ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತಿಪ್ಪೆ ಸ್ವಚ್ಛತಾ ಆಂದೋಲನ; ಮೂರು ದಶಕದ ಕೊಳೆ ತೊಳೆದ ಇಳೆ ಹಶ್ಮತ್!

ಹಾವೇರಿ/ಸವಣೂರು,(ಪರಮವಾಡಿ ತಂಡಾ/ ಮಾರುತಿಪುರ): “ಹೆಣ್ಮಗಳಾಗಿ ಹಶ್ಮತ್ ಊರಿನ ತಿಪ್ಪೆ ಮತ್ತು ಗಟಾರುಗಳನ್ನ ಸ್ವಚ್ಛ ಮಾಡಿದ್ದು, ಗಂಡಸರಿಗೂ ವರ್ಷಾನುಗಟ್ಟಲೇ ಆಗದಿದ್ದ ಕೆಲಸ ಕೆಲವೇ ತಿಂಗಳಲ್ಲಿ ಜನರನ್ನ ಜೋಡಿಸಿಕೊಂಡು, ಮನವೊಲಿಸಿ ಅಂತೂ ಮುಗಿಸಿದ್ದು ನನಗೆ ೮ನೇ ಅದ್ಭುತ ಅನಿಸಿದೆ” – ಮಾರುತಿಪುರ ಗ್ರಾಮಸ್ಥ-ಜನ ಪ್ರತಿನಿಧಿ, ಯಲವಿಗಿ ಪಂಚಾಯ್ತಿ ಸದಸ್ಯ ರಾಜು ಮುಗಳಿ ಅಭಿಮಾನದಿಂದ ಹೇಳಿದರು.

???????????????????????????????“ಈ ಫೆಲೊಶಿಪ್ ಪ್ರೋಗ್ರಾಂ ಹೆಂಗರ ಮಾಡಿ ಮೂರು ವರ್ಷಕ್ಕ ಏರಿಸುವಂಗ ಮಾಡಿದ್ರ, ನಮ್ಮೂರಿಗೆ ಭಾಳ ಉಪಕಾರ ಮಾಡಿದ್ಹಂಗ ಆಗ್ತೈತಿ. ಎಲ್ಲಾ ಕೆಲಸಗಳೂ ಗಟ್ಟಿಯಾಗಿ ಉಳಿಯುವ್ಹಂಗ ಪಾಯಾ ಆಗತೈತಿ..” ಹಶ್ಮತ್ ನಮ್ಮೂರಿಗೆ ಇನ್ನೆರಡು ವರ್ಷ ಗ್ರಾಮ ವಾಸ್ತವ್ಯ ಮುಂದುವರೆಸಲಿ ಎಂಬ ಒತ್ತಾಯಪೂರ್ವಕ ವಿನಂತಿ ಮಂಡಿಸಿದವರು ಮಾರುತಿಪುರದ ರಾಜು ಮುಗಳಿ.

೫ ಕಿ.ಮೀ. ದೂರದ ಯಲವಿಗಿ ಗ್ರಾ.ಪಂ.ಗೆ ಕಾಲ್ನಡಿಗೆಯಲ್ಲೇ ಪ್ರಯಾಣ

ಹಾವೇರಿ ಜಿಲ್ಲೆ, ಸವಣೂರು ತಾಲೂಕು, ಯಲವಿಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾರುತಿಪುರ (೧೨೬ ಮನೆಗಳು) ಮತ್ತು ಪರಮವಾಡಿ ತಾಂಡಾ (೨೩೧ ಮನೆಗಳು) ಹಶ್ಮತ್ ಫನಿಬಂದ್ ಅವರ ಸುಪರ್ದಿಗೆ ಸ್ಕೋಪ್ ವಹಿಸಿತ್ತು. ಮಾರುತಿಪುರದಲ್ಲಿ ಗ್ರಾಮ ವಾಸ್ತವ್ಯ; ಅಲ್ಲಿಂದ ೫ ಕಿ.ಮೀ. ದೂರದ ಯಲವಿಗಿ ಗ್ರಾ.ಪಂ.ಗೆ ಕಾಲ್ನಡಿಗೆಯಲ್ಲೇ ಕ್ರಮಿಸಿ, ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಫೆಲೊ ಹಶ್ಮತ್ ಅವರದ್ದು. ಗ್ರಾಮದ ಸಾಮಾಜಿಕ ಕಾರ್ಯಕರ್ತ ತಿಪ್ಪಣ್ಣ ತಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೈಜೋಡಿಸಿದ್ದನ್ನು, ಅಲ್ಲಿನ ಬದುಕು ಸಹ್ಯವಾಗಿಸಿಕೊಳ್ಳಲು ಸಹಾಯ ಮಾಡಿದ್ದನ್ನು ಹಶ್ಮತ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ.

