ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಳೆಯ ನೀರಿಗೆ ಕೆರೆಯ ದಾರಿ – ತಲೆಯಲ್ಲಿ ಹೂಳು

ಪುಟಾಣಿ ಮಕ್ಕಳಿಂದ ಆರಂಭಿಸಿ ನಾಡಿನ ಎಲ್ಲರಲ್ಲಿ ಜಲ ಸಂರಕ್ಷಣೆಯ ಜಾಗೃತಿ ಅಗತ್ಯವಿದೆ. ನಲ್ಲಿಯಲ್ಲಿ ನೀರಿಲ್ಲದಾಗ, ಕೆರೆ ಒಣಗಿದಾಗ ಬೊಬ್ಬೆ ಹೊಡೆಯುವದಕ್ಕಿಂತ, ಜಲಸಾಕ್ಷರತೆ ಮೂಡಿಸಿ ನೀರ ನೆಮ್ಮದಿಯ ದಾರಿ ಅನುಸರಿಸಬೇಕಾಗಿದೆ. ಬನ್ನಿ, ಕೆರೆಯ ಹೂಳಿನಂತೆ ಸ್ವಲ್ಪ ತಲೆಯ ಹೂಳು ತೆಗೆಯೋಣ

ಚಿನ್ನಾಪುರದ ಕೆರೆಯಲ್ಲಿ ಚಿನ್ನದ ರಥ ಹೂತು ಹೋಗಿದೆಯೆಂದು ಪ್ರತೀತಿಯಿದೆ. ಹತ್ತು ವರ್ಷ ಹಿಂದೆ ಕೆರೆಯ ಹೂಳು ತೆಗೆಯುವ ಕೆಲಸ ನಡೆಯುತ್ತಿತ್ತು. ಕೂಲಿಕಾರರ ಯಾವ ಸಲಕೆ ಹೊಡೆತಕ್ಕೆ ಹುಗಿದ ರಥ ಸಿಗಬಹುದು? ರಥ ಎಷ್ಟು ಕ್ವಿಂಟಾಲ್ ತೂಗಬಹುದು? ಜನಪದರ ಕತೆ ನಂಬಿದವರು ಮಾತಾಡುತ್ತಿದ್ದರು. ಕೆರೆಯಲ್ಲಿ ಚಿನ್ನದ ರಥ ಹೂತು ಹೋಗಿದ್ದು ನಿಜವೋ? ಕಟ್ಟುಕತೆಯೋ!? ಕೆರೆ, ಕಟ್ಟೆಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದರಿಂದ ಬಂಗಾರದಂಥ ಕೃಷಿ ಭೂಮಿ ಒಣಗುತ್ತಿರುವದಂತೂ ಸತ್ಯ. ಊರಿಗೊಂದು ಕೆರೆ, ಕೆರೆಗೊಂದು ಚೆಂದದ ಕತೆ….ರಾಜ್ಯದ ಯಾವ ಪ್ರದೇಶಕ್ಕೆ ಹೋದರೂ ಇಂಥ ಸ್ವಾರಸ್ಯಕರ ಸಂಗತಿಗಳು ಸಿಗುತ್ತವೆ. ತುಂಗಭದ್ರಾ ನದಿಯ ಉಪನದಿಯಾದ ಕುಮುದ್ವತಿಗೆ 16ನೆಯ ಶತಮಾನದಲ್ಲಿ ಕಟ್ಟಿದ ಮದಗದ ಕೆರೆಯಲ್ಲಿ ಒಂದು ಗುಡಿಯಿದೆ. ಕೆರೆ ಕಟ್ಟಿಸಿದ ಊರ ಗೌಡರು ನೀರು ಬರದಿದ್ದಾಗ ದುಃಖಿತರಾಗುತ್ತಾರೆ. ಅವರ ಕಿರಿ ಸೊಸೆ ಕೆರೆಗಾಗಿ ಜೀವತ್ಯಾಗ ಮಾಡುತ್ತಾಳೆ. ಕೆರೆ ನಿರ್ಮಿಸಿ, ಗುಡಿ ರೂಪಿಸಿ, ಅದರ ಸುತ್ತ ಸಾವಿರ ವರ್ಷವೂ ಮರೆಯಲಾರದ ಹೃದಯ ತಟ್ಟುವ ಘಟನೆಗಳ ಸಾಕ್ಷ್ಯ ಇಟ್ಟಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಹೆಣ್ಮಗಳ ತ್ಯಾಗದ ಪಾಠ ಬಿತ್ತರವಾಗುತ್ತಿದೆ.

