ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ಕಾಳಜಿ

ಒಂದು ಬಸ್ ತನ್ನೊಡಲ ತುಂಬ ಜನರನ್ನು ತುಂಬಿಕೊಂಡು ಪ್ರವಾಸ ಹೊರಟಿತ್ತು.  ದಾರಿಯುದ್ದಕ್ಕೂ ಹಾಡು ಹರಟೆ ನಗುವಿನೊಂದಿಗೆ ಪ್ರವಾಸ ಮುದವಾಗಿತ್ತು.  ಪ್ರೇಕ್ಷಣೀಯ  ಸ್ಥಳಗಳು ಅಪೇಕ್ಷಣೀಯವಾಗಿದ್ದವು. ಉಳಿದುಕೊಳ್ಳಲು ಹೋಟೆಲ್‌ನಲ್ಲಿ ವ್ಯವಸ್ಥೆಯಾಗಿತ್ತು.

ಬೆಳಿಗ್ಗೆ ಇಂತಿಷ್ಟು ಸಮಯದವರೆಗೆ ‘ಬಿಸಿ ನೀರು’ ಬರುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದರು. ಸರಿ. ಬೆಳಿಗ್ಗೆ ಸ್ನಾನಕ್ಕೆಂದು ನೀರು ಬಿಟ್ಟರೆ ಬರೀ ತಣ್ಣೀರು!  ಗೀಸರ್ ಅಥವಾ ಸೋಲಾರ್ ವ್ಯವಸ್ಥೆಯೇ ಹಾಗೆ ಇರುತ್ತದೆ. ಮೊದಲ ಒಂದು-ಒಂದೂವರೆ-ಎರಡು ಬಕೆಟ್ ಗಳಷ್ಟು ತಣ್ಣೀರು ಬರುತ್ತದೆ. ಆ ನಂತರವೇ ಬಿಸಿನೀರು ಬರುವದು. ಬೇರೊಂದು ಬಕೆಟ್ ಇದ್ದರೆ ಹದ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಒಂದೇ ಬಕೆಟ್ ಇದ್ದರೆ? ಹದವಾಗುವವರೆಗೂ ತಣ್ಣೀರನ್ನು ಬಚ್ಚಲ ಮೋರಿಗೆ ಸುರಿಯುತ್ತಲೇ ಇರಬೇಕು. ಲಕ್ಷ ಲಕ್ಷ ಜನರು ಪ್ರತೀ ದಿನ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಾರೆ. ಪ್ರತೀ ಕೋಣೆಯ ಬಾತ್ ರೂಂ ಗಳಲ್ಲಿರುವದು ಒಂದೇ ಬಕೆಟ್! ಅವರ ನಿಯಮಗಳೇ ಹಾಗೆ ಇರುತ್ತವೋ ಏನೋ.  ಬಂಡವಾಳ ಹೂಡಿಕೆಯ ದೃಷ್ಟಿಯೂ ಅಲ್ಲಿ ಲೆಕ್ಕಕ್ಕೆ ಬರಬಹುದು. ಆದರೆ ಪರೋಕ್ಷವಾಗಿ  ನೈಸರ್ಗಿಕ ಸಂಪತ್ತು ನಾಶವಾಗುವದು ಲೆಕ್ಕಕ್ಕೇ ಇಲ್ಲ!

water_bucket_solid_state-2ಎರಡು ಬಕೆಟ್‌ಗಳನ್ನೇ ಇಟ್ಟಿರುತ್ತಾರೆ ಎಂದುಕೊಳ್ಳೋಣ. ಅಷ್ಟೊಂದು ಮುತುವರ್ಜಿಯಿಂದ ಉಪಯೋಗಿಸುವವರು ಯಾರು?  ಅವರು ಬಕೆಟ್ ನಲ್ಲಿ  ಉಳಿಸಿ ಹೋದ ನೀರನ್ನು ಹೊಸಬರಿಗಾಗಿ ತೆರವು ಮಾಡಬೇಕಾದಾಗ ನಿರ್ದಾಕ್ಷಿಣ್ಯವಾಗಿ ನೆಲಕ್ಕೆ ಸುರಿಯುತ್ತಾರೆ. ಮನೆ ಕೆಲಸಕ್ಕೆ ಬರುವವರೇ ಎರಡು ಮೂರು ಬಕೆಟ್ ಗಳಿದ್ದರೂ ನಲ್ಲಿ ಬಿಟ್ಟುಕೊಂಡು ಸುರಿದು ಹೋಗುತ್ತಿದ್ದರೂ ಲಕ್ಷ್ಯವೇ ಇಲ್ಲದೆ ಇರುವಾಗ ಮಾಲೀಕರು ಗಮನಿಸದೆ ಇರುವ ಇಂತಹ  ವಿಷಯಗಳ ಬಗ್ಗೆ ಹೋಟೆಲ್ ಕೆಲಸಗಾರನೊಬ್ಬ ಹೇಗೆ ಕಾಳಜಿ ತೋರಲು ಸಾಧ್ಯ?  ಈ ಕುರಿತು ಮಾಲೀಕರು ಗಂಭೀರವಾಗಿ ಚಿಂತಿಸುವ ತುರ್ತು ಅಗತ್ಯವಿದೆ.

