ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಾನನದ ಕೊಳಕ್ಕೆ ಕಾಯಕಲ್ಪ

ಔದ್ಯಮೀಕರಣಕ್ಕೆ  ಕೃಷಿಭೂಮಿ ಬಲಿಯಾಗುತ್ತಿರುವ ಸಂದರ್ಭದಲ್ಲಿ, ತೆರೆದ ಭಾವಿಗಳು, ಕೆರೆ ಕುಂಟೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಊರಿಗೆಲ್ಲ ನೀರು ಒದಗಿಸುತ್ತಿದ್ದ ‘ಸಿಹಿನೀರ ಕೊಳ’ಗಳು, ಕೆರೆಗಳು ಮಾಯವಾಗಿ ಜನರು ನೀರಿಗಾಗಿ ಪರದಾಡುವಂತಾಗಿದೆ.

pic 2ಸಮಾನ ಮನಸ್ಕರು, ಪರಿಸರ ಪ್ರೇಮಿಗಳು, ಚಾರಣಪ್ರಿಯರು, ಏನಾದರೂ ಹೊಸತು ಮಾಡುವ ಹುಮ್ಮಸ್ಸು ಇರುವವರು, ಮೈಸೂರಿನ ಈ ನಾಲ್ಕು ಕುಟುಂಬಗಳು. ಬಹಳ ಕಾಲದಿಂದ ಸ್ನೇಹಿತರಾಗಿದ್ದ ಇವರ ಆಲೋಚನೆಗಳು ಕಾರ್ಯರೂಪಕ್ಕೆ ಇಳಿದದ್ದು ಇವರ ‘ಕಾನನ’ ಪ್ರವೇಶ ವಾದಂದಿನಿಂದ.

‘ಕಾನನ’ ಇವರು ತಮ್ಮ ಸಾವಯವ ತೋಟಕ್ಕೆ ಕೊಟ್ಟ ಹೆಸರು. ಮೈಸೂರಿನಿಂದ ಹೆಗ್ಗಡದೇವನ ಕೋಟೆಗೆ ಹೋಗುವ ದಾರಿಯಲ್ಲಿ ಸಿಗುವ ಬರಡನಪುರ ಹಳ್ಳಿಯ ಶಾಂತ ವಾತಾವರಣದಲ್ಲಿ ಇರುವ ಜಮೀನೇ ಕಾನನ. ರಸ್ತೆಯ ಎರೆಡೂ ಬದಿಗಳಲ್ಲಿ ಹಂಚಿ ಕೊಂಡಿರುವ ಭೂಮಿ ಇವರ ಭಾವನೆಗಳಿಗೆ ಹೇಳಿ ಮಾಡಿಸಿದಂತಿದೆ.

ಎಡಭಾಗದಲ್ಲಿರುವ ಮೂರು ಎಕರೆ ಜಾಗ ತೋಟ. ಯಾವ ಗಿಡ ಮರ ತಂದರೂ ಅದು ಮೂರೂ ಜಾಗಗಳಲ್ಲಿ ನಾಟಿಯಾಗುತ್ತದೆ. ಬೆಳೆದ ಹಣ್ಣು, ತರಕಾರಿ ಎಲ್ಲರಿಗೂ ಸೇರಿದ್ದು. ನಿರ್ವಹಣೆ ಎಲ್ಲರಿಂದ. ಯಾರ ಕೈಗೆ ಬಿಡುವಿದೆಯೋ ಅವರು ಜೀವಾಮೃತ ತೊಟ್ಟಿಯ ಬಳಿ. ಕಳೆ ಕೀಳುವದರಿಂದ ಹಿಡಿದು ಎಲ್ಲ ಕೆಲಸ ಎಲ್ಲರದ್ದು. ಬೆಳೆದ ಹಣ್ಣು, ತರಕಾರಿ ಎಲ್ಲರ ಪಾಲು.

ಬಲ ಬದಿಯಲ್ಲಿರುವ ಜಾಗದಲ್ಲೇ ಇವರ ಕನಸಿನ ಮನೆ ಇರುವುದು. ಪರಿಸರ ಸ್ನೇಹಿ ಮನೆ. ಇಂಧನ ಉಳಿತಾಯದ ಅಸ್ತ್ರ ಒಲೆ. ಸೋಲಾರ್ ಕುಕ್ಕರ್, ಕಡಿಮೆ ಇಂಧನ ಬಳಸಿ ಸುಲಭದಲ್ಲಿ ಅಡಿಗೆ ಮಾಡುವ ‘ಪೋರ್ಟಬಲ್ ಕುಕ್ಕರ್’. ಮಳೆ ನೀರಿನ ಉಳಿತಾಯದ ನಾಲಕ್ಕು ನೀರಿನ ತೊಟ್ಟಿಗಳು. ಮಳೆಗಾಲದಲ್ಲಿ ಸುಮಾರು೪೦೦೦ ಲೀಟರ್ ನೀರು ಸಂಗ್ರಹ. ಕುಡಿಯಲು, ಅಡಿಗೆಗೆ ಬಳಸಿ ಉಳಿಸಿದ್ದು ತೋಟಕ್ಕೆ.

