ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಫೆಲೊ ಫಯಾಜ್ ಮನಗುಂಡಿಯ ಚನ್ನಬಸವಣ್ಣ ಎನಿಸಿದ ಕಥೆ!

ಧಾರವಾಡ,(ಮನಗುಂಡಿ): “ಶಿಶುವಿನಹಾಳದ ಸಂತ ಶರೀಫರು, ಕಳಸದ ಗುರು ಗೋವಿಂದ ಭಟ್ಟರು ಸಾಮಾಜಿಕ ಸಾಮರಸ್ಯದ ಹರಿಕಾರರು. ಹಂಗ.. ನಮ್ಮ ಫಯಾಜ್‌ಗೂ, ಚನ್ನಬಸವಣ್ಣನಿಗೂ ಏನು ವ್ಯತ್ಯಾಸ ಇದ್ದೀತು..? ಅವನೂ ನಮ್ಮವ, ಇವನೂ ನಮ್ಮವ..”??????????????????????????????? ಮನಗುಂಡಿಯ ಹಿರಿಯ ಗ್ರಾಮಸ್ಥ ಶಿವಪ್ಪ ಹುಂಬೇರಿ ಅವರು, ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊ ಫಯಾಜ್ ಕಳ್ಳಿ, ಮನಗುಂಡಿಗೆ ಗ್ರಾಮ ವಾಸ್ತವ್ಯಕ್ಕೆ ಬಂದಾಗ ಅವರ ಕೈ ಹಿಡಿದು ಹೇಳಿದಾಗ, ತುಸು ಸಮಾಧಾನವೆನಿಸಿತ್ತು.

ಕೊಪ್ಪಳ ಜಿಲ್ಲೆ, ಹಳೆಬಂಡಿ ಹರ್ಲಾಪುರ ಗ್ರಾಮದ ಫಯಾಜ್ ಕಳ್ಳಿ ಅವರಿಗೆ ಹಳ್ಳಿ ಜೀವನ ಹೊಸದಲ್ಲ. ಆದರೆ, ನಮ್ಮೂರು, ನಮ್ಮವರ ಮಧ್ಯದ ಬದುಕು, ಗೆಳೆತನ ಬೇರೆ. ಪಟ್ಟಣಕ್ಕೆ ಹೋಲಿಸಿದರೆ, ನಮ್ಮ ಹಳ್ಳಿಗಳಲ್ಲಿ ಇವತ್ತಿಗೂ ಜಾತಿ, ಮತ, ಪಂಥ, ಸಂಪ್ರದಾಯ ಆಚರಣೆ ತುಸು ಕಟ್ಟುನಿಟ್ಟು. ಹಾಗಾಗಿ, ಮನಗುಂಡಿಗೆ ಹೋದಾಗ ಮನದಲ್ಲಿ ತುಸು ಅಳಕು. ಆದರೆ, ತಮ್ಮ ನಡೆ-ನುಡಿಯಿಂದ ಮನಗೆದ್ದ ಫಯಾಜ್, ಅಂತೂ ಮನಗುಂಡಿಯ ಚನ್ನಬಸವಣ್ಣನಾದ ಕಥೆ ಇದು!

ಫಯಾಜ್‌ಗೆ, ‘ನನ್ನದಲ್ಲದ ಮತ್ತೊಂದು ಊರಿಗೆ ಕೆಲಸ ಮಾಡಲು ಬಂದೆ’ ಅಂತ ೧೨ ತಿಂಗಳ ಗ್ರಾಮ ವಾಸ್ತವ್ಯದಲ್ಲಿ ಒಂದು ದಿನವೂ ಅನ್ನಿಸಿಲ್ಲ! ವಿಶೇಷವೆಂದರೆ, ಮನಗುಂಡಿ ಗ್ರಾಮಸ್ಥರಿಗೆ ಫೆಲೊ ಫಯಾಜ್ ‘ಅಣ್ಣ’! ಜಾತಿ, ಮತದ ಎಲ್ಲೆಗಳನ್ನು ಮೀರಿ, ‘ಅವರು ನಮ್ಮೂರಿಗೆ ಒಳ್ಳೇದ ಮಾಡಾಕ ಬಂದಾರ..’ ಎಂಬ ಒಂದೇ ವಿಶ್ವಾಸದಿಂದ ಜನ ಒಪ್ಪಿ-ಅಪ್ಪಿಕೊಂಡ ಪರಿ, ಕೇವಲ ಪ್ರಾಮಾಣಿಕ ಕೆಲಸದ ಪ್ರತಿಫಲ.

ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಚಾಲಿತ ವಿ-ಲೀಡ್ ಮೂಲಕ, ಮೈಸೂರು ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಇನ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್ ಪದವಿ ಪಡೆದ ಫಯಾಜ್, ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ಸೇರುವ ಮುನ್ನ ಯಾವುದೇ, ಪ್ರಾಯೋಗಿಕ ಅಥವಾ ಕ್ಷೇತ್ರ ಕಾರ್ಯದ ಅನುಭವ ಹೊಂದಿರಲಿಲ್ಲ.

“ಹೊಸ ವಿಷಯಗಳ ಕಲಿಕೆಗೆ ಮನಸ್ಸು ಹದವಾಗಿತ್ತು. ಪಡೆದ ಶಿಕ್ಷಣ ಪಕ್ವವಾಗುವ ಹಂತದಲ್ಲಿ ಈ ಅವಕಾಶ ಸಿಕ್ಕಿತು. ಡಾ. ಪ್ರಕಾಶ ಭಟ್ ಅವರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ..” ವಿನೀತರಾಗಿ ಫಯಾಜ್ ಹೇಳುತ್ತಾರೆ.

ಶಾಲೆಯಲ್ಲೂ ನೀರಿಗೆ ಬರ; ನೀರೆಯರ ಚಕ್ಕರ್!

ಫಯಾಜ್, ಮನಗುಂಡಿಗೆ ಗ್ರಾಮ ವಾಸ್ತವ್ಯಕ್ಕೆ ಹೋದಾಗ ಇಲ್ಲಿನ ಶಾಲೆಗಳಲ್ಲಿ ಕುಡಿಯುವ ನೀರು, ಕೈತೊಳೆಯಲು ಮತ್ತು ಶೌಚ ವ್ಯವಸ್ಥೆಯ ಬಗ್ಗೆ ವಿಶೇಷ ಗಮನ ಹರಿಸಿದರು. ಎಲ್ಲವೂ ಇತ್ತು; ಯಾವುದೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ! ಗ್ರಾಮ ಪಂಚಾಯ್ತಿ ಸದಸ್ಯರು, ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮನಗುಂಡಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ನೀರಿನ ಅಲಭ್ಯತೆಯಿಂದ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಕ್ರಮಕೈಗೊಳ್ಳುವಂತೆ ದುಂಬಾಲು ಬಿದ್ದರು. ಸ್ಕೋಪ್‌ಗೂ ಈ ಬಗ್ಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಿ, ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಅವಶ್ಯಕತೆಯನ್ನು ಬಿಂಬಿಸಿದರು.

???????????????????????????????ಮೊದಲು ಆದ್ಯತೆಯ ಮೇರೆಗೆ ಸರ್ಕಾರಿ ಪ್ರೌಢ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸ್ಕೋಪ್ ಸ್ವತಃ ೪೬ ಸಾವಿರ ರೂಪಾಯಿ ಖರ್ಚಿಸಿ, ಆರ್.ಓ. ಫಿಲ್ಟರ್ ಅನುಷ್ಠಾನಗೊಳಿಸಿತು. ಶೌಚಾಲಯದ ಸಣ್ಣಪುಟ್ಟ ದುರಸ್ತಿ ಸಹ ಕೈಗೊಳ್ಳಲಾಯಿತು. ಶೌಚಾಲಯಕ್ಕೆ ನೀರು ತಲುಪಿಸುವ ವ್ಯವಸ್ಥೆ, ಬಿಸಿಯೂಟ ಮಕ್ಕಳು ಉಣ್ಣಲು ಅನುವಾಗುವಂತೆ ಕೈ ತೊಳೆಯುವ ‘ಹ್ಯಾಂಡ್‌ವಾಷ್ ಬೇಸಿನ್ಸ್’ ಸಮುದಾಯದ ಸಹಭಾಗಿತ್ವದಲ್ಲಿ ಹೊಸದಾಗಿ ನಿರ್ಮಿಸಿ ಕೊಡಲಾಯಿತು. ಮಕ್ಕಳ ಖುಷಿಗಂತೂ ಪಾರವೇ ಇರಲಿಲ್ಲ. ಹೆಣ್ಣು ಮಕ್ಕಳ ಹಾಜರಿ ಕುಸಿತದ ಸಮಸ್ಯೆಗೂ ಪರಿಹಾರ ದಕ್ಕಿತು.

