ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಾವೇರಿ ವಿವಾದ: ಪರಿಹಾರ ಏಕಿಲ್ಲ?

ಕಳೆದೊಂದು ತಿಂಗಳಿಂದ ರಾಜ್ಯಾಡಳಿತ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿರುವ ಕಾವೇರಿ ನದಿ ನೀರಿನ ವಿವಾದಕ್ಕೆ ಸೂಕ್ತ ಪರಿಹಾರವೇ ಇಲ್ಲವೇನೋ ಎಂಬ ಸಂಶಯ ಜನಸಾಮಾನ್ಯರಿಗಷ್ಟೇ ಅಲ್ಲ, ಪ್ರಜ್ಞಾವಂತರಲ್ಲೂ ಮೂಡುತ್ತಿರುವುದು ಅತ್ಯಂತ ಕಳವಳಕಾರಿ. ಮೇಲ್ವಿಚಾರಣಾ ಸಮಿತಿ, ಕಾವೇರಿ ನಿರ್ವಹಣಾ ಸಮಿತಿ, ಕೊನೆಗೆ ಸುಪ್ರೀಂ ಕೋರ್ಟ್ – ಎಲ್ಲವೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲೇಬೇಕೆಂದು ಮತ್ತೆ ಮತ್ತೆ ಆದೇಶ ನೀಡುತ್ತಲೇ ಇವೆ.  ಕರ್ನಾಟಕದ ಜಲಾಶಯಗಳಲ್ಲಿ ನೀರು ಯಥೇಚ್ಛವಾಗಿದ್ದರೆ, ತಮಿಳುನಾಡಿಗೆ ನೀರು ಬಿಡುವುದಕ್ಕೆ ಯಾರ ಆದೇಶದ ಅಗತ್ಯವೂ ಬೀಳುವುದಿಲ್ಲ.  ಆದರೆ ಮಳೆ ನಿರೀಕ್ಷೆಯಷ್ಟು ಆಗಿಲ್ಲ.  ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿಲ್ಲ.  ರಾಜ್ಯಕ್ಕೆ ಸದ್ಯಕ್ಕೆ ಕುಡಿಯುವ ನೀರಿಗೆ ತತ್ವಾರವಿಲ್ಲದಿದ್ದರೂ, ಸುಪ್ರೀಂ ಕೋರ್ಟಿನ ಆದೇಶದಂತೆ ತಮಿಳುನಾಡಿಗೆ ನೀರು ಬಿಡುತ್ತಾ ಹೋದರೆ, ರಾಜ್ಯ ಕುಡಿಯುವ ನೀರಿಗೆ ಗತಿಯಿಲ್ಲದೆ ಹಾಹಾಕಾರ ಮಾಡುವ ದಿನಗಳು ದೂರವಿಲ್ಲ.

ಕನ್ನಂಬಾಡಿ ಅಣೆಕಟ್ಟೆಗಿರುವುದು ಕೇವಲ ೪೫ ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ.  ಈಗ ಅಲ್ಲಿರುವುದು ಕೇವಲ ೨೮ ಟಿಎಂಸಿಗಿಂತಲೂ ಕಡಿಮೆ ನೀರು.  ಅಲ್ಲದೆ, ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ.  ಕನ್ನಂಬಾಡಿಗೆ ಹರಿದುಬರುತ್ತಿರುವ ನಿರ್ದಿಷ್ಟ ಅವಧಿಯಲ್ಲಿರುವ ನೀರಿನಲ್ಲಿ ಎಷ್ಟು ಪ್ರತಿಶತ ನೀರನ್ನು ತಮಿಳುನಾಡಿಗೆ ಬಿಡಬಹುದು ಮತ್ತು ಎಷ್ಟನ್ನು ಕರ್ನಾಟಕ ಬಳಸಬಹುದು ಎಂಬುದು ಕಾಲಕಾಲಕ್ಕೆ ನಿರ್ಧಾರವಾಗಬೇಕು.  ೪೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿರುವ ಅಣೆಕಟ್ಟೆಯಿಂದ ಒಂದು ವರ್ಷದಲ್ಲಿ ೧೯೨ ಟಿಎಂಸಿ ನೀರನ್ನು ಬಿಡಬೇಕೆಂದರೆ, ಅಣೆಕಟ್ಟಿಗೆ ಸದಾ ನೀರು ಹರಿಯುತ್ತಿದ್ದರೆ ಮಾತ್ರ ಸಾಧ್ಯ.  ಆ ಸ್ಥಿತಿ ಈಗಂತೂ ಇಲ್ಲ.

