ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬೆಳ್ಳಿಗಟ್ಟಿಯ ಕಥೆ

ಧಾರವಾಡ,(ಮನಗುಂಡಿ/ಬೆಳ್ಳಿಗಟ್ಟಿ): “ನಾವು ಎಮ್.ಎಸ್.ಡಬ್ಲೂ ಕೋರ್ಸ್ ಕಲಿಯೋ ಮುಂದ ಸಮಸ್ಯೆಗಳನ್ನ ಗಮನಿಸಿ, ಕೇವಲ ಗುರುತು ಹಾಕಿಕೊಳ್ಳತಿದ್ವಿ. ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ಸೇರಿದ ಮ್ಯಾಲೆ, ಸಮಸ್ಯೆಗಳನ್ನ ಕೇವಲ ಗ್ರಹಿಸೋದು ಮುಖ್ಯ ಅಲ್ಲ; ಸಮುದಾಯದ ಸಹಭಾಗಿತ್ವದೊಳಗ ನಾವೇ ಪರಿಹಾರ ಕಂಡುಕೊಂಡು ಬಗೆಹರಿಸಬೇಕು ಎಂಬ ಸತ್ಯದ ದರ್ಶನ ಆಯ್ತು” ಫೆಲೊ ಅನ್ನಪೂರ್ಣಾ ಘಟನಟ್ಟಿ ತಮ್ಮ ಕಲಿಕೆಯನ್ನು ವಿವರಿಸುತ್ತಿದ್ದರೆ ‘ಅನುಭವದಲ್ಲಿ ಅಮೃತತ್ವವಿದೆ’ ಎನಿಸಿತು.

3Anagnwadi tank cleanಜನರೇ ತಮ್ಮ ಸಮಸ್ಯೆಗಳನ್ನು ತಳಮಟ್ಟದಲ್ಲಿಯೇ ಗುರುತಿಸಬೇಕು; ತಕ್ಕ ಪರಿಹಾರವನ್ನೂ ಅವರೇ ಸೂಚಿಸಬೇಕು, ಅವರು ಪರಿಹಾರ ಪಡೆಯುವಲ್ಲಿ ಅಗತ್ಯ ಮಾಹಿತಿ ಮತ್ತು ಸೌಲಭ್ಯ ಒದಗಿಸುವ ಸಂಯೋಜನೆಯ ಕಾರ್ಯ ಮಾತ್ರ ನಾವು ಮಾಡಬೇಕು ಎಂಬುದನ್ನು ಫೆಲೊಷಿಪ್ ತುಂಬ ಸಮರ್ಥವಾಗಿ ಫೆಲೊಗಳಿಗೆ ಮನವರಿಕೆ ಮಾಡಿಸಿದ ಪರಿಣಾಮ.

ಧಾರವಾಡ ಜಿಲ್ಲೆ, ಮನಗುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳ್ಳಿಗಟ್ಟಿ ಅನ್ನಪೂರ್ಣಾ ಅವರ ಪಾಲಿಗೆ ಬಂದ ಹಳ್ಳಿ. ೨೪೯ ಮನೆಗಳಿರುವ ಈ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಗೂ ಇಲ್ಲಿನ ಜನರಿಗೂ ಕೇವಲ ಕಚೇರಿ ಸಂಬಂಧ ಮಾತ್ರವಿತ್ತು! ‘ಪರಸ್ಪರ ದೂಷಿಸುವ ಆಟ’ ಗ್ರಾಮವನ್ನೇ ಅಭಿವೃದ್ಧಿಯ ಹಾದಿಯಿಂದ ಮೂರ್ನಾಲ್ಕು ದಶಕದಷ್ಟು ಹಿಂದೆ ಒಯ್ದಿತ್ತು!

