ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸುಗಮ್ಯ ಭಾರತ ಕನಸಿಗೆ ಗದಗ ಜಿಲ್ಲೆಯ ಹರ್ತಿಯಲ್ಲ್ಲಿ ಶ್ರೀಕಾರ; ವಿಕಲಚೇತನರಿಗೆ ವಿಶೇಷ ವ್ಯವಸ್ಥೆಯ ಶೌಚಾಲಯ ಕಟ್ಟಿಸಿದ ಶೆಮೆಥಲ್

ಗದಗ (ಹರ್ತಿ): ಶೆಮೆಥಲ್ ಸುರೇಶ ಕೆ., ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ಮೂಲತಃ ಕೇರಳದವರು; ಸದ್ಯ ಉಡುಪಿ ನಿವಾಸಿ. ಮಲಯಾಳಂ ಅವರ ಮನೆಮಾತು. ಚೀಟಿ ಎತ್ತಿದಾಗ ಹರ್ತಿ ಗ್ರಾಮ ಇವರ ಪಾಲಿಗೆ ಬಂತು. ೧೨ ತಿಂಗಳ ಗ್ರಾಮ ವಾಸ್ತವ್ಯಕ್ಕೆ ಹೊರಟು ನಿಂತಾಗ, ಇಲ್ಲಿನ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಊಟ, ವಾತಾವರಣ, ಧಾರ್ಮಿಕ ನಂಬುಗೆ ಎಲ್ಲವೂ ಇವರಿಗೆ ಅಯೋಮಯ!

ಅದರಲ್ಲೂ ಗಂಡು ಮೆಟ್ಟಿನ ನೆಲದ, ಗ್ರಾಮ್ಯ ಸೊಗಡಿನ ಕನ್ನಡ ಪದಗಳು; ಬಳಸುವ ರೀತಿ ಮತ್ತು ಮಾತಿನ ವೇಗ, ಏರಿಳಿತ ಶೆಮೆಥಲ್‌ಗೆ ಯಾವುದೂ ತಳ-ಬುಡ ಅರ್ಥವೇ ಆಗುತ್ತಿರಲಿಲ್ಲ. ಸಹಜವಾಗಿ ಮಾತನಾಡಿದರೂ, ಅವರೆಲ್ಲ ಇವರೊಟ್ಟಿಗೆ ಜಗಳಕ್ಕೆ ಬಂದಂವರಂತೆ ಭಾಸವಾಗುತ್ತಿತ್ತಂತೆ! ಸಹಪಾಠಿ ಫೆಲೊಗಳ ಪ್ರೋತ್ಸಾಹದ ಮಾತು, ಸ್ವಾನುಭವಗಳ ಹಂಚಿಕೆ, ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರ ಮೆಂಟರಿಂಗ್, ಶೆಮೆಥಲ್ ಅವರನ್ನು ‘ಹರ್ತಿ’ ಗಟ್ಟಿಯಾಗಿ ನೆಲೆನಿಲ್ಲುವಂತೆ ಮಾಡಿತು!

ಹೀಗೆ, ಫೆಲೊ ಶೆಮೆಥಲ್ ಅವರಿಗೆ ನೈಸರ್ಗಿಕವಾಗಿಯೇ ಸವಾಲುಗಳು ಸಿಟಿ ಬಸ್‌ಗಳಂತೆ ಆರಂಭದಲ್ಲಿಯೇ ಬೆಂಬತ್ತಿದ್ದರಿಂದ ಗ್ರಾಮ ವಾಸ್ತವ್ಯದ ೧೨ ತಿಂಗಳು ನಿಜಕ್ಕೂ ಅವರು ಮಾಡಿದ್ದು ‘ಪ್ರಾಣಾಯಾಮ!’

ಸುಮಾರು ೮೫೩ (+೬) ಮನೆಗಳಿರುವ ‘ದೊಡ್ಡ ಗ್ರಾಮ’ ಹರ್ತಿ. ಸಮಾನ ಆಸಕ್ತಿ ಹೊಂದಿದ್ದ ಶಿವಲೀಲಾ ಅಂಗಡಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ. ಸಜ್ಜನ ರಾಜಕಾರಣಿ ಮತ್ತು ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ಮುತುವರ್ಜಿಯಿಂದ ೪ ಹಳ್ಳಿಗಳನ್ನು ಅಭಿವೃದ್ಧಿಗಾಗಿ ಆಯ್ಕೆ ಮಾಡಿಕೊಂಡಿದ್ದ ಪೈಕಿ, ಹರ್ತಿಯೂ ಒಂದು. ಹಾಗೆ ನೋಡಿದರೆ ಚಿಂಚಲಿ ಗ್ರಾಮ ಆಯ್ಕೆಯಾಗಬೇಕಿತ್ತು. ಡಿ.ಆರ್. ಪಾಟೀಲ ಅವರ ಅಪೇಕ್ಷೆಯ ಮೇರೆಗೆ ಶೆಮೆಥಲ್ ‘ಹರ್ತಿ’ಗೆ ಯುವ ವೃತ್ತಿಪರಳಾಗಿ ನಿಯೋಜನೆ ಗೊಂಡರು.

