ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಎರಡು ರಾಜ್ಯಗಳ ನಡುವಣ ಬಿಕ್ಕಟ್ಟೂ, ಒಂದು ನದಿಯ ಕಥೆಯೂ……

ಗೋವಾ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಮಹದಾಯಿ ನೀರಿನ ಹಂಚಿಕೆಯ ಬಗ್ಗೆ ಪುನಃ ಸೆಣೆಸಾಟ ಪ್ರಾರಂಭವಾಗಿದೆ.  ಇದನ್ನು ಕುರಿತಾಗಿ ಒಮ್ಮತಕ್ಕೆ ತಲುಪಲು ಎಷ್ಟು ಸಮಯ ಬೇಕಾಗುವುದೋ?

sabita kaushal - 1೨೫,೦೦೦ ಜನಸಂಖ್ಯೆಯಿರುವ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣವು, ಪಶ್ಚಿಮಾಭಿಮುಖವಾಗಿ ಹರಿಯುವ ಮಹದಾಯಿ ನದಿಯಿಂದ ನೀರು ಬೇಕೆಂಬ ರೈತರ ಪ್ರತಿಭಟನೆಯ ಕೇಂದ್ರಬಿಂದುವಾಗಿದೆ.  ತಮ್ಮ ಪಾಲಿನ ನೀರಿಗಾಗಿ ಬೇಡಿಕೆ ಒಡ್ದಲು ನೆರೆದಿದ್ದ ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ, ರೈತರ ಮೇಲೆ ನಡೆದ ಪೊಲೀಸರ ಹಲ್ಲೆಯ ಅಘಾತಕಾರಿ ಸುದ್ದಿಯು ಜುಲೈ ೩೦, ೨೦೧೬ರಂದು ಕರ್ನಾಟಕ ರಾಜ್ಯದ ಜನತೆಗೆ ಎದುರಾಯಿತು.

ಹಲವಾರು ದಶಕಗಳಿಂದ, ಕರ್ನಾಟಕ ಹಾಗೂ ಗೋವಾ ರಾಜ್ಯಗಳೆರಡೂ ತಮ್ಮ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗಾಗಿ ಪರಸ್ಪರ ಅವಲಂಬಿತವಾಗಿವೆ.  ಆದರೆ ಕಳೆದ ಕೆಲವು ವರ್ಷಗಳಿಂದ, ದಕ್ಷಿಣ ಭಾರತದ ಈ ರಾಜ್ಯಗಳು ಮಹದಾಯಿ ನದಿಯ ತಮ್ಮ ಪಾಲಿನ ನೀರಿನ ಹಂಚಿಕೆಯ ವಿಷಯದಲ್ಲಿ ಹೋರಾಟದ ಹಾದಿಯನ್ನು ಹಿಡಿದಿವೆ.  ಎಲ್ಲ ಪಕ್ಷಗಳೂ ಪರಸ್ಪರ ದೂಷಣೆಯಲ್ಲಿ ತೊಡಗಿದ್ದು, ಈ ದೀರ್ಘಕಾಲೀನ ನೀರ ಹಂಚಿಕೆಯ ವಿವಾದವು ರಾಜಕೀಯ ತಿರುವನ್ನು ಪಡೆದಿದೆ.  ಆದರೆ, ಇದರಿಂದ ಈ ವಿವಾದದ ನಿಜವಾದ ಬಿಸಿ ತಾಕಿರುವುದು ಉತ್ತರ ಕರ್ನಾಟಕದ ಬಡ ರೈತರು ಹಾಗೂ ಪಾರಿಸಾರಿಕವಾಗಿ ಸೂಕ್ಷ್ಮವಾದ ಪಶ್ಚಿಮ ಘಟ್ಟಗಳಿಗೆ.