ರಾಜ್ಯದ ಅತ್ಯಂತ ಪುರಾತನ ಕೆರೆಗಳಲ್ಲಿ ಕದಂಬರ ‘ಗುಡ್ಡ ತಟಾಕ’ ಮೊದಲ ಸಾಲಿನಲ್ಲಿ ನಿಲ್ಲುತ್ತವೆ. ಗುಡ್ಡದ ತುದಿಯಿಂದ ಕಣಿವೆಯಲ್ಲಿ ಹರಿಯುವ ನೀರಿಗೆ ಅರ್ಧ ವೃತ್ತಾಕಾರದಲ್ಲಿ ಮಣ್ಣಿನ ಕಟ್ಟೆ ಕಟ್ಟುವ ಸರಳ ವಿದ್ಯೆಯಿದು. ಕಬ್ಬಿಣ, ಕಾಂಕ್ರೀಟ್ ಯುಗದ ನಮಗೆ ಮಣ್ಣಿನ ಕೆರೆದಂಡೆಯ ತಾಕತ್ತಿನ ಬಗೆಗೆ ಅನುಮಾನ ಸಹಜ. ತಂತ್ರಜ್ಞರಂತೂ ಕಣಿವೆಯಲ್ಲಿ ಹೊಸ ಕೆರೆ ನಿರ್ಮಿಸಿದ ಬಳಿಕ ಅದು ಐವತ್ತು ವರ್ಷ ಮಾತ್ರ ಬಾಳಿಕೆ ಬರಬಹುದೆನ್ನುತ್ತಾರೆ. ಶಿಕಾರಿಪುರದ ತಾಳಗುಂದದಲ್ಲಿ ಪ್ರಣವೇಶ್ವರ ಗುಡಿಯಿದೆ. ಅಲ್ಲಿ ಕಾಕುತ್ಸ್ಥವರ್ಮನ ಶಾಸನವಿದೆ. ಗುಡಿ ನಿರ್ಮಿಸಿ ಅದರ ಪಕ್ಕದಲ್ಲಿ ಕೆರೆ ನಿರ್ಮಿಸಲಾಗಿದೆಯೆಂದು ಬರೆಯಲಾಗಿದೆ.  1700 ವರ್ಷಗಳ ಹಿಂದೆ ಕದಂಬರ ಕಾಲದ ಗುಡಿ ಪಕ್ಕದ ‘ಗುಡ್ಡತಟಾಕ’ ಈಗಲೂ ಚೆನ್ನಾಗಿದೆ. ಬೇಸಿಗೆ ಬತ್ತದ ಬೆಳೆಗೆ ನೀರು ನೀಡುತ್ತಿದೆ! ಕಲ್ಯಾಣ ಚಾಲುಕ್ಯರ ಕಾಲ(973-1336)ವನ್ನು  ಕೆರೆಗಳ ಸ್ವರ್ಣಯುಗವೆಂದು ಗುರುತಿಸಿದ ನೆಲ ನಮ್ಮದು. ಅಸಂಖ್ಯಾತ ಕೆರೆಗಳು ಈ ಕಾಲದಲ್ಲಿ ನಿರ್ಮಾಣವಾಗಿವೆ. ಆದಿಲ್ ಷಾಹಿಗಳ ಕಾಲದ ವಿಜಾಪುರದ ಬಾವಡೆ, ಬೀದರ ಕೋಟೆಯ ಬಾವಿ,ಜಮಖಂಡಿ ಅರಮನೆ ಹಿಂಭಾಗದ ಬೆಟ್ಟಗಳಲ್ಲಿ ಬೆರಗಿನ ರಚನೆಗಳಿವೆ. ಅಬ್ಬರದ ಮಳೆ ಸುರಿಯುವ ಮಲೆನಾಡು ಇಕ್ಕೇರಿಯಲ್ಲಿ ನೀರಿನ ಸಮಸ್ಯೆ ಇತ್ತೆ? ರಾಜ್ಯವಾಳಿದ ಎರಡನೇ ಸದಾಶಿವ ನಾಯಕ(1512-46) ರಾಜಧಾನಿಯ ಸುತ್ತ 14 ಕೆರೆ ಕಟ್ಟಿರುವದು ಇಂದಿಗೂ ಬಳಕೆಯಲ್ಲಿದೆ.  17-18ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳೆಯಗಾರರು ಜೋಗಿಮಟ್ಟಿ ಬೆಟ್ಟದ ಮಳೆ ನೀರು ದೊಡ್ಡಣ್ಣನ ಕೆರೆ, ತಿಮ್ಮಣ್ಣ ನಾಯಕನ ಕೆರೆ, ಸಣ್ಣಕೆರೆ, ಕೆಳಗಿನಕೆರೆ, ಡಬಡಬ, ವಡ್ಡುಗಳಲ್ಲಿ ಸಂಗ್ರಹವಾಗುವಂತೆ ಸರಣಿ ರಚಿಸಿದವರು. ಈ ಜಲಾಶಯದಲ್ಲಿ ನೀರು ತುಂಬಿದ ಬಳಿಕ ಕೋಟೆಯ ಕಂದಕಕ್ಕೆ ಬೀಳುವ ವ್ಯವಸ್ಥೆ ಮಾಡಿದವರು, ಸಂತೆಹೊಂಡ ಬತ್ತದಂತೆ ತಂತ್ರ ರೂಪಿಸಿದವರು. ರಾಜ್ಯದ ಕೋಟೆ ಕೆರೆಯ ರಚನೆಗಳನ್ನು ನೋಡುತ್ತ ಹೋದರೆ ಸಂರಕ್ಷಣೆಯ ವಿಸ್ಮಯದ ಅರಿಯಬಹುದು. ರಾಜ್ಯದ ಗಿರಿದುರ್ಗ,ವನದುರ್ಗಗಳಲ್ಲಿ ನೀರಿರುವ ಕೆರೆಗಳು ಎತ್ತರದ ಗುಡ್ಡಗಳಲ್ಲಿವೆ.