ಗ್ರಾಮಸ್ಥರಿಗೆ ಗ್ರಾಮಾಭ್ಯುದಯ ಪರ ನಿಲುವು ಹೊಂದುವಂತೆ ಪ್ರೇರೇಪಿಸುವ, ನಮ್ಮ ಗ್ರಾಮ ಭವಿಷ್ಯದ ಶಿಲ್ಪಿಗಳೂ ನಾವೇ ಎಂಬುದನ್ನು ಮನವರಿಕೆ ಮಾಡಿಸುವ, ಪಂಚಾಯತ್ ರಾಜ್ ವ್ಯವಸ್ಥೆಯ ಅಡಿ ಅಧಿಕಾರ ಕೇಂದ್ರದ ಧೃವೀಕರಣದ ಮಹತ್ವ ತಿಳಿಸುವ ಕೆಲಸ ಅನ್ನಪೂರ್ಣಾ ಬೆಳ್ಳಿಗಟ್ಟಿಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಇಡೀ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸದೆಯೇ ದಶಕ ಕಳೆದಿತ್ತು! ಗ್ರಾಮದ ತುಂಬ ಸಣ್ಣಪುಟ್ಟ ರೋಗಗಳಿಗೆ ಬರವಿರಲಿಲ್ಲ! ಓರ್ವ ವೈದ್ಯರೂ ಗ್ರಾಮದಲ್ಲೇ ಖಾಸಗಿ ದವಾಖಾನೆ ನಡೆಸುವಷ್ಟು ಪರಿಸ್ಥಿತಿ ಹದಗೆಟ್ಟಿತ್ತು. ಅವರಿಗೂ ಪುರುಸೊತ್ತು ಸಿಗದಷ್ಟು ಪೇಷೆಂಟ್‌ಗಳು ಪಾಳಿ ಹಚ್ಚಿ ಕಾಯುತ್ತಿದ್ದರು!

School water tank cleanಇದು ಕುಡಿಯುವ ನೀರಿನ ಸಮಸ್ಯೆ ಎಂದು ಮನಗಂಡು, ಫೆಲೊ ಅನ್ನಪೂರ್ಣಾ ಏಕಾಏಕಿ ಒಂದು ದಿನ ರಾತ್ರಿ ತಾವೊಬ್ಬರೇ ೧೦.೩೦ಕ್ಕೆ ಡಂಗುರ ಸಾರುತ್ತಾರೆ. ನಗಾರಿ ಬಳಸಿ ಗ್ರಾಮದ ತುಂಬೆಲ್ಲ ನಾಳೆ ಬೆಳಗ್ಗೆ ‘ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸ.. ಶ್ರಮದಾನಕ್ಕೆ ಸಿದ್ಧವಿರುವವರು ಬನ್ನಿ’.. ಆಶ್ಚರ್ಯವೆಂದರೆ, ಬೆಳಗ್ಗೆ ಟ್ಯಾಂಕ್ ಬಳಿ ೮೦ ಜನ ಸಿದ್ಧರಾಗಿ ಬಂದಿದ್ದು!

೯ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಟ್ಯಾಂಕ್ ಸ್ವಚ್ಛಗೊಳಿಸಲು ಸ್ಕೋಪ್ ೧೫,೨೫೦ ರೂಪಾಯಿ ‘ಕ್ಲೀನಿಂಗ್ ಮಟೀರಿಯಲ್ಸ್’ ಖರೀದಿಸಲು ಖರ್ಚಿಸಿತು. ಮೇಲಿನ ಖರ್ಚು ೧,೩೦೦ ರೂಪಾಯಿ ಮತ್ತು ಶ್ರಮದಾನದ ಕೂಲಿ ಖರ್ಚನ್ನು ಮನಗುಂಡಿ ಗ್ರಾಮ ಪಂಚಾಯ್ತಿ ವಹಿಸಿಕೊಂಡಿತು.

ಕೇವಲ ಗ್ರಾಮಸ್ಥರ ಶ್ರಮದಾನದ ಮೂಲಕ, ಸ್ವಯಂ ಪ್ರೇರಣೆಯಿಂದ ಗ್ರಾಮದ ಮನೆಯವರು ನೀಡಿದ ಚಹಾ-ತಿಂಡಿAGI HABBA ಪಡೆದು, ಅನ್ನಪೂರ್ಣಾ ಅವರ ನೇತೃತ್ವದಲ್ಲಿ ಟ್ಯಾಂಕ್ ಒಳಗೆ, ಹೊರಗೆ ಮತ್ತು ಸುತ್ತಲಿನ ಆವರಣ ಕೇವಲ ೧೫ ದಿನದಲ್ಲಿ ನಳನಳಿಸುವಂತಾಯಿತು!

