ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಒಂದಾನೊಂದು ಕಾಲದಲ್ಲಿ ನಾಗಿನಿ ಎಂಬ ನದಿಯೊಂದಿತ್ತು . . . .

ಹಿರಿ ತಲೆಮಾರುಗಳೂ ಮರೆತು ಹೋಗಿರುವ ನದಿಯೊಂದನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಗಡಿ ಹಾಗೂ ಕುಣಿಗಲ್ ತಾಲ್ಲೂಕುಗಳಲ್ಲಿ ಆರಂಭವಾಗಿದೆ. ಕಳಚಿ ಹೋಗಿರುವ ಕೆರೆಗಳ ಕೊಂಡಿಯನ್ನು ಸರಿಪಡಿಸಿ ಆ ನದಿಗೆ ಮರುಜೀವ ಕೊಡುವ ನಡಿಗೆಯ ಪುಟ್ಟ ಪರಿಚಯ ಇದು.

Nagini near Sankighatta‘ಮೂಡಲ್ ಕುಣಿಗಲ್ ಕೆರೆ ನೋಡೋಕೊಂದ್ ಐಭೋಗ . . . .’ ಎಂದು ಜನಪದರು ಕಟ್ಟಿದ ಹಾಡಿನಿಂದ ತುಮಕೂರು ಜಿಲ್ಲೆಯ ಈ ಬೃಹತ್ ಕೆರೆ ಎಲ್ಲರ ನೆನಪಿನಲ್ಲುಳಿದಿದೆ, ಆದರೆ ಈ ಕೆರೆಗೆ ಜೀವ ತುಂಬುತ್ತಿದ್ದ ‘ನಾಗಿನಿ’ ನದಿಯ ಪರಿಚಯ ಬಹುತೇಕರಿಗೆ ಇಲ್ಲ. ಯುವ ಜನತೆ ಬಿಡಿ, ಹಿರಿಯರಿಗೂ ಇದರ ನೆನಪು ಮಸುಕಾಗಿದೆ.

ಇದೇನು ವರ್ಷವಿಡೀ ಹರಿಯುತ್ತಿದ್ದ ನದಿಯಲ್ಲ, ನೂರಾರು ಕಿಲೋ ಮೀಟರ್ ಹರಿಯುವಂಥದ್ದೂ ಅಲ್ಲ, ಶಿವಗಂಗೆ ಬೆಟ್ಟದ ಕಿಬ್ಬಿಯಲ್ಲಿ ಹುಟ್ಟಿ ಕುದೂರು, ತಿಪ್ಪಸಂದ್ರ, ಕುಣಿಗಲ್, ಕಗ್ಗೆರೆ ಮಾರ್ಗವಾಗಿ ಹರಿದು ಮಂಗಳಾ ಜಲಾಶಯದ ಮೂಲಕ ಶಿಂಷಾ ನದಿ ಸೇರುತ್ತಿತ್ತು. ನಾಗಿನಿ ಶಿಂಷಾ ನದಿಯ ಉಪನದಿ. ಹರಿವು ಸುಮಾರು ೪೫ ಕಿಲೋಮೀಟರ್. ದೊಡ್ಡ ಹಳ್ಳ ಅಥವಾ ತೊರೆ ಎನ್ನಬಹುದು. ರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕುಗಳಲ್ಲಿ ಇದರ ಹರಿವು.

ಮೈಸೂರು ಗೆಜೆಟಿಯರ್‌ನಲ್ಲಿ ಇದರ ಪ್ರಸ್ಥಾಪವಿದೆ. ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಚೋಳರಾಜರು ತುಂಬಿ ಹರಿಯುವ ನಾಗಿನಿಯನ್ನು ನೋಡಿ ಈ ನೀರನ್ನು ತಡೆದು ವ್ಯವಸಾಯಕ್ಕೆ ಬಳಸಲು ಕುಣಿಗಲ್ ಕೆರೆ ನಿರ್ಮಿಸಿದರೆಂದು ಐತಿಹ್ಯವಿದೆ.

