ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ಬೇಟೆ: ಮಲೆನಾಡಿನಲ್ಲಿ ಮೀನು ಹಿಡಿಯುವ ಪರಿ ಇದು…

ದೂರದಲ್ಲೊಂದು ಶಬ್ದ “ಕೇಳ್ರಪ್ಪೋ ಕೇಳ್ರೀ …. ನಾಳೆ  ನೆಗೆವಾಡಿ ಗ್ರಾಮದಲ್ಲಿ ಕೆರೆ ಬೇಟೆ ಕಾರ್ಯಕ್ರಮ       ಹಮ್ಮಕೊಂಡವ್ರೆ, ಎಲ್ಲಾ ಗ್ರಾಮಸ್ಥರೂ ನಾಳೆ ಬೆಳಿಗ್ಗೆ ಕೆರೆಯತ್ರ ಸೇರಬೇಕಂತೆ’ ಕೇಳ್ರಪ್ಪೋ ಕೇಳ್ರೀ…

 ‘ಕೆರೆ ಬೇಟೆ’ ಏನಿದು ವಿಶೇಷ ಅಂತ ನಾನು ಮುಂಜಾನೆ ಎದ್ದು ಕ್ಯಾಮರ ಹಿಡಿದು ಕೆರೆಯ ಬಳಿ ಹೊರಟೆ. ಕೆರೆ ಸುತ್ತು ಹೊಡೆಯುತ್ತಾ ತೂಬು, ಕೋಡಿ, ಪೋಷಕ ಕಾಲುವೆ, ಏರಿ, ಜಲಾನಯನ ಪ್ರದೇಶದ ಫೋಟೋ ಕ್ಲಿಕ್ಕಿಸಿಕೊಂಡು ಕೆರೆ ಅಂಗಳಕ್ಕೆ ಬರುವಷ್ಟರಲ್ಲಿ ಜನಗಳ ಜಾತ್ರೆಯೇ ಸೇರಿತ್ತು.

DSC01716ತಲೆಗೆ ಪೇಟ, ಮೊಣಕಾಲುದ್ದದ ಚಡ್ಡಿ, ಹೆಗಲಿಗೆ ಜೋಳಿಗೆ, ಒಂದು ಕೈಯಲ್ಲಿ ಕೂಣಿ (ಮೀನು ಹಿಡಿಯುವ ಸಾಧನ) ಮತ್ತೊಂದು ಕೈಯಲ್ಲಿ ಹುರಿ, ಕೋಲು ಹಿಡಿದುಕೊಂಡು ಯುದ್ಧಕ್ಕೆ ಸಜ್ಜಾಗಿ ನಿಂತ ಯೋಧರಂತೆ ಕಾಣುತ್ತಿದ್ದರು. ಒಬ್ಬರ ಮೇಲೆ ಒಬ್ಬರು ಲೆಕ್ಕಿಸದೇ ಮುನ್ನುಗ್ಗಲು ಸಜ್ಜಾಗುತ್ತಿದ್ದರು. ಹಿರಿಯರು, ಕಿರಿಯರು, ಊರ ಗೌಡ್ರು, ಕೂಲಿಗಳು ಎಲ್ಲರೂ ಜಾತಿ ಭೇದ ಮರೆತು, ಒಂದೆಡೆ ಒಟ್ಟಾಗಿ ಸೇರಿ ಗ್ರಾಮೀಣ ಆಟಕ್ಕೆ ಸಾಕ್ಷಿಯಾದರು.

ಬಲೆ ಹಾಕಿ ಮೀನು ಹಿಡಿಯುವುದನ್ನು ನೋಡಿರುತ್ತೇವೆ, ಗಾಳ ಹಾಕಿ ಮೀನು ಹಿಡಿಯುವುದನ್ನು ನೋಡಿರುತ್ತೇವೆ. ಆದರೆ, ಏಕಕಾಲದಲ್ಲಿ ೫೨೦ ಜನರು ಒಂದು ಕೆರೆಯಲ್ಲಿ ಮೀನು ಹಿಡಿಯುವುದನ್ನು ನಾವು ನೋಡಿರಲಾರೆವು. ಇಂತಹ ಕೆರೆ ಬೇಟೆ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕಿನ ನೆಗೆವಾಡಿ ಗ್ರಾಮದ ಊರ ಮುಂದಿನ ಕೆರೆ ವೇದಿಕೆಯಾಗಿತ್ತು.