ಗ್ರಾಮಸ್ಥೆ ಶಾಂತಮ್ಮಾ ನವಲಿ ಅವರ ಬಾಯಲ್ಲಿ ಕೇಳಬೇಕು.. “ನಮ್ಮ ಅನ್ನಪೂರ್ಣಾ ಟ್ಯಾಂಕ್ ಸ್ವಚ್ಛ ಮಾಡಿಸಿ ದೇವರ ಕೆಲಸ ಮಾಡ್ಯಾಳ್ರೀ.. ನಮ್ಮೂರ ದೇವ್ರು ಬಸವಣ್ಣ ಆ ಮಗಳನ್ನ ಚೆನ್ನಾಗಿ ಇಟ್ಟಿರ‍್ಲಿ..”

ಅನ್ನಪೂರ್ಣಾ ಬೆಳ್ಳಿಗಟ್ಟಿ ಗ್ರಾಮದ ಸುತ್ತ ಒಂದು ಕಾಲ್ನಡಿಗೆ ಹೋಗುತ್ತಲೇ, ಜನ ಸಮಸ್ಯೆಗಳ ಪಟ್ಟಿ ನೀಡಿ, ‘ತಂಗಿ ಏನರೇ ಮಾಡವಾ.. ಇದನ್ನ ಸರಿ ಮಾಡಿಸಿ ಪುಣ್ಯ ಕಟ್ಟಕೋ..’ ಕೈ ಮುಗಿದು ಹೇಳುವ ಹೆಣ್ಣು ಮಕ್ಕಳ ಸಂಖ್ಯೆ ಏರುತ್ತಲೇ ಹೋಯಿತು! ಅವರನ್ನೇ ಸಂಘಟಿಸಿ, ಮನವೊಲಿಸಿ, ಶ್ರಮದಾನದ ಮೂಲಕ ಊರಿನ ಸ್ವಚ್ಛತೆಗೆ ಏಕೆ ಮುಂದಾಗಬಾರದು ಎಂದು ಅನ್ನಪೂರ್ಣಾ ಯೋಚಿಸುತ್ತಾರೆ. ಕಾರ್ಯಗತಗೊಳಿಸಲೂ ಮನಸ್ಸು ಮಾಡುತ್ತಾರೆ.

ಹೀಗೂ ರಸ್ತೆ ಉಂಟು!

Belligatti OD rejuvenation 1ಬೆಳ್ಳಿಗಟ್ಟಿಯಲ್ಲಿ ನಿಜಪ್ಪನವರ ಓಣಿ ಇದೆ. ಹೆಚ್ಚೂ ಕಡಿಮೆ ಕಚ್ಚಾ ರಸ್ತೆ ಮತ್ತು ಗಟಾರು. ಅಕ್ಕ ಪಕ್ಕ ಬಯಲು ಶೌಚದ ಕೂಪ. ಮಧ್ಯೆ ಅರ್ಧ ಊರಿನವರು ಬಳಸಿದ ಗಲೀಜು ನೀರು ತೊರೆಯಂತೆ ಸದಾ ಹರಿದು ಅನಾರೋಗ್ಯ ವಾತಾವರಣ ಪಲ್ಲವಿಸುವಂತೆ ಮಾಡಿದ ಕುಖ್ಯಾತಿ ಈ ರಸ್ತೆಗೆ! ಸ್ಕೋಪ್‌ಗೆ ಅನ್ನಪೂರ್ಣಾ ಪ್ರಸ್ತಾವನೆ ಸಲ್ಲಿಸಿ ಇಡೀ ರಸ್ತೆಯ ಶುದ್ಧೀಕರಣಕ್ಕೆ ಹಣಕಾಸಿನ ಸಹಾಯ ಕೋರುತ್ತಾರೆ. ಸ್ಕೋಪ್ ಸಿಇಓ ಡಾ. ಪ್ರಕಾಶ್ ಭಟ್ ಪರಿಸ್ಥಿತಿ ಅವಲೋಕಿಸಿ ೧೩,೯೦೦ ರೂಪಾಯಿ ಬಿಡುಗಡೆ ಮಾಡುತ್ತಾರೆ.

