ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮನೆ ಮನೆಯಲ್ಲೂ ಮಳೆ ನೀರಿನ ಸದ್ವಿನಿಯೋಗ ಹೇಗೆ?

ಬೆಂಗಳೂರಿನ ಮಾರತ್ ಹಳ್ಳಿ ಸಮೀಪದ ಒಂದು ಬಡಾವಣೆ, ದೊಡ್ಡನೆಕ್ಕುಂದಿ. ಅಲ್ಲಿರುವ ‘ಫರ್ನ್ಸ್ ಪಾರಡೈಸ್”ನೊಳಗೊಂದು ಬೃಹತ್ ಬಂಗಲೆ. ಆ ಮನೆಯೊಡತಿ ಅನುಪಮಾ ಠಕ್ಕರ್ ನನ್ನೊಡನೆ ಹರಟುತ್ತಾ ಕೆಲಸ ಮಾಡುತ್ತಿದ್ದರು. ವಾಶಿಂಗ್ ಮಶೀನ್‌ಗೆ ಬಟ್ಟೆ ಹಾಕಿ ‘ಸ್ವಿಚ್ ಆನ್’ ಮಾಡಿ ಮಶಿನ್ ಮುಚ್ಚುವ ಮುನ್ನ ಪುಟ್ಟ ಗಂಟನ್ನು ಅದರೊಳಗೆ ಹಾಕಿದರು. ಇದೇನು IMG_20160120_152509850_HDR[1]‘ಡಿಟರ್ಜೆಂಟ್ ಪುಡಿ ಹಾಕುವದನ್ನು ಬಿಟ್ಟು ಈ ಗಂಟನ್ನು ಹಾಕುತ್ತಿದ್ದರಲ್ಲ ಎಂದು ಆಶ್ಚರ್ಯವೆನಿಸಿ ‘ಇದೇನು?’ ಎಂದೆ. ಅವರು ಗಂಟನ್ನು ತೆಗೆದು ಅದರೊಳಗಿದ್ದ ನಾಲ್ಕೈದು ಅಂಟುವಾಳದ ಕಾಯಿಯ ಸಿಪ್ಪೆಯನ್ನು ತೋರಿಸಿದರು

‘ಅದ್ಯಾಕೆ ಬಟ್ಟೆ ಒಗೆಯಲು ಇದನ್ನು ಬಳಸುತ್ತೀರಿ?’ ಕೆಲವರಿಗೆ ಡಿಟರ್ಜೆಂಟ್ ಮುಟ್ಟಿದರೆ ಕೈ ಒಡೆಯುತ್ತದಲ್ಲಾ ಅದಕ್ಕಾಗಿ ಇದನ್ನು ಉಪಯೋಗಿಸುತ್ತೀರಾ?’ ಎಂದೆ.

ಅವರ ಉತ್ತರ ಆಶ್ಚರ್ಯ ತರಿಸಿತ್ತು. ವಾಶಿಂಗ್ ಮಶೀನ್‌ನಿಂದ ಹೊರ ಹೋಗುವ ನೀರನ್ನು ಡ್ರಮ್‌ನಲ್ಲಿ ಶೇಖರಿಸಿ, ಆ ನೀರನ್ನು ಗಿಡಗಳಿಗೆ ಹಾಕುತ್ತಾರೆ. ‘ಅಂಟುವಾಳ ಕಾಯಿ ನೈಸರ್ಗಿಕವಾದುದು. ಹಾಗಾಗಿ ಅದರ ನೀರು ಗಿಡಗಳಿಗೆ ಹಾನಿಯುಂಟು ಮಾಡುವದಿಲ್ಲ. ಡಿಟರ್ಜೆಂಟ್‌ಗಳು ಗಿಡಗಳಿಗೂ ಹಾನಿ ಉಂಟು ಮಾಡುವದರ ಜೊತೆಯಲ್ಲಿ, ಭೂಮಿಯ ಫಲವತ್ತತ್ತತೆಯನ್ನೂ ಕಡಿಮೆಗೊಳಿಸುತ್ತವೆ. ಅಂಟುವಾಳ ಬಳಸುವದರಿಂದ ಎರಡು ರೀತಿಯ ಲಾಭಗಳಿವೆ. ನೀರಿನ ಸದ್ಬಳಕೆ ಒಂದೆಡೆಯಾದರೆ, ರಾಸಾಯನಿಕ ನೀರು ಭೂಮಿಯನ್ನು ಸೇರಿ ಪರಿಸರ ಹಾಳಾಗುವದನ್ನು ತಡೆಗಟ್ಟುತ್ತದೆ.’

