ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಹದಾಯಿ ನದಿ ನೀರು ವಿವಾದ – ವಾಸ್ತವ ಮತ್ತು ಭ್ರಮೆಗಳು

ಉತ್ತರ ಕರ್ನಾಟಕದ ಮೂರು ಜಿಲ್ಲೆಗಳ ಹನ್ನೊಂದು ತಾಲ್ಲೂಕುಗಳಿಗೆ ಕುಡಿಯುವ ನೀರಿನ ಯೋಜನೆಯಾದ ಕಳಸ-ಬಂಡೂರಿ ನಾಲೆಗೆ ಮಹದಾಯಿ ನದಿಯ ನೀರು ಹರಿಸುವ ಯೋಜನೆ  ಕುರಿತು ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಚಳುವಳಿಯಿಂದಾಗಿ ಧಾರವಾಡ ಮತ್ತು ಗದಗ ಜಿಲ್ಲೆಗಳೆರೆಡು ಅಕ್ಷರಶಃ ನಲುಗಿ ಹೋಗಿವೆ. ಬಿಜಾಪುರ- ಹುಬ್ಬಳ್ಳಿ ನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಲುಗುಂದ ಮತ್ತು ನರಗುಂದ ಪಟ್ಟಣಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕನಿಷ್ಟ ನೂರು ದಿನಗಳ ಕಾಲ ಬಂದ್ ಆಚರಿಸಲಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ  ಹುಬ್ಬಳ್ಳಿ ನಗರದ ವಾಣಿಜ್ಯ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿದ್ದು, ಪ್ರತಿ ದಿನದ ವಹಿವಾಟು ಸಮಾರು ಐದು ಕೋಟಿ ರೂಪಾಯಿಗಳಿಂದ ಒಂದೂವರೆ ಕೋಟಿ ರೂಪಾಯಿಗಳಿಗೆ ಕುಸಿದಿದೆ. ನದಿ ನೀರಿನ ವಿವಾದ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಧಿಕರಣದ ತೀರ್ಪು ಬರುವವರೆಗೂ  ನಾವೆಲ್ಲಾ ಕಾಯುವುದು ಅನಿವಾರ್ಯವಾಗಿದೆ. ಆದರೆ ಇಂತಹ   ವಿವೇಕ ಮಾತ್ರ  ಚಳುವಳಿ ನಡೆಸುತ್ತಿರುವ ನಾಯಕರಿಂದ ದೂರವಾಗಿದೆ. ಕಳಸಾ-ಬಂಡೂರಿ ಚಳುವಳಿಯನ್ನು ಮುನ್ನಡೆಸಲು ಒಬ್ಬನೇ ಒಬ್ಬ ಧೀಮಂತ ನಾಯಕನಿಲ್ಲದ ಈ ಹೋರಾಟವು ದಿಕ್ಕು ತಪ್ಪಿ ಮೂರಾಬಟ್ಟೆಯಾಗಿದೆ.  