ಏನಿದು, ಈ ಮಹದಾಯ ನೀರು ವಿವಾದ?

sabita kaushal - 2ಮಳೆ-ಪೋಷಿತ ನದಿಯಾದ ಮಹದಾಯಿಯನ್ನು ಗೋವಾದಲ್ಲಿ ಮಾಂಡೋವಿ ಎಂದು ಕರೆಯಲಾಗುತ್ತಿದ್ದು,  ತಮ್ಮ ನೀರಿನ ಅಗತ್ಯತೆಗಳಿಗಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ಈ ನದಿಯ ನೀರನ್ನು ಹಂಚಿಕೊಳ್ಳಲಾಗುತ್ತದೆ.  ಅರಬ್ಬಿ ಸಮುದ್ರವನ್ನು ಸೇರುವ ಮುನ್ನ, ಈ ನದಿಯು ಕರ್ನಾಟಕದಲ್ಲಿ ೩೫ ಕಿಲೋಮೀಟರ್ ಹರಿದು, ನಂತರ ಗೋವಾದಲ್ಲಿ ೫೨ ಕಿಲೋಮೀಟರ್‌ನಷ್ಟು ಹರಿಯುತ್ತದೆ.  ಅದರ ಭೌಗೋಳಿಕ ಸ್ಥಾನವನ್ನು ಪರಿಗಣಿಸಿದಾಗ, ಗೋವಾ ರಾಜ್ಯಕ್ಕೆ ನದಿಯ ನೀರಿನ ಮೇಲೆ ಮೇಲುಗೈ ಇದೆ. ಕರ್ನಾಟಕದ ಭೀಮಗಢದಲ್ಲಿ ಉಗಮವಾದ ಈ ನದಿಯು ಕೇವಲ ನೀರಿನ ಬುಗ್ಗೆಯ ಗುಚ್ಛದಂತಿದೆ.  ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೆಗಾಂವ್ ಗ್ರಾಮದಲ್ಲಿ ಅದು ನದಿಯಾಗಿ ರೂಪುಗೊಳ್ಳುತ್ತದೆ.  ತಮ್ಮೆಲ್ಲ ನೀರಿನ ಅಗತ್ಯಗಳಿಗಾಗಿ ಉತ್ತರ ಕರ್ನಾಟಕದ ಪ್ರದೇಶಗಳ ಜೊತೆಗೆ ಮಹಾರಾಷ್ಟ್ರ ಮತ್ತು ಗೋವಾದ ಗಡಿ ಪ್ರದೇಶಗಳು ಮಹದಾಯಿ ನದಿ ತಪ್ಪಲನ್ನು ಅವಲಂಬಿಸಿವೆ.

ಮಹದಾಯಿ ನದಿ ತಿರುವಿನ ಯೋಜನೆಯನ್ನು ಮೊದಲನೆಯದಾಗಿ ೧೯೭೦ರಲ್ಲಿ ಎಸ್.ಜಿ. ಬಾಳೇಕುಂದ್ರಿಯವರು ರೂಪಿಸಿದರು.  ಮಲಪ್ರಭಾ ನದಿಗೆ ನೀರನ್ನು ಬಿಟ್ಟು, ನಂತರ ಈ ನೀರನ್ನು ಧಾರವಾಡ ಜಿಲ್ಲೆಯಲ್ಲಿರುವ ನವಿಲತೀರ್ಥ ಅಣೆಕಟ್ಟಿನಲ್ಲಿ ಶೇಖರಣೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.  ಮೂರು ಅಥವಾ ನಾಲ್ಕು ಬಾರಿ ಹೊರತುಪಡಿಸಿದರೆ, ೧೯೭೦ರ ದಶಕದಲ್ಲಿ ನಿರ್ಮಾಣ ಮಾಡಲಾದ ಈ ಅಣೆಕಟ್ಟು ಸಂಪೂರ್ಣವಾಗಿ ತುಂಬಿಲ್ಲ.  ಹಾಗಾಗಿ, ಮಹದಾಯಿಯ ನೀರನ್ನು ಇಲ್ಲಿಗೆ ತಿರುಗಿಸುವ ಆಸಕ್ತಿಯನ್ನು ಕರ್ನಾಟಕ ಸರ್ಕಾರವು ಹೊಂದಿತ್ತು.  ಬೇಸಿಗೆ ತಿಂಗಳುಗಳಲ್ಲಿನ ಏರುತ್ತಿರುವ ನೀರಿನ ಅಭಾವದೊಡನೆ ವರ್ಷದಿಂದ ವರ್ಷ ಬೀಳುವ ಮುಂಗಾರಿನ ಅನಿಶ್ಚಿತತೆಯಿಂದಾಗಿ, ರಾಜ್ಯಕ್ಕೆ ಪ್ರಸ್ತುತ ಬರುತ್ತಿರುವ ನೀರಿನಿಂದ ಉತ್ತರ ಕರ್ನಾಟಕ ರಾಜ್ಯದ ನೀರಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದೇ ಹೋಯಿತು.  ಆಗ, ನದಿಯನ್ನು ತಿರುಗಿಸಬೇಕೆಂದು ಕರ್ನಾಟಕವು ಆಗ್ರಹ ಪಡಿಸಲು ಪ್ರಾರಂಭಿಸಿತು.