ಮೈಸೂರು, ಸ್ವಾಮಿ ವಿವೇಕಾನಂದ ಯುತ್ ಮೂವ್‌ಮೆಂಟ್ ಸಂಚಾಲಿತ, ವಿ-ಲೀಡ್‌ನಲ್ಲಿ ಮಾಸ್ಟರ್ಸ್ ಇನ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್ ಸ್ನಾತಕೋತ್ತರ ಪದವಿ ಪಡೆದು, ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ ಭಾಷೆಗಳ ಮೇಲೆ ಪ್ರಭುತ್ವವನ್ನೂ ಹೊಂದಿರುವ ಶೆಮೆಥಲ್, ವೈಯಕ್ತಿಕ ಕಲಿಕೆಯ ಆಸಕ್ತಿಯಿಂದ ಸ್ಕೋಪ್ ಮತ್ತು ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊಷಿಪ್‌ಗೆ ಆಯ್ಕೆಗೊಂಡವರು.

ಸಮುದಾಯದ ಬೇಡಿಕೆಗಳೇ ಬೇರೆ!?

PRA EXERCISE AT HARTI GADAG DISTRICT (1)ಶೆಮೆಥಲ್ ಹರ್ತಿಗೆ ಬಂದ ಹೊಸತರಲ್ಲಿ ಪೂರ್ವಸಿದ್ಧತೆ ಮಾಡಿಕೊಂಡಿದ್ದ ಯಾವ ಯೋಜನೆಗಳನ್ನೂ ಕೂಡಲೇ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಕಾರಣ, ಸ್ಥಳೀಯ ಸಮುದಾಯದ ಬೇಡಿಕೆಗಳೇ ಬೇರೆ ಇದ್ದವು! ಹರ್ತಿಯ ಮಹಿಳೆಯರನ್ನು ವಿಶ್ವಾಸಕ್ಕೆ ಪಡೆಯುವ ದೃಷ್ಟಿಯಿಂದ ಮದ್ಯಪಾನ ಸಂಯಮ ಮತ್ತು ಮದ್ಯಪಾನ-ಮುಕ್ತ ಗ್ರಾಮವಾಗಿ ಹರ್ತಿಯನ್ನು ಪರಿವರ್ತಿಸಲು ಮಹಿಳೆಯರ ಒತ್ತಾಯದ ಮೇರೆಗೆ ಮುಂದಾಗಬೇಕಾಯಿತು. ಸಂಘಟಿತ ಹೋರಾಟದ ಫಲವಾಗಿ ಗ್ರಾಮದ ಹೃದಯ ಭಾಗದಲ್ಲಿದ್ದ ಸಾರಾಯಿ ಅಂಗಡಿ ಊರ ಹೊರಗೆ ಸ್ಥಳಾಂತರಗೊಂಡಿತು. ಮಾರಾಟದ ಅವಧಿಯೂ ‘ಫ಼ಿಕ್ಸ್’ ಆಯಿತು! ಕುಡಿದು ತೂರಾಡುವ ಗಂಡಸರು ತಹಬದಿಗೆ ಬಂದರು. ಹೆಚ್ಚುವರಿ ಸಾರಾಯಿ ಅಂಗಡಿಗಳನ್ನು ಮುಚ್ಚಿಸಿ, ಸಾರಾಯಿ ಮಾರುತ್ತಿದ್ದವರಿಗೆ ಪಂಚಾಯ್ತಿ ಪರ್ಯಾಯ ಉದ್ಯೋಗ ನೀಡುವಂತೆ ಕೋರಲಾಯಿತು.

“ತನ್ನದಲ್ಲದ, ತನ್ನ ವ್ಯಾಪ್ತಿಗೆ ಒಳಪಡದ ಮತ್ತು ಶಕ್ತಿ ಮೀರಿದ ಕೆಲಸಗಳನ್ನೂ ಮಾಡಬೇಕಾದ ಅನಿವಾರ್ಯತೆ ಸಮುದಾಯ ಹೇಗೆ ಸೃಷ್ಟಿಸುತ್ತದೆ ಎಂಬುದಕ್ಕೆ, ನಮ್ಮ ಪ್ರಸಂಗಾವಧಾನವನ್ನು ಹೇಗೆ ಲಿಟ್ಮಸ್ ಪರೀಕ್ಷೆಗೆ ಸಂದರ್ಭಗಳು ಒಳಪಡಿಸುತ್ತವೆ ಎಂಬುದಕ್ಕೆ, ಎಷ್ಟೇ ಸಿದ್ಧಸೂತ್ರಗಳಿದ್ದರೂ ಅಳವಡಿಕೆಯ ಜಾಣ್ಮೆ ನಾವು ಮೈಗೂಡಿಸಿಕೊಂಡಿರಬೇಕು..” ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್, ಮೆಂಟರಿಂಗ್ ಸೆಷನ್‌ನಲ್ಲಿ ಸ್ಪಷ್ಟವಾಗಿ ಹೇಳಿದ ಮಾತು, ಇಲ್ಲಿ ಅನುಭವಕ್ಕೆ ದಕ್ಕಿತು!

 ಹರ್ತಿಯ ರೈತ ಮಹಿಳೆ ನೀಲವ್ವಾ ಮತ್ತು ಕೃಷಿಕ ಬಸಪ್ಪ ಹೊನ್ನಪ್ಪನವರ ಶೆಮೆಥಲ್ ಅವರ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಗ್ರಾಮದ ಹರಿಜನ ಕೇರಿ ಓಣಿಯಿಂದಲೇ ಇವರ ಸ್ವಚ್ಛತೆ ಅಭಿಯಾನ ಆರಂಭಗೊಳ್ಳುತ್ತದೆ.

ಬಾವಿಗಳಿವೆ; ಆದರೆ ಇಲ್ಲ!

೮೫೯ ಮನೆಗಳಿರುವ ದೊಡ್ಡ ಗ್ರಾಮ ಹರ್ತಿ. ಲಿಂಗಾಯತ ಸಮುದಾಯದ್ದೇ ಇಲ್ಲಿ ನಿರ್ಣಾಯಕ ಪಾತ್ರ. ಬಾಕಿ ಕುರುಬರು. ಆದರೂ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಕುಟುಂಬಗಳ ಸಂಖ್ಯೆ ಗಣನೀಯ. ಹೀಗಾಗಿ, ಹರಿಜನಕೇರಿ ಓಣಿ ಬಾವಿಯ ಬಳಕೆಯನ್ನು ಎಲ್ಲರೂ ನಿಲ್ಲಿಸಿ ವರ್ಷಗಳೇ ಗತಿಸಿದ್ದವು! ಕಸದ ಕೊಂಪೆಯಾಗಿತ್ತು ಬಾವಿ. ಶೆಮೆಥಲ್ ಗ್ರಾಮಸ್ಥರ ಮನವೊಲಿಸಿ ಬಾವಿಯನ್ನು ಸ್ವಚ್ಛಗೊಳಿಸುತ್ತಾರೆ.

ಬಸವಣ್ಣನ ಬಾವಿ ಎಂದೇ ಪ್ರಸಿದ್ಧವಾದ, ಊರ ದೇವರ ಪೂಜೆಗೆ ಬಳಕೆಯಾಗುತ್ತಿದ್ದ ಬಾವಿಯೂ ಹೆಚ್ಚೂ ಕಡಿಮೆ ಇದೇ ಸ್ಥಿತಿಗೆ ಹೋಗಿತ್ತು. ಬಸವಣ್ಣನ ಬಾವಿಯ ಶುದ್ಧೀಕರಣಕ್ಕೆ ಸ್ಕೋಪ್‌ಗೆ ಪ್ರಸ್ತಾವನೆ ಸಲ್ಲಿಸಿ, ೧೦ ಸಾವಿರ ರೂಪಾಯಿ ಪಡೆಯುವಲ್ಲಿ ಶೆಮೆಥಲ್ ಯಶಸ್ವಿಯಾಗುತ್ತಾರೆ. ಡಾ. ಪ್ರಕಾಶ ಭಟ್ ಅವರ ಮಾರ್ಗದರ್ಶನದಲ್ಲಿ ಕ್ರಿಯಾಯೋಜನೆ ರೂಪುಗೊಳ್ಳುತ್ತದೆ. ಗ್ರಾಮಸ್ಥರು ಶ್ರಮದಾನಕ್ಕೆ ಸನ್ನದ್ಧರಾಗುತ್ತಾರೆ. ಕೇವಲ ೧೫ ದಿನಗಳಲ್ಲಿ ದೇವರ ಬಾವಿ ಶುದ್ಧಗೊಂಡು, ನಳನಳಿಸುತ್ತದೆ. ರಕ್ಷಣಾ ಬೇಲಿಯೂ ನಿರ್ಮಾಣಗೊಳ್ಳುತ್ತದೆ! ಸೆಲೆ ಒತ್ತರಿಸಿದ್ದು ಈಗ ಬಿರು ಬೇಸಿಗೆಯಲ್ಲೂ ಬಾವಿ ಮೈದುಂಬಿದೆ.

ಹರ್ತಿ ಫ್ಲೋರೈಡ್ ಪೀಡಿತ ಗ್ರಾಮ!

