ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹಾರೋಬೆಳವಡಿ ಅಭಿವೃದ್ಧಿಗೆ ರಮೇಶ ‘ವಾಟ್ಸ್ ಆಪ್’!

ಧಾರವಾಡ (ಹಾರೋಬೆಳವಡಿ): ನಮ್ಮ ರಮೇಶ ಹಿಡದ ಕೆಲಸ ನೂರಕ್ಕ ನೂರ ಆದ್ಹಂಗರೀ.. ನಮ್ಮ ಊರಾಗ ಅವರು ಕೈ ಹಾಕಿದ್ದ ಒಂದ ಕೆಲಸ ಹುಸಿ ಹೋಗಿದ್ದ ತೋರಿಸ್ರೀ.. ನೋಡೋಣು..” ಹಾರೋಬೆಳವಡಿಯ ಶ್ರೀಮತಿ ಕಾಶವ್ವ ಮರಕುಂಬಿ ಅಭಿಮಾನದಿಂದ ಹೇಳುತ್ತಿದ್ದರೆHAROBELAVADI WORKS OF FELLOW UDUPI RAMESH NAIKA (1) ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ಉಡುಪಿ ರಮೇಶ ನಾಯ್ಕ್, ಮೂಲೆಯೊಂದರಲ್ಲಿ ತುಟಿಪಿಟಕ್ ಎನ್ನದೇ ನಿಂತಿದ್ದರು!

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಊರಿಗೆ ಮೂರು-ನಾಲ್ಕು ಮನೆಗಳು; ಒಂದೂರಿಂದ ಮತ್ತೊಂದು ಊರಿಗೆ ಕನಿಷ್ಟ ೨ ಕಿಲೋ ಮೀಟರ್ ದಾರಿ. ಜನರೇ ಕಾಣಿಸೋದಿಲ್ಲ ನಿಮಗೆ. ಇಲ್ಲಿ ಏನು ಮಾರಾಯ್ರೆ.. ಕಾಲು ಜೋಡಿಸಿ ನಿಲ್ಲುವಷ್ಟೂ ಜಾಗೆ ಬಿಡದೇ ಅಕ್ಕ-ಪಕ್ಕ ಮನೆಗಳು! ಎಲ್ಲೆಲ್ಲೂ ಜನವೇ ಜನ..”

ಫೆಲೊ ಉಡುಪಿ ರಮೇಶ ನಾಯ್ಕ್, ಸಂಸದ ಪ್ರಲ್ಹಾದ ಜೋಶಿ ಅವರು ಆಯ್ಕೆ ಮಾಡಿಕೊಂಡ ಆದರ್ಶ ಗ್ರಾಮ ಹಾರೋಬೆಳವಡಿಯ ಅರ್ಧ ಭಾಗಕ್ಕೆ ಉಸ್ತುವಾರಿಯಾಗಿ ಹೋದಾಗ ಮೊದಲು ಕಂಡ ಸಮಸ್ಯೆ! (ಮಂಜುನಾಥ ದಾನಿ ಇನ್ನೋರ್ವ ಫೆಲೊ ಅರ್ಧ ಊರಿನ ಉಸ್ತುವಾರಿ ವಹಿಸಿಕೊಂಡಿದ್ದರು.)???????????????????????????????

