ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೬: ಬ್ಯಾಟಗುಂಟಪಾಳ್ಯ ಕೆರೆ ಸರ್ವೆಯಲ್ಲೇ ನಾಲ್ಕು ಎಕರೆ ಗುಳುಂ!

ಕೆರೆಗಳ ಒತ್ತುವರಿ ತೆರವುಗೊಳಿಸಿ ನಂತರ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು ಹೈಕೋರ್ಟ್ ಮೊದಲ್ಗೊಂಡು ಎಲ್ಲ ಆದೇಶಗಳಿದ್ದರೂ, ಅಧಿಕಾರಿಗಳು ಮಾತ್ರ ಅದಕ್ಕೆ ಸೊಪ್ಪು ಹಾಕುವುದಿಲ್ಲ. ಸಾಕಷ್ಟು ಬಾರಿ ಯಾವುದಾದರೂ ಒಂದು ಒತ್ತಡಕ್ಕೆ ಮಣಿದು ದಾಖಲೆಯಲ್ಲೇ ಕೆರೆಗಳ ವ್ಯಾಪ್ತಿಯನ್ನು ತಿರಿಚಿರುವ ಉದಾಹರಣೆಗಳೂ ಇವೆ. ಇಲ್ಲಿ ಒಂದು ಕೆರೆಯ ವಿಸ್ತೀರ್ಣದಲ್ಲೇ ೪ ಎಕರೆಯನ್ನು ಕಾಣೆಯಾಗಿಸಿದ್ದಾರೆ.

28P6C.inddಬಿಡಿಎ ತನ್ನ ಬಡಾವಣೆಗಳ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದೆ, ಇನ್ನೂ ಮಾಡುತ್ತಲೇ ಇದೆ. ಆದರೆ ಕೆರೆಗಳ ಅಭಿವೃದ್ಧಿ ಮೂಲ ದಾಖಲೆಯಂತೆ ಆಗುತ್ತಿಲ್ಲ. ಕಲ್ಯಾಣನಗರ ಬಡಾವಣೆ (ಎಚ್‌ಆರ್‌ಬಿಆರ್)ಗೆ ಸೇರಿಕೊಂಡಿರುವ ಬ್ಯಾಟಗುಂಟಪಾಳ್ಯ ಕೆರೆ (ರಾಮಸ್ವಾಮಿಪಾಳ್ಯ ಕೆರೆ) ಒತ್ತುವರಿ ಉಳಿಸಿರುವ ಕುರಿತು ಸ್ಥಳೀಯ ನಾಗರಿಕರು ಪ್ರತಿಭಟಿಸಿದರೂ, ಅವರ ಮಾತನ್ನು ಕೇಳದೆ ಬಿಡಿಎ ಎಂಜಿನಿಯರ್‌ಗಳು ನಕ್ಷೆ ತಯಾರಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕು ಕಸಬ ಹೋಬಳಿಯ ಬ್ಯಾಟಗುಂಟಪಾಳ್ಯದ ಸರ್ವೆ ನಂ. ೧೪ರಲ್ಲಿ ೬.೦೭ ಎಕರೆ ಪ್ರದೇಶದಲ್ಲಿ ಕೆರೆ ಇದೆ. ಆದರೆ, ಕೆರೆಯನ್ನು ಸಂಪೂರ್ಣ ಮುಚ್ಚಿ, ಅದನ್ನು ಎರಡು ಭಾಗವನ್ನಾಗಿ ಮಾಡಿರುವ ಬಿಡಿಎ, ಒಂದು ಭಾಗದಲ್ಲಿ ಆಟದ ಮೈದಾನ, ಇನ್ನೊಂದು ಭಾಗದಲ್ಲಿ ಉದ್ಯಾನ ನಿರ್ಮಿಸುವ ನಕ್ಷೆ ರೂಪಿಸಿದೆ. ೪೬೪೧ ಚದರ ಮೀಟರ್ (೧.೧೫ ಎಕರೆ) ಪ್ರದೇಶದಲ್ಲಿ ಆಟದ ಮೈದಾನ ಹಾಗೂ ೪೦೧೪  ಚದರ ಮೀಟರ್ (೧ ಎಕರೆ) ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಸ್ಥಳೀಯ ರಾಜಕಾರಣಿಗಳಿಂದಲೇ ಪೂಜೆ ಮಾಡಿಸಿದ್ದಾರೆ.

