ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನಾಟ್ಯದ ಗೆಜ್ಜೆ ಹಾಗೂ ಜಲದ ಹೆಜ್ಜೆ

ಅರಸೀಕೆರೆಯ ಜಾವಗಲ್ ಸನಿಹದ  ಮಲದೇವಿ ಹಳ್ಳಿಯಿದೆ, ಇಲ್ಲಿನ ಮರಾಠಿಗರು ಭರತನಾಟ್ಯದ ಗೆಜ್ಜೆ ತಯಾರಿಸುವದರಲ್ಲಿ ಖ್ಯಾತಿ ಪಡೆದವರು. ಪ್ರದೇಶ ಆಳಿದ ಹೊಯ್ಸಳ ಅರಸು ವಿಷ್ಣುವರ್ಧನರ ರಾಣಿ ಶಾಂತಲೆ ನಾಟ್ಯರಾಣಿಯೆಂದು ಹೆಸರಾದವಳು. ನಾಟ್ಯಲೋಕದ ವಿವರ ಕೇಳಲು ಹೋದರೆ ಇಲ್ಲಿ ನೀರಿನ ನೋವು ಕೇಳಿಸುತ್ತಿದೆ

‘ತಳಕಂಡವರಿಲ್ಲ ಎಷ್ಟು ಗುಡ್ಡ ಮುಳುಗಿದವೋ!’ ಬೆಳವಾಡಿಯ ಕೆರೆಯ ಬಗೆಗೆ ಸೀಮೆಯ ಹಿರಿಯರು ಮಾತಾಡುತ್ತ ಬಂದಿದ್ದಾರೆ.  ಕೆರೆಯಲ್ಲಿ ಭರ್ತಿ ನೀರು ತುಂಬಿರುವದರಿಂದ ಆಳ ಅರಿಯುವ ಅವಕಾಶ ಯಾರಿಗೂ ದೊರಕಿರಲಿಲ್ಲ. ಈಗ 20 ವರ್ಷ ಹಿಂದಿನವರೆಗೂ ಗುಡ್ಡ ಮುಳುಗಿದ ಕಥೆ ಕೇಳಬಹುದಿತ್ತು. ಕಳೆದ 18 ವರ್ಷಗಳಲ್ಲಿ ಬೆಳವಾಡಿ ಬದಲಾಗಿದೆ, ಕೆರೆ ನುಂಗಿದ ಗುಡ್ಡದ ಮಾತು ಮರೆತು ಹೋಗಿದೆ. ಮಳೆ ಕೊರತೆಯಿಂದ ಕೆರೆಯಂಗಳ ಸಂಪೂರ್ಣ ಖಾಲಿಯಾಗಿದೆ. ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಲೆಕ್ಕಕ್ಕೆ ಮೂರು ನಾಲ್ಕು ಮಳೆ ಸುರಿದಿದೆ. ಕೊಳವೆ ಬಾವಿ 500 ಅಡಿ ಆಳ ದಾಟಿದೆ, ನೀರು ಸಿಗುತ್ತಿಲ್ಲ. ಇದು ಬೆಳವಾಡಿ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ, ಹಳೇಬೇಡು, ಜಾವಗಲ್‍ನ ಹಲವು ಕೆರೆಗಳು ಒಣಗಿವೆ.

