ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬಾಟಲಿ ನೀರಿನ ಸತ್ಯಾಸತ್ಯತೆ

ಭಾರತದಲ್ಲಿ ಈಗ ಬಾಟಲಿ ನೀರಿನದು ಸಾವಿರಾರು ಕೋಟಿಯ ಉದ್ಯಮ. ನಮ್ಮ ದೇಶಕ್ಕೆ ಬಾಟಲಿ ನೀರು ಕಾಲಿಟ್ಟು ಇನ್ನೂ ಮೂರು ದಶಕಗಳು ಸಹ ತುಂಬಿಲ್ಲ. ಆದರೆ, ಇಂದು ಇದು ಎಷ್ಟು ಕ್ಷಿಪ್ರಗತಿಯಲ್ಲಿ ಜನಪ್ರಿಯಗೊಂಡಿದೆ ಎಂದರೆ,  ವರ್ಷಕ್ಕೆ  ಮೂರುವರೆ ಸಾವಿರ ಕೋಟಿ ಲೀಟರ್‌ಗೂ ಹೆಚ್ಚು ಬಾಟಲಿ ನೀರು  ಮಾರಾಟವಾಗುತ್ತಿದೆ. ಒಟ್ಟಾರೆ ವಹಿವಾಟು ೨೨,೮೭೯.೭ ಕೋಟಿ ರೂಪಾಯಿಗಳನ್ನೂ ಮೀರಿದೆ! ಗೂಡಂಗಡಿಗಳಿಂದ ಹಿಡಿದು ಅತ್ಯಾಧುನಿಕ ಮಾಲ್‌ಗಳವರೆಗೆ, ಬಾಟಲಿ ನೀರಿನ ಬಳಕೆ ಮತ್ತು ವ್ಯಾಪಾರ ದಿನದಿಂದ ದಿನಕ್ಕೆ ಏರುತ್ತಿದೆಯೇ ಹೊರತು, ಕಡಿಮೆಯಾಗುವ ಯಾವದೇ ಲಕ್ಷಣಗಳು ಸಧ್ಯಕ್ಕೆ  ಗೋಚರಿಸುತ್ತಿಲ್ಲ. ಬಾಟಲಿ ನೀರು ಎಷ್ಟು ಸುರಕ್ಷಿತ, ಬಾಟಲಿಗಾಗಿ ಬಳಸುವ ಅಗಾಧವಾದ ಪ್ಲಾಸ್ಟಿಕ್ ಎಷ್ಟು ಹಾನಿಕಾರಕ, ಮತ್ತಿತರ ಹಲವಾರು ವಿಷಯಗಳು ದಿನೇದಿನೆ ಚರ್ಚೆಯಾಗುತ್ತಿವೆ.

ಹಾಗಾದರೆ ಬಾಟಲಿ ನೀರು ಕುಡಿಯಲು ಯೋಗ್ಯವಲ್ಲವೆ?  ಯೋಗ್ಯ ಎಂದು ಕೆಲವರೆಂದರೆ, ಯೋಗ್ಯವಲ್ಲ ಎನ್ನುವದು ಹಲವರ ಮಾತು. ಹಾಗಾದರೆ ಬಾಟಲಿ ನೀರಿನ ಅಸಲೀ ಗುಟ್ಟೇನು?

ಬಾಟಲಿ ನೀರಿನ ಇತಿಹಾಸ

bottled-water_0ಬಾಟಲಿ ನೀರಿನ ಇತಿಹಾಸ ಮತ್ತು ಸಾಗಣೆ ಕುರಿತು ನಾಗರೀಕತೆಗಳ ಆರಂಭದಿಂದಲೇ ಉಲ್ಲೇಖ ಸಿಗುತ್ತದೆ. ಇಂಗ್ಲೆಂಡ್‌ನಲ್ಲಿ  ೧,೬೨೨ರಲ್ಲಿ  ಮೊದಲಬಾರಿಗೆ ನೀರನ್ನು ಬಾಟಲಿಗಳಲ್ಲಿ ಪ್ಯ್ರಾಕ್ ಮಾಡಲು ಆರಂಭಿಸಲಾಯಿತು. ೧೭ ಹಾಗೂ ೧೮ನೇ ಶತಮಾನದಲ್ಲಿ ಸ್ಪಾಗೆ ಹೋಗುವವರಿಗಾಗಿ ಹಾಗೂ ಸೌಂದರ್ಯ ಥೆರಪಿಗಳಿಗಾಗಿ ಖನಿಜಯುಕ್ತ ನೀರನ್ನು ಬಳಸಲಾಗುತ್ತಿತ್ತು. ೧೭೬೭ರಲ್ಲಿ ಮೊದಲಬಾರಿ ಅಮೇರಿಕದ ಬಾಸ್ಟನ್‌ನಲ್ಲಿ ‘ಜಾಕ್ ಸ್ಫಾ’ ಎಂಬ ಕಂಪನಿ ಬಾಟಲಿ ನೀರನ್ನು ಮಾರಿತು. ಇದು ಖನಿಜಯುಕ್ತ ನೀರಾಗಿದ್ದು, ಇದರ ಸೇವನೆಯಿಂದ ಹಲವು ರೋಗಗಳು ಶಮನಗೊಳ್ಳುತ್ತವೆ ಎಂಬ ನಂಬಿಕೆಯಿಂದ ಇದಕ್ಕೆ ಹೆಚ್ಚನ ಜನಪ್ರೀಯತೆ ದೊರಕಿತ್ತು.

