ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಖರೆಜ್ ಅಥವಾ ಖಾನತ್ ಎಂಬ ಪ್ರಾಚೀನ ನೀರಾವರಿ ವ್ಯವಸ್ಥೆ

ಕಳೆದ ಐನೂರು ವರ್ಷಗಳ ಹಿಂದೆ ಕರ್ನಾಟಕದ ಬೀದರ್ ಮತ್ತು ಗುಲ್ಬರ್ಗವನ್ನು ಆಳಿದ ಬಹಮನಿ ಸುಲ್ತಾನರು ಹಾಗೂ ಬಿಜಾಪುರವನ್ನು ಆಳಿದ ಆದಿಲ್ ಶಾಹಿ ಮನೆತನದ ದೊರೆಗಳು ತಮ್ಮ ಅರಮನೆಗಳು ಹಾಗೂ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ನಗರಗಳಿಗೆ ಕುಡಿಯುವ ನೀರಿಗಾಗಿ ಅಳವಡಿಸಿಕೊಂಡಿದ್ದ ನೀರಾವರಿ ವ್ಯವವಸ್ಥೆಯ ದೇಶಿ ಜ್ಞಾನ ಬೆರಗು ಮೂಡಿಸುತ್ತದೆ. ಅಂದಿನ ಪರ್ಷಿಯನ್ ( ಇಂದಿನ ಇರಾನ್, ಇರಾಕ್, ಟರ್ಕಿ) ಮೂಲದ ಖರೆಜ್ ಅಥವಾ ಖಾನತ್ ಎಂದು ಕರೆಯಲಾಗುತ್ತಿದ್ದ ದೇಶಿ ತಂತ್ರಜ್ಞಾನದ ಆಧಾರದ ಮೇಲೆ ಸ್ಥಳಿಯ ಗುಡ್ಡ ಮತ್ತು ಬೆಟ್ಟಗಳಲ್ಲಿ ಸುರಂಗಗಳನ್ನು ಕೊರೆದು, ಅಲ್ಲಿ ನೈಸರ್ಗಿಕವಾಗಿ ಜಿನುಗುವುದರ ಮೂಲಕ ದೊರೆಯುತ್ತಿದ್ದ ನೀರನ್ನು ಭೂಮಿಯೊಳಗಿನ ಸುರಂಗ ಕಾಲುವೆಗಳ ಮೂಲಕ ಹಾಯಿಸುವುದು ಹಾಗೂ ಹೆಚ್ಚುವರಿ ನೀರನ್ನು ಸುರಂಗದ ಬಾವಿಗಳಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತಿದ್ದ ಬಗೆ ಇದೀಗ ಎಲ್ಲಾ ಜಲತಜ್ಞರಲ್ಲಿ ಆಸಕ್ತಿ ಮೂಡಿಸಿದೆ. ಇತ್ತೀಚೆಗೆ ಬೀದರ್ ಮತ್ತು ಬಿಜಾಪುರಗಳಲ್ಲಿ ಈ ಪ್ರಾಚೀನ ಜಲಮೂಲ ತಾಣಗಳನ್ನು ಪತ್ತೆ ಹಚ್ಚುವ ಕಾರ್ಯಮುಂದುವರಿದಿದ್ದು,ಇದಕ್ಕೆ ಸರ್ಕಾರ ಪ್ರೋತ್ಸಾಹ ನೀಡಿದೆ. ಜೊತೆಗೆ ಹಲವಾರ ಸ್ವಯಂ ಸೇವಾ ಸಂಘಟನೆಗಳು ಸಹ ಇವುಗಳು ಪುನರುತ್ಥಾರಕ್ಕೆ ಕೈ ಜೊಡಿಸಿವೆ.