ಸಾಂಬಾ ಬೆಳೆಗೇಕೆ ನೀರು?

ತಮಿಳುನಾಡು ಈಗ ನೀರು ಕೇಳುತ್ತಿರುವುದು ಸಾಂಬಾ ಬೆಳೆಗೆ.  ಈ ಬೆಳೆಯು ಈಶಾನ್ಯ ಮಳೆಯನ್ನು ಅವಲಂಬಿಸಿದೆ.  ಈಗ ತಾನೇ ಕಟಾವಿಗೆ ಬಂದಿರುವ ಕುರುವೈ ಬೆಳೆಯ ಕಟಾವಿನ ನಂತರ ಸಾಂಬಾ ಬೆಳೆಗೆ ಬಿತ್ತನೆ ಆರಂಭವಾಗುತ್ತದೆ.  ಅದಕ್ಕಿನ್ನೂ ಸಾಕಷ್ಟು ಸಮಯವಿದೆ.  ಅಲ್ಲದೆ, ಸಾಂಬಾ ಬೆಳೆಯನ್ನು ತೆಗೆಯಲೆಬೇಕೆಂಬ ಹಠವಾದರೂ ತಮಿಳುನಾಡಿಗೆ ಏಕೆ? ಅಧಿಕ ನೀರು ಬೇಡುವ ಸಾಂಬಾ ಭತ್ತದ ಬೆಳೆಯ ಬದಲು ಲಾಭದಾಯಕ ಪರ್ಯಾಯ (ಹತ್ತಿ, ಮುಸುಕಿನಜೋಳ, ದ್ವಿದಳಧಾನ್ಯ, ಎಣ್ಣೆಕಾಳು) ಬೆಳೆಗಳನ್ನು ಕಡಿಮೆ ನೀರು ಬಳಸಿ ಬೆಳೆಯಬಹುದು.  ಈ ಪ್ರಯತ್ನವನ್ನೇಕೆ ತಮಿಳುನಾಡು ಮಾಡುತ್ತಿಲ್ಲ? ಕರ್ನಾಟಕದಲ್ಲಾದರೋ ಈಗಾಗಲೇ ನಾಟಿ ಮಾಡಿ ಒಣಗುತ್ತಿರುವ ಭತ್ತದ ಬೆಳೆಗೆ ನೀರಿಲ್ಲ.  ಇನ್ನು ಇಲ್ಲಿ ತಮಿಳುನಾಡಿನಂತೆ ಎರಡನೇ ಬೆಳೆ ತೆಗೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.  ಹೀಗಿರುವಾಗ, ತಮಿಳುನಾಡಿನಲ್ಲಿ ಬೆಳೆಯಲು ಶುರುಮಾಡುವ ಎರಡನೇ ಬೆಳೆಗೆ ನೀರೊದಗಿಸಬೇಕೆಂದು ಅದೇಶಿಸುತ್ತಿರುವ ಸುಪ್ರೀಂ ಕೋರ್ಟ್ ಆದೇಶ ಅವೈಜ್ಞಾನಿಕವಲ್ಲದೆ ಮತ್ತೇನು? ಯಾವುದೇ ಕಾರಣಕ್ಕೂ ಕುಡಿಯುವ ನೀರನ್ನು ಮೊಟಕುಗೊಳಿಸಿ, ಈಗಾಗಲೇ ಸಮೃದ್ಧವಾಗಿ ಒಂದು ಬೆಳೆ ತೆಗೆದುಕೊಂಡಿರುವ ತಮಿಳುನಾಡಿನ ಗದ್ದೆಗಳಿಗೆ ಮತ್ತೊಂದು ಬೆಳೆ ಬೆಳೆಯಲು ನೀರು ಕೊಡುವುದು ಅತ್ಯಂತ ಅಮಾನವೀಯ.  ಭತ್ತವನ್ನು ಎಲ್ಲಿಂದಾದರೂ ಖರೀದಿಸಬಹುದು.  ಆದರೆ ನೀರನ್ನು ಹಾಗೆ ಖರೀದಿಸಲು ಸಾಧ್ಯವೇ?

