ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಆಧುನಿಕ ಭಗೀರಥರ ಅಳಿಲು ಸೇವೆ

ಗ ಎಲ್ಲೆಡೆ ಬರದ್ದೇ ಮಾತು. ಅದು ಅಂಥಿಂಥ ಬರ ಅಲ್ಲ, ಭೀಕರ ಬರ. ಕುಡಿಯಲು ನೀರಿಲ್ಲ, ಬತ್ತಿದ ಕೆರೆ, ಜಲಾಶಯಗಳು. ಮಲೆನಾಡಿನಂಥ ಸಮೃದ್ಧ ನೀರಿರುವ ಪ್ರದೇಶದಲ್ಲೂ ಈ ಮೇ ತಿಂಗಳಿನಲ್ಲಿ ಕುಡಿಯುವ ನೀರಿಗೆ ತತ್ತ್ವಾರ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಟ್ಯಾಂಕರ್‌ನಲ್ಲಿ ನೀರು ಪೂರೈಸಬೇಕಾದ ಅನಿವಾರ್ಯತೆ. ನೀರಿಗಾಗಿ ಪ್ರತಿನಿತ್ಯ ಗ್ರಾಮದ ಮಹಿಳೆಯರು ೩-೪ ಕಿ.ಮೀ. ದೂರ ನಡೆಯಬೇಕಾದ ಅಸಹನೀಯ ಪರಿಸ್ಥಿತಿ.

ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಒಂದಿಷ್ಟು ಕ್ರಮ ಕೈಗೊಂಡಿರುವುದು ನಿಜ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನುbhageeratha prayatna - duggu article ಅವಲೋಕಿಸಿದ್ದಾರೆ. ಆದರೆ ಮುಖ್ಯಮಂತ್ರಿಯವರ ಈ ಪ್ರವಾಸ ಬರಪೀಡಿತರ ಪಾಲಿಗೆ ತಂಪು ನೀಡಲೇ ಇಲ್ಲ. ಮುಖ್ಯಮಂತ್ರಿಗಳು ಬರಪೀಡಿತ ಪ್ರದೇಶಕ್ಕೆ ಬರುವ ಮುನ್ನ ಅಲ್ಲಿ ಅಂತಹ ಬರ ಇಲ್ಲ ಎಂಬಂತೆ ಅಧಿಕಾರಿಗಳು ಬಿಂಬಿಸಲು ಪ್ರಯತ್ನಿಸಿದ್ದರು. ಜನರಿಗೆ ಕುಡಿಯುವ ನೀರು ಒದಗಿಸಿ, ನೀರಿನ ಕೊರತೆ ಇಲ್ಲ ಎಂಬಂತೆ ವಾತಾವರಣ ಸೃಷ್ಟಿಸಿದ್ದರು. ಒಂದು ಕಡೆಯಂತೂ ಒಣಗಿದ ಕೆರೆಗೆ ನೀರು ಹಾಯಿಸಿ ಮುಖ್ಯಮಂತ್ರಿಗಳು ಬರುವ ವೇಳೆಗೆ ಆ ಗ್ರಾಮದಲ್ಲಿ ಸಮೃದ್ಧ ನೀರಿದೆ ಎಂಬಂತೆ ಕೃತಕ ವಾತಾವರಣ ನಿರ್ಮಿಸಿದ್ದರು. ಮುಖ್ಯಮಂತ್ರಿಗಳ ಪ್ರವಾಸವೇನೋ ಮುಗಿದಿದೆ. ಆದರೆ ಬರಪೀಡಿತ ಜನರ ಸಂಕಷ್ಟಕ್ಕೆ ಒಂದಿನಿತೂ ಪರಿಹಾರ ದೊರಕಿಲ್ಲ. ಇತ್ತ ವಿರೋಧಪಕ್ಷದ ನಾಯಕರಿಂದಲೂ ಬರಪೀಡಿತ ಜಿಲ್ಲೆಗಳಿಗೆ ಅಧ್ಯಯನ ಪ್ರವಾಸ ನಡೆಯಿತು. ಬರಪೀಡಿತ ಪ್ರದೇಶಗಳಿಗೆ ರಾಜ್ಯ ಸರ್ಕಾರ ಸೂಕ್ತ ಗಮನ ಹರಿಸಿಲ್ಲ, ಜನರ ಸಂಕಷ್ಟ ಪರಿಹರಿಸಿಲ್ಲ ಎಂದು ದೂರಿದ್ದೂ ಆಯಿತು. ಇದರಿಂದಲೂ ಬರಪೀಡಿತ ಜನರಿಗೆ ಏನೇನೂ ಸಹಾಯವಾಗಲಿಲ್ಲ ಎನ್ನುವುದು ದೊಡ್ಡ ವಿಪರ್ಯಾಸ.