ಗ್ರಾಮದ ಜನರ ವಿಶ್ವಾಸ ಗಳಿಸಿದ ಶೆಮೆಥಲ್, ಕುಡಿಯುವ ನೀರಿನ ಸಮಸ್ಯೆಗಳತ್ತ ಮುಖ ಮಾಡುತ್ತಾರೆ. ಗ್ರಾಮದ ಸುಮಾರು ೧೦೦ ಮನೆಗಳಿಗೆ ಪೈಪ್‌ಲೈನ್ ಜೋಡಿಸಿ, ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಯಶಸ್ವಿಯಾಗಿ ಸ್ಕೋಪ್ ನಿಭಾಯಿಸುತ್ತದೆ. ‘ನೀರು ಹೊರುವ ಕಾಯಕ’ದಿಂದ ಮುಕ್ತಿ ಕೊಡಿಸಿದ ಶೆಮೆಥಲ್ ಹರ್ತಿ ಅಮ್ಮಂದಿರಿಗೆ ಮನೆ ಮಗಳಾಗುತ್ತಾರೆ!

ವಿಚಿತ್ರವೆಂದರೆ, ಹರ್ತಿ ಫ್ಲೋರೈಡ್ ಪೀಡಿತ ಗ್ರಾಮ! ಶಾಲೆಗೆ ಹೋಗುವ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿದ ಶೆಮೆಥಲ್ ಅವರಿಗೆ, ನಲ್ಲಿಯ ನೀರು ಕುಡಿಯಲು ಬಳಸುವ ಮಕ್ಕಳಲ್ಲಿ ‘ಡೆಂಟಲ್ ಫ್ಲೋರೋಸಿಸ್’ ಹೇರಳವಾಗಿ ಗೋಚರಿಸುತ್ತದೆ. ಗ್ರಾಮ ಪಂಚಾಯ್ತಿಗೆ ಯೋಜನಾ ಪ್ರಸ್ತಾವನೆ ಸಲ್ಲಿಸಿ, ಶಿಕ್ಷಕರ ಮನವೊಲಿಸಿ ಶಾಲೆಯ ಮಕ್ಕಳಿಗಾಗಿಯೇ ಪ್ರತ್ಯೇಕ ಫಿಲ್ಟರ್, ಸಿಸ್ಟೆರ್ನ್ ಮತ್ತು ಹೊಸ ಪೈಪ್ ಅಳವಡಿಸಿ ಶುದ್ಧ ನೀರನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತಾರೆ. ದಂತ ಪರೀಕ್ಷೆಗೂ ಮಕ್ಕಳನ್ನು ಒಳಪಡಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ.

ಇಷ್ಟು ವರ್ಷ, ಈ ಊರಿನ ಜನ ಇದೇ ನೀರನ್ನು ಕುಡಿದು ಅದ್ಹೇಗೆ ಕಾಲ ಕಳೆದರು? ಎಂಬ ಪ್ರಶ್ನೆ ದಿಗಿಲು ಹುಟ್ಟಿಸುತ್ತದೆ. ಕಾರಣ ಹುಡುಕ ಹೋದ ಫೆಲೊ ಶೆಮೆಥಲ್ ಅವರಿಗೆ, ಆಘಾತಕಾರಿ ಬೆಳವಣಿಗೆ ಗಮನಕ್ಕೆ ಬರುತ್ತದೆ. ಫ್ಲೋರೈಡ್ ಅಂತರ್ಜಲ ಹೊಂದಿರುವ ಬೆಲ್ಟ್ ಮೇಲೆಯೇ ಗಟ್ಟಿಯಾಗಿ ‘ಪೃಷ್ಠ ಪ್ರತಿಷ್ಟಾಪಿಸಿರುವ’ ಹರ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ‘ಆರ್.ಓ’ ಘಟಕವಿದ್ದರೂ, ವರ್ಷಗಟ್ಟಲೇ ಬಂದ್ ಬಿದ್ದಿರುವುದು ಕಳವಳ ಹುಟ್ಟಿಸುತ್ತದೆ.