‘ನಾನು ಸಂಸದರ ಆದರ್ಶ ಗ್ರಾಮದ ಯೋಜನೆಗಳನ್ನು ಅನುಷ್ಟಾನಗೊಳಿಸಲು ಬಂದಿಲ್ಲ; ಸ್ಕೋಪ್‌ನಿಂದ ಕೆಲಸ ಮಾಡಲು ಬಂದಿದ್ದೇನೆ..’ ಡಂಗುರ ಹೊಡೆಸಬೇಕಾದ ಪರಿಸ್ಥಿತಿ. ಮೇಲಾಗಿ, ನಮ್ಮ ರಮೇಶ್‌ಗೆ ‘ರೀ’ ಹಚ್ಚಿ ಸಂಬೋಧಿಸಿ ರೂಢಿ ಇಲ್ಲ.. ಅರ್ಥಾತ್, ಭಾಷೆಯ ಸಮಸ್ಯೆ! ಇಷ್ಟು ಸಾಲದು ಎಂಬಂತೆ ಉತ್ತರ ಕರ್ನಾಟಕದ ಗ್ರಾಮ್ಯ ಸೊಗಡಿನ ಬೈಗುಳಗಳು.. ಹೈರಾಣಾದ ಯುವಕ! ಊಟ, ಭಯಂಕರ ಖಾರ.. ಖಾರ, ಮಾತ್ರವಲ್ಲ ಅವರ ಕರಾವಳಿ ಊಟಕ್ಕೂ ನಮ್ಮ ಭಾಗದ ಆಹಾರ ಪದ್ಧತಿಗೂ ವೈರತ್ವ ಇದ್ದಂತೆ ರಮೇಶಗೆ ಭಾಸವಾಗಿತ್ತಂತೆ.. ‘ನನ್ನ ನಾಲಿಗೆ ರುಚಿಯನ್ನೇ ಕಳೆದುಕೊಂಡಿದೆ ಮಾರಾಯ್ರೆ..’ ಪದೇ ಪದೇ ಒಂದೇ ಮಾತು.

ಹೀಗೆ, ನೈಸರ್ಗಿಕವಾಗಿಯೇ ಫೆಲೊ ರಮೇಶ ಅವರಿಗೆ ಸವಾಲುಗಳು ಸಿಟಿ ಬಸ್‌ಗಳಂತೆ ಆರಂಭದಲ್ಲಿಯೇ ಬೆಂಬತ್ತಿದ್ದರಿಂದ ಗ್ರಾಮ ವಾಸ್ತವ್ಯದ ೧೨ ತಿಂಗಳು ನಿಜಕ್ಕೂ ಅವರು ಮಾಡಿದ್ದು ‘ತಪಸ್ಸು’!

೬೧೦ ಮನೆಗಳಿರುವ ಪುಟ್ಟ ಪಟ್ಟಣ ಸದೃಶ, ಸಂಸದ ಪ್ರಲ್ಹಾದ ಜೋಶಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಲು, ತಮ್ಮ ಮತಕ್ಷೇತ್ರದ ಆದರ್ಶ ಗ್ರಾಮವಾಗಿ ಹಾರೋಬೆಳವಡಿಯನ್ನು ಆಯ್ಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ, ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್, ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ರಮೇಶ ನಾಯ್ಕ್ ಅವರ ಮೇಲೆ ಅಲ್ಲಿನ ಜನ ಸ್ವಾಭಾವಿಕವಾಗಿಯೇ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಹಾಗಾಗಿ, ಡಾ. ಪ್ರಕಾಶ, ಈ ಪುಟ್ಟ ಪಟ್ಟಣಕ್ಕೆ ಇಬ್ಬರು ಫೆಲೋಗಳನ್ನು ಒದಗಿಸಿದ್ದರು.

???????????????????????????????ಫೆಲೊ ರಮೇಶ ನಾಯ್ಕ್, ಮೊದಲು ಮಾಡಿದ ಕೆಲಸ ಶುದ್ಧ ಕುಡಿಯುವ ನೀರು ಮನೆ-ಮನೆಗೆ ಒದಗಬೇಕು; ಬಯಲು ಶೌಚ ವ್ಯವಸ್ಥೆ ಕೊನೆಗಾಣಬೇಕು ಎಂಬ ಯೋಜಿತ ಪ್ರಯತ್ನ. ಗ್ರಾಮದ ಹೆಣ್ಣು ಮಕ್ಕಳನ್ನು ಸ್ವಯಂ ಸೇವಾ ಸಂಘಗಳಾಗಿ ಓಣಿಗೊಂದರಂತೆ ಸಂಘಟಿಸಿ ಪಂಚಾಯ್ತಿರಾಜ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ; ನಮ್ಮ ಪಾತ್ರ ಈ ಆಡಳಿತದಲ್ಲಿ ಎಂಥದ್ದು? ಎಂಬುದನ್ನು ಮಹಿಳೆಯರಿಗೆ ತಿಳಿಸುವ ಕೆಲಸ ಮಾಡುತ್ತಾರೆ.

