ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸಂಸದರ ಆದರ್ಶ ಗ್ರಾಮಕ್ಕೆ ‘ಸ್ವಚ್ಛತಾ ದೂತ’

ಧಾರವಾಡ (ಹಾರೋಬೆಳವಡಿ): ಫೆಲೊಗಳ ಒಂದು ವರ್ಷದ ಗ್ರಾಮವಾಸ್ತವ್ಯ ಕೊನೆಗೊಂಡ, ಆರು ತಿಂಗಳ ಗ್ರಾಮೋದ್ಧಾರದ ತರಬೇತಿ ಪೂರ್ಣಗೊಂಡ ದಿನ. ಹಾರೋಬೆಳವಡಿಯಿಂದ ಫೆಲೊ ಓರ್ವರನ್ನು ಬೀಳ್ಕೊಡುವ ಘಳಿಗೆ.. 

“ನಿಮ್ಮನ್ಯಾಕರೆ ಇಷ್ಟು ಹಚ್ಚಿಕೊಂಡ್ವಿ ನಾವು..!?”  ತುಂಬಿದ ಕಂಗಳಲ್ಲಿ ಅಕ್ಕರೆಯಿಂದ ಹಾರೋಬೆಳವಡಿ ನಿವಾಸಿ ಸವಿತಮ್ಮ ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ಮಂಜುನಾಥ ದಾನಿ ಅವರ ಕೈ ಹಿಡಿದು ಸಖೇದಾಶ್ಚರ್ಯದಿಂದ ಕೇಳುತ್ತಿದ್ದರೆ, ಆ ಅವಿನಾಭಾವ ಸಂಬಂಧಕ್ಕೆ ಮೂಕವಿಸ್ಮಿತರಾಗುವ ಸರದಿ ನೆರೆದ ಎಲ್ಲರದ್ದು.

ಸುಮಾರು ೧೨ ತಿಂಗಳುಗಳ ಒಡನಾಟ ಮತ್ತು ಗ್ರಾಮ ವಾಸ್ತವ್ಯ ಪರವೂರಿನವರನ್ನೂ ‘ಇವ ನಮ್ಮವ’ ಎನ್ನಿಸುವ ತೆರದಿ ಅಂತಃಕರಣ ಬೆಸೆದಿತ್ತು. ಗಂಟಲು ಉಬ್ಬಿ ಬಂದಿತ್ತು; ಕಂಗಳು ತುಂಬಿ ನಿಂತಿದ್ದವು.. ಮನಸ್ಸು ಭಾರವಾಗಿತ್ತು.. ಮನಗೆದ್ದ ಮನೆ ಮಗ ಹೊರಟು ನಿಂತ ಆ ಕ್ಷಣ.. ಎಲ್ಲರ ಕಣ್ಣೂ ಹನಿಗೂಡಿದ್ದವು.

???????????????????????????????೬೧೦ ಮನೆಗಳಿರುವ ಪುಟ್ಟ ಪಟ್ಟಣ ಸದೃಶ, ಸಂಸದ ಪ್ರಹ್ಲಾದ ಜೋಶಿ ಸಹ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಲು, ತಮ್ಮ ಮತಕ್ಷೇತ್ರದ ಆದರ್ಶ ಗ್ರಾಮವಾಗಿ ಹಾರೋಬೆಳವಡಿಯನ್ನು ಆಯ್ಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ, ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್, ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ಮಂಜುನಾಥ ದಾನಿ ಅವರ ಮೇಲೆ ಅಲ್ಲಿನ ಜನ ಸ್ವಾಭಾವಿಕವಾಗಿಯೇ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಹಾಗಾಗಿ, ಡಾ. ಪ್ರಕಾಶ, ಈ ಪುಟ್ಟ ಪಟ್ಟಣಕ್ಕೆ ಇಬ್ಬರು ಫೆಲೋಗಳನ್ನು ಒದಗಿಸಿದ್ದರು. ಹಾರೋಬೆಳವಡಿಯ ಅರ್ಧ ಭಾಗಕ್ಕೆ ಇನ್ನೋರ್ವ ಫೆಲೊ ರಮೇಶ ನಾಯ್ಕ ಜವಾಬ್ದಾರಿ ಹೊತ್ತಿದ್ದರು. (ಅವರ ಕೆಲಸದ ಬಗ್ಗೆ ಪ್ರತ್ಯೇಕ ಕಂತಿದೆ.)

