್ನೇ ಮಾಡಿದ್ದಾರೆ. ಅದೇನು ಗೊತ್ತೇ – ಮರುಸಂಸ್ಕರಣೆ ಮಾಡಿದ ತ್ಯಾಜ್ಯ ನೀರು! ಹಾಗಿದ್ದರೆ, ಭಾರತದಲ್ಲೂ ಇದು ವಾಸ್ತವವಾಗುತ್ತದೆಯೇ?

ಕೆಲವು ವರ್ಷಗಳ ಕೆಳಗೆ, ಇಂಡಿಯಾ ಟುಡೇದಲ್ಲಿ ’ಬಿವೇರ್ ಡೆಲ್ಲಿ! ೭೦ ಪರ್ಸೆಂಟ್ ಆಫ಼್ ವಾಟರ್ ಇನ್ ದ ಕ್ಯಾಪಿಟಲ್ ಅನ್ ಫಿಟ್ ಟು ಡ್ರಿಂಕ್ (ದೆಹಲಿ ಎಚ್ಚರ! ರಾಜಧಾನಿಯಲ್ಲಿ ದೊರೆಯುವ ೭೦ ಪ್ರತಿಶತ ನೀರು ಕುಡಿಯಲು ಯೋಗ್ಯವಲ್ಲ)’ ಎಂಬ ಲೇಖನವು ಬಂತು. ಕಳೆದ ವರ್ಷವಷ್ಟೇ, ಯಮುನಾ ನದಿಯಲ್ಲಿ ಹೆಚ್ಚಿದ ಕೈಗಾರಿಕಾ ಮಾಲಿನ್ಯಕಾರಕಗಳಿಂದ, ದೆಹಲಿ ಜಲ ಬೋರ್ಡ್, ತನ್ನ ಎರಡು ಜಲ ಸಂಸ್ಕರಣಾ ಸ್ಥಾವರಗಳಲ್ಲಿನ ಉತ್ಪಾದನೆಯನ್ನು ಅರ್ಧಕ್ಕೆ ಕಡಿತ ಮಾಡಲೇಬೇಕಾದ ಪ್ರಸಂಗ ಬಂತು.  ಅಂದರೆ, ಕೆಲವೊಮ್ಮೆ, ದೆಹಲಿಯ ಕೊಳಾಯಿ ನೀರು, ತಿಳಿಯಾದ ತ್ಯಾಜ್ಯನೀರಾಗಿ ಇರುತ್ತದೆ.  ನಮ್ಮ ಮನೆಗಳಲ್ಲಿನ ಕುಡಿಯುವ ನೀರು ಚರಂಡಿ ನೀರಿನಿಂದ ಕಲುಷಿತಗೊಂಡಿರುವುದಕ್ಕೆ, ಸ್ವತಃ ಸ್ಥಳೀಯ ನಗರಾಡಳಿತ ಸಂಸ್ಥೆಯೇ ಒಪ್ಪಿಕೊಂಡಿರುವುದಕ್ಕಿಂತ ಹೆಚ್ಚು ಸಾಕ್ಷಿ ಬೇಕೆ? ಹಾಗಿದ್ದಲ್ಲಿ, ವಿಶೇಷವಾಗಿ ಸಿಂಕುಗಳು ಹಾಗೂ ಶೌಚಾಲಯಗಳಿಂದ ಮರುಬಳಕೆಯಾದ ನೀರು ಬಹುತೇಕ ಡಿಸ್ಟಿಲ್ಡ್ ನೀರಿನಷ್ಟೇ ಶುದ್ಧವಾಗಿದ್ದರೂ, ಸಂಪೂರ್ಣವಾಗಿ ಸಂಸ್ಕರಣೆಗೊಂಡ ತ್ಯಾಜ್ಯ ನೀರನ್ನು ಕುಡಿಯುವ ವಿಚಾರದ ಬಗ್ಗೆ ಏಕೆ ಅಸಹ್ಯ ಪಡುತ್ತಾರೆ? ಕುಡಿಯುವ ನೀರಿಗೆ ಮಾತ್ರವಲ್ಲದೆ, ಕೃಷಿ ಹಾಗೂ ಕೈಗಾರಿಕಾ ವಲಯಗಳಲ್ಲೂ, ಇದು ಪರಿಹಾರದ ಭಾಗವಲ್ಲವೇ?

