ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೨೩: ಕೆರೆಗಳ ಜೀರ್ಣೋದ್ಧಾರದಲ್ಲಿ ಸಮುದಾಯವೇ ಇಲ್ಲ

ಪೂರ್ವಜರು ರೂಪಿಸಿದ್ದ ಕೆರೆಗಳನ್ನು ಉಳಿಸಿಕೊಳ್ಳುವುದು ಮುಂದಿ ಜನಾಂಗದ ಕರ್ತವ್ಯ ಹಾಗೂ ಜವಾಬ್ದಾರಿ. ಆದರೆ, ಈಗ ಅವೆಲ್ಲ ಸರ್ಕಾರಿ ಆಸ್ತಿಗಳಾಗಿದ್ದು, ಅವುಗಳ ಭಕ್ಷಣೆಯೇ ಹೆಚ್ಚಾಗಿದೆ. ಆದರೂ ಕೆರೆಗಳನ್ನು ಜೀರ್ಣೋದ್ಧಾರ ಮಾಡಬೇಕೆಂಬ ಸರ್ಕಾರದ ಕಾರ್ಯಕ್ರಮದಲ್ಲಿ ಅಗತ್ಯವಾದ ಸಮುದಾಯದ ಪಾಲ್ಗೊಳ್ಳುವಿಕೆಯೇ ಇಲ್ಲ. ಇಂತಹ ರೀತಿಯಲ್ಲೇ ಅಭಿವೃದ್ಧಿ ಮುಂದುವರಿದರೆ ಬೇಕಾಬಿಟ್ಟಿ ಕೆಲಸವಾಗದ ಮತ್ತಿನ್ನೇನು ಆದೀತು?

ಬೆಂಗಳೂರು ಮಹಾನಗರ, ನಗರಪಾಲಿಕೆಗಳಲ್ಲಿ ಮತ್ತು ನಗರಸಭೆಗಳಲ್ಲಿ ಕೆರೆಗಳ ಜೀರ್ಣೋದ್ಧಾರ ಮತ್ತು ನಿರ್ವಹಣೆಯ ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರವು ಒಂದು ಅಪೆಕ್ಸ್ ಸಮಿತಿ, ಉಪಸಮಿತಿಗಳು ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ೨೦೧೩ರ ಮೇ ತಿಂಗಳಲ್ಲಿ ರಚಿಸಿದೆ.  ಆದರೆ ಈ ಅಪೆಕ್ಸ್ ಸಮಿತಿಯು ಅನುμನ ಸಂಸ್ಥೆಗಳಿಂದ ಜೀರ್ಣೋದ್ಧಾರ ಕಾಮಗಾರಿಗಳ ನಿಯತಕಾಲಿಕ ಪ್ರಗತಿ ವರದಿಗಳನ್ನು ತರಿಸಿಕೊಂಡಿರಲಿಲ್ಲ. ಯಾವುದೇ ಅನುಷ್ಠಾನ ಸಂಸ್ಥೆಯೂ ಸಹ ತಪಸಾಣೆ ಮತ್ತು ವರದಿ ಸಲ್ಲಿಸುವಿಕೆಗೆ ಕ್ರಮಬದ್ಧ ವ್ಯವಸ್ಥೆಯನ್ನು ಹೊಂದಿಲ್ಲ.  ಬೆಂಗಳೂರು ನಗರ ಜಿಲ್ಲೆಯ ೭೪೭ ಕೆರೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಕೆರೆಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಪಾಸಣೆ ಮಾಡಿಲ್ಲ.  ೧೪ ಜಿಲ್ಲೆಗಳಲ್ಲಿ ೨೦೧೩-೧೪ರ ಅವಧಿಯಲ್ಲಿ ನಿಗದಿಪಡಿಸಲಾಗಿದ್ದ ೧೪೦ ಸಭೆಗಳಿಗೆ ಬದಲಾಗಿ, ಕೇವಲ ೨೨ ಸಭೆಗಳನ್ನು ಮಾತ್ರ ನಡೆಸಲಾಗಿತ್ತು. ಈ ವಿವರವನ್ನು ಸಿಎಜಿ ವರದಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ’ಯಲ್ಲಿ ವಿಸ್ತೃತವಾಗಿ ನೀಡಲಾಗಿದೆ.