ಅವೈಜ್ಞಾನಿಕ ಆದೇಶ

Cauveryಕಾವೇರಿ ನೀರನ್ನು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೆರಿ ರಾಜ್ಯಗಳು ಹಂಚಿಕೊಳ್ಳಬೇಕಾಗಿರುವಾಗ ಪ್ರತಿ ಸಲವೂ ತಮಿಳುನಾಡಿಗೆ ನೀರು ಬಿಡುವ ಬಗ್ಗೆಯೇ ವಿವಾದ ಮತ್ತು ಒತ್ತಡ ಉಂಟಾಗುತ್ತಿರುವುದು ವಿಪರ್ಯಾಸ.  ಮಳೆ ಕಡಿಮೆಯಾದಾಗ ಈ ಎಲ್ಲ ರಾಜ್ಯಗಳು ಕಾವೇರಿ ಜಲಾನಯನ ಪ್ರದೇಶದ ಮಳೆಯ ಪ್ರಮಾಣಕ್ಕೆ ಅನುಸಾರವಾಗಿ ನೀರನ್ನು ಹಂಚಿಕೊಳ್ಳಬೇಕಾಗಿರುವುದು ನ್ಯಾಯೋಚಿತ ಹಾಗೂ ಸೂಕ್ತ.  ಆದರೆ ಈಗ ಹಾಗಾಗುತ್ತಿಲ್ಲ.  ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಯಷ್ಟು ಮಳೆಯಾಗದಿದ್ದರೂ ತಮಿಳುನಾಡಿಗೆ ಮೂಮೂಲಿಯಂತೆ ನೀರು ಬಿಡಲೇಬೇಕೆಂದು ವಾದಿಸಲಾಗುತ್ತದೆ.  ಆದೇಶಿಸಲಾಗುತ್ತದೆ.  ಇದೆಂತಹ ನ್ಯಾಯ?

ಅಷ್ಟಕ್ಕೂ ನ್ಯಾಯಾಧಿಕರಣ, ನಿರ್ವಹಣಾ ಸಮಿತಿ, ಮೇಲ್ವಿಚಾರಣಾ ಸಮಿತಿ ಅಥವಾ ಸುಪ್ರೀಂ ಕೋರ್ಟ್‌ಗಳು ಈಗಲೂ ಕಾವೇರಿ ನೀರಿನ ಸಂಬಂಧವಾಗಿ ವಿಚಾರಣೆ ನಡೆಸುತ್ತಿರುವುದು ೧೯೨೪ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಆದ ಒಪ್ಪಂದದ ಆಧಾರದ ಮೇಲೆಯೇ.  ಇದೇ ಇಷ್ಟೆಲ್ಲ ರಗಳೆಗೆ ಮೂಲ ಕಾರಣ.  ಆಗ ಮದ್ರಾಸ್ ಪ್ರೆಸಿಡೆನ್ಸಿ ಬಲಾಢ್ಯವಾಗಿತ್ತು.  ಮೈಸೂರು ಸಂಸ್ಥಾನದ ಮಾತಿಗೆ ಅಷ್ಟಾಗಿ ಕಿಮ್ಮತ್ತಿರಲಿಲ್ಲ.  ಜೊತೆಗೆ ೧೯೨೪ರಷ್ಟು ಹಿಂದೆ ಸಾಕಷ್ಟು ಮಳೆಯೂ ಆಗುತ್ತಿತ್ತು.  ಹೀಗಾಗಿ ಈ ಒಪ್ಪಂದ ಏಕಪಕ್ಷೀಯವಾಗಿದ್ದರೂ ಕರ್ನಾಟಕದ ಮಟ್ಟಿಗೆ ಅಂತಹ ತೊಂದರೆಗಳನ್ನು ಅದು ಉಂಟುಮಾಡಿರಲಿಲ್ಲ.  ಜೊತೆಗೆ ನೀರಿನ ಬಳಕೆಯ ಪ್ರಮಾಣ ಕೂಡ ಈಗಿನಷ್ಟಿರಲಿಲ್ಲ.

