ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೪: ಕೆರೆ ಅಭಿವೃದ್ಧಿಗೆ ಕೋಟಿಕೋಟಿ, ನಿರ್ವಹಣೆಗೆ ಇಲ್ಲ ಮತಿ!

ರಾಜಧಾನಿ ಬೆಂಗಳೂರಿನ ಕೆರೆಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂಬುದೇ ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಮಾತು. ಸರಕಾರದಿಂದ ಹಿಡಿದು ಸಾಮಾಜಿಕ ಹೊಣೆಗಾರಿಕೆ ಮೇರೆಗೆ ಖಾಸಗಿ ಕಂಪನಿ-ಸಂಸ್ಥೆಗಳೂ ಈ ಕಾರ್ಯಕ್ಕೆ ಮುಂದಾಗಿವೆ. ಮೊದಮೊದಲು ಅಭಿವೃದ್ಧಿಯಲ್ಲಿರುವ ಆಸಕ್ತಿ ಕ್ಷೀಣಿಸುತ್ತದೆ ಎಂಬುದಕ್ಕೆ ಈಗ ‘ಅಭಿವೃದ್ಧಿ’ ಆಗಿದೆ ಎಂದು ಹೇಳಲಾಗುವ ಕೆರೆಗಳ ದುಸ್ಥಿತಿಯೇ ಪ್ರತ್ಯಕ್ಷ ಸಾಕ್ಷಿ. ಅಭಿವೃದ್ಧಿ ಎಂದು ಯೋಜನೆಗಾಗಿ ಕೋಟಿಕೋಟಿ ವೆಚ್ಚ ಮಾಡಲಾಗುತ್ತಿದ್ದು, ನಂತರ ಅದರ ನಿರ್ವಹಣೆಗೆ ಕನಿಷ್ಠ ಮತಿಯನ್ನೂ ಬಳಸದ ಕಾರಣ ಇಂದು ಅಭಿವೃದ್ಧಿಯ ಪಟ್ಟ ಹೊತ್ತಿರುವ ಕೆರೆಗಳು ಮತ್ತೆ ಮಲೀನದ ಕೂಪಗಳಾಗುತ್ತಿವೆ.

HV halli Lake-poಇತ್ತೀಚಿನ ದಿನಗಳಲ್ಲಿ ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿಗಳ ಮಾತು, ಯೋಜನೆಗಳು ಪ್ರಕಟವಾಗುತ್ತಿವೆ. ಏನೇನೋ ಮಾಡುವ ದೂರದಬೆಟ್ಟವನ್ನೂ ತೋರಿಸಲಾಗುತ್ತಿದೆ. ಆದರೆ, ಈಗ ಅಭಿವೃದ್ಧಿ ಎಂದು ಮಾಡಲಾಗಿರುವ ಕೆರೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಯಾರಾದರೂ ನೋಡಿದ್ದಾರಾ? ಕನಿಷ್ಠ ಆ ಕೆರೆಗಳ ಅಭಿವೃದ್ಧಿಯ ಅಂದಾಜುಪಟ್ಟಿ ತಯಾರಿಸಿದವರು, ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ನಿಂತಿದ್ದ ಎಂಜಿನಿಯರ್‌ಗಳಾದರೂ ಅತ್ತ ತಿರುಗಿ ನೋಡಿದ್ದಾರಾ? ಇಲ್ಲವೇ ಇಲ್ಲ. ಬೆಂಗಳೂರಿನಲ್ಲಿ ೫೦ ಕೆರೆಗಳು ಅಭಿವೃದ್ಧಿ ಆಗಿವೆ ಎಂದು ಅಧಿಕಾರಿಗಳು, ಮಂತ್ರಿಗಳು ಯಾವಾಗಲೂ ಕೆರೆಗಳ ಪಟ್ಟಿಯನ್ನು ನೀಡುತ್ತಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಏಕೆಂದರೆ ಬೆಂಗಳೂರಿನಲ್ಲಿ ಅಭಿವೃದ್ಧಿ ಎಂದು ಪಟ್ಟಿಯ ಪಟ್ಟ ಪಡೆದಿರುವ ಒಂದು ಕೆರೆಯೂ ಸ್ವಚ್ಛತೆಯೆಂಬ ಸೌಭಾಗ್ಯ ಪಡೆದುಕೊಂಡಿಲ್ಲ. ಒಳಚರಂಡಿ ನೀರಂತೂ ಅಭಿವೃದ್ಧಿಯಾಗಿರುವ ಕೆರೆಗಳಿಗೆ ಜಲಮೂಲ. ಅದರ ಜತೆಗೆ ಕಸ, ತ್ಯಾಜ್ಯ ಎಲ್ಲಕ್ಕೂ ಈ ಕೆರೆಗಳೇ ತಾಣ. ಅದನ್ನು ತಡೆಯುವ ಕನಿಷ್ಠ ಕೆಲಸವೂ ಯಾರಿಂದಲೂ ಆಗಿಲ್ಲ. ‘ಸೋರುತಿಹುದು ಮನೆಯ ಮಾಳಿಗೆ, ಅಜ್ಞಾನದಿಂದ’ ಎಂಬ ಮಾತಿನಂತೆ ಅಧಿಕಾರಿಗಳ ಅಜ್ಞಾನ ಹಾಗೂ ಜಾಣಕುರುಡಿನಿಂದ ಈ ಕೆರೆಗಳು ಮಾಲಿನ್ಯದಿಂದ ನಲುಗುತ್ತಿವೆ.

