ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತೆರೆದ ಬಾವಿಗಳಲ್ಲಿ ಕೃಷಿ ಕಲ್ಯಾಣ (ಗಡಿನಾಡಿನ ಬೀದರ್ ಜಿಲ್ಲೆಯ ನೀರಿನ ಕತೆಯಿದು)

logoಕುಂಬಳಕಾಯಿ ಗಾತ್ರದ ಕೋಲು ಬಾವಿಯಲ್ಲಿ ಕೃಷಿಗೆ ನೀರು ಸಿಗ್ತದೇನ್ರಿ? ಹೊಲದ ಹೊಸ ಬಾವಿ ನೋಡಿದವರು ನಗುತ್ತಿದ್ದರು. ಬೀದರ ಜಿಲ್ಲೆಯ ಹುಮನಾಬಾದ್ನ ಹುಡಗಿ ಹಳ್ಳಿಯ ಕೃಷಿಕ ಗುರುಲಿಂಗಪ್ಪ ಮೇಲ್ದೊಡ್ಡಿ 1982ನೇ ವರ್ಷ ಪ್ರಥಮ ಬೋರ್ವೆಲ್ ಕೊರೆಸಿದವರು. ಸುಮಾರು 80 ಅಡಿ ಆಳದ ಬಾವಿಗೆ ಆಗ 12.000 ರೂಪಾಯಿ ಖರ್ಚು ತಗಲಿತ್ತು. ಅಲ್ಲಿಯವರೆಗೆ ತೆರೆದ ಬಾವಿಯಿಂದ ನೀರಾವರಿ ನಡೆಯುತ್ತಿತ್ತು. ಹೊಲದ ವಿಶಾಲ ಬಾವಿಗಳಲ್ಲಿ ತುಂಬಿರುತ್ತಿದ್ದ ನೀರನ್ನು ಸದಾ ನೋಡುತ್ತ ಕೃಷಿ ಚಟುವಟಿಕೆ ನಡೆಸಿದ ಊರಲ್ಲಿ ನೀರು ಕಾಣದ ಬಾವಿಯೂ, ಕೊಳವೆಯ ಚಿಕ್ಕ ಗಾತ್ರವೂ ತಮಾಷೆಯಾಗಿ ಕಾಣುತ್ತಿತ್ತು. ನೀರಿನ ಹೊಸ ಮೂಲದ ಬಗೆಗೆ ವಿಶ್ವಾಸಕ್ಕಿಂತ ಅನುಮಾನಗಳಿದ್ದವು. ನೀರಾವರಿ ಯೋಜನೆಗಳು ಇದ್ದೂ ಇಲ್ಲದಂತಿರುವ ಇಲ್ಲಿ ಹಲವು ರೈತರು ಕಬ್ಬು ಬೆಳೆಯಲು ಕೊಳವೆ ಬಾವಿ ನಂಬಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಆಲಮಟ್ಟಿ ಅಣೆಕಟ್ಟು ನಿರ್ಮಾಣವಾಗಿರಲಿಲ್ಲ, ಬೆಳಗಾವಿ, ಬಾಗಲಕೋಟೆಯಲ್ಲಿ ಕಬ್ಬಿನ ಕ್ರಾಂತಿಯೂ ಆರಂಭವಾಗಿರಲಿಲ್ಲ. ಆಗ ಮಂಡ್ಯದ ನಂತರ ರಾಜ್ಯದಲ್ಲಿ ಬೀದರ್ ಕಬ್ಬಿನ ಪ್ರಮುಖ ನೆಲೆಯಾಗಿತ್ತು. ತೆರೆದ ಬಾವಿಗಳಿಂದ ನೀರೆತ್ತಿ ಕಬ್ಬು ಬೆಳೆಯುವ ಸಾಹಸ ನಡೆಯುತ್ತಿತ್ತು. 70ರ ದಶಕದಲ್ಲಿ ಕಪ್ಪಲಿ ಹೊಡೆಯುವ ನೋಟಗಳು ಸಾಮಾನ್ಯವಾಗಿದ್ದವು. 40-50 ಅಡಿ ಸುತ್ತಳತೆ, 18-20 ಅಡಿ ಅಲ್ಪ ಆಳದ ಬಾವಿಗಳಲ್ಲಿ ನೀರು ಧಾರಾಳ ದೊರೆಯುತ್ತಿತ್ತು. ಊರಿಗೆ ಮೂರು ನಾಲ್ಕು ಕಬ್ಬಿನ ತೋಟಗಳು, ಪ್ರತಿಯೊಬ್ಬರ ಹೊಲದಲ್ಲಿ ಬಾವಿಗಳಿದ್ದವು. ಕಬ್ಬು ಅರೆದು ಬೆಲ್ಲ ತಯಾರಿಸುವ ಕಾರ್ಯ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿತ್ತು. ಕಳವೆ(ಭತ್ತ), ಬಾಳೆ, ತರಕಾರಿ, ಇರುಳ್ಳಿಗಳನ್ನು ಕಪ್ಪಲಿ ನೀರಾವರಿಯಲ್ಲಿ ಬೆಳೆಯುತ್ತಿದ್ದರು.