ಬ್ಯಾಟಗುಂಟಪಾಳ್ಯ ಕೆರೆಯ ಮುಚ್ಚಿ ಮೈದಾನ-ಉದ್ಯಾನ ಮಾಡುವುದು ಬೇಡಿ. ಕೆರೆಯನ್ನು ಸಂಪೂರ್ಣವಾಗಿ ಸಂರಕ್ಷಿಸಬೇಕು, ಅದರ ಪುನರುಜ್ಜೀವನ ಮಾಡಬೇಕು ಎಂದು ಸ್ಥಳೀಯ ಪ್ರಜ್ಞಾವಂತ ನಿವಾಸಿಗಳಾದ ಗೋಪಾಲ ರೆಡ್ಡಿ ನೇತೃತ್ವದ ೫೦ ಮಂದಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಹೋರಾಟ ನಡೆಸಿದವು. ಆ ಸಂದರ್ಭದಲ್ಲಿ ಹಾಗೇ ಮಾಡುವ ಕೆರೆಯನ್ನು ಸಂರಕ್ಷಿಸಿ, ಜನರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಬಿಡಿಎ ಅಕಾರಿಗಳು ಸಬೂಬು ಹೇಳುತ್ತಾರೆ. ೧೯೯೭ರ ಸೆಪ್ಟೆಂಬರ್ ೨೦ರಂದು ಬಿಡಿಎ ವಿವರಣೆ ನೀಡಿರುವ ಪತ್ರವೂ ಇದನ್ನೇ ಹೇಳುತ್ತದೆ. ಇಷ್ಟಾದಮೇಲೂ ಬಿಡಿಎ ಎಂಜಿನಿಯರ್‌ಗಳು ತಮ್ಮದೇ ಗುಳುಂ ನಕ್ಷೆಯನ್ನು ಮುಂದುವರಿಸಿ, ಉದ್ಯಾನ-ಆಟದ ಮೈದಾನ ನಿರ್ಮಿಸಲು ಟೆಂಡರ್ ಕರೆದಿದ್ದಾರೆ. ಬಿಬಿಎಂಪಿ ತನ್ನ ದಾಖಲೆಯಲ್ಲಿ ಈ ಕೆರೆ ಅಭಿವೃದ್ಧಿಗಾಗಿ ೨೯.೫೦ ಲಕ್ಷ ರೂ. ವೆಚ್ಚ ಮಾಡಿರುವುದಾಗಿ ಪ್ರದರ್ಶಿಸಿಕೊಳ್ಳುತ್ತದೆ. ಅದರ ಕುರುಹು ಇಲ್ಲಿ ಕಾಣುವುದಿಲ್ಲ. ಬದಲಿಗೆ, ಸರಕಾರಿ ಉದ್ಯೊಗದಲ್ಲೇ ಇರುವ ವ್ಯಕ್ತಿ ಇಲ್ಲಿ ಸ್ಥಾಪಿಸಿರುವ ದೇವಸ್ಥಾನದ ಅಂಗಳವನ್ನು ಕೆರೆಯಲ್ಲಿ ಆಗಾಗ್ಗೆ ವಿಸ್ತರಿಸುತ್ತಿದ್ದಾರೆ. ವಿಶಾಲವಾದ ಕಲ್ಲಿನ ತಡೆಗೋಡೆ ಕೆರೆಯ ಅಂಗಳದಲ್ಲೇ ಹರಡಿಕೊಳ್ಳುತ್ತಿದೆ. ಇನ್ನು ಕೊಳಕು ನೀರಿಗೆ ಆಗರವಾಗಿರುವ ಕೆರೆಯ ಪ್ರದೇಶದ ಒಳಗೇ ಮನೆಗಳಿವೆ. ಈ ಮನೆಗಳು ಚರಂಡಿ ಹಾಗೂ ಕೊಳಕು ನೀರಿನಿಂದ ಆವೃತವಾಗಿವೆ.

