ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಈ ಹೆಣ್ಣಮಗಳು ಕಿತ್ತೂರು ಚೆನ್ನಮ್ಮರೀ..

ಧಾರವಾಡ (ದೇವರ ಹುಬ್ಬಳ್ಳಿ): “ನಮ್ಮ ವಿಜಯಲಕ್ಷ್ಮಿ ಬರಿ ನಮ್ಮ ಹಳ್ಳಿಯನ್ನಷ್ಟೇ ಅಲ್ಲ; ನಮ್ಮೆಲ್ಲರ ಮನಸ್ಸಿನ ಕೊಳೆಯನ್ನೂ ಸ್ವಚ್ಛ ಮಾಡಿದಂಥವಳು!”

water quality chech with childrensದೇವರಹುಬ್ಬಳ್ಳಿ ವಾಸಿ, ಪತ್ರಕರ್ತ ಬಸವರಾಜ ಹೊಂಗಲ್ ಅತ್ಯಂತ ಮಾರ್ಮಿಕವಾಗಿ ಸ್ಕೋಪ್ ಮತ್ತು ಅರ್ಘ್ಯಂ ಸಂಚಾಲಿತ ವಾಟ್‌ಸ್ಯಾನ್ ಫೆಲೊಷಿಪ್‌ನ ಯುವ ವೃತ್ತಿಪರಳಾದ ವಿಜಯಲಕ್ಷ್ಮಿ ದೊಡಮನಿ ಅವರ ವರ್ಷವೊಂದರ ಒಟ್ಟೂ ಕೆಲಸಗಳನ್ನು ಪದಗಳಲ್ಲಿ ಅಭಿಮಾನದಿಂದ ಕಟ್ಟಿಕೊಟ್ಟ ಪರಿ.

ಧಾರವಾಡ ತಾಲೂಕು ದೇವರಹುಬ್ಬಳ್ಳಿಯಲ್ಲಿ ಸರಿಸುಮಾರು ಒಂದು ವರ್ಷ ಗ್ರಾಮ ವಾಸ್ತವ್ಯ ಕೈಗೊಂಡ ೨೫ರ ಹರೆಯದ ಯುವತಿ, ಸಮಾಜಸೇವಾ ಕಾರ್ಯದಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿಯನ್ನೂ ಸಂಪಾದಿಸಿಕೊಂಡು ಕಲಿತದ್ದನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸನ್ನದ್ಧವಾದ ಪರಿ ಬೆರಗು ಮೂಡಿಸುವಂಥದ್ದು.

ಧಾರವಾಡದ ಸೊಸೈಟಿ ಫಾರ್ ಕಮ್ಯುನಿಟಿ ಪಾರ್ಟಿಸಿಪೇಷನ್ ಆಂಡ್ ಎಂಪವರ್‌ಮೆಂಟ್ -ಸ್ಕೋಪ್‌ನ ಸಿಇಓ ಡಾ. ಪ್ರಕಾಶ್ ಭಟ್, ಬೆಂಗಳೂರಿನ ಅರ್ಘ್ಯಂ ಪ್ರತಿಷ್ಠಾನದೊಂದಿಗೆ ಜೊತೆಗೂಡಿ ಆರಂಭಿಸಿದ ‘ವಾಟರ್ ಆಂಡ್ ಸ್ಯಾನಿಟೇಷನ್ ಫೆಲೋಷಿಪ್ ಪ್ರೋಗ್ರಾಂ’ನ ಫೆಲೊ ಕು. ವಿಜಯಲಕ್ಷ್ಮಿ.

