ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಂಪ್ಲಿಕೊಪ್ಪದಲ್ಲಿ ಮಂಜುಳಾ

ಧಾರವಾಡ (ಕಂಪ್ಲಿಕೊಪ್ಪ): ನ್ನ ಸಮಾಜ ನನ್ನ ಜವಾಬ್ದಾರಿ ಅಂತ ತಿಳಕೊಂಡಕೀ ನಾನು.. ಹಂಗಾಗಿ ವ್ಯವಹಾರಸ್ಥರ ಕುಟುಂಬದ ಕುಡಿಯಾಗಿ ಸಾಮಾಜಿಕ ಉದ್ಯಮಿಯಾಗಬೇಕು ಅಂತ ಎಮ್.ಎಸ್.ಡಬ್ಲೂ ಓದಿದೆ..’ ಮಂಜುಳಾ ಪ್ರಕಾಶ ಅರಬಳ್ಳಿ ಎಂಬ ಕನಸುಕಂಗಳ ಯುವತಿ ಪಟಪಟನೇ ಅರಳು ಹುರಿದಂತೆ ಮಾತನಾಡುತ್ತಿದ್ದರೆ..

??????????ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್, ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್‌ಗೆ ನಡೆದ ಆಯ್ಕೆಯ ಸಂದರ್ಶನದಲ್ಲಿ, “ಅಮ್ಮಾ.. ನೀವು ಸ್ಥಿತಿವಂತ ಕುಟುಂಬದಿಂದ ಬಂದವರು. ಒಂದು ವರ್ಷ ಹಳ್ಳಿಯಲ್ಲೇ ಉಳಿದು ಕಷ್ಟ-ನಷ್ಟಗಳನ್ನು ಸಹಿಸಿ, ಹಳ್ಳಿಯ ಬದುಕಿಗೆ ಒಗ್ಗಿಕೊಂಡು ಇರಬಲ್ಲಿರಾ?” ಅಂತ ಯಾಕೆ ಕೇಳಿರಬಹುದು.. ಎಂಬುದು ಈ ಲೇಖಕನಿಗೆ ಸ್ಪಷ್ಟವಾಗಿತ್ತು.

“ಬ್ಯುಸಿನೆಸ್ ಮೈಂಡ್.. ಸೋಷಿಯಲ್ ಮೈಂಡ್ ಆಗಿ ಕನವರ್ಟ್ ಆಗೇದೋ.. ಇಲ್ರೀ..?” ಅಂತ ಮಂಜುಳಾ ನನ್ನ ಮರು ಪ್ರಶ್ನಿಸಿದಾಗ, ಧಾರವಾಡ ತಾಲೂಕು ಕಂಪ್ಲಿಕೊಪ್ಪದಲ್ಲಿ ಈ ತಾಯಿ ಮಾಡಿದ ಕೆಲಸಗಳು ನಿಜಕ್ಕೂ ಮನತಟ್ಟಿದ್ದವು. ಎಲ್ಲ ಫೆಲೋಗಳಿಗಿಂತ ತಡವಾಗಿ ಸೇರಿ, ಇನ್ನೂ ತಡವಾಗಿ ತನ್ನ ಕಾರ್ಯ ಆರಂಭಿಸಿ, ಯಶ ಸಾಧಿಸಿದ ಗಟ್ಟಿಗಿತ್ತಿ ಮಂಜುಳಾ. ಅಂದ ಹಾಗೆ, ಕಂಪ್ಲಿಕೊಪ್ಪದ ಜನ ಮಂಜುಳಾ ಅವರನ್ನು ಕರೆಯುವ ರೀತಿ.. ‘ಕೋಳೂರು ಕೊಡಗೂಸು’, ‘ನಮ್ಮೂರಿನ ಗಂಗಾ ಮಾತಾ!’.