WORKS CARRIED OUT BY HASMAT FANIBAND AND TEAM AT PARAMAWADI TANDA AND MARUTIPUR OF YALAVIGI GRA PAM SAVANUR TALUKA HAVERI DIST (5)ಮಾರುತಿಪುರದ ‘ಬೇಸ್‌ಲೈನ್ ಸರ್ವೇ’ಗೆ ಮುಂದಾಗುವ ಫೆಲೊ ಹಶ್ಮತ್, ತುಂಬ ಗಲೀಜಾಗಿರುವ ಊರಿಗೆ ಮೊದಲು ಸ್ವಚ್ಛತೆಯ ಅಂಗಿ ತೊಡಿಸಲು ನಿರ್ಧರಿಸುತ್ತಾರೆ. ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಶಿಪ್‌ನ ತಮ್ಮ ಎಲ್ಲ ೧೨ ಜನ ಸಹಪಾಠಿ ಫೆಲೊಗಳನ್ನು ೪ ದಿನಗಳ ಕಾಲ ಸಂಪೂರ್ಣ ಗ್ರಾಮ ಸ್ವಚ್ಛತೆಗೆ ತೊಡಗಿಸಿಕೊಳ್ಳಲು ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರಿಗೆ ಪ್ರಸ್ತಾವನೆ ಸಲ್ಲಿಸುತ್ತಾರೆ. ತುಂಬ ಖುಷಿಯಿಂದ ಒಪ್ಪಿಗೆ ನೀಡಿ ಅವರು ಮಾರುತಿಪುರದ ‘ಸ್ವಚ್ಛ / ನಿರ್ಮಲ ಗ್ರಾಮ ಭಾರತ ಅಭಿಯಾನ’ಕ್ಕೆ ಮುನ್ನುಡಿ ಬರೆಯುತ್ತಾರೆ. ಮಾರುತಿಪುರದ ಸ್ವಚ್ಛತೆಯ ಚಿತ್ರಣವನ್ನೇ ಫೆಲೊಗಳು ಬದಲಾಯಿಸುತ್ತಾರೆ!

ಯಲವಿಗಿ ಗ್ರಾಮ ಪಂಚಾಯ್ತಿ ಸದಸ್ಯರು ಹಶ್ಮತ್ ಅವರ ಪ್ರಯತ್ನ ಅಭಿನಂದಿಸಿ, ನಿತ್ಯವೂ ಗ್ರಾಮದ ರಸ್ತೆಗಳ ಕಸ ಗುಡಿಸಲು ಇಬ್ಬರು ಸ್ವಚ್ಛತಾ ರಾಯಭಾರಿಗಳನ್ನು ಯಲವಿಗಿ ಗ್ರಾಮ ಪಂಚಾಯ್ತಿ ವತಿಯಿಂದ ಮಾರುತಿಪುರಕ್ಕೆ ಸಂಬಳ ನೀಡಿ ನೇಮಕ ಮಾಡಲಾಗುತ್ತದೆ! ತನ್ಮೂಲಕ ಗ್ರಾಮದ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ಒದಗುತ್ತದೆ.

೧೨೬ ಮನೆಗಳು, ೬೨೫ ಜನಸಂಖ್ಯೆ ಹೊಂದಿದ್ದ ಮಾರುತಿಪುರಕ್ಕೆ ಹಶ್ಮತ್ ಕಾಲಿಟ್ಟಾಗ ಕೇವಲ ೧೯ ವೈಯಕ್ತಿಕ ಶೌಚಾಲಯಗಳಿದ್ದು, ಬಹುತೇಕ ಊರಿನ ಎಲ್ಲ ಜನ ಬಯಲು ಶೌಚವನ್ನೇ ತಮ್ಮ ಹಕ್ಕಾಗಿಸಿಕೊಂಡಿದ್ದರು! ಚಿಕ್ಕ ವಿಡಿಯೋ, ಶಾರ್ಟ್ ಫಿಲ್ಮ್‌ಗಳ ಮೂಲಕ ಆರೋಗ್ಯ, ಶುಚಿತ್ವ, ನೈರ್ಮಲ್ಯ ಮತ್ತು ಸುಶೌಚದ ಮಹತ್ವವನ್ನು ಗ್ರಾಮಸ್ಥರಿಗೆ ಸಮಯ ಸಿಕ್ಕಾಗಲೆಲ್ಲ ಮನವರಿಕೆ ಮಾಡುವಲ್ಲಿ ಅವರು ಯಶಸ್ವಿಯಾಗುತ್ತಾರೆ.

