ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧೦: ಕೆರೆ ವಿಷ ಸಂಸ್ಕರಣೆ ಸಾಧ್ಯವೇ?

ಬೆಂಗಳೂರಿನ ಅಂತರ್ಜಲವನ್ನು ಕಲುಷಿತ ಅಷ್ಟೇ ಅಲ್ಲ, ಕಾರ್ಕೋಟಕ ವಿಷವನ್ನಾಗಿಸಿರುವ ವರ್ತೂರು ಕಣಿವೆಯ ಕೆರೆಗಳ ನೀರಿನ ಸಂಸ್ಕರಣೆ ಸಾಧ್ಯವೇ? ಆ ನೀರನ್ನೇ ಸಂಸ್ಕರಿಸಿ ಬಯಲು ಸೀಮೆ ಕೆರೆಗಳನ್ನು ತುಂಬಿಸುತ್ತೇವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ನೂರಾರು ಕೋಟಿ ವೆಚ್ಚದಲ್ಲಿ ‘ಸಂಸ್ಕರಿತ ನೀರು’ ಎಂಬ ಹೆಸರಿನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಕೆರೆಗಳನ್ನು ಸೇರಿಸುವ ಯೋಜನೆ ಕಾಗದದಲ್ಲಿ ಸಿದ್ಧಗೊಂಡಿದೆ. ಆದರೆ, ವಾಸ್ತವದಲ್ಲಿ ವಿಷ ಸಂಸ್ಕರಿಸಿ ಜೀವಜಲವಾಗಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

Varthur lake Foamನಗರದ ಜನತೆಯ ಜೀವಜಲವಾಗಿದ್ದ ಕೋರಮಂಗಲ-ಚಲ್ಲಘಟ್ಟ-ವರ್ತೂರು ಕಣಿವೆಯ ಸರಣಿಯ ಕೆರೆಗಳು ಇಂದು ಜೀವಕ್ಕೇ ಮಾರಕ. ಈ ಕೆರೆಗಳ ನೀರನ್ನು ಕುಡಿಯುವುದು ದೂರದ ಮಾತು. ಕೆರೆಯಲ್ಲಿರುವ ಕಲ್ಮಶ, ರಾಸಾಯನಿಕಯುಕ್ತ  ನೀರನ್ನು ಮುಟ್ಟಿದರೂ ಆರೋಗ್ಯ ಸಮಸ್ಯೆ ಉಂಟಾಗುಗತ್ತದೆ. ಇಂತಹ ಕಲ್ಮಶ ನೀರು ಈ ಕಣಿವೆ ಭಾಗದ ಅಂರ್ತಜಲ ಸೇರಿಕೊಂಡು ಕಲುಷಿತಗೊಳಿಸಿದೆ. ವಿಪರ್ಯಾಸವೆಂದರೆ, ಇಂತಹ ಪ್ರದೇಶದಲ್ಲೇ ಸಾಕಷ್ಟು ಬೋರ್‌ವೆಲ್‌ಗಳಿದ್ದು ಅದನ್ನು ಟ್ಯಾಂಕರ್‌ನಲ್ಲಿ ತುಂಬಿಕೊಂಡು ನಗರದ ಕೇಂದ್ರ ಭಾಗಕ್ಕೆ ಸಾವಿರಾರು ರುಪಾಯಿ ವೆಚ್ಚದಲ್ಲಿ ಪೂರೈಸಲಾಗುತ್ತಿದೆ.