ಮೆಕ್ಸಿಕೋದಲ್ಲಿನ ಥರ್ಡ್ ವರ್ಲ್ಡ್ ಸೆಂಟರ್ ಫ಼ಾರ್ ವಾಟರ್ ಮ್ಯಾನೇಜ್ಮೆಂಟ್ ನ ಸಂಸ್ಥಾಪಕರಾದ ಪ್ರೊ.ಅಸಿತ್ ಬಿಸ್ವಾಸ್ ರವರು,  ಇಂಡಿಯಾ ವಾಟರ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದಂತೆ, ಸಿಂಗಾಪೂರಿನಲ್ಲಿ ೫೦ ಲಕ್ಷಕ್ಕಿಂತ ಹೆಚ್ಚಿನ ನಿವಾಸಿಗಳು ಇದನ್ನು ಒಪ್ಪಿಕೊಂಡಿದ್ದಾರೆ.  ತನ್ನ ನೀರಿನ ೫೦ ಪ್ರತಿಶತದಷ್ಟು ಅಗತ್ಯಗಳಿಗೆ ಮಲೇಶಿಯಾದ ಮೇಲೆ ಅವಲಂಬಿತವಾಗಿದ್ದ ಸಿಂಗಾಪೂರ್, ಸ್ವಾವಲಂಬಿಯಾಗಲು ನಿರ್ಧರಿಸಿತು.  ಈ ಹೊಸ ಸಂಸ್ಕರಣ ಘಟಕಗಳೊಂದಿಗೆ, ಇದನ್ನು ಸಾಧಿಸಿದ್ದಲ್ಲದೆ, ಆಧುನೀಕೃತ ಜಲ ಸಂಶೋಧನೆಯ ಕೇಂದ್ರವೂ ಆಗಲು ಸಾಧ್ಯವಾಯಿತು.  ಅಮೇರಿಕಾದ ಆರೆಂಜ್ ಕೌಂಟಿ ವಾಟರ್ ಡಿಸ್ಟ್ರಿಕ್ಟ್ ನಲ್ಲಿ ಇದೇ ರೀತಿಯ ಯತ್ನವನ್ನು ವಿಸ್ತೃತ ಮಟ್ಟದಲ್ಲಿ ಮಾಡಲಾಗುತ್ತಿದೆ.

ಸುಜಲಧಾರ ಸ್ಥಾವರವು ದಿನಕ್ಕೆ ೮೦,೦೦೦ ಲೀಟರ್ ನೀರನ್ನು ಉತ್ಪಾದಿಸಬಹುದು.