pic 3ಈ ಜಮೀನು ಕೊಂಡಾಗ ಇದ್ದ ಒಂದು ಪಾಳು ಬಿದ್ದ ಕಲ್ಯಾಣಿ, ನೂರು ವರುಷಕ್ಕೂ ಹಳೆಯದಾದ ಒಂದು ಬೇಲದ ಹಣ್ಣಿನ ಮರ, ಇದನ್ನು ಕೊಳ್ಳುವಂತೆ ಮಾಡಿದ್ದು ಎನ್ನುತ್ತಾರೆ ಮಂಜುಳ, ಸುಮ, ರಾಧ, ಇದರ ಜಾಯಿಂಟ್ ಒಡತಿಯರು.

ಇವರೆಲ್ಲ ಸೇರಿ ಹಾಕಿದ ಪಂಚವಾರ್ಷಿಕ ಯೋಜನೆಯ ಪ್ರಕಾರ, ಮೊನ್ನೆ ನಡೆದ ಕಾನನ ಹಬ್ಬಕ್ಕೆ ಮೊದಲೇ ಕಲ್ಯಾಣಿಯ ಪುನಶ್ಚೇತನ ಕಾರ್ಯ ಪ್ರಾರಂಭವಾಗಿದ್ದು. ‘ಕಲ್ಯಾಣಿ ಕ್ಲೀನಿಂಗ್’ ಎಂದು ಹೇಳಿದೊಡನೆ ಇವರುಗಳೊಂದಿಗೆ ಮುಂದೆ ಬಂದ ಸ್ನೇಹಿತರಲ್ಲದೆ, ಬಂದು ಸೇರಿದ ಮಕ್ಕಳಿಗೆ ಇದೊಂದು ಮನರಂಜನೆಯ ಆಟವಾಗಿತ್ತು.

ಬೆಳೆದು ನಿಂತಿದ್ದ ಹುಲ್ಲು, ಕಳೆ ತೆಗೆಯಲೇ ನಾಲ್ಕಾರು ದಿನ ಬೇಕಾಯಿತು. ಹುಲ್ಲು, ಕಳೆ ಕೀಳುವುದು, ಹೊರಕ್ಕೆ ಸಾಗಿಸುವುದು ಎಲ್ಲವೂ ಗೆಳೆಯರ ಬಳಗದಿಂದಲೇ, ಶ್ರಮದಾನದಿಂದಲೇ.  ವಾರಕ್ಕೊಮ್ಮೆ ಸಿಗುತ್ತಿದ್ದ ರಜೆ ಕಲ್ಯಾಣಿಯ ದುರಸ್ತಿಗಾಗಿ ಸದ್ವಿನಿಯೋಗವಾಯಿತು. ಅಲ್ಲಿ ಇಲ್ಲಿ ಕಿತ್ತು ಹೋಗಿದ್ದ ಕಲ್ಲುಗಳನ್ನು ಜೋಡಿಸಿದ್ದೂ ಆಯಿತು. ಕೆಳಭಾಗವನ್ನು ಅಚ್ಚುಕಟ್ಟು ಮಾಡಿ, ಮಳೆಗಾಗಿ ಕಾದಿದ್ದರಲ್ಲೂ ಒಂದು ರೀತಿಯ ಸಂತೋಷವಿತ್ತು. ಮಕ್ಕಳಿಗಂತೂ ಈ ಕಾಯುವಿಕೆ ದೀರ್ಘ ರಜೆಯಂತಾಗಿತ್ತು. ಯಾವಾಗ ಮಳೆ ಬರುವುದೋ, ಎಂದು ಕಲ್ಯಾಣಿ ತುಂಬುವುದೋ ಎಂದು ಕಾಯುವದರಲ್ಲಿ ಉರುಳಿದ ದಿನಗಳು ಲೆಖ್ಕಕ್ಕೇ ಸಿಕ್ಕಲಿಲ್ಲ.

ಕಲ್ಯಾಣಿಯ ತಳಭಾಗ ೧೦ಅಡಿx೧೦ಅಡಿ ಇದ್ದರೆ, ಮೇಲ್ಭಾಗ ೬೦ಅಡಿx೬೦ಅಡಿ ಇದೆ. ಎಲ್ಲವನ್ನೂ ಸ್ವಚ್ಛಗೊಳಿಸಲು ನಾಲ್ಕಾರು ದಿನ ಹಿಡಿದರೂ, ಪ್ರತಿ ವರ್ಷ ಮುಂಗಾರಿಗೆ ಮೊದಲು ಇದನ್ನುpic 4
ಸಮಸ್ಥಿತಿಗೆ ತರುವಂತಹ ಮನಸ್ಥಿತಿ ನಾವು ಉಳಿಸಿಕೊಳ್ಳಬೇಕು, ಬೆಳೆಸಿಕೊಳ್ಳಬೇಕು ಎಂದು ಮನತುಂಬಿ ಹೇಳುತ್ತಾರೆ ಸುಮ, ಮಂಜುಳ ಮತ್ತು ರಾಧ. ಈ ಕೆಲಸಕ್ಕೆ ಹೊರಡುವ ಮೊದಲೇ ಸಿದ್ಧರಾಗುತ್ತಾರೆ ಗುರುಪ್ರಸಾದ್, ಗಣೇಶ್, ಮತ್ತು ಶ್ಯಾಮ್ ಸುಂದರ್. ಈ ಒಗ್ಗಟ್ಟಿಗೆ, ಹುಮ್ಮಸ್ಸಿಗೆ ಎಂದಿದ್ದರೂ ಜಯ ಎಂಬ ನಂಬಿಕೆ ಅವರನ್ನು ಮುನ್ನೆಡೆಸುತ್ತಿದೆ.

