ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ವಿಜಯಪುರದ ಇಬ್ರಾಹಿಂ ಬಾವಡಿ

ವಿಜಯಪುರ: ಸಾವಿರಾರು ಬಾವಿಗಳು, ನೂರಾರು ಬಾವಡಿಗಳು, ಹತ್ತಾರು ಕೆರೆಗಳನ್ನು ಒಡಲಾಳದಲ್ಲಿರಿಸಿಕೊಂಡರೂ ಐತಿಹಾಸಿಕ ವಿಜಯಪುರ ಜಿಲ್ಲೆಗೆ ಅಂಟಿದ ಬರದ ಹಣೆ ಪಟ್ಟಿ ಮಾತ್ರ ಈವರೆಗೂ ಅಳಿಸಲಾಗಿಲ್ಲ!

ವಿಜಯಪುರವನ್ನಾಳಿದ ಶಾಹಿ ಸುಲ್ತಾನರ ಕಾಲದಿಂದಲೂ ಜಿಲ್ಲೆ ಬರಗಾಲಕ್ಕೆ ತುತ್ತಾಗುತ್ತಲೇ ಇದೆ. ಆದರೆ, ಬರದ ಭೀಕರತೆ ಹೋಗಲಾಡಿಸಲು ಶಾಹಿ ಸುಲ್ತಾನರು ಪಟ್ಟ ಶ್ರಮದ ಕಿಂಚಿತ್ತಾದರೂ ಪ್ರಯತ್ನ ಈಗಿನ ಆಡಳಿತ ಸರ್ಕಾರ ಮಾಡಿದ್ದೇ ಆದಲ್ಲಿ, ವಿಜಯಪುರವನ್ನು ಉತ್ತರದ ಕರಾವಳಿಯನ್ನಾಗಿಸುವುದರಲ್ಲಿ ಸಂಶಯವೇ ಇಲ್ಲ.

ಪುನರುಜ್ಜೀವನಕ್ಕಾಗಿ ಬಾಯ್ತೆರೆ ಬಾವಡಿಗಳು

ibrahimpurನಗರದ ಚಾಂದಬಾವಡಿ, ತಾಜ್‌ಬಾವಡಿಯಂತೆ ಇಬ್ರಾಹಿಂಪುರದ ಬೃಹತ್ ಬಾವಿ ಕೂಡ ಬಾವಡಿ ರೂಪ ತಾಳಿದೆ. ಇಂದು ಆ ಬೃಹತ್ ಬಾವಡಿ ಅವಸಾನದ ಅಂಚಿಗೆ ತಲುಪಿದೆ. ಒಂದು ಕಾಲದಲ್ಲಿ ವಿಜಯಪುರದ ಉಪನಗರಗಳಿಗೆ ದಿನ ೨೪ ಗಂಟೆಗಳ ಕಾಲ ಕುಡಿಯುವ ನೀರು ಪೂರೈಸುತ್ತಿದ್ದ ಇಬ್ರಾಹಿಂಪುರ ಬಾವಡಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಸದ್ಯ ಈ ಬಾವಡಿ ಸಾರ್ವಜನಿಕರ ತ್ಯಾಜ್ಯ ಸಂಗ್ರಹಣೆಗೆ ಹೇಳಿ ಮಾಡಿಸಿದ ಜಾಗೆಯಾಗಿದೆ. ಬಾವಿ ನೀರು ಗಬ್ಬೆದ್ದು ನಾರುತ್ತಿದ್ದು, ಸುತ್ತಲಿನ ಬಡಾವಣೆಗಳಿಗೆ ದುರ್ವಾಸನೆ ಹರಡಿಕೊಳ್ಳುತ್ತಿದೆ. ಮಾತ್ರವಲ್ಲ, ಬಾವಿಯಲ್ಲಿದ್ದ ಜಲಚರಗಳು ಶವವಾಗಿ ತೇಲಾಡುತ್ತಿವೆ.

