ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬೆಟ್ಟದೂರಿನ ಒಂಟಿ ಬಾವಿ ಕತೆ ಹೇಳಿದಾಗ

ತುಂಬು ಹುಣ್ಣಿಮೆಯ ದಿನ ಊರೂರು ಅಲೆದರೂ, ಚಂದ್ರನಿಗೆ ತನ್ನ ಸೌಂದರ್ಯ ನೋಡಲು ಕೆರೆ ಬಾವಿ ಸಿಗತಾಯಿಲ್ಲ. ತಿರುಗುತ್ತಾ ತಿರುಗುತ್ತಾ ಸುಸ್ತಾಗಿ ಮಳೆರಾಯನ್ನ ಶಪಿಸುತ್ತಾ “ಅಯ್ಯಾ ಮಳೆರಾಯ ವರ್ಷದಿಂದ ವರ್ಷಕ್ಕೆ ನೀನು ಮರೆಯಾಗಿ ಭೂಮಿ ಮೇಲೆ ನೀರಿಗೆ ಬರ ಬಂದಿದೆ,” ಎಂದಾಗ ಮಳೆರಾಯ ಹೇಳುತ್ತಾನೆ “ಇಲ್ಲಾ ಚಂದ್ರಣ್ಣ, ಇದು ಮಾನವರು ಮಾಡಿದ ಸ್ವಯಂಕೃತ ಅಪರಾಧ! ಇರಲಿ, ಆ ಬೆಟ್ಟದೂರಿಗೆ ಹೋಗು – ಅಲ್ಲಿ ಒಂಟಿ ಬಾವಿ ಇದೆ. ಅಲ್ಲಿ ನಿನ್ನ ಮುಖ ಕಾಣಬಹುದು,” ಎಂದು ಹೇಳುತ್ತದೆ. ಆಯಿತು ಅನ್ನುತ್ತಾ ಚಂದ್ರ ಹೋಗುತ್ತಾನೆ.

ಅದೊಂದು ಬೆಟ್ಟದೂರು; ತವಂದಿ ಗ್ರಾಮದ ಶಂಕರಜ್ಜ ಅರಳಿಮರದ ಕೆಳಗೆ ಅಡಿಕೆ ಜಿಗಿಯುತ್ತಾ ಕುಳಿತಿದ್ದಾನೆ, ಚಂದ್ರ ನಿಧಾನವಾಗಿ ತನ್ನ ಸೌಂದರ್ಯವನ್ನು ಬಾವಿ ನೀರಲ್ಲಿ ನೊಡುತ್ತಾನೆ. ಮಿನುಗುತ್ತಿದ್ದ ಚಂದ್ರನ ನೋಡಿದ ಬಾವಿಯಣ್ಣ, “ಶಂಕರಜ್ಜನಿಗೆ ಹೇಳಿದ. ಊರಿನ ಎಲ್ಲ ಬಾವಿ ಕೆರೆಗಳು ಬತ್ತಿ ಚಂದ್ರ ನನ್ನಲ್ಲಿ ಬಂದಾಗ ಯಾವಾಗಲೂ ನಿರಾಶೆ ಮಾಡಿಲ್ಲ ನೀನೆ ತಿಳಿದ ಹಾಗೆ ಗುಡ್ಡದ ಯಾವುದೋ ಸೆಲೆ ಹಿಡಿದು ನೀರು ತಂದು ಹಾಕುವ ನನಗೆ ಊರಿನ ಜನ ಕಟ್ಟೆ ಕಟ್ಟಸಿ ಸುಂದರ ರೂಪು ನೀಡಿ ಸಮಾಜ ಸೇವೆ ಮಾಡುವ ಅವಕಾಶ ಕಲ್ಪಿಸಿದಿರಿ, ಇದರಿಂದ ನನಗೂ ತೃಪ್ತಿ ಐತಿ,” ಎಂದು.

IMG-20150930-WA0009‘ಹೌದಪ್ಪ ನೀನು ಹೇಳೋದು ಖರೆ ಐತಿ, ಆದ್ರ, ಈಗಿನ ಮಂದಿ ರೊಕ್ಕದ ಬೆನ್ನ ಹತ್ತಿ ಸಿಕ್ಕ ಸಿಕ್ಕ ಕಡೆ ಎಲ್ಲಾ ಬೋರ್‌ವೆಲ್ ಕೊರೆಯಿಸಿ, ನಿನ್ನ ಮ್ಯಾಲ ನಿತ್ಯ ಪ್ರಹಾರ ನಡೆಸಿದಾರ. ಇದರಿಂದ ನಿನಗೂ ತೊಂದರಿ ಬಾಳ ಆಗೈತಿ, ಎನ್ ಮಾಡೋದು ನಾವು ಹೇಳೊ ಶಕ್ತಿ ಕಳಕೊಂಡೆವಿ. ಮಾಡಿದುಣೆನ್ನೋ ಮಾರಾಯ’ ಅಂದ ಶಂಕರಜ್ಜ.

