ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಉಣಕಲ್ ಕೆರೆ ಅಂತರಗಂಗೆ ದಕ್ಷಿಣ ಅಮೆರಿಕೆಯಿಂದ ಆಮದಾದ ‘ಫಾರೆನ್ ಕಳೆ’

ಧಾರವಾಡ: ಹುಬ್ಬಳ್ಳಿಯ ಉಣಕಲ್ ಕೆರೆ ಸೇರಿದಂತೆ ಧಾರವಾಡ ಜಿಲ್ಲೆಯ ಎಲ್ಲ ೫ ತಾಲೂಕು ವ್ಯಾಪ್ತಿಯ ಕೆರೆಗಳಲ್ಲಿ ಬರಗಾಲದಲ್ಲೂ ನಳನಳಿಸುತ್ತಿರುವ ಅಂತರಗಂಗೆ ಸೇರಿದಂತೆ, ೫ ಕ್ಕೂ ಹೆಚ್ಚು ಪ್ರಜಾತಿಯ ‘ವಾಟರ್ ಹಯಾಸಿಂಥ್’ ಗಳ ಸಮರ್ಪಕ ನಿಯಂತ್ರಣ, ನಿರ್ವಹಣೆ ಮತ್ತು ಕಾಲಕ್ರಮದಲ್ಲಿ ಉಪಯುಕ್ತ ಬಳಕೆ ಬಗ್ಗೆ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಗಂಭೀರ ಸಮಸ್ಯೆ ಎನಿಸಿಲ್ಲ. ಈ ಕಳೆ ಸಸ್ಯದ ನಿರ್ಮೂಲನೆ ನಿಜಕ್ಕೂ ಈಗ ಅಸಾಧ್ಯ!

UNAKAL LAKE OF HUBBALLI COVERED BY EICHHORNIA CRASSIPES (5)ಉಣಕಲ್ ಕೆರೆಯ ನೀರನ್ನು ಸಂಪೂರ್ಣ ಬಸಿದು, ಅಂತರ ಗಂಗೆಯನ್ನು ಮೂಲೋತ್ಪಾಟನೆ ಮಾಡಬೇಕು ಎಂಬ ಧೋರಣೆ ಹೊಂದಿದ ನಮ್ಮ ಮುಂದಾಳುಗಳಿಗೆ ಕೆರೆಯ ಪಾತಳಿ, ಕೆರೆ ಆವರಣದ ತರಿ ಭೂಮಿ, ಹರಿವಿನ ವ್ಯಾಪ್ತಿಯ ಜೀವಿ ವೈವಿಧ್ಯದ ಬಗ್ಗೆ, ಅವುಗಳ ಸಂಕೀರ್ಣ ಹೊಂದಾಣಿಕೆ ವ್ಯವಸ್ಥೆಯ ಬಗ್ಗೆ ಮತ್ತು ಅಲ್ಲಿನ ಒಟ್ಟು ಪರಿಸರ ಗಡಿಯಾರದ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಕೈಗೊಳ್ಳುವಂತೆ ಆಗ್ರಹಿಸಬೇಕಿದೆ. ತಜ್ಞರ ಸಮಿತಿ ನೇಮಕ ಮಾಡಿ, ವರದಿ ಪಡೆಯುವ ಸೌಜನ್ಯ ಪ್ರದರ್ಶಿಸಿ, ತಮ್ಮ ಸಾಮಾಜಿಕ ಬದ್ಧತೆ ದರ್ಶಿಸುವಂತೆ ಹಕ್ಕೊತ್ತಾಯ ಮಾಡಬೇಕಿದೆ. ಕಾರಣ, ಕೆರೆಯನ್ನು ಸಂಪೂರ್ಣ ಬತ್ತಿಸಿದರೂ ಕಳೆ ಸಸ್ಯದ ಬೀಜಗಳು ಸುಮಾರು ೨೦-೩೦ ವರ್ಷಗಳಷ್ಟು ಬದುಕಿ ಉಳಿದು, ಪೂರಕ ವಾತಾವರಣ ಸೃಷ್ಟಿಯಾದಾಗ ಪುನಃ ಜೀವ ಸ್ಫುರಿಸಿಕೊಳ್ಳುವ ಅದಮ್ಯ ಚೈತನ್ಯ ಮೈಗೂಡಿಸಿಕೊಂಡಿವೆ!

