ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಳೆ-ಇಳೆ; ಅಬ್ಬಾ! ಎಲೆಲೆ ಕೀಟ ಪ್ರಪಂಚ

ಧಾರವಾಡ: ನೀರು ಭೂ ಲೋಕದ ಅಮೃತ. ಜೀವವಿರುವ ಸಂಗತಿಗಳಿಗೆ ಜೀವದಾಯಿ. ಜಲ ಸರ್ವೋತ್ತಮ ಮತ್ತು ಜಲ ಜೀವೋತ್ತಮವೂ! ಇಡೀ ಪರಿಸರದ ಜೈವಿಕ ಮತ್ತು ಅಜೈವಿಕ ಚಕ್ರ ನೀರನ್ನೇ ಅವಲಂಬಿಸಿದೆ. ಆ ಸಂಕೀರ್ಣ ಮತ್ತು ಸೂಕ್ಷ್ಮ ಕೊಂಡಿಗಳು ನಮ್ಮ ಜ್ಞಾನಕ್ಷಿತಿಜದ ವಿಸ್ತಾರಕ್ಕೆ ನಿಲುಕದೇ ಹೋಗಿದ್ದೇ ಹೆಚ್ಚು!

ಆ ಪೈಕಿ ಋತುಮಾನದ ಮಳೆಗಳಿಗೆ ಅನುಗುಣವಾಗಿ ಜೀವ ತಳೆಯುವ ಕೀಟ ಪ್ರಪಂಚವೂ ಒಂದು.

Bag worm femaleಮಿರಗಿನ ಮಳೆ’ ಅಥವಾ ‘ಮೃಗಶಿರಾ ಮಳೆ’, ಈಗ ಉತ್ತರ ಕರ್ನಾಟಕದಾದ್ಯಂತ ತುಂತುರು ಹನಿಯಲಾರಂಭಿಸಿದೆ. ರೈತಾಪಿ ವರ್ಗದ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಭೂಮಿ ಹದವಾಗಿ, ಬಿತ್ತನೆಯೂ ಚುರುಕುಗೊಂಡಿದೆ. ಈ ಮಧ್ಯೆ ತರಹೇವಾರಿ ಕೀಟಗಳು ಜೀವತಳೆದು ಇಳೆಗೆ ‘ಕಳೆ’ ತಂದಿವೆ. ಕಳೆಯನ್ನು ಎರಡು ಅರ್ಥದಲ್ಲಿ ನಾವು ಬಳಸುತ್ತೇವೆ. ಒಂದು ಸೃಷ್ಟಿಯ ಸೌಂದರ್ಯ ಇಮ್ಮಡಿಸಿತು ಎಂಬ ಅರ್ಥದಲ್ಲಿ; ಮತ್ತೊಂದು ಕಸವಾಗಿ ಪರಿಣಮಿಸಿ, ಗೊಬ್ಬರವಾಗುವ ಮೂಲಕ ಹಸಿರು ಜಗತ್ತಿನ ಬದುಕಿಗೆ ಆಸರೆ ಎಂಬ ವಿಚಾರವಾಗಿ.

ಮುಳ್ಳಿನ ಟೋಪಿ ಕೀಟ!

ನಮ್ಮ ಮನೆಯ ಸಮೀಪ ತಾರೆ ಮರವಿದೆ. ಪ್ರತಿ ಬಾರಿಯೂ ಈ ಋತುವಿನಲ್ಲಿ ಲಕ್ಷಾಂತರ ಕಾಯಿಗಳಿಂದ ಮೈದುಂಬಿರುತ್ತದೆ. ಈ ಕಾಯಿಗಳು ಹಣ್ಣಾಗಿ ಉದುರಿದಾಗ ಆ ಹಣ್ಣುಗಳಲ್ಲಿ ಒಂದು ಸಣ್ಣ ನೀಟಾದ ರಂಧ್ರ ಬಿದ್ದಿರುತ್ತದೆ! ಅದರೊಳಗೆ ಬಾದಾಮಿಯಂತಹ ತಿರುಳಿರುತ್ತದೆ. ಮರವೇ ತೂತಿರುವ ಹಣ್ಣನ್ನು ಉದುರಿಸುತ್ತದೆ ಎಂದು ಭಾವಿಸಿದ್ದ ನನಗೆ ಆಶ್ಚರ್ಯ ಕಾಯ್ದಿತ್ತು!