ಗ್ರಾಮ ಪಂಚಾಯ್ತಿ ಸದಸ್ಯರು, ಮಹಿಳಾ ಸಂಘಗಳು, ಯುವಜನ ಸ್ವಯಂಸೇವಾ ಸಂಸ್ಥೆ ಮತ್ತು ಸ್ಕೋಪ್ ಒಗ್ಗೂಡಿಸಿ, ಫ್ಲೋರೈಡ್ ನೀರು ಬಳಕೆಯ ಅನಾಹುತಗಳ ಬಗ್ಗೆ ಮಾಹಿತಿ ಒದಗಿಸಿ, ಹಲ್ಲು ಹಳದಿಯಾಗುವುದರಿಂದ ಅದೊಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಬಹುದು; ಈ ಗ್ರಾಮಕ್ಕೆ ಯಾರೂ ಹೆಣ್ಣು ಕೊಡಲಾರರು ಮತ್ತು ಇಲ್ಲಿನ ಹೆಣ್ಣು ಮಕ್ಕಳನ್ನು ಯಾರೂ ಮದುವೆಯಾಗಲು ಮಂದೆ ಬಾರರು; ಕಾಲಕ್ರಮೇಣ ಎಲ್ಲವೂ ಡೊಂಕಾಗಿ, ಸಂಧಿವಾತ ಹಿರಿಯರಲ್ಲಿ ಉಲ್ಬಣಿಸಬಹುದು ಎಂದು ಮನವರಿಕೆ ಮಾಡಿದರು ಫೆಲೊ ಶೆಮೆಥಲ್.

ಜನ ಸಮಸ್ಯೆಯ ಗಂಭೀರತೆ ಅರಿತು, ಗ್ರಾಮ ಪಂಚಾಯ್ತಿ ಮೇಲೆ ಒತ್ತಡ ತಂದು ಕೆಟ್ಟು ನಿಂತಿದ್ದ ಶುದ್ಧ ನೀರಿನ ಘಟಕಕ್ಕೆ ಕಾಯಕಲ್ಪ ನೀಡಿದರು. ನೂರಾರು ಕುಟುಂಬಗಳು ಸದ್ಯ ಈ ಘಟಕದಿಂದ ಕುಡಿಯುವ ನೀರನ್ನು ಪಡೆದುಕೊಳ್ಳುವಂತಾಗಿದೆ.

ಕ್ಯಾನ್‌ಗಳಿಲ್ಲ; ಅದಕ್ಕೆ ಫ್ಲೋರೈಡ್ ನೀರು ಕುಡಿಯುತ್ತೇವೆ!

ಈ ಮಧ್ಯೆ, ಕ್ಯಾನ್‌ಗಳಿಲ್ಲದ್ದಕ್ಕೆ ಕುಡಿಯುವ ನೀರು ಹೊತ್ತೊಯ್ಯಲಾಗದೇ, ಲಭ್ಯವಿದ್ದ ಫ್ಲೋರೈಡ್ ನೀರನ್ನೇ ಬಹುತೇಕ ಗ್ರಾಮಸ್ಥರು ಬಳಕೆ ಮಾಡುತ್ತಿರುವ ಸಂಗತಿಯೂ ಶೆಮೆಥಲ್ ಗಮನಕ್ಕೆ ಬರುತ್ತದೆ. ಕೂಡಲೇ ಸ್ಕೋಪ್‌ಗೆ ಪ್ರಸ್ತಾವನೆ ಸಲ್ಲಿಸಿ, ಮೊದಲ ಹಂತದಲ್ಲಿ ೨೫ ಕುಟುಂಬಗಳಿಗೆ ೫,೬೦೦ ರೂಪಾಯಿ ವೆಚ್ಚದಲ್ಲಿ ನೀರಿನ ಸೂಕ್ತ ಕ್ಯಾನ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳುತ್ತಾರೆ. ಪರಿಸ್ಥಿತಿಯ ಗಂಭೀರತೆ ತಿಳಿದು, ಗ್ರಾಮ ಪಂಚಾಯ್ತಿ ೫೦ ಕುಟುಂಬಗಳಿಗೆ ೭,೫೦೦ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರನ್ನು ಹೊತ್ತೊಯ್ಯಲು ಅನುವಾಗುವ ಕ್ಯಾನ್ ಒದಗಿಸುತ್ತದೆ. ಜೊತೆಗೆ, ಒಂದೇ ಗಾಲಿಯ ತಳ್ಳು ಗಾಡಿಯನ್ನೂ ವ್ಯವಸ್ಥೆಗೊಳಿಸುತ್ತದೆ.