ಅತ್ಯಂತ ಪ್ರಾಚೀನವಾದ ಈ ಮಳೆನೀರು ಕುಯ್ಲು ಹಾಗೂ ಸುರಂಗ ಕಾಲುವೆ ಮತ್ತು ಬಾವಿ ವ್ಯವಸ್ಥೆಯು ಇಸ್ಲಾಂ ಧರ್ಮ ಉದಯವಾಗುವ ಮುನ್ನವೇ ಇತ್ತು ಎಂದು ಹೇಳಲಾಗಿದೆ. ಹಲವು ಇತಿಹಾಸಕಾರರು ಇದರ ಹುಟ್ಟಿನ ಕಾಲಾವಧಿಯನ್ನು ಕ್ರಿ.ಪೂ 30 ರಿಂದ ಕ್ರಿ.ಶ.395 ಎಂದು ಗುರುತಿಸಿದ್ದಾರೆ. ಹಿಂದಿನ ಸೋವಿಯತ್ ರಷ್ಯಾದ ಭಾಗವಾಗಿದ್ದ ಅಜರ್ ಬೈನ್ ಪ್ರಾಂತದಲ್ಲಿದ್ದ 9 ನೇ ಶತಮಾನದ ಸುರಂಗ ಕಾಲುಗಳನ್ನು ಪತ್ತೆ ಮಾಡಲಾಗಿದೆ. ಹನ್ನೊಂದನೆಯ ಶತಮಾನದಲ್ಲಿ ಖರಜಿ ಎಂಬಾತನು ಪರ್ಷಿಯನ್ ಭಾಷೆಯಲ್ಲಿ ಬರೆದಿರುವ “ ಅಂತರ್ಜಲ ನಿಧಿ ಶೋಧ ಮತ್ತು ಬಳಕೆ” ಎಂಬುದು ಖರೇಜ್ ನೀರಾವರಿ ವ್ಯವಸ್ಥೆಯ ಮೊದಲ ಅಧಿಕೃತ ಪುಸ್ತಕ ಎಂದು ಗುರುತಿಸಲಾಗಿದೆ. ಜಗತ್ತಿನ 38 ರಾಷ್ಟ್ರಗಳಲ್ಲಿ ( ಏಷ್ಯಾ ಖಂಡದ ರಾಷ್ಟ್ರಗಳಲ್ಲಿ ಅತಿ ಹೆಚ್ಚು) 50 ಸಾವಿರ ಸುರಂಗ ಕಾಲುವೆಗಳು ಮತ್ತು ಬಾವಿಗಳು ಇದ್ದು, 2015 ರ ವೇಳೆಗೆ ಇವುಗಳ ಸಂಖ್ಯೆ 37 ಸಾವಿರಕ್ಕೆ ಕುಸಿದಿದೆ ಎಂದು ಇತಿಹಾಸ ತಜ್ಞರು ಹೇಳುತ್ತಿದ್ದಾರೆ.. ಕಳೆದ ಶತಮಾನದ ಅಂತ್ಯದಲ್ಲಿ ಜಾರಿಗೆ ಬಂದ ಕೊಳವೆ ಬಾವಿಗಳ ವ್ಯವಸ್ಥೆಯಿಂದಾಗಿ ಇವುಗಳ ಅಸ್ತಿತ್ವಕ್ಕೆ ಧಕ್ಕೆಯುಂಟಾಯಿತು. ಚೀನಾದ ಕ್ಷಿಂಜಿಗಾಂಗ್ ಎಂಬ ಪ್ರಾಂತ್ಯದಲ್ಲಿ ಇವೊತ್ತಿಗೂ ಜನತೆ ಇದರ ಪ್ರಯೋಜನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ನಮ್ಮ ನೆರೆಯ ಆಫ್ಘನಿಸ್ತಾನದಲ್ಲಿ 1500 ಕ್ಕೂ ಹೆಚ್ಚು ಸುರಂಗ ಕಾಲುವೆಗಳು ಇದ್ದವು. ಆದರೆ, ತಾಲಿಬಾನ್ ಉಗ್ರರ ವಿರುದ್ಧ ಯುದ್ಧ ಸಾರಿದ ಅಮೇರಿಕಾ ದೇಶವು ತನ್ನ ಸೈನಿಕ ನೆಲೆಗಾಗಿ ಅಲ್ಲಿನ ಗುಡ್ಡಗಳನ್ನು ನೆಲಸಮ ಮಾಡಿದಾಗ ಅನೇಕ ಜಲಮೂಲ ತಾಣಗಳು ಮುಚ್ಚಿಹೋದವು. ಇರಾನಿನ ವಾರ್ಧಕ್ ಪ್ರಾಂತ್ಯದಲ್ಲಿ ಇರುವ 8 ಕಿಲೊಮೀಟರ್ ಉದ್ದ ಸುರಂಗ ಕಾಲುವೆಯನ್ನು ಅತಿ ದೊಡ್ಡ ಕಾಲುವೆ ಎಂದು ಗುರುತಿಸಲಾಗಿದೆ.

