ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಾಲುವೆ ನೀರು ನಿರ್ವಹಣೆ: ಬಳಕೆದಾರರ ಪಾತ್ರ

ಸ್ವಾತಂತ್ರನಂತರ ಭಾರತದಲ್ಲಿ ಆಹಾರ ಸಮಸ್ಯೆಯನ್ನು ಪರಿಹರಿಸಲು ನೆಹರೂರವರು ಅನೇಕ ಯೋಜನೆಗಳನ್ನು ರೂಪಿಸಿದರು.    ಆಹಾರ, ನಿರುದ್ಯೋಗ, ವಸತಿ, ನೀರು ಹೀಗೆ ಏನೆಲ್ಲಾ ಒಟ್ಟಾಗಿ ಪರಿಹರಿಸಲು ಆಗದಷ್ಟು ಸಮಸ್ಯೆಗಳು ಎದುರಾಗುತ್ತಿದ್ದವು.  ಆಗಲೇ ರಷ್ಯಾ ಮತ್ತು ಕೆಲವು ಯುರೋಪಿಯನ್‌ ದೇಶಗಳಲ್ಲಿ ಬೃಹತ್‌ ಅಣೆಕಟ್ಟುಗಳು ಹೆಚ್ಚು ಪ್ರಸಿದ್ಧವಾಗಿದ್ದವು. ಭಾರತದಲ್ಲೂ ಬರಡುನೆಲ ಚಿಗುರಿಸಲು ಇರುವ ಏಕೈಕ ಉಪಾಯ ಅಣೆಕಟ್ಟುಗಳು ಎಂಬ ತೀರ್ಮಾನ.  ಅಂದು ಕಾಡಿಗೆ, ಬೆಟ್ಟಗುಡ್ಡಗಳಿಗೆ, ವನ್ಯಜೀವಿಗಳಿಗೆ ಏನೆಲ್ಲಾ ಜೀವವೈವಿಧ್ಯಗಳಿಗೆ ಮಾನ್ಯತೆಯಿರಲಿಲ್ಲ.  ನದಿಗಳೆಲ್ಲಾ ಹರಿದು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ ಎನ್ನುವ ಯೋಚನೆ.

ಅದರಲ್ಲೂ ಬಡತನ, ಹಸಿವೆ, ಆತ್ಮಹತ್ಯೆಗಳು ಆಹಾರದ ಅಗತ್ಯವನ್ನು ಇನ್ನಷ್ಟು ಮನಗಾಣಿಸಿತು.  ಕೃಷಿ ಹಾಗೂ ವಿವಿಧೋದ್ದೇಶಗಳನ್ನು ಒಳಗೊಂಡ ಅಣೆಕಟ್ಟು ಯೋಜನೆ ರೂಪುಗೊಂಡಿತು.

Irrigation canal picture - for kaaluve nirvahane poorna article - published on 22.7.2016ಬ್ರಹ್ಮಪುತ್ರ, ಗಂಗಾ, ಯಮುನಾ, ಸಟ್ಲೇಜ್‌…ಉತ್ತರದಲ್ಲೂ, ಕಾವೇರಿ, ತುಂಗಭದ್ರಾ, ಕೃಷ್ಣಾ, ಗೋದಾವರಿ ದಕ್ಷಿಣದಲ್ಲೂ… ಕೃಷಿಗೆ ನೀರುಣಿಸಲು ಸಿದ್ಧವಾದವು.  ದೇಶದಾದ್ಯಂತ ೭೪ ಅಣೆಕಟ್ಟುಗಳನ್ನು ಕಟ್ಟಬೇಕೆಂಬ ಯೋಜನೆ, ಕ್ಷೇತ್ರಾಧ್ಯಯನ, ಸ್ಥಳ ಪರಿಶೀಲನೆ, ನಿರ್ಮಾಣದ ಅಂದಾಜುವೆಚ್ಚ, ಹಣ ಹೂಡುವಿಕೆ. . . ಹೀಗೆ ಒಂದರ ಹಿಂದೊಂದು ಪ್ರಕ್ರಿಯೆಗಳು ನಡೆಯತೊಡಗಿದವು.