ಉರಿ ಬೇಸಿಗೆಯ 43 ಡಿಗ್ರಿ ಉಷ್ಣತೆಯ ರಾಯಚೂರಿನಲ್ಲಿ ಹನಿ ನೀರು ಕುಡಿಯಲು ಸಿಗದಿದ್ದಾಗ, ಸ್ನಾನಕ್ಕೆ ಸೋಪು ಹಚ್ಚಿದ ಬಳಿಕ ನೀರು ಬರದಿದ್ದಾಗ ನೀರಿನ ಮಹತ್ವ ಎಷ್ಟೆಂದು ತಿಳಿಯುತ್ತದೆ.

ಬರಗಾಲ, ಜಲಕ್ಷಾಮಗಳು ಪಾಠಗಳನ್ನು ಶತಮಾನಗಳಿಂದ ವಿವಿಧ ಮುಖದಲ್ಲಿ ನೀಡಿವೆ. ವಿದ್ಯುತ್ ಪಂಪು, ಕೊಳವೆ ಬಾವಿಗಳಿಲ್ಲದ ಕಾಲದಲ್ಲಿ ಜನ ಮಣ್ಣಿನಲ್ಲಿ ಮಾದರಿ ಹುಡುಕಿದ್ದಾರೆ. ಬಹತ್ತರ್(1972ನೇ ಇಸ್ವಿ) ಬರ ಹೈದ್ರಾಬಾದ್ ಕರ್ನಾಟಕವನ್ನು ಕಾಡಿದ ಸಂದರ್ಭದಲ್ಲಿ ಊರೆಲ್ಲ ಗುಳೆ ಹೋಗಿತ್ತು. ಜಾನುವಾರುಗಳನ್ನು ಗುಲ್ಬರ್ಗ ಕೃಷಿಕರು ಕೊಪ್ಪಳ ಸೀಮೆಗೆ ಹೊಡೆದಿದ್ದರು. ಇಂಥ ಕ್ಷಾಮದ ಕಾಲದಲ್ಲಿಯೂ  ಗುಲ್ಬರ್ಗದ ಗಡಿ ಕಾಡಿನ ಗೊಟ್ಟಂಗೊಟ್ಟ ಗುಡ್ಡದ ಕಲ್ಲುಬಂಡೆಯ ಸಣ್ಣ ಝರಿಯ ನೀರು ಬತ್ತಲಿಲ್ಲ. ಅಲ್ಲಿನ ದೇಗುಲದಲ್ಲಿ ಭಕ್ತರು ಈ ನೀರು ನಂಬಿ ಬದುಕಿದ್ದರು. ಸುಮಾರು ಎರಡು ಶತಮಾನಗಳ ಹಿಂದೆ ಬಕ್ಕಪ್ರಭುಗಳ ತಪಸ್ಸಿನ ತಾಣವಿದು. ನೀರು ದೊರೆಯುವ  ಈ ‘ಸಿದ್ದಗೊಂಡ’ ಪವಿತ್ರ ತಾಣವಾಗಿದೆ.  ಕ್ಷಾಮದಲ್ಲಿ ನೀರು ನೀಡಿದ ತಾಣವನ್ನು ಪ್ರೀತಿಸುವ, ಪೂಜಿಸುವಲ್ಲಿ ಸಂರಕ್ಷಣೆಯ ಸೂತ್ರವಿದೆ. ದೇವರ ಗುಡಿ ಸನಿಹ ಕೆರೆ ನಿರ್ಮಿಸುವದು, ಪೂಜೆಗೆ ನೀರು ಬಳಸುವದು, ಹೊಲದ ಬಯಲಿಗೆ  ಆ ನೀರುಣಿಸಿ ದೇಗುಲಕ್ಕೆ ಬಂದ ಭಕ್ತರಿಗೆ ದಾಸೋಹ ನಡೆಸಿದವರು ಹೊಯ್ಸಳ ಅರಸು ವಿಷ್ಣುವರ್ಧನರ ದಂಡನಾಯಕ ಗಂಗಪ್ಪಯ್ಯ!  ನೀರಿನ ಮೂಲಕ ಊರು ಕಟ್ಟಿದ ಮಾದರಿಗಳು ಚರಿತ್ರೆಯಲ್ಲಿ ಸಿಗುತ್ತವೆ. ಕೃಷಿಕರು, ಶಾನಭೋಗರು, ಪಟೇಲರು ,ರಾಜ ರಾಣಿಯರು, ಸೂಳೆಯರು ಕೆರೆ ಕಟ್ಟಿದ್ದಾರೆ. ನಾಯಕನಹಟ್ಟಿಯ ತಿಪ್ಪೆಸ್ವಾಮಿ ನೀರು ಹಿಡಿಯುವ ವಿದ್ಯೆಯನ್ನು ಬರದ ಸೀಮೆಗೆ ಸಾರಿದ ಮಹಾನ್ ಸಂತರು, ನಾಡು ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಿದೆ.