sabita kaushal - 5ಹುಬ್ಬಳ್ಳಿ ಮತ್ತು ಧಾರವಾಡ, ಹಾಗೂ ಅಣೆಕಟ್ಟಿನ ಸುತ್ತಮುತ್ತಲಿನ ೧೮೦ ಗ್ರಾಮಗಳ ತೀವ್ರ ನೀರಿನ ಅಭಾವವನ್ನು ನೀಗಿಸಲು, ಮಹದಾಯಿ ತಪ್ಪಲಿಗೆ ಕರ್ನಾಟಕವು ನೀಡುವ ಕೊಡುಗೆಯ ಕೇವಲ ೭.೫೬ ಟಿಎಮ್‌ಸಿ ಅಡಿಯಷ್ಟು ನೀರನ್ನು, ಮಹದಾಯಿ ನದಿಯಿಂದ ಮಲಪ್ರಭಾ ಅಣೆಕಟ್ಟಿಗೆ ತಿರುಗಿಸಬೇಕೆಂಬ ಬೇಡಿಕೆಯಿಂದ ಪ್ರಸ್ತುತ ವಿವಾದವು ಪ್ರಾರಂಭವಾಗಿದೆ.  ಜಲ ಸಂಪನ್ಮೂಲ ಮಂತ್ರಾಲಯದಿಂದ ೨೦೦೨ರಲ್ಲಿ ಅಗತ್ಯವಾದ ಅನುಮೋದನೆಯನ್ನು ಪಡೆದ ನಂತರ, ಮಹದಾಯಿಯ ಉಪನದಿಗಳಾದ ಕಳಸಾ ಹಾಗೂ ಬಂಡೂರಿಯ ಮೇಲೆ ಎರಡು ಬ್ಯಾರಾಜ್‌ಗಳನ್ನು ಕಟ್ಟುವ ತನ್ನ ಯೋಜನೆಯನ್ನು ಕರ್ನಾಟಕವು ಘೋಷಿಸಿತು.  ಆದರೆ, ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿ, ಅದಕ್ಕೆ ತಡೆ ಒಡ್ಡುವಂತೆ ಗೋವಾ ಸರ್ಕಾರವು ಅದೇ ವರ್ಷ ಪರಮೋಚ್ಛ ನ್ಯಾಯಾಲಯದ ಮೊರೆ ಹೋಯಿತು. ಆದರ ನೀರಿನ ಅಗತ್ಯಗಳ ಮೇಲೆ ಪ್ರಭಾವ ಬೀರುವುದರೊಂದಿಗೆ, ಪಶ್ಚಿಮ ಘಟ್ಟಗಳ ಸೂಕ್ಷ ಪರಿಸರದ ಮೇಲೂ ಅದು ಪ್ರಭಾವ ಬೀರುವುದೆಂದು ಗೋವಾ ನಂಬಿದೆ.  ಈ ವಿಷಯವನ್ನು ಪರಿಶೀಲಿಸಲು ೨೦೧೦ರಲ್ಲಿ ಮಹದಾಯಿ ಜಲ ವಿವಾದ  ನ್ಯಾಯಮಂಡಳಿಯನ್ನು ಸ್ಥಾಪಿಸಲಾಯಿತು.  ನದಿ ತಿರುವಿನ ಕರ್ನಾಟಕದ ಬೇಡಿಕೆಯನ್ನು ನ್ಯಾಯಮಂಡಳಿ ತಿರಸ್ಕರಿಸಿದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕವು ಹೊತ್ತಿ ಉರಿಯಿತು.