ಫೆಲೊ ಮಂಜುನಾಥ ದಾನಿ, ಗ್ರಾಮ್ಯ ಪರಿಸರದ ರಾಜಕೀಯದಿಂದ ತುಂಬ ಸಂಕೀರ್ಣಗೊಂಡು ದಶಕಗಳ ಕಾಲ ಬಗೆಹರಿಯದೇ ಉಳಿದಿದ್ದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಂಡುಕೊಂಡು, ಸಮುದಾಯದ ಸಹಭಾಗಿತ್ವದಲ್ಲಿ ‘ನಮ್ಮೂರು’ ಎಂಬ ಅಭಿಮಾನ ಮೊಳೆಸಿ, ಗುರಿ ನಿಶ್ಚಿತಗೊಳಿಸಿದ್ದು ವಿಶೇಷ.

???????????????????????????????ಕುಡಿಯುವ ನೀರಿನ ಸಮಸ್ಯೆ ಮತ್ತು ಹೆಣ್ಣು ಮಕ್ಕಳು ಪಡುತ್ತಿದ್ದ ‘ನೀರು ಹೊರುವ ಕಾಯಕ’ದ ಪಾಡು ಮನಗಂಡು, ಆರಂಭದಲ್ಲಿಯೇ ೪೦ ಮನೆಗಳನ್ನು ಆಯ್ಕೆ ಮಾಡಿ, ಗ್ರಾಮ ಪಂಚಾಯ್ತಿ ಮತ್ತು ಸಮುದಾಯದ ಜನರ ಮಧ್ಯೆ ಸಂವಾದ ಏರ್ಪಡಿಸಿ, ಲಭ್ಯವಿರುವ ಸಂಪನ್ಮೂಲಗಳನ್ನೇ ಸಮರ್ಥವಾಗಿ ಬಳಸಿಕೊಂಡು ಪರಿಹಾರ ಕಂಡುಕೊಳ್ಳಲು ಮಂಜುನಾಥ ಮುಂದಾಗುತ್ತಾರೆ. ಹತ್ತಾರು ಸುತ್ತಿನ ಮಾತುಕತೆ ನಂತರ, ಸಮುದಾಯವೇ ಮುಂದೆ ಬಂದು ಕಾಮಗಾರಿಗೆ ತಗಲುವ ಖರ್ಚು ಭರಿಸಿ, ಮತ್ತು ಶ್ರಮದಾನದ ಮೂಲಕ ಮನೆ ಮನೆಗೆ ನಳದ ಸಂಪರ್ಕ ದೊರಕಿಸಿಕೊಳ್ಳಲು ಮನಸ್ಸು ಮಾಡುತ್ತಾರೆ. ಆಶ್ಚರ್ಯವೆಂಬಂತೆ, ಸಮುದಾಯವೇ ಸಬಲೀಕರಣಗೊಂಡು ತನ್ನ ದಶಕದ ಸಮಸ್ಯೆಗೆ ಸ್ವತಃ ಇತಿಶ್ರೀ ಹಾಡುತ್ತದೆ!

ನಿತ್ಯ ಓಡಾಟಕ್ಕೆ ಮಂಜುನಾಥ ಬಳಸುತ್ತಿದ್ದ ತಳವಾರ ಓಣಿಯ ರಸ್ತೆ ಮಧ್ಯ ಭಾಗದಲ್ಲಿ ೬೦ ವರ್ಷದಷ್ಟು ವಯೋವೃದ್ಧ ಬಾವಿ ತನ್ನ ಗತಕಾಲದ ಇತಿಹಾಸ ಸಾರುತ್ತ, ಉದರದಲ್ಲಿ ಕೊಚ್ಚೆ ತುಂಬಿಕೊಂಡು, ಮೂಕವೇದನೆ ಅನುಭವಿಸುತ್ತ ನಿಂತಿದ್ದು ಗಮನಿಸುತ್ತಾರೆ. ಕೇವಲ ಎರಡು ವರ್ಷಗಳ ಹಿಂದೆ (೨೦೧೪) ಇಡೀ ಊರಿಗೆ ಕುಡಿಯುವ ನೀರು ಪೂರೈಸುವ ಏಕೈಕ ಬಾವಿ ಇದಾಗಿತ್ತು ಎಂದು ಗ್ರಾಮದ ಹಿರಿಯರು ಹೇಳಿದಾಗ, ಹೌಹಾರುವ ಸರದಿ! ಮಲಪ್ರಭಾ ನದಿ ನೀರು ಗ್ರಾಮಕ್ಕೆ ಸರಬರಾಜಾಗುತ್ತಲೇ, ಬಾವಿ ಕಸದ ತಿಪ್ಪೆಯಾಗಿ ಪರಿವರ್ತಿತಗೊಂಡಿತು ಎಂಬ ಆಘಾತಕಾರಿ ಮಾಹಿತಿ ದಂಗುಬಡಿಸುತ್ತದೆ.