ವರ್ಷವಿಡೀ ದುಡಿದ ರೈತರಿಗೆ ಕೆರೆ ಬೇಟೆಯಂತಹ ಸಾಂಸ್ಕೃತಿಕ ಸ್ಪರ್ಧೆ ರೈತನ ಪಾಲಿಗೆ ರೋಚಕ ಕ್ಷಣವನ್ನು ಹುಟ್ಟು ಹಾಕಿತು. ನೆಗೆವಾಡಿಯ ಶ್ರೀ ಮಾರಿಕಾಂಬ ಕೆರೆ ಬಳಕೆದಾರರ ಸಂಘ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಎಣ್ಣೆಕೊಪ್ಪ, ತತ್ತೂರು, ಕಮ್ಮಹಳ್ಳಿ, ಬೆಲವಂತನಕೊಪ್ಪ, ಬಾರಂಗಿ, ಕೊಳಗಿಯಂತಹ ೩೦ಕ್ಕೂ ಹೆಚ್ಚು ಗ್ರಾಮಗಳಿಂದ ಸ್ಪರ್ಧಿಗಳು ಬಂದಿದ್ದರು. ಸ್ಪರ್ಧೆ ನೋಡಿದವರಿಗಿಂತ, ಸ್ಪರ್ಧೆಯಲ್ಲಿ  ಭಾಗವಹಿಸಿದವರೇ ಹೆಚ್ಚಾಗಿದ್ದುದು ವಿಶೇಷ.

DSC01720ಸಿಂಗಟೆ ಮುಳ್ಳು, ಜಲಚರ ಸಸ್ಯಗಳು, ಕೆಸರುಗಳ ನಡುವೆ ಕೆಲವರಿಗೆ ನೀರಿಗೆ ಇಳಿಯಲು ಅಂಜಿಕೆ. ಮತ್ತೆ ಕೆಲವರಿಗೆ ಮೀನು ಹಿಡಿಯುವ ಆತುರ. ನೂರಾರು ಸ್ಪರ್ಧಿಗಳಿಗೂ ಒಟ್ಟಿಗೆ ಮುನ್ನುಗ್ಗಲು ಗ್ರೀನ್ ಸಿಗ್ನಲ್ಲ ಸಿಕ್ಕಿತ್ತು. ದೈಹಿಕ ಸಾಮರ್ಥ್ಯ, ಅನುಭವ, ಕಲೆ, ಅದೃಷ್ಟವನ್ನು ಪರೀಕ್ಷಿಸಿಕೊಳ್ಳುತ್ತಾ, ಕೈಲಿದ್ದ ಕೂಣಿಯನ್ನು ಕೆಸರಿದ್ದ ನೀರಿನಲ್ಲಿ ಊರುತ್ತಾ ಮುನ್ನುಗ್ಗುತ್ತಿದ್ದರು. ಬಿದಿರಿನ ಕಡ್ಡಿ ನೀರಿನ ತಳಭಾಗದ ಮಣ್ಣಲ್ಲಿ ಚುಚ್ಚಿಕೊಳ್ಳುತ್ತಿತ್ತು. ಮೀನು ಅದರೊಳಗೆ ಸಿಕ್ಕಿಕೊಂಡು ಕೂಣಿ ಅಲುಗಾಡಿದ್ದನ್ನು ಗಮನಿಸಿ ಕೂಣಿಯ ಮೇಲಿನ ತೆರೆದ ಭಾಗದಿಂದ ಕೈಹಾಕಿ, ಸಿಕ್ಕಿಕೊಂಡ ಮೀನನ್ನು ಹಿಡಿದು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು. ಮೀನಿನ ಬೇಟೆ ಹೀಗೆ ಮುಂದುವರೆಯುತಿತ್ತು.