ಈ ಒಪ್ಪಂದದಲ್ಲಿ ಒಂದು ಪ್ರಮುಖ ಅಂಶವನ್ನೇ ಮರೆತುಬಿಡಲಾಗಿತ್ತು.  ಬೇಕೆಂದೇ ಮರೆಯಲಾಗಿತ್ತೋ ಎನ್ನುವುದು ಗೊತ್ತಿಲ್ಲ.  ಆ ಅಂಶವೆಂದರೆ – ಯಾವ ಪ್ರದೇಶದಲ್ಲಿ ಎಷ್ಟು ಮಳೆ ಬೀಳುತ್ತದೆಯೋ ಆ ಪ್ರದೇಶದ ಜನರಿಗೆ ಆ ಮಳೆ ನೀರನ್ನು ಬಳಸುವ ಪ್ರಾಕೃತಿಕ ಹಕ್ಕು ಇರುತ್ತದೆ ಎಂಬುದು.  ಆ ಅಂಶವನ್ನು ಈ ಒಪ್ಪಂದದಲ್ಲಿ ಪ್ರಸ್ತಾಪಿಸಲೇ ಇಲ್ಲ.  ಅದರ ದುಷ್ಪರಿಣಾಮಗಳನ್ನು ಈಗ ಕರ್ನಾಟಕ ಎದುರಿಸಬೇಕಾಗಿದೆ.

ಜಲಮೂಲಗಳ ಸಂರಕ್ಷಣೆ ಏಕಿಲ್ಲ?

ತಮಿಳುನಾಡಿನಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೇರಲಿ, ಪ್ರತಿವರ್ಷ ಒಂದಲ್ಲ ಒಂದು ಕುಂಟುನೆಪ ಒಡ್ಡಿ, ಕಾವೇರಿ ವಿವಾದದ ಕ್ಯಾತೆ ತೆಗೆಯದಿದ್ದರೆ, ಕರ್ನಾಟಕದ ವಿರುದ್ಧ ಕತ್ತಿ ಮಸೆಯದಿದ್ದರೆ, ಅದಕ್ಕೆ ತಿಂದ ಅನ್ನ ಜೀರ್ಣವಾಗುವುದೇ ಇಲ್ಲ! ಕಾವೇರಿ ನೀರಿಗಾಗಿ ಪದೇಪದೇ ಸ್ವಾಭಿಮಾನ ತೊರೆದು ಹೀಗೆ ಕರ್ನಾಟಕದ ಬಳಿ ಭಿಕ್ಷೆ ಬೇಡುವ ತಮಿಳುನಾಡು ಆ ರಾಜ್ಯದಲ್ಲಿ ಸುರಿಯುವ ಮಳೆಯ ನೀರು ವ್ಯರ್ಥವಾಗದಂತೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆರೆಗಳನ್ನು, ಇಂಗುಗುಂಡಿಗಳನ್ನು, ಕೃಷಿಹೊಂಡಗಳನ್ನು, ಚೆಕ್‌ಡ್ಯಾಂಗಳನ್ನು ಏಕೆ ನಿರ್ಮಿಸುತ್ತಿಲ್ಲ?  ಮೆಟ್ಟೂರು ಡ್ಯಾಂ – ಇಡೀ ತಮಿಳುನಾಡಿಗೆ ಇರುವುದು ಅದೊಂದೇ ಅಣೆಕಟ್ಟು.  ಕೇರಳದಲ್ಲಿ, ಕರ್ನಾಟಕದಲ್ಲಿ, ಆಂಧ್ರದಲ್ಲಿ ಯಾವುದೇ ಅಣೆಕಟ್ಟು ಕಟ್ಟಬಾರದೆಂದು ತಕರಾರು ತೆಗೆಯುವ ತಮಿಳುನಾಡು ಸರ್ಕಾರ ತನ್ನ ರಾಜ್ಯದಲ್ಲಿ ಏಕೆ ಅಣೆಕಟ್ಟು ನಿರ್ಮಿಸುವ ಮನಸ್ಸು ಮಾಡುತ್ತಿಲ್ಲ?  ಅದಕ್ಕೆ ಯಾರದ್ದೂ ತಕರಾರು ಇಲ್ಲವಲ್ಲ! ಕರ್ನಾಟಕದಿಂದ ಕಾವೇರಿ ನೀರಿಗಾಗಿ ಬೊಬ್ಬೆ ಹೊಡೆಯುವ ತಮಿಳುನಾಡು ಅಲ್ಲಿರುವ ಪೆಪ್ಸಿ, ಕೋಕಕೋಲಾ ತಯಾರಿಕೆ ಕಂಪೆನಿಗಳಿಗೆ ಭಾರೀ ಪ್ರಮಾಣದ ನೀರನ್ನು ಮಾರಿಕೊಳ್ಳುತ್ತಿದೆಯಲ್ಲ, ಆ ನೀರಿನಲ್ಲಿ ಅರ್ಧದಷ್ಟಾದರೂ ನೀರನ್ನು ಸಾಂಬಾ ಬೆಳೆ ತೆಗೆಯುವ ರೈತರಿಗೆ ಒದಗಿಸಬಾರದೇಕೆ? ಪೆಪ್ಸಿ, ಕೋಲಾ ಕುಡಿದು ಯುವಕ-ಯುವತಿಯರು ನಿಧಾನವಾಗಿ ಸಾಯಲೆಂದೆ? ಸಾಂಬಾ ಬೆಳೆ ತೆಗೆದು ರೈತರು ತಮಿಳುನಾಡಿಗೆ ಉಪಕಾರ ಮಾಡಬಾರದೆಂದೇ?

