ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೧: ಕೆರೆಗಳ ಮೇಲ್ಮೈ, ಬೋರ್‌ವೆಲ್ ನೀರಿನಲ್ಲೇ ಕ್ಯಾನ್ಸರ್ ಅಂಶ!

ಬೋರ್‌ವೆಲ್ ನೀರನ್ನು ತಕ್ಷಣ ಉಪಯೋಗಿಸಬೇಡಿ, ಕ್ಯಾನ್ಸರ್ ಬಂದೀತು….

ಉದ್ಯಾನನಗರಿ ಎಂಬ ಖ್ಯಾತಿ ಹೊಂದಿದ್ದ ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಇಂದು ಬೋರ್‌ವೆಲ್‌ಗಳು ಅಸಂಖ್ಯ. ಎಷ್ಟು ಲಕ್ಷ ಇವೆ ಎಂಬುದಕ್ಕೆ ಮಾಹಿತಿಯೇ ಇಲ್ಲ. ಆದರೆ ನಗರದಲ್ಲಿರುವ ಬೋರ್‌ವೆಲ್‌ಗಳ ನೀರನ್ನು ತಕ್ಷಣ ಉಪಯೋಗಿಸುವುದು ಆರೋಗ್ಯಕ್ಕೆ ಹಾನಿಕರ. ಕ್ಯಾನ್ಸರ್ ಬರುವ ಅಪಾಯವೂ ಇದೆ. ಇದು ಬೋರ್‌ವೆಲ್‌ಗೆ ಮಾತ್ರ ಸೀಮಿತ ಅಲ್ಲ. ನಗರದಲ್ಲಿರುವ ಹತ್ತಾರು ಕೆರೆಗಳ ಮೇಲ್ಮೈ ನೀರೇ ವಿಷಕಾರಕ. ಈ ನೀರಿನ ಬಳಕೆಯಿಂದ ಕ್ಯಾನ್ಸರ್ ಬರುವ ಸಂಭವವಿದ್ದು, ಮುಟ್ಟಿದರೆ ತುರಿಕೆಯಂತಹ ಸಮಸ್ಯೆ ಉಂಟಾಗುತ್ತದೆ. ಇದಕ್ಕೆಲ್ಲ ಕಾರಣ ಕೆರೆ ಹಾಗೂ ಬೋರ್‌ವಎಲ್‌ಗಳಲ್ಲಿರುವ ಯುರೇನಿಯಂ ಹಾಗೂ ರೆಡಾನ್ ಅಂಶ.

Hebbal-Lakeಒಳಚರಂಡಿ ನೀರಿನ ಕಲ್ಮಶ ಹಾಗೂ ರಾಸಾಯನಿಕ ಅಂತರ್ಜಲ ಸೇರಿಕೊಂಡು ನಗರದ ಜನತೆಯ ಆರೋಗ್ಯವನ್ನು ಹದಗೆಡಿಸುತ್ತಿರುವುದಷ್ಟೇ ಅಲ್ಲ……. ಕ್ಯಾನ್ಸರ್‌ನಂತಹ ಕಾಯಿಲೆಗಳಿಗೂ ಕಾರಣವಾಗಿದೆ. ಹೆಬ್ಬಾಳ ಹಾಗೂ ಮತ್ತೀಕೆರೆಗಳಲ್ಲಿ ಮೇಲ್ಮೈ ನೀರಿನಲ್ಲೇ ಕ್ಯಾನ್ಸರ್‌ಗೆ ಕಾರಣವಾಗುವ ರೆಡಾನ್ ಹಾಗೂ ಯೂರೇನಿಯಂ ಅಂಶವಿದೆ. ಇಂತಹ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ, ಆನೇಕಲ್‌ಗಳಿಗೂ ರವಾನಿಸಲು ಸಾವಿರಾರು ಕೋಟಿ ವೆಚ್ಚದ ‘ಯೋಜನೆ’ ಸಜ್ಜಾಗುತ್ತಿದೆ. ಇಂತಹ ನೀರನ್ನು ಬರಪೀಡಿತ ಬಯಲುಸೀಮೆಗೆ ರವಾನಿಸಿ, ಅಲ್ಲಿ ಮತ್ತಷ್ಟು ಆರೋಗ್ಯ ಸಮಸ್ಯೆ ಸೃಷ್ಟಿಸುವುದು ಎಷ್ಟು ಸರಿ?

