ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮನಸ್ಸು ಮಾಡಿದ ಮಹಿಳೆಯರು

ಕಾರಿನಲ್ಲಿ ಚಿಂತಾಮಣಿಯಿಂದ ಬಾಗೇಪಲ್ಲಿಗೆ ಸ್ನೇಹಿತರೊಡನೆ ಹೋಗುತ್ತಿದ್ದೆ. ಸುಮಾರು ೨೬ ಕಿ. ಮೀಟರ್ ಕ್ರಮಿಸುತ್ತಿದ್ದಂತೆ, ರಸ್ತೆಯ ಎಡಬದಿಯಲ್ಲಿ ಮಹಿಳೆಯರ ಗುಂಪೊಂದು ಸದ್ದು-ಗದ್ದಲವಿಲ್ಲದಂತೆ ಕೆಲಸ ಮಾಡುವಲ್ಲಿ ಮಗ್ನರಾಗಿದ್ದರು. ಕುತೂಹಲದಿಂದ ಕಾರು ನಿಲ್ಲಿಸಿ, ಗುಂಪಿನತ್ತ ಧಾವಿಸಿದೆವು. ಒಬ್ಬರಿಂದ ಒಬ್ಬರಿಗೆ ಮಣ್ಣು ತುಂಬಿಸಿದ ಬುಟ್ಟಿಗಳು ರವಾನೆಯಾಗುತ್ತಿದ್ದವು. ಕೆಲ ಮಹಿಳೆಯರು ಗಡಾರಿಯಿಂದ ಮಣ್ಣು ಮೀಟುತ್ತಿದ್ದರೆ, ಇನ್ನೂ ಕೆಲವರು ಗುದ್ದಲಿಯಿಂದ ಬುಟ್ಟಿಗೆ ಮುಣ್ಣು ತುಂಬುತ್ತಿದ್ದರು. ಒಂದು ತಲೆಯ ಮೇಲಿಂದ ಮತ್ತೊಂದು ತಲೆ ಮೇಲಕ್ಕೆ ಸರಿಸರಾಗವಾಗಿ ಬುಟ್ಟಿಗಳ ಬದಲಾವಣೆಯಾಗುತ್ತಿದ್ದವು. ಗುಂಪಿನಲ್ಲಿ ಜರುಗುತ್ತಿದ್ದ ಈ ಕೆಲಸವನ್ನು ನೋಡಿದ ನನಗಂತೂ, ಇವರ ಕಠಿಣ ಶ್ರಮ, ಸಮಯ ಪಾಲನೆ ಮತ್ತು ಜವಾಬ್ದಾರಿ ಹಂಚಿಕೆ ನೋಡಿ.. ಹೀಗೂ ಉಂಟೆ ಎನಿಸಿತು. ಇವರೆಲ್ಲ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯ್ತಿಯ ಕೊಂಡಪ್ಪಗಾರಹಳ್ಳಿ ಕುಗ್ರಾಮಕ್ಕೆ ಸೇರಿದವರು.