‘ಕಾಡು ಎಂದರೆ ನೀರು, ನೀರು ಎಂದರೆ ಅನ್ನ, ಅನ್ನವೆಂದರೆ ಪ್ರಾಣ’ವೆಂದು ಚರಿತ್ರೆ ಸಾರಿ ಸಾರಿ ಹೇಳಿದೆ. ನದಿಯಂಚಿನಲ್ಲಿ ಕೃಷಿ ಬದುಕು ಆರಂಭಿಸಿದ ನಾವು ಸಾಮ್ರಾಜ್ಯ ವಿಸ್ತರಿಸಿ ಗುಡ್ಡದ ತುದಿ ತಲುಪಿದ್ದೇವೆ. ನಾವಿದ್ದಲ್ಲಿ ನೀರು ಬರಬೇಕೆಂದು ಬಯಸಿದ್ದೇವೆ. ಕೆರೆ-ಕಾಡು ಮರೆತು ಪಂಪು,ಪೈಪು,ಬೋರ್‍ವೆಲ್‍ಗಳನ್ನು ಬಹಳ ನಂಬಿದ್ದೇವೆ. ಕಾಂಕ್ರೀಟ್ ಬಡಾವಣೆಗಳನ್ನು ಕಟ್ಟುತ್ತ ಮಣ್ಣಿಗೆ ನೀರು ಇಂಗದಂತೆ ಮಾಡಿದ್ದೇವೆ. ಜಲಮೂಲಗಳ ಮಹತ್ವ ಮರೆತಿದ್ದೇವೆ. ಕಾಡಿನ ಮರ ಕಡಿದು, ಗುಡ್ಡದ ಕಲ್ಲು ಒಡೆದು, ದಂಡೆಯ ಮರಳು ಸಾಗಿಸುವ ವ್ಯವಹಾರದಲ್ಲಿ ಮುಳುಗಿದ ಬಳಿಕ ‘ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿ’ ಎಂಬುದು ಮರೆತು ಹೋಗಿದೆ. ಬೇಸಿಗೆ ಶುರುವಾದರೆ ಜೋರಾಗುವ ನೀರಿನ ಸಮಸ್ಯೆಗಳು, ನದಿ ಜಗಳಗಳು ಮಳೆ ಬಂದಾಗ ಮರೆತು ಹೋಗುತ್ತವೆ. ರಾಜ್ಯದಲ್ಲಿ 200 ಮಿಲಿ ಮೀಟರ್ ಮಳೆ ಸುರಿಯುವ ಪ್ರದೇಶದಿಂದ ಶುರುವಾಗಿ ವಾರ್ಷಿಕ 6000 ಮಿಲಿ ಮೀಟರ್ ಮಳೆ ಬರುವ ನೆಲೆಯಿದೆ. ಪ್ರದೇಶಕ್ಕೆ ತಕ್ಕ ಪರಂಪರೆಯ ಜಲ ಸಂರಕ್ಷಣಾ ವಿಧಾನಗಳಿವೆ, ಕೃಷಿ ಬೆಳೆಗಳಿವೆ. ಕೆರೆಯಲ್ಲಿ ಹೂಳು ತುಂಬಿದಂತೆ ನಮ್ಮ ತಲೆಯಲ್ಲಿ ನೈಸರ್ಗಿಕ ಸಂಪತ್ತಿನ ಬಗೆಗೆ ಅಜ್ಞಾನ, ನಿರ್ಲಕ್ಷ್ಯ ತುಂಬಿದೆ.