???????????????????????????????ಹಾರೋಬೆಳವಡಿಯ ಜನತೆಯ ಮುಂದೆ ಈ ಬಾವಿಯನ್ನು ಸ್ವಚ್ಛಗೊಳಿಸುವ ಪ್ರಸ್ತಾವನೆ ಮಂಡಿಸಿದಾಗ, ‘ತಮ್ಮಾ ನಿನ್ನ ತಲೀ ಸರಿ ಇದ್ದಂಗ ಇಲ್ಪಾ..; ಅದೇನ ಸ್ವಚ್ಛ ಆಗೂದುಲ್ಲ’ ಖಡಾಖಂಡಿತವಾಗಿ ಹೇಳಿದವರು ಬಹಳ. ಮಂಜುನಾಥ ಗ್ರಾಮ ಪಂಚಾಯ್ತಿಗೆ ಎಡತಾಕಿ, ಸಂಬಂಧಿಸಿದವರ ಮನವೊಲಿಸಿ, ತಾವೇ ಖುದ್ದು ನಿಂತು ಆ ಕೆಲಸ ಮಾಡಿಸುವ ಭರವಸೆ ನೀಡುತ್ತಾರೆ. ಸ್ಕೋಪ್ ಸಂಸ್ಥೆ ಕೂಡ ೨೦ ಸಾವಿರ ರೂಪಾಯಿಗಳನ್ನು ಬಾವಿಯ ಸ್ವಚ್ಛತೆಗೆ ಒದಗಿಸಿ, ಮಂಜುನಾಥ ಕನಸಿಗೆ ಬೆಂಬಲವಾಗಿ ನಿಲ್ಲುತ್ತದೆ. ಬಾಕಿ ಖರ್ಚು ಸ್ವತಃ ಗ್ರಾಮ ಪಂಚಾಯ್ತಿ ವಹಿಸಿಕೊಳ್ಳಲು ಸಿದ್ಧವಾಗುತ್ತದೆ.

ಅಂತೂ ಆ ದಿನ ಬಂದೇ ಬಿಡ್ತು!

ಆದರೆ, ಬಾವಿಗಿಳಿದು ಸ್ವಚ್ಛಗೊಳಿಸಲು ನುರಿತವರು ಸುತಾರಾಂ ಒಪ್ಪಲಿಲ್ಲ. ಊರವರೂ ‘ನಾ ಒಲ್ಲೆ.. ನೀ ಒಲ್ಲೆ’. ಊರಿನ ಯುವಕರ ತಂಡ ಕಟ್ಟಿಕೊಂಡು ಮಂಜುನಾಥ ಬಾವಿಗೆ ಇಳಿದಿದ್ದೇ ತಡ, ಎರಡೇ ದಿನದಲ್ಲಿ ಚರ್ಮಕ್ಕೆಲ್ಲ ಸೋಂಕು ತಗುಲಿ ತುರಿಕೆ, ಜ್ವರ ಅನುಭವಿಸುವಂತಾಯಿತು. ಕೇವಲ ಹೊಲಸಲ್ಲ; ಸತ್ತ ಪ್ರಾಣಿಯ ಶವಗಳನ್ನು ಎಸೆಯಲೂ ಸಹ ಇದೇ ತಿಪ್ಪೆ ಗುಂಡಿಯಾಗಿತ್ತು! ಹುಡುಗರ ಪ್ರಯತ್ನ ನೋಡಿ ಮನಸೋತ ಊರವರು, ಬಾವಿಯ ಹೊಲಸು ಎತ್ತುವ ಪರಿಣತಿ ಇರುವವರ ಮನವೊಲಿಸಿ, ತಾವೂ ಸ್ವತಃ ಕೈಜೋಡಿಸಿ ಶ್ರಮದಾನ ಮಾಡಿ ತಿಂಗಳೊಪ್ಪತ್ತಿನಲ್ಲಿ ಬಾವಿಯನ್ನು ಶುದ್ಧಗೊಳಿಸಿ, ಸ್ವಚ್ಛ ನೀರು ಜಿನುಗುವಂತೆ ಮಾಡಿದರು.