ದೃಶ್ಯಮಾಧ್ಯಮಗಳ ಮುಂದೆ ನಾಯಕರಾಗಿ ಮಿಂಚಬೇಕೆಂಬ ಹಪಾಹಪಿತನದಿಂದ ನಾಯಿಕೊಡೆಗಳಂತೆ ಹುಟ್ಟಿ ಕೊಂಡ ಸಂಘಟನೆಗಳು ಮತ್ತು ಅದರ ನಾಯಕರುಗಳು ನೀಡುವ ಬಂದ್ ಗಳ ಕರೆಯಿಂದಾಗಿ ಜನಸಾಮಾನ್ಯರಲ್ಲದೆ, ರೋಗಿಗಳು, ಸಾರ್ವಜನಿಕ ವಾಹನಗಳಲ್ಲಿ ಓಡಾಡುವ ಪ್ರಯಾಣಿಕರು, ವ್ಯಾಪಾರಸ್ಥರು ರೋಸಿ ಹೋಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಲು ಕೈಗಾರಿಕೋದ್ಯಮಿಗಳು ಹಿಂಜರಿಯುತ್ತಿದ್ದಾರೆ. ಈಗಾಗಲೇ ಹಲವು ಕಂಪನಿಗಳು ತಮ್ಮ ಯೋಜನೆಗಳನ್ನು ಬೇರೆಡೆಗೆ ಸ್ಥಳಾಂತರಿಸಿವೆ. ಇಂದಿನ  ಕೊರಳು  ಕತ್ತರಿಸುವಂತಹ  ಪೈಪೋಟಿ ಯುಗದಲ್ಲಿ ಪ್ರತಿಯೊಂದು ಕಂಪನಿಯೂ ತಾನು ಹೂಡುವ ಪ್ರತಿ ಪೈಸೆ ಬಂಡವಾಳಕ್ಕೆ ಪ್ರತಿ ಫಲ ನಿರೀಕ್ಷಿಸುತ್ತದೆ. ತಿಂಗಳು ಗಟ್ಟಲೆ ಅಥವಾ ವರ್ಷಗಟ್ಟಲೆ ಉತ್ಪಾದನೆ ಸ್ಥಗಿತ ಗೊಂಡರೆ  ಕೈಗಾರಿಕೆಗಳು ಬದುಕಲು ಸಾದ್ಯವೆ? ಈ ಸ್ಥಿತಿಯಲ್ಲಿ ಸ್ಥಳಿಯರಿಗೆ  ಉದ್ಯೋಗಾವಕಾಶ ಗಗನ ಕುಸುಮವಾಗುತ್ತದೆ. ಒಂದು ಪ್ರತಿಭಟನೆ ಅಥವಾ  ಚಳುವಳಿಗಳನ್ನು ಹಮ್ಮಿಕೊಳ್ಳುವಾಗ ದೂರಗಾಮಿ ಪರಿಣಾಮಗಳ ಕುರಿತು, ಹಾಗೂ ಸಾಮಾಜಿಕವಾಗಿ ಸಂಭವಿಸಬಹುದಾದ ಪಲ್ಲಟಗಳ ಕುರಿತು ನಾಯಕರು ಎನಿಸಿಕೊಂಡವರಿಗೆ ಕನಿಷ್ಟ ಜ್ಞಾನವಿರಬೇಕು.  ಕಳಸ-ಬಂಡೂರಿ ನಾಲಾಯೋಜನೆಯ ಅನುಷ್ಠಾನಕ್ಕಾಗಿ ಈವರೆಗೆ ಉತ್ತರ ಕರ್ನಾಟಕದಲ್ಲಿ ಅರ್ಧ ಡಜನ್ ಸಂಘಟನೆಗಳು ಹುಟ್ಟಿಕೊಂಡಿವೆ, ಅವುಗಳ ನಡುವೆ ಒಡಕುಂಟಾಗಿವೆ, ಈ ಸಂಘಟನೆಗಳ ನಾಯಕರಿಗೆ ಯೋಜನೆಯ ವಿವರಗಳಾಗಲಿ ಅಥವಾ ಅದರ ಇತಿಹಾಸ ಕುರಿತಾಗಲಿ ಕಿಂಚಿತ್ತೂ ಮಾಹಿತಿಯಿಲ್ಲ. ಸುದ್ದಿ ಮಾದ್ಯಮಗಳಲ್ಲಿ ದಿನ ನಿತ್ಯ ಪ್ರಚಾರ ಸಿಕ್ಕರೆ ಸಾಕು ಎಂಬ ಆಸೆಯೊಂದನ್ನು ಹೊರತು ಪಡಿಸಿದರೆ, ಇವರೊಳಗಿನ ನಿಜವಾದ ಕಾಳಜಿ ಏನು ಎಂಬುದು ಈವರೆಗೆ ಯಾರಿಗೂ  ಉತ್ತರ ಕರ್ನಾಟಕದಲ್ಲಿ ಅರ್ಥವಾಗಿಲ್ಲ.