ಕೇವಲ ತುಂಗಾ, ಭದ್ರಾ, ಇತರ ಉಪನದಿಗಳಿಂದ ಸುಮಾರು ಆರು ಲಕ್ಷ ಹೆಕ್ಟೇರ್‌ ಪ್ರದೇಶಗಳಿಗೆ ನೀರು ಒದಗಿಸಲಾಗುತ್ತಿದೆ.  ಈ ಯೋಜನೆಗಳಿಂದ ಸುಮಾರು ಒಂದು ಲಕ್ಷ ಕುಟುಂಬಗಳು ಸಂತ್ರಸ್ತರಾದರೂ ಅದರ ನಾಲ್ಕುಪಟ್ಟು ಜನರಿಗೆ ಅನುಕೂಲವಾಗಿದೆ ಎಂಬುದನ್ನು ಸರ್ಕಾರ ಅಂಕಿಅಂಶಗಳ ಸಹಿತ ದಾಖಲೆ ಇರಿಸಿದೆ.

ಈ ರೀತಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಬಂದ ಮೇಲೆ ಸರ್ಕಾರ ಹಾಗೂ ರೈತರ ಮಧ್ಯೆ ಕೊಡುಕೊಳ್ಳುವಿಕೆಯ ವ್ಯವಹಾರ ಪ್ರಾರಂಭವಾಯಿತು.  ಅಂದಿನ ಸರ್ಕಾರ ಜನರ ಭಾಗವಹಿಸುವಿಕೆ ಅಥವಾ ಜನಾಭಿಪ್ರಾಯಕ್ಕೆ ಹೆಚ್ಚು ಮನ್ನಣೆ ನೀಡಲಿಲ್ಲ.  ಅಧಿಕಾರಿಗಳು, ರಾಜಕಾರಣಿಗಳೇ ಕುಳಿತು ಕಾನೂನು ಮಾಡಿದರು.  ಹೀಗೆ ಕರ್ನಾಟಕ ನೀರಾವರಿ ಅಧಿನಿಯಮ ೧೯೬೫ ಮತ್ತು ನಿಯಮ ೧೯೬೫ ರಚನೆಯಾಯಿತು.

ನಿಯಮಗಳು ಕ್ಲಿಷ್ಟವಾಗಿಲ್ಲ.  ಆದರೂ ಕಾನೂನಿನ ಭಾಷೆ ಅರ್ಥವಾಗುವುದು ಕಷ್ಟ ಮತ್ತು ಹೇಗೆ ಬೇಕಾದರೂ ಅರ್ಥೈಸಬಹುದಲ್ಲವೇ?

ಅಂದಿನ ದಿನಗಳಲ್ಲಿ ಪ್ರತಿ ಬೆಳೆಯ ಮೇಲೆ ವಿಧಿಸಿದ ದರ ಹೀಗಿದೆ.  ಕಬ್ಬು-೪೦೦ ರೂಪಾಯಿ, ಭತ್ತ-೧೦೦ರೂಪಾಯಿ, ಗೋಧಿ, ಹತ್ತಿ, ಶೇಂಗಾ ಮತ್ತು ಸೂರ್ಯಕಾಂತಿ-೬೦ ರೂಪಾಯಿ, ತೋಟಗಾರಿಕಾ ಬೆಳೆಗಳು-೬೦ ರೂಪಾಯಿ, ಜೋಳ, ಗೋಂಜೋಳ, ನವಣೆ, ರಾಗಿ, ದ್ವಿದಳ ಧಾನ್ಯಗಳು, ತಂಬಾಕು-೩೫ ರೂಪಾಯಿಗಳು, ಸೆಣಬು, ಡಯಂಚ ಇಂತಹುವುಗಳು-೧೫ ರೂಪಾಯಿ.  ಇದು ಒಂದು ಎಕರೆ ಬೆಳೆಗೆ ವಿಧಿಸಿದ ನೀರಿನ ದರ.

