ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸುಡು ಬೇಸಿಗೆಯಿದ್ದರೂ, ಶ್ಯಾಮರಾಯರ ಮನೆಯಲ್ಲಿ “ಕುಡಿಯೋದು ಮಾತ್ರ ಮಳೆ ನೀರು”

ಇದು, ಹೇಗೆ ಸಾಧ್ಯ? ೩೮ ರಿಂದ ೪೦ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಬೆಂದು ಜಗತ್ತು ಬೇಯ್ದಾಗ, ಸುಡು ಬೇಸಿಗೆಯಲ್ಲಿ ಮಳೆ ಎಲ್ಲಿಂದ ಬರಬೇಕು? ಮಳೆ ನೀರು ಎಲ್ಲಿಂದ ಸಿಗಬೇಕು? ಬೇಸಿಗೆಯಲ್ಲಿ ಬೆವರು ನೀರು ಬಿಟ್ರೆ, ಮಳೆ ನೀರು ಎಲ್ಲಿ ಸಿಗುತ್ತೆ? ಅಂಥ, ತಮಾಷೆ ಮಾಡ್ತಾಯಿದ್ದಾರೆ ಅನ್ಕೋಬೇಡಿ, ಇದು ನಿಜ! ಅದೂ ಕರ್ನಾಟಕದಲ್ಲಿ ಸದಾ ಬರಗಾಲಕ್ಕೆ ಪ್ರಸಿದ್ಧಿಯಾದ ಪಾವಗಡದಲ್ಲಿ ಅಂದ್ರೆ ಇನ್ನೂ ಆಶ್ಚರ್ಯ ಮೂಡಿಸುತ್ತದೆ. ಈ ಕೆಲಸ ಸಾಧ್ಯವಾಗಿದ್ದು  “ಛಾವಣಿ ಮಳೆ ನೀರು ಸಂಗ್ರಹಣೆ ವಿಧಾನದಿಂದ ಅನ್ನೋದು ಮತ್ತೊಂದು ಕುತೂಹಲ ತರುವ ವಿಚಾರ.

ಪಾವಗಡದಲ್ಲಿ ಮಳೆರಾಯನ ದರ್ಶನ ಮಾಡೋದು, ತಿರುಪತಿ ತಿಮ್ಮಪ್ಪನ ದರ್ಶನಕ್ಕಿಂತ ದೊಡ್ಡ ಕಷ್ಟದ ಕೆಲಸ. ಇನ್ನು ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಬೋರ್ವೆಲ್ ನಲ್ಲಿ ಸಿಗುವ ಅಲ್ಪ ಸ್ವಲ್ಪ ನೀರು ಪ್ಲೋರೈಡ್ ಅಂಶದಿಂದ ಕಲುಷಿತವಾಗಿ ಕುಡಿಯಲು ಯೋಗ್ಯವಾಗಿಲ್ಲ. ಬೇರೆ ಶುದ್ಧವಾದ ನೀರು ಸಿಗೋದಿಲ್ಲ. ಮಾಡೋದಾದ್ರೂ ಏನು? ಕುಡಿಯಲು ಪ್ಲೋರೈಡ್ ನೀರೇ ಗತಿ. ಅದರಿಂದ ಬರುವ ಕೈಕಾಲು ನೋವು, ಸೊಂಟ, ಬೆನ್ನುನೋವು, ಮೂಳೆಸವೆತ ಮತ್ತು ಹಲ್ಲಿನಲ್ಲಿ ಕಪ್ಪು ಕರೆಗಳು ಇವುಗಳನ್ನು ಅನುಭವಿಸೇ ತೀರಬೇಕು. ಹೀಗೆ ರೋಗಗಳ ಸರಮಾಲೆಯಲ್ಲಿರುವಾಗ, ಆಶಾಕಿರಣದ ಬೆಳಕಾಗಿ ಮೂಡಿಬಂತು ” ಸಚೇತನ” ಅನ್ನೋ ಯೋಜನೆ – ಮಳೆನೀರು ಸಂಗ್ರಹಿಸಿ ಕುಡಿಯುವ ಕಾರ್ಯಕ್ರಮ.