ಕೇವಲ ೧೫ ದಿನಗಳಲ್ಲಿ ಇಡೀ ರಸ್ತೆಯ ಆರೋಗ್ಯ ಸುಧಾರಿಸಿ, ಹೊಸ ರಸ್ತೆಯೇ ರೂಪುಗೊಂಡಂತೆ ನಳನಳಿಸುತ್ತದೆBelligatti OD rejuvenation 3. ವರ್ಷಾನುಗಟ್ಟಲೇ ಕೊಳಕು ವಾಸನೆ ಸಹಿಸಿ ಜಾರಿ ಬಿದ್ದಿದ್ದ ಹಿರೀಕರು ಅನ್ನಪೂರ್ಣಾಳಿಗೆ ಅಭಿನಂದನೆ ಸಲ್ಲಿಸಿ.. ‘ತಂಗಿ ನಿನ್ನಿಂದ ಆತ ಬೇ ಈ ಕೆಲಸಾ..’ ಅಂತ ಕಂಡಕಂಡಲ್ಲಿ ಹೊಗಳುತ್ತಾರೆ.

ಅದೇ ರಸ್ತೆ ಪಕ್ಕದ ನಿವಾಸಿ, ಹಿರೀಕರು ದೇವೇಂದ್ರಪ್ಪ ಅಮ್ಮಿನಬಾವಿ ಈ ಕೆಲಸದ ಬಗ್ಗೆ ಹೇಳಿದ್ದು, “ಸ್ವಚ್ಛವಾಗಿರೋದು ಅಂದ್ರ ದೇವರ ಪೂಜಿ ಮಾಡಿದ್ಹಂಗ ಅಂತಿದ್ರು ಹಿರಿಯರು; ಅನ್ನಪೂರ್ಣಮ್ಮ ದೇವರ ಕೆಲಸ ಮಾಡ್ಯಾಳ..”

ಆದರೆ, ಬಯಲು ಶೌಚದ ಸಮಸ್ಯೆ ಬಗೆಹರಿಯದಿದ್ದರೆ ನಾಲ್ಕಾರು ವರ್ಷಗಳಲ್ಲಿ ನಿಜಪ್ಪನವರ ಓಣಿ ಮೊದಲಿನಂತಾಗುವಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಮನಗಂಡು, ಅನ್ನಪೂರ್ಣಾ ಅಂಗನವಾಡಿ ಶೌಚಾಲಯದ ದುರಸ್ತಿ ಮತ್ತು ವೈಯಕ್ತಿಕ ಶೌಚಾಲಯಗಳ ಕಟ್ಟುವಿಕೆಗೆ ಒತ್ತು ನೀಡಲು ಮುಂದಾಗುತ್ತಾರೆ. ಅಂಗನವಾಡಿ ಶೌಚಾಲಯಗಳನ್ನು ಸುಸ್ಥಿತಿಗೆ ತರಲು ಸ್ವತಃ ಸ್ಕೋಪ್ ಮುಂದೆ ಬರುತ್ತದೆ. ೯,೯೮೦ ರೂಪಾಯಿಗಳ ಧನ ಸಹಾಯ ನೀಡಿ, ಅನ್ನಪೂರ್ಣಾ ಅವರ ಕೆಲಸಕ್ಕೆ ಬೆನ್ನೆಲುಬಾಗುತ್ತದೆ. ಗ್ರಾಮ ಪಂಚಾಯ್ತಿ ಕೂಡಲೇ ಕಾರ್ಯಪ್ರವೃತ್ತವಾಗಿ ೫೦ ಸಾವಿರ ರೂಪಾಯಿ ಒದಗಿಸುತ್ತದೆ. ಕಾಮಗಾರಿಗೆ ಆನೆ ಬಲ. ಯಾರ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಲು ಜಾಗೆ ಇಲ್ಲವೋ ಅವರಿಗೆ ಈ ಶೌಚಾಲಯಗಳನ್ನು ತಾತ್ಕಾಲಿಕವಾಗಿ ವ್ಯವಸ್ಥೆಗೊಳಿಸಲಾಗುತ್ತದೆ.

