ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೨೦: ಜವಾಬ್ದಾರಿಯಿಂದ ನುಣುಚಿಕೊಂಡ ಕೆರೆ ಅಭಿವೃದ್ಧಿ ಪ್ರಾಧಿಕಾರ

ಕೆರೆಗಳ ಸಂರಕ್ಷಣೆಯಲ್ಲಿ, ಅಲ್ಲಿನ ಜಲ ಪಕ್ಷಿಗಳು, ಜೈವಿಕ ವೈವಿಧ್ಯಗಳು, ನೀರಿನ ಗುಣಮಟ್ಟ ವೃದ್ಧಿ ಮತ್ತು ಮೇಲ್ವಿಚಾರಣೆ, ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರಿಗೆ ಅರಿವು ಮತ್ತು ಜೀರ್ಣೋದ್ಧಾರದ ಜವಾಬ್ದಾರಿ… ಇವು ಸರಕಾರ ಸೃಷ್ಟಿಸಿದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯ ಹಾಗೂ ಜವಾಬ್ದಾರಿಗಳು. ಆದರೆ ಇವುಗಳೆಲ್ಲವನ್ನೂ ಮರೆತು ಬೆಂಗಳೂರೆಂಬ ರಾಜಧಾನಿಯಲ್ಲಿ ಒಂದು ಕಚೇರಿ ಇರಿಸಿಕೊಂಡು ಒಂದಷ್ಟು ಕಡತ ನಿರ್ವಹಣೆ ಮಾಡಿದ ಜೊತೆಗೆ, ನಾಲ್ಕಾರು ಕೆರೆಗಳನ್ನು ಖಾಸಗಿ ಮಾಲೀಕತ್ವಕ್ಕೆ ನೀಡಿದ್ದನ್ನು ಬಿಟ್ಟರೆ, ಈ ಪ್ರಾಧಿಕಾರ ಮಾಡಿದ್ದೇನೂ ಇಲ್ಲ. ಇದು ಕೇವಲ ಆರೋಪವಲ್ಲ, ಇದು ಸರಕಾರಿ ದಾಖಲೆಯಲ್ಲೇ ದಾಖಲಾಗಿರುವುದು ಮಾತ್ರ ಶೋಚನೀಯ.

CAG-Horamavuಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪರಿಸರ ಪುನಶ್ಚೇತನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ- ಕರ್ನಾಟಕ ಸರ್ಕಾರ ೨೦೧೫ನೇ ವμದ ವರದಿ ಸಂಖ್ಯೆ-೧’ ಇದರಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ನಮೂದಾಗಿರುವ ಮಾಹಿತಿಗಳ ಸಂಕ್ಷಿಪ್ತ ಇದು. ವರದಿಯಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಹೇಳಿರುವುದು ಹಾಗೂ ನೀಡಿರುವ ಅಭಿಪ್ರಾಯಗಳು ಹೀಗಿದೆ:

ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಬಂಧನೆಗಳು ಮತ್ತು ಉಪನಿಯಮಗಳ ಅನ್ವಯ, ಎಲ್ಲ ಕೆರೆಗಳಿಗೆ ನಿಯಂತ್ರಕ ಅಧಿಕಾರವನ್ನು ಚಲಾಯಿಸಲು ಮತ್ತು ಕೆರೆಗಳನ್ನು ರಕ್ಷಿಸುವ, ಸಂರಕ್ಷಿಸುವ, ಸುಧಾರಿಸುವ, ಜೀರ್ಣೋದ್ಧಾರದ ಮತ್ತು ಪುನಃಸ್ಥಾಪಿಸುವ ಯೋಜನೆ ಮತ್ತು ನೀತಿಗಳನ್ನು ರಚಿಸುವ ಸಂಸ್ಥೆಯನ್ನಾಗಿ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಯಿತು. ಅದರ ಅಧಿಕಾರವ್ಯಾಪ್ತಿ ಬೆಂಗಳೂರಿನ ಹಸಿರು ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸ್ಥಳೀಯ ಸಂಸ್ಥೆಗಳು. ಈ ಅಧಿಕಾರವ್ಯಾಪ್ತಿಯನ್ನು ೨೦೧೫ನೇ ವμದಲ್ಲಿ ಬೆಂಗಳೂರು ನಗರ ಪ್ರದೇಶ ಹಾಗೂ ರಾಜ್ಯ ನಗರಪಾಲಿಕೆಗಳಿಗೆ ಹಾಗೂ ಪಟ್ಟಣ ಪಂಚಾಯತಿಗಳಿಗೆ ವಿಸ್ತರಿಸಲಾಯಿತು. ಕೆರೆ ಅಭಿವೃದ್ಧಿ ಪ್ರಾಧಿಕಾರವು ಜಲವಾಸಿ ಪಕ್ಷಿಗಳು ಹಾಗೂ ಜಲೀಯ ಸಸ್ಯಗಳನ್ನೊಳಗೊಂಡಂತೆ ಜೈವಿಕ ವೈವಿಧ್ಯತೆಗಳಿಗೆ ವಸತಿಯನ್ನು ಸೃಷ್ಟಿಸುವುದು ಹಾಗೂ ವೃದ್ದಿಸುವುದು ಮತ್ತು ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಿ ನಿರ್ವಹಿಸುವುದು, ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವುದು ಮತ್ತು ಕೆರೆಗಳ ಸಂರಕ್ಷಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಮಾಡಿ ಕೆರೆಗಳನ್ನು ಜೀರ್ಣೋದ್ಧಾರ ಮಾಡಬೇಕಾಗಿತ್ತು. ಕೆರೆ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ಆಡಳಿತ ಮಂಡಳಿ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ಕಾರ್ಯಕಾರಿ ಸಮಿತಿಯೊಂದನ್ನು ಹೊಂದಿದೆ. ಕಾರ್ಯಕಾರಿ ಸಮಿತಿಯು ಉನ್ನತಾಧಿಕಾರ ಸಮಿತಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ತಾಂತ್ರಿಕ ಮಾರ್ಗದರ್ಶನ ನೀಡುತ್ತದೆ ಹಾಗೂ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಮೇಲಿನ ಸವಿವರ ಯೋಜನಾ ವರದಿಗಳನ್ನೂ ಪರಿಶೀಲಿಸಿ ಅನುಮೋದಿಸುತ್ತದೆ.