ಮುಂಗಾರಿನ ಮೊದಲ ಹನಿಗಳು ಬಿದ್ದ ದಿನ ಹಬ್ಬದ ಸಂಭ್ರಮ. ಮಕ್ಕಳಿಗೆ ಮಳೆಯಲ್ಲಿ ನೆನೆಯುವ ತವಕ. ದೊಡ್ಡವರಿಗೆ ಎಷ್ಟು ನೀರು ತುಂಬಬಹುದೆನ್ನುವ ಕಾತುರ. ಮಳೆಯಲ್ಲೇ ನೆನೆಯುತ್ತ ಅಂದಾಜು ನೋಡಿದಾಗ ಅಬ್ಬ! ೨೦,೦೦೦ ಲೀಟರ್‌ನಷ್ಟು ನೀರು ಸಂಗ್ರಹವಾಗಿತ್ತು. ಆದರೆ ಭೂತಾಯಿಯ ಕಾದ ಒಡಲು ಇದನ್ನು ಬಹಳ ದಿನ ಹಿಡಿದಿಟ್ಟುಕೊಳ್ಳಲು ಅಸಮರ್ಥವಾಯಿತು. ನೀರೆಲ್ಲ ಇಂಗಿದ ಮೇಲೆ ಮತ್ತೆ ಅದೇ ಕಾಯುವಿಕೆ, ಅದೇ ಚಾತಕದ ನೆಟ್ಟ ದೃಷ್ಟಿ ಆಗಸದತ್ತ.

pic 1ಕಲ್ಯಾಣಿ ಯಾವಾಗ ತುಂಬುತ್ತೆ? ಎಂದು ಪದೇ ಪದೇ ಕೇಳುವ ಮಕ್ಕಳಿಗೆ ಉತ್ತರ ಕೊಡುವ ಹಿರಿಯರ ಕಣ್ಣಲ್ಲೂ ಅದೇ ಪ್ರಶ್ನೆ. ಈ ವರ್ಷ ವರುಣ ಕೃಪೆ ತೋರುವ ಭರವಸೆ ನೀಡಿದ್ದಾನೆ – ಮೋಡಗಳ ಕಣ್ಣು ಮುಚ್ಚಾಲೆ, ಮಿಂಚು-ಗುಡುಗಿನ ಕತ್ತಲೆ ಬೆಳಕಿನಾಟ ನಡೆದಿದೆ. ಕಲ್ಯಾಣಿ ತುಂಬಿದಂದು ಬಾಗಿನ ಅರ್ಪಿಸಲು ಕಾನನದ ಗೆಳತಿಯರು ಸಜ್ಜಾಗಿದ್ದಾರೆ. ತನ್ನ ಆನಂದಬಾಷ್ಪದ ಮುತ್ತುಗಳನ್ನು ಹಿಡಿದಿಡಲು ಇವರ ಕಾಯುವಿಕೆ ಗಮನಿಸಿದ ಭೂರಮೆ ಸುತ್ತ ಹಸಿರ ಸಿರಿ ಸಿಂಗರಿಸಿ ಹೂಗಳ ತೋರಣ ಕಟ್ಟುತ್ತಿದ್ದಾಳೆ.

ಕೃಷಿಕರೆಲ್ಲ ಮನಸ್ಸು ಮಾಡಿದರೆ ಎಲ್ಲರ ತೋಟಗಳೂ ಕಾನನವಾಗಿ, ಮಳೆನೀರ ಕೊಯ್ಲಿನ ಕಲ್ಯಾಣಿಗಳು ತುಂಬುವಂತೆ ಆದರೆ, ಕೊಳಗಳಲ್ಲಿ ಕೆಂದಾವರೆ ಅರಳಿ, ಮನ-ಮನೆಗಳಲ್ಲಿ ಸಂತಸ ಗರಿಗೆದರುವ ದಿನಗಳು ದೂರವಿರಲಾರದು.

ಲೇಖನ: ಅನುಸೂಯ ಶರ್ಮ

ಚಿತ್ರಗಳು : ಎ.ಆರ್.ಎಸ್ ಶರ್ಮ ಮತ್ತು ಕಾನನ ಬಳಗ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*