ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಯಲವಿಗಿ ಸ್ವಚ್ಛತೆಗೆ ರಾಯಭಾರಿಗಳಿದ್ದಾರೆ – ಎಚ್ಚರಿಕೆ!

ಹಾವೇರಿ/ಸವಣೂರು, (ಯಲವಿಗಿ): “ನಮ್ಮ ಮಕ್ಕಳಿಗೆ ನಾಳೆ ಬಾವಿ ಅಂದ್ರ ಹೆಂಗ ಇರ್ತಿದ್ವು ಅಂತ ತೋರಿಸೋದಕ್ಕ ಹೆಂಗರ ಮಾಡಿ ಈ ಸವುಳ ಬಾವಿ ಉಳಸೋಣು.. ಮೇಡಂ, ನೀವು ಕೈ ಹಚ್ರೀ.. ನಾವೂ ಬರ‍್ತೇವಿ..” – ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ಅಶ್ವಿನಿ ಧಗಾಟೆ ಅವರಿಗೆ HAVERI DIST SAVANUR TALUKA YALAVIGI FELLOW ASHWINI (4)ಯಲವಿಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ಮುಗಳಿ ಕಳಕಳಿಯಿಂದ ಮನವಿ ಮಾಡುತ್ತಾರೆ.

ರಾಜಕಾರಣಿಯಾಗಿ ‘ಲೋಕದ ಚಿಂತಿ’ ಅವರಿಗೆ ಅನಿವಾರ್ಯ. ಆದರೆ, ಆ ಮಾತಿನ ಹಿಂದಿನ ಪ್ರಾಮಾಣಿಕ ಕಾಳಜಿ ಅಶ್ವಿನಿಯವರ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ. ‘ಸವುಳ ಬಾವಿ’ ಯಾಕೆ ಮರುಹುಟ್ಟು ಪಡೀಬಾರ್ದು.. ಅಂತ ಯೋಚನೆ ಮಾಡಿ, ಕ್ರಿಯಾಯೋಜನೆ ಸಿದ್ಧಪಡಿಸಿ, ಗ್ರಾಮ ಪಂಚಾಯ್ತಿಗೆ ಮತ್ತು ಸ್ಕೋಪ್ ಕಛೇರಿಗೆ ಫೆಲೊ ಅಶ್ವಿನಿ ಸಲ್ಲಿಸುತ್ತಾರೆ. ಅದಾಗಲೇ ಪಂಚಾಯ್ತಿ ಬಾವಿ ಸಂಪೂರ್ಣ ಬತ್ತಿ ಹೋಗಿದ್ದನ್ನು ಇಲ್ಲಿ ಒತ್ತಿ ಉಲ್ಲೇಖಿಸುತ್ತಾರೆ.

ಬಾವಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ಇರುವ ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್, ಅಶ್ವಿನಿಯ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಬಾವಿ ಸ್ವಚ್ಛತೆಯ ಕನಸಿಗೆ ಧನ ಸಹಾಯವನ್ನೂ ಒದಗಿಸಿ, ಮರುಹುಟ್ಟು ನೀಡಲು ಹಸಿರು ಧ್ವಜ ತೋರುತ್ತಾರೆ. ೧೯,೯೦೦ ರೂಪಾಯಿ ಸ್ಕೋಪ್ ಹಣದಲ್ಲಿ ಸವುಳ ಬಾವಿಯನ್ನು ಸಿಹಿ ಬಾವಿಯನ್ನಾಗಿಸಲು ಕಾರ್ಯಾರಂಭ; ಗಮನಿಸಿದ ಗ್ರಾಮ ಪಂಚಾಯ್ತಿ ೫೫,೦೦೦ ರೂಪಾಯಿ ಹೆಚ್ಚುವರಿಯಾಗಿ ಒದಗಿಸಿ ಸವುಳ ಬಾವಿಯ ಶುದ್ಧೀಕರಣ ಕಾರ್ಯಕ್ಕೆ ಆನೆಬಲ ಒದಗಿಸುತ್ತದೆ. ಅಶ್ವಿನಿ ಖುಷಿಗೆ ಪಾರವೇ ಇಲ್ಲ.

