ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೮: ಹೋರಾಟದ ಬೆವರಿನಿಂದ ಮತ್ತೆ ಅಮೃತವಾಗುತ್ತಿರುವ ಕೆರೆ

ಹೋರಾಟಗಳು ಒಂದೆರಡು ದಿನಗಳಿಗೆ ಮುಗಿಯುವುದಿಲ್ಲ. ಅದರಲ್ಲೂ ಪರಿಸರ, ಕೆರೆ ಸಂರಕ್ಷಣೆಯ ಹೋರಾಟ ಎಂದರೆ ವರ್ಷಗಳೇ ಉರುಳುತ್ತವೆ. ಹೋರಾಟದ ಫಲ ಕಾಣಲು ಕೆಲವು ಬಾರಿ ದಶಕವೂ ಕಳೆದುಹೋಗುತ್ತದೆ. ಕೆರೆ ಎಂಬ ಜಲಮೂಲ ಹಾಗೂ ಸರ್ಕಾರಿ ಸಂಪತ್ತನ್ನೂ ರಕ್ಷಿಸಿಕೊಳ್ಳಲು ಹೋರಾಟ ಅನಿವಾರ್ಯ. AmruthaHalli-1ಇದಕ್ಕೆ ಸಾರ್ವಜನಿಕರ ಪಾತ್ರ ಅತ್ಯಮೂಲ್ಯ. ಅವರು ಹೋರಾಡಿದರಷ್ಟೇ ಕೆರೆಯೊಂದನ್ನು ಉಳಿಸಿಕೊಳ್ಳಲು ಸಾಧ್ಯ. ಅಂತಹ ವರ್ಷಗಳ ಕಾಲದ ಹೋರಾಟದ ಫಲವೇ ಇಂದು ಅಮೃತಹಳ್ಳಿ ಕೆರೆಯ ಪುನರುಜ್ಜೀವನ.

ವಿಷದ ತಾಣವಾಗಿದ್ದ ಅಮೃತಹಳ್ಳಿ ಕೆರೆಯನ್ನು ವಿಷಮುಕ್ತ ಮಾಡಿಸುವ ಕೆಲಸ ಆರಂಭವಾಗಿಸಲು ನಡೆದ ಹೋರಾಟ ಹತ್ತು ವರ್ಷವೇ ಕಳೆದಿದೆ. ಅಮೃತನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ನಡೆಸಿದ ಹೋರಾಟದ ಫಲವೇ ಇಂದು ಅಮೃತಹಳ್ಳಿ ಕೆರೆಯ ಅಭಿವೃದ್ಧಿ ಪ್ರಾರಂಭ. ೨೪ ಎಕರೆಯ ವಿಸ್ತಾರ ಪ್ರದೇಶದಲ್ಲಿ ಹರಡಿಕೊಂಡಿರುವ ಅಮೃತಹಳ್ಳಿ ಕೆರೆಯನ್ನು ಬಿಡಿಎ ಇಂದು ಅಭಿವೃದ್ಧಿಗಾಗಿ ಕೈಗೆತ್ತಿಕೊಂಡಿದೆ. ಎಲ್ಲ ರೀತಿಯ ಒತ್ತುವರಿಯನ್ನು ಇನ್ನೂ ತೆಗೆಯದಿದ್ದರೂ ೧೭ ಎಕರೆಗೆ ಫೆನ್ಸಿಂಗ್ ಹಾಕಿ ಅಷ್ಟರಮಟ್ಟಿಗೆ ಕೆರೆಯನ್ನು ಉಳಿಸಲಾಗಿದೆ ಎಂಬುದಷ್ಟೇ ಸಮಾಧಾನಕರ. ಏಕೆಂದರೆ ಈ ೧೭ ಎಕರೆಯಲ್ಲಾದರೂ ಅಪಾರ್ಟ್‌ಮೆಂಟ್ ಎಂಬ ಭೂತ ತನ್ನ ಅಕ್ರಮ ನಾಲಿಗೆಯನ್ನು ಚಾಚಲು ಇನ್ನು ಸಾಧ್ಯವಾಗಿಲ್ಲ.