ಸ್ಥಳೀಯ ಮೀನು ಹಿಡಿಯುವ ಸಾಧನವಾಗಿ ಕೂಣಿಯನ್ನು ಉಪಯೋಗಿಸಲಾಗುತ್ತದೆ. ಬಿದಿರಿನ ಕಡ್ಡಿಗಳನ್ನು ಕೋನಾಕಾರದಲ್ಲಿ ಕಟ್ಟಿ, ಮೇಲ್ಭಾಗ ಕಿರಿದಾಗಿದ್ದು, ೬ ಅಂಗುಲ ಸುತ್ತಳತೆ ಹೊಂದಿರುತ್ತದೆ. ತಳಭಾಗ ಸುಮಾರು ೨.೫ರಿಂದ ೩ ಅಡಿ ಸುತ್ತಳತೆಯದಾಗಿರುತ್ತದೆ. ಶತ್ರು ಮೀನು ಎಂದು ಕರೆಯಲ್ಪಡುವ ಮುರುಗೋಡು (ಕ್ಯಾಟ್‌ಫಿಷ್) ಮೀನನ್ನು ಬಲೆಯಿಂದ ಹಿಡಿಯಲು ಕಷ್ಟವಾಗುತ್ತದೆ. ಏಕೆಂದರೆ, ಬಲೆ ಹಾಕಿ ಎಳೆದಾಗ ನೆಲದೊಳಗೆ ಹೋಗಿ ತಪ್ಪಿಸಿಕೊಳ್ಳುತ್ತವೆ. ಈ ಜಾತಿಯ ಮೀನು ಮಾಂಸಹಾರಿಗಳಾಗಿದ್ದು, ಕೂಣಿಯಲ್ಲಿ ಇಂತಹ ಮೀನುಗಳನ್ನು ಹಿಡಿಯಬಹುದು.

ಮೀನು ಬೇಟೆ ಕಾರ್ಯಕ್ರಮ ಸತತ ೫ ಗಂಟೆಗಳ ಕಾಲ ನಡೆಯಿತು. ಕೆಲವರು ಮುಳ್ಳಿನ ನೋವನ್ನು ಲೆಕ್ಕಿಸದೇ ದೊಡ್ಡ ಮೀನುಗಳನ್ನು ಹಿಡಿದಿದ್ದರು. ಮತ್ತೆ ಕೆಲವರಿಗೆ ಎಷ್ಟೇ ಜಾಲಾಡಿದರು ಮೀನುಗಳು ಸಿಗದೆ ಬೇಸರದಿಂದಲೇ ಮೀನುಗಳನ್ನು ಹಿಡಿಯುತ್ತಿದ್ದರು. ಮಕ್ಕಳು ಮತ್ತು ಮಹಿಳೆಯರು ಕೆರೆಯಂಚಿನಲ್ಲಿ ಮೀನುಗಳನ್ನು ಹಿಡಿದು ಬುಟ್ಟಿ ತುಂಬಿಸಿಕೊಳ್ಳುತ್ತಿದ್ದರು. ಒಬ್ಬ ಸ್ಪರ್ಧಿಗೆ ಮತ್ತೊಬ್ಬ ಸ್ಪರ್ಧಿ ಸ್ಫೂರ್ತಿ. ಅವರಿಗೆ ಅವರೇ ಚಪ್ಪಾಳೆ, ಶಿಳ್ಳೆಯ ಮೂಲಕ ಹುರಿದುಂಬಿಸಿಕೊಳ್ಳುತ್ತಿದ್ದರು.