ನಮ್ಮ ಶ್ಯಾಮಸುಂದರರಾವ್ ಇರೋದು, ವೈ.ಎನ್ ಹೊಸಕೋಟೆ ಪಕ್ಕದ ಹೊಸದುರ್ಗ ಅನ್ನೋ ಹಳ್ಳಿಯಲ್ಲಿ. ೩೦-೪೦ ಸೈಜ್ ನಲ್ಲಿ ಒಂದು ಮನೆಯಿದೆ. ಮನೆಯ ಸುತ್ತಾಮುತ್ತಾ ಸಣ್ಣದೊಂದುDSC04333 ಕೈ ತೋಟ ಮಾಡುವಷ್ಟು ಸ್ವಲ್ಪ ಜಾಗ ಇದೆ. ಮಳೆಗಾಲದಲ್ಲಿ, ತಿಂಗಳಿಗೆ ಒಂದೋ ಎರಡೋ ಬಾರಿ ಮಿಂಚಿನಂತೆ ಬಂದು ಹೋಗುವ ಮಳೆ. ಇಷ್ಟನ್ನು ನಂಬಿಕೊಂಡು, ಇವರು ಮಳೆನೀರು ತೊಟ್ಟಿಯನ್ನು ಕಟ್ಟಲು ಶುರುಮಾಡಿದರು. ನೀರಿನ ಬವಣೆ, ಪ್ಲೋರೈಡ್ ಬಾಧೆಯಿಂದ ಮುಕ್ತಿ ಸಿಗಬುಹುದು ಎನ್ನುವ ಆಸೆ ಮನದಲ್ಲಿದ್ದರೆ, ಯೋಜನೆಯ ಕಾರ್ಯಕರ್ತರ ಪ್ರೇರಣೆ ಮತ್ತೊಂದು ರೂಪದಲ್ಲಿ ಮಳೆನೀರು ಸಂಗ್ರಹಿಸಲು ದಾರಿ ಮಾಡಿಕೊಟ್ಟಿತು.

ಸುಮಾರು ೬,೫೦೦ ಲೀಟರ್ ಸಾಮರ್ಥ್ಯ ಇರುವ ಮಳೆನೀರು ತೊಟ್ಟಿಯನ್ನು ನಿರ್ಮಿಸಿದರು, ಮಾಳಿಗೆಯಿಂದ ನೀರು ಹರಿದು ತೊಟ್ಟಿ ಸೇರಲು ಪೈಪ್ ಲೈನ್ ಮಾಡಿದರು, ಮಾಳಿಗೆಯಿಂದ ಬರುವ ನೀರು ಫಿಲ್ಟರ್ ಮಾಡಲು, ಮರಳಿನ ಶೋಧಕವನ್ನು ಅಳವಡಿಸಿದರು. ಇನ್ನು ಮಳೆ ಬಂದ ಮೇಲೆ ತೊಟ್ಟಿಗೆ ಬಂದ ನೀರನ್ನು, ಮೇಲೆತ್ತಲು ಹ್ಯಾಂಡ್ ಪಂಪ್ ಜೋಡಿಸಿದರು. ಇನ್ನು ಮಳೆ ಬರೋದು ಒಂದೇ ಬಾಕಿ. ಅದೂ ಕೂಡ ತಡೆಮಾಡದೆ ಬಂದೇ ಬಿಟ್ಟಿತು, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಎರಡುಬಾರಿ ಮಳೆ ನೀರಿನ ತೊಟ್ಟಿ ತುಂಬಿ ತುಳಿಕಿತು, ನೀರು ಹೆಚ್ಚಾಗಿ ಹೊರಚೆಲ್ಲಿತು. ಪ್ರತಿ ವರ್ಷ, ಇಷ್ಟೊಂದು ನೀರು ನಮ್ಮ ಮನೆಯ ಮಾಳಿಗೆಯಿಂದ ಹೊರಚೆಲ್ಲಿ  ವ್ಯರ್ಥವಾಗಿ ಹೋಯ್ತಲ್ಲ ಅನ್ನುವ ಮಾಹಿತಿಯನ್ನು ಮತ್ತು ಹೊಸ ಹರಿವನ್ನು ರಾಯರಿಗೆ ಮೂಡಿಸಿತು.