ಹೀಗೆ ಅಂತರ್ಜಲ ಹಾಗೂ ಸಾಮಾಜಿಕವಾಗಿ ಜನರ ಆರೋಗ್ಯಕೇ ಮಾರಕವಾಗಿರುವ ಈ ಕಣಿವೆಗಳ ನೀರನ್ನು ಈಗಾಗಲೇ ಫ್ಲೋರೈಡ್‌ನಿಂದ ತತ್ತರಿಸಿ ಹೋಗಿರುವ ಕೋಲಾರ-ಚಿಕ್ಕಬಳ್ಳಾಪುರ ಕೆರೆಗಳಿಗೂ ಹರಿಸಲು ಸರ್ಕಾರ ಒಂದು ಸಾವಿರಕ್ಕೂ ಹೆಚ್ಚು ಕೋಟಿ ರುಪಾಯಿಗಳನ್ನು ವೆಚ್ಚ ಮಾಡಲು ಮುಂದಾಗಿದೆ. ಈ ನೀರನ್ನು ‘ಸಂಸ್ಕರಿಸಿ’ ಹರಿಸಲಾಗುತ್ತದೆ ಎಂಬ ಯೋಜನೆ ಇದ್ದರೂ, ಇದೇ ಬೆಳ್ಳಂದೂರು, ವರ್ತೂರು ಕೆರೆಗೆ ಇಂತಹದೇ ಪ್ರಕ್ರಿಯೆಯ ‘ಸಂಸ್ಕರಿಸಿದ’ ನೀರೇ ಹರಿಯುತ್ತಿದೆ ಎಂಬುದು ಗಮನಾರ್ಹ.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಸಂಸ್ಕರಿಸಿದ ನೀರು ಹರಿಸಲಾಗುತ್ತದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೫-೧೬ನೇ ಸಾಲಿ ಬಜೆಟ್ ಮಂಡನೆಯಲ್ಲೂ ಈ ವಿಷಯವನ್ನು ಪ್ರಕಟಿಸಿದ್ದರು. ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಸಂಸ್ಕರಿಸಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಆರಂಭವಾಗುತ್ತದೆ. ಈ ಯೋಜನೆಗಾಗಿ ಡಿಪಿಆರ್ (ವಿಸ್ತೃತ ಯೋಜನಾ ವರದಿ) ತಯಾರಿಸಲು ಬೆಂಗಳೂರಿನ ನಿಕೇತನ್ ಕನ್ಸಲ್ಟೆನ್ಸಿಗೆ ಟೆಂಡರ್ ನೀಡಲಾಗಿದೆ. ಈ ಸಂಸ್ಥೆ ಡಿಪಿಆರ್ ಸಿದ್ಧಪಡಿಸಿದೆ. ಆದಷ್ಟ್ಟೂ ಬೇಗ ಟೆಂಡರ್ ಕಾರ್ಯ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುತ್ತದೆ. ಕೋಲಾರದ ೧೦೮ ಹಾಗೂ ಚಿಕ್ಕಬಳ್ಳಾಪುರದ ೩೨ ಕೆರೆಗಳಿಗೆ ಈ ಯೋಜನೆ ಮೂಲಕ ನೀರು ತುಂಬಿಸಲಾಗುತ್ತದೆ. ಇದಕ್ಕಾಗಿ ಸುಮಾರು ೯೦೦ ಕೋಟಿ ವೆಚ್ಚವಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗೂ ಇದೇ ರೀತಿಯ ಸಂಸ್ಕರಿಸಿದ ನೀರು ಹರಿಸಲಾಗುತ್ತದೆ. ಅದಕ್ಕೆ ತಗುಲುವ ವೆಚ್ಚ ಸೇರಿದಂತೆ ಇತರೆ ವಿವರ ಸದ್ಯಕ್ಕೆ ಲಭ್ಯ ಇಲ್ಲ ಎಂದು ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಹಲವು ಬಾರಿ ತಿಳಿಸಿದ್ದಾರೆ. ಆದರೆ ವಾಸ್ತವದಲ್ಲಿ ಇನ್ನೂ ಯಾವ ಕೆಲಸವೂ ಆಗಿಲ್ಲ.

ಬೆಂಗಳೂರಿನ ಒಳಚರಂಡಿ ನೀರು ವೃಷಭಾವತಿ, ಹೆಬ್ಬಾಳ, ಕೋರಮಂಗಲ-ಚಲ್ಲಘಟ್ಟ ಕಣಿವೆಯ ಸರಣಿಯ ಕೆರೆಗಳಿಗೆ ತುಂಬುತ್ತಿದೆ. ಈ ಕಣಿವೆಗಳಲ್ಲಿ ಕೇವಲ ಒಳಚರಂಡಿ ನೀರಷ್ಟೇ ಇಲ್ಲ. ಕೈಗಾರಿಕೆ, ಆಸ್ಪತ್ರೆ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ರಾಸಾಯನಿಕಗಳೂ ಸೇರಿಕೊಳ್ಳುತ್ತಿವೆ. ಹೊಸ ದಿಲ್ಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ (ಸಿ.ಎಸ್.ಇ.) ಸಂಸ್ಥೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ದಿನವೊಂದಕ್ಕೆ ೧೧೧೦ ದಶಲಕ್ಷ ಲೀಟರ್ ನೀರು ಒಳಚರಂಡಿ ನೀರಾಗುತ್ತಿದೆ. ಇದರಲ್ಲಿ ಜಲಮಂಡಳಿ ಸಂಸ್ಕರಿಸುತ್ತಿರುವ ನೀರಿನ ಪ್ರಮಾಣ ೩೦೨ ದಶಲಕ್ಷ ಲೀಟರ್ ಮಾತ್ರ. ಇನ್ನೊಂದು ಆತಂಕದ ವಿಷಯ ಎಂದರೆ, ಈ ಸಂಸ್ಕರಿಸಿದ ನೀರು ಎಲ್ಲ ರೀತಿಯ ರಾಸಾಯನಿಕವನ್ನೂ ಒಳಗೊಂಡಿರುವ ಅದೇ ಕಣಿವೆಯ ಕೆರೆಗಳ ನೀರಿಗೆ ಸೇರುತ್ತಿದೆ. ಅಂದರೆ, ಸಂಸ್ಕರಿಸುತ್ತಿರುವುದೂ ಕಲುಷಿತ ನೀರನ್ನೇ ಸೇರಿಕೊಂಡು ಆ ಪ್ರಕ್ರಿಯೆಯನ್ನೇ ವ್ಯರ್ಥಗೊಳಿಸಿದೆ.