ಕಸ, ಕೊಳೆತು ನಾರುವ ಪದಾರ್ಥ, ಘನ ತ್ಯಾಜ್ಯ, ಸತ್ತ ಪ್ರಾಣಿಗಳ ಶವ, ಅವಧಿ ಮೀರಿದ ಔಷಧಿ, ಸಿರಿಂಜ್ – ಅಬ್ಬಾ ಬಾವಿಯ ಉದರದೊಳಗೆ ಏನುಂಟು.. ಏನಿಲ್ಲ?! ಹೊಲಸಿನ ಬಾಂಢಾರ! ಗ್ರಾಮದ ಜನತೆಯೊಂದಿಗೆ, ಪರಿಣಿತರನ್ನೂ ಜೋಡಿಸಿಕೊಂಡು ಅಶ್ವಿನಿ ಸ್ವತಃ ಸವುಳ ಬಾವಿಯ ಆರೋಗ್ಯ ಸುಧಾರಿಸಲು ಟೊಂಕಟ್ಟುತ್ತಾರೆ. ಚರ್ಮದ ತುರಿಕೆ, ಕಣ್ಣುರಿ, ತಲೆನೋವು ಮತ್ತು ಕೆಲವರಿಗೆ ಜ್ವರ – ಹೀಗೆ ದೈಹಿಕ ಬಾಧೆಯನ್ನೂ ಲೆಕ್ಕಿಸದೇ ಸತತ ತಿಂಗಳು ಪೂರ್ತಿ ಸವುಳ ಬಾವಿಯ ಸ್ವಚ್ಛತಾ ಕಾರ್ಯ ವಿರಾಮವಿಲ್ಲದೇ ನಡೆಯುತ್ತದೆ. ಪೂರ್ತಿಯಾಗಿ ಬಾವಿಯನ್ನು ಬರಿದು ಮಾಡಿ, ಒಳ ಹರಿವಿನ ಸೆಲೆಗಳನ್ನು ಪುನರುಜ್ಜೀವಿತಗೊಳಿಸಲಾಗುತ್ತದೆ. ತಿಂಗಳೊಪ್ಪತ್ತಿನ ಒಳಗೆ, ಮೈದುಂಬಿ ನಿಂತ ಬಾವಿ, ಇಡೀ ಗ್ರಾಮಕ್ಕೆ ಬಳಕೆ ನೀರಿನ ಎರಡನೇ ಮೂಲವಾಗಿ ಪರಿವರ್ತಿತವಾಗುತ್ತದೆ!

ಗ್ರಾಮದ ಅಂತರ್ಜಲ ಗಡಸು ನೀರಿನ ತಾಬಾಣ

Tank rejuvenation Yalavigiಅಶ್ವಿನಿ ಗ್ರಾಮದ ವಿವಿಧ ಜಲ ಮೂಲಗಳ ನೀರಿನ ಬಳಕೆ ಯೋಗ್ಯತೆಯನ್ನು ಪರೀಕ್ಷಿಸಲು ಮುಂದಾದಾಗ, ಗ್ರಾಮದ ಅಂತರ್ಜಲ ಸಂಪೂರ್ಣ ಗಡಸು ನೀರಿನ ತಾಬಾಣ ಹೊಂದಿರುವುದು ಗಮನಕ್ಕೆ ಬರುತ್ತದೆ. ಕೊಳವೆ ಬಾವಿಗಿಂತ ತೆರೆದ ಬಾವಿ ಅಥವಾ ಕೆರೆಯ ನೀರೇ ಹೆಚ್ಚು ಸುರಕ್ಷಿತ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಸುತ್ತಾರೆ. ಕೇವಲ ೧೦ ವರ್ಷಗಳ ಕೆಳಗೆ ಇಡೀ ಯಲವಿಗಿ ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾಗಿದ್ದ ಧರ್ಮದ ಕೆರೆ ಬಯಲು ಶೌಚದ ಕೂಪವಾಗಿ, ಕೊಚ್ಚೆಗುಂಡಿಯಾಗಿ, ಇಡೀ ಗ್ರಾಮದ ಹೊಲಸು ನೀರನ್ನು ಉದರದಲ್ಲಿ ತುಂಬಿಕೊಳ್ಳುವ ಒಳ ಚರಂಡಿಯಂತಾಗಿ ಗಬ್ಬೆದ್ದು ಹೋಗಿತ್ತು.