logoಭಾರತ, ಪಾಕಿಸ್ಥಾನ, ಆಪ್ಘನಿಸ್ಥಾನದಲ್ಲಿ ಖರೇಜ್ ಅಥವಾ ಖಾನತ್ ಎಂತಲೂ, ಪರ್ಷಿಯನ್ ದೇಶದಲ್ಲಿ ಖರೀಜ್ ಎಂದು, ಉತ್ತರ ಆಫ್ರಿಕಾ ರಾಷ್ಟ್ರಗಳಲ್ಲಿ ಫಗುರ, ಅರಬ್ ರಾಷ್ಟ್ರಗಳಲ್ಲಿ ಫಲಜ್, ಜೋರ್ಡಾನ್ ಮತ್ತು ಸಿರಿಯಾ ರಾಷ್ಟ್ರಗಳಲ್ಲಿ ಖಾನಕ್ ರೋಮನಿ ಎಂದು ಕರೆಯಲಾಗುತ್ತಿದ್ದ ಈ ದೇಶಿ ತಂತ್ರಜ್ಞಾನ ಭಾರತಕ್ಕೆ ರೇಷ್ಮೆ ಮಾರ್ಗದ ಮೂಲಕ ( ಸಿಲ್ಕ್ ರೂಟ್) 14 ಅಥವಾ 15 ನೇ ಶತಮಾನದಲ್ಲಿ ಬಂದಿರಬೇಕೆಂದು ಊಹಿಸಲಾಗಿದೆ. ಪರ್ಷಿಯಾದಿಂದ ಭಾರತಕ್ಕೆ ಬಂದ ಕಾವ್ಯ, ಸಂಗೀತ, ಕಟ್ಟಡದ ವಾಸ್ತು ಶಿಲ್ಪಜ್ಞಾನ, ಸೂಫಿ ತತ್ವಗಳ ಇವುಗಳ ಜೊತೆ ಬಂದ ಜ್ಞಾನ ಶಿಸ್ತುಗಳಲ್ಲಿ ಇದು ಕೂಡ ಅತಿ ಮುಖ್ಯವಾದುದು. ಭಾರತಕ್ಕೆ ಬಹಮನಿ ಸುಲ್ತಾನರ ಅವಧಿಯಲ್ಲಿ ಬಂದಿರುವ ಈ ತಂತ್ರಜ್ಞಾನ ಕರ್ನಾಟಕದ ಬೀದರ್, ಬೀಜಾಪುರ ನಂತರ ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಎಲ್ಲೊರ ಗುಹೆಗಳ ಸಮೀಪ ಇರುವ ಮಹಮದ್ ಬಿನ್ ತೊಘಲಕ್ ನ ದೌಲತಾಬಾದ್ ಕೋಟೆಯಲ್ಲಿ ಅಳವಡಿಕೆಯಾಗಿರುವು ವಿಶೇಷ.

