ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ- ನೋಟ ೨೬: ಗಣಪನ ವಿಸರ್ಜನೆಗೆ ಕೆರೆ ಬೇಕು, ಆದರೆ ಸ್ವಚ್ಛತೆ?!

ವರ್ಷಪೂರ್ತಿ ನಮ್ಮ ಸುತ್ತಮುತ್ತ ಕೆರೆ ಎಂಬುದು ಎಲ್ಲಿದೆ ಎಂಬುದನ್ನೇ ‘ಜಾಣಮರವಿ’ಗೆ ಸೇರಿಸುವ ನಮ್ಮಲ್ಲಿ ಹಲವರಿಗೆ ಗಣೇಶನ ಹಬ್ಬದಲ್ಲಿ ಕೆರೆಗಳು ಕಣ್ಣು ಮುಂದೆಯೇ ಇದೆ ಎಂಬುದು ಜ್ಞಾಪಕಕ್ಕೆ ಬರುತ್ತವೆ. ಅಂತಹ ಸಂದರ್ಭದಲ್ಲಿ ಕೆರೆಯನ್ನು ಕಲುಷಿತಗೊಳಿಸುವುದೊಂದೇ ಇವರ ಪ್ರಥಮ ಧ್ಯೇಯವಾಗಿರುತ್ತದೆ.

BheemanaKatte (2)ಹೌದು, ರಾಜಧಾನಿ ಅಲ್ಲಷ್ಟೇ ಏಕೆ, ರಾಜ್ಯದ ಬಹುತೇಕ ಕೆರೆಗಳ ಪರಿಸ್ಥಿತಿಯೂ ಇದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹಾವಳಿ ಹೆಚ್ಚಿರುತ್ತದೆ ಅಷ್ಟೇ. ಗಣೇಶ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಮೂರ್ತಿಗಳು ಕೆರೆಯ ಒಡಲು ಸೇರುತ್ತವೆ. ಈಗಾಗಲೇ ಕಲ್ಮಶದಿಂದ ಬೇಯುತ್ತಿರುವ ಕೆರೆಗಳು ಗಣಪತಿ ಹಬ್ಬದ ಸಂದರ್ಭದಲ್ಲಿ ಮತ್ತಷ್ಟು ಕಲುಷಿತಗೊಳ್ಳುವುದು ಸಾಮಾನ್ಯ. ಹಾಗೆ ನೋಡಿದರೆ, ಕೆರೆಗಳಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ಏನೂ ಹೊಸದಲ್ಲ. ಹಿಂದಿನ ಪರಂಪರೆಯನ್ನೇ ಉಳಿಸಿಕೊಂಡು ಬರಲಾಗುತ್ತಿದೆ ಅಷ್ಟೇ. ಆದರೆ ಅದು ಹಬ್ಬಕ್ಕೆ ಮಾತ್ರ ಸೀಮಿತವಾಗಿರುವುದು ಶೋಚನೀಯ. ಏಕೆಂದರೆ ಹಿಂದಿನ ಕಾಲದಲ್ಲಿದ್ದ ಕೆರೆಗಳ ಸಮೃದ್ಧ, ಸ್ವಚ್ಛ ವಾತಾವರಣಕ್ಕೆ ಈಗ ಯಾವುದೇ ಕೊಡುಗೆ ಇಲ್ಲ. ಆದರೆ ಕೊಳಕಿಗೆ ಇನ್ನಷ್ಟು ಕೊಡುಗೆ ನೀಡುವಲ್ಲಿ ಮಾತ್ರ ಹಿಂದೆ ನೋಡುತ್ತಿಲ್ಲ. ನಗರ ಪ್ರದೇಶದಲ್ಲಿ ಈಗ ಬಾವಿಗಳು ಕಳೆದುಹೋಗಿ, ಕೊಳವೆಬಾವಿಗಳೇ ಹೆಚ್ಚಾಗಿವೆ. ಬಾವಿಯಲ್ಲಿ ಮುಳುಗುತ್ತಿದ್ದ ಗಣಪ ಇದೀಗ ಬೇರೆ ದಾರಿ ಕಾಣದೆ, ಚಿಕ್ಕ ಅಥವಾ ದೊಡ್ಡ ಕೆರೆಯಲ್ಲೇ ಮುಳುಗಬೇಕಿದೆ. ಅದಕ್ಕೇ ನಗರ, ಅದರಲ್ಲೂ ರಾಜಧಾನಿಯಲ್ಲಿ ಅಳಿದುಳಿದಿರುವ ಕೆರೆಗಳಲ್ಲಿ ಬಿಬಿಎಂಪಿ ಕೆಲವು ಕೆರೆಗಳಲ್ಲಿ ಮೂರ್ತಿ ವಿಸರ್ಜನೆಗೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಅಲ್ಲಿ ನಂತರ ಶುಚಿ ಮಾಡುವ ವ್ಯವಸ್ಥೆ ಮಾಡಿದೆ. ಆದರೆ ಇದನ್ನು ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಜನರೂ ಪಾಲಿಸುತ್ತಿಲ್ಲ. ಬದಲಿಗೆ ಕೆರೆ ಮಾಲಿನ್ಯಕ್ಕೇ ಕಾರಣವಾಗುತ್ತಿದ್ದಾರೆ. ಅದಕ್ಕೆ ಉದಾಹರಣೆ ರಾಜರಾಜೇಶ್ವರಿನಗರದ ಭೀಮನಕಟ್ಟೆ.