ನೀರಿನ ಪ್ರಸ್ತುತ ಪರಿಸ್ಥಿತಿ

ನದಿಯ ತಿರುವಿಗಾಗಿ, ಕಳಸಾ-ಬಂಡೂರಿಯಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯವು ಖಾನಾಪುರ ತಾಲ್ಲೂಕಿನ ಮಲಪ್ರಭಾ ನದಿಯ ಜಲಾನಯನ ಪ್ರದೇಶದ ಮೇಲೆ ಪ್ರಭಾವ ಬೀರಿದೆ.  ಮಲಪ್ರಭಾ ನದಿಯ ಉಗಮ ಸ್ಥಾನದ ಸುತ್ತಮುತ್ತಲಿನ ಬಾವಿಗಳೆಲ್ಲವೂ ಒಣಗುತ್ತಿವೆಯೆಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಇರುವ ದೀರ್ಘಕಾಲೀನ ಬರ ಪರಿಸ್ಥಿತಿಯೂ ಇದಕ್ಕೆ ಕಾರಣವಾಗಿದ್ದು, ರೈತರ ಪ್ರತಿಭಟನೆಯು ತೀವ್ರವಾಗಲೂ ಇದಕ್ಕೆ ಕಾರಣವಾಗಿದೆ.

ಕಳೆದ ಒಂದು ವರ್ಷದಿಂದ, ಪ್ರತಿಭಟನಾ-ನಿರತ ರೈತರು ಹಾಗೂ ಕನ್ನಡಪರ ಕ್ರಿಯಾವಾದಿ ಗುಂಪುಗಳು ನೀಡಿದ ಬಂದ್ ಕರೆಯಿಂದಾಗಿ,  ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಧಾರವಾಡ, ಗದಗ, ಬೆಳಗಾವಿ ಹಾಗೂ ಹಾವೇರಿ ಪ್ರಭಾವಿತವಾಗಿವೆ.  ಅಪಾರ ಆರ್ಥಿಕ ನಷ್ಟವಾಗುವುದರೊಂದಿಗೆ, ಈ ಪ್ರತಿಭಟನೆಗಳು ಕರ್ನಾಟಕದ ಬಗೆಗೆ ತಪ್ಪು ಚಿತ್ರವಣವನ್ನು ಬಿಂಬಿಸುತ್ತವೆಂದು ಈ ಪ್ರದೇಶದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಗೋವಾದ ನೈಸರ್ಗಿಕ ಕಳಕಳಿಗಳು

