ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮೇಲಿನ ಕೆರೆಗೆ ಬೇಕಿದೆ ಬದಲಾವಣೆಯ ಮೆರುಗು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಅವಳಿ ಊರು ಕೊಡಸೆ-ಗಿಣಸೆ. ರಿಪ್ಪನ್ ಪೇಟೆಯಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗದ ಹೆದ್ದಾರಿಪುರ ಗ್ರಾಮದಿಂದ ಕೇವಲ ಒಂದು ಕಿಲೋಮೀಟರ್ ಬಲಕ್ಕೆ ಸಾಗಿದರೆ ಸಿಗುವ ಈ ಪುಟ್ಟ ಹಳ್ಳಿಯಲ್ಲಿರುವುದು ಸುಮಾರು 70 ಮನೆಗಳು. ನಿಸರ್ಗ ಸೌಂದರ್ಯವನ್ನೇ ಮೈದಾಳಿಕೊಂಡಿರುವ ಮಲೆನಾಡಿನ ಕೊಡಚಾದ್ರಿ ತಪ್ಪಲಿನಲ್ಲಿರುವ ಈ ಊರಿಗೆ ಸುಮಾರು ಆರೇಳು ತಲೆಮಾರುಗಳು ಗತಿಸಿದ್ರೂ ನೀರಿನ ಸಮಸ್ಯೆ ತಲೆದೂರಿರಲಿಲ್ಲ. ಇಡೀ ಊರಿಗೆ ಇರುವ ಒಂದೇ ಕೆರೆಯ ಹೇಗೆ ಬಳಕೆಯಾಗುತ್ತಿದೆ ಮತ್ತು ಹೇಗೆ ಬಳಕೆಯಾಗಬೇಕಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಗತಕಾಲದ ಕೆರೆ

kere ethihasa saruva swathatrya poorvada  sakshi kalluಸುಮಾರು 1936ರ ವೇಳೆಗೆ ಕೊಡಸೆಗೆ ಏಕಾಏಕಿ ನೀರಿನ ಸಮಸ್ಯೆ ತಲೆದೂರಿತು. ಆಗ ಜನ -ಜಾನುವಾರುಗಳ ಉಪಯೊಗಕ್ಕೆ ಮತ್ತು ಭೂಮಿಯ ಅಂತರ್ಜಲ ಹೆಚ್ಚಿಸುವ ಅನಿವಾರ್ಯತೆ  ಊರಿನ ಗ್ರಾಮಸ್ಥರಿಗೆ ಎದುರಾಯಿತು. ಎತ್ತರದ ಪ್ರದೇಶದಲ್ಲಿ ಬಿದ್ದ ಮಳೆ ನೀರು ಸುಮ್ಮನೆ ಪೋಲಾಗಿ ಹರಿದು ಹಳ್ಳ ಸೇರುತ್ತಿತ್ತು. ಇದನ್ನ ಒಂದೆಡೆ ನಿಲ್ಲಿಸಲು ತೀರ್ಮಾನಿಸಿದ ಊರಿನ ಹಿರೀಕರು, ಅಂದಿನ ಮೈಸೂರು  ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆಗ ಮೈಸೂರು ಸಂಸ್ಥಾನದ ರಾಜ ಮಹಾರಾಜರು (ಆಡಳಿತಗಾರರು) 1939ರಲ್ಲಿ ಸುಮಾರು 3 ಎಕರೆ ವಿಸ್ತೀರ್ಣದಲ್ಲಿ ಒಂದು ಕೆರೆಯನ್ನ ಊರಿನ ಜನರ ಸಹಯೋಗದಲ್ಲಿ ನಿರ್ಮಿಸಿದರು. ಇದಕ್ಕೆ ಸಂಬಂಧಿಸಿದಂತೆ ಸಾಕ್ಷಿಕಲ್ಲನ್ನು (ದಾಖಲೆಕಲ್ಲು) ಕೆರೆ ದಂಡೆಯ ಮೇಲೆ ಕಾಣಬಹುದು. ಅದೃಷ್ಟವಶಾತ್ ಒತ್ತುವರಿ ಭೂತ ಈ ಊರಿನ ಕೆರೆಗೆ ಎದುರಾಗಿಲ್ಲ. ಈ ಕೆರೆಯು ಸುಮಾರು 150 ಎಕರೆಗೂ ಅಧಿಕ ಪ್ರದೇಶಕ್ಕೆ ನೀರುಣಿಸುತ್ತದೆ. ಹಾಗೆಯೇ ಈ ಕೆರೆಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಸುಮಾರು ಮೂರು ಕ್ವಿಂಟಾಲ್ ಗೂ ಹೆಚ್ಚು ಮೀನು ಉತ್ಪಾದನೆ ಮಾಡಲಾಗುತ್ತಿದೆ. ಜನರ ಎಲ್ಲಾ ಅಗತ್ಯತೆ, ಅಭಿವೃದ್ದಿ, ಆಹಾರ ಸ್ವಾವಲಂಬನೆ ಸಾಧಿಸಲು ನೀರು ಬಹುಮುಖ್ಯ ಪಾತ್ರ ವಹಿಸುವುದು ಸರ್ವೇಸಾಮಾನ್ಯ. ಪ್ರಾಣಿ-ಪಕ್ಷಿ, ಮನುಕುಲಕ್ಕೆ ಅಮೃತಸ್ವರೂಪವಾಗಿರುವ ನೀರಿನ ಮಹತ್ವ ಬಹುತೇಕ ಮಲೆನಾಡಿಗರಿಗೆ ಅರಿವೇ ಇಲ್ಲ. ಹಸಿದವನಿಗೆ ಮಾತ್ರ ಅನ್ನದ ಮಹತ್ವ ತಿಳಿಯುತ್ತದೆ ಎಂಬ ಗಾದೆ ಮಾತಿನಂತೆ, ಬಯಲುಸೀಮೆ ಜನರಿಗೆ ನೀರಿನ ಮಹತ್ವದ ಬಗ್ಗೆ ಅರಿವಿದೆ.