WORKS CARRIED OUT BY HASMAT FANIBAND AND TEAM AT PARAMAWADI TANDA AND MARUTIPUR OF YALAVIGI GRA PAM SAVANUR TALUKA HAVERI DIST (4)ಕೇವಲ ೮ ತಿಂಗಳಲ್ಲಿ ಎಲ್ಲ ೧೨೬ ಮನೆಗಳಿಗೂ ಶೌಚಾಲಯ ನಿರ್ಮಾಣಗೊಂಡು, ಬಯಲು ಶೌಚಕ್ಕೆ ಗ್ರಾಮಸ್ಥರೇ ಇತಿಶ್ರೀ ಹಾಡುತ್ತಾರೆ. ವೈಯಕ್ತಿಕ ಶೌಚಾಲಯಗಳ ಬಳಕೆಗೆ ಅವರು ಆಂದೋಲನವನ್ನೂ ಶಾಲಾ ಮಕ್ಕಳ ಮೂಲಕ ಗ್ರಾಮದಲ್ಲಿ ಹಮ್ಮಿಕೊಳ್ಳುತ್ತಾರೆ. ‘ಬಯಲು ಶೌಚ ತಪ್ಪು’ ಎಂಬುದು ಇಡೀ ಗ್ರಾಮದ ಜನರಿಗೆ ಮನವರಿಕೆಯಾಗಿ, ‘ಬಯಲು ಶೌಚ ಮುಕ್ತ ಗ್ರಾಮ’ವಾಗಿ ಮಾರುತಿಪುರ ಪರಿವರ್ತನೆಯಾಗುತ್ತದೆ!

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ಸ್ಕೋಪ್ ಮಧ್ಯದ ಒಡಂಬಡಿಕೆಯಿಂದಾಗಿ ಮಾರುತಿಪುರದ ೬ ಆಸಕ್ತ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಲು ಸಕಾಲಿಕವಾಗಿ ಹಣದ ನೆರವು ದೊರಕಿತು. ಸಾಮಾನ್ಯ ವರ್ಗಕ್ಕೆ ಸೇರಿದ ಕುಟುಂಬಕ್ಕೆ ೧೧ ಸಾವಿರ ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ೧೨,೬೦೦ ರೂಪಾಯಿ ಒದಗಿಬಂತು.

೪೦ಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯ ಕಟ್ಟಿದ ತಿರುಪತಿ ರಾಮಣ್ಣ

???????????????????????????????ತಿರುಪತಿ ರಾಮಣ್ಣ ಕಲಿವಾಳ ಎಂಬ ಸಹೃದಯಿ ವ್ಯಕ್ತಿಯ ಬಗ್ಗೆ ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕು. ಹಶ್ಮತ್ ಅವರ ಆಸಕ್ತಿ ಗಮನಿಸಿ ಸ್ವತಃ ಅವರೇ ಮುಂದೆ ನಿಂತು ೪೦ಕ್ಕೂ ಹೆಚ್ಚು ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಕೊಡುತ್ತಾರೆ. ನಿಜಕ್ಕೂ ನಮ್ಮ ಲೋಕ ಸಂಸಾರದಲ್ಲಿ ಇಂತಹ ಕಿರು ದೀಪಗಳೇ ಬೆಳಕು. ಶ್ರೀಮತಿ ಚನ್ನಮ್ಮ ಹುಲಗಪ್ಪ ಅಲ್ಲೀಪುರ ಅವರೂ ಕೂಡ ಈ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಕೈಜೋಡಿಸಿದ್ದು ಆಮೆ ಗತಿಯಲ್ಲಿ ಸಾಗುತ್ತಿದ್ದ ಯೋಜನೆ ವೇಗ ವರ್ಧಿಸಿಕೊಳ್ಳುವಂತಾಯಿತು.

ಪರಿಶಿಷ್ಟ ಜನಾಂಗದ ಭೋವಿ ಒಡ್ಡರೇ ಹೆಚ್ಚಿರುವ ಈ ಗ್ರಾಮದಲ್ಲಿ ಹಿರಿಯರು ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇ ಕಡಿಮೆ. ಆದರೂ ನಡವಳಿಕೆಯಲ್ಲಿ ಸಜ್ಜನರು. ಹಾಗಾಗಿ, ಸಮುದಾಯದ ಸಹಭಾಗಿತ್ವದಲ್ಲಿ ಹಶ್ಮತ್ ಜಾರಿಗೊಳಿಸಿದ ಅನೇಕ ಕೆಲಸಗಳಿಗೆ ಹಣ ಸಹಾಯವನ್ನೂ ಜನ ಕೈಯಿಂದ ಒದಗಿಸಿ, ಒತ್ತಾಸೆಯಾಗಿ ನಿಂತಿದ್ದು ಅವರ ಪ್ರಾಮಾಣಿಕ ಕಾಳಜಿಗೆ ಕನ್ನಡಿ. ಸ್ವತಃ ಶ್ರಮದಾನಕ್ಕೂ ಈ ಜನ ಹಿಂದೆ-ಮುಂದೆ ನೋಡಿದವರಲ್ಲ! ಈ ಕೆಲಸ ನನ್ನದಲ್ಲ.. ನಾನೇಕೆ ಮಾಡಬೇಕು..? ಎಂಬೆಲ್ಲ ಸಣ್ಣತನದ ನಡವಳಿಕೆಗೆ ಇಲ್ಲಿ ಆಸ್ಪದವೇ ಇರಲಿಲ್ಲ!