ಅತಿಹೆಚ್ಚು ಒಳಚರಂಡಿ ನೀರು ಹರಿಯುವ ಹೆಬ್ಬಾಳ, ಕೋರಮಂಗಲ-ಚಲ್ಲಘಟ್ಟ ಕಣಿವೆ ಹಾಗೂ ಕೆರೆಗಳಲ್ಲಿ ಶೇ. ೯೧ರಷ್ಟು ಪ್ರದೇಶಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳ ಪ್ರಮಾಣ ಅತಿ ಹೆಚ್ಚಾಗಿದೆ. ರೆಡಾನ್ ಹಾಗೂ ಯುರೇನಿಯಂ ಎಂಬ ರಾಸಾಯನಿಕ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಇಂತಹ ಅಂಶಗಳು ಈ ಪ್ರದೇಶದ ಕೆರೆಗಳ ಮೇಲ್ಮೈ ನೀರು ಹಾಗೂ ಅಂತರ್ಜಲದಲ್ಲಿ ಕಂಡುಬಂದಿರುವುದು ಅತ್ಯಂತ ಆತಂಕಕಾರಿ. ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಇದು ಬಹಿರಂಗವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಇಲಾಖೆ ೨೦೧೫ರಲ್ಲಿ ನಡೆಸಿದ ಅಧ್ಯಯನದಲ್ಲಿ, ಈ ರಾಸಾಯನಿಕ ಅಂಶಗಳ ಪ್ರಮಾಣ, ಅವು ಎಲ್ಲಿ ಹೆಚ್ಚಾಗಿವೆ ಹಾಗೂ ಎಷ್ಟು ಆತಂಕಕಾರಿ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಯುರೇನಿಯಂ ಹಾಗೂ ರೆಡಾನ್ ಅಂಶಗಳು ಹೆಚ್ಚಾಗಿರುವುದರಿಂದ, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿರುವ ಜನರಿಗೆ ಕ್ಯಾನ್ಸರ್ ಸಂಬಂಧಿತ ಕಾಯಿಲೆಗಳ ಆತಂಕ ಅತಿ ಹೆಚ್ಚು ಎಂದೂ ತಿಳಿಸಿದ್ದಾರೆ.

ಯುರೇನಿಯಂ ನೈಸರ್ಗಿಕವಾಗಿ ‘ಹೆವಿಯೆಸ್ಟ್ ಎಲಿಮೆಂಟ್’ ಆಗಿದ್ದು, ಇದರ ಸರಾಸರಿ ಪ್ರತಿ ಲೀಟರ್‌ಗೆ ೦.೦೦೦೩% ಇರುತ್ತದೆ. ರೆಡಾನ್ ಅಂಶ ೦.೦೩ ಬಿಕ್ಯೂ/ಲೀಟರ್ ಇರುತ್ತದೆ. ಆದರೆ, ಬೆಂಗಳೂರಿನ ಈ ಕಣಿವೆ ಪ್ರದೇಶದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ನಗರದಲ್ಲಿ ಹಲವು ಪ್ರದೇಶಗಳಲ್ಲಿ ೪೦ ಎಂಎಲ್ ಹಾಗೂ ೨೫೦ ಎಂಎಲ್ ಬಾಟಲ್‌ಗಳಲ್ಲಿ ನೀರಿನ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು. ಇದನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು. ಯುರೇನಿಯಂ ಹಾಗೂ ರೆಡಾನ್ ಪರೀಕ್ಷೆಯೇ ಈ ಅಧ್ಯಯನ ಪ್ರಮುಖ ಅಂಶವೂ ಆಗಿತ್ತು. ಅದರಲ್ಲಿ ಈ ಎರಡೂ ರಾಸಾಯನಿಕ ಅಂಶಗಳು ಹೆಚ್ಚಾಗಿರುವುದು ಸಾಬೀತಾಗಿದೆ. ರೆಡಾನ್ ಹಾಗೂ ಯುರೇನಿಯಂ ಅಂಶ ಕೆರೆಗಳ ಮೇಲ್ಮೈ ನೀರು ಹಾಗೂ ಅಂತರ್ಜಲದಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ಆರೋಗ್ಯದ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತಿದೆ. ಈ ಮಾಲಿನ್ಯದಿಂದ ಕ್ಯಾನ್ಸರ್‌ನಂತಹ ಮಹಾರೋಗಕ್ಕೆ ನಾಗರಿಕರು ತುತ್ತಾಗುವ ಅಪಾಯ ಹೆಚ್ಚಾಗಿದೆ. ಇಂತಹ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುವ ಪ್ರಕ್ರಿಯೆಗೆ ಅತಿ ಬೇಗ ಚಾಲನೆ ನೀಡಲೇಬೇಕಾಗಿದೆ. ನಂತರವಷ್ಟೇ ಈ ಒಳಚರಂಡಿ ನೀರನ್ನು ಸಂಸ್ಕರಿಸಿ ಬೇರೆ ಜಿಲ್ಲೆಗಳಿಗೆ ಹರಿಸುವ ಕಾರ್ಯ ನಡೆಸಬೇಕಾಗುತ್ತದೆ ಎಂಬುದೇ ತಜ್ಞರ ಅಭಿಪ್ರಾಯ.

ಎಷ್ಟೆಷ್ಟು ರೆಡಾನ್, ಯುರೇನಿಯಂ?