ಕೇವಲ ೬,೫೦೦ ಲೀಟರ್ ಮಳೆ ನೀರು ಯಾವ ಮೂಲೆಗಾಗುತ್ತೆ  ?

ರಾಯರ ಮನೆಯಲ್ಲಿ ಕೆಲಸ ಮಾಡುವವರನ್ನು ಸೇರಿಸಿ ಒಟ್ಟು ೫ ಜನ ಇದ್ದಾರೆ. ಈ ಐದು ಜನಕ್ಕೆ ಕುಡಿಯಲು ಮತ್ತು ಅಡುಗೆ ಮಾಡಲು ಒಂದು ದಿನಕ್ಕೆ ೨೫ ಲೀಟರ್ ನೀರು ಬೇಕು. ಒಬ್ಬರಿಗೆ ಒಂದು ದಿನಕ್ಕೆ ಕುಡಿಯುವುದಕ್ಕೆ ಮತ್ತು ಅಡುಗೆ ಮಾಡುವುದಕ್ಕೆ ೫ ಲೀಟರ್ ನೀರು ಸಾಕು ಅನ್ನೋದು ಇವರ ಅನುಭವ. ಅದರಂತೆ ೩೬೫ ದಿನ ಅಂದರೆ ವರ್ಷಕ್ಕೆ  ೯,೧೭೫ ಲೀಟರ್ ನೀರು ಬೇಕಾಗುತ್ತದೆ. ವರ್ಷದಲ್ಲಿ ಕನಿಷ್ಠ ೧೪೦ರಿಂದ ೧೫೦ ದಿನ ಮಳೆಗಾಲವಿರುತ್ತದೆ; ತಿಂಗಳಿಗೆ ಒಂದೋ ಎರಡೋ ಖಾಯಂ ಬಂದೇ ಬರುತ್ತೆ, ಹೀಗಾಗಿ ಈ ಮಳೆ ನೀರಿನ ತೊಟ್ಟಿ ವರ್ಷದಲ್ಲಿ ೨-೩ ಬಾರಿ ತುಂಬಿ ತುಳುಕುತ್ತೆ.