ತ್ಯಾಜ್ಯ ನೀರಿನಿಂದ ಶುದ್ಧ ನೀರು: ದೆಹಲಿ ಜಲ ಮಂಡಳಿಯ ಸಹಯೋಗದೊಂದಿಗೆ ಪ್ರಾಯೋಗಿಕ ಯೋಜನೆ

???????????????????????????????ಕೆಮಿಕಲ್ ಸಿಸ್ಟಮ್ಸ್ ಟೆಕ್ನಾಲಜೀಸ್ ನ ಜಲ ವಿಭಾಗದ ಅಬ್ಸೊಲ್ಯೂಟ್ ವಾಟರ್ ನ ರಾಹುಲ್ ಝಾ ಹೇಳುವ ಪ್ರಕಾರ, “ಗಗನಯಾತ್ರಿಗಳು ಇದನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಮಾಡುತ್ತಾರೆ”. ತ್ಯಾಜ್ಯನೀರನ್ನು ಶುದ್ಧವಾಗಿಸುವ ತಂತ್ರಜ್ಞಾನಗಳನ್ನು ಈ ಸಂಸ್ಥೆಯು ಅಭಿವೃದ್ಧಿಪಡಿಸುತ್ತದೆ.  ಮೆಂಮ್ಬ್ರೇನ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಇವರು, ದೆಹಲಿ ಜಲ ಮಂಡಳಿ ಹಾಗೂ ಸೋಷಿಯಲ್ ಅವೇರ್ನೆಸ್, ನ್ಯೂಯರ್ ಆಲ್ಟರ್ನೇಟಿವ್ಸ್ (ಸಾನಾ) ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಗದೊಂದಿಗೆ, ಜುಲೈ ೨೦೧೫ರಲ್ಲಿ ಕೇಶೋಪುರ್ ಒಳಚರಂಡಿ ಸಂಸ್ಕರಣಾ ಸ್ಥಾವರದಲ್ಲಿ, ’ಸುಜಲ ಧಾರ’ ಎಂಬ ಪ್ರಾಯೋಗಿಕ ಕೇಂದ್ರವನ್ನು ಸ್ಥಾಪಿಸಿದರು.  ರೂ.೫೫ ಲಕ್ಷ ವೆಚ್ಚದಲ್ಲಿ ಸ್ಥಾಪಿಸಿದ ಈ ಸ್ಥಾವರವು, ಪ್ರತಿ ಘಂಟೆಯೂ ೪,೦೦೦ ಲೀಟರುಗಳಿಗಿಂತ ಅಧಿಕ ನೀರನ್ನು ಉತ್ಪಾದಿಸಬಹುದು.

ದಿನಕ್ಕೆ ೧ ದಶಲಕ್ಷ ಲೀಟರ್ ನ ಸಾಮರ್ಥ್ಯದ ಸ್ಥಾವರವನ್ನು ಸ್ಥಾಪಿಸಲು, ರೂ.೩.೫ ಕೋಟಿ ವೆಚ್ಚವಾದರೆ, ಸಾಂಪ್ರದಾಯಿಕ ಒಳಚರಂಡಿ ಸಂಸ್ಕರಣಾ ಸ್ಥಾವರದ ಸ್ಥಾಪನೆಗೆ ಸುಮಾರು ೪.೫-೫ ಕೋಟಿ ವೆಚ್ಚವಾಗುತ್ತದೆ. ಅಲ್ಲದೆ, ಸಾಂಪ್ರದಾಯಿಕ ಸ್ಥಾವರನ್ನು ಚಾಲನೆಯಲ್ಲಿ ಇಡಲು ತಗಲುವ ವೆಚ್ಚಕ್ಕಿಂತ, ಇದರ ವೆಚ್ಚ ೬೬ ಪ್ರತಿಶತ ಕಡಿಮೆ ಇರುತ್ತದೆ.  ದಿನವಿಡೀ ಇರುವ ಬ್ಯಾಟರಿ ಬ್ಯಾಕಪ್ ನ್ನು ಬಳಸಿ, ಈ ಸೌರ-ಚಾಲಿತ ಸ್ಥಾವರವನ್ನು ನಡೆಸಬಹುದು.  ದೆಹಲಿ ಜಲ ಮಂಡಳಿಯು ಸ್ಥಾವರದ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮಾಡುತ್ತದೆ, ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿಯಂತಹ ಸಂಸ್ಥೆಗಳು ಇದಕ್ಕೆ ಹಸಿರು ನಿಶಾನೆ ನೀಡಿವೆ.