sabita kaushal - 4ಮತ್ತೊಂದೆಡೆ, ಗೋವಾ ರಾಜ್ಯಕ್ಕೆ ಮಹಾದಾಯಿ ಬಚಾವೋ ಆಂದೋಲನದ ಅಡಿಯಲ್ಲಿ ಒಗ್ಗೂಡಿದ ಪರಿಸರವಾದಿಗಳ ಬಲಿಷ್ಠ ಗುಂಪಿನ ಬೆಂಬಲವಿದ್ದು, ಯಾವುದೇ ರೀತಿಯ ನದಿಯ ತಿರುವಿಗೆ ಅನುಮತಿ ನೀಡಬಾರದೆಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.  ಬೆಳಗಾವಿಯ ಅರ್ಜಿದಾರರ ಪೈಕಿ ಒಬ್ಬರಾದ ರವೇಂದ್ರ ಕುಮಾರ್ ಸೈನಿ ಅವರ ಪ್ರಕಾರ, ಗೋವಾದ ೪೩ ಪ್ರತಿಶತದಷ್ಟು ನೀರಿನ ಅಗತ್ಯಗಳನ್ನು ಮಹದಾಯಿ ನದಿಯು ಪೂರೈಸುತ್ತಿದ್ದು, ಮಹದಾಯಿ ನದಿ ವ್ಯವಸ್ಥೆ ಅಥವಾ ಅದರ ಪ್ರಮುಖ ಉಪನದಿಯಾದ ಕಳಸಾದಲ್ಲಿ ಮಾಡಲಾದ ಯಾವುದೇ ಬದಲಾವಣೆಯು, ರಾಜ್ಯದ ನೀರಿನ ಅಗತ್ಯಗಳ ಮೇಲೆ ಪ್ರಭಾವ ಬೀರುವುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಕುಡಿಯುವ ನೀರಿ ಹಾಗೂ ನೀರಾವರಿಯನ್ನು ಹೊರತುಪಡಿಸಿ, ಅದು ಮೀನುಗಾರಿಕೆ ಉದ್ಯಮದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.  ಮೇಲ್ದಂಡೆಯ ಮೇಲೆ ನಿರ್ಮಾಣ ಮಾಡಲಾದ ಅಣೆಕಟ್ಟಿನಿಂದ, ನದಿಯ ಅಳಿವೆಯ ಭೂಮಿಯಲ್ಲಿನ ಕ್ಷಾರಾಂಶವನ್ನು ಬದಲಿಸುತ್ತದೆ.  ಕ್ಷಾರತೆಯಲ್ಲಿ ಆಗುವ ಚಿಕ್ಕ ಬದಲಾವಣೆಗಳೂ ಕೂಡ, ಅಪೂರ್ವವಾದ ಜಲ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರುತ್ತದೆ,” ಎಂದು ಅವರು ಹೇಳುತ್ತಾರೆ.  ನದಿಯ ನೀರನ್ನು ತಿರುಗಿಸಿ, ಅದನ್ನು ಅಣೆಕಟ್ಟಿನಲ್ಲಿ ಶೇಖರಿಸುವುದನ್ನು ಕುರಿತಾಗಿ ಮಾತನಾಡುತ್ತ, ಅವರು, “ಕಳಸಾ, ಬಂಡೂರಿ ಅಥವಾ ಹಲ್ತರಾ ಉಪನದಿಗಳಲ್ಲಿನ ನೀರಿನ ಲಭ್ಯತೆಯು ಅತ್ಯಂತ ಕಡಿಮೆ ಇದೆ.  ಹಾಗಾಗಿ, ವಾಸ್ತವದಲ್ಲಿ ಎಷ್ಟು ನೀರು ಅಣೆಕಟ್ಟನ್ನು ತಲುಪಲು ಸಾಧ್ಯ? ಈ ತಾಣಗಳಲ್ಲಿ ೧೦೦ ಅಡಿ ಆಳದ ನಾಲೆಗಳ ನಿರ್ಮಾಣವು ಈಗಾಗಲೇ ಮಲಪ್ರಭಾ ನದಿಯ ಮೂಲದ ಪರಿಸರ ವ್ಯವಸ್ಥೆಯನ್ನು ಈಗಾಗಲೇ ನಾಶಮಾಡಿದೆ,” ಎನ್ನುತ್ತಾರೆ ಸೈನಿ.

ಪ್ರವಾಸೋದ್ಯಮದ ಮೇಲೆ ಗೋವಾ ರಾಜ್ಯದ ಅರ್ಥಿಕತೆಯು ಅವಲಂಬಿತವಾಗಿದ್ದು, ನೀರಿನ ಅಭಾವವು ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದೆಂದು ಗೋವಾ ಸರ್ಕಾರವು ಹೇಳಿದೆ.  ಸರ್ಕಾರದ ಪ್ರಕಾರ, ಈ ಯೋಜನೆಯಿಂದ ೭೦೦ ಹೆಕ್ಟೇರುಗಳಿಗೂ ಹೆಚ್ಚಿನ ಅರಣ್ಯವು ಮುಳುಗಡೆ ಅಗಿ, ಸುಮಾರು ೬೦,೦೦೦ ಮರಗಳು ನಾಶವಾಗಿ, ತನ್ಮೂಲಕ ಭೀಮಗಢದ ವನ್ಯಜೀವಿ ಅಭಯಾರಣ್ಯವು ಪ್ರಭಾವಿತವಾಗುತ್ತದೆ.