ಪರಿಣಾಮವೆಂಬಂತೆ, ಮಹಿಳೆಯರು ಶೌಚಾಲಯ ತಮ್ಮ ಗೌರವದ ಮತ್ತು ಆರೋಗ್ಯದ ಪ್ರತೀಕ ಎಂದು ಮನವರಿಕೆ ಮಾಡಿಕೊಳ್ಳುತ್ತಾರೆ. ಮನೆಯ ಗಂಡಸರಿಗೆ ದುಂಬಾಲು ಬೀಳುತ್ತಾರೆ. ೬೧೦ ಮನೆಗಳ ಪೈಕಿ ಇಡೀ ಊರಿಗೆ ಇದ್ದ ಶೌಚಾಲಯಗಳ ಸಂಖ್ಯೆ ಕೇವಲ ೭೮! ೮ ತಿಂಗಳ ಅವಧಿಯಲ್ಲಿ ರಮೇಶ ೧೫೮ ಮನೆಗಳಲ್ಲಿ ಶೌಚಾಲಗಳನ್ನು ಸಮುದಾಯದ ಸಹಭಾಗಿತ್ವದಲ್ಲಿಯೇ ನಿರ್ಮಿಸಿ, ಬಳಸಲು ಪ್ರೇರೇಪಿಸುತ್ತಾರೆ!

ರಮೇಶ ಅವರ ಕತೃತ್ವ ಶಕ್ತಿ ಅನಾವರಣಗೊಳ್ಳುವುದು ಒಂದು ದಶಕಕ್ಕೂ ಮೀರಿ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯೊಂದರ ಮೂಲಕ. ಬೆಟದೂರ ಓಣಿಯಲ್ಲಿ ೫೦ಕ್ಕೂ ಹೆಚ್ಚು ಮನೆಗಳಿಗೆ ಪೈಪ್‌ಲೈನ್ ಜೋಡಿಸಲಾಗಿದ್ದರೂ ಮೀಟರ್ ಒದಗದ್ದಕ್ಕೆ ಮನೆ ಮನೆಗೆ ಶುದ್ಧ ನೀರು ಮಲಪ್ರಭಾ ನದಿಯಿಂದ ಹರಿಯುವಂತಿರಲಿಲ್ಲ! ಗ್ರಾಮ ಪಂಚಾಯ್ತಿಯವರೂ ತಲೆ ಕೆಡಿಸಿಕೊಂಡಿರಲಿಲ್ಲ. ಮಹಿಳೆಯರ ನೀರು ಹೊರುವ ಕಾಯಕ ನಿತ್ಯವೂ ನಡೆದೇ ಇತ್ತು. ರಮೇಶ ಇದಕ್ಕೊಂದು ಪರಿಹಾರ ಹುಡುಕಲು ಮುಂದಾಗುತ್ತಾರೆ. ಬೆಟದೂರ ಓಣಿಯ ಜನರಿಂದಲೇ ೧,೯೦೦ ರೂಪಾಯಿ ವಂತಿಗೆ ಸಂಗ್ರಹಿಸುತ್ತಾರೆ. ಸ್ಕೋಪ್ ೩,೬೫೦ ರೂಪಾಯಿಗಳನ್ನು ತನ್ನ ಕಾಣಿಕೆಯಾಗಿ ನೀಡುತ್ತದೆ. ವಾಲ್ವ್ ಮತ್ತು ಪೈಪ್‌ಲೈನ್ ಹಾಗೂ ಮೀಟರ್ ಅಳವಡುತ್ತವೆ. ಕೇವಲ ಒಂದೇ ವಾರದಲ್ಲಿ ಮಲಪ್ರಭಾ ನದಿಯ ನೀರು ಮನೆ-ಮನೆಗೆ ಹರಿಯುತ್ತದೆ. ಗ್ರಾಮದ ಮಹಿಳೆಯರು ಬೆಟದೂರ ಓಣಿಗೆ ಬಂದು ಈ ಕೆಲಸ ನೋಡಿ ಹೋಗುತ್ತಾರೆ..! ರಮೇಶಗೆ ಅಭಿನಂದನೆಯ ಮಹಾಪೂರ!