ಉಣಕಲ್ ಕೆರೆಯಲ್ಲಿ ಅಂತರಗಂಗೆ ಎಂದು ಗುರುತಿಸಲಾದ, ಕೆರೆಯನ್ನು ಆಪೋಣೆ ಮಾಡುವ ಮಟ್ಟಕ್ಕೆ ಹಬ್ಬಿರುವ ‘ಕಳೆ ಸಸ್ಯ’ ದಕ್ಷಿಣ ಅಮೆರಿಕೆಯಿಂದ ನಮ್ಮೂರಿಗೆ ಆಮದಾದ ‘ಫಾರೆನ್ ಕಳೆ’. ಗೋದಿಯೊಂದಿಗೆ ಆಮದಾಗಿ ಬಂದ ‘ಕಾಂಗ್ರೆಸ್ ಕಸ’ದ ಕಳೆ ಗಿಡವಿದ್ದಂತೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಈ ‘ವಾಟರ್ ಹಯಾಸಿಂಥ್’ ಪ್ರಜಾತಿಗೆ ಸೇರಿದ ೧೨ ಕಳೆ ಸಸ್ಯಗಳೊಂದಿಗೆ ಅಂತರಗಂಗೆ – ‘ಐಖೋರ್ನಿಯಾ ಕ್ರಾಸಿಪಸ್’ ರಾಷ್ಟ್ರೀಯ ಕಳೆ ಸಸ್ಯವಾಗಿ ಘೋಷಿಸಲ್ಪಟ್ಟಿದೆ! ಇದು ಸದ್ಯ ನಮ್ಮ ‘ರಾಜ್ಯ ಮಟ್ಟದ ಕಳೆ ಸಸ್ಯ’!

ತುರ್ತಾಗಿ ಆಗಬೇಕಾದ ಸದ್ಯದ ಕೆಲಸವೆಂದರೆ, ಉಣಕಲ್ ಕೆರೆಗೆ ಎಲ್ಲ ಒಳ ಸುರಿಗಳಿಂದ ಹರಿದು ಬರುತ್ತಿರುವ ಥರಹೇವಾರಿ ಮಲಿನ ನೀರನ್ನು ಮಾರ್ಗ ಬದಲಾಯಿಸಿ, ನೇರವಾಗಿ ಕೆರೆಗೆ ಸೇರದಂತೆ ತಡೆಯುವುದು. ಕೆರೆಯ ಆವರಣದಲ್ಲಿ ಅಥವಾ ದಂಡೆಯ ಮೇಲೆ ಕನಿಷ್ಟ ಎರಡು ಮುಖ್ಯ ಬಿಂದುಗಳಲ್ಲಿ ಹೀಗೆ ಹರಿದು ಬಂದ ಹೊಲಸು ನೀರನ್ನು ಏಕತ್ರಿತಗೊಳಿಸಿ, ಶುದ್ಧೀಕರಿಸಿ, ಆಮೇಲೆ ಕೆರೆಗೆ ಬಿಡುವ ಘಟಕಗಳು ತಲೆ ಎತ್ತಬೇಕು. ಮಳೆಗಾಲ ಹೊರತುಪಡಿಸಿ ಉಳಿದ ಋತುಮಾನದಲ್ಲಿ ಕೆರೆಯ ನೀರನ್ನೇ ಈ ಶುದ್ಧೀಕರಣ ಘಟಕಗಳ ಮೂಲಕ ಶುದ್ಧೀಕರಿಸುವ ಮತ್ತು ಕೆರೆಯ ಉದರದಲ್ಲಿ ಜೀವ ಚೈತನ್ಯ ಉಮ್ಮಳಿಸುವಂತೆ ಕಾಲಮಿತಿ ಯೋಜನೆ ರೂಪಿಸುವುದು.