‘ಶಂಕರಜ್ಜ ನನ್ನ ನೀರು ನಿನಗ ಯಾವಾಗಾರ ತೊಂದ್ರಿ ಮಾಡೆತೆನ, ನಿಮ್ಮ ತಂದೆ ಇದ್ದಾಗ ಇಲ್ಲಿ ನಾಗರಿಕತೆ ಇರಲಿಲ. ಬರಿ ೮ ಕುಂಟುಂಬ ಇದ್ದ ಊರು ಈಗ ಗ್ರಾಮ ಪಂಚಾಯತಿ ಆಗೇತಿ, ದಿನ-ದಿನಕ್ಕೆ ಹೆಚ್ತ್ತಾನ ಸಾಗೇತಿ ಇದರಿಂದ ನನ್ನ ಇರವಿಕೆ ಬಗ್ಗೆ ನನಗ ನಂಬಿಕೆ ಇಲ್ಲ’.

“ನೋಡು ನಾ ಇರುವರಿಗೂ ಚೆಂದಗ ಇರಪಾ ಸಾಯೋ ಕಾಲಕ್ಕೆ ನಿನ್ನ ನೀರು ಕುಡಿದ ಸಾಯಬೇಕ ಅಂತ ಬಯಸಿದೇನ”.

ಅಲ್ಲಪಾ ಶಂಕರಜ್ಜ ನಿಪ್ಪಾಣಿಕರ ಸರ್ಕಾರ ಬ್ಯಾಟಿಯಾಡಾಕ ಬಂದಾಗ ದಣಿವು ಆರಿಸಿಕೊಳ್ಳೋ ಸಮಯದಾಗ ನನ್ನ ನೀರು ಕುಡಿದು ಹೊಗಳಿದ್ದು, ರಾಣಿ ಸರ್ಕಾರಗೆ ನನ್ನ ನೀರು ಕೊಟ್ಟಾಗ ಆಕೆ ರುಚಿ ಸವಿದು ನನಗೆ ದಿನಾ ಇದ ನೀರು ಬೇಕೆಂದಾಗ ರಾಣಿ ಇರೋವರೆಗೂ ನನ್ನ ನೀರು ಅರಮನೆ ತಲುಪತಿತ್ತು.

ಈ ವಿಷಯದಲ್ಲಿ ನಿನ್ನ ಎಷ್ಟ ಹೊಗಳಿದರೂ ಕಡಿಮೆಯೇ, ನಮ್ಮ ಅಪ್ಪ, ನಾನು, ಈಗ ನನ್ನ ಮಗ ಹಾಗೂ ನನ್ನ ಮೊಮ್ಮಕ್ಕಳಿಗೂ ನಿನ್ನ ನೀರೇ ಆಧಾರ. ಒಮ್ಮೆ ಮಾತ್ರ ನೀನು ನರಳಿದ್ದ ನೋಡೇನಿ. ಅದು ೧೯೬೮ರ ಭೀಕರ ಬರಗಾಲ. ಸುತ್ತು ಊರಿನ ಕೆರೆ ಬಾವಿ ಕೊಳ್ಳ ಎಲ್ಲಾ ಬತ್ತಿ ಹೊಗಿದ್ದವು. ಆ ಸಮಯದಾಗ ಒಂಚೂರ ನಿತ್ರಾಣಗೊಂಡ ನಿನ್ನ ಒಡಲಿನ್ಯಾಗಿನ ನೀರು ತುಂಬಾಕ ಬಾಳ ಹೊತ್ತು ಬೇಕಿತ್ತು. ಅದಕ್ಕ ಸಂಜಿಕ ಅರಳಿಮರದ ಕೆಳಗೆ ಊರಿನ ಹಿರಿಯರೆಲ್ಲ ಒಂದು ಠರಾವು ಪಾಸ್ ಮಾಡಿದೆವು. ಇನ್ನ ಮುಂದು ಬೆಟ್ಟದ ಕಟ್ಟಿ ಗುಡಿಯ ದೊಡ್ಡ ಗಂಟಿ ಬಾರಿಸಿದಾಗ ಮಾತ್ರ ೧ ಗಂಟೆ ಬಾವಿ ನೀರು ಸೇದಬೇಕು ಅಂತ.

 

ಹೌದು ಶಂಕರಜ್ಜ ಅದನೆಲ್ಲಾ ನೆನಪು ತಗೆದ್ದರ ಕಣ್ಣಾಗ ನೀರ ಬರತಾವ ಈ ಚಂದ್ರ ಹುಣ್ಣಿಮೆ ದಿನ ಬಂದು ಮಾತನಾಡಿಸಿ ಹೊಗತಾನ, ನನ್ನ ದಣಿವು ನೋವು ನಲಿವು ಹಂಚಿಕೊಂಡು ಕೇಳಿ ಬ್ಯಾಸರ ಪಡತಾನ ಪ್ರತಿ ಬಾರಿನೂ ಅಂಜಿಕೆಯಿಂದಲೆ ಅವನ್ನ ಬಿಳ್ಕೋಡತೇನ, ಮತ್ತ ಅಂವ ಹೋಗುವಾಗ ಇದ ಕಡಿ ಭೆಟ್ಟಿ ಏನೋ ಅನಸ್ತದ ಎಂದು ಗದ್ಗದಿತವಾಯಿತು ಬಾವಿ.

 

ಚಿತ್ರ-ಲೇಖನ: ವಿನೋದ ರಾ ಪಾಟೀಲ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*