 ಲೆಕ್ಕಪರಿಶೋಧನೆಯು ಈ ಕೆಳಗಿನವುಗಳನ್ನು ಗಮನಿಸಿದೆ:

  • ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯು ಬೆಂಗಳೂರಿನಲ್ಲಿ ಸ್ಥಿತವಾಗಿದ್ದು, ಅದರ ಆಡಳಿತ ವ್ಯಾಪ್ತಿಯು ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳು ಮತ್ತು ನಗರಸಭೆಗಳಿಗೆ CAG-Kasavanahalliವಿಸ್ತಾರವಾಗಿದ್ದರೂ ಸಹ, ಅದು ಯಾವುದೇ ಶಾಖಾ ಕಚೇರಿಗಳನ್ನು ಹೊಂದಿರಲಿಲ್ಲ.
  • ಅತ್ಯಲ್ಪ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ೨೦೦೨ರಲ್ಲಿ ಅದರ ರಚನೆಯಾದಾಗಿನಿಂದ ಸಿಬ್ಬಂದಿ ಬಲವನ್ನು ಸರ್ಕಾರವು ಪರಾಮರ್ಶಿಸಿಲ್ಲ.
  • ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಶಾಸನಬದ್ಧ ಅಧಿಕಾರಗಳಿಲ್ಲ. ತತ್ಪರಿಣಾಮವಾಗಿ ಉಪನಿಯಮಗಳನುಸಾರ ದತ್ತವಾದ ಅಧಿಕಾರದ ಚಲಾವಣೆಯಲ್ಲಿ ಅಲಕ್ಷ್ಯವನ್ನು ಗಮನಿಸಲಾಯಿತು.
  • ಪರಿಸರ ಯೋಜನೆಯು ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ ಉದ್ದೇಶಗಳಲ್ಲಿ ಒಂದಾಗಿತ್ತು. ಕೆರೆಗಳ ಜೀರ್ಣೋದ್ಧಾರದಲ್ಲಿ ಒಳಗೊಂಡ ಎಲ್ಲ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮಗ್ರ ಯೋಜನೆಯೊಂದನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿರಲಿಲ್ಲ. ಈ ನಿರ್ಬಂಧಗಳಿಂದಾಗಿ ಕೆರೆಗಳ ಅಭಿರಕ್ಷಕರು ಹಾಗೂ ಸಾರ್ವಜನಿಕರ ನಡುವೆ ಮಧ್ಯವರ್ತಿಯ ಪಾತ್ರವನ್ನು ಮಾತ್ರ ತಾನು ನಿಭಾಯಿಸಿದೆನೆಂದು ಕೆರೆ ಅಭಿವೃದ್ಧಿ ಪ್ರಾಧಿಕಾರವು ಪ್ರತಿಕ್ರಿಯೆ ನೀಡಿತು.
  • ಕೆರೆಗಳ ಅಭಿವೃದ್ಧಿಯನ್ನು ಹಣಕಾಸಿನ ಲಭ್ಯತೆಯ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಯಿತೇ ಹೊರತು ಯಾವುದೇ ಸಮಗ್ರ ಯೋಜನೆಯ ಮೇಲಲ್ಲ ಎಂದು ರಾಜ್ಯ ಸರ್ಕಾರವು (ನಗರಾಭಿವೃದ್ಧಿ ಇಲಾಖೆ) ಒಪ್ಪಿಕೊಂಡಿತು. ಯಾವುದೇ ಆದ್ಯತೀಕರಣವಿಲ್ಲದೇ ಕೆರೆಗಳಲ್ಲಿ ಕಾಮಗಾರಿಗಳನ್ನು ತಾತ್ವಿಕ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿತ್ತೆಂದು ಇದು ಸೂಚಿಸುತ್ತದೆ.

ಅಬ್ಬಾ… ಸರಕಾರಿ ಸಂಸ್ಥೆಗಳೆಂದರೆ ಹೀಗೇನಾ? ಎಂದು ಇಷ್ಟಕ್ಕೇ ಹುಬ್ಬೇರಿಸಬೇಡಿ. ಸಿಎಜಿ ವರದಿಯಲ್ಲಿ ಕೆರೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಹಲವು ಇಲಾಖೆಗಳು ಈ ಬೇಜವಾಬ್ದಾರಿತವನ್ನು ಮೆರೆದಿರುವ ಬಗ್ಗೆ ಸಮಗ್ರವಾಗಿ ವರದಿ ಮಾಡಲಾಗಿದೆ. ಇದರ ಬಗ್ಗೆ ಸಂಕ್ಷಿಪ್ತವಾಗಿ ವಿವರಗಳನ್ನು ಮುಂದಿನ ನೋಟಗಳಲ್ಲಿ ನೀಡುತ್ತೇನೆ.

 ಲೇಖನ: ಕೆರೆ ಮಂಜುನಾಥ್

ಚಿತ್ರಗಳು: (ಸಿಎಜಿ ವರದಿಯಲ್ಲಿರುವ ಚಿತ್ರಗಳು)

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*