ಪಟ್ಟಣದಲ್ಲಿ ಹುಟ್ಟಿ, ಪಟ್ಟಣದಲ್ಲಿಯೇ ಬೆಳೆದು, ಪಟ್ಟಣದಲ್ಲಿಯೇ ವ್ಯಾಸಂಗ ಮಾಡಿ, ಕೈತುಂಬ ಸಂಬಳದ ನೌಕರಿಯೂ ಪಟ್ಟಣದಲ್ಲಿಯೇ ಸಿಗಬಹುದಾಗಿದ್ದ ಸಂದರ್ಭದಲ್ಲಿ -ಹಳ್ಳಿವಾಸ ಮತ್ತು ಕೆಲಸ ವಿಜಯಲಕ್ಷ್ಮಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ಕನಸಿಗೆ ರೆಕ್ಕೆ ಹಚ್ಚಿ ಬಲತುಂಬುವ ಕೆಲಸ ಸ್ಕೋಪ್ ಮಾಡುತ್ತದೆ. ಮೊದಲ ಆರು ತಿಂಗಳು ಸೂಕ್ತ ತರಬೇತಿ ವ್ಯವಸ್ಥೆಗೊಳಿಸಲಾಗುತ್ತದೆ. ಹೊಸದನ್ನು ಕಲಿಯಲು, ಈಗಾಗಲೇ ಕಲಿತದ್ದನ್ನು ಒರೆಗೆ ಹಚ್ಚಲು ಮತ್ತು ಬೇಡವಾದದ್ದನ್ನು ಇಲ್ಲಿಗೇ ಕೈಬಿಡಲು ಮನೋಸ್ಥಿತಿ ರೂಪುಗೊಳ್ಳುತ್ತದೆ. ನಂತರ ೧೨ ತಿಂಗಳು ಗ್ರಾಮ ವಾಸ್ತವ್ಯ! ಕಲಿತದ್ದನ್ನು ಬೇರುಮಟ್ಟದಲ್ಲಿ ಅಳವಡಿಸುವಾಗ ಎದುರಾಗುವ ಸಂಕಷ್ಟಗಳನ್ನು ಎದುರಿಸುವ ತರಬೇತಿ!

ಯುವ ಪದವೀಧರೆ ವಿಜಯಲಕ್ಷ್ಮಿ ಹೇಳುತ್ತಾರೆ.. “ದೇವರಹುಬ್ಬಳ್ಳಿಯ ಧೂಳು ತುಂಬಿದ ಓಣಿಯೊಂದರಲ್ಲಿ ಬಾಡಿಗೆಗೆ ಮನೆ ಹಿಡಿದು, ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅಭ್ಯಸಿಸಲು ಆರಂಭಿಸದಾಗ ತಳ-ಬುಡವೇ ಅರ್ಥವಾಗಲಿಲ್ಲ. ಎಲ್ಲಿಂದ ಆರಂಭ, ಎಲ್ಲಿಗೆ ಮುಕ್ತಾಯ ಗೊತ್ತಾಗಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಮತ್ತು ಬಯಲು ಶೌಚದ ವಿಷಯ ಆದಿ-ಅಂತ್ಯಗಳೇ ಇಲ್ಲದ ಸಮಸ್ಯೆಗಳಾಗಿದ್ದವು. ವಿಶೇಷವೆಂದರೆ, ಮೊದಲ ೪ ತಿಂಗಳು ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಲಿಲ್ಲ! ನನ್ನ ಮಾತನ್ನೂ ಕೇಳಿಸಿಕೊಳ್ಳಲಿಲ್ಲ. ‘ಇಂದ ಬಂದಾಳ.. ನಾಳೆ ಹೊಕ್ಕಾಳ..’ ಅಂತ ಯಾವ ಕೆಲಸಕ್ಕೆ ಕರೆದರೂ ಜನ ಮುಂದಾಗಲಿಲ್ಲ!”

compain in ourvillage with fellowsಸಮುದಾಯವನ್ನು ಸಂಘಟಿಸಿ, ಯುವ ಜನತೆಯನ್ನು ಈ ಕೆಲಸಕ್ಕೆ ಜೋಡಿಸಿಕೊಳ್ಳದ ಹೊರತು ಅನ್ಯ ಮಾರ್ಗವಿಲ್ಲ ಎಂಬ ಸತ್ಯ ಗೋಚರಿಸಿತು. ಸ್ವತಃ ಈ ಹೆಣ್ಣು ಮಗಳು ಊರಮುಂದಿನ ಗಟಾರು ಸ್ವಚ್ಛಗೊಳಿಸಲು ಮುಂದಾದಾಗ, ದೇವರಹುಬ್ಬಳ್ಳಿಯ ಯುವಜನತೆ “ನಮ್ಮೂರ ಗಟಾರು ನಾವ್ಯಾಕೆ ಸ್ವಚ್ಛಗೊಳಿಸಬಾರದು?” ಎಂದು ಮನಗಂಡು, ವಿಜಯಲಕ್ಷ್ಮಿಯ ಕೈ ಬಲಪಡಿಸಲು ಸನ್ನದ್ಧರಾಗುತ್ತಾರೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ೫೮ ಜನ ಯುವಕರು ‘ಸ್ವಚ್ಛತಾ ರಾಯಭಾರಿ’ಗಳಾಗುತ್ತಾರೆ!