೧೦೫೧ ಮನೆಗಳಿರುವ ಯಲವಿಗಿಗೆ, ಧರ್ಮದ ಕೆರೆಯ ನೀರನ್ನೇ ಕುಡಿಯಲು ಮತ್ತು ದನಕರುಗಳಿಗೆ ಒದಗಿಸಲು ಅಶ್ವಿನಿ ಪ್ರಸ್ತಾವನೆ ರೂಪಿಸುತ್ತಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ, ಇಡೀ ಕಾಮಗಾರಿಯನ್ನು ಗ್ರಾಮಸ್ಥರ ಶ್ರಮದಾನದ ಮೂಲಕವೇ ನಡೆಸಿ, ಸಮುದಾಯದ ಸಹಭಾಗಿತ್ವದಲ್ಲಿಯೇ ಕೆರೆಯನ್ನು ಪುನರುಜ್ಜೀವಿತಗೊಳಿಸುವ ಇಂಗಿತ ವ್ಯಕ್ತಪಡಿಸುತ್ತಾರೆ.

ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರ ಅಶ್ವಿನಿ ದ್ವಾರಾ ಕ್ರಿಯಾಯೋಜನೆ ಗ್ರಾಮ ಪಂಚಾಯ್ತಿಗೆ ಒಪ್ಪಿಗೆಯಾಗುತ್ತದೆ. ೭.೫ ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮ ಪಂಚಾಯ್ತಿ ಕೆರೆಯ ಪುನರುಜ್ಜೀವನಕ್ಕೆ ಸಿದ್ಧವಾಗುತ್ತದೆ. ಕೆರೆಯೂ ಸ್ವಚ್ಛವಾಗುತ್ತದೆ. ಆದರೆ, ಕೆರೆಗೆ ರಕ್ಷಣೆ ಬೇಲಿ ಇರದೇ ಹೋದರೆ ಎಲ್ಲವೂ ವ್ಯರ್ಥ ಎಂಬುದು ಸಾಂದರ್ಭಿಕವಾಗಿ ಗಮನಕ್ಕೆ ಬರುತ್ತದೆ. ಒಟ್ಟೂ ಬೇಲಿಗೆ ೫೩ ಸಾವಿರ ರೂಪಾಯಿಗಳ ಅಂದಾಜು ವೆಚ್ಚ ನಿಗದಿಯಾಗುತ್ತದೆ. ಸ್ಕೋಪ್ ಸ್ವತಃ ೨೩ ಸಾವಿರ ರೂಪಾಯಿ ತನ್ನ ಪಾಲು ಎಂದು ಕೆರೆಯ ಬೇಲಿಗಾಗಿ ನೀಡಿ, ತನ್ನ ಸಾಮಾಜಿಕ ಜವಾಬ್ದಾರಿ ದರ್ಶಿಸುತ್ತದೆ. ಅಂತೂ ಊರ ಮುಂದಿನ ಧರ್ಮದ ಕೆರೆ, ಮನೆಯೊಳಗಿನ ಹಂಡೆಯಂತೆ ಈಗ ನೀರಿನಾಸರೆ! ಧರ್ಮದ ಕೆರೆ ಸುಪರ್ದಿ ಸಮುದಾಯದ ಮಾಲೀಕತ್ವ ಎಂಬ ಹೊಣೆ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಸಾಕ್ಷಿ.

ಶೌಚಾಲಯಗಳಿದ್ದರೂ ಬಳಕೆ ಮಾತ್ರ ಕೇವಲ ಶೇ. ಸೊನ್ನೆ!

HAVERI DIST SAVANUR TALUKA YALAVIGI FELLOW ASHWINI (2)ಕೂಡಲೇ ಅಶ್ವಿನಿ ಯೋಚಿಸುವುದು ಗ್ರಾಮದ ಬಯಲು ಶೌಚ ಸಮಸ್ಯೆ ತಡೆಯುವತ್ತ. ೧೦೫೧ ಮನೆಗಳ ಪೈಕಿ ೭೫೦ ಮನೆಗಳಲ್ಲಿ (ಶೇ.೭೧) ಶೌಚಾಲಯಗಳಿದ್ದರೂ ಬಳಕೆ ಮಾತ್ರ ಕೇವಲ ಶೇ. ಸೊನ್ನೆ! ಅರ್ಥಾತ್, ಎಲ್ಲರೂ ಈ ಗ್ರಾಮದಲ್ಲಿ ಯೋಜನಾ ಪಲಾನುಭವಿಗಳೇ! ಆದರೆ, ಒಬ್ಬರೂ ಸರ್ಕಾರಿ ಅನುದಾನ ಪಡೆದು ಕಟ್ಟಿಕೊಂಡ ಶೌಚಾಲಯ ಬಳಸುತ್ತಿರಲಿಲ್ಲ?! ಕೇವಲ ೯ ತಿಂಗಳ ಅವಧಿಯಲ್ಲಿ ಎಲ್ಲ ಶೌಚಾಲಯಗಳೂ ಬಳಕೆಯಾಗುವಂತೆ, ಮತ್ತು ಹೆಚ್ಚುವರಿಯಾಗಿ ೨೨೩ ಕುಟುಂಬಗಳು (ಶೇ.೨೧ ರಷ್ಟು) ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಕೊಂಡು, ಬಳಸುವಂತೆ ಪ್ರೇರೇಪಿಸುವಲ್ಲಿ ಫೆಲೊ ಅಶ್ವಿನಿ ಯುಶಸ್ವಿಯಾಗುತ್ತಾರೆ.