logoಕಾರಂಜಾ, ಚುಳಕಿ, ಕೌಲಾಸ, ಮಾಂಜ್ರಾ, ಲೇಂಡಿ, ಮುಲ್ಲಾಮಾರಿ, ಗಂಡೋರಿ, ಬೆಣ್ಣೆ ತೊರೆ ಜಲಾನಯನ ಪ್ರದೇಶಗಳು ಬೀದರದ ನೀರ ನೆಲೆಗಳು. ವಿಶೇಷವಾಗಿ ಮಹಾರಾಷ್ಟ್ರ-ಬೀದರ ಗಡಿಯಲ್ಲಿ 84ಕಿಲೋ ಮೀಟರ್ ಮಾಂಜ್ರಾ ನದಿ ಹರಿಯುತ್ತದೆ. ಬಾಲ್ಕಿ, ಬಸವಕಲ್ಯಾಣ, ಔರಾದ್, ಬೀದರ ತಾಲೂಕಿನ ಜೊತೆಗೆ ಹುಮನಾಬಾದ್ ಪ್ರದೇಶಕ್ಕೂ ನದಿ ನೀರು ನೆರವಾಗಿದೆ. ಬಾಲ್ಕಿ ತಾಲೂಕಿನ ಕೊಂಗಳಿ, ಜೀರಗಾ, ಚಂದಾಪುರಗಳಲ್ಲಿ ನದಿಗೆ ಸೇತುವೆ ಜೊತೆಗೆ ನೀರಾವರಿ ಒಡ್ಡು ನಿರ್ಮಿಸಲಾಗಿದೆ. ರೈತರು ಈ ನೀರಿಗೆ ಪಂಪ್ ಜೋಡಿಸಿ ಕೃಷಿಗೆ ಬಳಸುತ್ತಿದ್ದಾರೆ. ಕಾರಂಜಾ ನೀರಾವರಿ ಯೋಜನೆ ರೈತರ ಅನುಕೂಲಕ್ಕೆ ರೂಪಿಸಲಾಗಿದೆ. ಆದರೆ ಕಾಲುವೆ ನಿರ್ಮಾಣ ಪೂರ್ಣಗೊಂಡಿಲ್ಲ. ವರ್ಷಕ್ಕೆ ಒಂದೆರಡು ಸಾರಿ ಯಾವಾಗಲೋ ನೀರು ಬಿಡುತ್ತಾರೆ, ಕೃಷಿಗೆ ಪ್ರಯೋಜನವಿಲ್ಲ. ವಿಚಿತ್ರವೆಂದರೆ ಬೀದರ್, ಹುಮನಾಬಾದ್, ಚಿಟಗುಪ್ಪ ಪಟ್ಟಣಗಳ ಕುಡಿಯುವ ನೀರಿಗಾಗಿ ಕಾರಂಜಾ ಬಳಕೆಯಾಗುತ್ತಿದೆ. ಚುಳಕಿ ನಾಲಾ ಬಸವಕಲ್ಯಾಣ ನಗರಕ್ಕೆ ನೀರು ನೀಡಲು ಸೀಮಿತವಾಗಿದೆ.