UNAKAL LAKE OF HUBBALLI COVERED BY EICHHORNIA CRASSIPES (2)ಸದ್ಯ ಬಿ.ಆರ್.ಟಿ.ಎಸ್ ಕಾಮಗಾರಿ ನಡೆದಿದ್ದು ಚತುಷ್ಪಥ ರಸ್ತೆಯ ಇಕ್ಕೆಲಗಳಲ್ಲಿ ಗಟಾರುಗಳನ್ನು ನಿರ್ಮಿಸಲಾಗುತ್ತಿದೆ. ರಾಯಾಪುರದಿಂದ ಉಣಕಲ್ ವರೆಗೆ ಈ ಗಟಾರುಗಳ ಮೂಲಕ ಹರಿಯುವ ನೀರನ್ನು ‘ಆಕ್ಸಿಡೇಷನ್ ಪೈಪ್’ ಅಳವಡಿಸುವ ಮೂಲಕ ಪರಿಸರ ಸ್ನೇಹಿಯಾಗಿ ಉಣಕಲ್ ಕೆರೆಗೆ ಜಲ ಮರುಪೂರಣ ವ್ಯವಸ್ಥೆ ಗೊಳಿಸಬಹುದು. ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ ಅಡಿ, ಕೆರೆಯ ಆವರಣದ ತರಿ ಭೂಮಿಯಲ್ಲಿ ಈಗಲೇ ಹೂಳೆತ್ತಿಸಿ ಪಾತಳಿ ಹಿಗ್ಗಿಸುವ ಕಾಮಗಾರಿ ನಡೆಯಲಿ. ಕೋಡಿ ಬಿದ್ದು ಹರಿಯುವ ಮತ್ತು ಕೆರೆಗೆ ಉದರಂಭರಣ ಮಾಡುವ ಪೋಷಕ ಕಾಲುವೆಗಳ ದುರಸ್ಥಿ ಜೊತೆಗೆ ಅತಿಕ್ರಮಣ ತೆರವು ಸಹ ಮುಖ್ಯ, ಕೆರೆಯ ಒಟ್ಟೂ ಒಡ್ಡಿನ ಪ್ರದೇಶದಲ್ಲಿ ಕೊಳಚೆ ನೀರು ಸೇರದಂತೆ ವ್ಯಾಪಕ ಕಟ್ಟೆಚ್ಚರ ಮತ್ತು ಕಾವಲು ಹಾಕಬೇಕು. ಧರ್ಮ, ಪೂಜೆ, ಪುನಸ್ಕಾರ, ನಂಬಿಕೆ ಹೆಸರಿನಲ್ಲಿ ಪೂಜಾ ವಸ್ತುಗಳನ್ನು ವಿಲೇವಾರಿಗೆ ವ್ಯವಸ್ಥೆಯಾಗಬೇಕು. ಜಿಲ್ಲಾಡಳಿತ ಸೇರಿದಂತೆ ಸಂಬಂಧಿತ ಎಲ್ಲ ಇಲಾಖೆಗಳು ಪರಸ್ಪರ ಸಂಯೋಜನೆ, ಆಸಕ್ತ ಸ್ವಯಂಸೇವಾ ಸಂಘಟನೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಉಮ್ಮೇದು, ಸಮುದಾಯದ ಸಹಭಾಗಿತ್ವ ಮತ್ತು ಸಮುದಾಯಕ್ಕೆ ಕೆರೆಯ ಒಡೆತನ ದೊರಕಿಸಿ ಕೊಡಲು ಯೋಗ್ಯ ಸಿದ್ಧತೆ ಮಾಡಿಕೊಳ್ಳಬೇಕು; ಮತ್ತು ಕಾಮಗಾರಿಯಲ್ಲಿ ಬದ್ಧತೆ ದರ್ಶಿಸಬೇಕು.