ಸ್ಕೋಪ್, ಮಾರುತಿಪುರ, ಯಲವಿಗಿ ಗ್ರಾ.ಪಂ. ಮತ್ತು ಸಮುದಾಯವೇ ಮುಂದಾಗಿ ದನ-ಕರುಗಳಿಗೆ ಕುಡಿಯಲು ಅನುವಾಗುವ ತೊಟ್ಟಿಯನ್ನು ಅಂದಾಜು ೫೬,೩೫೦ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾಗಿದೆ. ಸ್ಕೋಪ್ ೨೪,೩೫೦ ರೂಪಾಯಿ ನೀಡಿದರೆ, ಸಮುದಾಯ ೩ ಸಾವಿರ ರೂಪಾಯಿ ಜೊತೆಗೆ ಶ್ರಮದಾನ ಮಾಡಿದೆ. ಬಾಕಿ ಗ್ರಾಮ ಪಂಚಾಯ್ತಿ ಅನುದಾನ ಈ ತೊಟ್ಟಿಗೆ ವಿನಿಯೋಗವಾಗಿದೆ. ಮೂಕ ಪ್ರಾಣಿಗಳ ಬೇಡಿಕೆ ಇಲ್ಲಿ ಮಾನವೀಯತೆಯ ಸ್ಪರ್ಷದಿಂದ ಪೂರ್ಣಗೊಂಡಿದೆ.

ಶಾಲೆಗೂ ನೀರು ಒದಗಿ ಬಂತು

WORKS CARRIED OUT BY HASMAT FANIBAND AND TEAM AT PARAMAWADI TANDA AND MARUTIPUR OF YALAVIGI GRA PAM SAVANUR TALUKA HAVERI DIST (3)ಮಾರುತಿಪುರದಲ್ಲಿ ಪ್ರಾಥಮಿಕ ಸರ್ಕಾರಿ ಶಾಲೆ ಇದೆ. ೯೬ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಸಮರ್ಪಕವಾದ ಕುಡಿಯುವ ನೀರು ಮತ್ತು ಶೌಚಾಲಯ, ಮಧ್ಯಾಹ್ನ ಬಿಸಿಯೂಟ ಯೋಜನೆ ಅಡಿ ಕೈ ತೊಳೆಯಲು, ಪಾತ್ರೆ ತೊಳೆಯಲು ಸಹ ನೀರಿರಲಿಲ್ಲ. ಹಶ್ಮತ್ ಗಮನಕ್ಕೆ ಈ ಸಮಸ್ಯೆ ಬರುತ್ತಿದ್ದಂತೆ, ಸ್ಕೋಪ್‌ಗೆ ಸೌಲಭ್ಯ ಕಲ್ಪಿಸುವಂತೆ ಪ್ರಸ್ತಾವನೆ ಸಲ್ಲಿಸುತ್ತಾರೆ. ಸ್ಕೋಪ್ ಈ ಕೆಲಸಕ್ಕಾಗಿ ೮,೯೭೪ ರೂಪಾಯಿ ಧನ ಸಹಾಯ ಒದಗಿಸುತ್ತದೆ. ಸಮುದಾಯವೂ ೩ ಸಾವಿರ ರೂಪಾಯಿ ದೇಣಿಗೆ ನೀಡುತ್ತದೆ. ಯಲವಿಗಿ ಗ್ರಾಮ ಪಂಚಾಯ್ತಿಯಿಂದ ಒಂದು ರೂಪಾಯಿ ಕೂಡ ಒದಗದೇ ಇದ್ದರೂ, ಮಕ್ಕಳ ಭವಿಷ್ಯ ಅನುಲಕ್ಷಿಸಿ ಕಾಮಗಾರಿಯನ್ನು ಹಶ್ಮತ್ ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಶಾಲೆಗೆ ನೀರು ಒದಗಿಸುತ್ತಾರೆ.