ಹೋರಾಟದಲ್ಲಿ ವರ್ಷ ಕಳೆದಿರುವ   ಇಲ್ಲಿನ  ರೈತರು ಧಾರವಾಡ ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಕ್ಕಿ ಹರಿಯುವ ಬೆಣ್ಣೆ ಹಳ್ಳದ ನೀರನ್ನು ನಮ್ಮೂರಿನ ಕೆರೆ ಕಟ್ಟೆಗಳಿಗೆ ತಿರುಗಿಸಿ, ಹಿಡಿದಿಟ್ಟು ಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಕುರಿತು ಯೋಚಿಸಿದ್ದರೆ,   ವ್ಯರ್ಥವಾಗಿ ಪ್ರವಾಹದ ರೂಪದಲ್ಲಿ ನೀರು ಹರಿದು ಹೋಗುವುದು ತಪ್ಪುತ್ತಿತ್ತು. ಎನ್ನುವ ನಮ್ಮ ನಡುವಿನ ಜಲತಜ್ಞ ಶಿವಾನಂದ ಕಳವೆ ಅವರ  ಮಾತು ಈ ಸಂದರ್ಭದಲ್ಲಿ ನನಗೆ  ನೆನಪಾಗುತ್ತಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಮಹಾದಾಯಿ ನದಿಯ ನೀರು ಹಂಚಿಕೆಯ ವಿವಾದ ಇಂದು ನಿನ್ನೆಯದಲ್ಲ ಅದಕ್ಕೆ ಸುದೀರ್ಘ 36 ವರ್ಷಗಳ ಇತಿಹಾಸವಿದೆ. ಒಟ್ಟು 77 ಕಿಲೊಮೀಟರ್ ಉದ್ದ  ಹರಿಯುವ ಮಹಾದಾಯಿ ನದಿಯು ಕರ್ನಾಟಕದಲ್ಲಿ 29 ಕಿಲೋಮಿಟರ್ ದೂರ ಹರಿದು ಸಮುದ್ರ ಸೇರುತ್ತಿದೆ. ದುರಂತವೆದರೆ, ಸೌಹಾರ್ಧ ವಾತಾವರಣದಲ್ಲಿ ಬಗೆ ಹರಿಸಿಕೊಳ್ಳಬಹುದಾದ ಒಂದು ಸಣ್ಣ ವಿಷಯವನ್ನು ಗೋವಾ ಸರ್ಕಾರ  ತನ್ನ ಸಣ್ಣತನದ ನಡುವಳಿಕೆಯಿಂದಾಗಿ ವಿವಾದವನ್ನಾಗಿ  ಮಾಡಿತು.  . ಪ್ರತಿ ವರ್ಷ ಮಹಾದಾಯಿ ನದಿಯ  ಸುಮಾರು ನೂರು ಟಿ.ಎಂ.ಸಿ. ಯಷ್ಟು ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಸೇರುತ್ತಿದ್ದು, ಇದರಲ್ಲಿ ಕೇವಲ ಏಳು ಟಿ.ಎಂ.ಸಿ. ಪ್ರಮಾಣದ ನೀರನ್ನು ಬೆಳಗಾವಿ, ಧಾರವಾಡ-ಗದಗ  ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಿಗೆ  ಕುಡಿಯುವ ನೀರಿಗಾಗಿ ಬಳಸಿಕೊಳ್ಳಲು  ಕರ್ನಾಟಕ ಸರ್ಕಾರ  ಒಂದು ಅರ್ಥಪೂರ್ಣವಾದ ಯೋಜನೆಯನ್ನು ರೂಪಿಸಿತು. 1978 ರಲ್ಲಿ ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ನದಿ ನೀರನ್ನು ಬಳಸಿಕೊಳ್ಳುವ ಬಗ್ಗೆ ವಿಧಾನ ಸಭೆಯಲ್ಲಿ ಪ್ರಥಮವಾಗಿ ಪ್ರಸ್ತಾಪವಾಯಿತು. ಆರ್. ಗುಂಡೂರಾವ್ ರವರು,  ಅಂದು ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿರವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ಕೊಡುವಂತೆ ಸೂಚಿಸಿದ್ದರು. ಈ ಕುರಿತು ಕೂಲಂಕುಶವಾಗಿ ಅಧ್ಯಯನ ಮಾಡಿದ  ಬೊಮ್ಮಾಯಿ ನೇತೃತ್ವದ ಸಮಿತಿಯು 1980 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು.  ಆನಂತರ ನೆನಗುದಿಗೆ ಬಿದ್ದಿದ್ದ ಈ ಯೋಜನೆಗೆ 1988 ರಲ್ಲಿ ಮರುಜೀವ ಬಂದಿತು.