ಗ್ರಾಮೀಣ ಸೊಗಡಿನ ಹಬ್ಬ ಮತ್ತು ಆಟಗಳಲ್ಲಿ, ಆಚರಣೆ ಮಾಡುವ ಮನಸ್ಸಿದ್ದರೂ ಬೆಂಬಲ ಮತ್ತು ಸಂಪನ್ಮೂಲ ಕೊರತೆಗಳಿಂದ ಆಟಗಳು ಮಂಕಾಗುತ್ತಿವೆ. ಹೀಗಾಗಿ, ಕೆರೆ ಬೇಟೆಯ ಮೂಲಕವೇ ಮೀನು ಹಿಡಿಯಬೇಕು. ಇದರಿಂದ, ಸಾಂಸ್ಕೃತಿಕ ಆಟಗಳನ್ನು ಉಳಿಸಿಕೊಂಡಂತೆ ಆಗುತ್ತದೆ ಎಂಬ ಆಶಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎನ್ನುತ್ತಾರೆ, ಕೆರೆ ಬಳಕೆದಾರರ ಸಂಘದ ಅಧ್ಯಕ್ಷರಾದ ಪುಟ್ಟಪ್ಪ ಗೌಡ್ರು.

DSC01723ಸಮುದಾಯ-ಆಧಾರಿತ ಕೆರೆ ನಿರ್ವಹಣೆ ಯೋಜನೆ ವತಿಯಿಂದ, ಊರ ಮುಂದಿನ ಕೆರೆಗೆ ವಿವಿಧ ಜಾತಿಯ ೨೬ ಸಾವಿರ ಮೀನು ಮರಿಗಳನ್ನು ಬಿಡಲಾಗಿತ್ತು. ಹೀಗೆ ಬಿಟ್ಟ ಮೀನುಗಳನ್ನು ಕೆರೆ ಬಳಕೆದಾರರ ಸಂಘವು ಮುತುವರ್ಜಿಯಿಂದ ಬೆಳೆಸಿತ್ತು.

ಸ್ಪರ್ಧೆಯಲ್ಲಿ ೫೨೦ ಸ್ಪರ್ಧಿಗಳು ಭಾಗವಹಿಸಿದ್ದು, ಪ್ರತಿಯೊಬ್ಬರಿಗೆ ೧೦೦ ರೂಪಾಯಿಗಳಂತೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಕೆರೆ ಬಳಕೆದಾರರ ಸಂಘಕ್ಕೆ ಇದರಿಂದ ೫೨ ಸಾವಿರ ರೂಪಾಯಿಗಳು ಸಂಗ್ರಹವಾದವು.

ಮೀನನ್ನು ಬಲೆಹಾಕಿ ಹಿಡಿಯುವುದರಿಂದ ಸಂಘಕ್ಕೆ ಇಷ್ಟೊಂದು ಆದಾಯ ಸಿಗುವುದಿಲ್ಲ, ಸೋರಿಕೆಯಾಗುತ್ತಿದೆ. ಆದರೆ, ಈ ರೀತಿ ಮೀನು ಹಿಡಿಯುವುದರಿಂದ ಸ್ಪರ್ಧೆಯಲ್ಲಿ ಭಾಗವಹಿಸಿದವನಿಗೂ ಹೆಚ್ಚು ಹೊರೆಯಾಗುವುದಿಲ್ಲ, ಸಂಘಕ್ಕೂ ಆದಾಯ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಪಾಲಾಕ್ಷಪ್ಪ.

ಮೀನು ಹಿಡಿಯಲು ಅನೇಕ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದರಿಂದ ಇಂತಹ ಪದ್ಧತಿಗಳು ಮರೆಯಾಗುತ್ತಿವೆ. ಮೀನು ಹಿಡಿಯುವುದನ್ನು ಸ್ಪರ್ಧೆಯನ್ನಾಗಿ ಏರ್ಪಡಿಸಿ ಸಾಂಪ್ರದಾಯಿಕ ಕ್ರೀಡೆಯನ್ನು ನೆನಪಿಸಿದ ನೆಗೆವಾಡಿ ಗ್ರಾಮಸ್ಥರ ಪ್ರಯತ್ನವನ್ನು ಮೆಚ್ಚಲೇಬೇಕು. 

ಚಿತ್ರ-ಲೇಖನ. ಸೋ.ಸೋ.ಮೋಹನ್ ಕುಮಾರ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*