ಭಾರತದಲ್ಲಿ ಬಾಟಲಿ ನೀರು

ಭಾರತದಲ್ಲಿ ಬಾಟಲಿ ನೀರು ಕಾಲಿಟ್ಟಿದ್ದೇ ೯೦ರ ದಶಕದ  ಅಂತ್ಯದಲ್ಲಿ. ಆಗ ಬಿಸಲೆರಿ ಕಂಪನಿ ಮೊದಲಬಾರಿಗೆ ಬಾಟಲಿ ನೀರನ್ನು ಪ್ಯಾಕ್ ಮಾಡಿ ಮಾರಾಟಕ್ಕಿಟ್ಟಿತ್ತು. ಈ ನೀರು ಕುಡಿಯಲು ಸುರಕ್ಷಿತ ಎಂಬ ದೃಷ್ಟಿಯಿಂದ ಇದರ ವಹಿವಾಟಿನಲ್ಲಿ ವಿಪರೀತ ಏರಿಕೆ ಕಂಡುಬಂತು.

ಇಷ್ಟೊಂದು ಜನಪ್ರಿಯತೆ ಏಕೆ?

ಭಾರತೀಯ ಲಘು ಪಾನೀಯ ಮಾರುಕಟ್ಟೆಯಲ್ಲಿ, ಬಾಟಲಿ ನೀರೇ  ಅತ್ಯಂತ ಹೆಚ್ಚು  ಮಾರಾಟವಾಗುವ ವಸ್ತು. ೨೦೧೩ರ ಅಂಕಿ-ಅಂಶಗಳ ಪ್ರಕಾರ,  ಬಾಟಲಿ ನೀರಿನ ಮಾರುಕಟ್ಟೆಯ ಪಾಲು  ಶೇ.೬೯ರಷ್ಟಿದ್ದರೆ, ಇತರ ಕಾರ್ಬೊನೇಟೆಡ್ ಪಾನೀಯಗಳ ಪಾಲು (ಕೊಕಾಕೋಲಾ, ಪೆಪ್ಸಿ ಮುಂತಾದವುಗಳು) ಶೇ.೨೩ರಷ್ಟಿತ್ತು ಹಾಗೂ ಹಣ್ಣಿನ ರಸದ ಪಾಲು ಶೇ.೮ರಷ್ಟಿತ್ತು. ೧೧,೫೬೧.೧೦ ದಶಲಕ್ಷ ಲೀಟರ್, ಅಂದರೆ ೨,೨೮,೭೯೭ ದಶಲಕ್ಷ ರುಪಾಯಿಗಳ ನೀರು  ಮಾರಾಟವಾಗಿತ್ತು. ಪ್ರಯಾಣ-ಪ್ರವಾಸದಲ್ಲಿರುವವರು ಬಾಟಲಿ ನೀರನ್ನು ಹೆಚ್ಚಾಗಿ ಖರೀದಿಸುತ್ತಾರೆ. ಹೊಟೆಲ್ ಮತ್ತು ಇನ್ನಿತರ ಸ್ಥಳಗಳಲ್ಲಿ ಸುರಕ್ಷಿತವಾದ ಕುಡಿಯುವ ನೀರು ದೊರಕದು ಎನ್ನುವ ಕಾರಣಕ್ಕೆ ಬಾಟಲಿ ನೀರಿನ ಮೊರೆ ಹೋಗುತ್ತಾರೆ. ಜತೆಗೆ, ಹಲವು ಪ್ರದೇಶಗಳಲ್ಲಿ ಭೌಗೋಳಿಕ ಕಾರಣಗಳಿಂದಲೂ, ಸುರಕ್ಷಿತ ನೀರಿನ ಅಲಭ್ಯತೆಯ ಕಾರಣದಿಂದ, ಬಾಟಲಿ ನೀರಿನ ಮೇಲೆಯೆ ಅವಲಂಬಿತರಾಗಿರುವುದು ಅನಿವಾರ್ಯವೂ ಹೌದು.

ಗುಣಮಟ್ಟದ್ದೇ ಶಂಕೆ

ಬಾಟಲಿ ನೀರು  ಭಾರತದಲ್ಲಿ  ಎಷ್ಟು ಗುಣಮಟ್ಟದ್ದು ಎನ್ನುವದರ ಕುರಿತು ವ್ಯಾಪಕ ಶಂಕೆ ವ್ಯಕ್ತವಾಗುತ್ತಲೇ ಇದೆ. ಹೆಚ್ಚಾಗಿ ಕಲುಷಿತ ನೀರಿನ ಮೂಲಗಳಿರುವ ಭಾರತದಲ್ಲಿ ಶುದ್ಧೀಕರಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯತೆ ಇದೆ. ಆದರೆ, ಇಲ್ಲಿನ ಪರೀಕ್ಷಾ ಪದ್ಧತಿಯ ಲೋಪದೋಷಗಳು ನೀರಿನ ಸುರಕ್ಷತೆಯನ್ನು ಅನುಮಾನಿಸುವಂತೆ  ಮಾಡಿರುವದಂತೂ ಸುಳ್ಳಲ್ಲ.