ಕೃಷಿ ಅಭಿವೃದ್ಧಿಗೆ ರೂಪಿಸಿದ ಯೋಜನೆಗಳು ನಗರದತ್ತ ಹರಿಯುವ ನೆಲೆಯಲ್ಲಿ ಕೃಷಿ ಕಲ್ಯಾಣ ಹೇಗೆ ಸಾಧ್ಯ? ಬಸವಕಲ್ಯಾಣ ತಾಲೂಕಿನ ವಿಶೇಷವೆಂದರೆ ಇಂದಿಗೂ ಇಲ್ಲಿ ತೆರೆದ ಬಾವಿಗಳು ರೈತರ ನೀರಾವರಿಗೆ ಅನುಕೂಲವಾಗಿದೆ. ಬಸವಕಲ್ಯಾಣ ಕೋಟೆಯ ಪ್ರದೇಶ ಪರ್ತಾಪುರ ಸನಿಹದಲ್ಲಿ 12ನೇ ಶತಮಾನದಲ್ಲಿ ನಿರ್ಮಿಸಿದ ಬಾವಿಗಳಲ್ಲಿ ಬೀದರದ ಜಲ ಪರಂಪರೆಯ ತಾಕತ್ತು ಗಮನಿಸಬಹುದು. 40 ವರ್ಷಗಳ ಹಿಂದೆ ಹುಮನಾಬಾದ್ ಪ್ರದೇಶದಲ್ಲಿ 1000-1200 ಮಿಲಿ ಮೀಟರ್ ಮಳೆ ಸುರಿಯುತ್ತಿತ್ತು. 1980ರವರೆಗೆ ನೀರಾವರಿಗೆ ನೂರಕ್ಕೆ ನೂರು ಜನ ತೆರೆದ ಬಾವಿಗಳನ್ನು ಮಾತ್ರ ಬಳಸುತ್ತಿದ್ದರು. ಈಗಲೂ 30ರಷ್ಟು ಬಾವಿ ಬಳಕೆ ಉಳಿದಿದೆ. ಬೀದರ ಗುಲ್ಬರ್ಗಾ ಗಡಿಯಲ್ಲಿ ಕಮಲಾಪುರ ಹಳ್ಳ ಹರಿಯುತ್ತದೆ. ಕಣಿವೆಯಲ್ಲಿ ಹರಿಯುವ ಹಳ್ಳ, ದಡದ ಮಾವು, ಬಿದಿರು ಸಸ್ಯ ನೋಡುವಾಗ ಮಲೆನಾಡು ನೆನಪಾಗುತ್ತದೆ. ಮಾರ್ಚ್ವರೆಗೆ ಹಳ್ಳ ಹರಿಯುತ್ತ ನಂತರ ಒಣಗುತ್ತದೆ. ಆದರೆ ಹಳ್ಳದ ದಂಡೆಯ ಬಾವಿಗಳಲ್ಲಿ ಸಾಕಷ್ಟು ನೀರಿರುತ್ತದೆ. ಈಗಲೂ ಹೊಸ ಹೊಸ ಬಾವಿಗಳು ಹಳ್ಳದ ಗುಂಟ ನಿರ್ಮಾಣವಾಗುತ್ತಿವೆ. ನದಿ ನಾಲೆಗಳ ಸುತ್ತ ಕಬ್ಬು ಕಂಗೊಳಿಸುತ್ತಿದೆ.

logoವರ್ಷದ ಒಂಬತ್ತು ತಿಂಗಳು ನೀರು ನೀಡುವ ಬಾವಿಗಳು ಹಲವೆಡೆ ಕಾಣಬಹುದು. ಎಪ್ರಿಲ್-ಮೇ ಸಮಯದಲ್ಲಿ ಕಬ್ಬು ನೀರಿಲ್ಲದೆ ಒಣಗುತ್ತದೆ. ಆದರೆ ಜೂನ್ ಮಳೆ ಶುರುವಾದರೆ ಬೆಳೆಗೆ ಹೊಸ ಜೀವ ಮೂಡುತ್ತದೆ. ಕಬ್ಬಿನ ನಡುವೆ 10-15 ಜಾತಿಯ ತರಕಾರಿ ಬೆಳೆಯುವ ಮಾದರಿ ಪ್ರಯತ್ನಗಳಿವೆ. ಗೋಬಿ, ತಿಳಕಿಜ್ವಾಳ, ಹುಮನಾಬಾದ್ ಶುಂಟಿ, ಬಸವಕಲ್ಯಾಣದ ಮುಚ್ಚಳಾಮ್ ಜೋಳ(ದಗಡಿ ಜೋಳ), ಔಡಲ, ಮೆಣಸಿನ ಕಾಯಿ, ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ, ಸೋಯಾ, ಸಜ್ಜೆ,ಕಡ್ಲೆ, ಶೇಂಗಾ, ಜವೆಗೋದಿ, ಅರಿಶಿನ ಹೀಗೆ ಹೊಲಕ್ಕೆ ಖ್ಯಾತಿ ತಂದ ಬೆಳೆಗಳು ಹಲವಿದೆ. ದಾಳಿಂಬೆ, ಬಾಳೆ, ಲಿಂಬು, ದ್ರಾಕ್ಷಿ, ಗೋಡಂಬಿಯೂ ಇದೆ.