ಈ ಮಧ್ಯೆ ರಮೇಶ ಬೆಳವಣಿಗೆಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಮಲಪ್ರಭಾ ನದಿಯ ನೀರು ಗ್ರಾಮದ ಮನೆಗಳಿಗೆ ಪೂರೈಕೆಯಾಗುತ್ತಿದ್ದಂತೆ, ಸಾಂಪ್ರದಾಯಿಕ ಜಲ ಮೂಲಗಳು ಅವಜ್ಞೆಗೆ ತುತ್ತಾಗಿ ಕಾಲನ ಗರ್ಭ ಸೇರಲು ಹವಣಿಸುತ್ತಿರುವುದು. ಹೆಚ್ಚೂ ಕಡಿಮೆ ಬಾವಿ-ಕೆರೆಗಳು ಕಸದ ಕೊಂಪೆಯಾಗಿ ಪರಿವರ್ತಿತಗೊಂಡಿರುವುದು ಬೇಸರತರಿಸುತ್ತದೆ. ಕೂಡಲೇ ರಮೇಶ ವಾಟ್ಸ್ ಆಪ್ ಗ್ರುಪ್ – ಡಿಜಿಟಲ್ ಹಾರೋಬೆಳವಡಿ ಯುತ್ ಗ್ರುಪ್ ಆರಂಭಿಸುತ್ತಾರೆ. ಜನರನ್ನು ಈ ವೇದಿಕೆಗೆ ಜೋಡಿಸುವ ಮೂಲಕ ಸಲಹೆಗಳನ್ನು ಆಹ್ವಾನಿಸುತ್ತಾರೆ. ಈ ‘ಐಡಿಯಾ ಕ್ಲಿಕ್’ ಆಗುತ್ತದೆ! ಯುವಜನತೆ ತಮ್ಮ ಗ್ರಾಮದ ಬಗ್ಗೆ ಚಿಂತಿಸಲು ಆರಂಭಿಸುತ್ತಾರೆ.

ಪರಿಣಾಮ, ತಳವಾರ ಓಣಿಯ ಸಿಹಿ ನೀರಿನ ಬಾವಿಯ ಸಂಪೂರ್ಣ ಶುದ್ಧೀಕರಣದ ಕ್ರಿಯಾ ಯೋಜನೆ ಸಿದ್ಧವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಉಡುಪಿಯ ಮಂದಾರ್ತಿ ಪೋಸ್ಟ್‌ನ ರಮೇಶ ಸುಮಾರು ೨೦ ವರ್ಷಗಳ ಕಾಲ ತೆರೆದ ಬಾವಿಯ ನೀರನ್ನೇ ಕುಡಿಯುತ್ತ ಬಂದವರು. ಇಲ್ಲಿನ ಜನರ ಅವಜ್ಞೆ ಕಂಡು ಮರಗುತ್ತಾರೆ. ಸಮುದಾಯದ ಸಹಭಾಗಿತ್ವದಲ್ಲೇ ಬಾವಿಯನ್ನು ಪುನರುಜ್ಜೀವಿತಗೊಳಿಸಲು ಸನ್ನದ್ಧರಾಗುತ್ತಾರೆ.