ಆಗತಾನೇ ಚುನಾಯಿತರಾದ ಗ್ರಾಮ ಪಂಚಾಯ್ತಿ ನೂತನ ಸದಸ್ಯರು ತಾವೂ ಕೈಜೋಡಿಸಲು ಮುಂದಾಗುತ್ತಾರೆ. ಇಡೀ ಗ್ರಾಮವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲು ಟೊಂಕಕಟ್ಟಿ ನಿಲ್ಲುತ್ತಾರೆ. ಸಣ್ಣ ಪ್ರಯತ್ನವೊಂದು ಗ್ರಾಮದ ಆಂದೋಲನವಾಗಿ ಪರಿವರ್ತನೆಯಾಗುತ್ತದೆ. ಒಂದು ರೂಪಾಯಿ ಖರ್ಚಿಲ್ಲದೇ, ಓಣಿಯವರೇ ಮನೆಗಳಲ್ಲಿ ತಯಾರಿಸಿದ ಉಪಾಹಾರ, ತಿಂಡಿ ಮತ್ತು ಚಹಾ ಸೇವಿಸಿ ಬೆಳಗ್ಗೆ ೬ ಗಂಟೆಯಿಂದ ಗ್ರಾಮ ಸ್ವಚ್ಛತಾ ಆಂದೋಲನ ಪ್ರತಿದಿನದ ಸಾಂಘಿಕ ಕಾರ್ಯಕ್ರಮವಾಗುತ್ತದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಇಡೀ ಊರು, ರಸ್ತೆ, ಗಟಾರು, ತಿಪ್ಪೆಗಳು ಮತ್ತು ಬಯಲು ಶೌಚದ ರಸ್ತೆಗಳು ನಳನಳಿಸುವಂತಾಗುತ್ತವೆ. ಗ್ರಾಮಸ್ಥರೊಂದಿಗೆ ವಿಜಯಲಕ್ಷ್ಮಿ ಕೈಗೊಂಡ ಸ್ವಚ್ಛತಾ ಅಭಿಯಾನ ಅತ್ಯಂತ ಕಡಿಮೆ ಎಂದರೂ ೧೦ ಲಕ್ಷ ರೂಪಾಯಿ ವೆಚ್ಚದ ಕೆಲಸ ಎಂಬುದನ್ನು ಲೆಕ್ಕಿಸಲಾಗಿದೆ!

???????????????????????????????ವಿಜಯಲಕ್ಷ್ಮಿಯ ಶ್ರಮದಾನದ ಮಂತ್ರ ಗ್ರಾಮದಲ್ಲಿ ಸಾಮರಸ್ಯ ಮೂಡಿಸಿದೆ. ಬದ್ಧ ವೈರಿಗಳೂ ಈಗ ಜೀವದ ಗೆಳೆಯರಾಗಿದ್ದಾರೆ. ಯಾರ‍್ಯಾರೋ.. ಯಾರ‍್ಯಾರದ್ದೋ ಓಣಿಯ ಕಸ ಗುಡಿಸಿ, ಗಟಾರು ಸ್ವಚ್ಛಗೊಳಿಸಿ, ಸ್ವತಃ ಹೊತ್ತೊಯ್ದು ‘ಭಿಡೆ’ಯಲ್ಲಿ ಕೆಡವಿದ್ದಾರೆ! ನಿಜಾರ್ಥದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಮನಸಾ ಸ್ಪಂದಿಸಿದ ಗ್ರಾಮವೊಂದರ ಉದಾಹರಣೆ.