ವಿಶೇಷವೆಂದರೆ, ಹರ್ತಿಯಲ್ಲಿ ಜನ ನೀರು ಬಂದಾಗಲೊಮ್ಮೆ ಮನೆಯ ಮುಂಬಾಗಿಲಲ್ಲೇ ಬಟ್ಟೆ ಒಗೆಯುವ ಕಾಯಕಕ್ಕೆ ಒಗ್ಗಿಕೊಂಡಿದ್ದರು. ಇಂತಹ ನಡೆಯಿಂದ ತಮ್ಮ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ಬಗ್ಗೆ ಅವರಿಗೆ ತಿಳಿವಳಿಕೆ ಇರಲಿಲ್ಲ. ಈ ನಡುವಳಿಕೆಯನ್ನು ಪ್ರಶ್ನಿಸಿದ ಫೆಲೊ ಶೆಮೆಥಲ್‌ಗೆ ಗೊತ್ತಾಗಿದ್ದು, ಬಟ್ಟೆ ಒಗೆಯಲು ‘ಒಗ್ಯಾಣದ ಕಲ್ಲು’ ಇರದೇ ಇರುವುದು! ಕೂಡಲೇ ಸ್ಕೋಪ್‌ಗೆ ಪ್ರಸ್ತಾವನೆ ಸಲ್ಲಿಸಿ ೧೫ ಸಾವಿರ ರೂಪಾಯಿ ವೆಚ್ಚದಲ್ಲಿ ಬಟ್ಟೆ ಒಗೆಯಲು ಅನುವಾಗುವಂತೆ ಒಂದೇ ಬದಿಯಲ್ಲಿ ೧೦ ಒಗ್ಯಾಣದ ಕಲ್ಲುಗಳನ್ನು ನಿರ್ಮಿಸಿಕೊಟ್ಟು, ಬಳಸಿದ ನೀರಿಗೆ ಸರಿಯಾದ ಹರಿ ನಿರ್ಮಿಸಿ, ಪರಿಸರ ಅಸ್ನೇಹಿ ನಡವಳಿಕೆಗೆ ಪೂರ್ಣವಿರಾಮ ಹಾಕುವಲ್ಲಿ ಅವರು ಯಶಸ್ವಿಯಾದರು.

ಬಯಲು ಶೌಚ; ಬೆಳ್ಳಂಬೆಳಗ್ಗೆ ಸೀಟಿ!

ಈಗ ಅವರ ಪ್ರಾಧಾನ್ಯತಾ ಪಟ್ಟಿಯಲ್ಲಿ ಬಯಲು ಶೌಚದ ಸಮಸ್ಯೆ ಎದ್ದು ಕುಳಿತಿತ್ತು. ಸಮೀಕ್ಷೆ ಕೈಗೊಂಡರೆ ಹರ್ತಿಯ ಒಟ್ಟು ೮೫೩ ಮನೆಗಳ ಪೈಕಿ ಕೇವಲ ೧೭೩ ಮನೆಗಳಿಗೆ ಮಾತ್ರ?????????? ಶೌಚಾಲಯಗಳಿದ್ದು, ಬಳಕೆ ಅದರ ಅರ್ಧದಷ್ಟು! ಅರ್ಥಾತ್, ಇಡೀ ಊರೇ ಬಯಲು ಶೌಚದ ಕೂಪ!

ನಿರ್ಮಲ ಭಾರತ ಅಭಿಯಾನದ ಸಂಯೋಜಕ ಕೃಷ್ಣ ಅವರೊಂದಿಗೆ ಸಮಾಲೋಚಿಸಿ, ಶೆಮೆಥಲ್ ಗ್ರಾಮದ ಯುವಜನತೆಯ (ಯುವತಿಯರು + ಯುವಕರು) ಎರಡು ತಂಡ ಕಟ್ಟುತ್ತಾರೆ. ಬೆಳ್ಳಂಬೆಳಗ್ಗೆ ಕೈಯಲ್ಲಿ ಚಂಬು ಹಿಡಿದು ಬಯಲು ಶೌಚಕ್ಕೆ ಲೋಕಾಭಿರಾಮವಾಗಿ ಹೊರಟವರನ್ನು ದಾರಿ ಮಧ್ಯೆ ತಡೆದು ನಿಲ್ಲಿಸಿ, ಹೂ ನೀಡಿ ಬಯಲು ಶೌಚಕ್ಕೆ ಹೋಗದಂತೆ ಮನವಿ ಮಾಡುವ ಕಾಯಕ! ನಂತರ ಬಯಲು ಶೌಚದ ರಸ್ತೆಗಳ ಅಕ್ಕಪಕ್ಕ ನಿಂತು ಸೀಟಿ ಊದಿ ಮನೆಗೊಂದು ಶೌಚಾಲಯ ಕಟ್ಟಿಕೊಳ್ಳುವಂತೆ ಮನವಿ! ಮೊದಲು ಸಾಕಷ್ಟು ವಿರೋಧಿಸಿದವರು, ಇನ್ನು ಶೌಚಾಲಯ ಕಟ್ಟಿಕೊಳ್ಳದಿದ್ದರೆ ತಿಂಗಳ ರೇಷನ್‌ಗೆ ಸಂಚಕಾರ ಬರುವುದು ಪಂಚಾಯ್ತಿಯಿಂದ ಖಾತ್ರಿ ಮಾಡಿಸಿ, ಡಂಗುರ ಸಾರುತ್ತಿದ್ದಂತೆ, ಅರಿವಿಗೆ ಶೌಚಾಲಯ ಕಟ್ಟಿಕೊಳ್ಳಲು ಮುಂದಾಗುತ್ತಾರೆ!