ಹೀಗೆ ‘ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಸಿಸ್ಟಿಮ್ಸ್’ ಪ್ರಯೋಗದ ಭಾಗವಾಗಿ, ಕಳೆ ಸಸ್ಯದ ನಿಯಂತ್ರಣಕ್ಕೆ ‘ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್‌ಮೆಂಟ್’ ಮಾದರಿಯಲ್ಲಿ, ಸಾಂಸ್ಕೃತಿಕ, ಜೈವಿಕ, ಯಾಂತ್ರಿಕ-ತಾಂತ್ರಿಕ, ರಾಸಾಯನಿಕ ಪ್ರಯೋಗ ಒಳಗೊಂಡ ‘ಬೆಸ್ಟ್ ಪ್ರ್ಯಾಕ್ಟೀಸಸ್’ ಯೋಜನೆ ಜಿಲ್ಲಾಡಳಿತ ರೂಪಿಸಲು ಮುಂದಾಗಬೇಕು. ಸಂಬಂಧಿತ ಎಲ್ಲ ಇಲಾಖೆಗಳ, ಈ ಭಾಗದ ವಿವಿಗಳ ಸಹಭಾಗಿತ್ವ ಮತ್ತು ಜವಾಬ್ದಾರಿ ನಿಶ್ಚಯವಾಗಬೇಕು. ದೇಶಕ್ಕೇ ಮಾದರಿಯಾಗುವ ಬದ್ಧತೆ-ಸಿದ್ಧತೆಯೊಂದಿಗೆ ಅನುಷ್ಟಾನಗೊಂಡಾಗ ಮಾತ್ರ ಉಣಕಲ್ ಸಿದ್ದಪ್ಪಜ್ಜನ ಶಾಪ ‘ಉಣ್ಣಲೇ ಕಲ್’ದಿಂದ ನಮಗೆ ವಿಮೋಚನೆ; ಇಲ್ಲವೇ ಕಾಂಕ್ರೀಟ್ ಕಾಡು ನಿರ್ಮಿಸಲು ನಾವು ಸಿದ್ಧವಾಗುವುದು – ಮುಂದಿನ ಪೀಳಿಗೆ ಅನುಭವಿಸುವುದು.

ಅಂತರಗಂಗೆ - ‘ಐಖೋರ್ನಿಯಾ ಕ್ರಾಸಿಪಸ್’ ಕಳೆ ಸಸ್ಯದ ಪರಿಣಾಮ:

ಕೆರೆಯ ಒಟ್ಟು ಪೂರೈಕೆ ಮಟ್ಟ (ಎಫ್.ಎಸ್.ಎಲ್) ಹಾನಿಗೀಡಾಗಿ, ನೀರಿನ ಒಳ-ಹೊರ ಪರಿಸರದ ಜೀವಿ ವೈವಿಧ್ಯ ಸಂಪೂರ್ಣ ಅಧೋಗತಿಗೆ ಇಳಿಯುತ್ತ ಹೋಗುತ್ತದೆ. ದುರ್ನಾತ ಬೀರುವ ಕೊಚ್ಚೆ ಹೊಂಡವಾಗಿ ಕೆರೆ ರೂಪುಗೊಳ್ಳುತ್ತದೆ. ನೀರಿನಲ್ಲಿ ಆಮ್ಲಜನಕದ ಕರಗುವಿಕೆ ಕ್ರಮೇಣ ಶೂನ್ಯ ಮಟ್ಟಕ್ಕೆ ತಲುಪಿ ಎಲ್ಲ ಜಲಚರಗಳು ಸಾವಿನ ದವಡೆಗೆ ಸಿಲುಕುತ್ತವೆ. ರೋಗ ಜನ್ಯ ಮತ್ತು ವಾಹಕ ಕ್ರಿಮಿ ಕೀಟಗಳಿಗೆ ಹೆರಿಗೆ ಮನೆಯಾಗುತ್ತದೆ. ಒಳ ಹರಿವಿಗೆ ತೊಂದರೆಯಾಗದಿದ್ದರೂ, ಹೊರ ಹರಿವು ನಿಸ್ತೇಜಗೊಂಡು ಒಳನಾಡು ಮೀನುಗಾರಿಕೆ, ಕೃಷಿಗೆ ಈ ನೀರು ಅಲಭ್ಯ. ಕೈ ಕಟ್ಟಿ ಕುಳಿತಲ್ಲಿ ಕೆರೆಯನ್ನು ಮತ್ತೆ ಪುನರುಜ್ಜೀವಿತ ಗೊಳಿಸಲಾಗದ ಸ್ಥಿತಿಗೆ (ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಲು ಯೋಗ್ಯ ಜಾಗೆ!) ತಲುಪುತ್ತದೆ. ಜಲಶಕ್ತಿ ಸಂಪೂರ್ಣ ಅಪವ್ಯವವಾಗುತ್ತದೆ.

ಕಳೆ ಸಸ್ಯದ ಸಮರ್ಪಕ ನಿಯಂತ್ರಣ ಹೇಗೆ?