ಕೂಡಲೇ ‘ವಾಷ್’ ಮಾನದಂಡಗಳ ಅಡಿ ಶಾಲಾ ಮಕ್ಕಳಿಗೆ ಸ್ವಚ್ಛವಾಗಿ ಕೈತೊಳೆಯುವ ಮಹತ್ವ, ನೈರ್ಮಲ್ಯ, ಕಿಶೋರಿಯರಿಗೆ ಸ್ವಚ್ಛತೆಯ ಪಾಠ, ಶೌಚ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಆಂದೋಲನ ಹಶ್ಮತ್ ಹಮ್ಮಿಕೊಳ್ಳುತ್ತಾರೆ. ಮಕ್ಕಳನ್ನೇ ಬಳಸಿಕೊಂಡು ಗ್ರಾಮದ ತುಂಬ ಸ್ವಚ್ಛವಾಗಿ ಕೈ ತೊಳೆಯುವ ಮಹತ್ವ ಸಾರುವ ಜಾಥಾ ಸಹ ನಡೆಯಿತು. ಪರಿಣಾಮವಾಗಿ, ಶಾಲೆ ಸೇರಿದಂತೆ ಹಲವೆಡೆ ಕೈ ತೊಳೆಯುವ ತೊಟ್ಟಿಗಳು ನಿರ್ಮಾಣಗೊಂಡು, ಬಳಕೆಯಾಗುವಂತಾಯಿತು.

ಹೆಚ್ಚುವರಿ ಹೊಣೆ ಪರಮವಾಡಿ ಲಂಬಾಣಿ ತಾಂಡಾ

WORKS CARRIED OUT BY HASMAT FANIBAND AND TEAM AT PARAMAWADI TANDA AND MARUTIPUR OF YALAVIGI GRA PAM SAVANUR TALUKA HAVERI DIST (2)ಹೆಚ್ಚುವರಿ ಹೊಣೆ ಪರಮವಾಡಿ ಲಂಬಾಣಿ ತಾಂಡಾ ಹಶ್ಮತ್ ಪಾಲಿಗಿತ್ತು. ಮಾರುತಿಪುರದ ಜೊತೆಗೆ ಇಲ್ಲಿಯ ಕೆಲಸಗಳನ್ನೂ ಜಂಟಿಯಾಗಿ ನಿರ್ವಹಿಸುತ್ತ ಸಾಗಿದ ಹೆಗ್ಗಳಿಕೆ ಅವರದ್ದು.

೨೩೧ ಮನೆಗಳು, ೧೮೦ ಕುಟುಂಬಗಳು, ಅಂದಾಜು ೧೩೭೫ ಜನ ಸಂಖ್ಯೆ ಹೀಗೆ.. ಒಂದಕ್ಕೊಂದು ತಾಳೆಯಾಗದ ಸರ್ಕಾರಿ ಸಮೀಕ್ಷೆಯ ಅಂಕಿ ಸಂಖ್ಯೆಗಳ ಜಾತ್ರೆಯಲ್ಲಿ ಫೆಲೊ ಹಶ್ಮತ್ ೬ ಬಾರಿ ಈ ತಾಂಡಾದ ಸಮೀಕ್ಷೆ ಕೈಗೊಂಡು ಯೋಜನೆ ನಿರೂಪಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅಂತೂ ಕೊನೆಗೆ ಕೇವಲ ೯೬ ವೈಯಕ್ತಿಕ ಶೌಚಾಲಯಗಳಿದ್ದು, ಶೇ.೨೦ ರಷ್ಟು ಮಾತ್ರ ಬಳಕೆಯಲ್ಲಿರುವ ಸಂಗತಿ ಬಯಲಿಗೆ ಬರುತ್ತದೆ. ಬಯಲು ಶೌಚ ಇಲ್ಲಿನ ಜನರಿಗೆ ಖಯ್ಯಾಲಿ ಎಂಬ ಬೇಸರದ ಸಂಗತಿಯೂ ಇವರ ನಿದ್ದೆಗೆಡಿಸುತ್ತದೆ.