ಕಳೆದ ವರ್ಷ ತಮಿಳುನಾಡಿನಲ್ಲಿ ೧೦೦ ವರ್ಷಗಳಲ್ಲಿ ಆಗದಷ್ಟು ಬಹು ದೊಡ್ಡ ಪ್ರಮಾಣದ ಮಳೆ ಸುರಿಯಿತು. ಚನ್ನೈ ನಗರ ಮತ್ತಿತರ ಪ್ರದೇಶಗಳು ನೀರಿನಲ್ಲಿ ಮುಳುಗಿ ದಿನಗಟ್ಟಲೆ ಜನಜೀವನ ಅಲ್ಲೋಲಕಲ್ಲೋಲವಾಯಿತು.  ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಕೆರೆಗಳು, ಇಂಗುಗುಂಡಿಗಳು, ಕೃಷಿಹೊಂಡಗಳಿದ್ದಿದ್ದರೆ, ಆ ಕುಂಭದ್ರೋಣ ಮಲೆಯ ನೀರು ಕೆಲವು ವರ್ಷಗಳಿಗೆ ಸಾಕಾಗುತ್ತಿತ್ತು.  ಆದರೆ ಅದಷ್ಟೂ ವ್ಯರ್ಥವಾಗಿ ಹರಿದು ಸೇರಿದ್ದು ಸಮುದ್ರಕ್ಕೆ! ಮಳೆಯ ನೀರನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಮಿಳುನಾಡಿನ ಯಾವ ಬುದ್ಧಿವಂತರಿಗೂ ಹೊಳೆಯಲೇ ಇಲ್ಲ. ಅಂತಹ ದೂರದೃಷ್ಟಿ ಇದ್ದರೆ ತಾನೆ ಹೊಳೆಯುವುದು! ಪ್ರಕೃತಿ ಕೊಟ್ಟ ನೀರನ್ನು ಹಿಡಿದಿಡುವುದಕ್ಕೆ ಕೆರೆಗಳು, ಅಣೆಕಟ್ಟುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಿಸುವುದು ಅಗತ್ಯ ಎಂಬ ಸಾಮಾನ್ಯ ಸಂಗತಿಯನ್ನು ತಮಿಳರೇಕೆ ಅರ್ಥಮಾಡಿಕೊಳ್ಳುತ್ತಿಲ್ಲ?

ಮೂಲ ಸಮಸ್ಯೆ ಇರುವುದೇ ಇಲ್ಲಿ!