ಒಂದು ಯಶಸ್ವಿ ಸಂರಕ್ಞಣಾ ಕಾರ್ಯಕ್ರಮಕ್ಕೆ ಸ್ಥಳೀಯ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯ. ಬಳಕೆದಾರ ಸಂಸ್ಥೆಗಳ ಮೂಲಕ ಸಮುದಾಯಗಳು ಹಾಗೂ ಹೂಡಿಕೆದಾರರಿಗೆ ಅಧಿಕಾರ ಹಾಗೂ ತರಬೇತಿ, ತಾಂತ್ರಿಕ ಬೆಂಬಲ ನೀಡಿ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಜಲನೀತಿ-೨೦೦೨ರಲ್ಲಿ ಹೇಳಲಾಗಿದೆ. ಆದರೆ ಇದರ ಅನುಷ್ಠಾನವೇ ಆಗಿಲ್ಲ. ಕೆರೆಗಳ ರಕ್ಷಣೆ, ಸಂರಕ್ಷಣೆ ಮತ್ತು ನಿರ್ವಹಣೆ ಚಟುವಟಿಕೆಗಳಲ್ಲಿ ಸ್ಥಳೀಯ ಸಮುದಾಯ ಹಾಗೂ ಸ್ವಯಂಸೇವಾ ಸಂಘಗಳ ಪರಿಣಾಮಕಾರಿ

Kaikondanahalli-2ಪಾಲ್ಗೊಳ್ಳುವಿಕೆಗೆ ಸಾರ್ವಜನಿಕ ತಾಣದಲ್ಲಿ ಸಾಕಷ್ಟು ಮಾಹಿತಿ ಲಭ್ಯ ಇರಬೇಕಾಗುತ್ತದೆ. ಆದರೆ, ಇಂತಹ ಪಾರದರ್ಶಕ ಆಡಳಿತವೇ ಮಾಯವಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಪ್ರಸ್ತುತ ಅಸ್ತಿತ್ವದಲ್ಲಿರುವ ಕೆರೆಗಳು, ಕಟ್ಟೆಗಳು, ಕೊಳಗಳು, ಇತ್ಯಾದಿಗಳ ಮೂಲಗಳು, ಕೆರೆಗಳ ಅಭಿರಕ್ಷಕರು, ಪ್ರಸ್ತಾಪಿತ ಕಾಮಗಾರಿಗಳ ಸ್ವರೂಪ, ಗುತ್ತಿಗೆದಾರರ ವಿವರಗಳು, ಭರಿಸಿದ ವೆಚ್ಚ, ನಿರ್ವಹಣೆಯಲ್ಲಿ ಒಳಗೊಂಡಂತೆ ಕೊರತೆ, ನಿರ್ವಹಣೆಗಾಗಿ ಕೈಗೊಳ್ಳುವಂತಹ ಕ್ರಮಗಳ ಬಗ್ಗೆ ಜಾಲತಾಣಗಳಲ್ಲಿ ಬಹಿರಂಗಪಡಿಸುವ ನೀತಿಯನ್ನೂ ಪಾಲಿಸಿಲ್ಲ. ಕೆರೆಗಳ ಹೆಸರುಗಳು, ಆಯ-ವ್ಯಯ ಮತ್ತು ವೆಚ್ಚ, ಆಡಳಿತವ್ಯಾಪ್ತಿಯ ಅಧಿಕಾರಿಗಳ ಸಂಪರ್ಕ ವಿವರಗಳಂತ ಅತ್ಯಲ್ಪ ಮಾಹಿತಿಯು ಮಾತ್ರ ಜಾಲತಾಣದಲ್ಲಿ ಲಭ್ಯವಿದೆ.  ಒಂದು ಪರಿಣಾಮಕಾರಿ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯು ನಾಗರಿಕರಿಗೆ ತಮ್ಮ ಬೇಡಿಕೆಗಳನ್ನು ತಿಳಿಸುವುದಕ್ಕೆ ಮತ್ತು ಜೀರ್ಣೋದ್ಧಾರದ ಕಾಮಗಾರಿಗಳಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ. ಬಿಬಿಎಂಪಿ, ಬಿಡಿಎ ಮತ್ತು ಎರಡು ನಗರಪಾಲಿಕೆಗಳು ಕೆರೆಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಯಾವುದೇ ವ್ಯವಸ್ಥೆಯನ್ನು ಹೊಂದಿರಲಿಲ್ಲ ಎಂಬುದನ್ನು ಗಮನಿಸಲಾಗಿದೆ. ಕೆರೆಗಳ ಮೇಲೆ ಸಾರ್ವಜನಿಕರ ವಿಚಾರಗಳನ್ನು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ಏಕಗವಾಕ್ಷಿ ಸಂಸ್ಥೆಯಿರಲಿಲ್ಲ. ಪರೀಕ್ಷಾ-ತನಿಖೆ ನಡೆಸಿದ ಎರಡು ಕೆರೆಗಳ (ಕೈಗೊಂಡನಹಳ್ಳಿ ಮತ್ತು ಚಿನ್ನಪ್ಪನಹಳ್ಳಿ) ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಎರಡು ಸರ್ಕಾರೇತರ ಸಂಸ್ಥೆಗಳು ಏಕಗವಾಕ್ಷಿ ಸಂಸ್ಥೆಯ ಅಗತ್ಯತೆಯನ್ನು ವ್ಯಕ್ತಪಡಿಸಿದ್ದವು. ಕುಂದುಕೊರತೆಗಳ ನಿವಾರಣಾ ವ್ಯವಸ್ಥೆ ಒಂದು ಏಕ ಗವಾಕ್ಷಿ ಸಂಸ್ಥೆಯನ್ನು ರಚಿಸಲು ರಾಜ್ಯ ಸರ್ಕಾರದ ಮಟ್ಟದಲ್ಲಿ ವಿμಯವನ್ನು ಕೈಗೆತ್ತಿಕೊಳ್ಳಲಾಗುವುದೆಂದು ಬಿಡಿಎ ತಿಳಿಸಿತು (ಫೆಬ್ರವರಿ ೨೦೧೫).  ನಿವಾಸಿ ಕ್ಷೇಮಾಭಿವೃದ್ಧಿ ಸಂಘ/ಸ್ವಯಂಸೇವಾ ಸಂಘ ಹಾಗೂ ಸವಿವರ ಯೋಜನಾ ವರದಿಗಳ ಅನ್ವಯ ಕೆರೆಗಳ ಜೀರ್ಣೋದ್ಧಾರ ಮತ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಬಾಧ್ಯವಾಗಿರುವ ಸಂಸ್ಥೆ ಇವುಗಳನ್ನು ಒಳಗೊಂಡಿರುವ ಕೆರೆ ನಿರ್ವಹಣಾ ಸಮಿತಿಯನ್ನು ರಚಿಸಬೇಕು ಮತ್ತು ಸಮಿತಿಯು ಕೆರೆಗಳ ಜೀರ್ಣೋದ್ಧಾರದ ಕಾಮಗಾರಿಗಳ ಮೇಲೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕು. ಆದರೆ, ಪರೀಕ್ಷಾ-ತನಿಖೆ ನಡೆಸಿದ ಯಾವುದೇ ಕೆರೆಗಳ ಸಂಬಂಧವಾಗಿ ಅಂತಹ ಸಮಿತಿಗಳನ್ನು ರಚಿಸಿರಲಿಲ್ಲ. ಪರೀಕ್ಷಾ-ತನಿಖೆ ನಡೆಸಿದ ಎರಡು ಕೆರೆಗಳಲ್ಲಿ (ಕೈಗೊಂಡನಹಳ್ಳಿ ಮತ್ತು ಚಿನ್ನಪ್ಪನಹಳ್ಳಿ) ನಿರ್ವಹಣಾ ಸಮಿತಿಗಳನ್ನು ರಚಿಸಿರುವುದಾಗಿ ರಾಜ್ಯ ಸರ್ಕಾರವು ತಿಳಿಸಿತು (ಮಾರ್ಚ್ ೨೦೧೫). ಆದರೆ, ಈ ಸಂಸ್ಥೆಗಳು ಕೇವಲ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದವೇ ಹೊರತು, ಜೀರ್ಣೋದ್ಧಾರ ಕಾಮಗಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ ಎಂಬುದನ್ನು ಗಮನಿಸಲಾಯಿತು.   