ಸರ್ಕಾರ ಬರ ಪರಿಹಾರಕ್ಕೆ ನಿರೀಕ್ಷೆಯಷ್ಟು ಪ್ರಯತ್ನಿಸಲಿಲ್ಲ ಎಂಬುದು ಹಗಲಿನಷ್ಟು ನಿಜ. ಆದರೆ ಜನರು ನೀರಿನ ಕೊರತೆಗೆ ತಾವಾಗಿಯೇ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಆಶಾದಾಯಕ ಘಟನೆಗಳು ಜರುಗಿವೆ. ಆ ಘಟನೆಗಳು ಜನಮನದ ಆಂತರ್ಯದಲ್ಲಿ ತುಡಿಯುವ ಮಾನವೀಯ ಭಾವನೆಗಳಿಗೆ ಕನ್ನಡಿ ಹಿಡಿದಿವೆ. ಅಂತಹ ಕೆಲವು ಸ್ಮರಣೀಯ ಘಟನೆಗಳು ಇಲ್ಲಿವೆ.

ಒಂದು: ಇಂದಿನ ಯುವಕರು ಮೊಬೈಲ್, ಫೇಸ್‌ಬುಕ್, ವಾಟ್ಸ್ಯಾಪ್‌ನಲ್ಲೇ ಮುಳುಗಿಹೋಗಿದ್ದಾರೆ ಎಂಬ ಟೀಕೆ ಸಾಮಾನ್ಯ. ಆದರೆ ಇದಕ್ಕೊಂದು ಅಪವಾದದ ಘಟನೆ ಇದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಎಡಜಿಗಳೆಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಸೆಟ್ಟಿಸರ ಗ್ರಾಮದಲ್ಲಿ ಪವನ್‌ಕುಮಾರ್ ಎಂಬ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಏಕಾಂಗಿಯಾಗಿ ೫೦ ಅಡಿ ಆಳದ ಬಾವಿ ತೆಗೆದು ಅದರಲ್ಲಿ ಜಲ ಬರುವಂತೆ ಮಾಡಿ, ಯುವಜನತೆ ಮನಸ್ಸು ಮಾಡಿದರೆ ಎಂತಹ ಕಷ್ಟದ ಕೆಲಸವನ್ನಾದರೂ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದ್ದಾನೆ.

ಪವನ್‌ಕುಮಾರ್ ತಂದೆ ವೃತ್ತಿಯಲ್ಲಿ ಅಡುಗೆ ಕೆಲಸ ಗುತ್ತಿಗೆದಾರರು. ತಾಯಿಗೆ ಖಾಸಗಿ ಮುದ್ರಣಾಲಯವೊಂದರಲ್ಲಿ ಕೆಲಸ. ನೀರಿಗಾಗಿ ಅವರು ಆಶ್ರಯಿಸಿದ್ದು ಮನೆಯ ಸಮೀಪದ ಸರ್ಕಾರಿ ಬಾವಿಯನ್ನು. ಪವನ್‌ಕುಮಾರ್ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಬಾವಿ ತೆಗೆಸಲು ಸಾಧ್ಯವಾಗಿರಲಿಲ್ಲ. ಹಾಗೆಂದು ಪವನ್‌ಕುಮಾರ್ ಹತಾಶನಾಗಿ ಕೂರಲಿಲ್ಲ. ಗ್ರಾಮದ ಹಿರಿಯರೊಬ್ಬರು ಮನೆಯ ಎದುರು ಜಲದ ಮೂಲ ಇದೆ ಎಂದು ತೋರಿಸಿದ್ದೇ ತಡ, ಕಾಲೇಜು ಪರೀಕ್ಷೆ ನಡೆಯುತ್ತಿದ್ದಾಗಲೇ ಅಲ್ಲಿ ಪವನ್‌ಕುಮಾರ್ ಏಕಾಂಗಿಯಾಗಿ ಬಾವಿ ತೋಡಲು ಮುಂದಾದ. ಪ್ರತಿದಿನ ಒಂದರಿಂದ ಎರಡು ಅಡಿ ಬಾವಿ ತೋಡುತ್ತಾ ಹೋದ. ೩೦ ಅಡಿ ತಲಪುವವರೆಗೂ ಆತ ಎದೆಗುಂದಲಿಲ್ಲ.