ಮಳೆಗಾಲದಲ್ಲಿ ತೊಟ್ಟಿಯಲ್ಲಿ ನೀರು ಬಳಸಿದಂತೆ, ಮಳೆ ಬಂದಾಗ, ಮತ್ತೆ ಮತ್ತೆ ತುಂಬಿಕೊಳ್ಳುತ್ತದೆ. ಇನ್ನೂ ಮಳೆ ಬಾರದ ದಿನಗಳು, ನವೆಂಬರ್ ತಿಂಗಳು ಕಳೆದ ನಂತರ, ಸುಮಾರು ಮೇ ತಿಂಗಳವರೆಗೆ ೨೧೦ರಿಂದ ೨೧೫ ದಿನಗಳು ಆಗಿರುತ್ತದೆ. ಈ ಅವಧಿಗೆ ಇವರಿಗೆ ಬೇಕಾದ ನೀರು ೫,೩೭೫ ಲೀಟರ್ ನೀರು ಮಾತ್ರ. ನವೆಂಬರ್ ತಿಂಗಳಿನಲ್ಲಿ ನೀರಿನ ತೊಟ್ಟಿ ತುಂಬಿದರೆ ೬,೫೦೦ ಲೀಟರ್ ಇರುತ್ತದೆ. ಮುಂದಿನ ಮಳೆ ಬರುವವರೆಗೆ ರಾಯರ ಮನೆಗೆ ಬೇಕಾದ ನೀರು, ೫,೩೭೫ ಲೀಟರ್ – ಈ ಮೊತ್ತವನ್ನು ಒಟ್ಟು ಲಭ್ಯವಿರುವ ನೀರಿನ ಪ್ರಮಾಣದಲ್ಲಿ ಕಳೆದು ನೋಡಿದರೆ, ಇನ್ನೂ ೧,೧೨೫ ಉಳಿದಿರುತ್ತದೆ. ಮತ್ತು ವರ್ಷವಿಡೀ ಕುಡಿಯುವ ನೀರಿಗೆ ಪರದಾಡುವುದನ್ನು ತಪ್ಪಿಸುತ್ತದೆ. ಆದ್ದರಿಂದಲೇ ಈ ರಾಯರ ಮನೆಯಲ್ಲಿ ಎಪ್ರಿಲ್-ಮೇ ತಿಂಗಳಿನಲ್ಲಿ ಹೊರಗೆ ಮೈ ಸುಡುವ ರಣ ಬಿಸಿಲಿದ್ದರೂ, ಮನೆಯೊಳಗೆ ಕುಡಿಯಲು ತಂಪಾದ ಮಳೆ ನೀರು ಸಿಗುತ್ತದೆ.

ಹೆಚ್ಚು ಕಾಲ ಮಳೆ ನೀರನ್ನು ಶೇಖರಿಸಿ ಇಡುವುದಲಿಂದ ನೀರು ಕೆಡುವುದಿಲ್ಲವೇ ?

ಇದು ಎಲ್ಲರಿಗೂ ತಲೆಯಲ್ಲಿ ಕೊರೆಯುವ ಮೊದಲ ಪ್ರಶ್ನೆ ಎನ್ನುತ್ತಾರೆ ರಾಯರು. “ಕಾರಣ ನಮ್ಮಲ್ಲಿ ಮಡಿ ಮೈಲಿಗೆ ಆಚಾರಗಳುಂಟು. ಕ್ಯಾನ್ ನಲ್ಲಿ ಕೊಡುವ ಫಿಲ್ಟರ್ ನೀರಿಗಿಂತ  ಇದು ನೂರುಪಟ್ಟು ಶುದ್ದವಾಗಿದೆ ಎಂದು ಹೇಳಬಹುದು. ಹಾಗಾಗಿ ನಮ್ಮ ಮಾಳಿಗೆಯನ್ನು ಸ್ವಚ್ಚವಾಗಿ ಇಟ್ಟುಕೊಂಡಿದ್ದೇವೆ. ಪ್ರತಿಸಾರಿ ಮಳೆ ಬಂದಾಗ ೪-೫ ನಿಮಿಷ ಮಳೆ ನೀರನ್ನು ಹೊರಗೆ ಬಿಡುತ್ತೇವೆ. ಆಗ ಧೂಳು ಮತ್ತು ಕಸಾಕಡ್ಡಿ ಹೊರಗೆ ಹೋಗುತ್ತದೆ. ತದನಂತರ ಬರುವ ಮಳೆ ನೀರಿನ್ನು ಫಿಲ್ಟರ್ ಮುಖಾಂತರ ತೊಟ್ಟಿಗೆ ಬಿಡುವುದರಿಂದ ಶುದ್ಧವಾದ ನೀರು, ತೊಟ್ಟಿಗೆ ಸೇರುತ್ತದೆ. ಇದು ನೀರು ಕೆಡದಂತೆ ಇಡಲು ಪೂರಕವಾಗುತ್ತದೆ.