ಇಂತಹ ಸಮಸ್ಯೆ ತಮಿಳುನಾಡಿನಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೂ ಇದೆ.  ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಸುರಿದಿದೆ ಎನ್ನಲಾಗುತ್ತಿದೆಯಲ್ಲ, ಅದಕ್ಕೆ ಕಾರಣವೇನೆಂದು ಯಾರಾದರೂ ಗಂಭೀರವಾಗಿ ಆಲೋಚಿಸಿದ್ದಾರೆಯೇ? ನಿರೀಕ್ಷೆಯಷ್ಟು ಮಳೆ ಸುರಿಯದಿದ್ದುದರಿಂದ ಕಾವೇರಿ ನದಿ ನೀರಿನ ಪ್ರಮಾಣ ಕಡಿಮೆಯಾಯಿತೆನ್ನುವುದು ನಿಜ.  ಕಾವೇರಿ ನದಿಯ ನೀರಿನ ಪ್ರಮಾಣ ಕಡಿಮೆಯಾಗದಿದ್ದಲ್ಲಿ, ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.  ಕರ್ನಾಟಕ ಕಾವೇರಿ ಗಲಾಟೆಯಲ್ಲಿ ಹೊತ್ತಿ ಉರಿಯುತ್ತಲೂ ಇರಲಿಲ್ಲ.

ಅವ್ಯಾಹತ ಅರಣ್ಯ ನಾಶ

ಒಂದು ಅಂದಾಜಿನಂತೆ ಸುಮಾರು ೮ ಕೋಟಿ ಜನರು ಹಾಗೂ ೬೦೦ ಪ್ರಮುಖ ಕೈಗಾರಿಕೆಗಳು ಇಂದು ಕಾವೇರಿ ನೀರನ್ನೇ ಆಶ್ರಯಿಸಿದೆ.  ಕಾವೆರಿ ನೀರಿನ ಪ್ರಮಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದಕ್ಕೆ ಕಾವೇರಿ ಜನಿಸುವ ಕೊಡಗಿನಲ್ಲಿ ಅವ್ಯಾಹತ ಅರಣನಾಶವೇ ಬಹುಮುಖ್ಯ ಕಾರಣ.  ಈ ಬಗೆಯ ಅವ್ಯಾಹತ ಅರಣ್ಯ ನಾಶದಿಂದಾಗಿ, ಮಳೆ ಬೀಳುವ ಪ್ರಮಾಣ ಕಡಿಮೆಯಾಗಿ, ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ನೀರಿನ ಕೊರತೆ ಬಾಧಿಸಿದೆ.  ಕೊಡಗಿನ ೨೮೦೦ ಎಕರೆಯಷ್ಟು ಕೃಷಿ ಮತ್ತು ಅರಣ್ಯಭೂಮಿಯನ್ನು ಕಳೆದ ೧೦ ವರ್ಷಗಳಲ್ಲಿ ವಿವಿಧ ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವುದು ಕಾನೂನುಬಾಹಿರ, ಸಂವಿಧಾನ-ವಿರೋಧಿ ಕೃತ್ಯ.  ಆದರೆ ಕೇಳುವವರಾರು? ಸರ್ಕಾರವೂ ಸೇರಿದಂತೆ, ದುರಾಸೆಯ ಉದ್ಯಮಿಗಳಿಗೆ ಹೇಗಾದರೂ ಮಾಡಿ ಹಣ ಸಂಪಾದಿಸಬೇಕೆಂಬ ಹಪಾಹಪಿ.

ಕಳೆದ ವರ್ಷ ೪೦೦ ಕೆವಿ ಸಾಮರ್ಥ್ಯದ ಹೈಟೆನ್ಷ್‌ನ್ ವಿದ್ಯುತ್ ಲೈನ್‌ಅನ್ನು ಮೈಸೂರಿನಿಂದ ಕೇರಳದ ಕೋಜ಼ಿಕೋಡ್‌ಗೆ ಎಳೆಯಲು ಕಾವೇರಿ ಜಲಾನಯನ ಪ್ರದೇಶದಲ್ಲಿ ಬರೋಬ್ಬರಿ ೫೫ ಸಾವಿರ ಭಾರೀ ಗಾತ್ರದ ಮರಗಳನ್ನು ಕಡಿದುರುಳಿಸಲಾಯಿತು.  ಪರಿಣಾಮವಾಗಿ, ಕೆಆರ್‌ಎಸ್ ಅಣೆಕಟ್ಟಿಗೆ ಹರಿಯುವ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.  ಅಲ್ಲದೆ, ಅಣೆಕಟ್ಟಿನಲ್ಲಿ ಸಾಕಷ್ಟು ಹೂಳು ಕೂಡ ತುಂಬಿದೆ.