ಸರಿಯಾಗಿ ೧ ತಿಂಗಳು ೮ ದಿವಸದ ನಂತರ ಬಾವಿಯ ಆಳ ೫೦ ಅಡಿಗೆ ಹೋಗುತ್ತಿದ್ದಂತೆ ನೀರಿನ ಒರತೆ ಕಾಣಿಸಿತು. ಆಗ ಪವನ್ ಹಾಗೂ ಆತನ ಕುಟುಂಬಕ್ಕೆ ಆದ ಆನಂದ ಅಷ್ಟಿಷ್ಟಲ್ಲ. ನೀರು ಜಿನುಗಿದ ಬಳಿಕ ಮತ್ತೆ ಮಗನ ಬಳಿ ಕೆಲಸ ಮಾಡಿಸುವುದು ಸೂಕ್ತವಲ್ಲವೆಂದು ಪವನ್ ತಂದೆ ಬಾವಿ ಕೆಲಸದವರನ್ನು ಕರೆಯಿಸಿ ಮತ್ತೆ ೫ ಅಡಿ ಆಳ ತೋಡಿಸಿ ನೀರು ಲಭ್ಯವಾಗುವಂತೆ ಮಾಡಿದ್ದಾರೆ. ಪವನ್ ಎಂಬ ಕಾಲೇಜು ಹುಡುಗನ ಈ ಸಾಹಸ ಈಗ ಅನೇಕರಿಗೆ ಪ್ರೇರಣೆ ನೀಡಿದೆ.

ಎರಡು: ಪವನ್‌ಕುಮಾರ್ ಹೀಗೆ ಬಾವಿ ತೆಗೆದು ಸುದ್ದಿಯಾದ ಬೆನ್ನಲ್ಲೇ, ಮಧ್ಯಪ್ರದೇಶದಲ್ಲೊಬ್ಬ ಬಡ ರೈತ ಏಕಾಂಗಿಯಾಗಿ ಇಪ್ಪತ್ತು ದಿನಗಳಲ್ಲಿ ೯೦ ಅಡಿ ಬಾವಿ ಅಗೆದು ಬರಪೀಡಿತ ಗ್ರಾಮಕ್ಕೆ ನೀರು ಒದಗಿಸಿದ್ದಾನೆ. ಆತನನ್ನು ಇದೀಗ ಗ್ರಾಮಸ್ಥರು ಬಿಹಾರದ ಗಹ್ಲಾರ್‌ನಲ್ಲಿ ಗ್ರಾಮಸ್ಥರ ಸಹಾಯಕ್ಕಾಗಿ ೨೨ ವರ್ಷಗಳ ಕಾಲ ಪರ್ವತವೊಂದನ್ನು ಅಗೆದು ದಾರಿ ನಿರ್ಮಿಸಿದ ದಶರಥ ಮಾಂಝಿಗೆ ಹೋಲಿಸಿದ್ದಾರೆ.

ಅಗರ್ ಜಿಲ್ಲೆಯ ನೇವರಿ ಗ್ರಾಮದ ೩೮ರ ಹರೆಯದ ಭಗವಾನ್‌ಸಿಂಗ್ ಅವರೇ ಈ ಆಧುನಿಕ ಭಗೀರಥ. ಅವರಿಗೆ ಗ್ರಾಮದ ಹೊರಭಾಗದಲ್ಲಿ ಕೃಷಿ ಭೂಮಿಯಿದೆ. ಅಲ್ಲಿ ಏಕಾಂಗಿಯಾಗಿ ಬಾವಿ ಅಗೆಯುವುದನ್ನು ಕಂಡ ಬಹುತೇಕರು, ಕೃಷಿ ಹಾಳಾದ ಬಳಿಕ ಭಗವಾನ್‌ಸಿಂಗ್‌ಗೆ ಹುಚ್ಚು ಹಿಡಿದಿದೆ ಎಂದೇ ಭಾವಿಸಿದ್ದರು. ಆದರೆ ಕೇವಲ ೨೦ ದಿನಗಳಲ್ಲಿ ೯೦ ಅಡಿ ಬಾವಿ ಅಗೆದು ತನ್ನ ಗ್ರಾಮಸ್ಥರಿಗೆ ನೀರು ಪಡೆಯುವ ಅವಕಾಶ ಸೃಷ್ಟಿಸಿದ ಬಳಿಕ, ಇದೀಗ ಆತನನ್ನು ಹುಚ್ಚ ಎನ್ನುತ್ತಿದ್ದವರು ದೇವರಂತೆ ಕಾಣುತ್ತಿದ್ದಾರೆ.

ಭಗವಾನ್‌ಸಿಂಗ್ ನಿರ್ಮಿಸಿದ ಬಾವಿಯಿಂದಾಗಿ ಗ್ರಾಮದ ೬೫೦ ಮಂದಿಗೆ ಕುಡಿಯುವ ನೀರು ಯಥೇಚ್ಛವಾಗಿ ಈಗ ದೊರಕಿದೆ. ಭಗವಾನ್‌ಸಿಂಗ್ ಅವರ ಈ ಸಾಹಸ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿ ಹಣಕಾಸು ನೆರವು ನೀಡಲು ನಿರ್ಧರಿಸಿದ್ದಾರೆ. ಭಗವಾನ್‌ಸಿಂಗ್‌ಗೆ ಇಂತಹ ಸಾಹಸ ಮಾಡಲು ಪ್ರೇರಣಾಸ್ರೋತವಾಗಿದ್ದು ಅದೇ ಬಿಹಾರದ ದಶರಥ ಮಾಂಝಿ. ಆತ ಪರ್ವತವನ್ನು ಕೆತ್ತಿ ದಾರಿ ನಿರ್ಮಿಸಬಹುದಾದರೆ ನಾನೇಕೆ ಬಾವಿ ತೋಡಿ ಗ್ರಾಮಸ್ಥರಿಗೆ ನೆರವಾಗಬಾರದು? ಎಂಬ ಯೋಚನೆ ಭಗವಾನ್‌ಸಿಂಗ್‌ನಿಂದ ಅಂತಹ ಕೆಲಸ ಮಾಡಿಸಿತ್ತು.