ಅಂತರಗಂಗೆ – ‘ಐಖೋರ್ನಿಯಾ ಕ್ರಾಸಿಪಸ್’ ಕೆರೆಯಲ್ಲಿ ಹರಡುವಿಕೆಗೆ ಮೂಲ ಕಾರಣ ಕೊಳಚೆ, ಗಟಾರು ಮತ್ತು ಒಳಚರಂಡಿ ನೀರಿನ ಒಳ ಹರಿವಿನ ಪ್ರಮಾಣ ಶುದ್ಧ ನೀರಿನ ಹರಿವಿಗಿಂತ UNAKAL LAKE OF HUBBALLI COVERED BY EICHHORNIA CRASSIPES (3)ಹೆಚ್ಚಾದಾಗ! ಹಾಗಾಗಿ, ಆರಂಭದಲ್ಲೇ ಈ ಕಳೆ ಸಸ್ಯವನ್ನು ಗುರುತಿಸಿದಾಗ ಮೊದಲ ಹೆಜ್ಜೆ ಮಾನವ ಸಂಪನ್ಮೂಲ ಮತ್ತು ಯಾಂತ್ರಿಕ ಶಕ್ತಿ ಬಳಕೆ ವಿಧಾನ ಒಗ್ಗೂಡಿಸಿ ಕೆರೆಗೆ ನಂಜಾಗಿ ಹಬ್ಬುವಂತೆ ತಡೆಯುವುದು, ತನ್ಮೂಲಕ ಬೀಜ ಪ್ರಸಾರಕ್ಕೆ ತಡೆಯೊಡ್ಡುವುದು. ಕಾರಣ, ಇದು ‘ಫಾರೆನ್ ಕಳೆ ಸಸ್ಯ’ವಾಗಿದ್ದರಿಂದ ಸ್ಥಳೀಯವಾಗಿ ಸಸ್ಯ ರೂಪದಲ್ಲಿ ಹೊಡೆದಾಡುವ ಶತ್ರುಗಳೇ ಇಲ್ಲದೇ ಹೋಗಿ, ಪ್ರಜನನ ಕಾಳ್ಗಿಚ್ಚಿನಂತೆ ಹಬ್ಬುತ್ತದೆ.

ಎರಡನೇ ಪ್ರಬಲ ಅಸ್ತ್ರ ರಾಸಾಯನಿಕ ಬಳಸಿ ನಿಯಂತ್ರಣ ವಿಧಾನ. ಪ್ಯಾರಾಕ್ವೆಟ್, ಡಯಾಕ್ವೆಟ್, ಗ್ಲಿಫೋಸೈಟ್, ಹರ್ಬಿಸೈಟ್ ಉತ್ಪಾದಿಸಿ ಬಳಸುವುದು. ಆದರೆ, ಧೀರ್ಘಕಾಲ ಈ ರಾಸಾಯನಿಕಗಳನ್ನು ಬಳಸಿದ್ದೇ ಆದರೆ ನೀರಿನ ಶುದ್ಧತೆ ಮತ್ತು ಗುಣಮಟ್ಟ ಬಾಧಿತವಾಗುತ್ತದೆ. ಜಲಚರ ಮತ್ತು ಕೆರೆಯ ಆಂತರಿಕ ಉದರ ಪರಿಸರ ನಶಿಸಿಯೇ ಹೋಗುವ ‘ರಿಸ್ಕ್’ ಇದೆ. ಹಾಗಾಗಿ, ತಜ್ಞರ ಸಹಾಯ, ಕೂಲಕಂಷ ಅಧ್ಯಯನ ಮತ್ತು ಪರಿಣಾಮಗಳ ‘ಅಡ್ವಾನ್ಸ್‌ಡ್ ಪ್ರಿಡಿಕ್ಷನ್’ ಶೇ.೮೦ರಷ್ಟು ಕರಾರುವಾಕ್ ಆಗಬೇಕು.

