logo

ಎಲ್ಲರೂ ಈಗ ನೀರಿನಿಂದಲೇ ಮಾತು ಆರಂಭಿಸುತ್ತಾರೆ, ಜಲ ಸಂಕಟ ವಿವರಿಸಲು ಮುಂದಾಗುತ್ತಾರೆ. ನೀರು ಭೂಮಿಯಲ್ಲಿ ಬೇಕಾದಷ್ಟಿದೆಯೆಂದು ನಂಬಿ ಬಳಕೆ ವಿಸ್ತರಿಸಿದ ಪರಿಣಾಮ ನಮ್ಮದುರಿದೆ. ಮಳೆ ಕಡಿಮೆಯಾಗಿದೆ, ಕೆರೆಗಳು ಕಣ್ಮರೆಯಾಗಿವೆ. ಬ್ಯಾಂಕಿನಲ್ಲಿ ಹಣ ಠೇವಣಿಯಿಡದೇ ದಿನವೂ ಸಾಲ ಬೇಡುತ್ತಿದ್ದರೆ ಏನಾದೀತು? ಒಡ್ಡುಕಟ್ಟುವದು, ಕೆರೆ ಹೂಳು ತೆಗೆಯುವದು, ಕಾಡು ಉಳಿಸುವದನ್ನು ಕೈಬಿಟ್ಟೆವು. ಗ್ರಾಮದ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮರೆತ ಫಲವಾಗಿ ಜಲಕ್ಷಾಮ ಅನುಭವಿಸುತ್ತಿದ್ದೇವೆ. ಕೊಳವೆ ಬಾವಿಯ ಆಳ ಹೆಚ್ಚಿಸುತ್ತ, ವಾಣಿಜ್ಯ ಬೆಳೆಗಳ ಹಿಂದೆ ಓಡುತ್ತ ನೆಲ ಜಲ ಸಂರಕ್ಷಣೆಯ ಸೂತ್ರ ಹದತಪ್ಪಿದೆ.

ಜಲಸಂರಕ್ಷಣೆ ಸಮಸ್ಯೆ ಇರುವದು ಮಾಹಿತಿ, ತಾಂತ್ರಿಕತೆಯಲ್ಲಲ್ಲ. ಸ್ವತಃ ಮಣ್ಣಿಗಿಳಿದು ಕಾರ್ಯನಿರ್ವಹಿಸುವದರಲ್ಲಿ ! ನೀರಿನ ಬಗ್ಗೆ ಎರಡು ತಾಸು ಮಾತಾಡಬಹುದು, ಕೇಳುವವರಿದ್ದರೆ ದಿನವಿಡೀ ಭಾಷಣ ಹೊಡೆಯಬಹುದು. ಒಂದು ಕೆರೆ, ಒಡ್ಡು ನಿರ್ಮಿಸಲು ಸ್ವತಃ ಹೊರಟರೆ ನಮ್ಮ ಇತಿಮಿತಿ ತಿಳಿಯುತ್ತದೆ, ನಿರ್ಮಾಣ ಕಷ್ಟದ ಅರಿವಾಗುತ್ತದೆ. ಟೀಕಿಸುವವರು, ಹಣ ಹೊಡೆಯುವ ತಂತ್ರವೆಂದು ಬೊಬ್ಬೆಹೊಡೆಯುವವರು ಗ್ರಾಮ ಬೀದಿಯಲ್ಲಿ ಕಾಣಿಸುವಷ್ಟು ದೊಡ್ಡ ಸಂಖ್ಯೆಯಲ್ಲಿ ಕೈಜೋಡಿಸುವವರು ಸಿಗುವದಿಲ್ಲ. ಮಾತಿನ ಮಂಟಪ ಹೇಗಿದೆಯೆಂದರೆ ಜೀವನದಲ್ಲಿ ಒಂದು ಕೆರೆ ನಿರ್ಮಿಸದವರೂ ದೊಡ್ಡ ದೊಡ್ಡ ಸಲಹೆ ನೀಡಬಹುದು. ಕೆಲಸಕ್ಕೆ ಸಮಯ ನೀಡಲು ಬಿಡುವಿಲ್ಲ. ಟೀಕೆ, ವಿಡಂಬನೆ, ಆರೋಪಗಳ ಬಿರುಗಾಳಿ ಎದುರಿಸುವಷ್ಟರಲ್ಲಿ ಎಂಥ ಕಾರ್ಯಕರ್ತನಿಗೂ ರಚನಾತ್ಮಕ ಕಾರ್ಯದ ಉತ್ಸಾಹವೇ ಮಾಯವಾಗುವ ಅಪಾಯವಿದೆ. ಇಂದಿನ ಗ್ರಾಮೀಣ ಜೀವನದಲ್ಲಿ ಸಾರ್ವಜನಿಕ ಕೆಲಸವೆಂದರೆ ಕಾಸಿ ಕುಣಿಯುವದೆಂಬ ಅಭಿಪ್ರಾಯವಿದೆ. ನಮ್ಮ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಗಳು, ಅಧಿಕಾರಶಾಹೀ ವರ್ತನೆಗಳು, ಚುನಾವಣೆಗಳು ಇಂಥ ಕಹಿ ಚಿತ್ರಗಳನ್ನು ಸತತ ಬಿತ್ತರಿಸುತ್ತಿವೆ. ಊರಿನ ಕೆರೆಗಾಗಿ ಹಣ ತರುವದು, ಸಮರ್ಥವಾಗಿ ಕಾರ್ಯನಿರ್ವಹಿಸುವದು ಸವಾಲು. ನೀರು ಹಿಡಿದು ಬದಲಾವಣೆ ಘಟಿಸಿದಂತೆ ಟೀಕಿಸುವ ಜನಗಳೂ ನಿಧಾನಕ್ಕೆ ಬದಲಾಗಬಹುದು, ಎಲ್ಲವನ್ನೂ ಎದುರಿಸಿ ಕಾರ್ಯನಿರ್ವಹಿಸಲು ನಮಗೆ ಸಂಯಮ ಬೇಕು.