ಎರಡನೇ ಹಂತದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೊಳಿಸುವುದು ಅನಿವಾರ್ಯವಾಗಿತ್ತು. ಫಯಾಜ್, ಮತ್ತೊಂದು ಪ್ರಸ್ತಾವನೆ ಸ್ಕೋಪ್‌ಗೆ ರವಾನಿಸಿದರು. ಈ ಬಾರಿ ಯೂ.ವಿ. ಫಿಲ್ಟರ್ ಘಟಕ ಕೂಡಿಸಲು ಯಾವುದೇ ಹಣಕಾಸಿನ ಪ್ರಾವಧಾನವಿರಲಿಲ್ಲ. ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಮುತುವರ್ಜಿವಹಿಸಿ, ಅರ್ಘ್ಯಂ ಸಂಸ್ಥೆಗೆ ಮನವರಿಕೆ ಮಾಡಿ, ಹೆಚ್ಚುವರಿಯಾಗಿ ೨೦ ಸಾವಿರ ರೂಪಾಯಿ ಸಹಾಯಧನ ಪಡೆದು, ಫಯಾಜ್‌ಗೆ ನೀಡಿದರು. ಇಡೀ ಯೋಜನೆಯಲ್ಲಿ ‘ಎಡಿಷನಲ್ ಗ್ರ್ಯಾಂಟ್’ ಪಡೆದು ಹೆಚ್ಚುವರಿ ಯೋಜನೆ ಅನುಷ್ಠಾನಗೊಳಿಸಿದ ಏಕೈಕ ಫೆಲೊ ಫಯಾಜ್!

ಲೈವ್ ಡಿಜಿಟಲ್ ಕ್ಲಾಸ್ ಸೌಲಭ್ಯ

ಜೊತೆಗೆ ಅವರು ಯೋಚನೆ ಮಾಡಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಲೈವ್ ಡಿಜಿಟಲ್ ಕ್ಲಾಸ್ ಸೌಲಭ್ಯ ದೊರಕಿಸಿ ಅವರೂ ಕಲಿಕೆಯ ಅವಕಾಶದಿಂದ ವಂಚಿತರಾಗದಂತೆ ಮಾಡುವುದು. ಕೂಡಲೇ ಗ್ರಾಮದ ಆಸಕ್ತ ಸ್ವಯಂಸೇವಕರನ್ನು ಡಿಜಿಟಲ್ ಪಾಠ ಬೋಧಿಸ ಬಲ್ಲ, ಗಣಕಯಂತ್ರ ಸಾಕ್ಷರ ಶಿಕ್ಷಕರಾಗಿ ತರಬೇತುಗೊಳಿಸುವ ಪ್ರಯತ್ನ ಮಾಡಿದರು. ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೋಧಿಸುವ ಮೂಲಕ ಲೈವ್ ಡಿಜಿಟಲ್ ಕ್ಲಾಸ್‌ಗಳಿಗೆ ಫಯಾಜ್ ಸ್ಕೋಪ್ ಸಹಯೋಗದಲ್ಲಿ ಅನುಷ್ಠಾನಗೊಳಿಸಿಯೇಬಿಟ್ಟರು! ಮಕ್ಕಳ ಕಲಿಕೆಯ ಆನಂದಕ್ಕೆ ಪಾರವೇ ಇರಲಿಲ್ಲ.