ಗೃಹೋದ್ದೇಶಕ್ಕೆ ನೀರು ಬಳಸಿದರೆ ೩೭೫ ರೂಪಾಯಿ, ಕೈಗಾರಿಕೆಗೆ ನೀರು ಬಳಸಿದರೆ ೩೨೦೦ ರೂಪಾಯಿಗಳು.  ಹೊಲ, ಕಾಲುವೆಗಳ ನಿರ್ಮಾಣ, ವಸೂಲಾತಿ ಕ್ರಮ, ವಸೂಲು ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ, ನೀರಿನ ದರ ನೀಡದಿರುವ ಗ್ರಾಹಕರ ವಿರುದ್ಧ ಕ್ರಮ, ಕಾಲುವೆ ನಿರ್ವಹಣೆಯ ರೀತಿ (ಸ್ವಚ್ಛತೆ ಬಳಸುವಿಕೆ) ದಂಡ ಪ್ರಕ್ರಿಯೆ, ನೀರಾವರಿ ಕಾಮಗಾರಿಗಳು, ನಿಯಂತ್ರಣ ಹಾಗೂ ಬಳಕೆದಾರರ ಸಂಘದ ಕಾರ್ಯಗಳು, ಪುರೋಭಿವೃದ್ಧಿ ವಂತಿಗೆ, ನೀರಿನ ದರ ವಿಧಿಸುವಿಕೆ ಹೀಗೆ ಪ್ರತಿಯೊಂದನ್ನೂ ಸ್ಪಷ್ಟವಾಗಿ ಆದರೆ ಕಾನೂನಿನ ಭಾಷೆಯಲ್ಲಿ ಹೇಳಿದ್ದಾರೆ.

ಇದಕ್ಕೂ ಪೂರ್ವದಲ್ಲಿ, ಅಂದರೆ ಕಾನೂನು ಮಾಡುವ ಮೊದಲು ಸಾಂಪ್ರದಾಯಿಕವಾಗಿ ನೀರು ಹಂಚಿಕೊಳ್ಳುವ ಪದ್ಧತಿ ವಿವಿಧ ಕಡೆಗಳಲ್ಲಿ ಹೇಗಿತ್ತು? ನೋಡೋಣ.

  1. ನೀರಗಂಟಿ
  2. ನೀರುಕಟ್ಟು
  3. ಹಾಯ್‌ನೀರು
  4. ಹೊಮ್ಮಂಡ
  5. ತಲಪರಿಗೆ
  6. ಏತ
  7. ವರಾಡ
  8. ದಾಮಾಶ

ಹೀಗೆ ಅನೇಕ ವಿಧಗಳಲ್ಲಿ ವಿವಿಧ ಭಾಗಗಳ ರೈತರು ಸಮಾನವಾಗಿ ನೀರು ಹಂಚಿಕೊಳ್ಳುತ್ತಿದ್ದರು.

ಬೆಳೆ ಮಾದರಿಯಲ್ಲಿ ಮೊದಲ ಬೆಳೆ ಭತ್ತ, ಕಬ್ಬು, ಸೂರ್ಯಕಾಂತಿ.  ಎರಡನೇ ಬೆಳೆ ಗೋಧಿ, ಎಳ್ಳು, ಹೆಸರು, ಉದ್ದು ಹೀಗೆ ಮಿತನೀರು ಬಯಸುವ ಬೆಳೆಗಳಿಗೆ ಪ್ರಾಮುಖ್ಯತೆ.  ತರಕಾರಿ ಖಾಯಂ ಬೆಳೆಯುತ್ತಿದ್ದರು.

ನೀರಾವರಿ ಯೋಜನೆ ಬಂದ ಮೇಲೆ ಚಿತ್ರಣವೇ ಬದಲಾಯಿತು.

ಮುಂಗಾರು ಭತ್ತ, ಹಿಂಗಾರು ಭತ್ತ, ಬೇಸಿಗೆ ಭತ್ತ ಬಿಟ್ಟರೆ ಬೇರೇನಿಲ್ಲ.  ಇತರೇ ಬೆಳೆಗಳೆಲ್ಲಾ ಮಾಯವಾದವು.  ಅದರ ಫಲ ಹೀಗಿದೆ.