ಅನ್ನಪೂರ್ಣಾ ಅವರಿಗೂ ಸಮಸ್ಯೆ!

Belligatti OD rejuvenation 4ವಿಚಿತ್ರವೆಂದರೆ, ಫೆಲೊ ಅನ್ನಪೂರ್ಣಾ ಬೆಳ್ಳಿಗಟ್ಟಿಗೆ ೧೨ ತಿಂಗಳ ಗ್ರಾಮ ವಾಸ್ತವ್ಯಕ್ಕೆ ಬಂದು ನಿಂತಾಗ, ಅವರು ಆಯ್ದುಕೊಂಡ ಮನೆಯಲ್ಲೂ ಶೌಚಾಲಯ ಇರಲಿಲ್ಲ! ಶೌಚಕ್ಕೆ ನಾಲ್ಕು ಮನೆಗಳನ್ನು ದಾಟಿ ಮತ್ತೊಬ್ಬರ ಮನೆಗೆ ಹೋಗಬೇಕಾದ ವ್ಯವಸ್ಥೆ ಅವರೇ ಮಾಡಿಕೊಳ್ಳಬೇಕಾಯಿತು!

ಬಯಲು ಶೌಚದ ಸಮಸ್ಯೆಗಳನ್ನು ವಿಶ್ಲೇಷಿಸಲು ನಿಂತಾಗ, ಅವರಿಗೆ ಕಂಡಿದ್ದು ಬೆಳ್ಳಿಗಟ್ಟಿಯ ೨೪೯ ಮನೆಗಳ ಪೈಕಿ ಕೇವಲ ೨೦ ಮನೆಗಳಲ್ಲಿ ಮಾತ್ರ (ಶೇ.೮) ವೈಯಕ್ತಿಕ ಶೌಚಾಲಯಗಳಿದ್ದು, ಬಳಕೆ ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟು! ಕೇವಲ ೪ ತಿಂಗಳ ಅವಧಿಯಲ್ಲಿ ತುಂಬ ಶ್ರಮ ಹಾಕಿ ೯೧ ವೈಯಕ್ತಿಕ ಶೌಚಾಲಯಗಳನ್ನು (ಶೇ.೩೭) ಕಟ್ಟಿಸುವಲ್ಲಿ ಅವರು ಯಶಸ್ವಿಯಾದರು. ಇನ್ನು ಕಟ್ಟಿಕೊಂಡ ಶೌಚಾಲಯಗಳನ್ನು ಬಳಸುವಂತೆ ಮಾಡಬೇಕಾದ ಅನಿವಾರ್ಯತೆಯೂ ಅಲ್ಲಿ ಉದ್ಭವಿಸಿತ್ತು! ಬಳಕೆ ಶೇ.೧೦೦ರಷ್ಟಾಗಿಸುವಲ್ಲಿ ಅನ್ನಪೂರ್ಣಾ ಗ್ರಾಮದ ಮಹಿಳೆಯರ ಮನವೊಲಿಸಿದ್ದಾರೆ.Belligatti Tank rejuvenation 1