೬.೫ ಕೆ.ಜಿ. ಬಟ್ಟೆಗಳನ್ನು ಒಗೆಯುವ ಸಾಮರ್ಥ್ಯವನ್ನು ಹೊಂದಿರುವ ವಾಶಿಂಗ್ ಮಶೀನ್‌ಗೆ ನಾಲ್ಕೈದು ಅಂಟುವಾಳ ಕಾಯಿಯ ಸಿಪ್ಪೆಯನ್ನಷ್ಟೆ ಹಾಕುತ್ತಾರೆ. ಅದು ಮುಂದಿನ ನಾಲಕ್ಕೈದು ‘ವಾಶ್’ಗಳಿಗೆ ಸಾಕಾಗುತ್ತದೆ’ ಎನ್ನುತ್ತಾರೆ.

ಪಾತ್ರೆ ತೊಳೆಯುವ ನೀರಿನ ಸದ್ಬಳಕೆಗೂ ಅವರು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಳ್ಳಿಗಳಲ್ಲಿ ಹಿತ್ತಲು ಇರುತ್ತದೆ. ಪಾತ್ರೆ ತೊಳೆಯುವ ಜಾಗದಲ್ಲಿ ನೀರು ಹರಿದು ಹೋಗಲು ಪುಟ್ಟ ಪಾತಿ ಇರುತ್ತದೆ. ಆ ಪಾತಿ ಹಿತ್ತಲಲ್ಲಿ ನೆಟ್ಟಿರುವ ಹೂವು ತರಕಾರಿ ಗಿಡಗಳನ್ನು ಸೇರುತ್ತದೆ. ಪಾತ್ರೆ ತೊಳೆಯುವ ನೀರು ಆ ಪಾತಿಯ ಮೂಲಕ ಗಿಡಗಳಿಗೆ ಹೋಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಾತ್ರೆ ತೊಳೆಯಲು ಅವರು ಉಪಯೋಗಿಸುವದು ರಾಸಾಯನಿಕ ಸೋಪನ್ನಲ್ಲ – ಕಟ್ಟಿಗೆ ಸುಟ್ಟ ನಂತರ ದೊರಕುವ ಬಿಸಿ ಬೂದಿಯನ್ನು.

IMG_20160120_153444760_HDR[1]ಹಳ್ಳಿಯ ಕಡೆಗಳಲ್ಲಿ ಹೆಚ್ಚಿನ ಮನೆಗಳಲ್ಲಿ ಬಾವಿಗಳು ಇದ್ದೇ ಇರುತ್ತವೆ.  ನೀರಿಗೆ ಕೊರತೆಯೇನೂ ಇರುವದಿಲ್ಲ. ಆದರೂ, ಅವರ ನೀರಿನ ಬಗೆಗಿನ ಮಿತವ್ಯಯದ ಕಾಳಜಿ ಮಾದರಿಯಾಗುತ್ತದೆ.

ನಗರಗಳಲ್ಲಿ ಹೆಚ್ಚಾಗಿ ಪಾತ್ರೆಗಳನ್ನು ಸಿಂಕ್‌ನಲ್ಲಿರಿಸಿ ತೊಳೆಯುತ್ತಾರೆ. ನೀರು ಸಿಂಕ್ ಪೈಪ್ ಮೂಲಕ ಹರಿದು ಹೊರ ಹೋಗುತ್ತದೆ. ಆದರೆ, ಅನುಪಮಾ ಸಿಂಕ್ ಅಡಿಯ ಪೈಪ್‌ಅನ್ನು ಬಕೆಟ್ ಒಂದರಲ್ಲಿ ಇಡುತ್ತಾರೆ. ಪಾತ್ರೆ ತೊಳೆದ ನೀರು ಅದರಲ್ಲಿ ತುಂಬಿದಾಗ, ಡ್ರಮ್‌ಗೆ ಹಾಕಿ ಶೇಖರಿಸಿಡುತ್ತಾರೆ. ಆ ನಂತರ, ಅದನ್ನು ಗಿಡಗಳಿಗೆ ಉಪಯೋಗಿಸಲಾಗುತ್ತದೆ.

ಬಕೆಟ್‌ನಲ್ಲಿ ನೀರು ತುಂಬಿ ಹರಿಯುತ್ತಿದ್ದರೂ, ಆ ಕಡೆ ಲಕ್ಷ್ಯವೇ ಇಲ್ಲದೆ, ತಮ್ಮ ಪಾಡಿಗೆ ಬಟ್ಟೆ ಒಗಿಯುತ್ತಲೋ, ಪಾತ್ರೆ ತೊಳೆಯುತ್ತಲೋ ಇರುವ ಮನೆ ಕೆಲಸದವರಿಗಂತೂ ಇದೊಂದು ಸವಾಲೇ ಸರಿ.