  1. ಬೆಳೆ ಮಾದರಿ ಪಾಲನೆ ವಿಫಲ
  2. ವಂತಿಗೆ, ನೀರಿನ ಕರ ನೀಡಲೇ ಇಲ್ಲ.
  3. ಕಾಲುವೆಗಳನ್ನು ಯಾರೂ ಸರಿಪಡಿಸಿಕೊಳ್ಳಲಿಲ್ಲ.
  4. ಕಾಲುವೆ ಪಕ್ಕ ಸಾಲುಮರಗಳನ್ನು ನೆಡಲಿಲ್ಲ (ಕಾನೂನಿದ್ದರೂ)
  5. ಕಾಲುವೆ ಪಕ್ಕದ ಎಂಟು ಅಡಿ ಜಾಗ ಉಳಿಸಲಿಲ್ಲ.
  6. ಬಳಕೆದಾರರ ಸಂಘ ಸ್ಥಾಪನೆ ಆಗಲಿಲ್ಲ.
  7. ಹೊಲ, ಕಾಲುವೆ ನಿರ್ಮಾಣ, ನೀರಿನ ಬಳಕೆಗೆ ಯಾರೂ ಅರ್ಜಿಯನ್ನೂ ನೀಡಲಿಲ್ಲ.
  8. ಕೆರೆ ನಿರ್ಮಿಸಿಕೊಳ್ಳಲು, ಬಾವಿ ನಿರ್ಮಿಸಿಕೊಳ್ಳಲು ಅನುಮತಿ ಪಡೆಯಲಿಲ್ಲ.
  9. ಕಾಲುವೆ ನೀರಿಗೆ ಪಂಪ್‌ಸೆಟ್‌, ಪೈಪ್‌ಗಳನ್ನು ಹಾಕಿಕೊಳ್ಳಲು ಅನುಮತಿ ಕೇಳಲಿಲ್ಲ.
  10. ಒತ್ತುವರಿ, ಅನಧಿಕೃತ ಸಾಗುವಳಿ, ಅನಧಿಕೃತ ನೀರಿನ ಬಳಕೆ ಹೆಚ್ಚಿತು.

ಈ ರೀತಿ ೫೦ ವರ್ಷಗಳ ಕಾಲ ರೈತರು ನೀರನ್ನು ಉಚಿತವಾಗಿ, ನಿರ್ಲಕ್ಷ್ಯದಿಂದ, ಬೇಜವಾಬ್ದಾರಿಯುತವಾಗಿ, ಸೊಕ್ಕಿನಿಂದ ಬಳಸಿಕೊಂಡರು.  ಇದೇ ರೀತಿ ಅಧಿಕಾರಿಗಳು ಪರಮ ಭ್ರಷ್ಟಾಚಾರ ಮೈಗೂಡಿಸಿಕೊಂಡರು.

ಆದರೆ, ಅಣೆಕಟ್ಟುಗಳನ್ನು ಕಟ್ಟಿದ ವೆಚ್ಚ ವಸೂಲಾಗದೇ, ಅಣೆಕಟ್ಟೆ ಕಟ್ಟಿದ್ದಕ್ಕಿಂತಲೂ ನಿರ್ವಹಣೆಯ ವೆಚ್ಚ ಅಧಿಕವಾಗತೊಡಗಿತು.  ಈಗ ಸರ್ಕಾರ ಅಧಿಕಾರದ ವಿಕೇಂದ್ರೀಕರಣ ಮಾಡಲು ಯೋಚಿಸಿತು.  ಆಗಲೇ ಕಾಲ ಸರಿದುಹೋಗಿತ್ತು.  ರೈತರು ಜಡ್ಡುಗಟ್ಟಿದ್ದರು.

  1.  ಹಳೆಯ ದರಗಳನ್ನು, ವಂತಿಗೆಗಳನ್ನು ಹಾಗೂ ಆ ಪದ್ಧತಿಯನ್ನೇ ಅನುಸರಿಸಲು ನಿರಾಕರಣೆ, ನೀರು ಸದಾ ಉಚಿತವಾಗಿ ಸಿಗಬೇಕೆಂಬ ಮನೋಭಾವ.
  2. ನೀರು ಎಷ್ಟಿದ್ದರೂ ಬೇಕು ಎನ್ನುವ ದುರಾಸೆ.  ಅತಿನೀರು ಬಳಕೆ, ಅದರಿಂದ ಸವಳು ಜವಳಾದ ನೆಲ (ತುಂಗಭದ್ರಾ ಅಚ್ಚುಕಟ್ಟಿನಲ್ಲಿ ೬೮ ಸಾವಿರ ಹೆಕ್ಟೇರ್‌ ಪ್ರದೇಶ ಸವಳುಜವಳಾಗಿದೆ.)
  3. ಯಾವುದೇ ದುರಸ್ತಿಯನ್ನು ಸರ್ಕಾರವೇ ಮಾಡಿಕೊಡಬೇಕೆಂಬ ಆಶಯ.
  4. ಕಾಲುವೆ ನಿರ್ವಹಣೆ, ಕಸಕಡ್ಡಿ, ಸ್ವಚ್ಛತೆ, ಸರ್ಕಾರದ್ದೆಂಬ ಯೋಚನೆ.
  5. ನೀರು ಬಳಕೆದಾರರ ಸಂಘ ಸ್ಥಾಪನೆಗೆ, ಪರಸ್ಪರ ಒಪ್ಪಂದಕ್ಕೆ ವಿರೋಧ.
  6. ವಸೂಲಾತಿ ಕಾಮಗಾರಿಗಳನ್ನು ನಿರ್ವಹಿಸಲು ನಿರಾಕರಣೆ
  7. ಇಳುವರಿ ಹೆಚ್ಚಿಸಲು ರಾಸಾಯನಿಕಗಳ ಬಳಕೆ, ಕೀಟನಾಶಕಗಳ ಬಳಕೆ (ಸಾಲ-ಅತ್ಯಗತ್ಯ, ರೋಗ-ಸಾವು)
  8. ಅನಧಿಕೃತ ಸಾಗುವಳಿ, ನೀರು ಕದಿಯುವಿಕೆ
  9. ಊರಿನ ಸಾಮರಸ್ಯ, ಆರೋಗ್ಯ ಹಾಳು.
  10. ಹೆಚ್ಚಿದ ಶ್ರೀಮಂತ-ಬಡವ ಅಂತರ.  ಹೀಗೆ. . . ಅನೇಕ