ಗ್ರಾಮದ ಎರಡು ಶಾಲೆಗಳ ಸಮಸ್ಯೆ ಬಗೆಹರಿಸಿದ ಬಳಿಕ, ಫಯಾಜ್ ಮನಗುಂಡಿ ರಸ್ತೆಗಳು, ಗಟಾರು ಮತ್ತು ಒಳಚರಂಡಿ ವ್ಯವಸ್ಥೆ ಸರಿ ಪಡಿಸಲು ಯೋಜನೆ ರೂಪಿಸಿದರು. ಗ್ರಾಮದ ನೀರು ಮತ್ತು ಶೌಚ ನೈರ್ಮಲ್ಯ ಸಮಿತಿಯ ಹೆಸರಿನಲ್ಲಿ, ಓಣಿಗೊಂದರಂತೆ ಮೇಲುಸ್ತುವಾರಿಗೆ ಯುವಜನತೆಯ ಪಡೆಯನ್ನು ಫಯಾಜ್ ನಿಯುಕ್ತಿಗೊಳಿಸಿದರು.

ವಿಶೇಷವೆಂದರೆ,

???????????????????????????????ಈ ಸಮಿತಿಗಳ ಸಹಭಾಗಿತ್ವದಲ್ಲಿಯೇ ಸುಮಾರು ೨೦೦೦ ಮೀಟರ್‌ಗಳಷ್ಟು ಉದ್ದದ ಗ್ರಾಮೀಣ ಗಟಾರು, ರಸ್ತೆ ಮತ್ತು ಅಲ್ಲಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಶ್ರಮದಾನದ ಮೂಲಕ ಸರಿಪಡಿಸುವಲ್ಲಿ ಯಶಸ್ವಿಯಾದ ಫೆಲೊ ಫಯಾಜ್, ಈ ಗಟಾರುಗಳು ಕಟ್ಟಲು ಪ್ಲಾಸ್ಟಿಕ್, ಗುಟಿಖಾ ಚೀಟು, ಬಳಸಿ ಬಿಸುಟುವ ಕೈಚೀಲ, ಖರೀದಿಸಿ ತಂದ ವಸ್ತುಗಳ ಮೇಲ್ಗವಚ ಇತ್ಯಾದಿಗಳೇ ಕಾರಣ ಎಂಬುದನ್ನು ಮನಗಂಡು, ಸ್ವತಃ ಸ್ಕೋಪ್ ಸಹಭಾಗಿತ್ವದಲ್ಲಿ ಊರಿನ ಹೊಟೇಲ್ ಮತ್ತು ಪಾನ್-ಬೀಡಾ ಅಂಗಡಿಗಳ ಎದುರು ಕಸದ ತೊಟ್ಟಿಗಳನ್ನು ಇಡಿಸಿದರು. ತಪ್ಪದೇ ಕಸವನ್ನು ಈ ತೊಟ್ಟಿಗಳಲ್ಲಿಯೇ ಹಾಕಬೇಕು; ಕಸವನ್ನು ಅಂಗಡಿಕಾರರು ನಿಗದಿತ ಸ್ಥಳದಲ್ಲಿಯೇ ವಿಲೇವಾರಿ ಮಾಡಬೇಕು ಎಂಬುದು ಕಟ್ಟುನಿಟ್ಟಾಯಿತು. ಸ್ಕೋಪ್ ಕಸದ ತೊಟ್ಟಿಯೊಂದಕ್ಕೆ ೨೦೦ ರೂಪಾಯಿ ನೀಡಿದರೆ, ಅಂಗಡಿಯ ಮಾಲೀಕರು ೨೦೦ ರೂಪಾಯಿ ಹಾಕಿ, ಕಡ್ಡಾಯವಾಗಿ ಬಳಸುವುದನ್ನು ಸಮಿತಿಯ ವತಿಯಿಂದ ಖಾತ್ರಿ ಪಡಿಸಲಾಯಿತು.