logoರಾಜ್ಯದ ಹಳ್ಳಿಗಾಡು ಸುತ್ತಾಡುತ್ತ ನೀರಿನ ಕತೆ ಅರಿಯುತ್ತ ಹೋದರೆ ಜಲಕ್ಷಾಮಕ್ಕೆ ಮಳೆ ಪರಿವರ್ತನೆಗಿಂತ ಜನ ಮನದ ಬದಲಾವಣೆಯೂ ಕಾರಣವೆನಿಸುತ್ತಿದೆ. ಹಿರಿಯರಿಗಿದ್ದ ಹಳ್ಳಿ ಕಟ್ಟುವ ಉತ್ಸಾಹ ಇಂದಿನ ತಲೆಮಾರಿಗಿಲ್ಲ. ಊರಿನ ಕೆರೆಯನ್ನು ಕಣ್ಣೆತ್ತಿ ನೋಡದ ನಾವು ಹೊಲದಲ್ಲಿ ಹತ್ತಾರು ಕೊಳವೆಬಾವಿ ತೆಗೆಸಲು ನಗರಕ್ಕೆ ಓಡುತ್ತೇವೆ. ಕೃಷಿ, ನೀರಾವರಿಯಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನ ಬಂದರೂ ನಮಗೆ ನಮ್ಮ ಊರಿನ ಮಳೆನೀರಿನ ಜ್ಞಾನವೂ ಬೇಕು. ಕೆರೆ ಕಾಲುವೆ ಒತ್ತುವರಿ ಮಾಡುತ್ತ, ನೀರು ಹೆಚ್ಚು ಬಳಸುವ ಬೆಳೆ ಬೆಳೆಯುತ್ತ ಊರಿನ ಪರಿಸರಕ್ಕೆ ಹೊಸದಾದ ಕೃಷಿ ರೂಪಿಸುತ್ತ ಇಂದು ‘ಜಲಮಾರಿ ಬೇನೆ’ ಸಾಂಕ್ರಾಮಿಕವಾಗಿದೆ. ನದಿಯಲ್ಲಿ ಬದುಕುವ ಮೀನನ್ನು ಎತ್ತಿ ಕಾರೆಕಂಟಿಯ ಗುಡ್ಡದಲ್ಲಿ ಬೆಳೆಸಲು ಹೋದರೆ ಏನಾದೀತು? ನಗಬೇಡಿ, ಅನೇಕರು ಇದನ್ನೇ ಮಾಡುತ್ತಿದ್ದೇವೆ. ನಮ್ಮ ಮಣ್ಣು, ಪರಿಸರದ ಮಿತಿ ಅರಿಯದ ವರ್ತನೆಗೆ ನೀರು ಮಾಯದ ಗಾಯಮಾಡಿದೆ. ನಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳದೇ ಬದುಕು ಸಮರಕ್ಕೆ ಸಿಲುಕಿದೆ. ಅಕ್ಕಪಕ್ಕದ ಮನೆ, ಊರು, ಕೇರಿ, ಹಳ್ಳಿ,ನಗರ, ಜಿಲ್ಲೆ ಎನ್ನುತ್ತ ನೀರಿನ ಜಗಳವನ್ನು ದೇಶವ್ಯಾಪಿ ವಿಸ್ತರಿಸಿದ್ದೇವೆ. ಊರಿನ ಜಲಮೂಲ ಸಂರಕ್ಷಣೆಗೆ ಮೊದಲ ಹೆಜ್ಜೆಯಿಡುವದು ಮರೆತು ಜಲ ಜಗಳಕ್ಕೆ ಕಾನೂನು, ಹೊಸ ಪದ, ತಂತ್ರ ಹುಡುಕುತ್ತ ಕೂತಿದ್ದೇವೆ.