???????????????????????????????ಮತ್ತೆ ಹೊಲಸು ಬಾವಿಗೆ ಬೀಳದಂತೆ, ಊರವರು ಎಸೆಯದಂತೆ, ಪೂಜಾ ಸಾಮಗ್ರಿ, ಗಣಪತಿ ಮೂರ್ತಿ ವಿಸರ್ಜಿಸದಂತೆ ಸೂಕ್ತ ಬಂದೋಬಸ್ತ್‌ಗೂ ಮಂಜುನಾಥ ಕ್ರಮ ಕೈಗೊಂಡರು. ಅಂದಾಜು ೮೦ ಸಾವಿರ ರೂಪಾಯಿ ವೆಚ್ಚದಲ್ಲಿ ಬಾವಿ ತನ್ನ ಆರೋಗ್ಯ ವೃದ್ಧಿಸಿಕೊಂಡಿತು!

ಮಂಜುನಾಥ ಅವರು ಗಮನಿಸಿದ ಇನ್ನೊಂದು ಸಮಸ್ಯೆ, ಬಟ್ಟೆ ಒಗೆಯಲು ಸೂಕ್ತ ವ್ಯವಸ್ಥೆ ಇರದೇ ಇರುವುದು. ಹಾಗಾಗಿ, ರಸ್ತೆಗಳ ಮೇಲೆಲ್ಲ ಒಗೆದ ನೀರು ನಿತ್ಯ ಹರಿದು, ಗಬ್ಬೆದ್ದ ವಾತಾವರಣಕ್ಕೆ ಮುನ್ನುಡಿ ಬರೆದಂತಿತ್ತು. ಮತ್ತೆ ಜನರನ್ನು, ಗ್ರಾಮ ಪಂಚಾಯ್ತಿ ಸದಸ್ಯರನ್ನು ಒಂದೆಡೆ ಸೇರಿಸಿ, ವಿಚಾರ ವಿನಿಮಯ ಮಾಡಿ, ವ್ಯವಸ್ಥಿತವಾಗಿ ‘ಒಗ್ಯಾಣ ಕಟ್ಟೆ’ಗಳನ್ನು ಕಟ್ಟಿಕೊಡಲು ಯೋಜನೆ ರೂಪಿಸಿದರು. ಒಟ್ಟು ಮೂರು ಓಣಿಗಳಿಗೆ ೧೪ ಸಾವಿರ ರೂಪಾಯಿ ವೆಚ್ಚದಲ್ಲಿ, ಸ್ಕೋಪ್ ನೀಡಿದ ೭,೮೯೦ ರೂಪಾಯಿ ಸೇರಿ ಎಲ್ಲರಿಗೂ ಅನುಕೂಲವಾಗುವಂತೆ ಒಗ್ಯಾಣ ಕಟ್ಟೆ ರೂಪಿಸಿ, ರಸ್ತೆಗಳನ್ನು ಶುಚಿಯಾಗಿರಿಸುವ ಮಾದರಿ ರೂಪಿಸಿಕೊಟ್ಟರು.