ಕಂಡಕಂಡಲ್ಲಿ ಉಗುಳದಂತೆ, ಮನೆ ಮನೆಗಳ ಕಸ ರಸ್ತೆಗೆ ಎಸೆಯದಂತೆ, ಮನೆಯ ಮುಂದಿನ ಗಟಾರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಫಯಾಜ್ ಯಶಸ್ವಿಯಾದರು. ಶಿವಾನಂದ ಹುಂಬೇರಿ ಅವರ ಮಾತುಗಳಲ್ಲಿ ಹೇಳುವುದಾದರೆ “ಮೊಣಕಾಲ ಮಟ ಕಸ, ಧೂಳು, ರಾಡಿಯೊಳಗ ಮೂಗು ಮುಚ್ಚಿಕೊಂಡು ಓಡಾಡಿದವರು ನಾವು.. ಫಯಾಜ್ ಬಂದ ೫-೬ ತಿಂಗಳೊಳಗ ಕಂಡಕಂಡಲ್ಲೇ ಬೀಳತಿದ್ದ ಕಸ, ರಸ್ತೆಗುಂಟ ಕಾಣತಿದ್ದ ಪಾಕೀಟು, ಚೀಟು, ಗಾಳಿಗೆ ಹಾರಿ ಮನ್ಯಾಗ ಬರ್ತಿದ್ದ ಧೂಳು.. ಏನೇನೂ ಕೇಳಬ್ಯಾಡ್ರಿ.. ನಮ್ಮ ಗ್ರಾಮ ಪಂಚಾಯ್ತಿ ಸದಸ್ಯರೂ ಅವರೊಟ್ಟಿಗೆ ಶಿಸ್ತಾಗಿ ಕೈಜೋಡಿಸ್ಯಾರ..”

ಫಯಾಜ್ ಗಮನಿಸಿದ ಇನ್ನೊಂದು ಅಂಶ;

???????????????????????????????ಬಯಲು ಶೌಚದ ಸಮಸ್ಯೆ. ಸಮುದಾಯದ ಜನರನ್ನು, ಶಾಲಾ ಮಕ್ಕಳನ್ನು ಒಟ್ಟುಗೂಡಿಸಿ, ಮನೆಗೊಂದು ಶೌಚಾಲಯವಿರುವ ಮಹತ್ವ, ಸ್ವಚ್ಛವಾಗಿ ಕೈ ತೊಳೆಯಬೇಕಾದ ಅನಿವಾರ್ಯತೆ, ಆರೋಗ್ಯ ಮತ್ತು ಶುಚಿತ್ವಕ್ಕೆ ಇರುವ ನಂಟು, ಊರ ನೈರ್ಮಲ್ಯ ಹಾಗೂ ನಮ್ಮ ಅನಾರೋಗ್ಯಕ್ಕೂ ಇರುವ ಸಂಬಂಧದ ಬಗ್ಗೆ ಪುಟ್ಟ ವಿಡಿಯೋ ಫಿಲ್ಮ್‌ಗಳನ್ನು ತೋರಿಸಿ ಮನವೊಲಿಸುವಲ್ಲಿ ಅವರು ಗಣನೀಯ ಯಶಸ್ಸು ಸಂಪಾದಿಸಿದರು.

ಅಂತೂ-ಇಂತೂ ಮನಗುಂಡಿಯ ೬೯೨ ಮನೆ-ಮನೆ ಸಂಪರ್ಕ ಮಾಡಿ, ಮನೆಯ ಅಮ್ಮಂದಿರ ಮನವೊಲಿಸಿ ಕೇವಲ ೮ ತಿಂಗಳಲ್ಲಿ ೯೫ ವೈಯಕ್ತಿಕ ಶೌಚಾಲಯಗಳನ್ನು ಗ್ರಾಮ ಪಂಚಾಯ್ತಿ ವತಿಯಿಂದ ಕಟ್ಟಿಸಿಕೊಡುವಲ್ಲಿ ಅವರು ಗುರಿ ಮೀರಿದ ಸಾಧನೆಗೈದಿದ್ದಾರೆ. ಈ ಯೋಜನೆಗೆ ಸಕಾಲಿಕವಾಗಿ ಅನುಷ್ಠಾನಗೊಳ್ಳುವಲ್ಲಿ ಆರ್ಥಿಕ ಸಹಾಯವೂ ಕುಟುಂಬಗಳಿಗೆ ಒದಗಿಬರುವಂತೆ ಮುಂದಾಲೋಚನೆ ಮಾಡಿದ್ದರು ಫಯಾಜ್.