BAG WORM ON PINE TREE.imageಪಕ್ಕದ ಗಿಡವೊಂದು ತನ್ನ ಎಲೆಗಳನ್ನೆಲ್ಲ ಉದುರಿಸಿಕೊಂಡು, ಕೇವಲ ಮುಳ್ಳುಗಳನ್ನು ಮಾತ್ರ ಹೊದ್ದುನಿಂತಿತ್ತು. ಸಮೀಪ ಹೋಗಿ ಗಮನಿಸುತ್ತಿದ್ದಂತೆ ಆ ಮುಳ್ಳುಗಳು ಇದ್ದ ಜಾಗೆಯಿಂದ ಕದಲಿ ಚಲಿಸಲಾರಂಭಿಸಿದವು! ಅಯ್ಯೋ.. ಮುಳ್ಳಿಗೆ ಜೀವಬಂತೇ..? ನನ್ನ ಹೃದಯವೇ ಬಾಯಿಗೆ ಬಂತು! ನೋಡಿದರೆ ಪುಟ್ಟ ಹುಳುವೊಂದು ಸರ್ಕಸ್ ಜೋಕರ್ ಟೋಪಿ ಹೊದ್ದಂತೆ ತನ್ನ ಮನೆಯನ್ನೇ ಹೊದ್ದು ನಾಲ್ಕಾರು ಹೆಜ್ಜೆ ನಡೆದು ತಟಸ್ಥವಾಗಿ ಮುಳ್ಳಿನಂತೆ ಟೊಂಗೆಗೆ ಅಂಟುತ್ತಿತ್ತು.

ಕೊಂಚಹೊತ್ತಿನ ಬಳಿಕ ಒಳಗಿನ ಆಸಾಮಿಗೆ ಸಾಕಷ್ಟು ಸೆಕೆಯಾಗಿತ್ತೆಂದು ತೋರುತ್ತದೆ. ಆ ಮುಳ್ಳು ಕೊಂಚ ಅಲುಗಾಡಿತು. ನಿಧಾನವಾಗಿ ಮುಳ್ಳಿನ ಪೀಠ ಮೇಲೆದ್ದಿತು. ಅಡಿಯಿಂದ ಒಂದು ಸಣ್ಣ ಕರಿಯ ತಲೆ ಹೊರಗೆ ಇಣುಕಿತು. ಅನಂತರ ಮೂರು ಚಿಕ್ಕ ಕಾಲುಗಳು ಹೊರಬಂದವು. ವಸ್ತುಸ್ಥಿತಿ ಅವಲೋಕಿಸಿ ಈ ಮುಳ್ಳು ಕೀಟ ಅತೀವ ಬೇಸರದಿಂದಲೇ ತನ್ನ ಮನೆಯೊಂದಿಗೆ ನೆರಳು ಹುಡುಕಿಕೊಂಡು ಪ್ರಯಾಣ ಶುರುಮಾಡಿತು!

ಚಪ್ಪಟೆ ಟೋಪಿ ಕೀಟ!