ಈ ಎಲ್ಲ ಬಿಡುವಿಲ್ಲದ ವಿಧಾಯಕ ಕಾರ್ಯಗಳ ಮಧ್ಯೆಯೇ ಅನ್ನಪೂರ್ಣಾ ಗಮನ ಹರಿಸಿದ್ದು ಬೆಳ್ಳಿಗಟ್ಟಿಯ ಸರ್ಕಾರಿ ಹಿರಿಯ ಶ್ರೇಣಿ ಪ್ರಾಥಮಿಕ ಶಾಲೆಯ ಕುಡಿಯುವ-ಬಳಕೆಯ ನೀರಿನ ಸೌಲಭ್ಯ ಮತ್ತು ಶೌಚ ವ್ಯವಸ್ಥೆಯತ್ತ. ಲಭ್ಯವಿದ್ದ ಶುದ್ಧ ಕುಡಿಯುವ ನೀರಿನ ‘ಯು.ವಿ. ಸಿಸ್ಟಮ್’ ವಾಢಾಯಿಸಲು ಅಂದಾಜು ವೆಚ್ಚ ೨೫ ಸಾವಿರ ರೂಪಾಯಿ ಲೆಕ್ಕಿಸಲಾಯಿತು. ಸ್ಕೋಪ್ ೨೦,೧೬೦ ರೂಪಾಯಿ ನೀಡಿದರೆ, ಹೊಸ ಘಟಕಕ್ಕೆ ಗ್ರಾಮ ಪಂಚಾಯ್ತಿ ೧೨ ಸಾವಿರ ರೂಪಾಯಿ ಒದಗಿಸಿತು. ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಕಾಲದಲ್ಲಿ ಒದಗುವಂತಾಯಿತು.

ಬೆಳ್ಳಿಗಟ್ಟಿಯಲ್ಲಿ ರಸ್ತೆಯ ತುಂಬೆಲ್ಲ ಪ್ಲಾಸ್ಟಿಕ್ ಚೀಟು, ಗುಟಖಾ ಪಾಕೀಟುಗಳು, ಸಿಗರೇಟ್ ಪ್ಯಾಕ್, ಕೈಚೀಲ, ಹೀಗೆ ತರಹೇವಾರಿ ಕಸ ಮತ್ತು ಘನ ತ್ಯಾಜ್ಯವನ್ನೂ ರಸ್ತೆ ಪಕ್ಕವೇ ಬಿಸುಟುವ ಪ್ರವೃತ್ತಿ ಅನ್ನಪೂರ್ಣಾ ಅವರ ನಿದ್ದೆಗೆಡಿಸುತ್ತದೆ.

ಗ್ರಾಮದ ನಾಲ್ಕು ಪ್ರಮುಖ ಪಾನ್-ಬೀಡಾ ಅಂಗಡಿ ಮತ್ತು ಹೊಟೇಲ್ ಗುರುತಿಸಿ, ಅವುಗಳ ಮುಂದೆ ವ್ಯವಸ್ಥಿತವಾದ ಕಸದ ತೊಟ್ಟಿಗಳನ್ನಿಡಿಸಲು ಮುಂದಾಗುತ್ತಾರೆ. ಸ್ಕೋಪ್ ತಲಾ ೨೦೦ ರೂಪಾಯಿ, ಅಂಗಡಿ ಮಾಲೀಕ ೨೦೦ ರೂಪಾಯಿ ನೀಡಿ, ಒಟ್ಟು ೪೦೦ ರೂಪಾಯಿ ಮೌಲ್ಯದ ೧೪ ಡಸ್ಟ್‌ಬಿನ್ ಅಂಗಡಿಗಳಿಗೆ ಒದಗಿಸಲಾಗುತ್ತದೆ. ಗ್ರಾಹಕರು ಕಡ್ಡಾಯವಾಗಿ ಕಸದ ತೊಟ್ಟಿಗಳಲ್ಲೇ ಕೈಕಸ ಹಾಕುವಂತೆ, ಕಂಡಕಂಡಲ್ಲಿ ಉಗುಳದಂತೆ, ಹಾಗೆ ಒಂದು ವೇಳೆ ಮಾಡಿದಲ್ಲಿ ಕಂಡವರೇ ದಂಡ ವಿಧಿಸುವ ಪದ್ಧತಿ ಜಾರಿಗೆ ತರುತ್ತಾರೆ. ‘ಡಸ್ಟ್ ಬಿನ್’ಗಳಿಗಾಗಿ ಸ್ಕೋಪ್ ಒಟ್ಟು ೧,೪೦೦ ರೂಪಾಯಿ ವ್ಯಯಿಸಿ ಕಸದ ನಿರ್ವಹಣೆ ಮತ್ತು ವಿಲೇವಾರಿಗೆ ಒಂದು ಶಿಸ್ತು ಗ್ರಾಮಕ್ಕೇ ತರುತ್ತದೆ.

