ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೭: ‘ಅಂತರ್ಜಲ ಜೀವಾಳ’ವಾಗಿದ್ದ ಜಿಲ್ಲೆಯಲ್ಲಿ ಹನಿ ನೀರಿಗಾಗಿ ಹೋರಾಟ!

ನಮ್ಮ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಿ. ರೂಪಿಸಿದರಷ್ಟೇ ಸಾಲದು ಅದನ್ನು ಅನುಷ್ಠಾನಗೊಳಿಸಿ. ನಮ್ಮ ಕೆರೆಗಳನ್ನು ತುಂಬಿ. ನೀರಿನ ದಾಹ ಇಂಗಿಸಿ. ನಮ್ಮನ್ನು ಬದುಕಿಸಿ… ಎಂದು ಕೋಲಾರ-ಚಿಕ್ಕಬಳ್ಳಾಪುರದ ಜನರು ಅವಿರತ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸ್ ಲಾಠಿ ಏಟು ತಿಂದರೂ ತಮ್ಮ ಪ್ರತಿಭಟನೆ ಕಾವನ್ನು ಹೆಚ್ಚಿಸಿಕೊಂಡೇ ಇದ್ದಾರೆ. ಒಂದಾನೊಂದು ಕಾಲದಲ್ಲಿ ರಾಜ್ಯಕ್ಕೇ ಮಾದರಿಯಾಗಿದ್ದ ‘ಅಂತರ್ಜಲ ಜೀವಾಳ’ದ ಈ ಜಿಲ್ಲೆಗಳು ಇಂದು ನೀರಿಗಾಗಿ ಬೇಡುವ ಸ್ಥಿತಿಗೆ ಬಂದಿವೆ.

Kolar-Horataಹೌದು, ಬಯಲುಸೀಮೆ, ಅದರಲ್ಲೂ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಇಂದು ನೀರಿನ ಬವಣೆ ಹೇಳತೀರದಷ್ಟು. ತೋಟಗಾರಿಕೆ ಬೆಳೆಗಳಲ್ಲಿ ಎತ್ತಿದ ಕೈ ಎನಿಸಿರುವ ಈ ಜಿಲ್ಲೆಗಳಲ್ಲಿ ನೀರಿನ ಸೆಳವೇ ಇಲ್ಲದಷ್ಟರ ಮಟ್ಟಿಗೆ ನೀರು ಪಾತಾಳ ಸೇರಿದೆ. ಬೋರ್‌ವೆಲ್ ಇಲ್ಲಿ ಸಾವಿರಾರು ಅಡಿ ಆಳಕ್ಕಿಳಿಯುತ್ತದೆ. ಆದರೂ ಕುಡಿಯಲು ಯೋಗ್ಯ ನೀರು ಸಿಗಲ್ಲ. ಇಂತಹ ಜಿಲ್ಲೆ ಹಿಂದೆ ಒಂದಾನೊಂದು ಕಾಲ ಬೇಡ ಹಾಗೆ ಹೇಳುವುದೇ ಬೇಡ.

ಒಂದೆರಡು ದಶಕಗಳ ಹಿಂದಕ್ಕೆ ಮಾತ್ರ ಹೋಗೋಣ. ಆಗ ಈ ಜಿಲ್ಲೆ, ಅವಿಭಾಜಿತ ಕೋಲಾರ ಜಿಲ್ಲೆ ರಾಜ್ಯಕ್ಕೇ ಕೆರೆಗಳ ನಿರ್ವಹಣೆಯಲ್ಲಿ ಮಾದರಿಯಾಗಿತ್ತು. ಕೋಲಾರ ಅತಿ ಹೆಚ್ಚು ಜೀವಂತ ಕೆರೆಗಳನ್ನು ಹೊಂದಿದ್ದ ಜಿಲ್ಲೆ. ಆದರೆ ಇಂದು ಕುಡಿಯುವ ನೀರಿಗಾಗಿ ನೂರಾರು ರೀತಿಯಲ್ಲಿ ಕೋಲಾರದ ಜನ ಪರಿತಪಿಸುತ್ತಿದ್ದಾರೆ. ಏಕೆ ಗೊತ್ತೆ, ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಇದು, ಈಗ ಅತಿ ಹೆಚ್ಚು ಕೆರೆಗಳು ಒತ್ತುವರಿ ಆಗಿರುವ ಜಿಲ್ಲೆ ಎಂಬ ಕುಖ್ಯಾತಿಯೂ ಬಂದಿದೆ. ಅಂತರ್ಜಲದ ಜೀವವಾಗಿರುವ ಕೆರೆಗಳ ವಿಸ್ತಾರ ಕಡಿಮೆಯಾಗಿರುವುದರಿಂದ, ಕೋಲಾರದಲ್ಲಿ ಇಂದು ನೀರಿಗಾಗಿ ಹಾಹಾಕಾರವಿದೆ. ಕಾಲುವೆಗಳೂ ಅತಿಕ್ರಮಣಕ್ಕೆ ಒಳಗಾಗಿ ಕೆರೆಗಳೂ ಬತ್ತಿ ಹೋಗಿವೆ.