ಪಕ್ಕದಲ್ಲೇ ಮತ್ತೊಬ್ಬ ಕಂಡ! ಅವನದ್ದು ಚಪ್ಪಟೆ ಟೋಪಿ! ತಾನು ಹೊದ್ದ ಮನೆಗೆ ಅಕ್ಕಪಕ್ಕದ ಕಸವನ್ನೆಲ್ಲ ತುರುಕಿಕೊಂಡು ಬಿನ್ನಾಣದಿಂದ ಡೆದಿದ್ದ. ಅಯಸ್ಕಾಂತ ಕಬ್ಬಿಣದ ತುಣುಕು ಸೆಳೆಯುವಂತೆ ಕಸವನ್ನೆಲ್ಲ ಆರಿಸಿ ಸಿಕ್ಕಿಸಿಕೊಂಡು ಬಿರಬಿರನೇ ನಡೆದಿದ್ದ.. ಕಸ ಆರಿಸಿ ಬದುಕು ಕಟ್ಟಿಕೊಳ್ಳುವ ಗೋಸಾವಿಗಳನ್ನು ನೆನೆಪಿಗೆ ತಂದ. ಪೇರಲ ಗಿಡದಲ್ಲಿ ನೂರಾರು ಸಂಖ್ಯೆಯಲ್ಲಿ ಮನೆ ಮಾಡಿಕೊಂಡು ತೀರ ಹಣ್ಣಾದ ಪೇರಲವನ್ನು ಕೊರೆದು, ಒಳಹೊಕ್ಕು ಸಂಬಂಧಿಗಳೆಲ್ಲ ಭೂರಿ ಭೋಜನದಲ್ಲಿ ತೊಡಗಿದ್ದ ದೃಶ್ಯ ಮನ ಸೆಳೆಯುವಂತಿತ್ತು.

ಕಡ್ಡಿಯ ದೇಹದ ಕೋಲು ಹುಳು ಬೇರೆ ಅಲ್ಲಿಯೇ ಇತ್ತು. ಹೊರಗಿನಿಂದ ಗಮನಿಸಿದರೆ ಪುಟ್ಟ ಟಿಸಿಲಿಗೆ ಜೋತುಬಿದ್ದ ಒಂದು ಕಸದ ತುಣುಕು ಎನಿಸುವಂತಿತ್ತು. ಆದರೆ ಇದರ ಒಳಗೂ ಒಂದು

BAG WORM 1ಪುಟ್ಟ ಜೀವ ಇತ್ತು! ಒಣಗಿದ ಕಡ್ಡಿ ಅಥವಾ ಎಲೆಗಳನ್ನೇ ದೇಹವಾಗಿ ಹೊಂದಿದ ಚೀಲದ ಹುಳು! ಲಗಾನ್‌ನಲ್ಲಿ ಆಮೀರಖಾನ್ ಪಡೆ ಕ್ರಿಕೆಟ್ ಆಡಲು ಕಟ್ಟಿಕೊಂಡಿದ್ದ ಕಟ್ಟಿಗೆಯಿಂದ ಹೆಣೆದ ದೇಸಿ ಪ್ಯಾಡ್‌ಗಳಂತೆ! ‘ಬ್ಯಾಗ್ ವರ್ಮ್ಸ್’ ಎಂದು ಕರೆಯಲಾಗುವ ಈ ಹುಳುವಿಗೆ ಸ್ಥಳೀಯ ಭಾಷೆಯಲ್ಲಿ ಕೋಲು ಮುತ್ತ್ಯಾ ಅಥವಾ ಕೋಲು ಹುಳು ಎನ್ನಲಾಗುತ್ತದೆ.

BAG WORM MOTH CATERPILLARಹೆಣ್ಣು ಮಾಥ್ ಹುಳು ಕಡ್ಡಿಗಳಿಂದ ತಯಾರಿಸಿಕೊಳ್ಳುವ ಗೂಡು ತುಂಬ ವಿಶೇಷ ಮತ್ತು ಆಕರ್ಷಣೀಯ. ಲೆಪಿಡೊಪೆಟ್ರಾ (lepidopetra) ಕುಟುಂಬಕ್ಕೆ ಸೇರಿದ ಒಂದು ಮಾಥ್ (ಚಿಟ್ಟೆ ಕೀಟ). ಆದರೆ, ಹೆಣ್ಣು ಕೀಟಗಳಿಗೆ ಚಿಟ್ಟೆಗಳಂತೆ ರೆಕ್ಕೆ ಬರುವುದಿಲ್ಲ. ಗಂಡು ಕೀಟ ಹಾರಬಲ್ಲದು. ನೋಡಲು ಥೇಟ್ ಚಿಟ್ಟೆಯನ್ನೇ ಹೋಲುತ್ತದೆ. ಸದಾ ಹಸುರಾಗಿರುವ ಮರಕ್ಕೆ ಜೋತು ಬಿದ್ದು ಜೀವನ ಸಾಗಿಸುವ ಪರಿ ಅಯೋಮಯ!