ಅಷ್ಟೇ ಅಲ್ಲ

ಗ್ರಾಮ ಪಂಚಾಯ್ತಿಗೂ ತಮಗೂ ಯಾವ ಸಂಬಂಧವೂ ಇಲ್ಲ! ನೀತಿ ನಿರೂಪಣೆ ಕೇವಲ ಅಧಿಕಾರಿಗಳ ಜವಾಬ್ದಾರಿ ಎಂದು ಬಲವಾಗಿ ನಂಬಿದ್ದ ಗ್ರಾಮಸ್ಥರಿಗೆ – ನೀವೇ ನಿಜವಾದ ಕರ್ಣಧಾರತ್ವ ವಹಿಸಬೇಕು; ಬೇಡಿಕೆಗಳನ್ನು ಪ್ರಾಧಾನ್ಯತೆಯ ಮೇಲೆ ಸಿದ್ಧಪಡಿಸಿ ಗ್ರಾಮ ಪಂಚಾಯ್ತಿಗೆ ಒದಗಿಸಬೇಕು; ಹಣಕಾಸು ಸೌಲಭ್ಯ ನೋಡಿಕೊಂಡು ಕ್ರಿಯಾಯೋಜನೆ ಮಾತ್ರ ಅವರು ರೂಪಿಸಬೇಕು ಎಂಬ ಪಾತ್ರದ ಮನವರಿಕೆ ಮಂಜುನಾಥ ಮಾಡಿಸುತ್ತಾರೆ. ಪರಿಣಾಮವಾಗಿ, ‘ಸ್ವಚ್ಛತಾ ದೂತ’ರ ನೇಮಕವಾಗುತ್ತದೆ. ಓವರ್‌ಹೆಡ್ ತೊಟ್ಟಿಗಳ ಸಕಾಲಿಕ ಸ್ವಚ್ಛತೆಗೆ ಯೋಜನೆ ಮತ್ತು ಕಾಲಮಿತಿ ರೂಪುಗೊಳ್ಳುತ್ತದೆ!

???????????????????????????????ಮಂಜುನಾಥ ಅವರ ಗಮನ ಸೆಳೆದಿದ್ದು, ಬಯಲು ಶೌಚದ ಸಮಸ್ಯೆ. ಒಟ್ಟು ೬೩೦ ಮನೆಗಳ ಪೈಕಿ ಕೇವಲ ೭೮ ಮನೆಗಳಿಗೆ ಮಾತ್ರ ಶೌಚಾಲಯ ವ್ಯವಸ್ಥೆ ಇದೆ ಎಂಬುದು ಆರಂಭದಲ್ಲಿಯೇ ಅವರು ಗುರುತಿಸುತ್ತಾರೆ. ಶೇ.೧೩ ರಷ್ಟು ಮನೆಗಳಲ್ಲಿ ಮಾತ್ರ ಶೌಚಾಲಯ! ಕೇವಲ ೮ ತಿಂಗಳ ಅವಧಿಯಲ್ಲಿ ಅನೇಕರ ಮನವೊಲಿಸಿ ೧೩೮ ಮನೆಗಳಿಗೆ ಶೌಚಾಲಯ ಕಟ್ಟಿಸಿಕೊಡುವಲ್ಲಿ ಅವರು ಯಶಸ್ವಿಯಾಗುತ್ತಾರೆ. ಸದ್ಯ ಶೇ.೨೨ ರಷ್ಟು ಮನೆಗಳಲ್ಲಿ ಶೌಚಾಲಯಗಳಿದ್ದು, ನಿತ್ಯ ಬಳಕೆಯಾಗುತ್ತಿವೆ ಎಂಬುದು ಸಮಾಧಾನದ ಸಂಗತಿ.

ಹಾರೋಬೆಳವಡಿಯ ಧುರೀಣರಾದ ನಾಮದೇವ ಪಟಧಾರಿ ಹಾಗೂ ಶ್ರೀಮತಿ ಯಲ್ಲವ್ವ ತಳವಾರ ಅವರು, ಗ್ರಾಮ ಪಂಚಾಯ್ತಿ ಸದಸ್ಯರ ಆಗ್ರಹದ ಮೇರೆಗೆ, ಜಿಲ್ಲಾ ಪಂಚಾಯ್ತಿ ಮತ್ತು ಸಂಸದ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದಿದ್ದು, ಮಂಜುನಾಥ ಅವರನ್ನು ಇನ್ನೊಂದು ವರ್ಷದ ಅವಧಿಗೆ ಹಾರೋಬೆಳವಡಿಗೆ ಮುಂದುವರೆಸಬೇಕು, ಅವರ ಸಂಬಳವನ್ನು ಭರಿಸಿಕೊಡಬೇಕು ಎಂದು ಆಗ್ರಹಿಸಿರುವುದು ಅವರ ಶುದ್ಧ ಕಾಯಕಕ್ಕೆ ಸಿಕ್ಕ ಮನ್ನಣೆ.