ಈ ಎಲ್ಲ ಪ್ರಯತ್ನಗಳ ಫಲ ಎಂಬಂತೆ ಮನಗುಂಡಿಗೆ ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ತನ್ನ ಶಾಖೆಯೊಂದನ್ನು ತೆರೆದು, ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲು ಮುಂದಾಯಿತು.

ಗ್ರಾಮಸ್ಥ ಹುಟ್ಟಕ್ಕನವರ ಮಾತು, “ನಮ್ಮ ಪ್ರಕಾಶ ಭಟ್ ಸರ್‌ಗೆ ಭಲೇ ಶಿಷ್ಯಾ ಅಂದ್ರ ಫಯಾಜ್ ಕಳ್ಳಿ. ಹೇಳಿದ್ದನ್ನ ಮಾಡಿ ತೋರಿಸುವ; ಆಗದಿದ್ದರೂ ಪ್ರಯತ್ನ ಬಿಡದ, ಪಟ್ಟು ಹಿಡದ ಮಾಡಿಸಿದ ಹುಡುಗ.. ಅವರ ಬಗ್ಗೆ ನಮಗ ಅಭಿಮಾನ.. ಸಾಹೇಬ್ರ.”

ಶುದ್ಧ ನೀರು ಗಟಾರಿಗೆ!

???????????????????????????????ಈ ಎಲ್ಲ ಕೆಲಸ-ಕಾರ್ಯಗಳ ಮಧ್ಯೆ ಫಯಾಜ್ ಗಮನಿಸಿದ್ದು, ಮನೆ-ಮನೆಗೆ ಪೂರೈಕೆಯಾಗುತ್ತಿದ್ದ ಶುದ್ಧ ಕುಡಿಯುವ ನೀರು ಲೆಕ್ಕವಿಲ್ಲದಷ್ಟು ಪೋಲಾಗುತ್ತಿರುವ ಕಳವಳಕಾರಿ ಸಮಸ್ಯೆ ಬಗ್ಗೆ. ಒಂದು ಕೊಡ ತುಂಬಿದ ಮೇಲೆ ಕನಿಷ್ಠ ೫ ಕೊಡ ಗಟಾರಿಗೆ ಹರಿಯುತ್ತಿತ್ತು! ಗ್ರಾಮದಲ್ಲಿ ಬಹುತೇಕ ಯಾರ ಮನೆಯ ನೀರಿನ ಪೈಪ್‌ಗೆ ತೋಟಿಯೇ ಇರಲಿಲ್ಲ! ನಳ ಬಂದು-ಹೋಗುವ ವರೆಗೆ (ಎರಡು ತಾಸು) ಹಾಗೆಯೇ ನೀರು ತುಂಬಿ ಹರಿಯುತ್ತಿತ್ತು! ಕೆಲವರು ನೇರವಾಗಿಯೇ ಪೈಪ್ ಬಾಯಿಗೆ ಮೋಟಾರ್ ಅಳವಡಿಸಿ ನೀರು ಹೀರುತ್ತಿದ್ದರು! ಪರಿಣಾಮ ಎಂಬಂತೆ ಓಣಿಯ, ಕೇರಿಯ ತಳ ಭಾಗದ ಜನರಿಗೆ ಅಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿತ್ತು. ಕೆಲವೊಮ್ಮೆ ‘ಹೊಯ್-ಕೈ’ ಕೂಡ ಮೀರಿ, ಕೈ ಕೈ ಮೇಲಾಯಿಸುವ ಹಂತಕ್ಕೂ ಜಗಳ ಹೋಗಿದ್ದವು.