ಇದನ್ನೆಲ್ಲಾ ಜನರ ಭಾಗವಹಿಸುವಿಕೆ, ಸಹಭಾಗಿತ್ವ, ಸಮುದಾಯಗಳ ರಚನೆಗಳಿಂದ ತಪ್ಪುಗಳನ್ನು, ಅನಾಹುತಗಳನ್ನು ಸರಿಪಡಿಸಬಹುದು.  ಅದಕ್ಕೆ ಕಳಕಳಿಯಿಂದ, ಪ್ರಾಮಾಣಿಕ ಪ್ರಯತ್ನ ಮಾಡುವ ಅಧಿಕಾರಿಗಳ, ಕಾರ್ಯಕರ್ತರ ಸಮೂಹವೇ ಬೇಕು.  ಜನರನ್ನು ಒಲಿಸುತ್ತಾ, ಸರ್ಕಾರದ ನಿಯಮಗಳನ್ನು (ಒಳ್ಳೆಯ ನಿಯಮಗಳನ್ನು) ಸಮದೂಗಿಸುವ ಜಾಣ್ಮೆ ಬೇಕು.  ಆಗ ಯಾವುದೇ ಕೆಲಸಗಳನ್ನು ಮಾಡಿಸಬಹುದು, ಮಾಡಿ ಗೆಲ್ಲಬಹುದು.

ನೀರು ಬಳಕೆದಾರರ ಸಂಘಗಳ ಮೂಲಕ ಹೆಚ್ಚಿನ ಅಧಿಕಾರ ರೈತರಿಗೆ ಸಿಕ್ಕಿದೆ.  ರೈತರೇ ಅಧಿಕಾರ ಚಲಾಯಿಸಬಹುದು.  ನೀತಿನಿಯಮಗಳನ್ನು ಆಯಾ ಪ್ರದೇಶಗಳಿಗೆ ಅನ್ವಯ ಮಾಡಿಕೊಳ್ಳಬಹುದು.  ಅದಕ್ಕಾಗಿ ಜವಾಬ್ದಾರಿಯುತವಾಗಿ ಕೆಲಸಗಳನ್ನು ನಿರ್ವಹಿಸಬೇಕು.  ರೈತರು ಸಂಘಟನೆಯಾದರೆ ಮಾಡಬಹುದಾದ ಕೆಲಸಗಳು ಹೀಗಿವೆ.