ಕಂಪ್ಲಿಕೊಪ್ಪದ ಅಕ್ಕ ತಂಗಿಯರು, ತಾಯಂದಿರು ನಿತ್ಯ ಕನಿಷ್ಠ ೧.೫ ಕಿಲೋ ಮೀಟರ್ ದೂರ ಹೋಗಿ ಕುಡಿಯುವ ನೀರು ಹೊತ್ತು ತರುವ ಕಾಯಕವನ್ನು ರೂಢಿ ಮಾಡಿಕೊಂಡಿದ್ದರು. ಇದು ದಿನದಲ್ಲಿ ಒಮ್ಮೆ ಮಾತ್ರವಲ್ಲ; ಬೇಡಿಕೆಗೆ ಅನುಗುಣವಾಗಿ ಅವರ ಕಾಯಕ ದಿನವೊಂದಕ್ಕೆ ಎರಡು ಮೂರು ಬಾರಿ ಪುನರಾವರ್ತಿಯಾಗುತ್ತಿತ್ತು. ಮನೆಯ ಗಂಡಸರು ಬೆಳಗ್ಗೆ ಒಮ್ಮೆ ಮೋಟಾರ್ ಬೈಕ್ ಮೇಲೆ ತಂದಿತ್ತು, ಹೊರ ನಡೆದರೆ ಮುಗೀತು!

ಕಾರಣವೇನು ಎಂದು ಮಂಜುಳಾ ಹುಡುಕುತ್ತಾರೆ. ಆಶ್ಚರ್ಯವೆಂಬಂತೆ, ಊರ ಮುಂದಿನ ಗುಡ್ಡದಲ್ಲಿ ಕರಿಯಮ್ಮ ದೇವಿ ದೇವಸ್ಥಾನವಿದೆ. ೧೮ ವರ್ಷಗಳ ಕೆಳಗೆ, ಇಡೀ ಊರಿಗೆ ಕುಡಿಯುವ ನೀರು ದೊರಕಿಸುವ ಮಹತ್ವಾಕಾಂಕ್ಷೆಯಿಂದ ವರೂರು ಗ್ರಾಮ ಪಂಚಾಯ್ತಿ ವತಿಯಿಂದ ಯೋಜನೆ ಸಿದ್ಧಗೊಂಡು, ಉಣ ಬಿಡುಗಡೆಯಾಗಿ ಬೃಹತ್ ನೀರು ಪೂರೈಕೆಯ ಟ್ಯಾಂಕ್ ಸಹ ಸಿದ್ಧಗೊಂಡಿದೆ. ಆದರೆ ಬಳಕೆಯಾಗದೇ ಅಲ್ಲಲ್ಲಿ ಬಿರುಕು ಬಿಟ್ಟಿದೆ! ೧೮ ವರ್ಷಗಳಲ್ಲಿ ಒಮ್ಮೆಯೂ ಈ ಟ್ಯಾಂಕಿಗೆ ನೀರು ಏರಲೇ ಇಲ್ಲ! ಕಾರಣ, ಕರಿಯಮ್ಮ ದೇವಿ ದೇವಸ್ಥಾನದ ಕಲಶಕ್ಕೆ ಸರಿಸಮನಾಗಿ ಟ್ಯಾಂಕ್ ರೂಪುಗೊಂಡಿದ್ದರಿಂದ, ಆ ನೀರನ್ನು ಗ್ರಾಮಸ್ಥರು ಕುಡಿದಲ್ಲಿ ಏನಾದರೂ ಕಷ್ಠ-ಕಾರ್ಪಣ್ಯ ಕಾಡಬಹುದು ಎಂಬ ಧಾರ್ಮಿಕ ಅಪನಂಬಿಕೆಯಿಂದ ಜನ ಬಳಸಲು ಮುಂದಾಗಿರಲೇ ಇಲ್ಲ! ಒಂದರ್ಥದಲ್ಲಿ ನೀರು ಬಳಸದೇ ಇರುವ ‘ಸೋಶಿಯಲ್ ಸ್ಟಿಗ್ಮಾ’!