ಅಶ್ವಿನಿ ವೈಯಕ್ತಿಕ ಶೌಚಾಲಯಗಳನ್ನು ಕುಟುಂಬಗಳು ಹೊಂದಿ, ಸಮರ್ಪಕವಾಗಿ ಬಳಸುವಲ್ಲಿ ಹೂಡುವ ತಂತ್ರ ಮಾತ್ರ ವಿಶೇಷವಾದದ್ದು. ದಿನಂಪ್ರತಿ ಬೆಳ್ಳಂಬೆಳಗ್ಗೆ ಸೀಟಿ ಊದಿ, ಬಯಲು ಶೌಚಕ್ಕೆ ಹೊರಟವರಿಗೆ ಕೈ ಮುಗಿದು ಅವರು ತಡೆಯುತ್ತಾರೆ! ಪಾಯಖಾನೆ ಕಟ್ಟಿಕೊಳ್ಳದಿದ್ದರೆ ಗ್ರಾಮ ಪಂಚಾಯ್ತಿಯಿಂದ ಯಾವುದೇ ಸೌಲಭ್ಯ, ಅಗತ್ಯ ಪ್ರಮಾಣ ಪತ್ರ ನೀಡದಂತೆ ಗ್ರಾ.ಪಂ.ಗೆ ಮನವಿ ಮಾಡುತ್ತಾರೆ! ಮನೆಗೆ ಕುಡಿಯುವ ನೀರಿನ ನಳದ ಸಂಪರ್ಕಕ್ಕೆ ಪರವಾನಿಗೆ ಲಭಿಸುವುದಿಲ್ಲ! ಜಮೀನು ಉತಾರ, ಭೋಗ್ಯದ ಪ್ರಮಾಣ ಪತ್ರ, ಬೆಳೆ ವಿಮೆ ಅನುಕೂಲ, ರೇಷನ್ ಕೂಡ ಇಲ್ಲ! ಎಂಬ ನಿರ್ಣಯ ಡಂಗುರ ಸಾರಿಸುತ್ತಾರೆ..

ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದ, ಬಯಲು ಶೌಚದ ಸಮಸ್ಯೆ ಮತ್ತು ಅನಾರೋಗ್ಯ ಕುರಿತಾದ ವಿಡಿಯೋ ಚಿತ್ರಗಳನ್ನು ಪ್ರದರ್ಶಿಸುವ ಏರ್ಪಾಡು ಮಾಡುತ್ತಾರೆ. ಶಾಲಾ ಮಕ್ಕಳ ಮನವೊಲಿಸಿ, ಪಾಲಕರ ಮೇಲೆ ಒತ್ತಡ ಹೇರಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಜನ ಅಂತಿಮವಾಗಿ ಮನಸ್ಸು ಮಾಡುತ್ತಾರೆ! ಕಟ್ಟಿಕೊಂಡ ಶೌಚಾಲಯ ಬಳಸಲು ಮುಂದಾಗುತ್ತಾರೆ.. ಸ್ನಾನ ಗೃಹಗಳಿಗೆ ಮನವಿ ಸಲ್ಲಿಸುತ್ತಾರೆ.

ಗ್ರಾಮ ಸ್ವಚ್ಛತೆ ರಾಯಭಾರಿ ನೇಮಕ!

