ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬತ್ತಿದ ಕೊಳವೆಯಲ್ಲಿ ಉಕ್ಕಿ ಹರಿಯಿತು ಸಮೃದ್ಧ ನೀರು

ತುಮಕೂರು: ಸಕಲ ಜೀವರಾಶಿಗಳಿಗೆ ನೀರು ಅತ್ಯಂತ ಅಮೂಲ್ಯ ಎಂದು ಹೇಳುವ ಜನರೆಲ್ಲ ನೀರನ್ನು ಸಂರಕ್ಷಿಸುವುದಿಲ್ಲ. ಒಣ ಭಾಷಣಗಳಿಂದ ನೀರು ಉಕ್ಕುವುದಿಲ್ಲ. ಅಂತರ್ಜಲ ಹೆಚ್ಚುವುದಿಲ್ಲ. ಆದರೆ ಮೌನ ಕಾಯಕದಲ್ಲಿ ನೀರನ್ನು ನಾಳಿನ ನೆಮ್ಮದಿಗಾಗಿ ಸಂರಕ್ಷಿಸುವಲ್ಲಿ ಜಲಯೋಧರು ಅಲ್ಲಲ್ಲಿ ಮಾದರಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಅಯ್ಯಪ್ಪ ಮಸಗಿಯೂ ಒಬ್ಬರು.

Photo-2ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ವಾಣಿಜ್ಯ ಹೋಬಳಿ ಕೇಂದ್ರ. ಇಲ್ಲಿಗೆ ಸುಮಾರು ಒಂದು ಕಿ.ಮೀ. ದೂರದ ಹಳ್ಳ, ದಿನ್ನೆ ಪ್ರದೇಶವಿದೆ. ಅಲ್ಲಿ ಮೂರೂವರೆ ಎಕರೆ ಜಮೀನನ್ನು ಕಳೆದ ಮೂರು ವರ್ಷಗಳ ಹಿಂದೆ ಖರೀದಿ ಮಾಡಿದ್ದರು. ವಾಡಿ(ಮರವಳಿ ತೋಟ) ವ್ಯವಸಾಯ ಮಾಡಲು ನಿರ್ಧರಿಸಿದರು. ಆದರೆ ಅಲ್ಲಿ ಕೊರೆದ ಕೊಳವೆ ಬಾವಿಯಲ್ಲಿ ನೀರು ಬರಲಿಲ್ಲ. ಆದರೆ ಅವರು ಧೃತಿಗೆಡಲಿಲ್ಲ. ನೀರಿಲ್ಲದ ಕೊಳವೆಬಾವಿಗೆ ಜಲ ಮರುಪೂರಣ ಮಾಡಲು ನಿರ್ಧರಿಸಿದರು. ತಮ್ಮ ಜಮೀನಿನ ಪಕ್ಕದಲ್ಲೇ ಇರುವ ಗೆಳೆಯ ಅಶೋಕ್ ಜಮೀನಿನಲ್ಲಿ ಹರಿದು ಹೋಗುವ ಹಳ್ಳದಲ್ಲಿ ಒಂದು ಸಣ್ಣ ಕೆರೆಯನ್ನು ಮುಕ್ಕಾಲು ಎಕರೆಯಲ್ಲಿ ನಿರ್ಮಿಸಿದರು. ಮಳೆ ನೀರು ೧೪ ಅಡಿ ತುಂಬಿದ ನಂತರ ಈ ಮೊದಲೇ ಅಳವಡಿಸಿರುವ ಪೈಪ್ ಮೂಲಕ ನೀರು ನೇರವಾಗಿ ನೀರಿಲ್ಲದ ಕೊಳವೆಬಾವಿಗೆ ಹರಿದು ಹೋಗುತ್ತದೆ. ಆ ಕೊಳವೆಬಾವಿಯ ಪೈಪಿನ ಸುತ್ತಲೂ ೧೫ ಅಡಿ ಆಳ, ೧೦ಅಡಿ ಅಗಲದ ಗುಂಡಿ ತೆಗೆಯಲಾಗಿದೆ. ಆಗ ಕೇಸಿಂಗ್ ಪೈಪ್ ಉದ್ದವಾಗಿ ಕಾಣುತ್ತದೆ. ಭೂಮಟ್ಟದಿಂದ ಎರಡು ಅಡಿ ಕೆಳಗೆ ಒಂದು ಅಡಿ ಬಿಟ್ಟು ಒಂದು ದಪ್ಪ ಪೆನ್ಸಿಲ್ ತೂರುವಷ್ಟು ಸುಮಾರು ೧,೨೦೦ ರಂಧ್ರವನ್ನು ಕೇಸಿಂಗ್ ಪೈಪ್‌ಗೆ ಕೊರೆದಿದ್ದಾರೆ. ಅದರ ಸುತ್ತ ಸೊಳ್ಳೆಪರದೆಯನ್ನು ಸುಮಾರು ೧೦ ಪದರ ಕಟ್ಟಿದ್ದಾರೆ. ಜೊತೆಗೆ ಮೂರು ಅಡಿಯಷ್ಟು ೨೦ ಎಂ.ಎಂ. ಗಾತ್ರದ ಜಲ್ಲಿ, ಮರಳನ್ನು ತುಂಬಿದ್ದಾರೆ. ಕೇಸಿಂಗ್ ಪೈಪಿನ ಸುತ್ತ ೩ರಿಂದ ೪ ಅಡಿ ವ್ಯಾಸದಲ್ಲಿ ಸೀಮೆಂಟ್ ರಿಂಗುಗಳನ್ನು ನೆಲ ಮಟ್ಟದವರೆಗೆ ಹಾಕಿದ್ದಾರೆ. ವರು ಎರಡು ಕೊಳವೆ ಬಾವಿಗಳನ್ನು ಕೊರೆಸಿರುವುದು ಕೇವಲ ೩೫೦ ಅಡಿ. ಅಷ್ಟಕ್ಕೇ ಜಲ ಮರುಪೂರಣದಿಂದ ಸಮೃದ್ಧ ನೀರು ದೊರೆತಿದೆ.