ಮೂರು: ಸಂಪೂರ್ಣ ಹೂಳು ತುಂಬಿದ ಶಿಗ್ಗಾಂವಿಯ ಐತಿಹಾಸಿಕ ಹೊನ್ನಾಪುರ ಕೆರೆ ಅಭಿವೃದ್ಧಿಗೆ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ಮುಂದಾದ ಯಶೋಗಾಥೆ ಇದು. ಸುಮಾರು ೩೮ ಎಕರೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿ ಬೇಸಿಗೆಯಲ್ಲಿ ಈ ಕೆರೆ ಬರಿದಾಗುತ್ತಿತ್ತು. ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈ ವಿಚಾರ ಗಮನಕ್ಕೆ ತಂದರೂ ಪ್ರಯೋಜನವಾಗದಿದ್ದಾಗ ರೈತರು ಸ್ವಂತ ಖರ್ಚಿನಲ್ಲೇ ನಾಲ್ಕು ಜೆಸಿಬಿಗಳ ಮೂಲಕ ದಿನಕ್ಕೆ ೫೦೦ ಟ್ರಾಕ್ಟರ್ ಹೂಳನ್ನು ೧೫ ದಿನಗಳ ಕಾಲ ತೆಗೆದರು. ಇದಕ್ಕೆ ಸರ್ಕಾರ ಅಥವಾ ಜನಪ್ರತಿನಿಧಿಗಳಿಂದ ಯಾವುದೇ ನೆರವು ಪಡೆದುಕೊಳ್ಳಲಿಲ್ಲ. ಕೆರೆಯ ಮಣ್ಣನ್ನು ಹೊಲಗಳಿಗೆ ಸಾಗಿಸಲು ಸುತ್ತಮುತ್ತಲ ಗ್ರಾಮಗಳ ನೂರಾರು ರೈತರು ಸರದಿಯಲ್ಲಿ ನಿಂತರು. ಇತ್ತ ಕೆರೆ ಅಭಿವೃದ್ಧಿಯಿಂದ ಜಲಸಂರಕ್ಷಣೆ ಜೊತೆಗೆ ಕೆರೆ ಮಣ್ಣು ಕೃಷಿಗೆ ಅನುಕೂಲವಾಗುತ್ತಿದೆ. ಒಟ್ಟಿನಲ್ಲಿ ರೈತರು ಸ್ವಯಂಪ್ರೇರಿತರಾಗಿ ಕೆರೆಯ ಅಭಿವೃದ್ದಿಗೆ ಪಣ ತೊಟ್ಟಿರುವುದು ಇತರ ಗ್ರಾಮದ ರೈತರಿಗೆ ಪ್ರೇರಣೆ ನೀಡಿದೆ. ಹೊನ್ನಾಪುರ ಕೆರೆ ತುಂಬಿಕೊಂಡರೆ. ಸುತ್ತಮುತ್ತಲ ಕೆರೆಗಳೂ ತುಂಬಿಕೊಳ್ಳುತ್ತವೆ. ಹೀಗಾಗಿ ಶಿಗ್ಗಾಂವಿಯ ಜನರಿಗಿಂತ ಪಕ್ಕದ ಊರಿನವರಿಗೇ ಹೆಚ್ಚು ಲಾಭ. ಸರ್ಕಾರ ಇಂತಹ ಕೆರೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂಬುದು ಅಲ್ಲಿನ ಗ್ರಾಮಪಂಚಾಯ್ತಿ ಸದಸ್ಯರ ಆಗ್ರಹ. ಆದರೆ ಸರ್ಕಾರಕ್ಕೆ ಈ ಆಗ್ರಹ ಕೇಳಿಸುತ್ತಿಲ್ಲ.

