ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೩: ಕೆರೆ, ಕಣಿವೆ ನೀರು ಸಂಸ್ಕರಿಸಿ ನೀಡುವ ಮುನ್ನ ಯೋಜಿಸಿ!

ಕೆರೆ, ಕಣಿವೆಯ ನೀರು ಮಾಲಿನ್ಯದ ಮೇಲಿನ ದುಷ್ಪರಿಣಾಮದ ಜತೆಗೆ ಜನರ ಆರೋಗ್ಯಕ್ಕೂ ಕಂಟಕವಾಗಿದೆ. ಆದರೆ ಇಂತಹ ಮಾಲಿನ್ಯದ ನೀರನ್ನೇ ಸಂಸ್ಕರಿಸಿ ಆನೇಕಲ್‌ನ ಕೆರೆಗಳನ್ನು ಸೇರಲು ಯೋಜನೆ ರೂಪುಗೊಂಡು ಕಾಮಗಾರಿಯೂ ಆರಂಭವಾಗಿದೆ. ಕೋರಮಂಗಲ-ಚಲ್ಲಘಟ್ಟ ಕಣಿವೆ ಹಾಗೂSAMSUNG CAMERA PICTURES ಕೆರೆಗಳ ನೀರು ಮೇಲ್ಮೈ ಮಾಲಿನ್ಯದ ಜತೆಗೆ ಅಂತರ್ಜಲವನ್ನು ಬಹಳಷ್ಟು ಮಾಲಿನ್ಯಗೊಳಿಸಿರುವುದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಇಷ್ಟಾದರೂ ಸಂಸ್ಕರಣೆಯ ಮಾನದಂಡವನ್ನು ಮಾತ್ರ ಬದಲಿಸಿಕೊಂಡಿಲ್ಲ.

ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸಬಾರದು ಎಂದು ಯಾವ ತಜ್ಞರೂ ಅಥವಾ ಸ್ಥಳೀಯರೂ ಹೇಳುತ್ತಿಲ್ಲ. ಆದರೆ, ಆ ಸಂಸ್ಕರಿಸಿದ ನೀರು ಎಷ್ಟರ ಮಟ್ಟಿಗೆ ತನ್ನ ‘ಪಾವಿತ್ರ್ಯತೆ’ ಹೊಂದಿರುತ್ತದೆ ಹಾಗೂ ಈ ಸಂಸ್ಕರಿಸಿದ ನೀರು ಅಂತರ್ಜಲವನ್ನು ಮಾಲಿನ್ಯಗೊಳಿಸುವುದಿಲ್ಲವೇ ಎಂಬುದೇ ಪ್ರಶ್ನೆ. ಸಂಸ್ಕರಿಸಿದ ನೀರಿನ ಗುಣಮಟ್ಟವನ್ನು ಹದ್ದುಗಣ್ಣಿಟ್ಟು ಕಾಯುವವರ‍್ಯಾರು ಎನ್ನುವುದು ಅತ್ಯಂತ ಪ್ರಮುಖ.

 ನಗರದ ಅಂತರ್ಜಲದ ಬಗ್ಗೆ ಸುಮಾರು ೭೧ ಸಂಸ್ಥೆಗಳು ಹಾಗೂ ತಜ್ಞರು ಅಧ್ಯಯನ ನಡೆಸಿದ್ದಾರೆ. ಆ ವರದಿಗಳಲ್ಲೆಲ್ಲ ಅಂತರ್ಜಲ ಮಾಲಿನ್ಯದ ಬಗ್ಗೆಯೇ ಹೆಚ್ಚಿನ ಮಾತು. ಇದಕ್ಕೆ ಒಳಚರಂಡಿ ನೀರೇ ಅಧಿಕ ಕಾರಣ ಎಂಬುದೇ ವಿವರಣೆ. ದಶಕಗಳಿಂದ ಕಣಿವೆಗಳಲ್ಲಿ ಈ ಒಳಚರಂಡಿ ನೀರು ಹೊರಪ್ರದೇಶದಲ್ಲೇ ಹರಿಯುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆದರೆ, ತಜ್ಞರ ಸಲಹೆಯಂತೆ ನೀರು ಸಂಸ್ಕರಣೆಗೆ ಸೂಕ್ತ ಕ್ರಮವೇ ಆಗಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ಅತಿ ಹೆಚ್ಚಾಗುತ್ತಲೇ ಇದೆ. ರಾಸಾಯನಿಕ ಮಾಲಿನ್ಯ ಅತಿ ಹೆಚ್ಚಾಗುತ್ತಿರುವುದೇ ಅತ್ಯಂತ ಆತಂಕಕಾರಿ ವಿಷಯವಾಗಿದೆ. ಇದಕ್ಕೆ ಬೆಳ್ಳಂದೂರು, ಯಮಲೂರು ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪ್ರಮುಖ. ಮಾಲಿನ್ಯ ನಿಯಂತ್ರಣಕ್ಕೆ ತಾತ್ಕಾಲಿಕ ಶಮನದಂತಹ ಕೆಲಸಗಳಾಗುತ್ತಿವೆ. ಇದಕ್ಕೊಂದು ಸಮಗ್ರ ರೂಪುರೇಷೆಯ ಕೆಲಸವಾಗಬೇಕು. ಇದನ್ನು ನಿರ್ವಹಿಸಲೇ ಪ್ರತ್ಯೇಕ ವಿಭಾಗ ಇರಬೇಕು. ಕೆಲಸ ಈಗಲೇ ಪ್ರಾರಂಭವಾದರೆ ಮುಂದಿನ ಕೆಲವು ವರ್ಷಗಳಲ್ಲಿ ಈ ಮಾಲಿನ್ಯವನ್ನು ತಹಬದಿಗೆ ತರಬಹುದು ಎಂಬುದು ತಜ್ಞರ ಅಭಿಪ್ರಾಯ.

ಚಲ್ಲಘಟ್ಟ ಕಣಿವೆಯಲ್ಲಿ ಬೆಳ್ಳಂದೂರು, ವರ್ತೂರು ಮಾರ್ಗವಾಗಿ ಹರಿಯುವ ರಾಸಾಯನಿಕಯುಕ್ತ ಒಳಚರಂಡಿ ನೀರು ದಕ್ಷಿಣ ಪಿನಾಕಿನಿ ನದಿ ಸೇರಿಕೊಳ್ಳುತ್ತದೆ. ಆನೇಕಲ್ ತಾಲೂಕಿನ ಮುತ್ತಸಂದ್ರದ ಬಳಿ ಸಂಸ್ಕರಿಸಿದ ಕೊಳಚೆ ನೀರನ್ನು ಏತ ನೀರಾವರಿ ಮೂಲಕ ಈ ತಾಲೂಕಿನ ೬೦ ಕೆರೆಗಳಿಗೆ ತುಂಬಿಸುವ ಯೋಜನೆ ಕಾಮಗಾರಿ ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಸುಮಾರು ೨೦೦ ಕೋಟಿ ವೆಚ್ಚ. ಕೋರಮಂಗಲ-ಚಲ್ಲಘಟ್ಟ ವ್ಯಾಲಿಯಲ್ಲಿ ಪ್ರತಿನಿತ್ಯ ೬೪೫ ದಶಲಕ್ಷ ಲೀಟರ್ ಒಳಚರಂಡಿ ನೀರು ಹರಿಯುತ್ತದೆ ಎಂಬುದು ಜಲಮಂಡಳಿಯ ಅಂಕಿ-ಅಂಶ. ಇದರಲ್ಲಿ ೧೪.೫ ದಶಲಕ್ಷ ಲೀಟರ್ ಅನ್ನು ಸಂಸ್ಕರಿಸಿ ಆನೇಕಲ್ ತಾಲೂಕಿನ ಅದರಲ್ಲೂ ಸರ್ಜಾಪುರ ಹೋಬಳಿಯ ೬೦ ಕೆರೆಗಳನ್ನು ತುಂಬುವ ಏತ ನೀರಾವರಿ ಯೋಜನೆಗೆ ೧೭೦ ಕೋಟಿ ಹಣವನ್ನು ಸಣ್ಣ ನೀರಾವರಿ ಇಲಾಖೆ ನೀಡುತ್ತಿದೆ. ಅಲ್ಲದೆ, ಆನೇಕಲ್ ಯೋಜನಾ ಪ್ರಾಕಾರದಲ್ಲಿ ಕೆರೆಗಳ ಅಭಿವೃದ್ಧಿಗೆ ೪೦ ಕೋಟಿ ಹಣ ಇದೆ. ಈ ಹಣವನ್ನೂ ಬಳಸಿಕೊಂಡು ಒಳಚರಂಡಿ ನೀರು ಸಂಸ್ಕರಿಸಿ ಹರಿಸಲು ನಿರ್ಧರಿಸಲಾಗಿದೆ.