ಮೂರನೇ ಹೆಜ್ಜೆ ಜೈವಿಕ ನಿಯಂತ್ರಣ ವಿಧಾನ. ಇದು ಪರಿಸರ ಸ್ನೇಹಿ ಕಳೆ ಸಸ್ಯ ನಿಯಂತ್ರಣ ವಿಧಾನ. ವಾಟರ್ ಹಯಾಸಿಂಥ್ ವೀವಿಲ್ಸ್ ಬೀಟಲ್ (Neochetina Eichhorniae & Neochetina Bruchia) ಮತ್ತು ರೆಕ್ಕೆ ಇರುವ ದುಂಬಿಗಳು – ಮಾಥ್ಸ್ (Niphograpta albiguttalis and Xubida infusella) ಬಳಸಿ ಜೈವಿಕವಾಗಿ ಕಳೆ ಸಸ್ಯವನ್ನು ಗೊಬ್ಬರವಾಗಿಸುವ ವಿಧಾನ. ಕಾರಣ, ಬೀಟಲ್‌ಗಳು, ವೀವಿಲ್ಸ್‌ಗಳು ಫೈಬರ್ ರಿಚ್ ಕಳೆ ಸಸ್ಯದ ಕಾಂಡ ಕೊರೆದು ಫಂಗೈ ಮತ್ತು ಬ್ಯಾಕ್ಟೀರಿಯಾಗಳನ್ನು (ಫಂಗಲ್ ಪ್ಯಾಥೋಜನ್ಸ್) ಬಿಟ್ಟು ನೈಸರ್ಗಿಕವಾಗಿಯೇ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ. ಆದರೆ, ಕಾಲಕ್ರಮದಲ್ಲಿ ಪಕ್ಕದ ಕೃಷಿ ಭೂಮಿಗೂ ಇವು ಲಗ್ಗೆ ಇಟ್ಟರೆ? ಹಾಗಾಗಿ ಕಾಲಾನಂತರದಲ್ಲಿ ಫಸಲಿನ ರಕ್ಷಣೆಗೆ ಇವುಗಳ ಶತ್ರು ಕೀಟಗಳನ್ನು ಜೈವಿಕ ತಂತ್ರಜ್ಞರು ರೂಪಿಸಬೇಕು! ಕೃಷಿ ಕೀಟಶಾಸ್ತ್ರಜ್ಞರ ಸಹಾಯ ಬೇಕು.

ನಾಲ್ಕನೇ ಹೆಜ್ಜೆ – ಅಂತರಗಂಗೆ – ‘ಐಖೋರ್ನಿಯಾ ಕ್ರಾಸಿಪಸ್’ ಸಸ್ಯ ಮತ್ತು ಬೀಜ ಬಳಸಿ ಬಿಸಾಡುವ ಯೋಜನೆ ರೂಪಿಸುವುದು. ಅಂತರಗಂಗೆ ಬೆಳೆಯುವುದು ಕೊಚ್ಚೆಯಲ್ಲಾದರೂ, ಕಾಂಡದ ನೀರು ಮಾತ್ರ ಶುದ್ಧವಾದ ಸಂಸ್ಕರಿಸಿದ ಮಿನರಲ್ ವಾಟರ್! ಹಾಗಾಗಿ ಬಳಸಿದ, ಅಶುದ್ಧ ನೀರಿನ ಶುದ್ಧೀಕರಣಕ್ಕೆ ನಿಯಂತ್ರಿತ ಚೌಕಟ್ಟಿನಲ್ಲಿ ಈ ಸಸ್ಯವನ್ನು ಬಳಸಬಹುದು. ಗಬ್ಬೆದ್ದು-ಕೊಚ್ಚೆಯಾದ ನೀರನ್ನು ಶುದ್ಧೀಕರಿಸಲು ನಿಯೋಜಿಸಬಹುದು. ಹರಡದಂತೆ ಕಟ್ಟೆಚ್ಚರ ವಹಿಸಬೇಕು. ‘ಆಕ್ಸಿಡೇಷನ್ ಪೈಪ್ ಅಥವಾ ಘಟಕ’ಗಳಲ್ಲಿ ಮಿತವಾಗಿ ಈ ಕಳೆ ಸಸ್ಯವನ್ನು ಕೊಳೆ ತೊಳೆ ಸಸ್ಯವಾಗಿ ಕರ್ತವ್ಯಕ್ಕೆ ಅಣಿಯಾಗಿಸಬಹುದು.