ತೆಂಗು ಮುಖ್ಯ ಬೆಳೆ. ರಾಗಿ, ಪುಟ್ಟೆಳ್ಳು, ಹುಚ್ಚೆಳ್ಳು, ಅವರೆ, ಹುರಳಿ,ಹತ್ತಿ, ಮೆಕ್ಕೆಜೋಳದ ಪ್ರದೇಶ. ತರಿಕೆರೆಯ ತೋಟಗಳ ಪ್ರಭಾವದಿಂದ ಅಡಿಕೆಯೂ  ಎದ್ದಿದೆ. ‘ಏಳು ಸಾರಿ ಉಕ್ಕೆ ಹೊಡೆದರೆ ಏಳಿದಂಗೆ ಕಾಯಿಬಿಡ್ತದೆ’ ತೆಂಗಿನ ತೋಟದಲ್ಲಿ ಕೃಷಿಕರ ಬೇಸಾಯ ಸೂತ್ರವಿದೆ. ಉಳುಮೆ ಮಾಡಿ ನೀರುಣಿಸಿದರೆ ತೆಂಗು ಸುಲಭದಲ್ಲಿ ಬೆಳೆಯಬಹುದು. ಬೀದರ್‍ನಲ್ಲಿ ಕಬ್ಬು ಶಾಹಿ(ರಾಜ)ಕ್ರಾಪ್ ಇದ್ದಂತೆ ಇಲ್ಲಿ ತೆಂಗಿಗೆ ರಾಜ ಬೆಳೆಯ ಪಟ್ಟವಿದೆ.  ಆದರೆ ಪರಿಸ್ಥಿತಿ ಈಗ ಅದಲು ಬದಲು,  ಜಲಕ್ಷಾಮದಿಂದ ತೆಂಗಿನ ತೋಟಗಳು ಒಣಗಿ ನಿಂತಿವೆ. ಮಳೆಯಿಲ್ಲದೇ ಮುಂಗಾರು ಬಿತ್ತನೆ ಮರೆತು ಹೋಗುವ ಹಂತ ತಲುಪಿದೆ. ಹಿಂಗಾರಿಯಲ್ಲಿ ರಾಗಿ ಜೀವ ಹಿಡಿದು ಕೊಳ್ಳುತ್ತದೆ. ರಾಗಿಯ ಗರಿ ಮೇಯಿಸಿ ದನಕರುಗಳನ್ನು ಸಲಹುವ ಬರಗಾಲದ ವಿದ್ಯೆ ಚಾಲೂ ಇದೆ. ಜಾವಗಲ್ ಮಲದೇವಿ ಹಳ್ಳಿಯಲ್ಲಿ ಭಾರದ್ವಾಜ್ ನರ್ಸರಿಯಿದೆ. ಇವರು ವರ್ಷಕ್ಕೆ 25 ಸಾವಿರ ಅಡಿಕೆ ಸಸಿ ತಯಾರಿಸಿ ಮಾರಾಟ ಮಾಡುತ್ತಿದ್ದವರು. ಈಗ ಹಳೆಯ ತೋಟ ಉಳಿಸಿಕೊಳ್ಳಲು ಹೋರಾಡಬೇಕಾಗಿದೆ. ನೀರಿನ ಸಮಸ್ಯೆಯಿಂದ ಹೊಸ ತೋಟ ನಿರ್ಮಾಣ ಸ್ಥಗಿತವಾಗಿದೆಯೆಂದು ನರ್ಸರಿ ಮಾಲಕ ಎಚ್. ಕೆ. ಮಂಜುನಾಥ ಪರಿಸ್ಥಿತಿ ವಿವರಿಸುತ್ತಾರೆ. ರೈತರು ನೀರು ಹುಡುಕುತ್ತ ಭೂಮಿಗೆ ಕನ್ನ ಕೊರೆಯುತ್ತಿದ್ದರೆ ಇತ್ತ  ತೆಂಗಿನ ತೋಟದ ಇಲಿಗಳು ಹೊಸ ಉಪಾಯ ಹುಡುಕಿವೆ. ನೀರಿಗಾಗಿ ಮರವೇರುತ್ತಿವೆ, ಬರದ ತೀವ್ರತೆ ಹೆಚ್ಚಿದಂತೆ ಇಲಿ ಉಪಟಳಕ್ಕೆ ಎಳೆ ತೆಂಗು ನೆಲಕಚ್ಚುತ್ತಿವೆ.