ನಾಲ್ಕು: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆಯೋ ಗೊತ್ತಿಲ್ಲ. ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ಖಾಸಗಿ ಉದ್ಯಮ ಸಂಸ್ಥೆಗಳು ಸರ್ಕಾರದ ಕೆಲಸ ಹಗುರ ಮಾಡುವ ಕಾರ್ಯದಲ್ಲಿ ತೊಡಗಿರುವುದಂತೂ ನಿಜ. ಕುಡಿಯುವ ನೀರಿನ ಹಾಹಾಕಾರ ಎದುರಿಸುತ್ತಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಸುಮಾರು ೧೦ ಹಳ್ಳಿಗಳಿಗೆ ಈಗಾಗಲೇ ಇನ್ಫೋಸಿಸ್ ಸಂಸ್ಥೆ ನೀರನ್ನು ಉಚಿತವಾಗಿ ಒದಗಿಸುತ್ತಿದೆ. ಇದೀಗ ಟಾಟಾ ಮೋಟಾರ್ಸ್, ಆರ್‌ಎನ್‌ಎಸ್, ಇಂಡಿಯನ್ ಆಯಿಲ್, ಅದಾನಿ ಗ್ರೂಪ್, ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ., ಏಷ್ಯನ್ ಬಾಬ್‌ಟೆಕ್, ಎನ್‌ಎಚ್‌ಎಐ … ಹೀಗೆ ಹಲವು ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳು ಜಿಲ್ಲೆಯ ಬಹುತೇಕ ಕೆರೆಗಳ ಹೂಳೆತ್ತಲು ಮುಂದೆ ಬಂದಿವೆ. ಒಟ್ಟು ೫೦ ಜೆಸಿಬಿ, ಹಿಟಾಚಿ ಹಾಗೂ ಹೂಳೆತ್ತಲು ಬೇಕಾದ ಯಂತ್ರಗಳನ್ನು ನೀಡಲು ಮುಂದಾಗಿವೆ. ಕೆಲವು ಕಂಪೆನಿಗಳು ಯಂತ್ರಗಳ ಬದಲು ಹಣ ನೀಡಲು ಸಮ್ಮತಿಸಿವೆ. ಈಗಾಗಲೇ ಟಾಟಾ ಕಂಪೆನಿ ೧೦ ಜೆಸಿಬಿಗಳ ಮೂಲಕ ೧೦೦ ಎಕರೆ ವಿಸ್ತೀರ್ಣದ ತಡಕೋಡ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದೆ. ಸುಮಾರು ೨೦ ವರ್ಷಗಳಿಂದ ನಿರಂತರ ಹೂಳಿನಿಂದ ತುಂಬಿದ್ದ ಈ ಕೆರೆಗಳಿಗೆ ಈಗ ಒಂದು ರೀತಿಯಲ್ಲಿ ಮುಕ್ತಿ ದೊರೆತಿದೆ. ಈ ಘಟನೆ ಕೆಲವು ಗ್ರಾಮಸ್ಥರಿಗೆ ಸ್ವಯಂಪ್ರೇರಿತರಾಗಿ ತಮ್ಮೂರ ಕೆರೆ ಹೂಳೆತ್ತುವುದಕ್ಕೆ ಸ್ಫೂರ್ತಿ ನೀಡಿದೆ.

ಐದು: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಳಗಾವಿ, ಗುಲಬರ್ಗಾ, ಬೀದರ್, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀರು ಪೂರೈಕೆ ಕಾರ್ಯಕ್ರಮ ಹಮ್ಮಿಕೊಂಡಿದೆ. ನೀರನ್ನು ಟ್ಯಾಂಕರ್ ಮೂಲಕ ಗ್ರಾಮಗಳಿಗೆ ಪೂರೈಸುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಒಟ್ಟಾರೆ ೧೯೬ ಗ್ರಾಮಗಳಿಗ ನೀರು ಪೂರೈಕೆ ಆಗುತ್ತಿದೆ. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳು ನೀರನ್ನು ಪಡೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಧರ್ಮಸ್ಥಳ ಶ್ರೀಕ್ಷೇತ್ರ ಬರ ಪರಿಹಾರಕ್ಕಾಗಿ ವ್ಯಯಿಸುತ್ತಿರುವ ಮೊತ್ತ ಬರೋಬ್ಬರಿ ೧ ಕೋಟಿ ರೂ. ಇದರಲ್ಲಿ ನೀರಿನ ಟ್ಯಾಂಕರ್ ಮೂಲಕ ನೀರೊದಗಿಸಲು ಕಾದಿರಿಸಲಾಗಿರುವ ಹಣ ೫೦ ಲಕ್ಷ.

ಇನ್ನಷ್ಟು ಸಂಘ-ಸಂಸ್ಥೆಗಳು, ಮಠಗಳು ಕುಡಿಯುವ ನೀರು ಪೂರೈಕೆಗಾಗಿ ಸದ್ದಿಲ್ಲದೆ ಶ್ರಮಿಸುತ್ತಿರುವುದು ಸಂತಸದ ಸಂಗತಿ. ಪಾವಗಡದಲ್ಲಿ ವಿವೇಕಾನಂದ ಆಶ್ರಮದ ಸ್ವಾಮಿ ಜಪಾನಂದ ಅವರು ದನಕರುಗಳಿಗೆ ಉಚಿತ ಮೇವು ಹಾಗೂನೀರನ್ನು ಒದಗಿಸುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿವರ್ಷ ಬೇಸಿಗೆಯಲ್ಲಿ ಅವರು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಗೆ ಜಪಾನಂದರ ಈ ಸೇವೆ ಓಯಸಿಸ್ ಇದ್ದಂತೆ.