ಓರ್ವ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವಕ ಮರಳಿ ಹಳ್ಳಿಯ ಕಡೆ ಮುಖ ಮಾಡಿ ತನ್ನ ಬದುಕು ಕಟ್ಟಿಕೊಳ್ಳಲು ಮನಸ್ಸು ಮಾಡಿ, ಯೋಗ್ಯ ಸಿದ್ಧತೆ ಮತ್ತು ಬದ್ಧತೆಯೊಂದಿಗೆ ಹೆಣಗುವ ಪರಿ ನಮ್ಮನ್ನು ಬೆರಗಾಗಿಸುತ್ತದೆ. ಸ್ಕೋಪ್ ಸಂಸ್ಥೆ ಅಭಿನಂದನೀಯ.

 ***************************************************************************************************************************

Manjunatha Danni - Harobelwadi Villageಮಂಜುನಾಥ ಎಂ. ದಾನಿ, ಮಂಡಲಗಿರಿ ಅವರ ಅನಿಸಿಕೆ

ಸಾಕಷ್ಟು ಓದಿಕೊಂಡಿದ್ದೆ. ಬೇಕಷ್ಟು ತಿಳಿದುಕೊಂಡಿದ್ದೆ. ಅನುಭವದಿಂದ ಒಂದಷ್ಟು ಮುಂದಾಲೋಚನೆಯನ್ನೂ ಮಾಡಿಕೊಂಡಿದ್ದೆ. ಆದರೆ ಈ ಹಾರೋಬೆಳವಡಿ ಗ್ರಾಮ ವಾಸ್ತವ್ಯದ ಅನುಭವ ಹೊಸದನ್ನೇ ನನ್ನ ಮುಂದೆ ತೆರೆದಿಟ್ಟಿತು. ಆ ಸವಾಲನ್ನು ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್ ನನ್ನನ್ನು ಪ್ರಬುದ್ಧವಾಗಿಸಿತು; ಮಾಗಿಸಿತು. ನೀರು ಮತ್ತು ಸುಶೌಚಕ್ಕೆ ಸಂಬಂಧಿಸಿ ಅನೇಕ ತಂತ್ರಜ್ಞಾನಗಳು, ನೆಲಮೂಲ ಸೊಗಡಿನ ಅನುಭವಗಳು ಮತ್ತು ಹಿರಿಯರ ಜ್ಞಾನ ಹೊಸದಾಗಿ ಕಲಿಯಲು ಅನುವಾಯಿತು. ಸಮುದಾಯದೊಟ್ಟಿಗೆ ತಾಳಿಕೊಂಡು ಕೆಲಸ ಮಾಡುವ, ಸಂಪರ್ಕ ಮತ್ತು ಸಂವಹನ ಕೊರತೆಯನ್ನು ನೀಗಿಸುವ, ಕೆಲಸದ ಮೂಲಕ ಪರಸ್ಪರ ವಿಶ್ವಾಸಗಳಿಸುವ ಪಟ್ಟುಗಳನ್ನು ಕಲಿಸಿ, ನನ್ನ ಕಲಿಕೆಗೊಂದು ಬೆಳ್ಳಿಯ ಅಂಚು ಈ ಅನುಭವ ತೊಡಿಸಿದೆ. ನನ್ನ ಮನಸ್ಸನ್ನೇ ಬದಲಾಯಿಸಿ, ಹಳ್ಳಿ ಕಡೆ ತಿರುಗಿಸಿ, ನನ್ನ ಬದುಕಿಗೊಂದು ಅರ್ಥ ನೀಡಿದೆ ಈ ತರಬೇತಿ.

ಸಂಪರ್ಕ:  manjunath.danni@gmail.com / +೯೧ ೯೭೪೩೭ ೪೭೬೨೯

****************************************************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ.

ಇದು ಸ್ಕೋಪ್-ಅರ್ಘ್ಯಂ ‘ವಾಟ್‌ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ ಯಶೋಗಾಥೆಯ ಸರಣಿಯ ೩ನೆಯ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*