ಬರಿದಾಗಲಿದೆ ಕಾವೇರಿ ಒಡಲು!

talacauvery

ಇಷ್ಟೇ ಅಲ್ಲ, ಇನ್ನಷ್ಟು ಹೊಸ ಯೋಜನೆಗಳು ಕಾವೇರಿ ನದಿಯ ಒಡಲನ್ನು ಬರಿದಾಗಿಸಲು ಕಾದು ಕುಳಿತಿವೆ.  ಕೊಡಗಿನ ಮೂಲಕ ರೈಲ್ವೇ ಮಾರ್ಗ ನಿರ್ಮಾಣ, ಈಗಿರುವ ರಸ್ತೆಗಳ ಆಗಲೀಕರಣ, ಚತುಷ್ಪಥ ರಾಷ್ಟ್ರೀಯ ಹೆದ್ದಾರೆ ನಿರ್ಮಾಣ ಮುಂತಾದ ಸಂಭಾವ್ಯ ಯೋಜನೆಗಳು ಕಾರ್ಯಗತವಾದರೆ ಇನ್ನಷ್ಟು ಮರಗಳ ನಾಶ ಖಚಿತ.  ಈ ಯೋಜನೆಗಳೆಲ್ಲ ಅಭಿವೃದ್ಧಿಗೆ ಪೂರಕ ಎಂದು ಅಧಿಕಾರಸ್ಥರು, ತಜ್ಞರು ವಾದಿಸಬಹುದು.  ಆದರೆ ಈ ಯೋಜನೆಗಳ ದುಷ್ಪರಿಣಾಮವಾಗಿ ೮ ಕೋಟಿ ಜನರಿಗೆ ಹಾಗೂ ೬೦೦ ಪ್ರಮುಖ ಕೈಗಾರಿಕೆಗಳಿಗೆ ನೀರೊದಗಿಸುವ ಕಾವೇರಿಯ ಒಡಲು ಸಂಪೂರ್ಣ ಬರಿದಾಗಲಿದೆ ಎಂಬ ಕಠೋರ ಸತ್ಯವನ್ನು ಯಾಕೆ ಯಾರೊಬ್ಬರೂ ಅರ್ಥಮಾಡಿಕೊಳ್ಳುತ್ತಿಲ್ಲ?

ಸಮಸ್ಯೆ ಇರುವುದು ಇಲ್ಲೇ.  ಸಮಸ್ಯೆಗೆ ಮೂಲ ಕಾರಣ ಪತ್ತೆಹಚ್ಚಿ ಪರಿಹರಿಸುವ ಬದಲು, ಕಾವೇರಿ ವಿವಾದ ಜೀವಂತವಾಗಿರಲಿ ಎಂದು ಬಯಸುವ, ಅದು ಚಿನ್ನದ ಮೊಟ್ಟೆ, ಅದು ಜೀವಂತವಾಗಿದ್ದಷ್ಟೂ ನಮಗೆ ರಾಜಕೀಯ ಲಾಭ ಹೆಚ್ಚು ಎಂದು ಭಾವಿಸುವ ರಾಜಕಾರಣಿಗಳಿಗೆ ಏನೆನ್ನಬೇಕು?

ಮರವಿದ್ದರೆ ಮಳೆ. ಮಳೆಯಿದ್ದರೆ ನೀರು, ಬೆಳೆ.  ನೀರು, ಬೆಳೆ ಇದ್ದರೆ ನದಿ, ಜನಜೀವನ.  ನದಿ ತುಂಬಿ ಹರಿದರೆ ಜನಜೀವನ ಹಸನು; ಜಲ ವಿವಾದಗಳಿಗೆ ಪೂರ್ಣ ವಿರಾಮ ಸಾಧ್ಯ. ಜಲಮೂಲಗಳನ್ನು ಸಂರಕ್ಷಿಸೋಣ.  ಪ್ರಕೃತಿನಾಶವನ್ನು ಇನ್ನಾದರೂ ನಿಲ್ಲಿಸೋಣ.  ಅದೊಂದೇ ಪರಿಹಾರ.  ಅದಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಿಲ್ಲ.

 ಲೇಖನ: ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*