ಹದಿನೈದನೆಯ ಶತಮಾನದಲ್ಲಿ ಬಹುತೇಕ ದಕ್ಷಿಣ ಪ್ರಾಂತ್ಯವು ಮುಸ್ಲಿಂ ದೊರೆಗಳ ಆಳ್ವಿಕೆಯಲ್ಲಿತ್ತು. ಬಿಜಾಪುರ, ಗೋಲ್ಕಂಡ, ಬೀದರ್, ಗುಲ್ಬರ್ಗ, ಮಹರಾಷ್ಟ್ರದ ಅಹಮದಾಬಾದ್, ಮತ್ತು ಮಧ್ಯಪ್ರದೇಶದ ಬೇರತ್ ಪ್ರದೇಶಗಳನ್ನು ಮುಸ್ಲಿಂರು ( ಬಹಮನಿ ದೊರೆಗಳು) ಆಳುತ್ತಿದ್ದರು. ಕ್ರಿ.ಶ. 1487 1619 ರವರೆಗೆ ಬೀದರ್ ಅನ್ನು ಆಳಿದ ಬರೀದ್ ಶಾಹಿ ಮನೆತನ ಆಳ್ವಿಕೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿರಬೇಕು ಎಂದು ಇತಿಹಾಸಕಾರರು ಊಹಿಸಿದ್ದಾರೆ. ಏಕಕಾಲದಲ್ಲಿ ಅಂದರೆ, 1518 ರಲ್ಲಿ ಗೋಲ್ಕಂಡ ಮುಸ್ಲಿಂ ದೊರೆ ಹಾಗೂ 1528 ರಲ್ಲಿ ಬಹಮನಿ ಸುಲ್ತಾನ ಮತ್ತು ನಂತರ ಬಿಜಾಪುರ್ ಆದಿಲ್ ಶಾಹಿ ದೊರೆ ಇವರುಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಔರಂಗಬಾದ್ ನಗರದಲ್ಲಿ ಔರಂಗಜೇಬನು ತನ್ನ ತಾಯಿಯ ನೆನಪಿಗಾಗಿ ತಾಜ್ ಮಹಲ್ ಪ್ರತಿ ರೂಪದ ಮಾದರಿಯಲ್ಲಿ ನಿರ್ಮಿಸಿರುವ “ಬೀಬಿ ಕಾ ಮಖ್ಬಾರ” ಎಂಬ ಸ್ಮಾರಕ ಕಟ್ಟಡದ ಮುಂಭಾಗದ ಎಡಭಾಗದ ಮೂಲೆಯಲ್ಲಿ ಸುಮಾರು ಮೂರು ಕಿಲೊಮೀಟರ್ ದೂರದ ಗುಡ್ಡಗಳಿಂದ ಭೂಗತ ಕಾಲುವೆಗಳ ಮೂಲಕ ಹರಿದು ಬರುತ್ತಿದ್ದ ನೀರಿನ ವ್ಯವಸ್ಥೆಯನ್ನು ನಾವು ಇಂದಿಗೂ ನೋಡಬಹುದು. ಅದೇ ರೀತಿ ದೌಲತಾಬಾದ್ ಕೋಟೆಯನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿ ಕಾಣುವ ಅತಿ ಎತ್ತರದ ಕಾವಲು ಗೋಪುರದ ಬಳಿ ಇದೇ ರೀತಿ ಹರಿದು ಬರುತ್ತಿದ್ದ ನೀರಿನ ಸಂಗ್ರಕ್ಕೆ ಬೃಹದಾದ ಒಂದು ಕೊಳವನ್ನು ನಿರ್ಮಿಸಲಾಗಿದೆ. ಕೊಳದಲ್ಲಿ ಆನೆಗಳು ಈಜಾಡುತ್ತಿದ್ದವು ಎಂದು ಸ್ಥಳಿಯರು ಈಗಲೂ ಸಹ ಹೇಳುತ್ತಾರೆ. ಇನ್ನು ಹೈದರಾಬಾದ್ ಹೊರ ವಲಯದಲ್ಲಿರುವ ಮಿಲಿಟರಿ ಕಂಟೊನ್ಮೆಂಟ್ ಬಳಿಯ ಗೊಲ್ಕಂಡ ಕೊಟೆಯಲ್ಲೂ ಸಹ ಈ ವ್ಯವಸ್ಥೆಯ ಅವಶೇಷಗಳನ್ನು ನಾವು ಕಾಣಬಹುದು.