Photo-4ರಭಸವಾಗಿ ಬರುವ ಮಳೆ ನೀರಿನ ಜೊತೆ ಕಸ, ಕಡ್ಡಿಯೂ ಬರುತ್ತದೆ. ಆಗ ಈ ವ್ಯವಸ್ಥೆಯಿಂದ ಕಲ್ಮಷಗಳೆಲ್ಲ ಹೊರಗೆ ಉಳಿದು ನೀರು ಗುಂಡಿಗೆ ಇಳಿಯುತ್ತದೆ. ಹಾಗೆ ಇಳಿಯುವ ನೀರು ಭೂಮಿಯ ಆಳಕ್ಕಿಳಿದು ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಅಯ್ಯಪ್ಪ ಮಸಗಿ ಅವರ ಈ ವಿಧಾನದಿಂದ ಅವರ ಕೊಳವೆ ಬಾವಿಯೊಂದೇ ನೀರಿನ ಮಟ್ಟ ಹೆಚ್ಚಿಸಿಕೊಂಡಿಲ್ಲ. ಸುತ್ತಮುತ್ತ ಇರುವ ನೂರಕ್ಕೂ ಅಧಿಕ ಕೊಳವೆಬಾವಿಗಳಲ್ಲೀಗ ಕೇವಲ ೩೦೦ರಿಂದ ೩೫೦ ಅಡಿ ಆಳಕ್ಕೆಲ್ಲ ನೀರು ಸಿಗುತ್ತದೆ. ಜೊತೆಗೆ ಒಂದು ಕಿ.ಮೀ. ವ್ಯಾಪ್ತಿಯಲ್ಲಿPhoto-5 ಅಂತರ್ಜಲದ ಮಟ್ಟದ ಹೆಚ್ಚಳಗೊಂಡಿದೆ. ವರ ತೋಟಕ್ಕೆ ಸಮೀಪದಲ್ಲೇ ಸರ್ಕಾರಕ್ಕೆ ಸೇರಿದ ಗೋಕಟ್ಟೆ ಮಳೆ ನೀರಿನಿಂದ ಆವೃತ್ತವಾಗಿದೆ, ಹೊಲ, ಬಯಲು ಪ್ರದೇಶದ ನೀರು ಗೋಕಟ್ಟೆಯಲ್ಲಿ ತುಂಬಿ ಹೊರಕ್ಕೆ ಹರಿಯುತ್ತದೆ. ಅದಕ್ಕೊಂದು ಕಾಲುವೆ ಮಾಡಿ, ಪಾಳು ಬಿದ್ದಿದ್ದ ಬಾವಿಗೆ ಆ ನೀರು ಹರಿಯುವಂತೆ ಮಾಡಿದ್ದಾರೆ. ಹೆಚ್ಚಾದ ನೀರು ಮೊದಲೇ ಅಳವಡಿಸಿರುವ ಪೈಪಿನ ಮೂಲಕ ಕೃಷಿ ಹೊಂಡಕ್ಕೆ ಹರಿದು ಅಲ್ಲಿಂದ ಕೊಳವೆ ಬಾವಿ ಪಕ್ಕ ನಿರ್ಮಿಸಿರುವ ಗುಂಡಿಗೆ ನೀರು ಹರಿಯುತ್ತದೆ. ಈ ವ್ಯವಸ್ಥೆಯಿಂದ  ಬತ್ತಿ ಹೋಗಿದ್ದ ಕೊಳವೆಗೆ ಜಲ ಮರುಪೂರಣಗೊಂಡು, ಕೇವಲ ೮೦ ಅಡಿಗೆಲ್ಲ ನೀರು ಸಮೃದ್ಧವಾಗಿ ಸಿಗುತ್ತಿದೆ.