ಶುದ್ಧೀಕರಣ ಪ್ರಕ್ರಿಯೆ

yogendraಸ್ಥಾವರಕ್ಕೆ ಕೇಶೋಪುರ ಚರಂಡಿಯಿಂದ ನೀರು ಬರುತ್ತದೆ, ಹಾಗೂ ಒಳಚರಂಡಿಯಿಂದ ಬರುವ ನೀರು, ಎರೆಹುಳಗಳು, ಗಿಡಗಳು, ಹತ್ತಿಯ ಸಾರ, ಬ್ಯಾಕ್ಟೀರಿಯಾ, ಮರಳು ಹಾಗೂ ಸಣ್ಣಕಲ್ಲುಗಳಂತಹ ಜೈವಿಕ ಹಾಗೂ ಅಜೈವಿಕ ವಸ್ತುಗಳ ಪದರವನ್ನು ಹೊಂದಿದ ಜೈವಿಕ ಫಿಲ್ಟರ್ ನ ಮೂಲಕ ಹಾದು ಹೋಗುತ್ತದೆ.  ನಂತರ, ಫೀಡ್ ಟ್ಯಾಂಕ್ ನ ಮೂಲಕ ನೀರು ಹಾದು, ಮರಳಿನ ಫಿಲ್ಟರ್ ಪ್ರವೇಶಿಸಿ, ಕೊನೆಗೆ ೦.೦೧ ಮೈಕ್ರಾನ್ ಅಳತೆಯ ನ್ಯಾನೋ-ಫಿಲ್ಟರ್ ಪದರವನ್ನು ಹಾದು ಹೋಗುತ್ತದೆ.  ಈ ಘಟಕದಿಂದ ಬರುವ ಬೇಡವಾದ ನೀರು, ಕಚ್ಚಾ ನೀರಿನ ಕೇವಲ ೧೫ ಪ್ರತಿಶತದಷ್ಟಿದ್ದು, ಪೊಟಾಶಿಯಂ ಹಾಗೂ ಸಾರಜನಕದಿಂದ ಸಮೃದ್ಧವಾಗಿದ್ದು, ದ್ರವರೂಪದ ರಸಗೊಬ್ಬರವಾಗಿ ಬಳಸಬಹುದಾಗಿದೆ.

ನೀರಿನ ಸಂಸ್ಕರಣೆ ಮಾಡಲು ಜೈವಿಕ ಫಿಲ್ಟರ್ ಹುಳಗಳನ್ನು ಬಳಸುತ್ತದೆ.

ಸದಾಕಾಲ, ನೆರೆಹೊರೆಯ ರಾಜ್ಯಗಳ ಮೇಲೆ ತನ್ನ ನೀರಿನ ಅಗತ್ಯಗಳಿಗಾಗಿ ಕಣ್ಣು ಹೊರಳಿಸುವ ದೆಹಲಿಗೆ, ಈ ತಂತ್ರಜ್ಞಾನವು ಸ್ವಲ್ಪ ಮಟ್ಟಿನ  ಪರಿಹಾರ ಒದಗಿಸಬಹುದು.  ಹಾಗಿದ್ದರೆ, ಯಾವುದೇ ಹಿಂಜರಿಕೆ ಇಲ್ಲದೆ, ಸಿಂಗಾಪೂರಿನಂತೆಯೇ, ತನ್ನ ಚರಂಡಿ ಮತ್ತು ಇತರ ತ್ಯಾಜ್ಯ ನೀರನ್ನು ಕುಡಿಯುವ ಉದ್ದೇಶಗಳಿಗಾಗಿ ಸಂಸ್ಕರಿಸಬೇಕೆ? ಈಗಲೇ ಅದರ ಅಗತ್ಯವಿಲ್ಲದಿದ್ದರೂ, ಸಾರ್ವಜನಿಕರಲ್ಲಿ ಅದನ್ನು ಕುರಿತಾಗಿ ಹೆಚ್ಚಿನ ಮಾನ್ಯತೆ ದೊರೆಯುವವರೆಗೂ ಅದನ್ನು ಮಾಡಲಾಗದು.  ಆದರೆ, ಗೃಹಬಳಕೆಯ ಅಗತ್ಯಗಳಿಗಾಗಿ ತ್ಯಾಜ್ಯನೀರನ್ನು ಮರುಬಳಕೆ ಮಾಡುವ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ.

ಯಮುನೆಯಲ್ಲಿ ಬಿಡಲಾಗುವ ನೀರಿನ ಪ್ರಮಾಣವನ್ನು ಜಂಟಿ ಪೈಪಿ ವ್ಯವಸ್ಥೆಯು ಕಡಿಮೆ ಮಾಡುತ್ತದೆ

biofilter“ಇಂದಲ್ಲ ಅಥವಾ ನಾಳೆ, ಒಂದು ಕಿಲೋಮೀಟರ್ ನಷ್ಟು ಒಳಚರಂಡಿ ಪೈಪುಗಳನ್ನು/ಕಾಲುವೆಗಳನ್ನು ಸ್ಥಾಪಿಸಲು ರೂ.೨೦ ಕೋಟಿಯಷ್ಟು ದುಬಾರಿ ವೆಚ್ಚ ಆಗುವುದರಿಂದ, ವಿಕೇಂದ್ರೀಕೃತ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ನಗರವು ಅಳವಡಿಸಿಕೊಳ್ಳಬೇಕಾಗುತ್ತದೆ”, ಎಂದು ರಾಹುಲ್ ಝಾ ಹೇಳುತ್ತಾರೆ.  ಸಾಂಪ್ರದಾಯಿಕ ಒಳಚರಂಡಿ ಸ್ಥಾವರಗಳಲ್ಲಿ ಬಳಸಲಾಗುವ ಶಕ್ತಿಯ ವೆಚ್ಚವು ಅಪಾರವಾಗಿದ್ದು, ಹಸಿರುಮನೆಯ ಅನಿಲವಾದ ಮೀಥೇನ್ ಅನ್ನು ಗಣನೀಯ ಪ್ರಮಾಣದಲ್ಲಿ ಕಂಡುಬರುತ್ತದೆ.  ಈ ಬಿಕ್ಕಟ್ಟಿನಿಂದ ಹೊರಬರಲು, ವಿಕೇಂದ್ರೀಕೃತ ನೀರು ಸರಬರಾಜು ಹಾಗೂ ಬಡಾವಣೆ ಮಟ್ಟದ ತ್ಯಾಜ್ಯನೀರಿನ ಸಂಸ್ಕರಣೆಯೊಂದಿಗೆ, ಎರಡು-ಪೈಪು ವ್ಯವಸ್ಥೆಯ ಸ್ಥಾಪನೆಯು ಮಾರ್ಗವಾಗಿದೆ.  “ಈ ತಂತ್ರಜ್ಞಾನದಿಂದ ಯಮುನೆಗೆ ಬಿಡುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನೀರನ್ನು ಸ್ವಚ್ಛಗೊಳಿಸಲು ನಿಗದಿಪಡಿಸಬೇಕಾದ ಬಜೆಟ್ ಕೂಡ ಇಳಿಮುಖವಾಗಿದೆ”, ಎನ್ನುತ್ತಾರೆ ಸ್ಥಾವರದ ನಿರ್ವಾಹಕರಾದ ಯೋಗೇಂದ್ರ ಸಿಂಗ್.