Shivagange.ನದಿಯು ಈ ತನ್ನ ಹರಿವಿನ ದಾರಿಯಲ್ಲಿ ಹಲವು ಸರಣಿ ಕೆರೆಗಳಿಗೆ ನೀರುಣಿಸುತ್ತಿತ್ತು, ಮುಖ್ಯವಾಗಿ ಗಿಡದ ಹೊಸಕೆರೆ, ಲಕ್ಕಯ್ಯನಪಾಳ್ಯದ ಕೆರೆ, ಹುಲಿಕಲ್ ಬಳಿಯ ತಮ್ಮೇನಹಳ್ಳಿ ಕೆರೆ, ಮಾಯಸಂದ್ರ ಕೆರೆ, ಸಂಕಿಘಟ್ಟ ಕೆರೆ, ಕಲ್ಯಾಣಿ ಕೆರೆ ಹಾಗೂ ಕುಣಿಗಲ್ ದೊಡ್ಡಕೆರೆಗಳಿಗೆ ಇದು ಆಧಾರವಾಗಿತ್ತು.  ಕುಣಿಗಲ್ ಕೆರೆ ಹೊರತುಪಡಿಸಿದರೆ ಉಳಿದವು ಮಧ್ಯಮ ಗಾತ್ರದ ಕೆರೆಗಳು. ಮಳೆಗಾಲದಲ್ಲಿ ಹಲವು ತಿಂಗಳು ಹರಿಯುತ್ತಿದ್ದ ನದಿಯಿಂದ ಈ ಕೆರೆಗಳು ತುಂಬಿ ಕೋಡಿ ಹರಿದು ಕುಣಿಗಲ್ ಕೆರೆಗೆ ಸೇರುತ್ತಿತ್ತು.

ಈ ರೀತಿ ಶಿವಗಂಗೆ ಬೆಟ್ಟದಿಂದ ನೀರು ಪಡೆಯುತ್ತಿದ್ದ ಕುಣಿಗಲ್ ದೊಡ್ಡಕೆರೆಯು ಇಂದು ತನ್ನ ಅಸ್ತಿತ್ವಕ್ಕಾಗಿ ಹೇಮಾವತಿ ಜಲಾಶಯದ ನೀರನ್ನು ಅವಲಂಬಿಸಿದೆ. ಹಲವು ಕೆರೆಗಳ ಸರಣಿ ಕೊಂಡಿಯ ಮೂಲಕ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸುತ್ತಿದ್ದ ನಾಗಿನಿ ನದಿ ಈಗ ಕಣ್ಮರೆಯಾಗಿದೆ. ದೂರದ ಹೇಮಾವತಿ ಹರಿಸಲು ನಡೆಯುತ್ತಿರುವ ಹೋರಾಟ, ಆರೋಪ, ಪ್ರತ್ಯಾರೋಪಗಳ ನಡುವೆ ಕೈಯಳತೆಯಲ್ಲೇ ಇರುವ ನಾಗಿನಿಯ ಬಗ್ಗೆ ಇಷ್ಟೂ ವರ್ಷಗಳ ಕಾಲ ಗಮನಹರಿಸುವವರೇ ಇಲ್ಲವಾಗಿದ್ದು ಅಚ್ಚರಿ.

ಸಾವಿರಾರು ಎಕರೆಗೆ ನೀರುಣಿಸುವ ಸಾಮರ್ಥ್ಯವಿದ್ದ ಕುಣಿಗಲ್ ಕೆರೆ ಇಂದು ಪಟ್ಟಣದ ಜನರಿಗೆ ಕುಡಿಯುವ ನೀರನ್ನೂ ಸರಬರಾಜು ಮಾಡುವ ಮೂಲವಾಗಿದೆ. ಅಲ್ಲದೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯೂ ಇದಕ್ಕಿದೆ. ಹಾಗಾಗಿ ನಾಗಿನಿಯ ಹಾದಿಯನ್ನು ಸರಿಮಾಡಿ, ಕುಣಿಗಲ್ ದೊಡ್ಡಕೆರೆಯನ್ನು ಪುನರುಜ್ಜೀವನಗೊಳಿಸುವುದು ಅತ್ಯಗತ್ಯ.

???????????????????????????????ನಾಗಿನಿ ನದಿಯು ೪೫ ಕಿಲೋ ಮೀಟರ್ ಹರಿದರೂ ಸಹ ಅದರ ಜಲಾನಯನ ಪ್ರದೇಶ ಸುಮಾರು ೭೫೦ ಚದರ ಕಿಲೋ ಮೀಟರುಗಳು. ಇದು ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹರಡಿದೆ. ಈ ಬೃಹತ್ ಪ್ರದೇಶದಲ್ಲಿ ಕಳೆದ ನಾಲ್ಕು ದಶಕಗಳಲ್ಲಾದ ಅಗಾಧ ಬದಲಾವಣೆ ಒಂದು ನದಿಯ ನೆನಪನ್ನೇ ಇಲ್ಲವಾಗಿಸಿದ್ದು ವಿಷಾದನೀಯ.