ಅವರು ಜಮೀನಿನಲ್ಲಿ ಅಲ್ಲಲ್ಲಿ ಐದು ಸಣ್ಣ ಕೆರೆಗಳು, ೩೨ ಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ನಾಲ್ಕು ಕಂಪಾರ್ಟ್‌ಮೆಂಟ್ ಬದುಗಳನ್ನು ನಿರ್ಮಿಸಿ, ಬಿದ್ದ ಮಳೆ ನೀರು ಜಮೀನಿನಲ್ಲೇ Photo-3ಇಂಗುವಂತೆ ಮಾಡಿದ್ದಾರೆ. ಬತ್ತಿದ ಕೊಳವೆಬಾವಿ, ತೆರೆದ ಬಾವಿಗಳಿಗೆ ಮಳೆ ನೀರನ್ನು ಅಂತರ್ಜಲ ಹೆಚ್ಚಿಸಲು ಮರುಪೂರಣ ಮಾಡುವುದರಿಂದ ನೀರಿನ ಬರಕ್ಕೆ ಕಡಿವಾಣ ಹಾಕಬಹುದು. ಜೊತೆಗೆ, ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಇಲ್ಲವಾದರೆ, ಮಹಾರಾಷ್ಟ್ರದಲ್ಲಿ ಮತ್ತು ಉತ್ತರ ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಈ ವರ್ಷದಲ್ಲಿ ಕುಡಿಯುವ ನೀರಿಗೆ ಪಟ್ಟ ಬವಣೆ ನಿರಂತರವಾದರೆ ಸಕಲ ಜೀವ ರಾಶಿಗಳಿಗೆ ಉಳಿಗಾಲ ಇರುವುದಿಲ್ಲ. ಆದ್ದರಿಂದ ಬರ ಅಟ್ಟಲು ಅವರು ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ.