ತತ್ಕಾಲ್ ಪರಿಹಾರ ಕಂಡುಕೊಳ್ಳಲು ಮತ್ತು ಸಮಾನವಾಗಿ ನೀರಿನ ಹಂಚಿಕೆ ಎಲ್ಲ ಮನೆಗಳಿಗೂ ಆಗುವಂತೆ ಖಾತ್ರಿ ಪಡಿಸುವ ನಿಟ್ಟಿನಲ್ಲಿ, ಸ್ಕೋಪ್ ಧನಸಹಾಯದಲ್ಲಿ ಗ್ರಾಮದ ಎಲ್ಲ ಕುಡಿಯುವ ನೀರಿನ ಪೈಪ್‌ಗಳಿಗೆ ನಲ್ಲಿ ಅಳವಡಿಸಲಾಯಿತು. ಪ್ರತಿ ಓಣಿಗೆ ಇಂತಹ ದಿನ, ಇಂತಿಷ್ಟೇ ಹೊತ್ತು, ಇಷ್ಟು ಪ್ರಮಾಣದ ನೀರು Water Quality test 1ಪೂರೈಸಲಾಗುವುದು ಎಂದು ನಿರ್ಣಯಿಸಲಾಯಿತು. ನೇರವಾಗಿ ಪೈಪ್‌ಗೆ ಮೊಟಾರ್ ಅಳವಡಿಸುವವರ ವಿರುದ್ಧ ಗ್ರಾಮ ಪಂಚಾಯ್ತಿ ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಯಿತು! ಪರಿಣಾಮ, ಗ್ರಾಮದಲ್ಲಿ ಈಗ ನೀರ ನೆಮ್ಮದಿ ನೆಲೆಸಿದೆ. ಹಿತಮಿತವಾಗಿ ಬಳಸುವ ಜಾಣ್ಮೆ ಮೈಗೂಡಿದೆ.

ಈ ಬಗ್ಗೆ ಗ್ರಾಮಸ್ಥ ಬಸಣ್ಣ ಕರಡೀಗುಡ್ಡ ಅವರ ಅನಿಸಿಕೆ “ಈ ಊರು ಸುಧಾರಿಸಲಿಕ್ಕಾಗದಷ್ಟು ಕೆಟ್ಟು ನಿಂತೇತಿ ಅಂತ ನಂಬಿಬಿಟ್ಟಿದ್ವಿ. ಒಂದೂ ಮೆಚ್ಚಿಕೊಳ್ಳುವಂಥ ಪೊಸಿಟಿವ್ ಅಂಶ ಕಾಣತಿದ್ದಿದ್ದಿಲ್ಲ. ಆದ್ರ ಫಯಾಜ್ ಅವರ ಶ್ರಮದಿಂದ ಮನಗುಂಡಿ ಬದುಕು ಸಹ್ಯ ಆಗೇತಿ. ನೆಗೆಟಿವ್ ಅಂಶ ಈಗ ನಮ್ಮ ಮನಸ್ಸಿನಿಂದೂ ಅವರು ತೆಗೆದ ಹಾಕ್ಯಾರ.. ಹೆಂಗರ ಮಾಡಿ, ಅವರನ್ನ ಇನ್ನ ಎರಡ ವರ್ಷ ನಮ್ಮೂರಿಗೆ ಕೊಡಾಕ ಮನಸ್ಸ ಮಾಡ್ರಿ.. ಯಾಕ ನಮ್ಮೂರಿಗೆ ನಿರ್ಮಲ ಗ್ರಾಮ ಪುರಸ್ಕಾರ ಬರೂದುಲ್ಲ ನೋಡೋಣು..”