ನಾಗಿನಿ ಹುಟ್ಟುವ ಶಿವಗಂಗೆ ಬೆಟ್ಟ ಹಾಗೂ ಅದು ಶುರುವಿನಲ್ಲಿ ಹರಿಯುತ್ತಿದ್ದ ೧೫-೨೦ ಕಿಲೋಮೀಟರ್ ಉದ್ದಕ್ಕೆ ಇದ್ದ ದಟ್ಟ ಹಾಗೂ ಕುರುಚಲು ಕಾಡು ಇಂದು ಹೇಳ ಹೆಸರಿಲ್ಲದಂತಾಗಿದೆ ಎಂದು ಅಧ್ಯಯನಗಳು ತಿಳಿಸುತ್ತವೆ. ೨೦ ಚದರ ಕಿಲೋ ಮೀಟರ್‌ನಷ್ಟು ವ್ಯಾಪಿಸಿದ್ದ ಜಲಮೂಲಗಳು ಅರ್ದಕ್ಕರ್ಧ ಇಲ್ಲವಾಗಿವೆ ಅಥವಾ ಒತ್ತುವರಿಯಾಗಿವೆ. ಜಲಾನಯನ ಪ್ರದೇಶದಲ್ಲಿ ಕಟ್ಟಡಗಳು ತಲೆ ಎತ್ತಿವೆ, ಹಳ್ಳದ ವ್ಯಾಪ್ತಿ ಕುಗ್ಗಿದೆ, ಹಳ್ಳದಗುಂಟ ಇದ್ದ ಗಿಡಮರಗಳು ಈಗಿಲ್ಲ, ಎಗ್ಗಿಲ್ಲದೆ ಮರಳು ತೆಗೆದ ಪರಿಣಾಮ ಹಳ್ಳದ ಜಾಡೇ ಕಾಣದಷ್ಟು ಕುರೂಪವಾಗಿಸಿದೆ.

ಒಂದು ಪುಟ್ಟ ನದಿಯ ಮೇಲೆ ಇಷ್ಟೆಲ್ಲಾ ದಾಳಿಗಳಾದರೆ ಅದು ಉಳಿದೀತಾದರೂ ಹೇಗೆ? ಈ ಜಲಾನಯನ ಪ್ರದೇಶ ಮತ್ತು ಅಲ್ಲಿ ಬರುವ ಕೆರೆಗಳ ಕೊಂಡಿಯನ್ನು ಸರಿಪಡಿಸಿದರೆ ನಾಗಿನಿಗೆ ಮರುಜೀವ ಕೊಡಬಹುದು. ಆ ಮೂಲಕ ಮತ್ತೆ ಮೂಡಲ್ ಕುಣಿಗಲ್ ಕೆರೆಯಲ್ಲಿ ಚಂದಿರ ಮೂಡಿ ಬರುವುದನ್ನು ಕಾಣಬಹುದು.

ಪುನಶ್ಚೇತನದ ಪ್ರಯತ್ನ

???????????????????????????????ಇದೀಗ ಅಂತಹುದೊಂದು ಪ್ರಯತ್ನ ಚಿಗುರೊಡೆದಿದೆ. ರಾಜಸ್ಥಾನ, ಕೇರಳಗಳಲ್ಲಿ ನಡೆದ, ಈಗಲೂ ನಡೆಯುತ್ತಿರುವ ಯಶಸ್ವೀ ನದಿ ಪುನರುಜ್ಜೀವನ ಕಾರ್ಯಗಳ ಪ್ರೇರಣೆ ಇದರ ಹಿಂದಿದೆ. ನಮ್ಮಲ್ಲಿಯೂ ಸಹ ಹಲ ವರ್ಷಗಳಿಂದ ಅರ್ಕಾವತಿ ನದಿ ಪುನಶ್ಚೇತನ ಕೆಲಸ ನಡೆಯುತ್ತಿದ್ದು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದೆ, ಜೊತೆಗೆ ಇದೇ ಶಿವಗಂಗೆ ಬೆಟ್ಟದಿಂದ ಪೂರ್ವಕ್ಕೆ ಹರಿಯುವ ಕುಮುದ್ವತಿ, ಚಿತ್ರದುರ್ಗದ ಬಳಿಯ ವೇದಾವತಿ ನದಿಗಳ ಪುನಶ್ಚೇತನ ಕೆಲಸವೂ ನಡೆಯುತ್ತಿದೆ.