HV halli Lake-po (2)ಕೆರೆಗಳ ಆಭಿವೃದ್ಧಿಗೆ ಅಂದಾಜು ವೆಚ್ಚ ತಯಾರಿಸುವ ಮುನ್ನ, ಅದರ ನಿರ್ವಹಣೆ ಬಗ್ಗೆಯೂ ಒಂದು ಭಾಗವನ್ನು ಕಲ್ಪಿಸಲಾಗುತ್ತದೆ. ಬಿಬಿಎಂಪಿ ಹಾಗೂ ಬಿಡಿಎ ಒಂದು ಹೆಜ್ಜೆ ಮುಂದೆ ಹೋಗಿ ಕೆರೆ ಅಭಿವೃದ್ಧಿಯ ಮೊದಲ ವೆಚ್ಚದಲ್ಲೇ ಅದರ ಅಭಿವೃದ್ಧಿಯಾದ ನಂತರದ ಐದು ವರ್ಷದ ನಿರ್ವಹಣೆಯನ್ನೂ ಟೆಂಡರ್‌ನಲ್ಲೇ ಸೇರಿಸಿದ್ದವು. ಅದೇ ರೀತಿಯಲ್ಲೇ ಎಲ್ಲವೂ ಮುಂದುವರಿದು ಕೆಲಸಗಳೂ ಆಗಿವೆ. ಆದರೆ, ಒಂದೇ ಒಂದು ಕೆರೆ ನಿರ್ವಹಣೆ ಆಗುತ್ತಿಲ್ಲ. ಆದರೂ ನಿರ್ವಹಣೆಗಾಗಿ ಮೀಸಲಾದ ಕೋಟ್ಯಂತರ ಹಣ ಏನಾಯಿತು? ಅದರ ಬಗ್ಗೆ ಕೇಳುವ ಬಾಯಿಗಳು ಆ ಹೊಲಸಿನ ವಾಸನೆ ಕಂಡಿದ್ದರಿಂದ ಸುಮ್ಮನಾಗಿವೆ ಎಂಬುದೇ ಮಾತು.

ನಗರದ ಬಹುತೇಕ ಪ್ರದೇಶಗಳಲ್ಲಿ ಕಸ ನಿರ್ವಹಣೆಯೇ ಪ್ರಮುಖ ಸಮಸ್ಯೆ. ಇದನ್ನು ಯಾವ ಸರಕಾರ ಅಥವಾ ಅಧಿಕಾರಿ ಬಂದೂ ಸರಿ ಮಾಡಲು ಸಾಧ್ಯ ಇಲ್ಲHV halli Lake-po (3) ಎಂಬುದು ಕಾಲಕಾಲಕ್ಕೆ ಸಾಬೀತಾಗುತ್ತಿದೆ. ಇಂತಹ ಕಸವೇ ಇಂದು ಹಲವು ಕೆರೆಗಳಿಗೆ ವಿಷ ಉಣಿಸುತ್ತಿವೆ. ಅಭಿವೃದ್ಧಿ ಕೆರೆಗಳು ಒಳಚರಂಡಿ ಮಾಲಿನ್ಯವನ್ನು ಒಳಗೊಂಡು ಈಗಾಗಲೇ ದುರ್ವಾಸನೆ ಬೀರುತ್ತಿದ್ದು, ಕೋಟ್ಯಂತರ ವೆಚ್ಚ ಮಾಡಿ ನಿರ್ಮಿಸಿರುವ ಹೈಟೆಕ್ ವಾಕ್‌ಪಾಥ್‌ನಲ್ಲಿ ನಡೆಯಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿವೆ. ಇದಕ್ಕೆ ತ್ಯಾಜ್ಯ ವಿಷಕಾರಕ ಅಂಶಗಳು ಸೇರಿಕೊಳ್ಳುತ್ತಿವೆ. ಕೆರೆಗಳ ಬಳಿಯೇ ತ್ಯಾಜ್ಯ ವಿಂಗಡಣೆಯಂತಹ ಕೆಲಸಗಳು ಆಗುತ್ತಿರುವುದರಿಂದ ಇದರಿಂದ ಹರಿಯುವ ಕೊಳಕು ನೀರು ಕೆರೆಗೆ ಮಳೆನೀರು ಹರಿಯಬೇಕಾದ ಚರಂಡಿ ಮೂಲಕ ಕೆರೆಗಳನ್ನು ಸೇರುತ್ತಿವೆ. ಈ ಬಗ್ಗೆ ಯಾರಿಗೆ ದೂರು ನೀಡಿದರೂ ಒಂದು ದಿನದ ಮಟ್ಟಿಗೆ ಅದು ಸರಿಯಾದರೂ ಮತ್ತೆ ಅದೇ ಕೊಳಕು ಕೆರೆಗೆ ಸೇರುವುದು ಮಾಮೂಲು ಎಂಬುದು ಸ್ಥಳೀಯರ ದೂರಾಗಿದೆ. ಈ ಬಗ್ಗೆ ಯಾರು ಕ್ರಮ ಕೈಗೊಂಡಿಯಾರು? ಎಲ್ಲಿ ನೋಡಿದರೂ ಸ್ವಚ್ಛತೆಯದ್ದೇ ಮಾತು. ಜನರಿಂದಲೇ ಇದೆಲ್ಲ ಆಗಬೇಕು ಎಂದು ಬಾಯಿಬಡಿದುಕೊಳ್ಳುತ್ತಿರುವ ಸರಕಾರ ತನ್ನ ಕೆಲಸವನ್ನೇ ಮಾಡುತ್ತಿಲ್ಲ. ಈ ಬಗ್ಗೆ ಅಗ್ರಪಂಕ್ತಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಜತೆಗೆ ಸ್ಥಳೀಯ ಜನರು ಅದರ ಬಗ್ಗೆ ಬೀದಿಗಿಳಿದರೆ ಮಾತ್ರ ಈ ಮಾಲಿನ್ಯ ತಡೆಯಲು ಸಾಧ್ಯ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*