ಕರ್ನಾಟಕವು ಅದರ ಪಾಲು ನೀಡುವುದು

sabita kaushal - 3 - for mukhaputaನಿರ್ಣಯದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವ ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿಯ ಸಂಚಾಲಕರಾದ ವಿಕಾಸ್ ಸೊಪ್ಪಿನ್‌ರವರು ಗೋವಾ ರಾಜ್ಯ ಹಾಗೂ ಪರಿಸರವಾದಿಗಳ ವಾದವನ್ನು ಒಪ್ಪುವುದಿಲ್ಲ.  “ಬೃಹತ್ ಪ್ರಮಾಣದ ಅರಣ್ಯ ನಾಶವೇನೂ ಯೋಜನೆಯಿಂದ ಆಗುವುದಿಲ್ಲ. ಮಲಪ್ರಭಾ ಸೇರುವ ಎರಡೂ ಉಪನದಿಗಳೂ ನದಿಯಿಂದ ಕೆಲವು ಮೈಲಿಗಳ (೬-೮ ಕಿಲೋಮೀಟರ್) ದೂರದಲ್ಲಿದ್ದು, ಕೇವಲ ಗುರುತ್ವಾಕರ್ಷಣೆಯಿಂದಲೇ ನೀರು ಮಲಪ್ರಭಾವನ್ನು ತಲುಪಬಹುದು.  ಮಲಪ್ರಭಾ ಅಣೆಕಟ್ಟನ್ನು ೧೯೭೨ರಲ್ಲಿ ನಿರ್ಮಾಣ ಮಾಡಲಾಗಿದ್ದರೂ, ಇಂದಿಗೂ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯ ಗಡಿಭಾಗದ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಇಲ್ಲ.  ವರ್ಷವಿಡೀ ಅನೇಕ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ,” ಎಂದು ಅವರು ಹೇಳುತ್ತಾರೆ.

ಈ ಉಪನದಿಗಳನ್ನು ತಿರುಗಿಸುವುದರಿಂದ ಮಹದಾಯಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೆಂಬ ಯಾವುದೇ ಅಧ್ಯಯನಗಳನ್ನು ನಡೆಸಿಲ್ಲವೆಂದು ಅವರು ಹೇಳುತ್ತಾರೆ.  “ಉಪನದಿಗಳಲ್ಲಿ ನೀರಿನ ಕೊರತೆ ಇದ್ದು, ನದಿ ತಿರುವ ಮಾಡಲಾಗುವುದಿಲ್ಲ ಎನ್ನುವ ಗೋವಾ ಸರ್ಕಾರದ ನಿಲುವನ್ನು ನ್ಯಾಯಮಂಡಳಿಯು ತಳ್ಳಿಹಾಕಿದೆ.  ನ್ಯಾಯವಾಗಿ ನಮ್ಮಗೆ ಸಲ್ಲಬೇಕಾದ ನೀರಿನ ಭಾಗವನ್ನು ನಮಗೆ ಬಿಡಬೇಕೆಂದು ನಾವು ಆಗ್ರಹಿಸುತ್ತೇವೆ.  ಅಲ್ಲದೆ, ಉತ್ತರ ಕರ್ನಾಟಕದಲ್ಲಿರುವ ನೀರಿನ ಅಭಾವವನ್ನು ಕುರಿತಾಗಿ ನಮ್ಮ ರಾಜ್ಯ ಸರ್ಕಾರವು ಮನವರಿಕೆ ಮಾಡಬೇಕು. ನ್ಯಾಯಾಲಯದ ಮೆಟ್ಟಿಲೇರದೆ, ಗೋವಾ ಸರ್ಕಾರದೊಂದಿಗೆ ಮಾತುಕತೆ ಪ್ರಾರಂಭಿಸಿ, ಪರಿಹಾರವನ್ನು ಕಂಡುಕೊಳ್ಳಬೇಕು.  ವರ್ಷಾನುಗಟ್ಟಲೆಯಿಂದ ಕೃಷ್ಣ ಹಾಗೂ ಕಾವೇರಿ ನೀರು ಹಂಚಿಕೆಯ ವಿವಾದ ಹಾಗೂ ಅದಕ್ಕೆ ಸಂಬಂಧಿಸಿದ ಕೊನೆ-ಮೊದಲಿಲ್ಲದ ಕಾನೂನು ಹೋರಾಟಗಳು ಮುಂದುವರೆದಿರುವುದರಿಂದ, ಜನರು ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ,” ಎಂದು ಅವರು ವಿವರಿಸುತ್ತಾರೆ.