SAMSUNG CAMERA PICTURES“ತೀವ್ರ ಕುಡಿಯುವ ನೀರಿನ ಸಂಕಷ್ಟವನ್ನು ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತ ನೀರಾದರೂ ಸಿಗುತ್ತಿದ್ದು, ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದರೂ ವಿಧಿ ಇಲ್ಲದೇ ಅದೇ ನೀರನ್ನು ಜನ ಮತ್ತು ಜಾನುವಾರುಗಳು ಕುಡಿಯಲು ಉಪಯೋಗಿಸುತ್ತಿದ್ದೆವು. ಆದರೆ ಇತ್ತೀಚಿಗೆ ಅಂತರ್ಜಲ ಪಾತಾಳಕ್ಕೆ ಹೋಗಿ ನೀರೇ ಸಿಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಸುಮಾರು ೩೮೦೦ ಕೆರೆಗಳಿಗೆ ನದಿ ನೀರನ್ನು ಹರಿಸಿ ಅಂತರ್ಜಲದ ಅಭಿವೃದ್ಧಿಗೊಳಿಸಿ ಎಂಬ ಹೋರಾಟ ಕೇವಲ ಅರಣ್ಯರೋಧನವಾಗಿದೆ. ಎತ್ತಿನಹೊಳೆಯಿಂದ ನೀರು ಎಂಬ ಭರವಸೆ ಹುಸಿಯಾಗಲಾರಂಬಿಸಿದೆ. ಈಗ ಕನಿಷ್ಠ ಬೆಂಗಳೂರು ನಗರದ ಜನರ ಪಾಯಖಾನೆ ನೀರಾದರೂ ಕೊಡಿ ಎಂದು ಬೇಡುವ ದಯನೀಯ ಸ್ಥಿತಿಗೆ ತಲುಪಿದ್ದೇವೆ. ಬೆಂಗಳೂರು ಜನ ಉಪಯೋಗಿಸಿದ ತ್ಯಾಜ್ಯ ನೀರು ಮತ್ತು ಮಳೆ ನೀರನ್ನು ಸಂಸ್ಕರಿಸಿ ನಮ್ಮ ಕೆರೆಗಳಿಗೆ ಹರಿಸಿದರೆ ನಮ್ಮ ಕೆರೆಗಳು ಬೆರಳೆಣಿಕೆಯಷ್ಟಾದರೂ ತುಂಬಬಹುದು. ಆದರೆ ಇಂದು ಬೆಂಗಳೂರು ನಗರದಲ್ಲಿರುವ ಕೈಗಾರಿಕೆಗಳು ಮತ್ತು ಕಾರ್ಖಾನೆಗಳಿಂದ ಹೊರಬರುವ ಎಲ್ಲಾ ಹಾನಿಕಾರಕ ಮತ್ತು ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಸಂಸ್ಕರಿಸಿದ ನಂತರವೇ ಹೊರಹಾಕಬೇಕೆಂಬ ಷರತ್ತುಬದ್ಧ ಕಾಯ್ದೆಗಳ ಅನ್ವಯ ಪರವಾನಗಿ ನೀಡಿದ್ದರೂ, ಅದ್ಯಾವುದನ್ನೂ ಪಾಲಿಸದೇ ಇಂದು ಕಾರ್ಖಾನೆಗಳು ರಾಸಾಯನಿಕಯುಕ್ತ ತ್ಯಾಜ್ಯದ ಸಂಗ್ರಹಣಾ ತಾಣಗಳಾಗಿವೆ. ಇಡೀ ಸರ್ಕಾರ, ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಽಕಾರಿಗಳಿರುವ ಬೆಂಗಳೂರು ನಗರದಲ್ಲಿಯೇ ಕಾನೂನು ಪಾಲನೆಯಾಗಿಲ್ಲ ಇನ್ನು ನಮ್ಮ ಜಿಲ್ಲೆಗಳಲ್ಲಿ ಯಾವ ಪರಿಸ್ಥಿತಿ ಉಂಟಾಗಬಹುದು” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