ಮಂಜುಳಾ ಸ್ವತಃ ಮುಂದೆ ನಿಂತು ಟ್ಯಾಂಕ್‌ನ ಬಳಕೆ ಬಗ್ಗೆ ಮನವರಿಕೆ ಮಾಡಿಸಲು ಗ್ರಾಮ ಸಭೆ ಆಯೋಜಿಸುತ್ತಾರೆ. ಗ್ರಾಮಕ್ಕೆ ಸೇರಿದ ಸಮುದಾಯದ ವಿವಿಧ ಜನರೊಂದಿಗೆ ವಿಚಾರ ವಿನಿಮಯ ಮಾಡುತ್ತಾರೆ. ತರಹೇವಾರಿ ಅಭಿಪ್ರಾಯಗಳು ಅವರ ತಲೆ ತಿರುಗುವಂತಾಗುತ್ತದೆ! ಕೊನೆಗೂ, ಊರಿನ ಹೆಣ್ಣು ಮಕ್ಕಳನ್ನು ಒಗ್ಗೂಡಿಸಿಕೊಂಡು, ಗ್ರಾಮದ ಗಂಡಸರ ಮನವೊಲಿಸುವಲ್ಲಿ ಆಕೆ ಯಶಸ್ವಿಯಾಗುತ್ತಾರೆ. ಮೊದಲ ಬಾರಿಗೆ ಪೈಪ್‌ನಲ್ಲಿ ಹರಿಯುವ ನೀರಿನಿಂದ ಗ್ರಾಮ ದೇವತೆಯ ಅಭಿಷೇಕ ಮಾಡಿ ಕುಡಿಯಲು ಆರಂಭಿಸೋಣ ಎಂದು ಅವರ ಧಾರ್ಮಿಕ ನಂಬಿಕೆಯನ್ನು ಭದ್ರಗೊಳಿಸಲು ಮುಂದಾಗುತ್ತಾರೆ.

ಗ್ರಾಮ ಪಂಚಾಯ್ತಿಯ ಮನವೊಲಿಸಿ ೧ ಲಕ್ಷ ೮೦ ಸಾವಿರ ರೂಪಾಯಿ, ಸ್ಕೋಪ್‌ನಿಂದ ೪೩ ಸಾವಿರದ ೬೦೦ ರೂಪಾಯಿ ಖರ್ಚಿಸಿ, ಬಳಕೆಗೆ ಯೋಗ್ಯವಾಗುವ ಹಾಗೆ ಗುಡ್ಡದ ಬೃಹತ್ ಓವರ್‌ಹೆಡ್ ಟ್ಯಾಂಕ್ ಮತ್ತು  ವಾಲ್ವ್‌ಗಳನ್ನು ರಿಪೇರಿ ಮಾಡಿ ಜೀವಕಳೆ ತುಂಬುತ್ತಾರೆ. ಗ್ರಾಮದ ಮಹಿಳೆಯರ ವಿಶ್ವಾಸ ಇಮ್ಮಡಿಸುತ್ತದೆ. ಶ್ರಮದಾನ ಮಾಡಲೂ ಸಹ ಮುಂದಾಗುತ್ತಾರೆ. ನವೆಂಬರ್ ೨೮, ೨೦೧೫ ಎರಡೂ ಬೋರ್‌ವೆಲ್‌ಗಳನ್ನು ಸುಸ್ಥಿತಿಗೆ ತಂದು ಇಡೀ ಟ್ಯಾಂಕ್ ತುಂಬಿಸುವಲ್ಲಿ ಮಂಜುಳಾ ಯಶಸ್ವಿಯಾಗುತ್ತಾರೆ.

??????????ಇನ್ನು ಮನೆ-ಮನೆಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ. ಗ್ರಾಮಸ್ಥರು ತಿಂಗಳ ನಳದ ಬಿಲ್ ಪಾವತಿಸಲು ಒಪ್ಪಬೇಕು. ಅಡ್ವಾನ್ಸ್‌ಕೂಡ ಕೊಡಲು ಸಿದ್ಧರಾಗಬೇಕು. ಅಂತೂ ಮೊದಲ ಹಂತದಲ್ಲಿ ೯೦ ಕುಟುಂಬಗಳ ಮನ ಮಂಜುಳಾ ಒಲಿಸುತ್ತಾರೆ. ಒಂದೇ ದಿನ ರೂ. ೫೭ ಸಾವಿರ ಸಂಗ್ರಹವಾಗಿದ್ದನ್ನು ಪಂಚಾಯ್ತಿ ಸದಸ್ಯರು ಮತ್ತು ಪಿಡಿಓ ನಂಬುವ ಸ್ಥಿತಿಯಲ್ಲೇ ಇರಲಿಲ್ಲ! ಒಟ್ಟೂ ಗ್ರಾಮದ ೨೧೦ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಯಿತು. ತಿಂಗಳಿಗೆ ಮನೆಯೊಂದಕ್ಕೆ ೫೦ ರೂಪಾಯಿ, ಅಡ್ವಾನ್ಸ್ ಮನೆಯೊಂದರಿಂದ ೧ ಸಾವಿರ ರೂಪಾಯಿ ಸಂಗ್ರಹವಾಗುತ್ತದೆ!