ಈ ನಿಟ್ಟಿನಲ್ಲಿ  ಹೋಟೆಲ್‌ಗಳು ನೀರು ಉಳಿಸುವ ಉತ್ತಮ ಪ್ರಯತ್ನವೊಂದು ಗಮನಕ್ಕೆ ಬಂದಿತು. ಮಂಡ್ಯದ ಬಳಿ ಇರುವ ಹೋಟೆಲ್ ಒಂದರಲ್ಲಿ ಇರುವ ವಾಶ್ ಬೇಸಿನ್ ನಲ್ಲಿ ಇದು ಕಂಡು  ಬಂದಿತು. ಕೈ ತೊಳೆಯಲು ನೀರು ಬಿಟ್ಟರೆ ಅವಶ್ಯವಿದ್ದಷ್ಟೇ ಬಂದು ನಿಂತು ಹೋಗುತ್ತದೆ. ಆ ವಾಶ್‌ಬೇಸಿನ್‌ಗೆ ಸ್ವಯಂಚಾಲಿತ ಯಂತ್ರವನ್ನು ಅಳವಡಿಸಲಾಗಿದೆ. ಈ ರೀತಿಯ ಪ್ರಯತ್ನಗಳು ಗ್ರಾಹಕರಲ್ಲೂ ಜಾಗೃತಿಯನ್ನು ಮೂಡಿಸುವಲ್ಲಿ ಸಫಲವಾಗುತ್ತದೆ.

ಇನ್ನು ಕಾಲೇಜುಗಳ ಹಾಸ್ಟೆಲ್ಲುಗಳಲ್ಲೂ ಧಾರಾಳವಾಗಿ ನೀರು ವ್ಯಯವಾಗುತ್ತದೆ. ಉದಾಹರಣೆಗೆ, ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ಇದೆ. ಕಾಲೇಜಿನ ಆವರಣದೊಳಗೆ ನಾಲ್ಕು ಹಾಸ್ಟೆಲ್‌ಗಳಿವೆ. ನಾಲ್ಕೂ ವರ್ಷದ ವಿದ್ಯಾರ್ಥಿಗಳಿಗೂ ಒಂದೊಂದು ಹಾಸ್ಟೆಲ್ ಮೀಸಲಿರುತ್ತದೆ. ಹಾಗೆಯೇ  ಮೊದಲನೇ ವರ್ಷದಲ್ಲಿ ಕಲಿಯುವ ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ೭೦ ಕೋಣೆಗಳಿವೆ. ಅಲ್ಲಿ ೨೦೬ ವಿದ್ಯಾರ್ಥಿಗಳಿದ್ದಾರೆ. ಒಟ್ಟು ೧೦ ಸ್ನಾನ ಕೊಠಡಿಗಳಿವೆ.

ಪ್ರತೀ ದಿನ ಅಲ್ಲಿ ಮೊದಲ ಬಾರಿಗೆ ನೀರು ಬಿಡುವಾಗ ೨ ರಿಂದ ೨ ೧/೨ ಬಕೆಟ್ ಗಳಷ್ಟು ತಣ್ಣೀರು ಬರುತ್ತದೆ. ಇರುವದು ಒಂದೇ ಬಕೆಟ್. ಆ ನೀರನ್ನು ಚೆಲ್ಲಿಬಿಡಿ ಎಂದಿದ್ದಾರೆ ನಮ್ಮ ವಾರ್ಡನ್ ಎನ್ನುತ್ತಾನೆ ಮೊದಲ ವರ್ಷದ ಇಂಜಿನಿಯರಿಂಗ್  ಓದುತ್ತಿರುವ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ. ಇಷ್ಟಾಗಿ ಬಕೆಟ್ ಅನ್ನು ವಿದ್ಯಾರ್ಥಿಗಳೇ ತಂದುಕೊಳ್ಳಬೇಕು. ಬೇರೆ ಬೇರೆ ಪ್ರದೇಶಗಳಿಂದ ಬಂದಿರುವ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ತಮ್ಮ ಸ್ವಂತ ಬಕೆಟ್ ಗಳನ್ನೆ ತಂದುಕೊಂಡಿರುತ್ತಾರೆ. ಅವರಿಗೆ ನೀರಿನ ಕಾಳಜಿಗಿಂತ ಹೆಚ್ಚು ಬಕೆಟ್ ನ ಕಾಳಜಿ ಇರುತ್ತದೆ. ಒಂದು ವೇಳೆ ನೀರಿನ ಕಾಳಜಿಯಿಂದ ತಮ್ಮ ಬಕೆಟ್ ನಲ್ಲಿ ಉಳಿದ ನೀರನ್ನು ಅಲ್ಲೇ ಬಿಟ್ಟು ಬಂದರೂ ಆ ನಂತರ ಹೋಗುವವರು  ಆ ನೀರನ್ನು ಉಪಯೋಗಿಸುವದೇ ಇಲ್ಲ. ಕಾರಣ ಅವರೆಲ್ಲ ಒಂದೇ ಮನೆಯವರಲ್ಲ!