???????????????????????????????ಮುಂದೆ ಈ ಯಶಸ್ವಿ ಪ್ರಯೋಗ ದೊಡ್ಡೋಣಿ ಬಾವಿಯ ಶುದ್ಧೀಕರಣಕ್ಕೂ ಕಾರಣವಾಗುತ್ತದೆ. ಈಗಾಗಲೇ ಗ್ರಾಮ ಪಂಚಾಯ್ತಿ ವತಿಯಿಂದ ಖಾಸಗಿ ಗುತ್ತಿಗೆದಾರ ಓರ್ವರಿಗೆ ನೀಡಲಾಗಿದ್ದ ಸ್ವಚ್ಛತೆಯ ಗುತ್ತಿಗೆ ಊರ್ಜಿತವಾಗದೇ, ಅವರೂ ಕೂಡ ಕಾರ್ಯಾರಂಭ ಮಾಡದೇ ಕಾಲತಳ್ಳುವ ಯೋಜನೆಯಾಗಿ, ನೀರಿಂಗಿಸುವ ಬದಲು ಹಣ ನುಂಗುವ ಬಾವಿಯಾಗಿ ಪರಿವರ್ತನೆ ಹೊಂದುವ ತವಕದಲ್ಲಿ ಬಾಯ್ದೆರೆದು ನಿಂತಿದ್ದು ಊರ ಯುವಜನತೆಯ ಗಮನಕ್ಕೆ ಬರುತ್ತದೆ. ಕೊನೆಗೆ, ಗ್ರಾಮ ಪಂಚಾಯ್ತಿ ಗಮನಕ್ಕೆ ತಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ದೊಡ್ಡೋಣಿ ಬಾವಿಯ ಶುದ್ಧೀಕರಣ ಮತ್ತು ಪುನರುಜ್ಜೀವನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕೇವಲ ೧೫ ದಿನಗಳಲ್ಲಿ ಬಾವಿ ನಳನಳಿಸುತ್ತದೆ!

ತಳವಾರ ಓಣಿ ಬಾವಿ ಮತ್ತು ದೊಡ್ಡೋಣಿ ಬಾವಿಗಳು ಈಗ ಜನರ ಸುಪರ್ದಿಯಲ್ಲೇ ರಕ್ಷಣೆ ಪಡೆಯುತ್ತಿದ್ದು, ಸದ್ಬಳಕೆಗೆ ಮುಕ್ತವಾಗಿದ್ದರೂ, ದುರ್ಬಳಕೆಗೆ ಅವಕಾಶ ಇಲ್ಲದಂತೆ ಜಾಗ್ರತದಳ ರೂಪುಗೊಂಡಿದೆ. ಮನೆ-ಮನೆಯ ಶುದ್ಧ ಕುಡಿಯುವ ನೀರು ಪೂರೈಕೆ ಪೋಲಾಗದಂತೆ ‘ನೀರ ಘಂಟಿ’ಗಳೂ ಕೂಡ ಗ್ರಾಮ ಪಂಚಾಯ್ತಿಯ ಗೌರವ ಧನದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ರಮೇಶ ಜಾರಿಗೆ ತಂದಿದ್ದಾರೆ.???????????????????????????????