ವಾಹನಗಳನ್ನು ತೊಳೆಯಲು ಕೇಶೋಪುರ ಬಸ್ ನಿಲ್ದಾಣಕ್ಕೆ ಸ್ಥಾವರದ ನೀರನ್ನು ಸರಬರಾಜು ಮಾಡುವ ಕಾರ್ಯ ಪ್ರಗತಿಯಲ್ಲಿದೆ.  ಸ್ಥಾವರದ ಸಮೀಪವಿರುವ ದೆಹಲಿ ಜಲ ಮಂಡಲಿಯ ಅಧಿಕಾರಿಗಳ ನಿವಾಸಗಳಿಗೆ ಹಾಗೂ ಎರಡು ಪೈಪ್ ವ್ಯವಸ್ಥೆಯ ಕಾಮಗಾರಿ ಪ್ರಸ್ತಾಪಿಸಲಾದ ಸ್ಥಳದಲ್ಲೂ ನೀರನ್ನು ಒದಗಿಸಲಾಗುತ್ತದೆ.  ಹಾಗಾಗಿ, ಬಳಕೆದಾರರಿಗೆ ಕುಡಿಯಲು ಯೋಗ್ಯವಾದ ಹಾಗೂ ಸಂಸ್ಕರಿಸಿದ ನೀರಿನ ಸರಬರಾಜು ಮಾಡಲು ಎರಡು ಸಂಪೂರ್ಣ ಪ್ರತ್ಯೇಕ ವ್ಯವಸ್ಥೆಗಳನ್ನು ಬಳಸಲಾಗುತ್ತದೆ.  ಒಂದು ಸಾಮಾನ್ಯ ಮನೆಗೆ, ಕುಡಿಯಲು ಹಾಗೂ ಅಡುಗೆಗಾಗಿ ೩೦ ಲೀಟರಿಗಿಂತ ಹೆಚ್ಚಿನ ನೀರಿನ ಅಗತ್ಯವೇನೂ ಇಲ್ಲ. ಮನೆಯ ಇತರ ಅಗತ್ಯಗಳಿಗೆ ಬಳಕೆಯಾಗುವ ಸುಮಾರು ಎಂಭತ್ತು ಪ್ರತಿಶತದಷ್ಟು ಮಿಕ್ಕ ನೀರನ್ನು ಕುಡಿಯುವ ನೀರಿನ ಮಟ್ಟಕ್ಕೆ ಸಂಸ್ಕರಣೆ ಮಾಡುವ ಅಗತ್ಯವೇನೂ ಇಲ್ಲ.  ಹೋಟೆಲ್ ಗಳು, ಶಾಲೆಗಳು ಹಾಗೂ ಸರ್ಕಾರಿ ಕಛೇರಿಗಳಂತಹ ದೊಡ್ಡ ಸ್ಥಳಗಳಿಗೆ ಈ ತಂತ್ರಜ್ಞಾನವು ಅತ್ಯಂತ ಉಪಯುಕ್ತವಾಗಿದೆ.

ಇಂದಲ್ಲ ನಾಳೆ ಇದು ವಾಸ್ತವವಾಗುತ್ತದೆ

water_10ಶೌಚಾಲಯದ ನೀರನ್ನು ಕುಡಿಯಲು ಯೋಗ್ಯವಾಗಿಸುವಂತೆ ಸಂಸ್ಕರಣೆ ಮಾಡುವ ತಂತ್ರಜ್ಞಾನವನ್ನು ಬಲವಾಗಿ ನಾವು ಉತ್ತೇಜಿಸುವೆವೋ, ಇಲ್ಲವೋ, ಅದಕ್ಕೂ ಮೀರಿದ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ನೀರು ಸರಬರಾಜು ಹಾಗೂ ಒಳಚರಂಡಿಯ ವಿಕೇಂದ್ರೀಕೃತ ವ್ಯವಸ್ಥೆಗಳತ್ತ ಮುಖ ಮಾಡುವ ಸಮಯವಾಗಿಲ್ಲವೇ? ಭಾರತ ನದಿ ದಿನಾಚರಣೆ ೨೦೧೫ರ ತಮ್ಮ ಭಾಷಣದಲ್ಲಿ, ದೆಹಲಿಯ ನೀರ ಮಂತ್ರಿಗಳಾದ ಕಪಿಲ್ ಮಿಶ್ರಾರವವರು ಇದನ್ನು ಕುರಿತಾಗಿ ಪ್ರಸ್ತಾಪಿಸಿದರು. ಕುಡಿಯುವುದಕ್ಕೆ ಹೊರತುಪಡಿಸಿ, ಇತರ ಉದ್ದೇಶಗಳಿಗಾಗಿ ಕುಡಿಯಲು ಯೋಗ್ಯವಾದ ನೀರಿನ ಬಳಕೆಯನ್ನು ನಿಷೇಧಿಸುವ ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ.