logoಎರಡು ವರ್ಷಗಳ ಹಿಂದೆ ಬೀದರ್ ನಗರದ ಹೊರ ವಲಯದ ನೌಬಾದ್ ಎಂಬ ಹಳ್ಳಿಯ ಬಳಿ ಗಿಡಗಳು ಮತ್ತು ಪೊದೆಗಳಿಂದ ಮುಚ್ಚಿಹೋಗಿದ್ದ ನೆಲಮಾಳಿಗೆಗೆ ಹೂಗುವಂತಹ ಮೆಟ್ಟಿಲುಗಳುಳ್ಳ ದೊಡ್ಡ ರಂಧ್ರವೊಂದು ಗೋಚರವಾದ ಹಿನ್ನಲೆಯಲ್ಲಿ ಇತಿಹಾಸ ಗರ್ಭದಲ್ಲಿ ಹೂತು ಹೋಗಿದ್ದ ಖರೇಜ್ ಎಂಬ ನೀರಾವರಿ ವ್ಯವಸ್ಥೆ ಮತ್ತೆ ನಮ್ಮೆದುರು ತೆರೆದುಕೊಂಡಿದೆ. ಕೇರಳದ ಇಂಡಿಯನ್ ಹೆರಿಟೇಜ್ ಸಿಟಿಸ್ ನಟ್ವರ್ಕ್ ಪೌಂಡೇಶನ್ ಸಂಸ್ಥೆಯ ಮುಖ್ಯಸ್ಥ ಗೋವಿಂದನ್ ಕುಟ್ಟಿ ನೇತೃತ್ವದಲ್ಲಿ ಸಂಶೋಧನಾ ಕಾರ್ಯಮುಂದುವರಿದಿದ್ದು ಇದೀಗ ಬಹುತೇಕ ಸುರಂಗ ಕಾಲುವೆಗಳನ್ನು ಪತ್ತೆ ಹಚ್ಚಲಾಗಿದೆ. ಬೀದರ್ ಕೋಟೆಯೊಳಗೆ ಇರುವ ಅರಮನೆಯ ಸ್ನಾನದ ಗೃಹಗಳಿಗೆ ನೀರಿನ ಸಂಪರ್ಕ ಕಲ್ಪಿಸಿದ್ದ ಮಣ್ಣಿನ ಕೊಳವೆಗಳು ಸಹ ಪತ್ತೆಯಾಗಿವೆ. ಜೊತೆಗೆ ಮಳೆಗಾಲದಲ್ಲಿ ಸಂಗ್ರಹವಾಗುತ್ತಿದ್ದ ಹೆಚ್ಚುವರಿ ನೀರನ್ನು ಬೇಸಾಯಕ್ಕೆ ಬಳಸಲಾಗುತ್ತಿದ್ದ ಸಂಗತಿ ಸುತ್ತ ಮುತ್ತ ಲಿನ ಹಳ್ಳಿಗಳಲ್ಲಿ ದೊರೆತ ಮಣ್ಣಿನ ಪೈಪ್ ಗಳಿಂದ ದೃಢಪಟ್ಟಿದೆ. ಸರ್ಕಾರ ಹಾಗೂ ಹಲವು ಸ್ವಯಂಸೇವಾ ಸಂಘಟನೆಗಳ ಸಹಕಾರದಿಂದ ಸುರಂಗ ಕಾಲುವೆಗಳಲ್ಲಿ ಇದ್ದ ಹೂಳನ್ನು ಹೊರತೆಗೆದು, ಕಾಲುವೆಗಳ ನಡುವೆ ಅಲ್ಲಲ್ಲಿ ಇದ್ದ ಚೌಕಕಾರದ ಆಳುದ್ದದ ಗುಂಡಿಗಳ ಸ್ವಚ್ಛಗೊಳಿಸಿದ ಪರಿಣಾಮವಾಗಿ ಮತ್ತೇ ನೀರು ಹರಿಯಲು ಆರಂಭಿಸಿದೆ. ಇದರಿಂದ ಉತ್ತೇಜನಗೊಂಡ ಬೀದರ್ ಜಿಲ್ಲಾಡಳಿತ ಬೀದರ್ ನಗರ ಹಾಗೂ ಕೋಟೆಯೊಳಗೆ ಇದ್ದ ತೆರದ ಬಾವಿಗಳನ್ನು ಸ್ವಚ್ಚಗೊಳಿಸಿ, ಅವುಗಳಲ್ಲಿ ತುಂಬಿದ್ದ ಕಸದ ರಾಶಿ ಹಾಗೂ ಹೂಳನ್ನು ತೆಗೆದ ಹಾಕಿದ ಫಲವಾಗಿ ಬಹುತೇಕ ಬಾವಿಗಳಲ್ಲಿ ನೀರು ಸಂಗ್ರಹವಾಗತೊಡಗಿದೆ.