ಎಲ್ಲ ಋತುಗಳಲ್ಲಿ ಹಾಗೂ ವರ್ಷದ ಬಹುತೇಕ ಭಾಗವು ನೀರು ಹರಿಯುವಂತಾಗಲು ನದಿಯ ಜಲಾನಯನ ಪ್ರದೇಶಗಳು ಅತ್ಯವಶ್ಯಕವೆಂದು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ಼್ ಸೈನ್ಸ್‌ನ (ಐಐಎಸ್‌ಸಿ) ಶಕ್ತಿ ಹಾಗೂ ತರಿಭೂಮಿ ಸಂಶೋಧನಾ ಗುಂಪಿನ ಮುಖ್ಯಸ್ಥರಾದ ಡಾ.ಟಿ.ವಿ. ರಾಮಚಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.  “ದಟ್ಟನೆಯ ಮರಗಳು ಹಾಗೂ ವಿಹಂಗಮವಾದ ಭೂದೃಶ್ಯವು ನೀರನ್ನು ಅದೇ ಪ್ರದೇಶದ ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ, ಒಣ ಋತುಗಳಲ್ಲಿ ಅದನ್ನು ಬಳಸಬಹುದು.  ನದಿಯ ಮೂಲದಲ್ಲಿನ ಜಲಾನಯನ ಪ್ರದೇಶವು ಒಮ್ಮೆ ನಾಶವಾದರೆ, ಅದನ್ನು ಎಥಾಸ್ಥಿತಿಗೆ ತರುವುದು ಕಷ್ಟವಾಗುತ್ತದೆ.  ಈಗಾಗಲೇ ಕಳಸಾ ಹಾಗೂ ಬಂಡೂರಿಯ ಜಲಾನಯನ ಪ್ರದೇಶಗಳು, ಅರಣ್ಯ ನಾಶ ಹಾಗೂ ಪರಿಸರವನ್ನು ಗಣನೆಗೆ ತೆಗೆದುಕೊಳ್ಳದೆ ಅನುಷ್ಠಾನಗೊಳಿಸಲಾದ ಯೋಜನೆಗಳಿಂದ ದುಃಸ್ಥಿತಿಯಲ್ಲಿದೆ,” ಎಂದು ಅವರು ಹೇಳುತ್ತಾರೆ.

ಜಲಾನಯನ ಪ್ರದೇಶದ ನಾಶದಿಂದ ನದಿಗಳು ಹಾಗೂ ತರಿಭೂಮಿಗಳು ಒಣಗುತ್ತವೆ.  “ಶರಾವತಿ ನದಿಗೆ ಸೇರುತ್ತಿದ್ದ ವರ್ಷವಿಡೀ ಹರಿಯುವ ಅನೇಕ ತೊರೆಗಳು ಬೇಸಿಗೆಗೆ ಮುನ್ನವೇ ಒಣಗುತ್ತಿದ್ದವು, ಆದರೆ, ಇವನ್ನು ಕೃಷಿ ಅಗತ್ಯಗಳಿಗಾಗಿ ದಿಕ್ಕು ಬದಲಾಯಿಸಲಾಗುತ್ತಿತ್ತೆಂದು ನಂತರ ತಿಳಿದು ಬಂತು,” ಎಂದು ಅವರು ಹೇಳುತ್ತಾರೆ. ಹೋರಾಟ-ನಿರತ ರೈತರಿಗೆ ಸಾಂತ್ವನ ತಿಳಿಸುವ ಸಲುವಾಗಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುವ ಬದಲು, ಮುಂಬರುವ ಪೀಳಿಗೆಗಳಿಗೂ ನೀರು ಲಭ್ಯವಿರುವಂತೆ ಸರ್ಕಾರವು ತನ್ನ ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕು,” ಎಂದೂ ತಿಳಿಸಿದರು.

ಭಾರತದಲ್ಲಿ ರಾಜ್ಯಗಳು ನೀರಿಗಾಗಿ ಕಾದಾಡುತ್ತಿರುವುದು ಇದೇ ಮೊದಲೇನಲ್ಲ.  ಕೃಷ್ಣ ಹಾಗೂ ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆಯೂ ಅಷ್ಟೇ ವಿವಾದಗಳಿವೆ.  ಈ ನೀರಿನ ವಿವಾದಗಳನ್ನು ಆದಷ್ಟೂ ಬೇಗನೆ ಬಗೆಹರಿಸದಿದ್ದರೆ, ಇಷ್ಟರಲ್ಲೇ ಅದು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ.

ಇಂಡಿಯಾ ವಾಟರ್ ಪೋರ್ಟಲ್‌ನಲ್ಲಿ ಸಬಿತಾ ಕೌಶಲ್‌ನವರ ಮೂಲ ಕನ್ನಡ ಲೇಖನದ ಅನುವಾದ 

(ಮೂಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/tale-two-sparring-states-and-river)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*