ಗಣೇಶನ ಚತುರ್ಥಿಯಂದೇ ಭೀಮನಕಟ್ಟೆಯಲ್ಲಿ ಕಲ್ಮಶದ ಒಳಹರಿವು ಅತಿಯಾಯಿತು. ಮೊದಲೇ ಈ ಪ್ರದೇಶದಲ್ಲಿ ಸಾಕಷ್ಟು ತ್ಯಾಜ್ಯವನ್ನು ದಿನವಹಿ ಸುರಿಯಲಾಗುತ್ತದೆ, ಸುಡಲಾಗುತ್ತದೆ. ಇದನ್ನು ಬಿಬಿಎಂಪಿಯೇ ವ್ಯವಸ್ಥಿತವಾಗಿ ಮಾಡುತ್ತಿದೆ. ಆದರೆ, ಗಣೇಶ ಚತುರ್ಥಿಯಂದು ಮೂರ್ತಿಗಳ ವಿಸರ್ಜನೆಯೂ ಇದೇ ಕಲುಷಿತ ಕೆರೆಯಲ್ಲಿ ಜನರು ಮಾಡಲು ಮುಂದಾದರು. ಇಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ಇಲ್ಲದಿದ್ದರೂ, ಅಪಾಯದಲ್ಲೇ ನಾಗರಿಕರು ಇಲ್ಲಿ ಮೂರ್ತಿಗಳನ್ನು ವಿಸರ್ಜಿಸಿದರು. ಹಗಲು-ರಾತ್ರಿ ಎನ್ನದೆ ಇನ್ನೂ ಮೂರ್ತಿಗಳ ವಿಸರ್ಜನೆ ತಂಡೋಪತಂಡವಾಗಿ ಮಾಡುತ್ತಿದ್ದಾರೆ. ಆದರೆ, ಇದನ್ನು ಕಂಡೂ ಯಾವುದೇ ರಕ್ಷಣಾ ವ್ಯವಸ್ಥೆ ಕಲ್ಪಿಸದ ಬಿಬಿಎಂಪಿ ಅಧಿಕಾರಿಗಳು ಸುಮ್ಮನಿದ್ದಾರೆ. ಪೊಲೀಸರು ಅಲ್ಲಿ ಅಡ್ಡಾಡಿದರೂ ಯಾರೂ ಕ್ರಮ ಕೈಗೊಳ್ಳಲಿಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಅಷ್ಟೇ ಅಲ್ಲ, ಮೂರ್ತಿ ವಿಸರ್ಜನೆ ಒಂದೆಡೆ ಆಗುತ್ತಿದೆ; ಮತ್ತೊಂದೆರೆ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಬಂದ ತ್ಯಾಜ್ಯವನ್ನು ಇದೇ ಕೆರೆಯ ದಡದಲ್ಲಿ ಸುರಿದು ಸುರಿದು ಹೋಗಲಾಗುತ್ತಿತ್ತು. ಇಂತಹ ವ್ಯವಸ್ಥೆಯಲ್ಲೇ ಮೂರ್ತಿ ವಿಸರ್ಜನೆಗೆ ಬಂದವರಿಂದಲೂ ತ್ಯಾಜ್ಯ ವಿಲೇವಾರಿ ಇಲ್ಲೇ ಆಗುತ್ತಿತ್ತು. ಈ ಬಗ್ಗೆ ಸ್ಥಳೀಯರು ಬಿಬಿಎಂಪಿ ಹಾಗೂ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

BheemanaKatte (3)ಅಂದ ಹಾಗೆ, ಹಲಗೇವಡೇರಹಳ್ಳಿಯ ಸರ್ವೆ ನಂ. ೧೩೯ರಲ್ಲಿ ೧ ಎಕರೆ ೨೭ ಗುಂಟೆ ವಿಸ್ತೀರ್ಣದಲ್ಲಿರುವ ಭೀಮನಕಟ್ಟೆ ಎಂಬ ಕೆರೆ ಅಥವಾ ಕುಂಟೆಯನ್ನು ಬಿಬಿಎಂಪಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಿದೆ. ಫೆನ್ಸಿಂಗ್‌ಅನ್ನೂ ಹಾಕಲಾಗಿದೆ. ಸ್ಥಳೀಯರು ಒಂದಷ್ಟು ಗಿಡಗಳನ್ನು ನೆಟ್ಟಿದ್ದಾರೆ. ಅಷ್ಟು ಬಿಟ್ಟರೆ ಇನ್ನೇನೂ ಆಗಿಲ್ಲ. ಆದರೆ, ತ್ಯಾಜ್ಯ ಸುರಿಯುವುದನ್ನು ಯಾರೂ ನಿಲ್ಲಿಸಲಾಗಿಲ್ಲ. ಇನ್ನು ಗಣೇಶ ಹಬ್ಬದ ಸಂದರ್ಭದಲ್ಲಿ ಫೆನ್ಸಿಂಗ್ ಹಾಗೂ ಗಿಡಗಳು ವಿಸರ್ಜನೆಗೆ ಬಂದ ಕೆಲವು ಹೃದಯಹೀನರ ಕೃತ್ಯಕ್ಕೆ ಬಲಿಯಾಗಿವೆ. ಭೀಮನಕಟ್ಟೆ ಎಂದ ಕೂಡಲೇ ಸಾಕಷ್ಟು ಜನರಿಗೆ ಎಲ್ಲಿದೆ ಎಂಬುದು ಅರ್ಥವಾಗುವುದಿಲ್ಲ. ಈ ಕೆರೆಯ ರಾಜಕಾಲುವೆ ಒತ್ತುವರಿಯನ್ನು ಬಿಬಿಎಂಪಿ ಇತ್ತೀಚೆಗೆ ತೆರವು ಮಾಡುವ ಕಾರ್ಯ ಕೈಗೊಂಡಿದೆ. ಪಂಚಶೀಲ ಬಡಾವಣೆ ಹಾಗೂ ಬಿಎಚ್‌ಇಎಲ್, ಬೆಮೆಲ್ ಬಡಾವಣೆಯಲ್ಲಿ ಕೆಲವು ಮನೆಗಳನ್ನೂ ತೆರೆವು ಮಾಡಿತ್ತು. ಆಗ ಸುದ್ದಿ ಆಗಿತ್ತು. ಅದೇ ಈ ಪ್ರದೇಶ.

BheemanaKatteಭೀಮನಕಟ್ಟೆ ಕಡಿಮೆ ಪ್ರದೇಶದಲ್ಲಿದ್ದರೂ, ಪಕ್ಕದಲ್ಲಿ ಕಲ್ಲುಗಣಿಯನ್ನು ಹೊಂದಿರುವುದರಿಂದ ಅಪಾಯಕಾರಿ. ಇಲ್ಲಿ ಕೆಲವು ಬಾರಿ ಈಜುವಾಗ ಒಂದಿಬ್ಬರು ಮಕ್ಕಳು ಮುಳುಗಿ ಮರಣಹೊಂದಿದ್ದರು. ಇಲ್ಲಿನ ನೀರು ಹೊರಬಿದ್ದು, ವೃಷಭಾವತಿ ಕಣಿವೆಗೆ ಸೇರುತ್ತದೆ. ಈ ಕೆರೆಯನ್ನು ರಕ್ಷಿಸಲು ಬಿಬಿಎಂಪಿ ಮುಂದಾಯಿತು. ಅದರಲ್ಲೂ ಸ್ಥಳೀಯರೇ ಆಗಿರುವ ಸಂಸದೆ ಬಿ. ಜಯಶ್ರೀ ಅವರು ತಮ್ಮ ನಿಧಿಯಿಂದ ೩೦ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದರು. ಸ್ಥಳೀಯರ ಒತ್ತಾಸೆಯಿಂದ ಸಂಸದರ ಹಣ ಬಂದರೂ, ಟೆಂಡರ್ ಪ್ರಕ್ರಿಯೆ ಎಲ್ಲ ಪೂರ್ಣಗೊಂಡು ಒಂದು ವರ್ಷದ ನಂತರ ಅಭಿವೃದ್ಧಿ ಕೆಲಸ ಆರಂಭವಾಯಿತು. ಈಗ ಕೆರೆಯ ಸುತ್ತ ಫೆನ್ಸಿಂಗ್ ಮಾಡುವ ಕೆಲಸ ಮಾಡಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಸಂಘವೂ ಕೆರೆಯ ಸ್ವಚ್ಛತೆ ಕಾಪಾಡಿಕೊಳ್ಳುವ ಸಲುವಾಗಿ ಜವಾಬ್ದಾರಿಯನ್ನೂ ವಹಿಸಿಕೊಂಡಿತು. ಕೆರೆಯ ಸುತ್ತ ಸ್ವಚ್ಛತೆ ಹಾಗೂ ಸಸ್ಯಗಳನ್ನು ನೆಟ್ಟು ಪೋಷಿಸುವುನ್ನು ನಡೆಸಿಕೊಂಡು ಬರುತ್ತಿದೆ.  