ದೇವರಹುಬ್ಬಳ್ಳಿಯ ಸಾರ್ವಜನಿಕ ನಲ್ಲಿ ಮತ್ತು ಕೆಲ ಖಾಸಗಿ ನಳಗಳಿಗೆ ತೋಟಿಯೇ ಇರಲಿಲ್ಲ! ಶುದ್ಧ ಕುಡಿಯುವ ನೀರು ಪೂರೈಕೆಯಾದಾಗ ಪೋಲಾಗುತ್ತಿದ್ದ ನೀರಿನ ಪ್ರಮಾಣ ಅರ್ಧಕ್ಕಿಂತ ಹೆಚ್ಚು! ಗ್ರಾಮ ಪಂಚಾಯ್ತಿ ಮತ್ತು ಜನ ಸಮುದಾಯದ ಮನವೊಲಿಸಿದ ವಿಜಯಲಕ್ಷ್ಮಿ, ಈ ರೀತಿ ಗ್ರಾಮದಲ್ಲಿ ತೊಟ್ಟಿಕ್ಕುತ್ತಿದ್ದ ಮತ್ತು ರಭಸದಿಂದ ಹರಿಯುತ್ತಿದ್ದ ಎಲ್ಲ ಪೈಪ್‌ಗಳಿಗೆ ನಲ್ಲಿ ಜೋಡಿಸಿ, ವ್ಯರ್ಥವಾಗಿ ಪೋಲಾಗುತ್ತಿದ್ದ ಕುಡಿಯುವ ನೀರಿನ ಅಪವ್ಯಯ ತಡೆದರು!

During shramadan 9ಗ್ರಾಮದ ಹಿರೀಕ ಬಸಪ್ಪಜ್ಜ ಅಂದ್ರು.. “ಸಾರ್ವಜನಿಕ ನಳಗೊಳ ರಿಪೇರಿ ಆ ತಂಗಿ ಮಾಡಿಸಿದ ಪರಿ ಅಬ್ಬಬ್ಬ.. ನಮ್ಮೂರಿನ ಯಾವ ಗಂಡಸರಿಗೂ ಆಗಿದ್ದಿಲ್ರೀ.. ನೀನೇನ ಮಾಡಿಸ್ತೀ ಹೋಗಬೇ.. ಅಂದಿದ್ದೆ, ನನ್ನ ಮಾತು ಸವಾಲಂತ ತೊಗೊಂಡು ಮಾಡಿದ್ಲಿರಿ.. ಭಾಳ ಖುಷಿ ಆತು. ನಮ್ಮ ಮನಿ ಮಗಳ್ರೀ.. ವಿಜಯಲಕ್ಷ್ಮಿ.”

ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕುಡಿಯಲು ನೀರಿಲ್ಲದೇ, ಬಿಸಿಯೂಟ ಉಂಡ ಮೇಲೆ ತಾಟು-ಲೋಟ ಮತ್ತು ಕೈ ತೊಳೆಯಲು ನೀರಿಲ್ಲದೇ ವರ್ಷಗಳೇ ಗತಿಸಿದ್ದವು. ಕೆಲ ತಾಂತ್ರಿಕ ಕಾರಣಗಳು ಮತ್ತು ಗ್ರಾಮಸ್ಥರ ಇಚ್ಛಾಶಕ್ತಿಯ ಕೊರತೆ ಕಾರಣವಾಗಿತ್ತು. ವಿಜಯಲಕ್ಷ್ಮಿ ಗ್ರಾಮಸ್ಥರ ಮನವೊಲಿಸಿ, ಸ್ವತಃ ಎಲ್ಲರನ್ನೂ ಶ್ರಮದಾನಕ್ಕೆ ಅಣಿಗೊಳಿಸಿ ಶಿಕ್ಷಕರ ಸಹಕಾರದಲ್ಲಿ ಶಾಲೆಗೆ ಕುಡಿಯುವ ನೀರಿನ ಪೈಪ್‌ಲೈನ್ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ!