ಅಂದಹಾಗೆ, ಅಮೃತಹಳ್ಳಿ ಕೆರೆ, ಅಪಾರ್ಟ್‌ಮೆಂಟ್ ಎಂದಕೂಡಲೇ ಈ ಕೆರೆಯ ‘ಆಪೋಷಣ’ದ ಭೀತಿ ಅರ್ಥವಾಗಿರಬೇಕು. ಈ ಕೆರೆ ಇರುವುದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ. ಹೆಬ್ಬಾಳ ಫ್ಲೈಓವರ್ ಆದಮೇಲೆ ಮುಂದೆ ಹೋದರೆ ಬಲಭಾಗದಲ್ಲಿ ಅಮೃತಹಳ್ಳಿಗೆ ದಾರಿ ಸಿಗುತ್ತದೆ. ಅಪಾರ್ಟ್‌ಮೆಂಟ್‌ಗಳ ಒತ್ತುವರಿ ಕಾಟ ಇಲ್ಲದಿದ್ದರೆ ಈ ಕೆರೆ ಹೆದ್ದಾರಿಗೆ ಬೃಹತ್ ಆಕಾರದಲ್ಲಿ ಕಾಣಬೇಕಿತ್ತು. ಆದರೆ, ಅಪಾರ್ಟ್‌ಮೆಂಟ್‌ಗಳ ಸಂದಿಯಲ್ಲಿ ಮುಖ್ಯರಸ್ತೆಯಿಂದಲೇ ಕೆರೆಯನ್ನು ಕಾಣಬಹುದು. ಸುಮಾರು ಒಂದು ಕಿಮೀ ಒಳಗೆ ಹೋದರೆ ಅಮೃತಹಳ್ಳಿ ಕೆರೆ ಅನಾವರಣಗೊಳ್ಳುತ್ತದೆ. ಇಂದು ಈ ಕೆರೆ ಅಭಿವೃದ್ಧಿಯ ಪಥದಲ್ಲಿದ್ದು, ನೀರಿಲ್ಲ. ಫೆನ್ಸಿಂಗ್ ಕಾಣುತ್ತಿದ್ದು, ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ಆದರೆ, ಇದನ್ನೇ ನಾನು ಎಂಟು ವರ್ಷಗಳ ಹಿಂದೆ ನೋಡಿದ್ದಾಗ ವಿಷದ ತಾಣವಾಗಿತ್ತು. ೨೪ ಎಕರೆ ಕೆರೆ ಎಲ್ಲಿದೆ ಎಂಬುದೇ ಕಾಣುತ್ತಿರಲಿಲ್ಲ. ಕಟ್ಟಡಗಳ ತ್ಯಾಜ್ಯವನ್ನೆಲ್ಲಾ ಇಲ್ಲಿ ತುಂಬಿ ಕೆರೆಯನ್ನು ನಾಶಪಡಿಸುವ ಎಲ್ಲ ಪ್ರಯತ್ನಗಳೂ ಇಲ್ಲಿ ನಡೆಯುತ್ತಿದ್ದವು. ಆದರೆ, ಇದಕ್ಕೆಲ್ಲ ಎದುರಾಗಿ ನಿಂತವರು ಸ್ಥಳೀಯರು.

Amruthhalli೧೦ ವರ್ಷಗಳ ಹಿಂದೆ ಅಮೃತಹಳ್ಳಿ ಕೆರೆಯಲ್ಲಿದ್ದ ಅಮೃತಕ್ಕೆ ಸಮಾನವಾದ ಸಮೃದ್ಧ ನೀರು ಸುತ್ತಮುತ್ತಲ ಹಳ್ಳಿಗಳಿಗೆ ಜೀವಜಲವಾಗಿತ್ತು. ಈ ಸಿಹಿ ನೀರಿಗೆ ಮನಸೋತಿದ್ದ ಹಿಂದಿನ ಸ್ಥಳೀಯರು ಅಮೃತ ಎಂದು ಬಣ್ಣಿಸತೊಡಗಿದರು. ತಮ್ಮ ಹಳ್ಳಿ ಹಾಗೂ ಕೆರೆಗೆ ಅದೇ ಹೆಸರಿಟ್ಟರು. ಇಂದು, ಅಮೃತಹಳ್ಳಿ ಅಭಿವೃದ್ಥಿಯ ಪಥದಲ್ಲಿ ಸಾಗಿ, ನಗರ ಕೇಂದ್ರ ಭಾಗಕ್ಕೆ ಹೊಂದಿಕೊಂಡಿದೆ. ಸುಮಾರು ೧೫೦ ವರ್ಷಗಳ ಇತಿಹಾಸವಿರುವ ಅಮೃತಹಳ್ಳಿ ಕೆರೆ ಅದರ ಸ್ವಾದಿಷ್ಟ ನೀರಿಗಾಗಿಯೇ ಆ ಹೆಸರನ್ನು ಪಡೆದಿತ್ತು. ಹಳ್ಳಿಗೂ ಅದೇ ಹೆಸರನ್ನು ನಾಮಕರಣ ಮಾಡಲಾಯಿತು. ಆದರೆ, ಇಂದು ಕೆರೆಯ ಹೆಸರು ಬದಲಾಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತ್ತು. ಕೆರೆ ಒಳಗೆ ಕಲ್ಮಶಯುಕ್ತ ಹೂಳು ಮಾತ್ರ ಇರಲಿಲ್ಲ, ಬದಲಿಗೆ ಎಲ್ಲ ರೀತಿಯ ತ್ಯಾಜ್ಯ, ವಿಷಕ್ಕೂ ಇದೇ ತಾಣವಾಗಿತ್ತು. ಬೆಂಗಳೂರು ಮಹಾನಗರ ಪಾಲಿಕೆ, ಬ್ಯಾಟರಾಯನಪುರ ನಗರಸಭೆ ಎಂಬ ಸ್ಥಳೀಯ ಆಡಳಿತಗಳು ಒಂದು ಬಾರಿಯೂ ಕೆರೆಯನ್ನು ಸ್ವಚ್ಛಗೊಳಿಸುವ, ಹೂಳೆತ್ತಿ ಆರೈಕೆ ಮಾಡುವ ಕಾರ್ಯವನ್ನು ಯಾರೂ ಮಾಡಿರಲಿಲ್ಲ. ಕೆರೆಯನ್ನು ಉಳಿಸುವ ಹೋರಾಟ ನಡೆಸಿದವರು ಅಮೃತನಗರ ಕ್ಷೇಮಾಭಿವೃದ್ಧಿ ಸಂಘದವರು.