ಸ್ವತಃ ಮಂಜುಳಾ ಮುಂದೆ ನಿಂತು, ಗ್ರಾಮಸ್ಥರ ಸಹಕಾರದಲ್ಲಿ ಜೆಸಿಬಿ ಬಳಸಿ ೪ ಅಡಿ ಆಳ, ಮೂರು ಅಡಿ ಅಗಲ ಮತ್ತು ಕನಿಷ್ಠ ೨೦ ಅಡಿ ಉದ್ದದ ಪೈಪ್‌ಲೈನ್ ಕಾಮಗಾರಿ ಒಂದೇ ದಿನದಲ್ಲಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಮನೆ-ಮನೆಗೂ ನಳದ ಸಂಪರ್ಕ ಕಲ್ಪಿಸಲಾಗುತ್ತದೆ.

ಡಿಸೆಂಬರ್ ೫ ‘ಡಿ-ಡೇ’. ಡಾ. ಪ್ರಕಾಶ ಭಟ್, ಗ್ರಾಮದ ದೈವದೊಂದಿಗೆ ವಾಲ್ವ್ ತಿರುಗಿಸುತ್ತಾರೆ..! ಒಂದೇ ತಾಸಿನ ಅವಧಿಯಲ್ಲಿ ಮನೆ ಮನೆಗಳಲ್ಲಿ ಪೂರ್ಣಕುಂಭದೊಂದಿಗೆ ನೀರನ್ನು ಜನ ಸ್ವಾಗತಿಸುತ್ತಾರೆ. ಅತ್ತ, ಮೊದಲ ಬಾರಿಗೆ ಮನೆಯ ಹೊಸ್ತಿಲು ತುಳಿದ ನೀರನ್ನು, ಗ್ರಾಮ ದೇವಿಯ ಅಭಿಷೇಕಕ್ಕೆ ಕೊಡ ತುಂಬಲಾಗುತ್ತದೆ. ಸಂಪ್ರದಾಯದ ಪ್ರಕಾರ ಜಲಕ್ಕೆ ಕೃತಜ್ಞತಾ ಸಮರ್ಪಣೆಯ ಭಾಗವಾಗಿ ಪೂಜೆ-ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಇತ್ತ, ಊರಿನ ಹೆಣ್ಣು ಮಕ್ಕಳ ಕಣ್ಣುಗಳಲ್ಲಿ ವರ್ಷದುದ್ದಕ್ಕೂ ನೀರು ಹೊತ್ತಿದ್ದ ಶ್ರಮ ಸಂತಸದ ಕಣ್ಣೀರಾಗಿ ಜಿನುಗುತ್ತದೆ!