ನೀರಿನ ಅತೀ ಬಳಕೆ ಇರುವ ಕೈಗಾರಿಕೆಗಳಾದ ಹಾಲಿನ ಡೇರಿ, ಚರ್ಮೋದ್ಯಮ, ಸಕ್ಕರೆ ಕಾರ್ಖಾನೆ, ಕಾಗದ ಮತ್ತು ಪಲ್ಪ್ ಕಾರ್ಖಾನೆ, ಪಾಮ್ ಎಣ್ಣೆ ತಯಾರಿಸುವ ಘಟಕಗಳು, ತಂಪು ಪಾನೀಯ ಉತ್ಪಾದಿಸುವ ಕಾರ್ಖಾನೆ, ಡಿಸ್ಟಿಲರಿ ಕಾರ್ಖಾನೆಗಳಲ್ಲಿ ‘ಹೆವಿ ಮೆಟಲ್ ಬಾಡಿ’ ಹೀರುವ ಪ್ರನಾಳಗಳಾಗಿ ಈ ಕಳೆ ಸಸ್ಯವನ್ನು ‘ಆಕ್ಸಿಡೇಷನ್ ಪೈಪ್ ಅಥವಾ ಘಟಕ’ಗಳಲ್ಲಿ ಬಳಸಬಹುದು.

ಐದನೇ ಹೆಜ್ಜೆ ಅಂತರಗಂಗೆ ಬಳಸಿ ಪರ್ಯಾಯ ಇಂಧನ ಮತ್ತು ಜೈವಿಕ ಇಂಧನ ಉತ್ಪಾದನೆ - ‘ಐಖೋರ್ನಿಯಾ ಕ್ರಾಸಿಪಸ್’ ಕಳೆ ಸಸ್ಯದ ಕಾಂಡದಲ್ಲಿ ಗಣನೀಯ ಪ್ರಮಾಣದಲ್ಲಿ ‘ಸೆಲ್ಯುಲೋಸ್’ ಇದ್ದು, ಇಡೀ ಸಸ್ಯ ಶೇ.೯೦ ರಷ್ಟು ನೀರನ್ನು ಹೊಂದಿದೆ. ‘ಕ್ಲೋರೋಫಿಲ್’ ಪ್ರಮಾಣ ಕೂಡ ಗಣನೀಯವಾಗಿದ್ದು, ಔಷಧ ಉತ್ಪಾದನೆ ಕೈಗಾರಿಕೆಗೆ ಕಚ್ಚಾ ವಸ್ತುವಾಗಿದೆ. ‘ಬಯೋ ಮಾಸ್’ ಮತ್ತು ‘ಬಯೋ ಗ್ಯಾಸ್’ ಕೂಡ ಆಗಿ ಬಳಸುವ ತಂತ್ರಜ್ಞಾನ ಲಭ್ಯವಿದೆ. ಚೈನಾದಲ್ಲಿ ಈಗಾಗಲೇ ಹಂದಿಗಳ ಮಲ ಮತ್ತು ‘ಐಖೋರ್ನಿಯಾ ಕ್ರಾಸಿಪಸ್’ ಸಸ್ಯ ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಇಂಧನ ತಯಾರಿಸಿ ಬಳಸುವ ಪ್ರಯೋಗ ಯಶಸ್ವಿಯಾಗಿದೆ. ವಾಣಿಜ್ಜಿಕವಾಗಿಯೂ ಲಾಭದಾಯಕವಾದ ಎಥೆನಾಲ್ ಕೂಡ ಈ ಕಳೆ ಸಸ್ಯದಿಂದ ಉತ್ಪಾದಿಸಬೇಕು.

ಗುಡಿ ಮತ್ತು ಸಣ್ಣ ಕೈಗಾರಿಕೆ ಮಾದರಿಯಲ್ಲಿ ಈ ಕಳೆ ಸಸ್ಯದಿಂದ ಅಲಂಕಾರಿಕ ವಸ್ತುಗಳ ಉತ್ಪಾದನೆಗೂ ಜಿಲ್ಲಾಡಳಿತ ಪ್ರೋತ್ಸಾಹಿಸಬಹುದಾಗಿದೆ. ಕಾಗದ, ಹಗ್ಗ, ಕೈ ಚೀಲ, ಬಾಸ್ಕೇಟ್, ಪಾದ ಒರೆಸುವ ಮ್ಯಾಟ್, ಬೂಟು, ಚಪ್ಪಲಿ, ಸ್ಯಾಂಡಲ್ಸ್, ವ್ಯಾನಿಟಿ ಬ್ಯಾಗ್, ವ್ಯಾಲೆಟ್, ಪರ್ಸ್, ಹೂದಾನಿ, ಅಂಗಿ, ಹಾರ್ಡ್ ಬೋರ್ಡ್, ಕಾರ್ಡ್ ಬೋರ್ಡ್, ಸಾಗಾಣಿಕೆಗೆ ಅನುಕೂಲವಾಗುವ ಬಾಕ್ಸ್ ಸಹ ಉತ್ಪಾದಿಸಿ, ವಾಣಿಜ್ಜಿಕವಾಗಿಯೂ ಲಾಭದಾಯಕವಾಗಿಸುವ ಗೃಹ ವಿಜ್ಞಾನಕ್ಕೆ ಒತ್ತು ನೀಡಬೇಕು.