ಒಂದು ಚದರ್ ಮೀಟರ್ ಜಾಗದಲ್ಲಿ ಒಂದು ಮಿಲಿ ಮೀಟರ್ ಮಳೆ ಸುರಿದರೆ ಒಂದು ಲೀಟರ್ ನೀರಾಗುತ್ತದೆ. ಮಲೆನಾಡಿನ ಒಂದು ಎಕರೆಯಲ್ಲಿ 80ಲಕ್ಷದಿಂದ 1.25ಕೋಟಿ ಲೀಟರ್  ಮಳೆ ನೀರು ಸುರಿಯುತ್ತದೆ. ತಗ್ಗಿನತ್ತ ಓಡಿ ನದಿ ಸೇರುತ್ತದೆ. 10ರಿಂದ 45 ಲಕ್ಷ ಲೀಟರ್ ಸುರಿಯುವ ಪ್ರದೇಶ ಬಯಲು ನಾಡಿನಲ್ಲಿವೆ. ಇಲ್ಲಿ ಕಾಲಕ್ಕೆ ಮಳೆ ಸುರಿಯದಿದ್ದರೂ ಯಾವುದೇ ಸಂದರ್ಭದಲ್ಲಿ ಅಬ್ಬರದ ಆಲಿಕಲ್ಲು ಮಳೆ ಬರಬಹುದು. ಕೆರೆ ಕಾಲುವೆ ಮುಚ್ಚಿದೆ, ಕೆರೆ ಪಾತ್ರಗಳಲ್ಲಿ ಹೂಳು ತುಂಬಿ ನೀರು ಹಿಡಿಯಲು ಎಲ್ಲಿಯೂ ಪಾತ್ರೆಗಳಿಲ್ಲ. ಬೃಹತ್ ನೀರಾವರಿ ಪ್ರದೇಶಗಳಲ್ಲಂತೂ ವಾಣಿಜ್ಯ ಬೆಳೆ ಆರ್ಭಟಕ್ಕೆ ಕೆರೆಗಳು ಕಣ್ಮರೆಯಾಗಿವೆ. ಮನೆಯ ಛಾವಣಿ, ಅಂಗಳ, ಹಿತ್ತಲಿನಲ್ಲಿ ಮಳೆ ಸುರಿಯುತ್ತಿದೆ. ಎಲ್ಲೋ ಬಿದ್ದ ನೀರು ರಸ್ತೆಯ ಕಾಲುವೆಗುಂಟ ಕಣ್ಣೆದುರು  ಓಡುತ್ತಿದೆ. ಬಿದ್ದ ಹನಿಯನ್ನು ಬಿದ್ದಲೇ ಇಂಗಿಸುವ ಸಣ್ಣ ಕೆಲಸ ಆರಂಭಿಸಿದರೂ ಬಹು ದೊಡ್ಡ ಸಮಸ್ಯೆ ಪರಿಹಾರವಾಗುತ್ತದೆ.

ಬೇಸಿಗೆಯ ಮುಂಜಾನೆ ಮೂರು ಗಂಟೆಗೆ ನಲ್ಲಿಯೆದುರು ನಿದ್ದೆಗಟ್ಟು ನದಿ ನಾಡಿನ ಕರಾವಳಿಗರು ನಿಲ್ಲುತ್ತಾರೆ. ಶಾಲೆಗೆ ಹೋಗುವ ಮಕ್ಕಳು ಕಿಲೋ ಮೀಟರ್ ದೂರದಿಂದ ಬಯಲು ಸೀಮೆಯಲ್ಲಿ ನೀರು ಹೊರುತ್ತಾರೆ. ತುಮಕೂರು ಜಿಲ್ಲೆಯ ಗುಬ್ಬಿಯ ಅತ್ತಿಕಟ್ಟೆ ಹಳ್ಳಿಯ ಕೆಲವು ಮನೆಗಳು ಕಳೆದ ವರ್ಷದ ಮಳೆ ನೀರು ಶೇಖರಿಸಿ ಕುಡಿಯುವ ಮಾದರಿ ಮಾರ್ಗ ಅನುಸರಿಸಿದ್ದಾರೆ. ಇದೇ ಜಿಲ್ಲೆಯ ಸಿದ್ದನಕಟ್ಟೆಯ ಕೆಲವರು ವರ್ಷದಿಂದ ಚಿಕ್ಕನಾಯಕನಹಳ್ಳಿಯಿಂದ ಕಾಸು ಕೊಟ್ಟು ಕುಡಿಯುವ ನೀರು ಖರೀದಿಸುತ್ತಿದ್ದಾರೆ! ನೀರು ನಂಬಿದವರು ಅಕ್ಕಪಕ್ಕದ ಮಾದರಿ ತಿಳಿಯದಿದ್ದರೆ ಹೇಗೆ? ಮನೆ ಮನವನ್ನು ತಲುಪಿ ಮಾದರಿ ಪರಿಚಯಿಸಿ ನಿರ್ಮಾಣದ ಪರಿಣಿತರನ್ನು ನೀಡಿದಾಗ ಮಾತ್ರ ಸಂರಕ್ಷಣೆಯ ಕಾರ್ಯ ವೇಗ ಪಡೆಯುತ್ತದೆ. ಮನೆಯಿಂದ ಮನೆಗೆ, ಊರಿನಿಂದ ಊರಿಗೆ ಹಬ್ಬುತ್ತದೆ. ಜಲ ಭವಿಷ್ಯ ಬದಲಿಸುವ ಜಾಗೃತಿಗೆ ಊರೂರಿಗೆ ಕಾಲಾಳುಗಳು ಬೇಕಾಗಿದ್ದಾರೆ.