ಅಗಿ ಹಬ್ಬ; ಹಸಿರು ಅಂಗಿ!

Belligatti Tank rejuvenation 2ಫೆಲೊ ಅನ್ನಪೂರ್ಣಾ, ಗ್ರಾಮದ ಆರಾಧ್ಯ ದೈವ ಬಸವಣ್ಣ ದೇವರ ಗುಡ್ಡಕ್ಕೆ ಹೋದಾಗ ಗಮನಿಸುತ್ತಾರೆ.. ಇಡೀ ಗುಡ್ಡ ಗಿಡಗಳಿಲ್ಲದೇ ಬೋಳಾಗಿದೆ ಎಂಬುದನ್ನು. ಡಾ. ಪ್ರಕಾಶ ಭಟ್ ಅವರ ಕನಸಿನ ಕೂಸು ‘ಅಗಿ ಹಬ್ಬ’ಕ್ಕೆ ಅವರು ಯೋಜಿಸುತ್ತಾರೆ. ಸ್ಕೋಪ್ ಕಚೇರಿಗೆ ಗ್ರಾಮಸ್ಥರ ಆಶಯದಂತೆ ಪ್ರಸ್ತಾವನೆ ರವಾನೆಯಾಗುತ್ತದೆ. ತುಂಬ ಖುಷಿಯಿಂದ ಒಪಿಕೊಳ್ಳುವ ಡಾ. ಪ್ರಕಾಶ, ಅನ್ನಪೂರ್ಣಾ ಅವರ ಆಸೆಯನ್ನು ಅನುಮೋದಿಸುತ್ತಾರೆ.

ಲಕ್ಷಾಂತರ ರೂಪಾಯಿ ಸಹೃದಯರಿಂದ ದೇಣಿಗೆ ಪಡೆದು, ಗಿಡಗಳನ್ನು ಖರೀದಿಸಿ, ಅರಣ್ಯ ಇಲಾಖೆಯಿಂದ ಉಚಿತವಾಗಿಯೂ ಸಂಗ್ರಹಿಸಿಕೊಂಡು, ಗ್ರಾಮಸ್ಥರ ಶ್ರಮದಾನದಲ್ಲಿ ಸ್ಕೋಪ್ ೧೦,೦೦೦ ಗಿಡಗಳನ್ನು ಬಸವಣ್ಣ ದೇವರ ಗುಡ್ಡದ ತುಂಬೆಲ್ಲ ಸಾವಿರಾರು ಜನರಿಂದ ನೆಡಿಸುವಲ್ಲಿ ಯಶಸ್ವಿಯಾಗುತ್ತದೆ. ಬೋಳಾದ ನೆತ್ತಿಯ ಗುಡ್ಡದ ತುಂಬ ಈಗ ಹಸಿರೇ ನಳನಳಿಸಿ, ಗುಡ್ಡಕ್ಕೆ ಉಸಿರು ಬಂದಂತಾಗಿದೆ.

ಮನಗುಂಡಿಯ ಪೂಜ್ಯ ಬಸವಾನಂದ ಸ್ವಾಮೀಜಿ ಸ್ವತಃ ಉಪಸ್ಥಿತರಿದ್ದು, ಈ ಕೆಲಸ ಅನುಭವಿಸಿ (ಜನ್ಮತಃ ಅಂಧರು) ಹೇಳಿದ್ದು, “‘ಅಗಿ ಹಬ್ಬ’ ಬೆಳ್ಳಿಗಟ್ಟಿಯ ಬಸವಣ್ಣ ದೇವರ ಗುಡ್ಡಕ್ಕೆ ‘ಹಸಿರು ಅಂಗಿ’ ತೊಡಿಸಿದೆ. ಆಶ್ಚರ್ಯವೆಂಬಂತೆ, ಬಸವಣ್ಣ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿಯ ಜೊತೆ ಗಿಡಗಳ ಮೆರವಣಿಗೆಯೂ ನಡೆದ ಪರಿಣಾಮವೇನೋ, ದೇವ ಕರುಣೆಯೋ.. ಆಗಾಗ ಮೋಡಗಳು ಇಲ್ಲಿ ನಿಂತು ಮಳೆ ಸುರಿಸಿ ಹೋಗುತ್ತಿವೆ! ವಾತಾವರಣ ತಂಪಾಗಿದೆ. ಇನ್ನು ಇವರ ಬದುಕೂWater Qualitytest ಹಸನಾಗಲಿದೆ”