ಫೆಲೊ ಶೆಮೆಥಲ್ ಮನವರಿಕೆಯಿಂದ, ಒಟ್ಟು ೮೫೯ ಮನೆಗಳ ಪೈಕಿ ೩೩೫ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ರೂಪುಗೊಳ್ಳುತ್ತವೆ. ಕೇವಲ ೮ ತಿಂಗಳ ಅವಧಿಯಲ್ಲಿ ೧೩೮ ಶೌಚಾಲಯ ನಿರ್ಮಾಣಗೊಂಡಿದ್ದು, ವಿಶೇಷ ಪ್ರಯತ್ನ.

ಈ ಮಧ್ಯೆ, ಅಂಗನವಾಡಿ ಶೌಚಾಲಯಗಳು ಬಳಕೆಗೆ ಲಭ್ಯವಿರದ ಸಂಗತಿ ಬೆಳಕಿಗೆ ಬರುತ್ತದೆ. ಅವುಗಳ ದುರಸ್ತಿ ಮತ್ತು ಮನೆಯ ಅಂಗಳದಲ್ಲಿ ಜಾಗೆ ಇರದವರಿಗೆ ಹೆಚ್ಚುವರಿಯಾಗಿ ೪ ಶೌಚಾಲಯ ಕಟ್ಟಲು ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಕ್ರಿಯಾಯೋಜನೆ ಸಿದ್ಧಗೊಳ್ಳುತ್ತದೆ. ಸ್ಕೋಪ್ ತನ್ನ ಪಾಲಿನ ೧೫ ಸಾವಿರ ರೂಪಾಯಿಗಳನ್ನು ಈ ಕಾರ್ಯಕ್ಕೆ ಶೆಮೆಥಲ್ ಮೂಲಕ ವಿನಿಯೋಗಿಸುತ್ತದೆ. ಸದ್ಯ ೪೦ಕ್ಕೂ ಹೆಚ್ಚು ಕುಟುಂಬಗಳು ಅಂಗನವಾಡಿ ಶೌಚಾಲಯಗಳನ್ನು ಬಳಸುತ್ತಿವೆ.

ಸುಗಮ್ಯ ಭಾರತ ಯೋಜನೆ

??????????ಹೌದು, ಗ್ರಾಮದ ವಿಶೇಷ ಚೇತನ ಕುಟುಂಬಗಳಿಗೆ ಸುಗಮ್ಯ ಭಾರತ ಯೋಜನೆ ಅಡಿ ವಿಶೇಷ ಸೌಲಭ್ಯಗಳನ್ನು ಅಳವಡಿಸಿ, ಶೌಚಾಲಯ ಕಟ್ಟಬಹುದು. ಈ ಯೋಜನೆ ಪ್ರಗತಿ ಗಮನಿಸಲು ಹೋದ ಶೆಮೆಥಲ್, ಹೊಸ ಪ್ರಕರಣವೊಂದನ್ನು ಬೆಳಕಿಗೆ ತರುತ್ತಾರೆ. ಹರ್ತಿಯ ಪೀರಮ್ಮ ದಸ್ತಿ ನದಾಫ್ ಹಾಗೂ ದಾವೂದ್ ದಸ್ತಿ ನದಾಫ್ ಕುಟುಂಬ ವಿಕಲಚೇತನರಾಗಿದ್ದು, ಶೌಚಾಲಯ ಕಟ್ಟಿಕೊಳ್ಳಲು ಆಸಕ್ತಿ ಹೊಂದಿದ್ದರೂ ಸಾಧ್ಯವಾಗದೇ ಇರುವುದು. ಕಡು ಬಡತನದಲ್ಲಿರುವ ಕುಟುಂಬ. ದಿನದ ಗಳಿಕೆಯೇ ೭೫ ರೂಪಾಯಿಗಿಂತ ಕಡಿಮೆ. ಅದೂ ದಿನಗೂಲಿ ಲಭ್ಯವಾದರೆ!

ಶೆಮೆಥಲ್ ಈ ವಿಷಯವನ್ನು ಕೂಡಲೇ ಡಾ. ಪ್ರಕಾಶ ಭಟ್ ಅವರ ಗಮನಕ್ಕೆ ತರುತ್ತಾರೆ. ಸ್ಕೋಪ್ ಬಳಿ ಈ ಯೋಜನೆಗೆ ಯಾವುದೇ ಹಣಕಾಸಿನ ಸಹಾಯಾನುದಾನದ ‘ಪ್ರೊವಿಜನ್’ ಇರದೇ ಹೋದರೂ, ಪಿಟ್ ಒಂದಕ್ಕೆ ೧ ಸಾವಿರ ರೂಪಾಯಿ ಸ್ಕೋಪ್ ಒದಗಿಸಲು ಮುಂದಾಗುತ್ತದೆ. ೧೨ ಸಾವಿರ ರೂಪಾಯಿಗಳನ್ನು ಗ್ರಾಮ ಪಂಚಾಯ್ತಿ ವತಿಯಿಂದ ದೊರಕಿಸಿ ಕೊಡಲಾಗುತ್ತದೆ. ಅಂತೂ, ವಿಕಲಚೇತನರ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸಿದ ಧನ್ಯತೆ ಸ್ಕೋಪ್‌ನಲ್ಲಿ ಮನೆ ಮಾಡುತ್ತದೆ.