ಕಳೆ ಸಸ್ಯ ವಿಟ್ಯಾಮಿನ್, ಪ್ರೋಟಿನ್ ಮತ್ತು ಖನಿಜಾಂಶಗಳಿಂದ ಶ್ರೀಮಂತವಾಗಿದ್ದು, ಸಾಕು ಪ್ರಾಣಿಗಳಾದ ಮೊಲ, ಮೀನು, ಕೋಳಿ, ಕುರಿ, ಹಂದಿ, ಆಕಳು, ಎತ್ತು, ಎಮ್ಮೆ, ನಾಯಿ, ಬೆಕ್ಕುಗಳಿಗೆ ದೈನಂದಿನ ಆಹಾರದ ಜೊತೆಗೆ ಸಪ್ಲಿಮೆಂಟರಿ ಆಹಾರವಾಗಿ ‘ಫೀಡ್ಸ್’ ತರಹ ನೀಡಬಹುದು.

ಆರನೇ ಹೆಜ್ಜೆ ಕಳೆ ಸಸ್ಯವನ್ನು ಹಸಿರು ಗೊಬ್ಬರವಾಗಿ ಬಳಸುವುದು. ಎರೆಹುಳು ಗೊಬ್ಬರ ಮಾದರಿಯಲ್ಲಿ ಕಳೆ ಸಸ್ಯದ ತಿಪ್ಪೆಗಳನ್ನು ರೂಪಿಸಿ, ಜೈವಿಕ ಮತ್ತು ಯಾಂತ್ರಿಕ ವಿಧಾನದಿಂದ ಅವಶ್ಯಕ ಪೂರಕ ಪೋಷಕಾಂಶ ಸೇರಿಸಿ ಹೊಲ-ಗದ್ದೆಗಳಿಗೆ ಬೇಕಾಗುವ ಪೂರಕ ಹಸಿರು ರಾಸಾಯನಿಕ ಮತ್ತು ಗೊಬ್ಬರವಾಗಿ ಪರಿವರ್ತಿಸಿ, ಉದ್ಯಮಿ, ಕಾರ್ಮಿಕ ಮತ್ತು ರೈತರಿಗೆ ಲಾಭ ಒದಗಿಸಬಹುದು. ಮಣ್ಣಿನ ಆರೋಗ್ಯ ಪರೀಕ್ಷೆಗೂ ಇದನ್ನು ಮಾನದಂಡವಾಗಿ, ಸಾವಯವ ಮಾದರಿಯಾಗಿ ಪ್ರೋತ್ಸಾಹಿಸಬಹುದು.

ಕೊಳೆತು ನಾರುವ ನೀರಿನ ಮೇಲೆ ತೇಲುವ ಮನಸ್ಥಿತಿಯ ಈ ಕಳೆ ಸಸ್ಯ ತನ್ನ ಉದರದಲ್ಲಿ ಶುದ್ಧ ನೀರನ್ನೇ ಹುದುಗಿಸಿಟ್ಟುಕೊಂಡಿದೆ! ನಾವು ಮಾತ್ರ ಕೆಸರಿನಲ್ಲಿ ಸುಖ ಕಾಣುವ ಮನೋಸ್ಥಿತಿ ಬೆಳೆಸಿಕೊಳ್ಳುತ್ತಿದ್ದೇವೆ! ಮುಂದಿನ ಪೀಳಿಗೆ ಇದನ್ನೇ ಉಣ್ಣಬೇಕೆ?

ಈ ಕೆಳಗಿನ ವಿಡಿಯೋ ಗಮನಿಸಿ – https://www.youtube.com/watch?v=WPZlYY8hIwQ

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ

ಉಣಕಲ್ ಕೆರೆಯ ಚಿತ್ರಗಳು ಹಾಗೂ ಪೂರಕ ಮಾಹಿತಿ: ಡಾ. ಧೀರಜ್ ವೀರನಗೌಡರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*