ಅದೇನೇ ಇರಲಿ, ದೆಹಲಿಯ ಮಾಸ್ಟರ್ ಪ್ಲಾನ್ ೨೦೨೧ (Delhi’s Master Plan 2021), ಹೊಸ ನಿರ್ಮಾಣಗಳಿಗೆ “ಸಂಸ್ಕರಿತ ತ್ಯಾಜ್ಯನೀರಿನ ಮರುಬಳಕೆಯೊಂದಿಗೆ, ಕುಡಿಯಲು ಯೋಗ್ಯವಾದ ಹಾಗೂ ಸಂಸ್ಕರಿತ ನೀರಿನ ಸರಬರಾಜಿಗಾಗಿ ಪ್ರತ್ಯೇಕ ಲೈನ್ ಗಳು ಹಾಗೂ ಎರಡು ಪೈಪಿನ ವ್ಯವಸ್ಥೆಯ ಪರಿಚಯ”ಕ್ಕೆ ಕರೆ ನೀಡಿದೆ.  ನೀರನ್ನು ಕುಡಿಯಲಿಕ್ಕೆ ಅಲ್ಲದೆ, “ಸಂಸ್ಕರಿತ ಚರಂಡಿ ನೀರಿನ ದ್ರವತ್ಯಾಜ್ಯವನ್ನು ತೋಟಗಾರಿಕೆ, ವಾಹನಗಳನ್ನು ತೊಳೆಯಲು, ತಂಪಾಗಿಡುವ ಟವರ್ ಗಳು, ಇತ್ಯಾದಿಗಳಿಗಾಗಿ ಬಳಸಬಹುದು ಎಂದು ಸೂಚಿಸಲಾಗಿದೆ. ಹಾಗಾಗಿ, ಎರಡು-ಪೈಪ್ ವ್ಯವಸ್ಥೆಯು ಇಂದಲ್ಲ, ನಾಳೆ ವಾಸ್ತವವಾಗಲಿದೆ.

ಟೆಂಡರ್ ಗಳನ್ನು ಕರೆಯಲಾಯಿತು, ಅದಕ್ಕೆ ಪ್ರತಿಕ್ರಿಯೆಗಳೂ ಬಂದವು, ಆದರೂ ತಂತ್ರಜ್ಞಾನದ ಅಳವಡಿಕೆ ಇನ್ನೂ ಆಗಿಲ್ಲ. “ದೆಹಲಿಯ ಕೊಳಾಯಿಗಳಿಂದ ಸಂಸ್ಕರಿತ ತ್ಯಾಜ್ಯ ನೀರು ಸರಬರಾಜಾಗುವುದಕ್ಕೆ ಇನ್ನೂ ಸ್ವಲ್ಪ ಸಮಯವಿದೆ.  ಅನೇಕ ಆಯ್ಕೆಗಳ ಪೈಕಿ ಇದೂ ಒಂದು”, ಎನ್ನುತ್ತಾರೆ ರಾಹುಲ್.

ಅಲ್ಲಿಯವರೆಗೂ, ನದಿಯಲ್ಲಿ ನೀರನ್ನು ಬಿಡುವ ಮೊದಲು, ಸರ್ಕಾರ ಕನಿಷ್ಠಪಕ್ಷ ಅದನ್ನು ಸಂಸ್ಕರಿಸಿ ಬಿಡುವುದು ಒಳಿತು.

ಮೂಲ ಇಂಗ್ಲೀಷ್ ಲೇಖನ: ಅಮಿತಾ ಭಾದುರಿ

 ಇಂಡಿಯಾ ವಾಟರ್ ಪೋರ್ಟಲ್ ನಲ್ಲಿ ಪ್ರಕಟವಾದ ಮೂಲ ಲೇಖನವನ್ನು ಓದಲು ನೀವು ಕ್ಲಿಕ್ಕಿಸಬೇಕಾದುದು ಇಲ್ಲಿ: http://www.indiawaterportal.org/articles/toilet-tap-future-drinking-water
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*