ಈ ಪ್ರಯತ್ನಗಳಿಗೆ ಮತ್ತೊಂದು ಸೇರ್ಪಡೆ ನಾಗಿನಿ ನದಿ ಪುನರುಜ್ಜೀವನ ಕಾರ್ಯಕ್ರಮ. ಡಬ್ಯುಡಬ್ಯುಎಫ್-ಇಂಡಿಯಾ ಸಂಸ್ಥೆಯು ಎಚ್‌ಎಸ್‌ಬಿಸಿ ಜಲ ಕಾರ್ಯಕ್ರiದ ಬೆಂಬಲದೊಂದಿಗೆ ಇದನ್ನು  ಶುರುಮಾಡಿದೆ. ಆರಂಭದಲ್ಲಿ ಈ ಪ್ರಯತ್ನದ ಅಂಗವಾಗಿ ಕುಣಿಗಲ್‌ನ ಜಲಮೂಲಗಳ ಸ್ಥಿತಿಗತಿ ಕುರಿತು ಒಂದು ಅಧ್ಯಯನ ನಡೆಸಿತು. ಅದರಲ್ಲಿ ಕುಣಿಗಲ್ ಕೆರೆಗೆ ನೀರು ಪೂರೈಸುತ್ತಿದ್ದ ಕೆರೆಗಳ ಕೊಂಡಿಯು ಗಂಡಾಂತರ ಸ್ಥಿತಿಯಲ್ಲಿರುವ ಅಂಶ ಬೆಳಕಿಗೆ ಬಂತು. ಅದರ ಮುಂದುವರಿದ ಭಾಗವಾಗಿ ನಡೆದ ಚರ್ಚೆಗಳಲ್ಲಿ ನಾಗಿನಿಯ ನೆನಪುಗಳು ತೆರೆದುಕೊಂಡು ವಿವಿಧ ಮೂಲಗಳಿಂದ ಅದರ ಜಾಡನ್ನು ಹಿಡಿಯಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಅಲ್ಪಾವಧಿ. ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನದಿ ಪರಿಸರ ಹಾಗೂ ಕೆರೆಗಳ ಮೂಲ ಸ್ವರೂಪವನ್ನು ಮರಳಿ ತರುವುದು ಇದರ ಉದ್ದೇಶ.

ನದಿಯ ನಾಡಿ ತಿಳಿಯಲು ಕಾಲ್ನಡಿಗೆ

???????????????????????????????“ಚಿಕಿತ್ಸೆಗೆ ಮುನ್ನ ರೋಗಿಯ ನಾಡಿ ಪರೀಕ್ಷಿಸುವಂತೆ ಪುನಶ್ಚೇತನಕ್ಕೆ ಮುನ್ನ ನದಿ ಆಸುಪಾಸಿನ ಪರಿಸರ ಹಾಗೂ ಜನಜೀವನವನ್ನು ಅರಿಯಲು ಮತ್ತು ನಮ್ಮ ಪ್ರಯತ್ನವನ್ನು ಪರಿಚಯಿಸಲು ಕಾಲ್ನಡಿಗೆಗಿಂತಲೂ ಮಿಗಿಲಾದ ಮಾರ್ಗ ಬೇರೆ ಇಲ್ಲ ಎನ್ನಿಸಿತು, ಹಾಗಾಗಿ ಇದಕ್ಕೆ ಕೈಹಾಕಿದ್ದೇವೆ” ಎನ್ನುತ್ತಾರೆ ಇದರ ವ್ಯವಸ್ಥಾಪಕ ಎಂ.ಎಂ.ಭೋಪಯ್ಯ. ಕಳೆದ ವರ್ಷದ (೨೦೧೫) ಅಕ್ಟೋಬರ್ ೧೭, ೧೮ ಮತ್ತು ೧೯ರಂದು ನಡೆದ ನದಿ ಅರಿಯುವ ಕಾಲ್ನಡಿಗೆ ಅತ್ಯಂತ ಯಶಸ್ವಿಯಾಯಿತು.