HAVERI DIST SAVANUR TALUKA YALAVIGI FELLOW ASHWINI (5)ಅಶ್ವಿನಿ ಅವರ ಇನ್ನೊಂದು ವಿಶಿಷ್ಟ ಸಾಧನೆಯನ್ನು ಇಲ್ಲಿ ದಾಖಲಿಸಲೇಬೇಕು. ಇಡೀ ಯಲವಿಗಿ ಗ್ರಾಮದಲ್ಲಿ ಕಸದ ಸಮರ್ಪಕ ನಿರ್ವಹಣೆ ಮತ್ತು ವಿಲೇವಾರಿ ಹಾಸ್ಯಾಸ್ಪದವಾಗಿತ್ತು. ಕೂಡಲೇ ಗ್ರಾಮ ಪಂಚಾಯ್ತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರೆ. ಕೂಡಲೇ ರಸ್ತೆಯ ಮೇಲೆ ಮತ್ತು ಅಕ್ಕಪಕ್ಕ ಬೀಳುವ ಕಸ ಸ್ವಚ್ಛಗೊಳಿಸಲು ಇಬ್ಬರನ್ನು ನೇಮಿಸಲು ನಿರ್ಣಯಿಸುತ್ತಾರೆ. ಅವರೊಟ್ಟಿಗೆ ಅಶ್ವಿನಿಯೂ ವಾರ ಕಾಲ ಮೇಲುಸ್ತುವಾರಿ ಕೆಲಸ ಮಾಡುತ್ತಾರೆ. ಒಂದೇ ತಿಂಗಳಲ್ಲಿ ರಸ್ತೆಗಳೆಲ್ಲ ಸ್ವಚ್ಛವಾಗಿ, ಕಟ್ಟುತ್ತಿದ್ದ ಗಟಾರುಗಳೆಲ್ಲ ಸರಾಗವಾಗಿ ಹರಿಯುವಂತಾಗಿ, ಗಬ್ಬೆದ್ದು ನಾರುತ್ತಿದ್ದ ಅನಾರೋಗ್ಯಕರ ವಾತಾವರಣ ಕೊನೆಗೊಂಡು ನಿವಾಸಿಗಳು ತಲೆ ಎತ್ತಿ ಗ್ರಾಮದ ರಸ್ತೆಗಳ ಮೇಲೆ ಓಡಾಡುವಂತಾಗುತ್ತದೆ.

ಈ ಎಲ್ಲ ಬೆಳವಣಿಗೆಗಳ ಫಲವೆಂಬಂತೆ ಗ್ರಾಮಸ್ಥರು ಕಸದ ವಿಲೇವಾರಿ ಮತ್ತು ನಿರ್ವಹಣೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳುತ್ತಾರೆ. ಎಲ್ಲೆಂದರಲ್ಲಿ, ಹೇಗೆ ಬೇಕೋ ಹಾಗೆ, ಅನುಕೂಲ ಸಿಂಧುವಾಗಿ ಕಸ ಬಿಸಾಡುತ್ತಿದ್ದ ಗ್ರಾಮಸ್ಥರು.. ಅಂತಿಮವಾಗಿ ಕಂಡಕಂಡಲ್ಲಿ ಉಗುಳುವುದನ್ನೂ ನಿಲ್ಲಿಸುತ್ತಾರೆ..!

ಅಶ್ವಿನಿ ಕೈಗೊಂಡ ಕಾರ್ಯಗಳನ್ನು ಗಮನಿಸಿದ ಯಲವಿಗಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಚಂದ್ರು ಲಮಾಣಿ ಹಂಚಿಕೊಂಡ ಅನಿಸಿಕೆ.. “ಸ್ಕೋಪ್ ಫೆಲೊಷಿಪ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲು ಕಾರಣ ಯಂಗ್ ಪ್ರೊಫೆಷನಲ್ಸ್ ಗ್ರಾಮ ವಾಸ್ತವ್ಯ ಮಾಡಿ, ದಿನಕ್ಕೆ ಕನಿಷ್ಟ ೧೬ ತಾಸು ಗ್ರಾಮಸ್ಥರೊಂದಿಗೆ ಒಡನಾಡಿ, ವಿಶ್ವಾಸ ಗಳಿಸಿದ್ದಾರೆ. ನೀಡಿದ ಭರವಸೆಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿದ್ದಾರೆ. ಜನ ತಮ್ಮ ಮನೆಯ ಮಕ್ಕಳಂತೆ ಇವರನ್ನು ಪ್ರೀತಿಸುವಂತಾಗಿದೆ. ಸ್ಕೋಪ್‌ಗೆ ಅಭಿನಂದನೆಗಳು.”

ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಪೋಸ್ಟ್ ಗ್ರ್ಯಾಜ್ಯುಯೇಟ್ ಡಿಪ್ಲೊಮಾ ವ್ಯಾಸಂಗ ಮಾಡಿರುವ ಅಶ್ವಿನಿ, ಪ್ರಸ್ತಾವನೆಗಳನ್ನು ಬರೆಯುವುದು, ಕ್ರಿಯಾಯೋಜನೆ ರೂಪಿಸುವುದು, ಅನುಮೋದನೆಗೆ ಮಂಡಿಸುವುದು, ಬಜೆಟ್ ಲೆಕ್ಕಿಸುವುದು ಕಲಿತಿದ್ದು -ಸ್ಕೋಪ್ ಮತ್ತು ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್ ಪ್ರೋಗ್ರಾಂನಿಂದ ಎಂಬುದನ್ನು ಹೆಮ್ಮೆಯಿಂದ ಹೇಳುತ್ತಾರೆ.

ಹಾವೇರಿ ಜಿಲ್ಲೆ, ಸವಣೂರು ತಾಲೂಕು ಯಲವಿಗಿ ಗ್ರಾಮಕ್ಕೆ ಮೊದಲ ಬಾರಿಗೆ ಕಾಲಿಟ್ಟಾಗ ಅಶ್ವಿನಿಗೆ ದೇವರೇ ನೆನಪಾಗಿದ್ದ. ಕಾರಣ ಅಷ್ಟು ಅಸ್ತವ್ಯಸ್ತ, ಧೂಳು, ಹೊಲಸು ಇಡೀ ಗ್ರಾಮದ ತುಂಬ ಕಣ್ಣಿಗೆ ರಾಚುತ್ತ್ತಿತ್ತಂತೆ! ಈಗ ಆ ಗ್ರಾಮದ ಸಂಪೂರ್ಣ ಚಿತ್ರಣವೇ ಬದಲಾಗಿದೆ.. ಥ್ಯಾಂಕ್ಯೂ ಅಶ್ವಿನಿ.

******************************************************************************************************

ashwini dhagateಫೆಲೊ ಅಶ್ವಿನಿ ಧಗಾಟೆ ಅವರ ಅನಿಸಿಕೆ –

“ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್ ನನಗೆ ವೃತ್ತಿಪರತೆ ಕಲಿಸಿತು. ಸಾಮಾಜಿಕ ವೃತ್ತಿಯ ಮೌಲ್ಯಗಳನ್ನು ಅರ್ಥಮಾಡಿಸಿತು. ಸಮಸ್ಯೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವಲ್ಲಿ ಮತ್ತು ವ್ಯವಸ್ಥಿತವಾಗಿ ಪರಿಹರಿಸುವಲ್ಲಿ ಸಮುದಾಯಗಳ ಸಹಭಾಗಿತ್ವ ಬಹಳ ಮಹತ್ವದ್ದು ಎಂಬುದನ್ನು ಅನುಭವದಿಂದ ಕಲಿತೆ. ನಮ್ಮ ಮಾತು ಮತ್ತು ಪ್ರಾಮಾಣಿಕವಾದ ಕೆಲಸದ ಮೂಲಕ ಪರಸ್ಪರ ವಿಶ್ವಾಸಗಳಿಸುವ ಪಟ್ಟುಗಳನ್ನು ಸಹ ಕಲಿಸಿತು ಫೆಲೊಷಿಪ್. ಗುರುಗಳಾದ ಡಾ. ಪ್ರಕಾಶ ಭಟ್ ಅವರಿಗೆ ಈ ಅನುಭವಗಳಿಗಾಗಿ ನಾನು ಋಣಿ.”

ಸಂಪರ್ಕ: ashwini2013msw@gmail.com / +91 8867417425

*******************************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ.

ಇದು ಸ್ಕೋಪ್-ಅರ್ಘ್ಯಂವಾಟ್ಸ್ಯಾನ್ಫೆಲೋಷಿಪ್ ಪ್ರೋಗ್ರಾಂಯಶೋಗಾಥೆಯ ಸರಣಿಯ ನೆಯ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*