for article - manasu maadida mahileyaru article - 1ಕುತೂಹಲದಿಂದ ಈ ಗುಂಪಿನ ನಾಯಕರು ಯಾರು? ಎಂದು ಕೇಳಿದೆ. ಇಲ್ಲಿ ಸೇರಿರುವ ಎಲ್ಲರೂ ನಾಯಕರೇ, ನಾವೆಲ್ಲ ಸ್ವಸಹಾಯ ಸಂಘದ ಸದಸ್ಯರುಗಳು. ಎರಡು ಸಂಘದ ಸದಸ್ಯರುಗಳಿದ್ದೇವೆ ಎಂದರು ಶ್ರೀಮತಿ. ಸಲ್ಲಮ್ಮ. ಇವರ ಪಕ್ಕದಲ್ಲೇ ಇದ್ದ ಪ್ರಮೀಳಮ್ಮ, “ನೋಡಿ ಸ್ವಾಮಿ, ಎರಡು  ಸಂಘಗಳಲ್ಲಿ ಒಟ್ಟು ೩೨ ಸದಸ್ಯರುಗಳಿದ್ದು, ೨೩ ಸದಸ್ಯರುಗಳು ಈ ಕೆಲಸ ಮಾಡುತ್ತಿದ್ದೇವೆ. ಊರು ಮತ್ತು ಗೋಮಾಳ ಈ ಎರಡರ ಮಧ್ಯ ಇರುವ ಈ ಗೋಕುಂಟೆ ಸಾವಿರಾರು ರಾಸುಗಳಿಗೆ ಕುಡಿಯಲು ನೀರು ಒದಗಿಸುತ್ತಿತ್ತು. ಕಾಲಕ್ರಮೇಣ ಹೂಳು ತುಂಬಿ, ಅವನತಿ ಹಂತ ತಲುಪಿದೆ. ಎರಡು ವರ್ಷಗಳ ಹಿಂದೆಯೇ ಇದನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ಸೇರಿಸಿ, ಅನುಮೋದನೆ ಪಡೆದರು. ಆದರೆ ಇಲ್ಲಿಯವರಗೆ, ಕಾಮಗಾರಿ ಅನುಷ್ಠಾನ ಮಾಡಲು ಯಾರೂ ಮುಂದೆ ಬರಲಿಲ್ಲ. ಇಂತಹ ಪರಿಸ್ಥಿತಿ ಮನವರಿಕೆ ಮಾಡಿಕೊಂಡ ಈ ಎರಡು ಸಂಘಗಳ ಸದಸ್ಯರುಗಳು ನಾವೇಕೆ ಈ ಕೆಲಸವನ್ನು ಪೂರೈಸಬಾರದು? ನಮ್ಮ ಮತ್ತು ಅಕ್ಕ-ಪಕ್ಕದ ಗ್ರಾಮಗಳಿಂದ ಗೋಮಾಳಕ್ಕೆ ಹೋಗುವ ಹಾಗೂ ವಾಪಸ್ಸು ಬರುವ ಜಾನುವಾರುಗಳಿಗೇಕೆ, ಕುಡಿಯಲು ನೀರು ಸಂಗ್ರಹಿಸುವ ಈ ಕುಂಟೆಯನ್ನು ಸರಿಪಡಿಸಬಾರದು? ಮಳೆಗಾಲದಲ್ಲಿ ಕಂಡುಬರುವ ಜಿನುಗು ನೀರನ್ನು ಕೂಡ ಕೊಯ್ಲು ಮಾಡಿ ಸಂಗ್ರಹಿಸಬಹುದಲ್ಲ? ಎಂಬ ವಿಷಯಗಳ ಬಗ್ಗೆ ಸಂಘಗಳಲ್ಲಿ ಚರ್ಚಿಸಲಾಯಿತು. ತದ ನಂತರ, ಎಲ್ಲರೂ ಸೇರಿ ಈ ಕೆಲಸ ಮುಗಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದೆವು,” ಎನ್ನುತ್ತಾರೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಮತಿ. ರತ್ನಮ್ಮ.

for article - manasu maadida mahileyaru article - 2ಅಂತೂ ತೀರ್ಮಾನದಂತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ನಿಯಮಗಳ ಅನ್ವಯ ಕೆಲಸ ನೀಡುವಂತೆ ದಿಬ್ಬೂರಹಳ್ಳಿ ಗ್ರಾಮ ಪಂಚಾಯ್ತಿಗೆ ಬೇಡಿಕೆಯನ್ನು ಸಲ್ಲಿಸಲಾಯಿತು. ಗ್ರಾಮ ಪಂಚಾಯ್ತಿಯಿಂದ ಅಂದಾಜು ಪಟ್ಟಿ ಅನುಮೋದನೆ, ಸ್ಥಳ ಪರಿಶೀಲನೆ, ಇತರೆ ಎಲ್ಲಾ ಪೂರ್ವಭಾವಿ ಕಾರ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಗ್ರಾಮದ ಯುವಕ ಗಂಗರಾಜು ಈ ಸದಸ್ಯರುಗಳಿಗೆ ಸಹಕಾರಿ ಮತ್ತು ಪ್ರೋತ್ಸಾಹ ನೀಡಿದರು.