ಇನ್ನು, ಈ ಕುಟುಂಬ ಅಕ್ಕಿ, ತರಕಾರಿ ತೊಳೆಯುವಾಗಲೂ ನೀರನ್ನು ವ್ಯರ್ಥ ಮಾಡುವದಿಲ್ಲ. ಸಿಂಕ್ ಅಡಿಯಲ್ಲಿ ಪಾತ್ರೆ ಇಟ್ಟು ಆ ನೀರನ್ನು ಬೇರೆ ಬೇರೆ ಕೆಲಸಗಳಿಗೆ ಉಪಯೋಗಿಸುತ್ತಾರೆ.

ಗಿಡಗಳಿಗೆ ನೀರು ಹನಿಸುವಾಗಲೂ ವಿಶೇಷ ಕಾಳಜಿ ಇದೆ. ಪೈಪ್‌ನಲ್ಲಿ ಹಾಕಿದರೆ ಜಾಸ್ತಿ ಬೇಕಾಗುತ್ತದೆಂದು ‘ಮಗ್’  ‘ಜೊಟ್ಟೆ’ ಅಥವಾ ‘ಪಾಠೆ’ಯನ್ನು ಬಳಸುತ್ತಾರೆ. ಹಾಗೆ ಹಾಕಿದ ನೀರು ಗಿಡಗಳಿಂದ ಆವಿಯಾಗಿ ಹೋಗಬಾರದೆನ್ನುವದಕ್ಕಾಗಿ, ಗಿಡಗಳ ಬುಡಕ್ಕೆ ಒಣ ಹುಲ್ಲನ್ನು ಹಾಸುತ್ತಾರೆ.

ತಮ್ಮ ೨೫ ಎಕರೆ ಜಾಗವನ್ನು ವನಸಿರಿಯನ್ನಾಗಿ ಮಾಡುವ ಹಂಬಲ ಇವರಿಗೆ. ಅದಕ್ಕಾಗಿಯೇ ಎಲ್ಲಾ ವಿಧದ ಕಾಡು ಗಿಡಗಳನ್ನು ಬೆಳೆಸುತ್ತಿದ್ದಾರೆ. ಅಲ್ಲಿ ಹನಿಸುವ ನೀರು ಸಂಪೂರ್ಣವಾಗಿ ಗಿಡಗಳಿಗೇ ದಕ್ಕಬೇಕೆನ್ನುವದಕ್ಕಾಗಿ ‘ಮಂಡಗಾಲುವೆ’ಗಳನ್ನು ನಿರ್ಮಿಸಿದ್ದಾರೆ. ಅಂದರೆ, ಇಳಿಮುಖವಾಗಿ ಹರಿಯುವ ನೀರಿಗೆ ಅಣೆಕಟ್ಟೆಯಂತೆ ಅಲ್ಲಲ್ಲಿ ಕಟ್ಟೆಕಟ್ಟಿ  ನೀರನ್ನು ತಡೆ ಹಿಡಿಯುತ್ತಾರೆ. ಹಾಗೆ ನಿಂತ ನೀರಿನಿಂದ ಅಕ್ಕಪಕ್ಕದ ಗಿಡಗಳಲ್ಲಿ ತೇವಾಂಶ ಸದಾ ಇರುತ್ತದೆ. ಆ ಕಟ್ಟೆಯನ್ನೂ ತುಂಬಿ ಕೆಲವೊಮ್ಮೆ ನೀರು ಹರಿಯುತ್ತದೆ. ಅಂತಹ ಸಂದರ್ಭಗಳಲ್ಲಿ, ಆ ನೀರು ನಿಧಾನಗತಿಯಲ್ಲಿ ಗಿಡಗಳಿಗೆ ಹರಿಯುತ್ತದೆ.

ಜೀವನಾಡಿ ನೀರನ್ನು ಹೀಗೆ ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಂಡರೆ, ಮುಂದಿನ ಪೀಳಿಗೆಗೆ ನಾವು ಉತ್ತಮಕೊಡುಗೆಯನ್ನು ನೀಡಿದಂತಾಗಬಹುದು.

                                                                                                                                                                                                                                                     ಚಿತ್ರ-ಲೇಖನ: ಆಶಾ ಹೆಗಡೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*