ಅಂತೂ ಗ್ರಾಮ ಪಂಚಾಯ್ತಿ ಸದಸ್ಯರನ್ನು, ಸಮುದಾಯದ ಮುಖಂಡರನ್ನು ಮತ್ತು ವಿಶೇಷವಾಗಿ ಮಹಿಳೆಯರಿಗೆ ವೈಯಕ್ತಿಕ ಶೌಚಾಲಯದ ಮಹತ್ವ ತಿಳಿಸಿ, ಮನೆಗೊಂದು ಶೌಚಾಲಯ ಕಟ್ಟಿಕೊಳ್ಳುವಂತೆ ಮತ್ತು ಸರ್ಕಾರಿ ಅನುದಾನದಲ್ಲಿ ಕಟ್ಟಿದ ಶೌಚಾಲಯ ಬಳಸುವಂತೆ ಆಂದೋಲನವನ್ನೇ ರೂಪಿಸುತ್ತಾರೆ ಸ್ಕೋಪ್ ಫೆಲೊ ಹಶ್ಮತ್.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚಂದ್ರ ಲಮಾಣಿ ಅವರ ಸಕಾಲಿಕ ನೆರವಿನಿಂದ, ಗ್ರಾಮ ಪಂಚಾಯ್ತಿ ಸದಸ್ಯರ ಮುತುವರ್ಜಿಯಿಂದ ಪರಮವಾಡಿ ಲಂಬಾಣಿ ತಂಡಾದಲ್ಲಿ ಕೇವಲ ೬ ತಿಂಗಳ ಅವಧಿಯಲ್ಲಿ ೧೩೮ ವೈಯಕ್ತಿಕ ಶೌಚಾಲಯಗಳು ನಿರ್ಮಾಣಗೊಳ್ಳುತ್ತವೆ! ಬಳಕೆಗೂ ಅಣಿಗೊಳ್ಳುತ್ತವೆ. ವಿಶೇಷ ಎಂದರೆ ಈಗ ಇಡೀ ತಾಂಡಾ ಬಯಲು ಶೌಚ ಮುಕ್ತವಾಗಿದ್ದು, ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಹಂತದಲ್ಲಿದೆ! ಪುರಸ್ಕಾರ ಲಭಿಸುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪರಮವಾಡಿ ಪ್ರತಿನಿಧಿ, ಯಲವಿಗಿ ಗ್ರಾ.ಪಂ. ಸದಸ್ಯ ಪ್ರಕಾಶ ಲಮಾಣಿ.

ಸ್ಕೋಪ್, ಮುಂದಾಳತ್ವ ವಹಿಸಿದ್ದರಿಂದ ಗ್ರಾಮ ಪಂಚಾಯ್ತಿ ಕರ್ಣಧಾರತ್ವದಲ್ಲಿ ಹಾವೇರಿ ಜಿಲ್ಲಾ ಪಂಚಾಯ್ತಿ ಮತ್ತು ಕರ್ನಾಟಕ ಅಭಿವೃದ್ಧಿ ಯೋಜನೆ ಅಡಿ, ಮನೆ-ಮನೆಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವ ಮತ್ತು ನಲ್ಲಿ ಜೋಡಿಸಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಹಸಿರು ನಿಶಾನೆ ಕಾಲಮಿತಿಯಲ್ಲಿ ದೊರಕಿದ್ದು ಸಹ ಫೆಲೊ ಹಶ್ಮತ್ ಸಾಧನೆ.

ಈ ಯೋಜನೆಗೆ ಬೆನ್ನೆಲುಬಾಗಿ, ಪುಟ್ಟದಾದ ಶುದ್ಧೀಕರಣ ಘಟಕ ಮತ್ತು ಸಣ್ಣ ಸಂಗ್ರಹ ತೊಟ್ಟಿ ನಿರ್ಮಿಸಲು ಸ್ಕೋಪ್ ಮನಸ್ಸು ಮಾಡುತ್ತದೆ. ಸ್ಕೋಪ್ ಸ್ವತಃ ೨೧,೯೭೦ ರೂಪಾಯಿ, ಗ್ರಾಮ ಪಂಚಾಯ್ತಿ ೫೩,೯೭೦ ರೂಪಾಯಿ ವಿನಿಯೋಗಿಸಿ ಕಾಮಗಾರಿ ಪೂರ್ಣಗೊಳಿಸುತ್ತವೆ. ಸದ್ಯ ಈ ಘಟಕ ಬಳಕೆಯಲ್ಲಿರುವುದು ಗಮನಾರ್ಹ. ಅನೇಕ ಕುಟುಂಬಗಳಿಗೆ ಈಗ ನೀರಿನಾಸರೆ ಈ ಘಟಕ ಒದಗಿಸುತ್ತಿದೆ.

ಫೆಲೊ ಹಶ್ಮತ್ ಇಲ್ಲಿಗೇ ನಿಲ್ಲುವುದಿಲ್ಲ;

SCOPE article 8 - for portalತಾಂಡಾದ ಏಕೈಕ ಪ್ರಾಥಮಿಕ ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಾರೆ. ಕುಡಿಯುವ ನೀರಿನ ಸಮಸ್ಯೆ ಕಂಡು, ಸ್ಕೋಪ್ ಸಹಯೋಗದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸುತ್ತಾರೆ. ಅಂದಾಜು ೮,೦೪೧ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ಕೈತೊಳೆಯುವ ತೊಟ್ಟಿ ದುರಸ್ತಿಗೊಂಡು, ಮಕ್ಕಳ ಖುಷಿಗೆ ಪಾರವೇ ಇಲ್ಲ!