ಜನಸಂಖ್ಯೆ ಹೆಚ್ಚುತ್ತಿದೆ, ನೀರಿನ ಕೊರತೆ ಬೆಳೆಯುತ್ತಿದೆ. ಅಜ್ಜಮುತ್ತಜ್ಜರ ಕಾಲದಲ್ಲಿ ನೀರು ಕಡಿಮೆ ಬಳಸಿ ಬೆಳೆಯುವ ರಾಗಿ, ನವಣೆ, ಸಜ್ಜೆ, ಕೊರಲೆ ಬೆಳೆಗಳಿದ್ದವು. ಹಲವು ಬರ ಅನುಭವಿಸಿದ ಅವರಿಗೆ ಬದುಕಿನ ಅರಿವಿತ್ತು. ವಿದ್ಯೆ ಕಲಿತಿದ್ದೇವೆ, ಕೃಷಿಯ ಹೊಸ ಪಾಠ ಓದಿದ್ದೇವೆ, ಆದರೆ ಜಲಸಾಕ್ಷರತೆಯ ಪ್ರಾಥಮಿಕ ಅರಿವು ನಾವು ಪಡೆದಿಲ್ಲ. ನೀರಿಲ್ಲದಾಗ ಕಂಗಾಲಾಗುವ ಅಗತ್ಯವಿಲ್ಲ, ಇಂದು ಎಲ್ಲ ಪ್ರದೇಶಗಳಲ್ಲಿ ಸಂರಕ್ಷಣೆಯ ಬೆಳಕಿಂಡಿಗಳಂತೆ ಬದುಕಿದ ಸಾಧಕರಿದ್ದಾರೆ. ಬಿದ್ದ ಹನಿಯನ್ನು ಬಿದ್ದಲ್ಲಿ ಹಿಡಿದು ಕೊಳವೆಬಾವಿಗೆ ರಜೆ ನೀಡಿದ ನೆನಮನಹಳ್ಳಿಯ ಚಂದ್ರಶೇಖರ, ರಾಂಪುರದ ಅಶೋಕ, ಪಾಲೂರಹಳ್ಳಿಯ ಹನುಮಂತರೆಡ್ಡಿ ಮುಂತಾದವರು ಕೊಳವೆ ಬಾವಿಯ ಆಳ  1980 ಅಡಿ ತಲುಪಿದ ಕೋಲಾರದಲ್ಲಿಯೇ ಸಿಗುತ್ತಾರೆ. ಬರದಲ್ಲಿ ಬದುಕಿದ ಸಾಧಕರ ನೂರಾರು ಜನರ ಪಟ್ಟಿ ನೀಡಬಹುದು. ಇವರ ಅನುಭವವನ್ನು ಪಕ್ಕದ ಹೊಲಕ್ಕೆ ತಲುಪಿಸುವದು, ಅಳವಡಿಸಲು ಹುರಿದುಂಬಿಸುವದು ಇಂದಿನ ವಿಚಿತ್ರ ಸವಾಲಾಗಿದೆ. ನೆಲ ಜಲ ಸಂರಕ್ಷಣೆಯ ಒಳ್ಳೆಯ ಅಂಶಗಳನ್ನು ನೆರೆಹೊರೆಯ ಯಶೋಗಾಥೆಗಳಿಂದ ಕಲಿಯದಿದ್ದರೆ ನಮ್ಮ ಬದುಕು ಬದಲಿಸಲು ಯಾರೂ ಬರುವದಿಲ್ಲ. ಜಲ ಸಂರಕ್ಷಣೆಯ ಸಣ್ಣಪುಟ್ಟ ಮಾದರಿಗಳಿಂದ ಕಲಿಯಬಹುದಾದ ಪಾಠ ದೊಡ್ಡದಿದೆ. ಹೊಲಕ್ಕೆ ಒಡೆತನದ ಗಡಿ ಇರುವಂತೆ ಕೃಷಿಕರ ಮನಸ್ಸು ಮನಸ್ಸುಗಳ ನಡುವೆ ಕಲ್ಲಿನ ಗೋಡೆಗಳಿವೆ. ಗೋಡೆಗಳನ್ನು ಒಡೆದುರುಳಿಸಿ ಹೊಲದಲ್ಲಿ ಬಿದ್ದ ಹನಿಯನ್ನು ಹೊಲದಲ್ಲಿ ಉಳಿಸುವ ಸಮುದಾಯದ ಒಡ್ಡುಗಳನ್ನು ರೂಪಿಸುವ ಮನಸ್ಸು ಮಾಡಿದರಷ್ಟೇ ನೀರಿನ ನೆಮ್ಮದಿ ಸಾಧ್ಯವಿದೆ. ನೀರಿನ ವಿಚಾರದಲ್ಲಿ ಸ್ವಾರ್ಥಿಗಳಾಗಬೇಕು, ಹೊಲದ ನೀರು, ಹಳ್ಳಿಯ ನೀರನ್ನು ಭೂಮಿಯಲ್ಲಿ ಹಿಡಿದಿಡಲು ಕೆರೆ-ಕಾಡು ಬೆಳೆಸುವ ತಂತ್ರ ಅನುಸರಿಸಬೇಕು. ನೀರು ಮಾರಿಯನ್ನು  ಓಡಿಸಲು ನಮಗಿರುವ ಅವಕಾಶ ಇದೊಂದೇ!

ಲೇಖಕರು: ಶಿವಾನಂದ ಕಳವೆ

ಮಾಹಿತಿ ಸೌಜನ್ಯ: http://bhoomigeetha.com