                                 ರೆಡಾನ್ (ಬಿಕ್ಯೂ/ಲೀಟರ್)        ಯುರೇನಿಯಂ (ಮೈಕ್ರೊಗ್ರಾಂ/ಲೀಟರ್)

ಮತ್ತೀಕೆರೆ                                   ೪.೭                                               ೧.೯೦

ಹೆಬ್ಬಾಳ ಕೆರೆ                                ೩.೪೦                                             ೨.೫೦

ಕಲ್ಕೆರೆ                                       ೩.೧೦                                             ೨.೪೦

ಹಲಸೂರು                                  ೨.೬೦                                             ೨.೧೦

ಬೆಳ್ಳಂದೂರು                                ೩.೦೫                                             ೩.೦

Ulsoor Lakeಗ್ರಾನೈಟ್ ಅಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಯುರೇನಿಯಂ ಹಾಗೂ ರೆಡಾನ್ ಅಂಶಗಳು ಇದ್ದೇ ಇರುತ್ತವೆ. ಭೂಮಿಯೊಳಗಿನ ಕಲ್ಲುಗಳು ಅಂದರೆ ಗ್ರಾನೈಟ್‌ನಂತಹ ಕಲ್ಲುಗಳ ಮಧ್ಯೆ ಈ ಅಂಶ ಇರುತ್ತದೆ. ರೆಡಾನ್ ಗ್ಯಾಸ್‌ನಂತಿರುತ್ತದೆ. ಇದು ನೀರಿನ ಮೂಲಕ ಹೊಗೆಯಾಗಿ ಹೊರಬರುತ್ತದೆ. ನಮ್ಮ ಅಂತರ್ಜಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಎಲ್ಲ ರೀತಿಯ ಕಲ್ಮಶಗಳೂ ಸೇರಿಕೊಳ್ಳುತ್ತಿವೆ. ಒಳಚರಂಡಿ ನೀರು ನೇರವಾಗಿ ಕಣಿವೆ, ಕೆರೆಗಳಿಗೆ ಹರಿಯುತ್ತಿರುವುದರಿಂದ ಅದೆಲ್ಲ ಅಂತರ್ಜಲಕ್ಕೂ ಸೇರಿಕೊಳ್ಳುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಬೋರ್‌ವೆಲ್‌ಗಳನ್ನು ಸಾಕಷ್ಟು ಆಳಕ್ಕೆ ಕೊರೆಯಲಾಗುತ್ತಿದೆ. ಹೀಗಾಗಿ ನೂರಾರು ಅಡಿ ಕೆಳಗೆ ಹೋಗಲಾಗುತ್ತಿದೆ. ಆಗ ಈ ಗ್ರಾನೈಟ್‌ನಂತಹ ಕಲ್ಲುಗಳ ಮಧ್ಯೆ ಇರುವ ರೆಡಾನ್ ಗ್ಯಾಸ್ ರೂಪದಲ್ಲಿ ನೀರಿನಲ್ಲಿ ಹೊರಬರುತ್ತದೆ. ನೀರಿನಲ್ಲಿ ಮಿಶ್ರಣವಾಗುವ ರೆಡಾನ್ ಆರೋಗ್ಯಕ್ಕೆ ಸಾಕಷ್ಟು ಹಾನಿಕರ. ಕ್ಯಾನ್ಸರ್‌ಗೂ ಇದು ಕಾರಣವಾಗುತ್ತದೆ. ಬೋರ್‌ವೆಲ್ ನೀರನ್ನು ನೇರವಾಗಿ ತಕ್ಷಣ ಬಳಸಲೇಬಾರದು. ಬೋರ್‌ವೆಲ್ ನೀರು ಪಂಪ್ ಮಾಡಿದ ಮೇಲೆ ೩-೪ ಗಂಟೆ ಬಿಡಬೇಕು. ನಂತರ ಕಾಯಿಸಿ ಕುಡಿದರೆ ಒಳ್ಳೆಯದು. ಸ್ನಾನಕ್ಕೆ ಬಳಕೆ ಮಾಡುವಾಗಲೂ ೩-೪ ಗಂಟೆ ಆದ ಮೇಲೆ ಬಳಸಬೇಕು. ಇಲ್ಲದಿದ್ದರೆ ತುರಿಕೆಯಂತಹ ಚರ್ಮರೋಗಗಳು ಕಾಣುತ್ತವೆ ಎಂದು ಈ ಕಣಿವೆ ಪ್ರದೇಶದಲ್ಲಿ ಅಧ್ಯಯನ ನಡೆಸಿದ ಬೆಂಗಳೂರು ವಿವಿಯ ಪರಿಸರ ವಿಜ್ಞಾನ ವಿಭಾಗದ ಪ್ರೊ. ಆರ್.ಕೆ. ಸೋಮಶೇಖರ್ ಸ್ಪಷ್ಟ ನುಡಿ. ಕೆರೆ, ಬೋರ್‌ವೆಲ್ ನೀರು ಉಪಯೋಗಿಸುವ ಮುನ್ನ ಯೋಚಿಸಬಹುದು. ಆದರೆ, ಈಗಾಗಲೇ ಅಂತರ್ಜಲ ಸೇರಿಕೊಂಡಿರುವ ವಿಷಕಾರಕ ಅಂಶಗಳು ಒಂದಲ್ಲ ಒಂದು ರೂಪದಲ್ಲಿ ನಮ್ಮ ದೇಹ ಸೇರುತ್ತವೆ. ಇದಕ್ಕೆ ಹೊಣೆಯಾರು?

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*