ರೈತರು ತೆರೆದ ಬಾವಿ, ಕೊಳವೆ ಬಾವಿ ನೀರಾವರಿ ಮೂಲಕ ಪರಿಶ್ರಮದಲ್ಲಿ ಕೃಷಿ ಗೆಲ್ಲಿಸಿದ್ದಾರೆ. ಹೊಸ ಹೊಸ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಇವರ ಉತ್ಸಾಹಕ್ಕೆ ನಾವೆಷ್ಟು ನೆರವಾಗುತ್ತಿದ್ದೇವೆ? ಆಳುವ ಸರಕಾರ ಎದೆ ಮುಟ್ಟಿ ಯೋಚಿಸಬೇಕು. ನೀರಾವರಿ ದಾಖಲೆ ತೆಗೆದರೆ 18.102 ಎಕರೆ ಬೀದರ್ನಲ್ಲಿ ಕೆರೆಗಳ ನೀರು ಪಡೆಯುತ್ತಿದೆ. ಆದರೆ ಈಗ ಬಹುತೇಕ ಕೆರೆಗಳು ಹೂಳು ತುಂಬಿ ಒಣಗಿವೆ. ಮೂರ್ಕಂಡಿ, ತಳಬೇಗ, ಬೇಲೂರು ಹೀಗೆ ಕೆಲವು ದೊಡ್ಡ ಕೆರೆಗಳು ಮಾತ್ರ ಉಳಿದಿವೆ. ಇಲ್ಲಿ 800ಮಿಲಿ ಮೀಟರ್ ಮಳೆ ಸುರಿಯುತ್ತಿದೆ, ಇದನ್ನು ಕೆರೆಯಲ್ಲಿ ಹಿಡಿಯುವ ಪ್ರಯತ್ನ ನಡೆಯುತ್ತಿಲ್ಲ. ಕೆರೆಗೆ ನೀರು ಹರಿಯುವ ಕಾಲುವೆಗಳು ಮುಚ್ಚಿ ಹೋಗಿವೆ. ಸರಕಾರದ ನಿರ್ಲಕ್ಷ್ಯ ಎಲ್ಲೆಡೆ ಎದ್ದು ಕಾಣುತ್ತಿದೆ. ಹೈದ್ರಾಬಾದ್ ಕರ್ನಾಟಕದವನ್ನು ಭೀಕರ ‘ಬಹತ್ತರ್ ಬರ’ ಕ್ರಿ,ಶ 1972ರಲ್ಲಿ ಕಾಡಿತ್ತು. ಆ ಸಂದರ್ಭದಲ್ಲಿ ವೀಕ್ಷಣೆಗೆ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಸ್ವತಃ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದರು. ಅಂದು ಪ್ರಧಾನಿಯನ್ನು ಹೊತ್ತು ತಂದ ಹೆಲಿಕ್ಯಾಪ್ಟರನ್ನು ಇಲ್ಲಿನ ತ್ರಿಪುರಾಂತ ಕೆರೆಯಲ್ಲಿ ಇಳಿಸಲಾಗಿತ್ತಂತೆ! ಅವತ್ತು ಒಣಗಿದ್ದ ಕೆರೆ ಈಗಲೂ ಹೆಲಿಪ್ಯಾಡ್ ಆಗಲು ಯೋಗ್ಯವಾಗಿ ಒಣಗಿ ನಿಂತಿದೆ. ನಾಲ್ಕು ದಶಕಗಳ ಬಳಿಕವೂ ಕೆರೆಯ ನೀರಿನ ಪ್ರಶ್ನೆ ಉಳಿದಿದೆ.

ಲೇಖಕರು: ಶಿವಾನಂದ ಕಳವೆ

ಮಾಹಿತಿ ಸೌಜನ್ಯ: ಭೂಮಿಗೀತ.ಕಾಮ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*