ಮಂಜುಳಾ ಊರನ್ನೇ ಹೊತ್ತವಳಲ್ಲವೇ..! ಸುಮಾರು ೯ ಕಡು ಬಡ ಕುಟುಂಬಗಳನ್ನು ಆಕೆ ಕಂಪ್ಲಿಕೊಪ್ಪದಲ್ಲಿ ಗುರುತಿಸುತ್ತಾಳೆ. ಮನೆಗೆ ನಳದ ಸಂಪರ್ಕ ಪಡೆಯಲು ಆರ್ಥಿಕ ಚೈತನ್ಯವಿಲ್ಲದ ಪರಿಸ್ಥಿತಿಯನ್ನು ತನ್ನ ಗುರು ಪ್ರಕಾಶ ಭಟ್‌ರ ಗಮನಕ್ಕೆ ತರುತ್ತಾಳೆ. ಈ ಕೆಲಸಕ್ಕೆ ಯಾವುದೇ ಹಣಕಾಸು ಸೌಲಭ್ಯ ಲಭ್ಯವಿರದಿದ್ದರೂ, ಸ್ಕೋಪ್ ಆ ೯ ಮನೆಗಳಿಗೂ ಉಚಿತವಾಗಿ ನಳದ ಸಂಪರ್ಕ ಜೋಡಿಸಲು ತಗಲುವ ವೆಚ್ಚವನ್ನು ಭರಿಸುತ್ತದೆ! ಮನೆ ಅಂಗಳಕ್ಕೆ ನೀರು ತಂದುಕೊಟ್ಟ ಮಂಜುಳಾ ಮತ್ತು ಡಾ. ಪ್ರಕಾಶ್ ಭಟ್ ಅವರನ್ನು ಕಂಡ ಮನೆಯವರ ಕಣ್ಣಲ್ಲಿ ಕೃತಜ್ಞತೆಯ ಪ್ರತೀಕವಾಗಿ ನೀರು ಜಿನುಗುತ್ತವೆ. ಫೆಲೋಷಿಪ್‌ನ ಸಾರ್ಥಕ್ಯ ಇಲ್ಲಿ ನನ್ನಂಥವನ ಅರಿವನ್ನು ವಿಸ್ತರಿಸಿದೆ.

AGI HABBAಮಂಜುಳಾ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಕಂಪ್ಲಿಕೊಪ್ಪದ ಶಾಲೆಗೆ ಭೇಟಿ ನೀಡುತ್ತಾರೆ. ದಂಗು ಬಡಿದ ಅನುಭವವಾಗುತ್ತದೆ. ಆ ಶಾಲೆಯಲ್ಲಿ ಓದುವ ಮಕ್ಕಳಿಗೆ ಕಳೆದ ಎರಡು ದಶಕಗಳಿಂದ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ! ಶಾಲಾ ಸುಧಾರಣಾ ಸಮಿತಿ, ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗೆ ಪತ್ರ ಬರೆದೂ ಬರೆದೂ, ಕೊನೆಗೂ ಹನಿ ನೀರು ದಕ್ಕಿರಲಿಲ್ಲ. ಅಂತೂ ಸಂಬಂಧಪಟ್ಟವರ ಮನವೊಲಿಸಿ, ಶಾಲೆಗೂ ಪೈಪ್‌ಲೈನ್ ಅಳವಡಿಸುವ ಮೂಲಕ ಕುಡಿಯುವ ನೀರು ಬಿಸಿಯೂಟ ಉಣ್ಣುವ ಮಕ್ಕಳಿಗೆ ದೊರಕುವಂತೆ ಮಾಡಿದ್ದಾರೆ.

ವಿಶೇಷವೆಂದರೆ, ಕಂಪ್ಲಿಕೊಪ್ಪದಲ್ಲಿ ಅರ್ಧದಷ್ಟು ಮನೆಯವರು ಶೌಚಾಲಯ ಕಟ್ಟಿಕೊಂಡಿದ್ದರು. ಆದರೆ ಬಳಸುತ್ತಲೇ ಇರಲಿಲ್ಲ! ಅನುದಾನದ ಆಸೆಗೆ ನಿರ್ಮಿಸಿದ್ದು ಎಂದರೆ ತಪ್ಪಲ್ಲ? ಮಂಜುಳಾ ಬಯಲು ಶೌಚದ ಖಯಾಲಿ ಇರುವ ಮಂದಿಯನ್ನು ಮಾತನಾಡಿಸುತ್ತಾರೆ.. ಸರ್ಕಾರದ ಸಹಾಯಧನ ಪಡೆದು ಕಟ್ಟಿಸಿದ ಪಾಯಖಾನೆ ಬಳಸದೇ ಇದ್ರೆ.. ದಂಡ ಕಟ್ಟಬೇಕು ಎಂದು ಮನೆ-ಮನೆಗೆ ತೆರಳಿ ತಿಳಿವಳಿಕೆ ಮೂಡಿಸುತ್ತಾರೆ. ಶೇ. ೮೦ ರಷ್ಟು ಜನ ಶೌಚಾಲಯ ಕಟ್ಟಿಕೊಳ್ಳುತ್ತಾರೆ.. ಮತ್ತು ನೀರು ತಂದ ಉಪಕಾರಕ್ಕೆ ಮಂಜುಳಾ ಅವರ ಮಾತನ್ನು ಧಿಕ್ಕರಿಸಲಾಗದೇ ಬಳಸಲು ೨೧೦ ಮನೆಗಳ ಗ್ರಾಮಸ್ಥರು ಮುಂದಾಗುತ್ತಾರೆ..!