for article - manasu maadida mahileyaru article - 3ಅಂತೂ-ಇಂತೂ ಈ ಕುಂಟೆಯಲ್ಲಿ ತುಂಬಿದ ಹೂಳು ತೆಗೆಯುವ ಕೆಲಸ ಪ್ರಾರಂಭವಾಗಿಯೇ ಬಿಟ್ಟಿತು. ಈ ಸ್ವಸಹಾಯ ಸಂಘಗಳು ಮಾಡುತ್ತಿರುವ ಕೆಲಸವನ್ನು ನೋಡಲೇಬೇಕು ಎಂಬ ಕುತೂಹಲದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಮತಿ. ಬಿ. ಬಿ. ಕಾವೇರಿಯವರು ಸ್ಥಳಕ್ಕೆ ಧಾವಿಸಿಯೇ ಬಿಟ್ಟರು. ಕುಂಟೆಯ ಒಂದು ಭಾಗದಲ್ಲಿ ಕಂಡುಬಂದ ಬಂಡೆಯನ್ನು ಗಮನಿಸಿದರು. ಬಂಡೆಗೆ ಅಂಟಿಕೊಂಡ ಮಣ್ಣನ್ನು ಬಿಡಿಸಲು ಗಟ್ಟಿಯಾಗಿ ಗಡಾರಿಯನ್ನು ಹಾಕುತ್ತಿದ ಮಹಿಳೆಯನ್ನು ನೋಡಿ ಕ್ಷಣಕಾಲ ದಿಗ್ಭ್ರಾಂತರಾದಂತೆ ಕಂಡುಬಂತು. ತಕ್ಷಣವೇ ಕುಂಟೆಯ ಮತ್ತೊಂದು ಭಾಗದಲ್ಲಿ ಹೆಚ್ಚು ಕೆಲಸ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಅನುಮೋದನೆಯಾಗಿದ್ದ ಒಟ್ಟು ಐವತ್ತು ಸಾವಿರದ ಕೆಲಸವನ್ನು ಹನ್ನೊಂದು ದಿನಗಳಲ್ಲಿ ಸ್ವಚ್ಚವಾಗಿ ಹಾಗೂ ಗುಣಮಟ್ಟದೊಂದಿಗೆ ಮಾಡಿ ಮುಗಿಸಿರುವ ಪ್ರಶಂಸೆ ಈ ಎರಡು ಸ್ವಸಹಾಯ ಸಂಘಗಳ ಪ್ರತಿ ಸದಸ್ಯೆಗೂ ಸಲ್ಲಬೇಕು. ಈ ಕೆಲಸ ಕೈಗೊಳ್ಳುವಲ್ಲಿ ಮಾರ್ಗದರ್ಶನ ಮತ್ತು ಸಹಕಾರ ನೀಡಿದ ಎಫ್.ಇ.ಎಸ್ (ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ) ಸ್ವಯಂ ಸಂಸ್ಥೆಯ ಸೇವೆಯನ್ನು ನೆನಸಿಕೊಂಡು, ಕೃತಜ್ಞತೆ ಸಲ್ಲಿಸುವುದನ್ನು ಗ್ರಾಮದ ಮಹಿಳೆಯರು ಮರೆಯಲಿಲ್ಲ.