ಇನ್ನು ಎರಡನೇ ಪ್ರಮುಖವಾದ ವಿಚಾರವೆಂದರೆ, ಗಾಳಿ ಮತ್ತು ಬೆಳಕು ಎಲ್ಲಿ ಸರಾಗವಾಗಿ ಹರಿದಾಡುತ್ತದೋ ಅಲ್ಲಿ ಧೂಳು, ಮತ್ತು ಕ್ರಿಮಿ-ಕೀಟಗಳ ಮೊಟ್ಟೆಗಳು, ಪಾಚಿಯಂತಹ ಸಸ್ಯಗಳು ಉತ್ಪತ್ತಿಯಾಗಿ ನೀರು ಬೇಗ ಕೆಡುತ್ತದೆ. ಮಳೆನೀರು ತೊಟ್ಟಿ, ಎರ್ ಟೈಟ್ ಮಾಡಿದ್ದು ಯಾವುದೇ ರೀತಿ ಗಾಳಿ ಮತ್ತು ಬೆಳಕು ತೊಟ್ಟಿಯ ಒಳಭಾಗಕ್ಕೆ ಹೋಗದಂತೆ ಮಾಡಿದ್ದಾರೆ. ಆದ್ದರಿಂದ, ಈ ನೀರು ೩-೪ ವರ್ಷಗಳ ಕಾಲ ಹಾಗೆಯೇ ಇಟ್ಟರೂ, ಕೆಡದೆ ಪರಿಶುದ್ಧವಾಗಿರುತ್ತದೆ.” ಎಂದು ಸಣ್ಣದೊಂದು ತಾಂತ್ರಿಕ ವಿಷಯವನ್ನು ಮುಂದಿಟ್ಟರು.

ಮಳೆ ನೀರು ಸಂಗ್ರಹಣೆಯಿಂದಾಗುವ ಉಪಯೋಗಗಳು

  • ಮನೆಯ ಸಮೀಪದಲ್ಲಿಯೇ ಸದಾ ಕಾಲ ಕುಡಿಯುವ ನೀರು ಲಭ್ಯವಿರುತ್ತದೆ.
  • ಕರೆಂಟ್ ಇರಲಿ ಇಲ್ಲದಿರಲಿ, ಗ್ರಾಮ ಪಂಚಾಯತಿಯವರು ನೀರು ಬಿಡಲಿ, ಬಿಡದಿರಲಿ. ಕುಡಿಯುವ ನೀರಿಗೆ ಚಿಂತೆಯಿಲ್ಲ.
  • ಪ್ಲೋರೈಡ್ ಸಮಸ್ಯಯಾಗಲಿ, ಆರ್ಸ್ಯನಿಕ್ ಪ್ರಾಬ್ಲಮ್ ಆಗಲಿ ಇರುವುದಿಲ್ಲ, ಮಳೆ ನೀರು ಪ್ರಕೃತಿಯಲ್ಲಿ ಸಿಗುವ ಶುದ್ಧವಾದ ಪನ್ನೀರು.
  • ಮಳೆ ನೀರಿನಲ್ಲಿ ರೋಗತರುವ ರೋಗಾಣುಗಳಿಲ್ಲ. ನಧಿಗೆ ಕೈಗಾರಿಕೆಗಳಿಂದ ಬಂದು ಸೇರುವ ಕಲಿಷಿತ ನೀರಿನ ಭಯವಿಲ್ಲ. ನಮ್ಮ ನೀರಿಗೆ ನಾವೇ ಗ್ಯಾರಂಟಿ.
  • ಮಳೆ ನೀರು ಸಂಗ್ರಹಿಸಿದ ಮನೆ, ನೀರಿಗೆ ಸ್ವಾವಲಂಬನೆಯ ಅರಮನೆ !

 ಚಿತ್ರ-ಲೇಖನ: ಜಿ.ಎಸ್.ರಾಮಕೃಷ್ಣ ಗುಂಜೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*