ಫೆಲೊ ಫಯಾಜ್ ಅವರ ದೂರವಾಣಿ ಕರೆಗೆ ಗ್ರಾಮ ಪಂಚಾಯ್ತಿ ಸದಸ್ಯರು ದಿನದ ೨೪ ಗಂಟೆ ವಾರದ ೭ ದಿನವೂ ಸ್ಪಂದಿಸಿದ್ದಾರೆ. ಕರೆದಾಗಲೊಮ್ಮೆ ಸಭೆಗೆ ಹಾಜರಾಗಿ ಕೈ ಜೋಡಿಸಿದ್ದಾರೆ. ಅಧಿಕಾರ ಬೇರೆ, ವೈಯಕ್ತಿಕ ಶಕ್ತ್ಯಾನುಸಾರವೂ ಸಹಾಯ ಮಾಡಿದ್ದಾರೆ. ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುವ ಪರಿ ಇದೇ ಇರಬೇಕು..

ಮನಗುಂಡಿಯ ಯೂತ್ ಅಸೋಸಿಏಷನ್ ಪದಾಧಿಕಾರಿಗಳು ಫಯಾಜ್ ಬಗ್ಗೆ ಬೀಳ್ಕೊಡುವ ದಿನ ಹೇಳಿದ ಮಾತು, “ತುಂಬ ಸುಂದರವಾದ ಕೆಲಸ ಮಾಡಿದ್ದೀರಿ. ವೈಯಕ್ತಿಕ ಒತ್ತಾಸೆಗಳನ್ನು ಬದಿಗೊತ್ತಿ, ಸ್ವಾರ್ಥರಹಿತವಾಗಿ, ಕೇವಲ ಸಮುದಾಯದ ಏಳ್ಗೆಗೆ ಹಗಲಿರುಳು ಶ್ರಮಿಸಿದ್ದೀರಿ.. ಧನ್ಯವಾದ ಗೆಳೆಯ..”

****************************************************************************************************************************Fayaz Kalli - Mangundi Village

ಫೆಲೊ ಫಯಾಜ್ ಕಳ್ಳಿ ಅವರ ಅನಿಸಿಕೆ –

“ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ಅನುಭವಾತ್ಮಕ ಕಲಿಕೆಯನ್ನು ನನ್ನದಾಗಿಸಿತು. ಕೇವಲ ನೀರು-ನೈರ್ಮಲ್ಯದ ಬಗ್ಗೆ ಮಾತ್ರವಲ್ಲ; ಫೆಲೊಗಳ ಸರ್ವಾಂಗೀಣ ಅಭಿವೃದ್ಧಿಗೆ ಫೆಲೊಷಿಪ್ ತನ್ನದೇ ಆದ ಕೊಡುಗೆ ನೀಡಿದೆ. ವೈಯಕ್ತಿಕ ಬದುಕಿನಲ್ಲೂ ಶಿಸ್ತು, ಸಾಮಾಜಿಕ ಜೀವನದಲ್ಲಿ ಸಂಯಮ, ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳಿಗಿರುವ ಮಹತ್ವ, ಸರಳತೆಗೆ ಇರುವ ಗೌರವ ಇಲ್ಲಿ ನನಗೆ ಕಲಿಕೆಯಾಗಿದೆ. ‘ಫಯಾಜ್’, ‘ಮನಗುಂಡಿಯ ಚನ್ನಬಸವಣ್ಣ’ ಎಂದು ಕರೆಯಿಸಿಕೊಳ್ಳುವ ಮಟ್ಟಿಗೆ ಸಂಬಂಧಗಳು ಬೆಸೆದವು. ಗುರು ಡಾ. ಪ್ರಕಾಶ ಭಟ್ ಅವರಿಗೆ ನಾನು ಈ ಅನುಭವಗಳಿಗಾಗಿ ಋಣಿ.”

ಸಂಪರ್ಕ: 85fayaz@gmail.com / +91 81975 95858

****************************************************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ.

ಇದು ಸ್ಕೋಪ್-ಅರ್ಘ್ಯಂ ‘ವಾಟ್ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ’ ಯಶೋಗಾಥೆಯ ಸರಣಿಯ ೧೦ನೆಯ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*