logoಬೀದರ್ ನಲ್ಲಿ ನಡೆದ ಈ ಪ್ರಯೋಗದಿಂದ ಎಚ್ಚೆತ್ತುಕೊಂಡ ಬಿಜಾಪುರ್ ಜಿಲ್ಲಾಡಳಿತವೂ ಸಹ ಆದಿಲ್ ಶಾಹಿ ಯುಗದ ಸುರಂಗದ ಕಾಲುವೆಗಳು, ತಲಾಬ್ ಎಂದು ಕರೆಯುವ ಕೆರೆಗಳು, ಬಾವಡಿ ಎನ್ನಲಾಗುತ್ತಿದ್ದ ಕೊಳಗಳನ್ನು ಸ್ವಚ್ಚಗೊಳಿಸಿ ಪ್ರಾಚೀನ ಜಲಮೂಲದ ತಾಣಗಳಿಗೆ ಮರುಜೀವ ನೀಡುತ್ತಿದೆ. ಬಿಜಾಪುರದ ಜಿಲ್ಲಾಧಿಕಾರಿಗಳ ಕಛೇರಿದ್ದ ಸ್ಥಳದ ಸಮೀಪ ಆದಿಲ್ ಶಾಹಿ ಅರಮನೆಯ ಅವಶೇಷಗಳಿದ್ದು, ಜಲಮಹಲ್ ಎಂಬ ಒಂದು ಸುಂದರ ಕಟ್ಟಡ ಇವೊತ್ತಿಗೂ ಅಸ್ತಿತ್ವದಲ್ಲಿದೆ. ಅರಮನೆಯ ಸುತ್ತ ಮುತ್ತಾ ಮತ್ತು ಕೋಟೆಯ ಒಳಗಡೆ ಬೇಸಿಗೆಯ ದಿನಗಳಲ್ಲಿ ತಂಪನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸುಲ್ತಾನರು ವ್ಯವಸ್ಥೆ ಮಾಡಿಕೊಂಡಿದ್ದ ನೀರಿನ ಕಾರಂಜಿ, ಕೊಳಗಳು ಇವೆಲ್ಲವೂ ಅಧ್ಯಯನಕ್ಕೆ ಮಾದರಿಯಾಗಿದೆ.

ಜಲಕ್ಷಾಮದ ಪರಿಹಾರಕ್ಕೆ ಕೊಳವೆ ಬಾವಿಗಳು ಪರಿಹಾರ ಎಂಬ ಗುಂಗಿನಲ್ಲಿ ಮಿತಿ ಮೀರಿದ ಅಂತರ್ಜಲ ಬಳಕೆಯಿಂದಾಗಿ ಶಾಶ್ವತ ಜಲಕ್ಷಾಮವನ್ನು ಸೃಷ್ಟಿ ಮಾಡುತ್ತಿರುವ ಆಧುನಿಕ ಜಗತ್ತು, ಪ್ರಾಚೀನ ಹಾಗೂ ದೇಶಿ ಜ್ಞಾನ ಶಿಸ್ತುಗಳಲ್ಲಿ ಒಂದಾದ ಮಳೆ ಕುಯ್ಲು ನೀರಿನ ಸಂಗ್ರಹ ಹಾಗೂ ನಿಸರ್ಗದ ಕೊಡುಗೆಯಾದ ನೀರನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವ ಬಗೆಗೆ ಮಾದರಿಯಾದ ಖರೇಜ್ ಅಥವಾ ಖಾನತ್ ನೀರಾವರಿ ಪದ್ಧತಿಯತ್ತ ಗಮನ ಹರಿಸಬೇಕಿದೆ.

ಲೇಖಕರು: ಜಗದೀಶ್ ಕೊಪ್ಪ

ಮಾಹಿತಿ ಸೌಜನ್ಯ: http://bhoomigeetha.com

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*