ನದಿ ಜಲಾನಯನ ಪ್ರದೇಶದಲ್ಲಿರುವ ವಿವಿಧ ವರ್ಗದ ಜನರಲ್ಲಿ ಈ ಪ್ರಯತ್ನವು ಚರ್ಚೆ ಹುಟ್ಟು ಹಾಕಿದೆ. ನಾಗಿನಿ ನದಿ ಸಂರಕ್ಷಣೆಗೆ ಪೂರಕವಾಗಿ ಕೆರೆ ಪುನಶ್ಚೇತನ ಸಂಘಗಳು ಪ್ರಾರಂಭವಾಗಿವೆ. ಈ ಭಾಗದ ಜನರಲ್ಲಿ ನಾಗಿನಿ ಎಂಬುದೊಂದು ನದಿ ಇತ್ತು ಎಂಬ ನೆನಪಾದರೂ ಇದರಿಂದ ಖಂಡಿತಾ ಮರುಕಳಿಸುತ್ತಿದೆ. ಅದಕ್ಕಿಂತ ಮುಖ್ಯವಾಗಿ ಹೊಸ ಪೀಳಿಗೆಗೆ ನದಿಯ ಹೆಸರನ್ನು ದಾಟಿಸುವ ಕೆಲಸವೂ ಇದಾಗಿದ್ದು, ಕುಣಿಗಲ್ ದೊಡ್ಡಕೆರೆಯ ಪರಿಸರ ಆರೋಗ್ಯ ವೃದ್ಧಿಸುವ ದೂರದೃಷ್ಟಿಯೂ ಇದರ ಹಿಂದಿದೆ. ಕೆರೆಗೆ ಎದುರಾಗಿರುವ ಅಡೆತಡೆ ಮತ್ತು ಅದನ್ನು ನಿವಾರಿಸಲು ಇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಹರಡುವುದು ಈ ಕಾರ್ಯಕ್ರಮದ ಗುರಿ.

ಕಾಲ್ನಡಿಗೆಯು ಸುಮಾರು ೩೫ ಕಿ.ಮೀ ಕ್ರಮಿಸಿತು. ಶಿವಗಂಗೆ ಬೆಟ್ಟದ ಬುಡದಿಂದ ಕುಣಿಗಲ್ ದೊಡ್ಡಕೆರೆವರೆಗಿನ ಮಾರ್ಗದಲ್ಲಿ ಬರುವ ೧೫ ಹಳ್ಳಿಗಳು ಹಾಗೂ ೫ ಕೆರೆಗಳನ್ನು ನಡಿಗೆ ಸಮಯದಲ್ಲಿ ಹಾದು ಬಂದು ಅಲ್ಲಿನ ನಿಜಸ್ವರೂಪದ ಅರಿವು ಪಡೆಯಲಾಗಿದೆ. ನದಿ ಹಾಗೂ ಕೆರೆಯ ಪುನರುಜ್ಜೀವನಕ್ಕೆ ಎಲ್ಲ ಸ್ಥಳೀಯರ ಸಹಕಾರ ವ್ಯಕ್ತವಾಗಿದೆ. ಪ್ರತಿ ಹಳ್ಳಿಯಲ್ಲಿಯೂ ಸಭೆ ನಡೆಸಿ ಜನರ ಅನಿಸಿಕೆ ಒಟ್ಟುಗೂಡಿಸಲಾಗಿದೆ. ಕೆರೆಯ ಪರಿಸರ ಹಾಳಾಗಲು ಇರುವ ಕಾರಣಗಳು ಮತ್ತು ಅದನ್ನು ಸರಿಪಡಿಸಲು ಸಮುದಾಯಗಳು ಏನು ಮಾಡಬಹುದು ಎಂಬುದನ್ನು ಚರ್ಚಿಸಲು, ಗುರುತಿಸಲು ಮತ್ತು ಪರಿಹಾರ ಹುಡುಕಲು ಕಾಲ್ನಡಿಗೆಯನ್ನು ಒಂದು ವೇದಿಕೆಯಾಗಿ ಬಳಸಿಕೊಳ್ಳಲಾಯಿತು.

ಮುಂದಿನ ಹಲವು ವರ್ಷಗಳ ಕಾಲ ಈ ಪುನರುಜ್ಜೀವನ ನಡಿಗೆ ನಡೆಯಲಿದೆ. ನಮ್ಮದೇ ನೆಲದ ಈ ಪುಟ್ಟ ನಾಗಿನಿಗೆ ಮರುಜೀವ ಕೊಡುವ ಈ ಮಹತ್ವದ ನಡಿಗೆಗೆ ನಿಮ್ಮ ಕಾಲುಗಳೂ ಸೇರಿಕೊಳ್ಳಲಿ.

ಆಸಕ್ತರು ಸಂಪರ್ಕಿಸಿ: ಎಂ.ಎಂ.ಬೋಪಯ್ಯ, ೯೯೧೬೨೨೯೪೬೦ ಹಾಗೂ ವೈ.ಟಿ.ಲೋಹಿತ್, ೯೯೧೬೪೭೭೪೭೦

ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*