ಕರ್ನಾಟಕ  ಸರ್ಕಾರವು  ಕೇಂದ್ರ ಸರ್ಕಾರದ ಜಲ ಆಯೋಗಕ್ಕೆ ಮನವಿ ಸಲ್ಲಿಸಿದಾಗ ಗೋವಾ ಸರ್ಕಾರ ಮೊದಲ ಬಾರಿಗೆ ತನ್ನ ಪ್ರತಿಭಟನೆ ಸಲ್ಲಿಸಿತು. ಗೋವಾ ಸರ್ಕಾರದ ಪ್ರತಿಭಟನೆಯ ನಡುವೆಯೂ ಸಹ ಕುಡಿಯುವ ನೀರಿನ ಯೋಜನೆ ಎಂಬ ಏಕೈಕ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಆರಣ್ಯ ಮತ್ತು ಪರಿಸರ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಗಳು ಯೋಜನೆಗೆ ಅನುಮತಿ ನೀಡಿದವು. ಆರಂಭದಲ್ಲಿ ಮಹಾದಾಯಿ ನದಿಯ ನೀರನ್ನು  ಸವದತ್ತಿ ಬಳಿಯ ಮಲಪ್ರಭಾ ಜಲಾಶಯಕ್ಕೆ ಹರಿಸಿ, ಅಲ್ಲಿಂದ ಕಳಸ-ಬಂಡೂರಿ ನಾಲೆಗಳ ಮೂಲಕ ನೀರು ಹರಿಸುವುದೆಂದು ಯೋಜಿಸಲಾಗಿತ್ತು. ನಂತರ ಬೆಳಗಾವಿ ಜಿಲ್ಲೆಯ ಕಣಕುಂಬಿ ಬಳಿ ಸಣ್ಣ ಜಲಾಶಯ ನಿರ್ಮಿಸಿಕೊಂಡು ಅಲ್ಲಿಂದ  ಮಲಪ್ರಭ ಜಲಾಶಯಕ್ಕೆ  ನೀರು ಹರಿಸಲು ನಿರ್ಧರಿಸಲಾಯಿತು. ಒಟ್ಟು 44.78 ಕೋಟಿ ರುಪಾಯಿ ವೆಚ್ಚದ  ಈ ಯೋಜನೆಗೆ 2006 ರಲ್ಲಿ ಕರ್ನಾಟಕ ಸರ್ಕಾರವು 20 ಕೋಟಿ ರೂಪಾಯಿಯನ್ನು ಬಿಡುಗಡ ಮಾಡಿತು. ಜೊತೆಗೆ ಈ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರವು  ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲು ಯಾರ ಅನುಮತಿಯ ಅಗತ್ಯವಿಲ್ಲ ಎಂಬ ಮೊಂಡು ಧೈರ್ಯದಿಂದ ಕಾಮಗಾರಿ ಕೆಲಸವನ್ನು ಆರಂಭಿಸಿತು.ಅಲ್ಲಿಯವರೆಗೂ ಮೌನವಾಗಿದ್ದ    ಗೋವಾ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ  ತಕರಾರು ಅರ್ಜಿ ಸಲ್ಲಿಸಿತು. ಈ ಸಂದರ್ಭದಲ್ಲಿ  ಸುಪ್ರೀಂ ಕೋರ್ಟ್  ನೀಡಿದ ನೋಟಿಸ್ ಗೆ ಉತ್ತರವಾಗಿ   ಕರ್ನಾಟಕ ಸರ್ಕಾರವು ನದಿ ನೀರು ಹಂಚಿಕೆ ವಿವಾದ ಕುರಿತಂತೆ ನ್ಯಾಯಾಧಿಕರಣ ನೀಡುವ ತೀರ್ಪಿಗೆ ತಾನು ಬದ್ಧ ಎಂಬ ಪ್ರಮಾಣ ಪತ್ರವನ್ನು  ಸಲ್ಲಿಸಿತು.  ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸದ ನಂತರ ಕರ್ನಾಟಕದ ಜನತೆ ಕಾಯುವುದು ಈಗ ಅನಿವಾರ್ಯವಾಗಿದೆ. ಇದೀಗ ವಿವಾದವು ನ್ಯಾಯಾಧೀಕರಣದ ಅಂಗಳದಲ್ಲಿದ್ದು, ಕೇಂದ್ರ ಜಲಸಂಪನ್ಮೂಲ ಇಲಾಖೆಯ ತಜ್ಞರು 2014 ರಲ್ಲಿ  ಸ್ಥಳಕ್ಕೆ ಬೇಟಿ ನೀಡಿ ವರದಿ ಸಲ್ಲಿಸಿದ್ದಾರೆ. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕರ್ನಾಟಕ ಬಳಸಿಕೊಳ್ಳುವುದಕ್ಕೆ ನಿಮ್ಮದೇನು ತಕರಾರು? ಎಂಬ ಮಾರ್ಮಿಕವಾದ ನ್ಯಾಯಾಧಿಕರಣದ ಪ್ರಶ್ನೆಗೆ ಗೋವಾ ಸರ್ಕಾರ ಸಮರ್ಪಕವಾದ ಉತ್ತರ ಹೇಳಲು ಸಾಧ್ಯವಾಗಿಲ್ಲ. ಈಗ ಪಶ್ಚಿಮಘಟ್ಟದ  ಪರಿಸರ ನಾಶವಾಗುವ ಕುರಿತು ತಕರಾರು ಅರ್ಜಿ ಸಲ್ಲಿಸಿದೆ.