ಕೃಷಿ ಕ್ರಾಂತಿ

ಕೊಡಸೆ ಊರಿನ ಮೇಲಿನ ಕೆರೆ ನಿರ್ಮಾಣವಾದ ಮೇಲೆ, ಊರಿನ ಕೆಲ ಜನರು ತಮ್ಮ ಜಮೀನಿನ ತಲೆವಾರಿನಲ್ಲಿ ಸಂಗ್ರಹಯೋಗ್ಯ ಆಯಕಟ್ಟಿನ ಜಾಗದಲ್ಲಿ ಸಣ್ಣ ಬಾವಿಗಳನ್ನ ತೆಗೆದರು. ಮೊದಲೆಲ್ಲ ವರ್ಷಕ್ಕೆ ಒಂದು ಬಾರಿ ಬೆಳೆಯುತ್ತಿದ್ದ ಭತ್ತವನ್ನು ಕಾಲ ಕ್ರಮೇಣ ಕಾರು ಮತ್ತು ಸುಗ್ಗಿ ಎಂದು ಎರಡು ಬೆಳೆ ಬೆಳೆಯೋ ಸಾಹಸಕ್ಕೆ ಕೈ ಹಾಕಿದ್ರು. ಇದರೊಂದಿಗೆ ಕಬ್ಬು, ಎಳ್ಳು, ಸೌತೆ, ಕಲ್ಲಂಗಡಿ… ಹೀಗೆ  ಬೇರೆ ಬೇರೆ ಕೃಷಿ ಚಟುವಟಿಕೆ ಕೈಗೊಂಡರು. ಇಂತಹ ಸಂದರ್ಭದಲ್ಲಿ, ಅಂದರೆ ಸುಮಾರು 1980ರ ದಶಕದಲ್ಲಿ, ಊರಿಗೆ ಮಲಯಾಳಿಗಳ ಆಗಮನವಾಯಿತು. ಇದರಿಂದ ಮಲೆನಾಡಿನ ರೈತರ ಬದುಕಿನಲ್ಲಿ ಅನುಕೂಲ ಮತ್ತು ಅನಾನುಕೂಲ ಎರಡಕ್ಕೂ ಎಡೆಮಾಡಿಕೊಟ್ಟಂತಾಯಿತು. ಕೇವಲ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ತೃಪ್ತಿ ಪಟ್ಟುಕೊಂಡಿದ್ದ ಮಲೆನಾಡಿಗರಿಗೆ ವಾಣಿಜ್ಯ ಬೆಳೆಗಳನ್ನು ಪರಿಚಯಿಸಿದರು. ರಬ್ಬರ್,
sariyada nirvahane ellade gida ganti belediruva drushyaಕಾಳುಮೆಣಸು, ಶುಂಠಿ ಕೃಷಿ ನಮ್ಮ ರೈತರ ಪಾಲಿಗೆ ಆರ್ಥಿಕವಾಗಿ ಸದೃಢರಾಗಲು ವರದಾನವಾಯ್ತು. ಇಂದಿಗೂ ನಮ್ಮ ಮಲೆನಾಡಿನ ಬಹುತೇಕ ಜನರು ಶುಂಠಿಯನ್ನ ಆದ್ಯತೆ ಬೆಳೆಯನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇದು ಶುದ್ಧ ಮಲೆನಾಡಿನ ಮಣ್ಣಿನ ಮೇಲೆ ಘೋರ  ಪರಿಣಾಮವನ್ನೇ ಉಂಟುಮಾಡಿತು. ಮಲೆನಾಡಿನಲ್ಲಿ ಅಪರೂಪವೆನಿಸಿದ್ದ ಬೋರ್ ವೆಲ್ ಗಳು ಈಗ ಎಲ್ಲೆಂದರಲ್ಲಿ ತಲೆಎತ್ತಿ ಭೂಮಿಯ ಅಂತರ್ಜಲವನ್ನೇ ಬರಿದುಮಾಡುತ್ತಿವೆ. ಅದಮ್ಯ ರೀತಿಯ ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶ, ಹೊಸ ಫಲವತ್ತಾದ ಭೂಮಿಗಾಗಿ ಅರಣ್ಯ ಸಾಗುವಳಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅನಾನುಕೂಲಗಳು ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತವೆ.