ಈ ಕೆರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸ್ಥಳೀಯ ಮುಖಂಡರನ್ನೆಲ್ಲ ಸೇರಿಸಿಕೊಂಡು ಹೋರಾಟ ನಡೆಸಿದರು, ನಡೆಸುತ್ತಿದ್ದಾರೆ. ಅರಣ್ಯ Amruthhalli (2)ಇಲಾಖೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಬಹುತೇಕ ಎಲ್ಲ ಜನಪ್ರತಿನಿಗಳಿಗೂ ಕೆರೆಯನ್ನು ರಕ್ಷಿಸಿ ಎಂದು ನೀಡಿದ್ದ ಮನವಿ, ಒತ್ತಾಯಗಳು ಲೆಕ್ಕಕ್ಕಿಲ್ಲ. ವರ್ಷಗಳು ಕಳೆದರೂ ಭರವಸೆಯಷ್ಟೇ ಸೀಮಿತವಾಗಿತ್ತು. ಆದರೆ ತಮ್ಮ ಪ್ರಯತ್ನವನ್ನು ಈ ಕ್ಷೇಮಾಭಿವೃದ್ಧಿ ಸಂಘದ ವಿಜಯನಳಿನಿ ಹಾಗೂ ಅವರ ಸ್ನೇಹಿತರು ಬಿಡಲೇ ಇಲ್ಲ. ಆ ಹೋರಾಟದ ಫಲವಾಗಿ ಅಮೃತಹಳ್ಳಿ ಕೆರೆ ಇಂದು ಅಭಿವೃದ್ಧಿಯ ‘ವೈಭವ’ ಕಾಣುತ್ತಿದೆ. ಯಾವುದೇ ಜಂಜಾಟ, ರಾಜಕೀಯದ ಮೇಲಾಟ ಇಲ್ಲದಿದ್ದರೆ ಮುಂದಿನ ವರ್ಷದ ಮಳೆಗಾಲದಲ್ಲಿ ಸುಮಾರು ೨೪ ಎಕರೆ ಪ್ರದೇಶದ ಅಮೃತಹಳ್ಳಿ ಕೆರೆಯಲ್ಲಿ ಅಮೃತದಷ್ಟು ಶುದ್ಧದ ನೀರಿಲ್ಲದಿದ್ದರೂ ಸಾಕಷ್ಟು ನೀರನ್ನು ಕಾಣಲು ಸಾಧ್ಯ. ಸ್ವಚ್ಛ ನೀರೇ ಕೆರೆ ಸೇರಬೇಕೆಂಬುದು ಸ್ಥಳೀಯರ ಆಶಯವಾಗಿದ್ದರೂ, ಅದಕ್ಕಾಗಿ ಸಂಸ್ಕರಣಾ ಘಟಕ ಅಳವಡಿಸಬೇಕಿದೆ. ಅದಕ್ಕೆ ಕೋಟ್ಯಂತರ ವೆಚ್ಚ. ಇದನ್ನು ಭರಿಸಲು ಬಿಡಿಎ ಸಿದ್ಧ ಇಲ್ಲ. ಅದಕ್ಕೂ ಅಮೃತನಗರ ಕ್ಷೇಮಾಭಿವೃದ್ಧಿ ಸಂಘವೇ ಪ್ರಯತ್ನ ಮಾಡುತ್ತಿದೆ.

ಸ್ಥಳೀಯವಾಗಿ ಜನರು ಎಚ್ಚೆತ್ತುಕೊಂಡರೆ ಎಂತಹ ಕಾರ್ಯವನ್ನಾದರೂ ಅದರಲ್ಲೂ ಪರಿಸರದಂತಹ ನಿರ್ಲಕ್ಷ್ಯ ಕ್ಷೇತ್ರದಲ್ಲೂ ಸಾಧನೆ ಸಾಧ್ಯ ಎಂಬುದನ್ನು ದಶಕದ ನಿರಂತರ ಹೋರಾಟದಿಂದ ಅಮೃತನಗರ ಕ್ಷೇಮಾಭಿವೃದ್ಧಿ ಸಂಘ ಸಾಬೀತುಪಡಿಸಿದೆ. ಅಮೃತಹಳ್ಳಿಯಂತಹ ಬೃಹತ್ ಕೆರೆಯನ್ನು ಉಳಿಸಿದ ಹೆಗ್ಗಳಿಕೆ ಇವರದ್ದು. ಇವರಂತಹ ಹೋರಾಟದ ಕೆಲಸ ಎಲ್ಲರಿಗೂ ಮಾದರಿ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*