ಕುಡಿಯುವ ನೀರಿನ ಸಮಸ್ಯೆ ಮತ್ತು ಹೆಣ್ಣು ಮಕ್ಕಳು ಪಡುತ್ತಿದ್ದ ‘ನೀರು ಹೊರುವ ಕಾಯಕ’ದ ಪಾಡು ಮನಗಂಡು, ಆರಂಭದಲ್ಲಿಯೇ ೪೦ ಮನೆಗಳನ್ನು ಆಯ್ಕೆ ಮಾಡಿ, ಗ್ರಾಮ ಪಂಚಾಯ್ತಿ ಮತ್ತು ಸಮುದಾಯದ ಜನರ ಮಧ್ಯೆ ಸಂವಾದ ಏರ್ಪಡಿಸಿ, ಲಭ್ಯವಿರುವ ಸಂಪನ್ಮೂಲಗಳನ್ನೇ ಸಮರ್ಥವಾಗಿ ಬಳಸಿಕೊಂಡು ಪರಿಹಾರ ಕಂಡುಕೊಳ್ಳಲು ರಮೇಶ ನಾಯ್ಕ್ ಮುಂದಾಗುತ್ತಾರೆ. ಹತ್ತಾರು ಸುತ್ತಿನ ಮಾತುಕತೆ ನಂತರ, ಸಮುದಾಯವೇ ಮುಂದೆ ಬಂದು ಕಾಮಗಾರಿಗೆ ತಗಲುವ ಖರ್ಚು ಭರಿಸಿ, ಮತ್ತು ಶ್ರಮದಾನದ ಮೂಲಕ ಮನೆ ಮನೆಗೆ ನಳದ ಸಂಪರ್ಕ ದೊರಕಿಸಿಕೊಳ್ಳಲು ಮನಸು ಮಾಡುತ್ತಾರೆ. ಆಶ್ಚರ್ಯವೆಂಬಂತೆ, ಸಮುದಾಯವೇ ಸಬಲೀಕರಣಗೊಂಡು ತನ್ನ ದಶಕದ ಸಮಸ್ಯೆಗೆ ಸ್ವತಃ ಇತಿಶ್ರೀ ಹಾಡುತ್ತದೆ!

???????????????????????????????ರಮೇಶ ನಾಯ್ಕ್ ಅವರು ಗಮನಿಸಿದ ಇನ್ನೊಂದು ಸಮಸ್ಯೆ, ಬಟ್ಟೆ ಒಗೆಯಲು ಸೂಕ್ತ ವ್ಯವಸ್ಥೆ ಇರದೇ ಇರುವುದು. ಹಾಗಾಗಿ, ರಸ್ತೆಗಳ ಮೇಲೆಲ್ಲ ಒಗೆದ ನೀರು ನಿತ್ಯ ಹರಿದು, ಗಬ್ಬೆದ್ದ ವಾತಾವರಣಕ್ಕೆ ಮುನ್ನುಡಿ ಬರೆದಂತಿತ್ತು. ಮತ್ತೆ ಜನರನ್ನು, ಗ್ರಾಮ ಪಂಚಾಯ್ತಿ ಸದಸ್ಯರನ್ನು ಒಂದೆಡೆ ಸೇರಿಸಿ, ವಿಚಾರ ವಿನಿಮಯ ಮಾಡಿ, ವ್ಯವಸ್ಥಿತವಾಗಿ ‘ಒಗ್ಯಾಣ ಕಟ್ಟೆ’ಗಳನ್ನು ಕಟ್ಟಿಕೊಡಲು ಯೋಜನೆ ರೂಪಿಸಿದರು. ಒಟ್ಟು ಮೂರು ಓಣಿಗಳಿಗೆ ೧೪ ಸಾವಿರ ರೂಪಾಯಿ ವೆಚ್ಚದಲ್ಲಿ, ಸ್ಕೋಪ್ ನೀಡಿದ ೭,೮೯೦ ರೂಪಾಯಿ ಸೇರಿ ಎಲ್ಲರಿಗೂ ಅನುಕೂಲವಾಗುವಂತೆ ಒಗ್ಯಾಣ ಕಟ್ಟೆ ರೂಪಿಸಿ, ರಸ್ತೆಗಳನ್ನು ಶುಚಿಯಾಗಿರಿಸುವ ಮಾದರಿ ರೂಪಿಸಿಕೊಟ್ಟರು.