ಅಂತರ್ಜಲ ಬರಿದು

sariyada nirvahane ellade gida ganti belediruva drushyaಕೊಡಸೆ ಊರಿನ ಬಹುತೇಕ ಮಣ್ಣು ಜೇಡಿ ಮಿಶ್ರಿತ ಅಂಟು ಮಣ್ಣಾಗಿದ್ದರಿಂದ, ಮಳೆ ನೀರು ಭೂಮಿಯ ಆಳಕ್ಕೆ ಇಳಿಯದೆ, ಅದು ಹಳ್ಳ-ಕೊಳ್ಳ ಸೇರುತ್ತಿದೆ. ಪರಿಣಾಮ ಇಲ್ಲಿ ಬೋರ್ವೆಲ್ ಗಳು ಕೂಡಾ ಯಸಸ್ವಿಯಾಗುವ ಶೇಖಡವಾರು ಪ್ರಮಾಣ ಅತ್ಯಂತ ಕಡಿಮೆ. (ಇಡೀ ಊರಿಗೆ ಕೇವಲ 5 ಬೋರ್ ಮಾತ್ರ ಇವೆ). ಈ ಊರಿನ ನೀರಿನ ಪ್ರಮುಖ ಸೆಲೆಯಾಗಿದ್ದ ‘ಮೇಲಿನ ಕೆರೆ‘ ಸರಿಯಾದ ನಿರ್ವಹಣೆ ಇಲ್ಲದೇ ಹೂಳು ತುಂಬಿದ್ದರ ಪರಿಣಾಮ ಅದರ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಇದರಿಂದಾಗಿ ಮಳೆಗಾಲದ ಆರಂಭದಲ್ಲಿ  ಸುರಿಯುವ 2-3 ಮಳೆಗಳಿಗೇ ಕೆರೆ ಭರ್ತಿಯಾಗಿ ಕೆರೆ ಕೋಡಿ ಬಿದ್ದು ನೀರು ವ್ಯರ್ಥವಾಗಿ ಹಳ್ಳ ಸೇರುತ್ತಿದೆ. ಕೆರೆ ಪಕ್ಕದಲ್ಲಿ ಅಡಿಕೆ ತೋಟ ಹೊಂದಿರುವ ಕೆಲ ಮಂದಿ ತಮ್ಮ ವೈಯಕ್ತಿಕ ಹಿತಾಸಕ್ತಿಗೋಸ್ಕರ ಅವೈಜ್ಞಾನಿಕವಾಗಿ ಕೆರೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಕೆರೆ ಸಂರಕ್ಷಣಾ ಸಮಿತಿ ರಚನೆಯಾಗಿಲ್ಲ, ಸ್ಥಳೀಯ ಸರ್ಕಾರಗಳು ಕೂಡಾ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದರ ಪರಿಣಾಮ ಬೇಸಿಗೆಯಲ್ಲಿ ಜಾನುವಾರುಗಳ ಹಾಹಾಕಾರ ಹೇಳತೀರದು. ಬೇಸಿಗೆಯಲ್ಲಿ ಬಾವಿ ನೀರೂ ಬತ್ತಿ ಹೋಗುತ್ತಿರುವುದರಿಂದ ಭತ್ತವನ್ನ ವರ್ಷಕ್ಕೆ 2 ಬಾರಿ ಬೆಳೆಯುತ್ತಿದ್ದ ರೈತರು ಈಗ ಮತ್ತೆ ಒಂದೇ ಬೆಳೆಗೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಮುಂದೇನು

kere inda 0.5 km dooradallu neerina harivuಈ ಭಾಗದ ಜನರಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ತುರ್ತಾಗಿದೆ.

  • ಸರ್ಕಾರದ ಯೋಜನೆಗಳನ್ನೇ ಸಮರ್ಥವಾಗಿ ಬಳಸಿಕೊಂಡು ಕೃಷಿ ಹೊಂಡ, ಕೆರೆ ಹೂಳೆತ್ತುವ ಕಾರ್ಯಕ್ರಮಗಳನ್ನ ಸಮರ್ಥವಾಗಿ ನಿರ್ವಹಿಸಬೇಕಿದೆ.
  • ಕೆರೆ ನೀರಿನ ಸದುಪಯೋಗ ಪಡೆದುಕೊಳ್ಳಲು ಕೆರೆ ಸಂವರ್ಧನಾ ಸಮಿತಿ ರಚಿಸಿ ವೈಜ್ಞಾನಿಕ ರೀತಿಯಲ್ಲಿ ನೀರಿನ ಹಂಚಿಕೆ ಮಾಡಿಕೊಳ್ಳುವುದು.
  • ತೋಟಗಳಿಗೆ ಹಾಯಿನೀರು ಬಿಡುವ ಬದಲು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವುದು.
  • ಬೆಳೆಗಳ ಅಗತ್ಯಕ್ಕೆ ಅನುಗುಣವಾಗಿ ನೀರಿನ ಉಪಯೋಗದ ಬಗ್ಗೆ ರೈತರಲ್ಲಿ ತಿಳುವಳಿಕೆ ಮೂಡಿಸಬೇಕಿದೆ.
  • ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಾದ್ಯವಾದಷ್ಟು ಇಂಗುಗುಂಡಿಗಳನ್ನ ನಿರ್ಮಿಸುವುದು.
  • ಹಳ್ಳದ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಅದಕ್ಕೆ ಅಡ್ಡಲಾಗಿ ಬದುಗಳ ನಿರ್ಮಾಣ.
  • ಮಳೆ ನೀರಿನ ಕೋಯ್ಲಿನ ಕುರಿತಂತೆ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸುವ ಅನಿವಾರ್ಯತೆ ಇದೆ.

ಗ್ರಾಮಗಳ ಉದ್ದಾರವೇ ದೇಶದ ಉದ್ಧಾರ ಎಂಬ ಗಾಂಧೀ ಕನಸು ನನಸಾಗಬೇಕಾದರೆ ಇಲ್ಲಿನ ಸ್ವಾಭಾವಿಕ ಸಂಪನ್ಮೂಲಗಳನ್ನ ಸುಸ್ಥಿರವಾಗಿ ಬಳಸಿಕೊಳ್ಳಬೇಕಿದೆ. ಬಹುತೇಕ ಕುಟುಂಬಗಳು ಶೈಕ್ಷಣಿಕವಾಗಿ ಉತ್ತಮ ಹಿನ್ನೆಲೆ ಇದ್ದರೂ ಊರಿನ ಸಾಮುದಾಯಿಕ ಅಭಿವೃದ್ದಿಯಲ್ಲಿ ಅವರ ಕೊಡುಗೆ ತೀರಾ ಕಡಿಮೆ ಎಂದರೆ ತಪ್ಪಾಗಲಾರದು. ಇನ್ನು ಮುಂದಿನ ಪೀಳಿಗೆಯವಾದರೂ ಇಂತಹ ನೈಸರ್ಗಿಕ ಸಂಪನ್ಮೂಲಗಳನ್ನ ಬಳಸಿ, ಉಳಿಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ ನಿಭಾಯಿಸಬೇಕಿದೆ.

ಚಿತ್ರ-ಲೇಖನ: ನವೀನ್ ಕೊಡಸೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*