Kolar-lake-bore-Statusಈ ಒಂದಷ್ಟು ಅಂಕಿ-ಅಂಶ ಗಮನಿಸಿ: ಸಣ್ಣ ನೀರಾವರಿ ಇಲಾಖೆ ಪ್ರಕಾರ, ವಿಭಜಿತ ಕೋಲಾರ ಜಿಲ್ಲೆಯಲ್ಲಿರುವ ೧೩೮ ಕೆರೆಗಳಲ್ಲಿ, ೧೧೫ ಕೆರೆಗಳ ೧೧೫೮.೧೭ ಹೆಕ್ಟೇರ್ ಪ್ರದೇಶ ಒತ್ತುವರಿಯಾಗಿದೆ. ಅಂದರೆ, ೨೮೦೨ ಎಕರೆ. ಇದರಲ್ಲಿ ೮೪ ಕೆರೆಗಳಲ್ಲಿನ ೧೬೧೩ ಎಕರೆ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದರೂ, ಇನ್ನೂ ೧೨೦೦ ಎಕರೆ ಒತ್ತುವರಿ ಭೂಮಾಫಿಯಾದವರ ಕೈಯಲ್ಲೇ ಇದೆ. ಇದರ ನಂತರದ ಸ್ಥಾನ ಚಿಕ್ಕಬಳ್ಳಾಪುರ ಜಿಲ್ಲೆಯದ್ದು. ೨೦೨ ಕೆರೆಗಳ ಪೈಕಿ ೧೪೫ ಕೆರೆಗಳು ಒತ್ತುವರಿಯಾಗಿವೆ. ೨೪೯೬ ಎಕರೆ ಒತ್ತುವರಿಯಾಗಿದ್ದು, ೧೨೫ ಕೆರೆಗಳಲ್ಲಿನ ೧೪೭೮ ಎಕರೆ ಒತ್ತುವರಿ ತೆರವಾಗಿದೆ. ಅವಿಭಜಿತ ಕೋಲಾರ ಜಿಲ್ಲೆ ಆಧಾರದಲ್ಲಿ ಲೆಕ್ಕಾಚಾರ ಹಾಕಿದರೆ, ೫೩೦೦ ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದೆ. ಅವಿಭಜಿತ ಅಥವಾ ವಿಭಜಿತ ಹೇಗೆ ಲೆಕ್ಕ ಹಾಕಿದರೂ ಇವೆರಡು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಒತ್ತುವರಿಯಾಗಿದೆ. ಒತ್ತುವರಿ ತೆರವು ಎಂದ ಕೂಡಲೇ ಯಾರೂ ಮುಂದೆ ಬರುವುದಿಲ್ಲ. ಕೆರೆ ಒತ್ತುವರಿ ತೆರವು ಮಾಡಬೇಕಾದರೆ ಮೂಲ ಸರ್ವೆ ಕಾರ್ಯ ಆಗಬೇಕು. ಆ ಸರ್ವೆಗೆ ಇಂದು ಬಹುತೇಕರು ಒಪ್ಪುವುದಿಲ್ಲ. ನಾವು ಹತ್ತಾರು ವರ್ಷದಿಂದ ಇಲ್ಲೇ ಇದ್ದೇವೆ. ಒತ್ತುವರಿ ಹೇಗೆ? ಎಂದು ಪ್ರಶ್ನಿಸುತ್ತಾರೆ. ಒಂದು ಕೆರೆ ಒತ್ತುವರಿ ತೆರವು ಮಾಡಬೇಕಾದರೆ ಮೂಲದ್ದೇ ಸಮಸ್ಯೆ. ಇದಕ್ಕೆ ಯಾರೂ ಸಹಕರಿಸುವುದಿಲ್ಲ. ಕೆರೆ ಒತ್ತುವರಿ ತೆರವಿನಿಂದ ಜಲಮೂಲವೊಂದರ ರಕ್ಷಣೆ ಆಗುತ್ತದೆ ಎಂಬ ಕಾಳಜಿ ಹೊರಹೊಮ್ಮುವುದಿಲ್ಲ. ಕೆರೆ ಒಂದು ಉಳಿದರೆ ಅದೆಷ್ಟು ಬೋರ್‌ವೆಲ್‌ಗಳು ಮರುಪೂರಣಗೊಳ್ಳುತ್ತವೆ ಎಂಬ ಕನಿಷ್ಠ ಜ್ಞಾನವನೂ ಬೆಳೆಸಿಕೊಳ್ಳುವುದಿಲ್ಲ. ಇಂತಹ ಕನಿಷ್ಠ ಜ್ಞಾನ ಬೆಳೆಸಿಕೊಂಡು ಕೆರೆಗಳು, ಕಾಲುವೆಗಳ ಒತ್ತುವರಿ ತೆರವಿಗೆ ಸಹಕರಿಸಿದರೆ ನೀರಿಗಾಗಿ ಪರಿತಪಿಸಬೇಕಾದ ಸಂದರ್ಭ ಬಾರದಂತಾಗುತ್ತದೆ.