ಕೆರೆ ಅಭಿವೃದ್ಧಿ ಪ್ರಾಧಿಕಾರವು ‘ಒಂದು ಕೆರೆಯನ್ನು ದತ್ತು ತೆಗೆದುಕೊಳ್ಳುವಿಕೆ’ ಯೋಜನೆಯನ್ನು ಪ್ರಾರಂಭಿಸಿತು (ಜುಲೈ ೨೦೦೪) ಮತ್ತು ಈ ಯೋಜನೆಯಡಿಯಲ್ಲಿ ಆಸಕ್ತ ವ್ಯಕ್ತಿಗಳಿಗೆ ಕೆರೆಗಳ ೬ ಜೀರ್ಣೋದ್ಧಾರದ ಜವಾಬ್ದಾರಿಯನ್ನು ನೀಡಲಾಗಿತ್ತು. ಬೆಂಗಳೂರಿನ ಆರು ಕೆರೆಗಳನ್ನು ಈ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾಯಿತು.  ದತ್ತು ತೆಗೆದುಕೊಂಡ ಸಂಸ್ಥೆಗಳು ಎದುರಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿನ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಸಾಮರ್ಥ್ಯದಿಂದ ಯೋಜನೆಯು ಪರಿಣಾಮಕಾರಿಯಾಗಲಿಲ್ಲ. ಯೋಜಿಸಿದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರವು ಒಪ್ಪಿಕೊಂಡಿತು (ಮಾರ್ಚ್ ೨೦೧೫). ದತ್ತು ಪಡೆದ ಸಂಸ್ಥೆಗಳು ಅಭಿವೃದ್ಧಿ ಮತ್ತು ನಿರ್ವಹಣಾ μರತ್ತುಗಳನ್ನು ಉಲ್ಲಂಘಿಸಿದ್ದರಿಂದ ಆರು ಕೆರೆಗಳನ್ನು ಹಿಂತಿರುಗಿ ಪಡೆಯಲಾಯಿತು ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿತು (ಏಪ್ರಿಲ್ ೨೦೧೫). ದತ್ತು ಪಡೆದ ಸಂಸ್ಥೆಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ಉತ್ತರವನ್ನು ನೀಡಿರಲಿಲ್ಲ.

ಹೀಗಾಗಿ, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಸಾರ್ವಜನಿಕ ತಾಣದಲ್ಲಿ ಸಾಕಷ್ಟು ಮಾಹಿತಿಯ ಲಭ್ಯತೆಯನ್ನು ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕು. ಕುಂದುಕೊರತೆ ನಿವಾರಣಾ ವ್ಯವಸ್ಥೆಗಾಗಿ ಏಕಗವಾಕ್ಷಿ ಸಂಸ್ಥೆಯನ್ನು ರಾಜ್ಯ ಸರ್ಕಾರವು ರಚಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ. ಸರ್ಕಾರದ ಯೋಜನೆಗಳನ್ನು ಅಧಿಕಾರಿ ವರ್ಗದಲ್ಲೇ ಅನುಷ್ಠಾನವಾಗದೆ ಇರುವಾಗ ಸಾರ್ವಜನಿಕ ಪಾಲ್ಗೊಳ್ಳುವಿಕೆ ಹೇಗೆ ಸಾಧ್ಯವಾಗುತ್ತದೆ. ಮಾಹಿತಿ ತಂತ್ರಜ್ಞಾನದ ಕಣಜ ಎಂಬ ಖ್ಯಾತಿಯ ರಾಜಧಾನಿಯನ್ನು ಹೊಂದಿರುವ ರಾಜ್ಯದಲ್ಲಿ ಅದನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅಸಡ್ಡೆ ಒಳಕೊಳಕುಗಳನ್ನು ಎತ್ತಿ ತೋರಿಸುತ್ತದೆ ಅಷ್ಟೇ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*