ಮಳೆ ನೀರನ್ನು ಹಿಡಿದಿಟ್ಟುಕೊಂಡು ಝಣ, ಝಣ ಹಣವನ್ನು ಗಳಿಸಬಹುದು ಎಂದು ಜೀವಂತ ಉದಾಹರಣೆಗಳ ಸಹಿತ ಅಯ್ಯಪ್ಪ ಮಸಗಿ ತಮ್ಮPhoto-6 ಮೂರೂವರೆ ಎಕರೆ ಪ್ರದೇಶದಲ್ಲಿ ತೋರಿಸಿಕೊಟ್ಟಿದ್ದಾರೆ. ಪನ್ನೇರಳೆ – ೧೨೦೦ ಸಸಿಗಳು, ಜಂಬು ನೇರಳೆ – ೫೦, ಸೀಬೆ – ೩೦೦೦, ನಿಂಬೆ – ೫೦೦, ಸಿಲ್ವರ್ - ೧೦೦೦, ಹೆಬ್ಬೇವು – ೫೦೦, ತೆಂಗು – ೨೫೦, ಮಾವು -೧೦ ಸೀತಾಫಲ -೨೩, ಹುಣಸೆ – ೪೦ ಗಿಡಗಳನ್ನು ನೆಟ್ಟಿದ್ದಾರೆ. ಅವುಗಳೆಲ್ಲ ಸಮೃದ್ಧವಾಗಿ ಬೆಳೆಯುತ್ತಿವೆ. ೨೦೧೪-೧೫ರಲ್ಲಿ ನುಗ್ಗೇಗಿಡಗಳು ಬಿಟ್ಟ ಕಾಯಿಗಳನ್ನು ಒಣಗಿಸಿ ಬೀಜಗಳನ್ನು ತಯಾರಿಸಲಾಯಿತು. ಗುಣಮಟ್ಟದ ಬೀಜಗಳು ಒಂದು ಸಾವಿರ ಕೆ.ಜಿ ದೊರೆತು, ಅವುಗಳ ಮಾರಾಟದಿಂದ ಒಂದು ಲಕ್ಷ ರೂ. ಬಂದಿದೆ. ಈ ಗಿಡಗಳೆಲ್ಲ ಇನ್ನೆರೆಡು ವರ್ಷಗಳಲ್ಲಿ ಫ಼ಸಲು ಕೊಡುತ್ತವೆ. ನಾನು ಹಾಕಿರುವ ಬಂಡವಾಳದ ಹತ್ತುಪಟ್ಟು ಲಾಭ ಬರುತ್ತದೆ. ನೀರು ಸಂರಕ್ಷಣೆ, ನೈಸರ್ಗಿಕ ಕೃಷಿಯಿಂದ ದೊರೆಯುವ ನೆಮ್ಮದಿ, ಸುಖ ಅನುಭವಿಸಿದವರಿಗೆ ಮಾತ್ರ ಗೊತ್ತು. ನನ್ನ ತೋಟದಲ್ಲಿ ವೈವಿಧ್ಯಮಯ ಪಕ್ಷಿಗಳು ಬರುತ್ತವೆ. ಅವುಗಳ ಆಟ, ನೋಟ ಕಣ್ಣಿಗೆ ಹಬ್ಬ, ಎಂದು ಎದೆಯುಬ್ಬಿಸಿ, ಅಷ್ಟಗಲ ಕಣ್ಣರಳಿಸಿ, ಹೆಮ್ಮೆಯಿಂದ ಹೇಳುತ್ತಾರೆ. ಅವರ ಖುಷಿಯೊಂದಿಗೆ ಭಾಗಿಯಾಗಲು ಮೊಬೈಲ್ ಸಂಖ್ಯೆ- ೯೪೪೮೩ ೭೯೪೯೭ಕ್ಕೆ ಸಂಪರ್ಕಿಸಬಹುದಾಗಿದೆ.

 ಲೇಖನ: ಜಿ. ಇಂದ್ರಕುಮಾರ್

ಚಿತ್ರಗಳು: ಎಸ್. ಉದಯ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*