ಹೊಯ್ಸಳರ ನೆಲ ಇದು. ರಾಜದಾನಿ ಹಳೇಬೀಡು,ಬೇಲೂರುಗಳಂತೂ ಕೆರೆಗಳ ನಾಡು. ಕೆರೆ ನಿರ್ಮಾಣದಲ್ಲಿ ಅರಸರ ಕೊಡುಗೆ ದೊಡ್ಡದು. ವಿಶೇಷವೆಂದರೆ ಇವರಿಗೆ ಕುದುರೆ, ಆನೆ, ಮುತ್ತು ಸರಬರಾಜು ಮಾಡುತ್ತಿದ್ದ ಕೇರಳದ ವರ್ತಕರ ಕುಟುಂಬವೂ ಕೆರೆ ನಿರ್ಮಿಸಿದೆ. ಬಾಣಾವರದಲ್ಲಿ ವರ್ತಕ ಕಮ್ಮಟಶೆಟ್ಟಿ ಕೆರೆ ಕಟ್ಟಿಸಿದ್ದಾರೆ. ಹನ್ನೊಂದನೆಯ ಶತಮಾನದಲ್ಲಿ ನಿರ್ಮಾಣವಾದ ‘ಅರಸಿಕೆರೆ’ ಊರಿಗೆ ಹೆಸರು ನೀಡಿದೆ. ಕಡೂರಿನಲ್ಲಿ ವಿಷ್ಣುಸಮುದ್ರಕೆರೆ, ಮದಗದ ಕೆರೆಗಳಿವೆ. ಕಣಗಲೆಯ ಯುದ್ಧದಲ್ಲಿ ರಾಜ ವಿಷ್ಣುವರ್ಧನರ ದಂಡನಾಯಕ ಗಂಗಪ್ಪಯ್ಯ ವಿಜಯಶಾಲಿಯಾಗುತ್ತಾರೆ. ರಾಜ್ಯಕ್ಕೆ ಗೆಲುವು ತಂದ ದಂಡನಾಯಕರಲ್ಲಿ ಯಾವ ಬಹುಮಾನ ಕೊಡಲಿ ಎಂದು ವಿಷ್ಣುವರ್ಧನ ಕೇಳುತ್ತಾರೆ. ಮುತ್ತು ರತ್ನ, ವಜ್ರ, ವೈಢೂರ್ಯ, ಬಿರುದುಗಳನ್ನು ಬಯಸದ ಗಂಗಪ್ಪಯ್ಯ ಕುಲದೇವರ ದೇವಸ್ಥಾನದ ಎದುರು ಒಂದು ಕೆರೆ ನಿರ್ಮಿಸುವಂತೆ ವಿನಂತಿಸುತ್ತಾರೆ. ಕೆರೆಯ ನೀರನ್ನು ದೇವಾಲಯ ಅರ್ಚನೆಗೆ ಬಳಸುವದು, ಹೆಚ್ಚುಳಿದ ನೀರನ್ನು ಹೊಲಕ್ಕೆ ನೀಡುವದು, ಅಲ್ಲಿ ಬೆಳೆದ ಧಾನ್ಯಗಳನ್ನು ದೇಗುಲಕ್ಕೆ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡುವದಾಗಿ ವಿವರಿಸುತ್ತಾರೆ. ದೇಗುಲದ ಸನಿಹ ಒಂದು ಕೆರೆ ಕಟ್ಟುವ ಮೂಲಕ ಕೃಷಿ, ಧಾರ್ಮಿಕ ಕಾರ್ಯಗಳನ್ನು ಹೇಗೆ ನಡೆಸಬಹುದೆಂಬುದಕ್ಕೆ ಗಂಗಪ್ಪಯ್ಯರ ಕೆರೆ ನಿರ್ಮಾಣ ಮಾರ್ಗ ಮಾದರಿಯಾಗಿದೆ. ಕೆರೆಯ ಸುತ್ತ ಸಮುದಾಯದ ಬದುಕು ರೂಪಿಸುವ ತಂತ್ರಕ್ಕೆ ರಾಜ ಪರಿವಾರ ಹೆಸರಾಗಿದೆ.

ಸಣ್ಣಪುಟ್ಟ ಎಲ್ಲ ಕೆರೆಗಳನ್ನು ಲೆಕ್ಕ ಹಾಕಿದರೆ ಹಾಸನದ ದಾಖಲೆಯಲ್ಲಿ 5599 ಕೆರೆಗಳಿವೆ! ಮೈಸೂರು ರಾಜ್ಯದ ಒಟ್ಟೂ ಕೆರೆಗಳಲ್ಲಿ ಶೇಕಡಾ 80ರಷ್ಟು ಕೆರೆಗಳು ಕಡೂರು, ಹಾಸನ, ಶಿವಮೊಗ್ಗ ಹಾಗೂ ಕೋಲಾರ ಪ್ರದೇಶಗಳಲ್ಲಿವೆ. ಅದರಲ್ಲಿಯೂ ಸಿಂಹಪಾಲು ಹಾಸನದ್ದಾಗಿದೆ. ಯಗಚಿ ನದಿಯ ದಂಡೆಯ ಮೇಲೆ ಶಿಲ್ಪ ಕಲೆಗೆ ಹೆಸರಾದ ಬೇಲೂರು  ಹೊಯ್ಸಳ ಅರಸರ ರಾಜದಾನಿಯಾಗಿತ್ತು. ಇಲ್ಲಿ 10-14 ಶತಮಾನಗಳ ಸಮಯದಲ್ಲಿ ರಾಜ್ಯಭಾರ ನಡೆಸಿ ನಂತರ ಹಳೆಬೀಡಿಗೆ ರಾಜದಾನಿ ವರ್ಗಾವಣೆಯಾಗಿದೆ. 103 ವರ್ಷಗಳ ಸತತ ಪರಿಶ್ರಮದಿಂದ ರೂಪಿಸಿದ ಬೇಲೂರಿನ ಚನ್ನಕೇಶವ ದೇವಾಲಯದ ಶಿಲ್ಪಕಲೆ ಜಗತ್ತಿನ ಗಮನ ಸೆಳೆಯುತ್ತಿದೆ. ದೇವಾಲಯ ಸುತ್ತ ಕೆತ್ತಲ್ಪಟ್ಟ ದರ್ಪಣ ಸುಂದರಿ, ಶುಕಭಾಷಿಣಿ, ವಸಂತನೃತ್ಯ, ಡೋಲುನೃತ್ಯ, ನಾಟ್ಯಮೋಹಿನಿ, ಬೇಟೆಗಾರ್ತಿ ,ನಾಗವೀಣಾ ನೃತ್ಯ ಹೀಗೆ 38 ಮದನಿಕೆಗಳ(ಶಿಲಾಬಾಲಿಕೆಯರು) ಕೆತ್ತನೆಗಳನ್ನು  ಗಮನಿಸಬೇಕು. ಚಿತ್ರಲೋಕ ಕಾಲದ ಪರಿಸರ ಸಮೃದ್ಧಿಯನ್ನು ಸೆರೆ ಹಿಡಿದು ತೋರಿಸಿದೆ. ವಿಜಯನಗರ ಸಾಮ್ರಾಜ್ಯ ನೀರಾವರಿ ವ್ಯವಸ್ಥೆಗೆ ಹೆಸರಾದಂತೆ ಹೊಯ್ಸಳರು ಓಡುವ ನೀರು ಹಿಡಿದಿಟ್ಟು ಕೃಷಿ ನೆಮ್ಮದಿಗೆ ನೆರವಾಗಿದ್ದಾರೆ.