ಅಷ್ಟೇ ಅಲ್ಲ;

ಗ್ರಾಮ ಪಂಚಾಯ್ತಿಗೂ ತಮಗೂ ಯಾವ ಸಂಬಂಧವೂ ಇಲ್ಲ! ನೀತಿ ನಿರೂಪಣೆ ಕೇವಲ ಅಧಿಕಾರಿಗಳ ಜವಾಬ್ದಾರಿ ಎಂದು ಬಲವಾಗಿ ನಂಬಿದ್ದ ಗ್ರಾಮಸ್ಥರಿಗೆ – ನೀವೇ ನಿಜವಾದ ಕರ್ಣಧಾರತ್ವ ವಹಿಸಬೇಕು; ಬೇಡಿಕೆಗಳನ್ನು ಪ್ರಾಧಾನ್ಯತೆಯ ಮೇಲೆ ಸಿದ್ಧಪಡಿಸಿ ಗ್ರಾಮ ಪಂಚಾಯ್ತಿಗೆ ಒದಗಿಸಬೇಕು; ಹಣಕಾಸು ಸೌಲಭ್ಯ ನೋಡಿಕೊಂಡು ಕ್ರಿಯಾಯೋಜನೆ ಮಾತ್ರ ಅವರು ರೂಪಿಸಬೇಕು ಎಂಬ ಪಾತ್ರದ ಮನವರಿಕೆ ರಮೇಶ ನಾಯ್ಕ್ ಮಾಡಿಸುತ್ತಾರೆ. ಪರಿಣಾಮವಾಗಿ, ‘ಸ್ವಚ್ಛತಾ ದೂತ’ರ ನೇಮಕವಾಗುತ್ತದೆ. ಓವರ್‌ಹೆಡ್ ತೊಟ್ಟಿಗಳ ಸಕಾಲಿಕ ಸ್ವಚ್ಛತೆಗೆ ಯೋಜನೆ ಮತ್ತು ಕಾಲಮಿತಿ ರೂಪುಗೊಳ್ಳುತ್ತದೆ! ವಾಟ್ಸ್ ಆಪ್ ಡಿಜಿಟಲ್ ಹಾರೋಬೆಳವಡಿ ಯುತ್ ಗ್ರುಪ್ ರಮೇಶ ರೂಪಿಸಿದ್ದು, ಆಡಳಿತಾತ್ಮಕ ಮತ್ತು ಪರಸ್ಪರ ಸಕಾಲಿಕ ಸಂವಹನದ ದೃಷ್ಟಿಯಿಂದ ಮಹತ್ವದ ಸಾಧನೆಯಾಗುತ್ತದೆ.

ಹಾರೋಬೆಳವಡಿಯ ಧುರೀಣರಾದ ನಾಮದೇವ ಪಟಧಾರಿ ಹಾಗೂ ಶ್ರೀಮತಿ ಯಲ್ಲವ್ವ ತಳವಾರ ಅವರು, ಗ್ರಾಮ ಪಂಚಾಯ್ತಿ ಸದಸ್ಯರ ಆಗ್ರಹದ ಮೇರೆಗೆ, ಜಿಲ್ಲಾ ಪಂಚಾಯ್ತಿ ಮತ್ತು ಸಂಸದ ಪ್ರಹ್ಲಾದ ಜೋಶಿ ಅವರಿಗೆ ಪತ್ರ ಬರೆದಿದ್ದು, ರಮೇಶ ನಾಯ್ಕ್ ಅವರನ್ನು ಇನ್ನೊಂದು ವರ್ಷದ ಅವಧಿಗೆ ಹಾರೋಬೆಳವಡಿಗೆ ಮುಂದುವರೆಸಬೇಕು, ಅವರ ಸಂಬಳವನ್ನು ಭರಿಸಿಕೊಡಬೇಕು ಎಂದು ಆಗ್ರಹಿಸಿರುವುದು ಅವರ ಮೌನ ಕಾಯಕಕ್ಕೆ ಸಿಕ್ಕ ಮನ್ನಣೆ.