ಇಷ್ಟೆಲ್ಲ ಶ್ರಮಪಟ್ಟು ಭೀಮನಕಟ್ಟೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿರುವಂತೆಯೇ, ಗಣಪತಿ ಹಬ್ಬದ ದಿನದಿಂದ ಇಲ್ಲಿ ಮೂರ್ತಿ ವಿಸರ್ಜನೆ ಜತೆಗೆ ತ್ಯಾಜ್ಯ ಸುರಿಯುವ ಕಾರ್ಯ ನಡೆಯುತ್ತಿರುವುದು ಸ್ಥಳೀಯರಲ್ಲಿ ಅಸಮಾಧಾನ ತಂದಿದೆ. ಎಷ್ಟೇ ಪರಿಸರ ಕಾಳಜಿ ಮೂಡಿಸಿದರೂ, ಜನರು ಅದೇ ಲೋಹಯುಕ್ತ, ವಿಷಕಾರಿ ಮೂರ್ತಿಗಳನ್ನೇ ಪೂಜಿಸಿ ವಿಸರ್ಜಿಸುತ್ತಿದ್ದಾರೆ. ಇಷ್ಟಾದರೆ ಹಬ್ಬದ ಸಂದರ್ಭದ ಎಂದು ಸಹಿಸಿಕೊಳ್ಳಬಹುದಿತ್ತೇನೋ? ಆದರೆ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಕೆರೆಯ ಅಂಗಳದಲ್ಲಿ ನಿತ್ಯವೂ ತ್ಯಾಜ್ಯ ಸುರಿಯಲಾಗುತ್ತಿದೆ. ಮಧ್ಯರಾತ್ರಿ ಇಲ್ಲಿ ಕುಡುಕರು ಹಾಗೂ ತ್ಯಾಜ್ಯ ವಿಸರ್ಜಿಸುವ ಟ್ರ್ಯಾಕ್ಟರ್‌ಗಳ ಅಬ್ಬರವೇ ಹೆಚ್ಚು. ಈ ಸಂದರ್ಭದಲ್ಲಿ ಕಾರ್ಪೊರೇಟರ್, ಬಿಬಿಎಂಪಿ ಎಂಜಿನಿಯರ್‌ಗಳು ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವರ್ಷ ಈ ಕೆರೆಯಲ್ಲಿ ಮೂರ್ತಿಗಳ ವಿಸರ್ಜನೆ ಆಗಿತ್ತು. ಆಗ ಅವುಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾದರೂ ಕೆಲಸ ಆಗಿಲ್ಲ. ಬದಲಿಗೆ ಈಗ ಈ ಪ್ರದೇಶ ಡಂಪಿಂಗ್ ಯಾರ್ಡ್ ಆಗುತ್ತಿದೆ ಎಂಬುದೇ ಸ್ಥಳೀಯರ ನೋವು.

ಹಬ್ಬ ಹಾಗೂ ಕೆಲವು ಸಂಪ್ರದಾಯಗಳನ್ನು ಪಾಲಿಸುವ ನಾವು, ಅದೇ ರೀತಿ ಪೂರ್ವಜರು ನಮಗಾಗಿ ನೀಡಿರುವ ಜಲಮೂಲಗಳನ್ನು ಉಳಿಸಿಕೊಳ್ಳುವುದೂ ತಮ್ಮ ಕರ್ತವ್ಯ ಎಂದು ಭಾವಿಸಲೇಬೇಕಿದೆ. ಆದರೆ, ಇಂತಹ ಭಾವನೆ ಮೂಡದೆ, ‘ನಮ್ ತಾತನ್ ಕಾಲದಿಂದ ಇಲ್ಲೇ ಬಿಡುತ್ತೇ’ ಎಂದು ಮತ್ತಷ್ಟು ಜನರನ್ನು ಉತ್ತೇಜಿಸಿ ಪರಿಸರ ಹಾಳು ಮಾಡುವ ಜನರು ಪಾಠ ಕಲಿಯಬೇಕು. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಂಜಿನಿಯರ್ ಮತ್ತು ಪೊಲೀಸರ ಪಾತ್ರವೂ ಇದೆ. ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರಿಂದಲೇ ಇಂತಹ ಕಲುಷಿತ ಹಾಗೂ ಪರಿಸರ ಮಾರಕ ಕೃತ್ಯಗಳಾಗುತ್ತಿರುವುದು. ಸರಕಾರದ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂಬುದೇ ಸ್ಥಳೀಯರ ಆಗ್ರಹ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*