for article - manasu maadida mahileyaru article - 4ಹೂಳು ತೆಗೆದ ಕುಂಟೆ ಅಕಾಲಿಕ ಮಳೆಯಿಂದ ಕಳೆದ ನವಂಬರ್ ಮಾಹೆಯಲ್ಲಿ ನೀರಿನಿಂದ ಸಂಪೂರ್ಣವಾಗಿ ತುಂಬಿತು. ಬಿಸಿಲಿನ ಬೇಗೆಯ ಈ ಪರಿಸ್ಥಿಯಲ್ಲಿ ಸಾವಿರಾರು ರಾಸುಗಳು ನೆಮ್ಮದಿಯಿಂದ ತಮ್ಮ ದಾಹ ನಿವಾರಿಸಿಕೊಳ್ಳಲು ಅನುಕೂಲವಾಗಿದೆ. ಸ್ವಸಹಾಯ ಸಂಘಗಳ ಪ್ರತಿ ಸದಸ್ಯರುಗಳಲ್ಲಿಯೂ ಪ್ರಾಣಿ-ಪಕ್ಷಿ ಎಲ್ಲಕ್ಕೂ ಕುಡಿಯಲು ನೀರು ನೀಡಿದವಲ್ಲ್ಲ ಎಂಬ ಆನಂದ ಎದ್ದು ಕಾಣುತ್ತಿದೆ.

for article - manasu maadida mahileyaru article - 5ಜೊತೆಗೆ ಈ ಸ್ವಸಹಾಯ ಸಂಘಗಳು ಈ ಕುಂಟೆ ನೀರಿನ ಬಳಕೆ ಕುರಿತು ಕೆಲವು ಕಟ್ಟುಪಾಡುಗಳನ್ನು ಮಾಡಿ, ಪ್ರತಿಯೊಬ್ಬರೂ ಅನುಸರಿಸುವಂತೆ ಸಮುದಾಯದಲ್ಲಿ ಮನವರಿಕೆ ಮಾಡಿವೆ. ಕುಂಟೆಯಲ್ಲಿ ಶೇಖರವಾಗಿರುವ ನೀರನ್ನು ಅಕ್ಕ-ಪಕ್ಕದ ರೈತರು ವ್ಯವಸಾಯಕ್ಕೆ ಬಳಕೆ ಮಾಡುವಂತಿಲ್ಲ, ಯಾವ ಕಾರಣಕ್ಕೂ ಇಲ್ಲಿ ಬಟ್ಟೆಗಳನ್ನು ತೊಳೆಯುವಂತಿಲ್ಲ. ಹೀಗೆ ಕೆಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸುವುದರ ಜೊತೆಗೆ ಪಾಲಿಸುತ್ತಿವೆ.

ಒಗ್ಗಟ್ಟಿನಿಂದ ನೀರು ಸಂಗ್ರಹಿಸುವ ಸಣ್ಣ ಸಣ್ಣ ಕೆಲಸಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಂಡರೆ ಬತ್ತುತ್ತಿರುವ ಅಂತರ್ಜಲವನ್ನು ಮರುಪೂರಣೆಗೆ ಅನುಕೂಲವಾಗಬಹುದಲ್ಲವೇ? ಸಾವಿರಾರು ಪ್ರಾಣಿ ಪಕ್ಷಿಗಳ ನೀರಿನ ದಾಹ ನೀಗಿಸುವಲ್ಲಿ ಒಂದು ದೊಡ್ಡ ಕೆಲಸ ಇದಲ್ಲವೇ? ಇಂತಹ ಕೆಲಸವನ್ನು ಇತರರಿಗೆ ಮಾಡಿ ತೋರಿಸಿ, ಮಾದರಿಯಾಗಿರುವ ಈ ಸ್ವಸಹಾಯ ಸಂಘಗಳಿಗೆ ನಮ್ಮೆಲ್ಲರ ಜೈಕಾರ ಎಂದೂ ಇರುತ್ತದೆ.

ಲೇಖನ: ಸುರೇಶ್ ದೊಡ್ಡಮಾವತ್ತೂರು 

ಚಿತ್ರ ಕೃಪೆ: ಕು. ಶಿಲ್ಪಾ ನಲವಡೆ             

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*