ಶೆಮೆಥಲ್ ಕೈಗೊಂಡ ಕಾರ್ಯಗಳನ್ನು ಗಮನಿಸಿದ ಡಿ.ಆರ್. ಪಾಟೀಲ ಅವರು, “ನಮ್ಮ ಸ್ಕೋಪ್‌ನ ಶೆಮೆಥಲ್ ಅವರ‍್ಹಂಗ ಪಿಡಿಓಗಳೂ ಹಳ್ಳಿಯೊಳಗ ಮನಿ ಮಾಡಕೊಂಡ ಇದ್ರ, ಹಳ್ಳಿಯ ಅರ್ಧ ಸಮಸ್ಯೆ ಬಗೆಹರಿದಂಗ.. ಮನಸ್ಸು ಮಾಡಬೇಕಲ್ಲ..!” ಅಂದಿದ್ದು, ವ್ಯವಸ್ಥಿತವಾಗಿ, ಕಾಲ ಮಿತಿಯಲ್ಲಿ ಮತ್ತು ಯೋಜನಾ ಬದ್ಧವಾಗಿ ಕೆಲಸ ಮಾಡುವ ಮನೋಸ್ಥಿತಿ ಇದ್ದರೆ, ಗ್ರಾಮೋದ್ಧಾರ ಕಷ್ಟವೇನಲ್ಲ! ಎಂಬ ಅರ್ಥದಲ್ಲಿ.

ಶೆಮೆಥಲ್ ಅವರಂತಹ ಯುವಜನ ನಮ್ಮ ಹಳ್ಳಿಗಳಿಗೆ ಬೇಕಾಗಿದ್ದಾರೆ!

****************************************************************************************************************************Shemethal - Harti Villageಫೆಲೊ ಶೆಮೆಥಲ್ ಸುರೇಶ ಕೆ, ಕೇರಳ. ಅವರ ಅನಿಸಿಕೆ –

ಹರ್ತಿಯೊಳಗ ನಾನು ಹೆದರಿದ್ದು ಕುರುಬರ ಹೆಣ್ಣು ಮಕ್ಕಳ ಬಾಯಿಗೆ! ಆಮೇಲೆ ಅರ್ಥ ಆಯ್ತು. ಹಲವು ಇಲ್ಲಗಳ ಮಧ್ಯೆ ‘ಹೌದು’ ಎಂಬಂತೆ ಕೆಲಸ ಮಾಡಬೇಕು ಎಂಬುದನ್ನು ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್ ನನಗೆ ಕಲಿಸಿತು. ಧೈರ್ಯ ತುಂಬಿತು. ಅನೇಕ ಬಾರಿ ಎದೆಗುಂದಿ ನನ್ನ ಬದ್ಧತೆಯ ಪ್ರಶ್ನೆಯೇ ಎದುರಾದಾಗ, ಸಾಕಪ್ಪ ಈ ಸಹವಾಸದ ಕೆಲಸ ಅಂದುಕೊಂಡಾಗ, ಕೆಲಸದ ಮೂಲಕ ಪರಸ್ಪರ ವಿಶ್ವಾಸಗಳಿಸುವ ಪಟ್ಟುಗಳನ್ನು ಕಲಿಸಿ, ಸಂಸ್ಕೃತಿ, ಆಹಾರ, ವಿಚಾರ ಭಿನ್ನವಾದರೂ.. ಹೊಂದಿಕೊಂಡು ಕೆಲಸ ಮಾಡುವ ಮನೋಸ್ಥಿತಿ ರೂಪಿಸಿಕೊಂಡೆ. ಹರ್ತಿ ಗ್ರಾಮ ವಾಸ್ತವ್ಯದ ಅನುಭವ ನನ್ನ ಮಟ್ಟಿಗೆ ಅನುಭಾವಗಮ್ಯ.

ಸಂಪರ್ಕ: shemethal@gmail.com / +೯೧ ೮೭೪೬೮ ೦೭೦೨೯

 ********************************************************************************************************

 ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

ಇದು ಸ್ಕೋಪ್-ಅರ್ಘ್ಯಂವಾಟ್ಸ್ಯಾನ್ಫೆಲೋಷಿಪ್ ಪ್ರೋಗ್ರಾಂಯಶೋಗಾಥೆಯ ಸರಣಿಯ ೬ನೆಯ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*