ಕೆಲವೊಂದು ಸ್ವಾರಸ್ಯಕರ ಸಂಗತಿಗಳು

  • ಆಂತರರಾಷ್ಟೀಯ ಬಾಟಲಿ ನೀರು ಸಂಘದ ಪ್ರಕಾರ, ಒಂದು ಲೀಟರ್ ಬಾಟಲಿ ನೀರು ಉತ್ಪಾದನೆಗೆ ೧.೩೯ ಲೀಟರ್ ನೀರು ಬೇಕಾಗುತ್ತದೆ
  • ಸಾಮಾನ್ಯವಾಗಿ, ಬಾಟಲಿ ನೀರಿಗೆ ಲೀಟರ್‌ಗೆ  ೧೦ರಿಂದ ೧೮ ರೂಪಾಯಿಗಳಷ್ಟು  ಬೆಲೆ ಇರುತ್ತದೆ. ಅದೇ ಖನಿಜಯುಕ್ತ ನೀರಿಗೆ  ಲೀಟರ್‌ಗೆ  ೨೦ ರೂಪಾಯಿಯಿಂದ ೧೨೫ ರೂಪಾಯಿಯವರೆಗೂ ಬೆಲೆ ಇದೆ
  • ಶುದ್ಧ ನೀರು ಕುಡಿದರೆ, ಕೈ ಸರಿಯಾಗಿ ತೊಳೆದು  ಆಹಾರ ಸೇವನೆ ಮಾಡಿದರೆ,  ನಮಗೆ ಬರುವ ರೋಗ ಅರ್ಧದಷ್ಟು ಕಡಿಮೆಯಾಗುತ್ತದೆ
  • ೧೯೯೧ರಲ್ಲಿ ಶೇ.೬೨.೩ ರಷ್ಟು ಕುಟುಂಬಗಳಿಗೆ ಶುದ್ಧ ನೀರು ದೊರಕುತ್ತಿತ್ತು. ೨೦೧೧ರ ಅಂಕಿ-ಅಂಶಗಳ ಪ್ರಕಾರ, ಶೇ.೮೫.೫ರಷ್ಟು  ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ದೊರಕುತ್ತಿದೆ.

ಮೊದಲಿಗೆ ನೀರಿನ ಲಭ್ಯತೆಯ ದೃಷ್ಟಿಕೋನದಿಂದ ನೋಡುವದಾದರೆ, ಕುಡಿಯುವ ನೀರಿನ ಸಮಸ್ಯೆಯು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಇದೆ ಎನ್ನುವದು ಗಮನಿಸಬೇಕಾದ ಅಂಶ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ  ಎಷ್ಟು ಕುಟುಂಬಗಳಿಗೆ ಯಾವಯಾವ ಮೂಲಗಳಿಂದ ನೀರು  ದೊರಕುತ್ತದೆ ಎನ್ನುವದರ ಶೇಖಡಾವಾರು ಅಂಕಿ-ಅಂಶ ಇಲ್ಲಿದೆ:

ನೀರಿನ ಲಭ್ಯತೆ ಹೇಗಿದೆ?

bottled water ganapati article

ಇನ್ನು ಶೇ೮.೪೮ರಷ್ಟು  ಬೋರ್‌ವೆಲ್, ಶೇ.೦.೮೪ ಕೆರೆ ಹೊಂಡದ ನೀರು,  ಶೇ.೦.೬೩ ನದಿ ಅಥವಾ ಕಾಲುವೆ ನೀರು, ಶೇ.೦.೫೪ ತೊರೆಯಿಂದ, ಶೇ.೧೧.೫೭ ಸಂಸ್ಕರಿಸಿದ ಮೂಲದಿಂದ, ಶೇ.೩೧.೯೭ ಶುದ್ಧೀಕರಿಸಿದ ಮೂಲದಿಂದ, ಶೇ.೩೩.೪೮ ಹ್ಯಾಂಡ್ ಪಂಪ್‌ನಿಂದ, ಶೇ.೯.೪೪ ಮುಚ್ಚಿದ  ಬಾವಿಯಿಂದ ಬರುವ ನೀರಿನ ಮೂಲಗಳಾಗಿವೆ.  ಇಂತಹ ಸನ್ನಿವೇಶದಲ್ಲಿ ಬಾಟಲಿ ನೀರು ವರವೋ ಶಾಪವೋ? ನಿರ್ಧಾರ ನಿಮ್ಮದು!

ಮಾಹಿತಿ: ವಿದ್ಯಾ ಕೋಡ್ಲೆಕೆರೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*