ಪ್ರಾಕೃತಿಕ ವಿಕೋಪ ಸಂಭವಿಸಿದಾಗಲೆಲ್ಲ ತಕ್ಷಣ ಅದಕ್ಕೆ ಸ್ಪಂದಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಉತ್ತರ ಕರ್ನಾಟಕದ ಬರಗಾಲ ಪರಿಹಾರಕ್ಕೆ ತನ್ನದೇ ಕೊಡುಗೆ ನೀಡಿದೆ. ಆರೆಸ್ಸೆಸ್ ಹಲವೆಡೆ ಗೋಶಾಲೆಗಳನ್ನು ಸ್ಥಾಪಿಸಿ, ೪೫ ಸಾವಿರಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ ಮಾಡಿದೆ. ಕುಡಿಯುವ ನೀರನ್ನು ಉಚಿತವಾಗಿ ಒದಗಿಸುವ ಕೆಲಸಕ್ಕೆ ಚಾಲನೆ ನೀಡಿದೆ.

ನಾಡಿನಾದ್ಯಂತ ಇಂತಹ ಹಲವು ಸಂಘ-ಸಂಸ್ಥೆಗಳು ಜಲಕ್ಷಾಮ ನಿವಾರಣೆಗೆ ಸದ್ದಿಲ್ಲದೆ ಟೊಂಕ ಕಟ್ಟಿರುವುದು ಭವಿಷ್ಯದ ಭರವಸೆಯ ಆಶಾಕಿರಣವಾಗಿ ಗೋಚರಿಸುತ್ತಿದೆ. ವಾಸ್ತವವಾಗಿ ಬರಗಾಲಕ್ಕೆ ಕಾರಣ ಬೇರೆ ಯಾರೂ ಅಲ್ಲ, ನಾವೇ. ಪ್ರಕೃತಿಯನ್ನು ಎಗ್ಗಿಲ್ಲದೆ ಅಗೆಯುತ್ತಾ, ಬಗೆಯುತ್ತಾ, ವಿನಾಶಮಾಡುತ್ತಾ ಹೋದವರು ನಾವಲ್ಲದೆ ಮತ್ತಾರು? ಅದರ ಪರಿಣಾಮ ಈಗ ಕಂಡು ಬರುತ್ತಿದೆ. ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಕಟ್ಟಡ ಕಟ್ಟಿದ್ದು ನಾವೇ. ಮಳೆಗಾಲದಲ್ಲಿ ಮಳೆಕೊಯ್ಲು ಮಾಡದೆ, ಇಂಗು ಗುಂಡಿ ನಿರ್ಮಿಸದೆ, ಕಾಡು ಗುಡ್ಡಗಳಲ್ಲಿ ನೀರು ಹಿಡಿಯುವ ಕಣಿವೆಕೆರೆ ಮಾಡಿಸದೆ ನೀರಿನ ಬಗ್ಗೆ ತೀವ್ರ ನಿರ್ಲಕ್ಷ್ಯವಹಿಸಿದ್ದೇ ಇಂದಿನ ಕಠಿಣ ಪರಿಸ್ಥಿತಿಗೆ ಕಾರಣ. ಆದೇನಾದರೂ ಇರಲಿ, ಕುಡಿಯುವ ನೀರಿನ ಕೊರತೆ ನೀಗಿಸಲು ಅನೇಕ ಆಧುನಿಕ ಭಗೀರಥರು ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವುದನ್ನು ಮರೆಯುವಂತಿಲ್ಲ. ಇಂತಹ ಆಧುನಿಕ ಭಗೀರಥರ ಸಂತತಿ ಸಾವಿರವಾಗಲಿ.

 ಲೇಖನ: ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*