ಬೆಂಗಳೂರು ಒಂದನ್ನೇ ತೆಗೆದುಕೊಂಡರೂ ಇಲ್ಲಿ ಎಷ್ಟು ಕಾಲೇಜುಗಳಿವೆ. ಆ ಕಾಲೇಜು ಆವರಣದೊಳಗೆಯೇ  ಅದೆಷ್ಟು ಹಾಸ್ಟೆಲ್ಲ್ ಗಳಿವೆ? ಆ ಹಾಸ್ಟೆಲ್ಲ್ ಗಳಲ್ಲಿ ಅದೆಷ್ಟು ಸ್ನಾನ ಗೃಹಗಳಿವೆ? ಒಂದೊಂದು ಸ್ನಾನ ಗೃಹಗಳಲ್ಲೂ ಪ್ರತೀ ದಿನ ಎರಡೆರಡು ಬಕೆಟ್ ನೀರು ವ್ಯರ್ಥ! ಹಣ ಸಂಪಾದನೆಯನ್ನೇ ಮೂಲ ಉದ್ದೇಶವನ್ನಾಗಿರಿಸಿಕೊಂಡು ಕಲಿಯುವ ವಿದ್ಯಾರ್ಥಿಗಳು-ಶಿಕ್ಷಕರು- ಯಾರಿಗೆ ಬೇಕಾಗಿದೆ  ಸಂಪನ್ಮೂಲಗಳ ಅಳಿವು ಉಳಿವು? ಅದಕ್ಕೆಂದೇ ಹೊಡೆದಾಡುವ ಜನರು ಬೇರೆಯೇ ಇರುವಾಗ? ಈ ರೀತಿಯ ಭಾವನೆಯೇ ಪ್ರತಿಯೊಬ್ಬರಲ್ಲು ಹಾಸು ಹೊಕ್ಕಾಗಿಬಿಟ್ಟಿದೆ.