ಹೊರ ಪ್ರಪಂಚಕ್ಕೆ ಕಾಣದ ಕೀಟ!

ತನ್ನ ಗೂಡಿನ ಒಳಗೆ ಲಾರ್ವಾ ರೂಪದಲ್ಲಿ ಮಾಥ್ ವಾಸವಾಗಿರುತ್ತದೆ. ಇದರ ದೇಹ ಮಾತ್ರ ಹೊರ ಜಗತ್ತಿಗೆ ಕಾಣಿಸುವುದಿಲ್ಲ! ನಿರ್ಜೀವ ಕಸಕಡ್ಡಿಗಳಿಂದಲೇ ಇದನ್ನು ಗೂಡು ಮೂಲಕ ಗುರುತಿಸಬೇಕು. ಈ ಕವಚವೇ ಸುರಕ್ಷಾ ಚಕ್ರ!

ಕಾಡಂಚಿನ ತೋಟಗಳಲ್ಲಿ ಇವುಗಳ ಸಂಖ್ಯೆ ಭರಪೂರ. ಒಣಗಿದ ಎಲೆ ಅಥವಾ ಕಡ್ಡಿಗಳನ್ನು ಬಳಸಿ ತನ್ನ ಮೈಗೆ ತಾಗಿಕೊಂಡೇ ಅಂಟಿನ ಸಹಾಯದಿಂದ ಗೂಡು ನಿರ್ಮಿಸುವ ಚಾಕಚಕ್ಯತೆ ಇರುವುದು ಹೆಣ್ಣು ಮಾಥ್ ಕೀಟಗಳಿಗೆ ಮಾತ್ರ! ಈ ಕೀಟದ ಜೀವನ ಚಕ್ರ ತುಸು ಭಿನ್ನ ಮತ್ತು ಕುತೂಹಲಕಾರಿ. ಲಾರ್ವಾ, ಹುಳದ ರೂಪದಲ್ಲಿ ಗೂಡೊಳಗೆ ಇದ್ದುಕೊಂಡು ಬೆಳೆಯುತ್ತದೆ. ಗೂಡನ್ನು ಬಿಟ್ಟು ಹೊರಗೆ ಬಾರದೇ ಸ್ವಯಂ ಬಂಧನಕ್ಕೆ ಒಳಪಟ್ಟಂತೆ ಜೀವನಯಾಪನ! ಸುಮಾರು ಒಂದರಿಂದ ಎರಡು ಇಂಚಿನಷ್ಟು ಉದ್ದವಾದ ಕಡ್ಡಿಯ ಮನೆ.

ಹೆಣ್ಣು ಹುಳು ಪರಾವಲಂಬಿ

ತಾನಿರುವ ಗಿಡಕ್ಕೆ ಸಂಪೂರ್ಣ ಅವಲಂಬಿ ಹೆಣ್ಣು ಹುಳು. ಆಹಾರ ಅಲಭ್ಯವಾದಾಗ ಮಾತ್ರ ಒಂದು ಟೊಂಗೆಯಿಂದ ಮತ್ತೊಂದು ಟೊಂಗೆಗೆ, ಕೊನೆಗೆ ಪಕ್ಕದ ಗಿಡಕ್ಕೆ ವರ್ಗಾವಣೆಯಾಗುತ್ತವೆ.
??????????????????????????????? 
ಆಹಾರವನ್ನು ಪಡೆಯುವ ಸಲುವಾಗಿ ಗೂಡಿನ ಒಂದು ಬದಿಗೆ ರಂಧ್ರವಿರುವುದು ವಿಶೇಷ. ಕೆಲ ಸಸ್ಯಗಳಿಗೆ ಇದು ಮಾರಕವಾದ ಅಂಶವೂ ದಾಖಲಿದೆ. ನಮ್ಮ ದೇಶದಲ್ಲಿ ಈ ಚೀಲದಂತಹ ಹುಳುಗಳ ಉಪಟಳ ಅಷ್ಟಾಗಿ ಇಲ್ಲ. ಆದರೆ, ಕೆಲ ಪಾಶ್ಚಾತ್ಯ ದೇಶಗಳಲ್ಲಿ ಈ ವರ್ಗಕ್ಕೆ ಸೇರಿದ ಕೀಟಗಳು ಉಪಟಳ ನೀಡುವಷ್ಟು ಸಂಖ್ಯೆಯಲ್ಲಿವೆ. ವಿಶೇಷವೆಂದರೆ, ಭರ್ಜರಿ ಮಳೆಯಾದರೆ ಈ ಕೀಟಗಳ ಉಪಟಳ ಕಮ್ಮಿ; ಕಡಿಮೆ ಮಳೆಯಾದರೆ ಹೆಚ್ಚು!