ದೇವರಹುಬ್ಬಳ್ಳಿಯ ನಿವಾಸಿ ರತ್ನಪ್ಪ ಹಳ್ಳಿಗೇರಿ ಅಭಿಮಾನದಿಂದ ಹೇಳಿದ ಮಾತು.. “ವಿಜಯಲಕ್ಷ್ಮಿ ಎಂಥಾ ಕೆಲಸ ಮಾಡ್ಯಾಳ ಅಂತ ಆಕೀಗೇ ಗೊತ್ತಿಲ್ರೀ.. ನೀರು ಕೊಡೋದು ಪುಣ್ಯದ ಕೆಲಸ ಅಂತ ನಮ್ಮ ಹಿರೀಕ್ರು ಹೇಳ್ತಿದ್ರು. ಹತ್ತು ವರ್ಷದ ಮ್ಯಾಲಾತು ನಮ್ಮ ಗ್ರಾಮ ಪಂಚಾಯ್ತಿಯವರಿಗೆ ನೀರು ಕೊಡೋದು ಆಗಿರ್ಲಿಲ್ಲ. ಮೂರು ತಿಂಗಳಾಗ ಈ ಮಗಳು ಮಾಡ್ಯಾಳ.. ನಮ್ಮ ರಾಣಿ ಚನ್ನಮ್ಮರೀ ಆಕಿ..!”

Devarahubballi 1ಗ್ರಾಮ ಪಂಚಾಯ್ತಿ ಮತ್ತು ಗ್ರಾಮಸ್ಥರ ಮಧ್ಯೆ ಪರಸ್ಪರ ಅವಿಶ್ವಾಸ ಮೊಳಕೆಯೊಡೆದು ದಶಕಗಳೇ ಗತಿಸಿದ್ದವು! ವಿಜಯಲಕ್ಷ್ಮಿ ಈ ಕಂದರವನ್ನು ಬೆಸೆದು ಪರಸ್ಪರ ಅನ್ಯೋನ್ಯತೆಯಿಂದ ಕಾರ್ಯನಿರ್ವಹಿಸುವ, ತನ್ಮೂಲಕ ಗ್ರಾಮದ ಅಭಿವೃದ್ಧಿಗೆ ಜಂಟಿ ಪ್ರಯತ್ನ ಕೈಗೊಳ್ಳುವ ಮನೋಸ್ಥಿತಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉದಾಹರಣೆ – ೪೩೦ ಮನೆಗಳಿರುವ ದೇವರಹುಬ್ಬಳ್ಳಿಯಲ್ಲಿ ಕೇವಲ ೧೬೨ ಮನೆಗಳಿಗೆ ಮಾತ್ರ ಶೌಚಾಲಯಗಳಿದ್ದವು. ವಿಜಯಲಕ್ಷ್ಮಿ ಗ್ರಾಮಸ್ಥರ ಮನವೊಲಿಸಿ, ಬಯಲು ಶೌಚದ ಸಮಸ್ಯೆ ಮತ್ತು ಅನಾರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಿದ್ದರ ಪರಿಣಾಮ ಜನಗಳೇ ಸ್ವತಃ ಮುಂದೆ ಬಂದು ೨೪೭ ಶೌಚಾಲಯಗಳನ್ನು ಕಟ್ಟಿಕೊಂಡಿದ್ದಾರೆ! ಕಟ್ಟಿದ ಶೌಚಾಲಯ ಬಳಸುತ್ತಿದ್ದಾರೆ! ಒಟ್ಟೂ ಶೇ. ೫೨ ರಷ್ಟು ಹೆಚ್ಚುವರಿ ಶೌಚಾಲಯ ವಿಜಯಲಕ್ಷ್ಮಿ ಅವರ ಗ್ರಾಮ ವಾಸ್ತವ್ಯದ ವೇಳೆ ನಿರ್ಮಾಣಗೊಂಡಿವೆ.