ಮಾರುತಿಪುರದ ಪ್ರತಿನಿಧಿ, ಯಲವಿಗಿ ಗ್ರಾಮ ಪಂಚಾಯ್ತಿ ಸದಸ್ಯ ರಾಜು ಮುಗಳಿ ಹಾಗೂ ಪರಮವಾಡಿ ತಾಂಡಾದ ಪ್ರತಿನಿಧಿ, ಯಲವಿಗಿ ಗ್ರಾಮ ಪಂಚಾಯ್ತಿ ಸದಸ್ಯ  ಪ್ರಕಾಶ ಲಮಾಣಿ ಅವರ ಸಹಕಾರದಲ್ಲಿ ಹಶ್ಮತ್ ಎರಡೂ ಗ್ರಾಮಗಳ ‘ತಿಪ್ಪೆ ಸ್ವಚ್ಛತಾ ಆಂದೋಲನ’ಕ್ಕೆ ಮುಂದಾಗುತ್ತಾರೆ. ಕಳೆದ ಮೂರು ದಶಕಗಳಿಂದ ಈ ಗ್ರಾಮಗಳಲ್ಲಿ ತಿಪ್ಪೆಗಳನ್ನು ಸ್ವಚ್ಛಗೊಳಿಸದೇ, ಅನಾರೋಗ್ಯ ಪರಿಸರದಲ್ಲಿಯೇ ಜನ ಬದುಕಿ ಉಳಿದಿದ್ದರು!

ಫೆಲೊ ಹಶ್ಮತ್ ಸಮುದಾಯದ ಸಹಭಾಗಿತ್ವದಲ್ಲಿ ತಿಪ್ಪೆ ಸ್ವಚ್ಛತಾ ಆಂದೋಲನಕ್ಕೆ ಅಣಿಯಾಗುತ್ತಾರೆ. ಜನರಿಗೆ ಸ್ವಚ್ಛತೆಯ ಅರಿವು ಜಾಗ್ರತವಾಗುತ್ತದೆ. ಸ್ಕೋಪ್ ೧೦,೮೦೦ ರೂಪಾಯಿ, ಯಲವಿಗಿ ಗ್ರಾಮ ಪಂಚಾಯ್ತಿ ೨೦ ಸಾವಿರ ರೂಪಾಯಿಗಳನ್ನು ಈ ಅಭಿಯಾನಕ್ಕೆ ವಿನಿಯೋಗಿಸಿ, ಗ್ರಾಮಸ್ಥರಿಂದ ಶ್ರಮದಾನಕ್ಕೆ ಮನವಿ ಮಾಡುತ್ತವೆ. ಕೇವಲ ಮೂರೇ ತಿಂಗಳ ಅವಧಿಯಲ್ಲಿ ತಿಪ್ಪೆಗಳೆಲ್ಲ ಹೊಲಕ್ಕೆ ಸಾಗಣೆಗೊಂಡು ಗ್ರಾಮಗಳ ಆರೋಗ್ಯ ವರ್ಧಿಸುತ್ತದೆ. ಗ್ರಾಮ ಪರಿಸರ ಸುಂದರವಾಗುತ್ತದೆ.

ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಹಶ್ಮತ್, ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂ ಸೇರುವ ಮುನ್ನ, ಇಂಡಿಯಾ ಡೆವಲಪ್‌ಮೆಂಟ್ ಫೌಂಡೇಷನ್ – ಐಡಿಎಫ್‌ನಲ್ಲಿ ಕ್ಷೇತ್ರ ಸಂಯೋಜಕರಾಗಿ ಸುಮಾರು ೮ ತಿಂಗಳುಗಳ ಕಾಲ ದುಡಿದ ಅನುಭವವೂ ಅವರ ಬೆನ್ನಿಗಿತ್ತು. ತಮ್ಮೆಲ್ಲ ಸಾಧನೆಗೆ ಕಾರಣ ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರ ಪ್ರೋತ್ಸಾಹ ಮತ್ತು ಬೆಂಬಲವೇ ಕಾರಣ ಎನ್ನುತ್ತಾರೆ ಹಶ್ಮತ್.

ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂನಿಂದ ಗ್ರಾಮ ವಾಸ್ತವ್ಯದ ಸುಖ ಅನುಭವಿಸುವಂತಾಗಿ, ಕನಸಿನ ಎರಡು ಮಾದರಿ ಗ್ರಾಮಗಳನ್ನು ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅರ್ಹವಾಗುವ ರೀತಿಯಲ್ಲಿ ರೂಪಿಸುವಲ್ಲಿ ಯಶಸ್ವಿಯಾಗುವಂತಾಗಿದ್ದರೆ, ಈ ಶ್ರಮದ ಹಿಂದೆ ಸಾವಿರಾರು ಜನರ ಬೆವರಿನ ಪಾಲಿದೆ, ಗ್ರಾಮಸ್ಥರ ಆಶೀರ್ವಾದವಿದೆ ಎಂದು ವಿನೀತರಾಗಿ ನುಡಿಯುತ್ತಾರೆ ಹಶ್ಮತ್.

ನಿಜಕ್ಕೂ ಹಶ್ಮತ್ ಫನಿಬಂದ್ ಇಳೆಯ ಕೊಳೆ ತೊಳೆದ ತಾಯಿ. ಫಲೊ ಹಶ್ಮತ್ ಅವರ ಕೆಲಸ ಹತ್ತಿರದಿಂದ ನೋಡಿರುವ, ಕಳೆದ ಒಂದು ವರ್ಷ ಅವರನ್ನು ಗಮನಿಸಿರುವ ಮಾರುತಿಪುರದ ಅಂಗನವಾಡಿ ಕಾರ್ಯಕರ್ತೆ ತೇಜಸ್ವಿನಿ ನಾಯಕ್ ಹೇಳಿದ್ದು.. “ಸರ್.. ಹಶ್ಮತ್ ಅಲ್ಲ.. ಹಿಮ್ಮತ್; ತುಂಬ ಹಟವಾದಿ. ಹಿಡಿದ ಕೆಲಸ ಆಗುವ ವರೆಗೆ ಬಿಡುವ ಮಾತಿಲ್ಲ..!”

****************************************************************************************************************************

ashwini dhagateಫೆಲೊ ಹಶ್ಮತ್ ಫನಿಬಂದ್ ಅವರ ಅನಿಸಿಕೆ –

“ಸ್ನಾತಕೋತ್ತರ ಪದವಿಯನ್ನು ಸಮಾಜ ಕಾರ್ಯ ವಿಷಯದಲ್ಲಿ ಪಡೆದಿದ್ದರೂ, ಡಿಸ್ಟಿಂಕ್ಷನ್ ರಿಸಲ್ಟ್ ಹೊಂದಿದ್ದರೂ ನನ್ನ ಅನೇಕ ಸಹಪಾಠಿಗಳು ಮತ್ತು ಹಿರಿಯ ಗೆಳೆಯರು ನೌಕರಿ ಸಿಗದೇ ಒದ್ದಾಡುತ್ತಿದ್ದಾರೆ. ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್ ನನಗೆ ಸಿಕ್ಕು ವೃತ್ತಿಪರತೆ ಮೈಗೂಡಿಸಿಕೊಂಡಿದ್ದರಿಂದ, ಒಂದೂ ದಿನ ನಾನು ಖಾಲಿ ಉಳಿಯಲಿಲ್ಲ ಎಂಬುದು ಹೆಮ್ಮೆಯ ಸಂಗತಿ. ತಳ ಮಟ್ಟದ, ಶ್ರೀ ಸಾಮಾನ್ಯನ ಸಮಸ್ಯೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವಲ್ಲಿ ಮತ್ತು ಲಭ್ಯ ಸಂಪನ್ಮೂಲಗಳಲ್ಲೇ ವ್ಯವಸ್ಥಿತವಾಗಿ ಪರಿಹರಿಸುವಲ್ಲಿ ಸಮುದಾಯಗಳ ಸಹಭಾಗಿತ್ವ ಬಹಳ ಮಹತ್ವದ್ದು ಎಂಬುದನ್ನು ಕಲಿತೆ. ಮೆಂಟರ್ ಡಾ. ಪ್ರಕಾಶ ಭಟ್ ಅವರಿಗೆ ಈ ಅನುಭವಗಳಿಗಾಗಿ ನಾನು ಋಣಿ.”

ಸಂಪರ್ಕ: hashmat.faniband@gmail.com / +91 89710 11629

****************************************************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

 ಇದು ಸ್ಕೋಪ್-ಅರ್ಘ್ಯಂವಾಟ್ಸ್ಯಾನ್ಫೆಲೋಷಿಪ್ ಪ್ರೋಗ್ರಾಂಯಶೋಗಾಥೆಯ ಸರಣಿಯ ೮ನೆಯ ((ಯಲವಿಗಿ) -೨) ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*