ಮಳೆಯ ನೀರಿಗೆ ಕೆರೆಯ ದಾರಿ

ಸಾಮುದಾಯಿಕ ಮಳೆಕೊಯ್ಲಿನಿಂದ ರಾಜಸ್ಥಾನದಂಥ ಮರುಭೂಮಿಯನ್ನೂ ಒಂದು ದಶಕದಲ್ಲಿ ಬರ ನಿರೋಧಕಗೊಳಿಸಬಹುದೆಂದು ದಿ! ಅನಿಲ್ ಅಗರ್‍ವಾಲ್ ಎಚ್ಚರಿಸಿದ್ದರು. ನೀರು ಹಿಡಿಯುವ ಪಾತ್ರೆಗಳನ್ನು ಬಾನಿಗೆ ತೆರೆದಿಡದೇ ನಾವು ನಿದ್ದೆ ಹೋಗಿದ್ದೇವೆ, ಕೆರೆಗಳನ್ನು ಹೂಳು ತುಂಬಲು ಬಿಟ್ಟಿದ್ದೇವೆ.

ಕೋಲಾರದ ಮಾಲೂರಿನ ದೊಡ್ಡಕಲ್ಲಳ್ಳಿ ರಸ್ತೆಯಲ್ಲಿ ಟ್ಯಾಂಕರ್ ನೀರಿಗೆ ಮಹಿಳೆಯರೆಲ್ಲ ಶಿಸ್ತಿನಲ್ಲಿ ಸಾಲಿನಲ್ಲಿ ನಿಂತಿದ್ದರು. ಎಲ್ಲರ ಕೈಯಲ್ಲಿ ಮೂರು ಬಿಂದಿಗೆಗಳಿದ್ದವು. ಆರೇಳು ವರ್ಷದ ಪುಟಾಣಿಗಳು ಸರತಿ ಸಾಲಲ್ಲಿ ಅಮ್ಮನ ಪರವಾಗಿ ನೀರಿಗಾಗಿ ಕಾದಿದ್ದರು. ಕುಟುಂಬಕ್ಕೆ ಮೂರು ಕೊಡ ನೀರು ಸಿಗುತ್ತದೆ. ಸುತ್ತಲಿನ ಸೀಮೆಯಲ್ಲೆಲ್ಲೂ ಕೆರೆ, ನದಿಗಳಿಲ್ಲ. ಮೇಲ್ಲೈಯಲ್ಲಿ ನೀರು ನೋಡಲು ಸಿಗುವದಿಲ್ಲ. ಟ್ಯಾಂಕರ್ ನೀರನ್ನು ಕುಡಿಯುವದಕ್ಕೆ, ಅಡುಗೆಗೆ ಬಳಸಬೇಕು. ಪಾತ್ರೆ ತೊಳೆಯುವದು, ಸ್ನಾನ, ದನಕರುಗಳ ಬಳಕೆಗೆ ಮತ್ತೆ ಮುಂದಿನ ಟ್ಯಾಂಕರ್ ನೀರಿಗೆ ಕಾಯಬೇಕು. ಹಸು ಸಾಕಿದರೆ ದಿನಕ್ಕೆ 150 ಲೀಟರ್ ನೀರು ಖರ್ಚಾಗುತ್ತದೆ. ಮೂರು ಲೀಟರ್ ನೀರು ಬಳಸುವ ಕುರಿ ಸಾಕುವ ಉಪಾಯವನ್ನು ಹಲವರು ಹುಡುಕಿದ್ದಾರೆ.