Kolar-lake-statusಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಎಂದು ಅಲ್ಲಿನ ಜನರು ಬೀದಿಗಿಳಿದು ನಿತ್ಯ ನಿರಂತರ ಧರಣಿ, ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕೆರೆಗಳು ಒತ್ತುವರಿಯಾಗಿವೆ, ಅದನ್ನು ತೆಗೆಯಿರಿ ಎಂದರೆ ಅವರು ಕೇಳಿಸಿಕೊಳ್ಳುವ ಸಮಾಧಾನ ಅವರಲ್ಲಿ ಇರುವುದಿಲ್ಲ ಎಂಬುದು ಸಹಜ. ‘ಮೊದಲು ನೀರು ಕೊಡಿ, ಕೆರೆ ತುಂಬಿಸಿ. ನಂತರ ಒತ್ತುವರಿ ತೆರವು ಮಾಡಿದರಾಯ್ತು’ ಎಂಬುದು ಸಹಜಭಾವ. ಇದು ಇರುವುದೂ ಸರಿಯಲ್ಲದೇನಲ್ಲ. ಆದರೆ, ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನದ ಹಾದಿಯಲ್ಲಿದ್ದಾಗಲೇ ಕೆರೆಗಳ ಒತ್ತುವರಿಯನ್ನೂ ತೆಗೆದು ನೀರು ತುಂಬಿಸುವ ಕಾರ್ಯದಲ್ಲಿ ಅದರ ಪ್ರಮಾಣ ಇನ್ನಷ್ಟು ವಿಸ್ತಾರಗೊಂಡರೆ, ಅಂತರ್ಜಲಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ. ಕೆರೆಗಳನ್ನು ಉಳಿಸುವ ಜತೆಗೆ ಮತ್ತಷ್ಟು ಕೆರೆಗಳನ್ನು ಇದೇ ಸಂದರ್ಭದಲ್ಲಿ ಸೃಷ್ಟಿಸುವತ್ತಲೂ ಯೋಜಿಸಬೇಕು. ಮುಖ್ಯವಾಗಿ ಶಾಶ್ವತ ನೀರಾವರಿ ಯೋಜನೆ ಎಂದು ಸರಕಾರ ಕೇವಲ ಕಾಗದದ ಕಡತದಲ್ಲಿ ರೂಪಿಸುವ ಬದಲು ಸ್ಥಳೀಯರನ್ನು ಒಳಗೊಂಡ ಸಮಿತಿಯ ಸಲಹೆಯಂತೇ ಮುಂದುವರಿದು, ಕಾಮಗಾರಿ ಅನುಷ್ಠಾನದ ಪ್ರಕ್ರಿಯೆಯನ್ನು ತಿಂಗಳಿಗೊಮ್ಮೆಯಾದರೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲಿಸುವಂತಾಗಬೇಕು. ಕೋಲಾರದ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಮುಖ್ಯಮಂತ್ರಿ ಚಾಲನೆಯನ್ನೇನೋ ಕೊಟ್ಟಿದ್ದಾರೆ. ಆದರೆ ಕಾಮಗಾರಿ ನಡೆಯುತ್ತಿರುವುದೆಲ್ಲಿ? ಸ್ಥಳೀಯರಿಗೆ ಯಾವ ಮಾಹಿತಿ ಇದೆ? ಎಲ್ಲವನ್ನೂ ಮುಚ್ಚಿಕೊಂಡು ಮಾಡಿದರೆ ಏನು ಪ್ರಯೋಜನ?

ಕೆರೆಗಳಿದ್ದಷ್ಟೂ ಪರಿಸರಕ್ಕೆ ಪೂರಕ. ಅಂತರ್ಜಲವನ್ನು ಇನ್ನಾವ ರೀತಿಯಲ್ಲೂ ವೃದ್ಧಿಸಲು ಸಾಧ್ಯ ಇಲ್ಲ. ದುಡ್ಡಲ್ಲ, ಪ್ರಾಣಕೊಟ್ಟರೂ ಸಿಗದು ಅಂತರ್ಜಲ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಇದು ಆತ್ಮಸಾಕ್ಷಿಗನುಗುಣವಾಗಿ ಒಪ್ಪಿಕೊಂಡು ಕಾರ್ಯಗತವಾಗಿದ್ದೇ ಆದರೆ, ಕೋಲಾರ-ಚಿಕ್ಕಬಳ್ಳಾಪುರದ ಜನರ ಆಶಯ ಈಡೇರಿದಂತಾಗುತ್ತದೆ. ನೂರಾರು ಕೆರೆಗಳು ನೀರು ಕಾಣುವಂತಾಗುತ್ತದೆ. ಅಂತರ್ಜಲ ವೃದ್ಧಿಯಾಗಿ ಕುಡಿಯುವ ನೀರು ಯೋಗ್ಯವಾಗಬಲ್ಲದು.

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*