ಮಂಜುಳಾ ಕೇವಲ ‘ವಾಟ್-ಸ್ಯಾನ್ ಫೆಲೋಷಿಪ್’ಗೆ ಮಾತ್ರ ಸೀಮಿತವಾಗಿ ಕೆಲಸ ಮಾಡಲಿಲ್ಲ. ಗ್ರಾಮದ ಹಸಿರು ಆವರಣ ಹೆಚ್ಚಿಸಲು ಡಾ. ಪ್ರಕಾಶ ಭಟ್ ಅವರ ಕಲ್ಪನೆಯ ಕೂಸು – ‘ಅಗಿ ಹಬ್ಬ’ವನ್ನು ಯಶಸ್ವಿ ಇವೆಂಟ್ ಮ್ಯಾನೇಜರ್ ಆಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದು. ಹಳ್ಳಿಯೊಂದರ ಚಿತ್ರಣವನ್ನೇ ಬದಲಾಯಿಸಿ, ಇತಿಹಾಸವನ್ನೇ ಪುನರ್ ರೂಪಿಸಿದ ಈ ಪುಟ್ಟ ಹುಡುಗಿಯ ಬದ್ಧತೆ.. ಮತ್ತು ಸಿದ್ಧತೆಗಳು.. ಅಬ್ಬಾ..!

***************************************************************************************************************************

Manjula Kamplikoppa Villageಮಂಜುಳಾ ಅಶೋಕ ಅರಬಳ್ಳಿ ಅನಿಸಿಕೆ –

ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್ ನನಗೆ ಬೇರೆ ಜಗತ್ತನ್ನೇ ಅನಾವರಣಗೊಳಿಸಿದೆ. ನನ್ನ ಕಲಿಕೆಗೊಂದು ಬೆಳ್ಳಿಯ ಅಂಚು ಈ ಅನುಭವ ತೊಡಿಸಿದೆ. ನಾನು ಓದಿದ್ದಕ್ಕೂ, ಇಲ್ಲಿ ಕಲಿತದ್ದಕ್ಕೂ ತುಂಬ ವ್ಯತ್ಯಾಸವಿದೆ. ಓರ್ವ ಪುಟ್ಟ ಬಾಲಕಿ ಹಳ್ಳಿಯನ್ನು ತುಂಬ ಆಸ್ಥೆಯಿಂದ, ಬೆರಗುಗಣ್ಣುಗಳಿಂದ ಅನ್ವೇಷಿಸುವ ತೆರದಿ ನಾನು ನನ್ನ ಅನುಭವವನ್ನೂ ಮಾಗಿಸಿಕೊಂಡೆ. ನಿಜಕ್ಕೂ ಕಂಪ್ಲಿಕೊಪ್ಪ ನನ್ನ ತವರು ಮನೆ. ಸ್ಕೋಪ್ ಮತ್ತು ಅರ್ಘ್ಯಂಗೆ ಈ ಅನುಭವ ದೊರಕಿಸಿಕೊಟ್ಟದ್ದಕ್ಕೆ, ಬದುಕಿಗೊಂದು ಅರ್ಥ ನೀಡಿದ್ದಕ್ಕೆ ನನ್ನ ಪುಟ್ಟ ಧನ್ಯವಾದ.

 ಸಂಪರ್ಕ: manjula.araballi@gmail.com / +91 8105715452

***************************************************************************************************************************

 ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ.

ಇದು ಸ್ಕೋಪ್-ಅರ್ಘ್ಯಂವಾಟ್ಸ್ಯಾನ್ಫೆಲೋಷಿಪ್ ಪ್ರೋಗ್ರಾಂ ಯಶೋಗಾಥೆಯ ಸರಣಿಯ ನೆಯ ಲೇಖನ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*