ಬಾಣಸವಾಡಿ ಕೆರೆ ದುಸ್ಥಿತಿ: ಇನ್ನು ಇದೇ ವ್ಯಾಪ್ತಿಯಲ್ಲಿರುವ ಬಾಣಸವಾಡಿ ಕೆರೆಯ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಎಚ್‌ಆರ್‌ಬಿಆರ್ ಮುಖ್ಯ ರಸ್ತೆಯಲ್ಲೇ ಇರುವ ಈ ಕೆರೆ, ಸರ್ವೆ ನಂ. ೨೧೧ರಲ್ಲಿ ೪೭.೩೮ ಎಕರೆ ಪ್ರದೇಶದಲ್ಲಿದೆ. ಮುಖ್ಯ ರಸ್ತೆಯಲ್ಲೇ ಇರುವುದರಿಂದ ಕಟ್ಟಡ ಸಾಮಗ್ರಿಗಳ ಸಾಗಣೆ ಮಾಡುವ ಲಾರಿಗಳಿಗೆ ಒಂದಷ್ಟು ಪ್ರದೇಶ ಮೈದಾನವಾಗಿದೆ. ಮತ್ತಷ್ಟು ಪ್ರದೇಶದಲ್ಲಿ ಅಗ್ನಿಶಾಮಕ ದಳ ಕೇಂದ್ರ ನಿರ್ಮಾಣವಾಗಿದೆ. ಜತೆಗೆ ಕೆರೆಯ ಅಂಗಳದಲ್ಲೇ ಮನೆಗಳು ನಿರ್ಮಾಣವಾಗಿರುವುದು ಎದ್ದು ಕಾಣುತ್ತದೆ. ಆದರೆ, ಈ ಕೆರೆ ಅಭಿವೃದ್ಧಿ ಪಟ್ಟಿ ಹಾಗೂ ಬಿಬಿಎಂಪಿಗೆ ಅರಣ್ಯ ಇಲಾಖೆಯಿಂದ ಹಸ್ತಾಂತರ ಮಾಡಿರುವ ಕೆರೆಗಳ ಪಟ್ಟಿಯಲ್ಲಿ ಇಲ್ಲ.

ಬಾಣಸವಾಡಿ ಕೆರೆಯ ಸುತ್ತ ಬಿಡಿಎ ಬಡಾವಣೆಯೇ ಇರುವುದರಿಂದ ಕೆರೆ ಅಷ್ಟೂ ಪ್ರದೇಶದಲ್ಲಿ ಉಳಿಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಸುತ್ತಲೂ ಕೆರೆಯನ್ನು ಕಬಳಿಸುವ ಎಲ್ಲ ಯತ್ನಗಳೂ ಆಗಿವೆ. ದೂರಕ್ಕೆ ವಿಶಾಲವಾಗಿ ಕಾಣುವ ಬಾಣಸವಾಡಿ ಕೆರೆಯ ಬಳಿ ಬಂದರೆ, ಅಲ್ಲಲ್ಲಿ ಒತ್ತುವರಿಯ ಭೂತದರ್ಶನವಾಗುತ್ತದೆ. ಇದರ ಮಧ್ಯೆ ನೀರಿನ ಸೆಲೆ ಇರುವುದರಿಂದ ಹಸಿರು ಕಂಗೊಳಿಸುತ್ತಿರುತ್ತದೆ. ಇಂತಹ ಸುಂದರ ಹಸಿರನ್ನು ಕಲ್ಮಶಯುಕ್ತಗೊಳಿಸಿ, ಅಭಿವೃದ್ಧಿಗೊಳಿಸಬೇಕಿದೆ. . ಬಿಡಿಎ ಹಾಗೂ ಬಿಬಿಎಂಪಿ ಈ ಕೆರೆ ಬಗೆಗಿನ ಮರೆಗುಳಿ ನಿರ್ಲಕ್ಷ್ಯ ಮುಂದುವರಿಸಿದರೆ, ಕೆರೆ ಅಂಗಳ ಬೆರಳೆಣಿಕೆ ಎಕರೆಗೆ ಇಳಿಯುತ್ತದೆ. ಹೀಗಾದರೆ, ಕೆರೆ ಅಭಿವೃದ್ಧಿ, ಒತ್ತುವರಿ ತೆರವು ಬಗ್ಗೆ ಮಾತನಾಡುವ ನೈತಿಕ ಹಕ್ಕು ಯಾರಿಗೂ ಇಲ್ಲವಾಗುತ್ತದೆ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*