 “ಒಂದು ಕಾಲದಲ್ಲಿ ನಗರದ ಜೀವನಾಡಿಗಳಾಗಿದ್ದಂತಹ ಬೆಂಗಳೂರಿನ ಕೆರೆಗಳು ಅನೇಕ ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡಬಲ್ಲ ರಾಸಾಯನಿಕಗಳಿಂದ ಕೂಡಿದ್ದು, ಸಲ್ಫರ್‌ನಂತಹ ರಾಸಾಯನಿಕಗಳಿಂದ ಹೊತ್ತಿ ಉರಿಯಲಾರಂಭಿಸಿವೆ. ಇಂತಹ ವಿಷಪೂರಿತ ನೀರನ್ನು ಹತಾಶೆಯಿಂದ ನರಳಾಡುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸುವಾಗ, ಆ ನೀರಿನ ಶುದ್ಧತೆಯ ಬಗ್ಗೆ ಪ್ರತಿನಿತ್ಯ ಹದ್ದಿನ ಕಣ್ಣಿಟ್ಟು ಪ್ರಮಾಣೀಕರಿಸಬೇಕಾಗುತ್ತದೆ. ಮುಂದೊಂದು ದಿನ ಬೆಂಗಳೂರು ನಗರದ ಘನತ್ಯಾಜ್ಯದಿಂದ ನರಳುತ್ತಿರುವ ಮಂಡೂರಿನಂತೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳು ವಿಷಪೂರಿತ ನೀರಿನ ತ್ಯಾಜ್ಯದಿಂದ ಮಲಿನಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಆದ್ದರಿಂದ ಮುಖ್ಯಮಂತ್ರಿಯವರು, ಸಣ್ಣ ನೀರಾವರಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ. “ಆನೇಕಲ್ ಕೆರೆಗಳು ಇರುವುದರಲ್ಲಿ ಹೆಚ್ಚಿನ ಮಾಲಿನ್ಯದಿಂದ ಕೂಡಿಲ್ಲ. ಒತ್ತುವರಿ ಆಗಿರುವುದು ನಿಜ. ಆದರೆ, ಕೆರೆ ಅಸ್ತಿತ್ವ ಇದೆ. ಇಲ್ಲಿಗೆ ವರ್ತೂರು ಕೆರೆಯಲ್ಲಿರುವ ವಿಷಕಾರಕ ಅಂಶದ ಒಳಚರಂಡಿ ನೀರನ್ನು ಸಂಸ್ಕರಿಸಿ ನೀಡುತ್ತೇವೆ ಎಂದು ಯೋಜನೆ ಆರಂಭಿಸಿದ್ದಾರೆ. ಆದರೆ, ಇದನ್ನು ಪ್ರಮಾಣೀಖರಿಸುವವರು ಯಾರೂ? ಪ್ರತಿನಿತ್ಯವೂ ಇದನ್ನು ಗಮನಿಸುವುದು ಯಾರು? ಬೆಳ್ಳಂದೂರು ಸಮೀಪ ಸಂಸ್ಕರಣೆ ಘಟಕ ಇದ್ದರೂ ಅಲ್ಲಿ ನೀರು ಸಂಸ್ಕರಣೆಯಾಗದೆ ಮಾಲಿನ್ಯವೇ ಇದೆ. ಇದೇ ರೀತಿ ನಮ್ಮ ತಾಲೂಕಿನ ಕೆರೆಗಳೂ ಆಗುವುದು ಬೇಡ. ಯೋಜನೆ ಅನುಷ್ಠಾನಕ್ಕೆ ಮುನ್ನ ಜನರಿಗೆ ಈ ಬಗ್ಗೆ ಖಚಿತತೆ ನೀಡಬೇಕು” ಎಂಬುದು ಆನೇಕಲ್‌ನ ಎನ್.ಆರ್. ಮಹದೇವ್ ಪ್ರಸಾದ್ ಅಭಿಪ್ರಾಯ. ತಜ್ಞರು, ಜನರು ಹಾಗೂ ಸಾಮಾನ್ಯಜ್ಞಾನವನ್ನು ಉಪಯೋಗಿಸಿಕೊಂಡು ಯೋಜನೆಗಳು ರೂಪುಗೊಂಡು ಅನುಷ್ಠಾನವಾದರೆ ಮಾತ್ರ ಎಲ್ಲರಿಗೂ ಹಿತ. ಈ ಬಗ್ಗೆ ಸರಕಾರ, ಅದರಲ್ಲಿರುವ ಅಧಿಕಾರಿಗಳು ಅರಿತುಕೊಳ್ಳಬೇಕು.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*