Varthur lake fireಕೋರಮಂಗಲ-ಚಲ್ಲಘಟ್ಟ  ಕಣಿವೆಯಲ್ಲಿ ಹಾಗೂ ಈ ಕಣಿವೆ ವ್ಯಾಪ್ತಿಯ ಕೆರೆಗಳಲ್ಲಿ ಮಾನವನಿಗೆ ಅತ್ಯಂತ ಅಪಾಯಕಾರಿಯಾದ ರಾಸಾಯನಿಕ ಅಂಶಗಳಿರುವುದು ಸಾಕಷ್ಟು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಸಲರ್, ಯುರೇನಿಯಂ, ರ‍್ಯಾಂಡನ್‌ನಂತಹ ಅಂಶಗಳು ಕಂಡುಬಂದಿದ್ದು ಇವು ಅಂತರ್ಜಲವನ್ನೂ ಸೇರಿಕೊಂಡಿವೆ. ಇದರಿಂದ ಅಲರ್ಜಿಯಂತಹ ಸಮಸ್ಯೆಗಳಲ್ಲದೆ ಕ್ಯಾನ್ಸರ್‌ನಂತಹ ದೊಡ್ಡ ರೋಗಗಳಿಗೂ ಇದು ಕಾರಣವಾಗಿದೆ. ಜನರ ಸುತ್ತಲಿನ ವಾತಾವರಣವನ್ನು ಕಲುಷಿತಗೊಳಿಸುವ ಜತೆಗೆ ಅವರ ಆರೋಗ್ಯವನ್ನು ಹದಗೆಡಿಸುವ ‘ಸ್ಲೋಪಾಯಿಸನ್’ ಆಗಿಯೂ ಈ ಕಣಿವೆ ವ್ಯಾಪ್ತಿಯ ಕೆರೆಗಳು ಪರಿವರ್ತನೆಯಾಗಿವೆ. ಇಂತಹ ನೀರನ್ನು ಸಂಸ್ಕರಿಸಿ, ಪೈಪ್‌ಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಸಿದರೆ ಅಲ್ಲಿನ ಪರಿಸ್ಥಿತಿ ಏನು? ಅಲ್ಲಿ ಮೊದಲೇ ಅಂತರ್ಜಲಕ್ಕೆ ಫ್ಲೋರೈಡ್ ದಾಳಿ ಇಟ್ಟಿದ್ದು, ಜನರ ಮೂಳೆಗಳನ್ನೇ ತಿನ್ನುತ್ತಿದೆ. ಇನ್ನು ‘ಸಂಸ್ಕರಿಸಿದ’ ನೀರು ಸಂಪೂರ್ಣ ರಾಸಾಯನಿಕ ಮುಕ್ತವಾಗಲು ಸಾಧ್ಯವಿಲ್ಲ. ಹೀಗಾಗಿ, ರಾಸಾಯನಿಕಗಳು ಸೇರಿಕೊಂಡರೆ ಅಂತರ್ಜಲ ವೃದ್ಧಿಸುವ ಕಾರ್ಯಕ್ಕಿಂತ ಮತ್ತಷ್ಟು ವಿಷ ನೀಡುವುದಕ್ಕೆ ನೂರಾರು ಕೋಟಿ ವೆಚ್ಚ ಮಾಡುವಂತಾಗುತ್ತದೆ ಎಂಬುದು ತಜ್ಞರ ಅಭಿಮತ. ಕಣಿವೆಯ ರಾಸಾಯನಿಕ ನೀರನ್ನು ಸಂಸ್ಕರಿಸಿ ಹರಿಸುವ ಮುನ್ನ ಎಲ್ಲ ಮುನ್ನೆಚ್ಚರಿಕೆ ವಹಿಸಬೇಕೆಂಬುದೇ ಒತ್ತಾಸೆ. ವಿಷ ತುಂಬಿರುವ ಈ ಕಣಿವೆ ನೀರಿನ ಸಂಸ್ಕರಣೆ ಸಾಧ್ಯವೇ? ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*