  •  ಪ್ರತಿವರ್ಷ ಕಾಲುವೆಗಳ ದುರಸ್ತಿ, ತೂಬುಗಳ ದುರಸ್ತಿ, ನೀರು ನಿಯಂತ್ರಣಾ ಸಾಧನಗಳ ದುರಸ್ತಿ ಒಟ್ಟಾರೆ ನಿರ್ವಹಣೆ.
  •  ಕಾಲುವೆ ಅಕ್ಕಪಕ್ಕ ಗಿಡಮರಗಳನ್ನು ಬೆಳೆಸುವುದು, ಹುಲ್ಲು ಬೆಳೆಸುವುದು, ಪಕ್ಕದ ರಸ್ತೆಯನ್ನು ಚೆನ್ನಾಗಿಟ್ಟುಕೊಳ್ಳುವುದು.
  •  ಅಕ್ರಮ ನೀರು ಬಳಕೆ, ಅಕ್ರಮ ಸಾಗುವಳಿಗೆ ದಂಡ, ನೀರುಳಿತಾಯ, ಉತ್ತಮ ರೈತರಿಗೆ, ಉತ್ತಮ ಕೃಷಿಗೆ ಪುರಸ್ಕಾರ.
  •  ಮಿತಬೆಳೆ ಪದ್ಧತಿ, ತೋಟಗಾರಿಕೆ, ತರಕಾರಿ, ಹಣ್ಣು ಇದಕ್ಕೆ ಒತ್ತು; ರಾಸಾಯನಿಕ ಹಾಗೂ ಕೀಟನಾಶಕಗಳ ಬಳಕೆ ನಿಲ್ಲಿಸುವುದು.
  •  ಸರ್ಕಾರದ ಅನುದಾನ, ಸಹಾಯಕ್ಕಾಗಿ ಕೈ ಚಾಚದಿರುವುದು, ಸ್ಥಳೀಯ ಹಳ್ಳ-ಕೆರೆಗಳ ಪುನರುಜ್ಜೀವನ.
  •  ಬಸಿಗಾಲುವೆಗಳ ನಿರ್ವಹಣೆ, ನೀರು ನಿಲ್ಲದಂತೆ ಇಳಿಜಾರು ವ್ಯವಸ್ಥೆ, ಬೆಳೆ ಹಾಗೂ ಮಣ್ಣಿಗೆ ಹೊಂದಿಕೊಳ್ಳುವ ನೀರಾವರಿ ವಿಧಾನದ ಆಯ್ಕೆ, ಬೇಕಾದಷ್ಟೇ ನೀರನ್ನು ಹರಿಸಲು ಪ್ರತ್ಯೇಕ ಕಾಲುವೆಗಳ ನಿರ್ಮಾಣ.
  • ತುಂತುರು ಅಥವಾ ಹನಿ ನೀರಾವರಿ ವಿಧಾನಗಳ ಅಳವಡಿಕೆ, ಮಳೆನೀರಿನ ಬಳಕೆ, ಸಂಗ್ರಹಣೆ, ಮೀನು ಸಾಕಲು, ಅಂತರ್ಜಲ ಹೆಚ್ಚಿಸಲು, ಬೆಳೆಗೆ ಪೂರಕವಾಗಿ ಬಳಸಲು ಉಪಯುಕ್ತ.  ಅದಕ್ಕಾಗಿ ಕಾಲುವೆಗಳ ಬಳಕೆ, ದ್ವಿದಳ ಧಾನ್ಯ, ಬಹುಬೆಳೆಗಳ ಕೃಷಿ, ಹೂವಿನ ಕೃಷಿ. . .ಇವುಗಳಿಗೆಲ್ಲಾ ಆದ್ಯತೆ.  ತಗ್ಗಿನಲ್ಲಿ ಮಾತ್ರ ಭತ್ತ, ಕಬ್ಬಿಗೆ ಸ್ಥಳಾವಕಾಶ.

ಉಪಸಂಹಾರ : ಸವಾಲುಗಳು ರೈತರಿಗೆ ಸಾಮಾನ್ಯ ಎದುರಾಳಿಗಳು.  ನೀರು ಬಿಡದಿದ್ದಾಗ ಒಗ್ಗಟ್ಟಾಗುವ ಜನ ಉಳಿದ ಕೆಲಸಗಳಿಗೇಕೆ ಮುಂದಿಲ್ಲ?  ಸಮರ್ಥ ನಾಯಕನಿದ್ದರೆ ಎಲ್ಲವೂ ಸಾಧ್ಯ.  ಅದಕ್ಕೆ ಸಂಘಟನೆ ಬೇಕು.  ನೀರು ಬಳಕೆದಾರರ ಸಂಘದಿಂದ ಇದೆಲ್ಲಾ ಸಾಧ್ಯವಾಗಬೇಕು.  ಚಲನಶೀಲತೆ ಹುರುಪು ನೀಡುತ್ತದೆ.  ಹುರುಪಿನಿಂದ ಕೆಲಸಗಳು ಸುಲಭವಾಗುತ್ತವೆ.

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*