ಅಲ್ಲಲ್ಲಿಯೇ ಉಗುಳುವ, ಕಸ ಕಡ್ಡಿ ಚೆಲ್ಲುವ ಮತ್ತು ಊರಿನ ಬೀಡಾ ಅಂಗಡಿಗಳ ಅಕ್ಕ ಪಕ್ಕ ಕಸದ ಗುಡ್ಡವೇ ಸೃಷ್ಟಿಯಾಗುತ್ತಿದ್ದನ್ನು ಗಮನಿಸಿದ ಆಕೆ, ಅಂಗಡಿಕಾರರ ಮನವೊಲಿಸಿ ಕಸದ ಡಬ್ಬಿಗಳನ್ನು ಇರಿಸಿಕೊಳ್ಳುವಂತೆ, ಗ್ರಾಹಕರು ಅದರಲ್ಲಿಯೇ ಬೇಡವಾದ ವಸ್ತುಗಳನ್ನು ಸುರಿಯುವಂತೆ ಮತ್ತು ಸರಿಯಾಗಿ ಆ ಕಸವನ್ನು ವಿಲೇವಾರಿ ಮಾಡುವಂತೆ ಮನವೊಲಿಸುವಲ್ಲಿ ಯಶ ಸಾಧಿಸಿದ್ದಾರೆ.

ಗ್ರಾಮ ಪಂಚಾಯ್ತಿ ನೂತನ ಸದಸ್ಯ ರಾಜು ಕುಂದಗೋಳ ಹೇಳುತ್ತಾರೆ.. “ಗ್ರಾಮ ಪಂಚಾಯ್ತಿಯಿಂದ ಮಾಡಿಸಿದ್ರೂ ವರ್ಷಾನಗಟ್ಟಲೇ ಆಗದಿದ್ದ ಕೆಲಸ ಮೂರು ತಿಂಗಳೊಳಗ ನಮ್ಮ ವಿಜಯಲಕ್ಷ್ಮಿ ಅವರು ಮಾಡಿದ್ರು.. ಇನ್ನೊಂದು ವರ್ಷ ಸ್ಕೋಪ್‌ನವರು ದೊಡ್ಡ ಮನಸ್ಸು ಮಾಡಿ ಅವರನ್ನ ನಮ್ಮೂರಾಗ ಮುಂದುವರೆಸಬೇಕು..”

******************************************************************************************************

Vilayalaxmi Doddamani - Devarahubbali Villageಫೆಲೊ ವಿಜಯಲಕ್ಷ್ಮಿ ದೊಡಮನಿ ಅನಿಸಿಕೆ –

ನಿಜಕ್ಕೂ ನನಗೆ ತುಂಬ ಖುಷಿಯಾಗಿದೆ. ದೇವರಹುಬ್ಬಳ್ಳಿಯ ಜನರ ಸಹಕಾರ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ನನ್ನ ವೃತ್ತಿಯ ಕನಸುಗಳಿಗೆ ಮತ್ತಷ್ಟು ಬಲ ಬಂದಿದೆ. ನನ್ನ ಶೈಕ್ಷಣಿಕ ಕಲಿಕೆಯ ಮುಂದುವರಿಕೆಯಾಗಿ ಸ್ಕೋಪ್ ಮತ್ಯು ಅರ್ಘ್ಯಂ ಫೆಲೋಷಿಪ್‌ನಲ್ಲಿ ಸಿಕ್ಕ ತರಬೇತಿ, ಕ್ರಿಯಾನ್ವಿತ ಕಲಿಕೆ, ಪ್ರಾಯೋಗಿಕ ವಿಷಯಗಳು, ಬೇರು ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೌಶಲ – ಹೀಗೆ ಜನ ಕೇಂದ್ರಿತ ಕ್ಷೇತ್ರ ಶಿಕ್ಷಣ ನನ್ನ ಜ್ಞಾನ ಕ್ಷಿತಿಜಗಳನ್ನು ವಿಸ್ತರಿಸಿದೆ. ಈ ಫೆಲೊಷಿಪ್ ಕನಿಷ್ಠ ಎರಡೂವರೆ ವರ್ಷಕ್ಕೆ ಏರಿಸಲ್ಪಡಲಿ.

ಸಂಪರ್ಕ: vijayalaxmidodamani1@gmail.com / +91 9538485235

*******************************************************************************************************

 ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ.

ಇದು ಸ್ಕೋಪ್-ಅರ್ಘ್ಯಂ ‘ವಾಟ್‌ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ ಯಶೋಗಾಥೆಯ ಸರಣಿಯ ೧ನೆಯ ಲೇಖನ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*