ಕರ್ನಾಟಕ ವಿಶ್ವವಿದ್ಯಾಲಯದಿಂದ ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಸ್ನಾತಕ ಪದವಿ ಗಳಿಸಿರುವ ಫೆಲೊ ಅನ್ನಪೂರ್ಣಾ ಘಟನಟ್ಟಿ ಮೂಲತಃ ಬೆಳಗಾವಿ ಜಿಲ್ಲೆ ಮುಗಳಖೋಡದವರು, ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ಸೇರುವ ಮುನ್ನ ಯಾವ ಅನುಭವವೂ ಅವರ ಬೆನ್ನಿಗಿರಲಿಲ್ಲ. ತಮ್ಮೆಲ್ಲ ಸಾಧನೆಗೆ ಕಾರಣ ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರ ಪ್ರೋತ್ಸಾಹ ಮತ್ತು ಬೆಂಬಲವೇ ಕಾರಣ ಎನ್ನುತ್ತಾರೆ ಅನ್ನಪೂರ್ಣಾ.

ಅಂದಹಾಗೆ ಅನ್ನಪೂರ್ಣಾ ಮಿತ ಭಾಷಿ; ಹಿತ ಭಾಷಿಯೂ ಹೌದು. ಹಾಗಾಗಿ, ಇವರು ಡಾ. ಪ್ರಕಾಶ ಭಟ್ ಅವರ ದತ್ತು ಮಗಳಂತೆ! ಹಾಗಂತ, ಉಳಿದ ಫೆಲೋಗಳಿಗೆ ಈ ವಿಷಯದಲ್ಲಿ ತುಸು ಅಸಮಾಧಾನವಿದೆ!

****************************************************************************************************************************

SCope arghyam 9 - annapurna ghattanattiಫೆಲೊ ಅನ್ನಪೂರ್ಣಾ ಘಟನಟ್ಟಿ ಅವರ ಅನಿಸಿಕೆ –

“ಗ್ರಾಮ ವಾಸ್ತವ್ಯ ನನ್ನ ವ್ಯಕ್ತಿತ್ವವನ್ನೇ ಬದಲಾಯಿಸಿತು. ಸಮಸ್ಯೆಯನ್ನು ಸಮಸ್ಯೆಯಾಗಿಯೇ ನೋಡದೆ, ಪರಿಹಾರಾತ್ಮಕ ದೃಷ್ಟಿಕೋನದಿಂದ ಗ್ರಹಿಸುವ ಕೌಶಲ್ಯ ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ಕಲಿಸಿತು. ನನ್ನ ವೈಯಕ್ತಿಕ ಜೀವನ ಶೈಲಿಯಲ್ಲೂ ಬದಲಾವಣೆ ಬಂದಿದೆ. ಸರಳ ಜೀವನ ಈಗ ನನಗೆ ಕಷ್ಟವಲ್ಲ. ಗ್ರಾಮ ಮಟ್ಟದ ಸಮಸ್ಯೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವಲ್ಲಿ ಸಮುದಾಯಗಳ ಸಹಭಾಗಿತ್ವ ಬಹಳ ಮಹತ್ವದ್ದು ಎಂಬುದನ್ನು ಕಲಿತೆ. ಡಾ. ಪ್ರಕಾಶ ಭಟ್ ಅವರಿಗೆ ನನ್ನದೊಂದು ಪುಟ್ಟ ಥ್ಯಾಂಕ್ಸ್.”

 

ಸಂಪರ್ಕ: anughatanatti001@gmail.com / +91 8722143609

****************************************************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

 ಇದು ಸ್ಕೋಪ್-ಅರ್ಘ್ಯಂ ‘ವಾಟ್‌ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ’ ಯಶೋಗಾಥೆಯ ಸರಣಿಯ ೯ನೆಯ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*