. ಕರ್ನಾಟಕ ಸರ್ಕಾರದ ಬೇಡಿಕೆ ನ್ಯಾಯ ಸಮ್ಮತವಾಗಿದೆ ಎಂಬುವುದು ನ್ಯಾಯಾಧೀಕರಣಕ್ಕೆ ಮನದಟ್ಟಾಗಿರುವುದು ಈಗಾಗಲೇ ವಿಚಾರಣೆಯಿಂದ ಬಹಿರಂಗವಾಗಿದೆ. ಜೊತೆಗೆ ಕರ್ನಾಟಕದ ಪರವಾಗಿ ಹಿರಿಯ ವಕೀಲ ನಾರಿಮನ್ ಸಮರ್ಥವಾಗಿ ವಾದ ಮಂಡಿಸಿ, ನ್ಯಾಯಾಧಿಕರಣಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ  ಸಂದರ್ಭದಲ್ಲಿ ಪ್ರಚಾರದ ಹುಚ್ಚಿಗಾಗಿ ದಿನಕ್ಕೊಂದು ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸುವ ಬದಲು, ನ್ಯಾಯಾಧೀಕರಣದ  ತೀರ್ಪಿಗಾಗಿ ನಾವು ಕಾಯುವುದು ಒಳಿತು. ಏಕೆಂದರೆ,  ಈ ದೇಶದಲ್ಲಿ ಯಾವೊಬ್ಬ ಪ್ರಜೆ ಅಥವಾ ನಾಯಕ ಎನಿಸಿಕೊಂಡವನು ಈ ನೆಲದ  ಸಂವಿಧಾನ ಅಥವಾ ಕಾನೂನುಗಳನ್ನು ಮೀರಿದ ಅತೀತನಲ್ಲ. ಎಲ್ಲವೂ ಚಳುವಳಿ, ಪ್ರತಿಭಟನೆಗಳ ಮೂಲಕ ಇತ್ಯರ್ಥವಾಗುವಂತಿದ್ದರೆ, ಕಳೆದ 75 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಮಿಳುನಾಡು-ಕರ್ನಾಟಕ ನಡುವಿನ ಕಾವೇರಿ ನದಿ ನೀರಿನ ವಿವಾದ ಮತ್ತು 40 ವರ್ಷಗಳಿಂದ ಕರ್ನಾಟಕ- ಆಂಧ್ರ ನಡುವಿನ ಕೃಷ್ಣಾ ನದಿ ನೀರು ಹಂಚಿಕೆ ವಿವಾದಗಳು ಈಗಾಗಲೇ ಬಗೆಹರಿದು ಇತಿಹಾಸದ ಪುಟಗಳನ್ನು ಸೇರಬೇಕಿತ್ತಲ್ಲವೆ?

ಲೇಖಕರು: ಜಗದೀಶ್ ಕೊಪ್ಪ

ಮಾಹಿತಿ ಸೌಜನ್ಯ: ಭೂಮಿಗೀತ.ಕಾಮ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*