ಹೊಯ್ಸಳರ ಕೆರೆಗಳು ಸುರಿವ ಮಳೆ ನೀರು ಹಿಡಿದು ಅಂದು  ಕೃಷಿ ಬದುಕಿನ ದಾರಿಯಾದವು. ಜನರನ್ನು ಊರಲ್ಲಿ ಹಿಡಿದು ನಿಲ್ಲಿಸಿ ಬೇಸಾಯದ ಜೊತೆಗೆ  ಕಲೆ ಸಂಸ್ಕøತಿಯನ್ನೂ ಬೆಳಗಿಸಿದವು. ಈಗ ಅರಸಿಕೆರೆಯಲ್ಲಿಯೇ ನೀರು ಅರಸುವ ಸ್ಥಿತಿ ಬಂದಿದೆ. ರಾಜ್ಯ ಅಳಿದು ಕೆರೆ ಉಳಿದರೂ ನೀರಿಲ್ಲ. ಮಳೆ ಸುರಿದರೆ ಜಲ ಪಾತ್ರೆ ತುಂಬಬಹುದು. ಆದರೆ ರೈತರು ಆಗಸ ನೋಡುತ್ತ ಕುಳಿತು ಹಲವು ವರ್ಷಗಳಾದವು. ಕೆರೆ ತೆಗ್ಗಿನ ಹೊಲದ ಕೊಳವೆಬಾವಿಗಳಲ್ಲಿ ಮಾತ್ರ ಸ್ವಲ್ಪ ನೀರಿದೆ. ತೋಟ ಒಣಗಿ ಬೇಸಾಯ ಬೇಜಾರಾಗಿದೆ, ದಿನ್ನೆ ಹೊಲಗಳು ಬೀಳು ಬಿದ್ದು ರೋಜನ್ ಕಂಟಿ(ಲಂಟಾನಾ) ಆವರಿಸಿದೆ. ರೈತ ಸಂಕಟ ಹೆಚ್ಚುತ್ತಿದೆ. ಹೇಮಾವತಿಯ ನೀರು ತುಮಕೂರಿನ ಅತ್ತಿಕಟ್ಟೆ, ಅಮ್ಮನಘಟ್ಟದ ಕೆರೆಗಳನ್ನು  ತುಂಬಿದೆ. ಇಲ್ಲಿಯೂ ಬತ್ತಿದ ಕೆರೆಗಳಿಗೆ ನದಿ ನೀರು ತುಂಬುವ ಕಾರ್ಯ ನಡೆದರೆ ಮಾತ್ರ ಕೃಷಿಗೆ ಮರುಜೀವ ದೊರೆಯುವ ಸಾಧ್ಯತೆಯಿದೆ.

ಲೇಖಕರು: ಶಿವಾನಂದ ಕಳವೆ

ಮಾಹಿತಿ ಸೌಜನ್ಯ: ಭೂಮಿಗೀತ.ಕಾಮ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*