ಚಿಕ್ಕಕಲ್ಲಳ್ಳಿ ದೊಡ್ಡಕಲ್ಲಹಳ್ಳಿ ಪಕ್ಕದ ಇನ್ನೊಂದು ಊರು. ಇಲ್ಲಿನ ಶಾಸಕ ಕೆ. ಎಸ್. ಮಂಜುನಾಥ ಆಯ್ಕೆಯಾಗಿ ಮೂರು ವರ್ಷಗಳಾಗಿವೆ, ಹಳ್ಳಿಗರ ನೀರಿನ ಗೋಳು ನೋಡಿ ಕುಡಿಯುವ ನೀರಿಗೆಂದು ಆರು ಕೊಳವೆ ಬಾವಿ ಕೊರೆಸಿದ್ದಾರೆ. ಹಣ ಖರ್ಚಾಗಿದೆ, ನೀರಿಲ್ಲ. 1360 ಅಡಿ ಆಳದ ಒಂದು ಬಾವಿಯಲ್ಲಿ ಸ್ವಲ್ಪ ನೀರು ಸಿಕ್ಕಿದೆ. ಆದರೆ ನೀರೆತ್ತಲು ವಿದ್ಯುತ್ ಬೇಕು. ವಿದ್ಯುತ್ ಕಣ್ಣುಮುಚ್ಚಾಲೆಯಲ್ಲಿ ಕೊಡ ನೀರು ಸಿಗುವದು ಬಹಳ ಕಷ್ಟವಿದೆ. ಮೊನ್ನೆ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹೊತ್ತಿಗೆ ಎರ್ರಾಬಿರ್ರೀ ವಿದ್ಯುತ್ ಕಡಿತವಾಗಿ ಮಹಿಳೆಯರೆಲ್ಲ ಖಾಲಿ ಬಿಂದಿಗೆಯೊಂದಿಗೆ ನೀರಿನ ಟ್ಯಾಂಕ್ ಸುತ್ತ ಆರೆಂಟು ತಾಸು ಕಲ್ಲಾಗಿ ಕುಳಿತಿದ್ದರು. ಈಗಲೂ ಕೆಲವೊಮ್ಮೆ ಮಧ್ಯರಾತ್ರಿಯವರೆಗೂ ಇವರ ಜಲ ನಿರೀಕ್ಷೆ ಮುಂದುವರಿಯುತ್ತದೆಯೆಂತೆ! ವಿದ್ಯುತ್ ಬಂದರೆ, ಕೊಳವೆ ಬಾವಿಯಲ್ಲಿ ನೀರಿದ್ದರೆ ಬಿಂದಿಗೆ ತುಂಬುತ್ತದೆ. ಮನೆಯ ಅಡುಗೆ ಕೆಲಸ ನಡೆಯುತ್ತದೆ.

ಲೇಖಕರು: ಶಿವಾನಂದ ಕಳವೆ

ಮಾಹಿತಿ ಸೌಜನ್ಯ: http://bhoomigeetha.com

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*