ಮೈಸೂರಿನ ವಿ-ಲೀಡ್‌ನಲ್ಲಿ ಮಾಸ್ಟರ್ಸ್ ಇನ್ ಡೆವಲಪ್‌ಮೆಂಟ್ ಮ್ಯಾನೇಜಮೆಂಟ್ ಸ್ನಾತಕೋತ್ತರ ಪದವಿ ಪಡೆದು, ತನ್ನದಲ್ಲದ ಮತ್ತು ಒಟ್ಟೂ ಅವರ ವೈಯಕ್ತಿಕ ಧೋರಣೆಗೆ ವಿರುದ್ಧವಾದ, ಹೆಜ್ಜೆಗೂ ಸವಾಲುಗಳೇ ಇದ್ದ ಹಾದಿಯಲ್ಲಿ ದಕ್ಷಿಣ ಕನ್ನಡದ ಶಿಷ್ಟ ಕನ್ನಡ ಭಾಷೆ ಬಲ್ಲ ರಮೇಶ ನಾಯ್ಕ್, ಹಳ್ಳಿಯ ಕಡೆ ಮುಖ ಮಾಡಿ ಯೋಗ್ಯ ಸಿದ್ಧತೆ ಮತ್ತು ಬದ್ಧತೆಯೊಂದಿಗೆ ಹೆಣಗುವ ಪರಿ ನಮ್ಮನ್ನು ಬೆರಗಾಗಿಸುತ್ತದೆ. ಸ್ಕೋಪ್ ಸಂಸ್ಥೆಯ ಡಾ. ಪ್ರಕಾಶ ಭಟ್ ಅವರ ಮೆಂಟರಿಂಗ್ ರಮೇಶ ಮೂಲಕ ಯುತ್ ಫಾರ್ ಡೆವಲಪ್‌ಮೆಂಟ್ ಸಾಧಿಸಿಸುತ್ತದೆ.

*******************************************************************************************************

Ramesh Naik -Harobelwadi Villageರಮೇಶ ನಾಯ್ಕ್, ಉಡುಪಿ ಅವರ ಅನಿಸಿಕೆ –

ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್  ನನಗೆ ಸಾಕಷ್ಟು ಕಲಿಸಿದೆ. ಹಾರೋಬೆಳವಡಿ ಗ್ರಾಮ ವಾಸ್ತವ್ಯದ ಅನುಭವ ನನ್ನ ಮಟ್ಟಿಗೆ ಅಪರೂಪದ್ದು. ಸಮುದಾಯದೊಟ್ಟಿಗೆ ತಾಳಿಕೊಂಡು ಕೆಲಸ ಮಾಡುವ, ಸಂಪರ್ಕ ಮತ್ತು ಸಂವಹನ ಕೊರತೆಯನ್ನು ನೀಗಿಸುವ, ಕೆಲಸದ ಮೂಲಕ ಪರಸ್ಪರ ವಿಶ್ವಾಸಗಳಿಸುವ ಪಟ್ಟುಗಳನ್ನು ಕಲಿಸಿ, ಸಂಸ್ಕೃತಿ, ಆಹಾರ, ವಿಚಾರ ಭಿನ್ನವಾದರೂ.. ಇವ್ರು ನಮ್ಮವರು ಎಂಬ ಪ್ರೀತಿಯನ್ನು ಜನ ತೋರಿಸಿದ್ದಾರೆ. ನನ್ನ ಮನಸ್ಸನ್ನೇ ಬದಲಾಯಿಸಿ, ೧೨ ತಿಂಗಳ ಗ್ರಾಮ ವಾಸ್ತವ್ಯದ ಬದುಕನ್ನು ಸಹ್ಯವಾಗಿಸಿದ್ದಾರೆ. ಧನ್ಯವಾದ ಮರಾಯ್ರೆ..

ಸಂಪರ್ಕ: rameshnaik292@gmail.com / +೯೧ ೯೬೩೩೭೪೭೫೬

*************************************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

ಇದು ಸ್ಕೋಪ್-ಅರ್ಘ್ಯಂವಾಟ್ಸ್ಯಾನ್ಫೆಲೋಷಿಪ್ ಪ್ರೋಗ್ರಾಂಯಶೋಗಾಥೆಯ ಸರಣಿಯ ನೆಯ (ಹಾರೋಬೆಳವಡಿ ಭಾಗ ೨) ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*