DSC_0107ಇತ್ತೀಚೆಗೆ ನಾವು ನೀರಿನ ಫಿಲ್ಟರ್ ಅನ್ನು ಅಳವಡಿಸುವ ಸಲುವಾಗಿ ಕೆಲವು ಕಂಪನಿಗಳನ್ನು ಸಂಪರ್ಕಿಸಿದೆವು. ಬೋರ್‌ವೆಲ್‌ನ ಗಡಸು ನೀರನ್ನು ಬೇರ್ಪಡಿಸಿ ಸಿಹಿನೀರನ್ನು ಮಾತ್ರ ನೀಡುವ ಒಂದು ಕಂಪನಿಯ  ಫಿಲ್ಟರ್ ನಮಗೆ ಇಷ್ಟವಾಯಿತು.  ಪ್ರಾತ್ಯಕ್ಷಿಕೆ ನೀಡುವ ವ್ಯಕ್ತಿ ಬಂದ. ಅಡುಗೆ ಮನೆಯಲ್ಲೇ ಅಳವಡಿಸುವದೆಂದು ತೀರ್ಮಾನವಾಯಿತು. ಏಕೆಂದರೆ ‘ಸಿಂಕ್’ನಲ್ಲಿರುವ ನಲ್ಲಿಗೆ ಅವರು ಫಿಲ್ಟರ್‌ನ ನಲ್ಲಿಯನ್ನು ಅಳವಡಿಸಬೇಕು. ಸರಿ ಫ಼ಿಕ್ಸ್ ಆಯಿತು. ಫಿಲ್ಟರ್ ಒಳಗೆ ಸಿಹಿ ನೀರು. ಹೊರಗೆ ಗಡಸು ನೀರು ಹೋಗಲು ಪೈಪ್ ಅಳವಡಿಸಲಾಗಿತ್ತು. ಅದನ್ನು ಹೊರಗೆ ಕಳುಹಿಸುವದು ಹೇಗೆ ಎಂತಲೂ ಆತ ಹೇಳುತ್ತಾ ಆ ಪೈಪ್ ಅನ್ನು ‘ಸಿಂಕ್’ ಒಳಗೆ ಬಿಟ್ಟು ಇದು ವೇಸ್ಟ್ ವಾಟರ್ ಹೊರಗೆ ಹೋಗುತ್ತದೆ’ ಎಂದ. ನಮಗೆ ಹೊಟ್ಟೆ ಉರಿದು ಹೋಯಿತು. ಅವರಿಗೆ ಅವರ ಉತ್ಪಾದನೆಗಳು ಮುಖ್ಯವಾಗುತ್ತವೆ ಹೊರತು ಅದರಿಂದಾಗುವ ಕಷ್ಟ ನಷ್ಟಗಳಿಗೆ ಅವರು ಹೊಣೆಗಾರರೆ ಅಲ್ಲ. ನಿಜವಾಗಿಯೂ ನೀರಿನ ಬಗ್ಗೆ ಕಾಳಜಿ ಇರುವವರು ಬೇರೊಂದು ಬಕೆಟ್ ಇಟ್ಟು ಹೆಚ್ಚಿನ ನೀರನ್ನು ದೊಡ್ಡ ಡ್ರಮ್ ಅಥವಾ ಬಕೆಟ್ಟುಗಳಿಗೆ ಯಾವದಕ್ಕಾದರೂ ತುಂಬಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ನಾವು ಹಾಗೇ ಮಾಡಿದೆವು. ನನ್ನ ಮಗ ಅದೇ ಅಳತೆಯ ಮತ್ತೊಂದು ಉದ್ದದ ಪೈಪ್ ತಂದು ಇದಕ್ಕೆ ಅಳವಡಿಸಿ ಸ್ನಾನಗೃಹದ ದೊಡ್ಡ ಡ್ರಮ್ ಗೆ ಬೀಳುವಂತೆ ಮಾಡಿದ. ಫಿಲ್ಟರ್ ನೊಂದಿಗೇ ಬರುವ ಪುಟ್ಟ ಪೈಪ್ ಹಾಗೂ ನಾವು ಇಡುವ ಪುಟ್ಟ ಬಕೆಟ್ ಎಷ್ಟೋ ವೇಳೆ ಅನಾಹುತಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಆಗಾಗ ನೀರು ತುಂಬಿಸಿ ದೊಡ್ಡ ಬಕೆಟ್ ಅಥವಾ ಡ್ರಮ್ ಗೆ ಹಾಕಲು ಮರೆತು ಹೋಗಬಹುದು. ಅಥವಾ ಪೈಪ್ ಜಾರಿ ಬಕೆಟ್ ಗೆ ನೀರು ಬೀಳುವ ಬದಲು ನೆಲಕ್ಕೆ ಸುರಿಯಬಹುದು. ಅದನ್ನು ಬಳಿಯುವ ಕೆಲಸದ ಜೊತೆಯಲ್ಲಿ ನೀರೂ ನಷ್ಟ!

ಇಷ್ಟೆಲ್ಲಾ ಯಾರು ಯೋಚಿಸುತ್ತಾ ಕೂರುತ್ತಾರೆ? ಕೆಲಸ ಮುಗಿದರಾಯಿತು, ಈ ಅವಸರದ ಧಾವಂತದ ಬದುಕಿನಲ್ಲಿ ಎನ್ನುವ ಮನೋಭಾವದವರೇ ಇರುವಾಗ?  ಎಷ್ಟೋ ಐ.ಟಿ. ಕಂಪೆನಿಗಳೇ ನೇರವಾಗಿ ಗಡಸು ನೀರನ್ನು ‘ಸಿಂಕ್’ಗೆ  ಬಿಟ್ಟು ನಿರಾಳವಾಗಿರುವದನ್ನು ಕಾಣಬಹುದು.

ವಿದ್ಯಾವಂತರು, ನಾಗರಿಕರು ಎನಿಸಿಕೊಂಡವರೇ ಈ ರೀತಿ ನಡೆದುಕೊಂಡಾಗ, ಇತರರಿಂದ ನಾವು ನೀರಿನ ಬಗ್ಗೆ ಕಾಳಜಿಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ?

 ಚಿತ್ರ-ಲೇಖನ: ಆಶಾ ಹೆಗಡೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*