ಗೂಡಿನಲ್ಲೇ ಜೀವನ; ಅಲ್ಲೇ ಮರಣ!

ಹೆಣ್ಣು ಹುಳುಗಳ ಸಂತಾನಾಭಿವೃದ್ಧಿ ಕ್ರಿಯೆ ಕೂಡಾ ಗೂಡಿನ ರಂಧ್ರದ ಮೂಲಕವೇ. ಪ್ರೌಢಾವಸ್ಥೆಗೆ ತಲುಪಿದ ಗಂಡುಹುಳುಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತವೆ. ರಂಧ್ರದ ಮೂಲಕ ಗಂಡು ಕೀಟ ಪಸರಿಸುವ ನೂರಾರು ಬೀಜಾಣುಗಳನ್ನು ಗುಡಿನಲ್ಲಿರುವ ಹೆಣ್ಣು ಪಡೆದುಕೊಳ್ಳುತ್ತದೆ. ಗರ್ಭಧಾರಣೆ ಆಗಿ ಮೊಟ್ಟೆಗಳನ್ನು ಹೊರುವ ಕೀಟ ತನ್ನಷ್ಟಕ್ಕೇ ಮುದುಡಿ ಸಾವನ್ನಪ್ಪುತ್ತದೆ. ಲಾರ್ವಾಗಳ ಕೋಶದ ಬೆಳವಣಿಗೆ ತುಂಬ ನಿಧಾನ. ತಾಯಿ ಕೀಟದ ಮರಣಾನಂತರ ಅನೇಕ ತಿಂಗಳು ಕಳೆದು ಮೊಟ್ಟೆ ಗಾತ್ರ ಹಿಗ್ಗಿಸಿಕೊಂಡು ಮರಿ ಕೀಟ ಜನ್ಮ ತಳೆಯುತ್ತದೆ. ಗಂಡು ಕೀಟಗಳು ರೆಕ್ಕೆ ಮೂಡಿ ಹಸಿರು ಎಲೆಗಳ ಹರಿತ್ತನ್ನು ತಿಂದು ದೊಡ್ಡವಾಗುತ್ತವೆ. ಹೆಣ್ಣು ಲಾರ್ವಾ ಹುಳುಗಳು ಗಾಳಿಯಲ್ಲಿ ತೇಲಿ, ನೀರಿನ ಮೂಲಕ ಹರಿದು ಗಿಡ-ಮರಗಳ ಮೇಲೆ ಬಂದು ಅಂಟಿಕೊಳ್ಳುತ್ತವೆ. ಮತ್ತೆ ಈ ಜೀವನ ಚಕ್ರ ಕೋಲು ಮನೆ ಕಟ್ಟಿಕೊಳ್ಳುವ ಮೂಲಕ ಪುನರಾವರ್ತಿಯಾಗುತ್ತದೆ!

ಮಳೆಗಾಲ ಬಂದಾಗಲೊಮ್ಮೆ ಕ್ಷಿತಿ ಗರ್ಭ ಧರಿಸುತ್ತಾಳೆ. ಇಂತಹ ಅಸಂಖ್ಯ ಕೀಟಗಳು ಉಳುವ ಯೋಗಿಗಳಾಗುತ್ತಾರೆ! ಸತತ ಕೃಷಿಗೆ ಪ್ರಕೃತಿ ಅಣಿಯಾಗುತ್ತದೆ.

ಲೇಖನ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*