ಬಾವಡಿಯ ಇತಿಹಾಸ

ಶಾಹಿ ಸುಲ್ತಾನರಲ್ಲೇ ಶ್ರೇಷ್ಟ ದೊರೆಯೆನಿಸಿಕೊಂಡ ಎರಡನೇ ಇಬ್ರಾಹಿಂ ಆದಿಲ್ ಶಾಹನ ಕಾಲದಲ್ಲಿ ಬಾವಡಿ ಹಾಗೂ ಬಾವಿ ನಿರ್ಮಾಣ ಸಂಸ್ಕೃತಿ ಬೆಳೆದು ಬಂತು. ಅದರಲ್ಲಿ ಇಬ್ರಾಹಿಂಪುರದ ಬಾವಡಿ ಕೂಡ ಒಂದು. ಈ ಬಾವಡಿ ಸುತ್ತಲೂ ಪ್ರದಕ್ಷಿಣಾ ಪಥ ಹಾಗೂ ವಿಶ್ರಾಂತಿ ಧಾಮಗಳಿವೆ. ಪ್ರದಕ್ಷಿಣಾ ಪಥ ಸ್ವಲ್ಪ ಇಕ್ಕಟ್ಟಾಗಿದೆ. ಇದು ಆಳದ ಬಾವಿ, ಮೂರು ದಿಕ್ಕುಗಳಲ್ಲಿ ಕಮಾನುಗಳಿಂದ ಶೋಭಿತವಾಗಿದೆ. ಇದರ ರಚನೆ ಕಂಡು ಯಾರಾದರೂ ಬೆರಗಾಗಲೇ ಬೇಕು. ಚಿತ್ರೀಕರಣಕ್ಕೂ ಯೋಗ್ಯವಾದ ತಾಣವಿದು! ಇಂತಹ ಬಾವಿಯ ಸಿಹಿ ನೀರು ಜನರು ದಿನಂಪ್ರತಿ ಬಳಕೆ ಮಾಡುತ್ತಿದ್ದರು. ಈ ಹಿಂದೆ ಸ್ಥಳೀಯ ಆಡಳಿತದ ನೆರವಿನಿಂದ ವಿದ್ಯುತ್ ಮೋಟಾರ್ ಮುಖಾಂತರ ನೀರನ್ನು ಪೂರೈಸಲಾಗುತ್ತಿತ್ತು. ಈಗ ಹತ್ತು ವರ್ಷಗಳಿಂದ ಸ್ಥಗಿತಗೊಂಡಿದೆ. ಬಾವಿ ನೋಡಲಿಕ್ಕೆ ಹೋದರೆ ತ್ಯಾಜ್ಯ ವಸ್ತುಗಳನ್ನೆಲ್ಲ ಅಚ್ಚುಕಟ್ಟಾಗಿ ಬಾವಿಗೆ ವಿಸರ್ಜಿಸಲಾಗುವುದನ್ನು ಕಾಣಬಹುದು. ಬಾವಿಯ ಎದುರು ರಕ್ಷಿತ ಸ್ಮಾರಕ ಎಂಬ ಫಲಕ ರಾರಾಜಿಸುತ್ತಿದೆ. ಬಾವಿಯ ನೀರನ್ನೀಗ ಯಾರೂ ಬಳಕೆ ಮಾಡುತ್ತಿಲ್ಲ. ಸೇರಬಾರದ ವಸ್ತುಗಳೆಲ್ಲ ಸೇರಿ ಸಮೀಪ ಬರದಂತೆ ಮಾಡಿವೆ.

ಪುನರುಜ್ಜೀವನಕ್ಕೆ ಒತ್ತಾಯ

ಸಕ್ಕರೆಯಂಥ ಸಿಹಿ ನೀರುಳ್ಳ ಈ ಬಾವಿಯ ನೀರು ಮರುಬಳಕೆಯಾಗಬೇಕಾದರೆ ಸುತ್ತಲಿನ ನಾಗರಿಕರಲ್ಲಿ ಅರಿವು ಮೂಡಿಸಬೇಕಾಗಿದೆ. ಬಾವಿಯ ಹೂಳನ್ನು ತೆಗೆದು ಹಳೆಯ ನೀರನ್ನು ಹೊರಗೆ ಹಾಕಿ, ಮುಚ್ಚಿಹೋದ ನೀರಿನ ಸೆಲೆಗಳಿಗೆ ಮರುಹರಿವು ನೀಡಬೇಕು. ಬಾವಿಯ ಸುತ್ತಲೂ ಎತ್ತರದ ಕಬ್ಬಿಣದ ಜಾಲರಿ ಅಳವಡಿಸಬೇಕುಬೇಕು. ಚರಂಡಿ ನೀರು ಬಾವಿಗೆ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯುತ್ ಮೋಟರ್ ಸ್ಥಾಪಿಸಿ ಬಾವಿಯ ಮೇಲ್ಭಾಗದಲ್ಲಿ ತೊಟ್ಟಿಗಳ ಮುಖಾಂತರ ನೀರು ಪೂರೈಸುವಂತಾಗಬೇಕು. ನಗರದಲ್ಲಿರುವ ಆಯಾ ಪ್ರದೇಶದ ದೊಡ್ಡ-ದೊಡ್ಡ ಬಾವಿಗಳಿಗೆ ಇಂತಹ ಯೋಜನೆಗಳನ್ನು ಹಾಕಿಕೊಂಡು ಪ್ರಾರಂಭದಲ್ಲಿ ಸ್ವಲ್ಪ ಧನ ವಿನಿಯೋಗಿಸಿದರೆ ಸಾಕು, ಪ್ರತಿ ವರ್ಷ ನೀರಿಗಾಗಿ ಸರ್ಕಾರದಿಂದ ಅನುದಾನ ಪಡೆಯುವ ಪ್ರಮೇಯ ತಪ್ಪುವುದರಲ್ಲಿ ಸಂದೇಹವೇ ಇಲ್ಲ ಎಂದು ಸಂಶೋಧಕ ಪ್ರೊ.ಎ.ಎಲ್.ನಾಗೂರ ಅಭಿಪ್ರಾಯಿಸಿದ್ದಾರೆ.

ನಮ್ಮ ಪೂರ್ವಜರ ಜಲಪ್ರಜ್ಞೆ, ಕಾಣ್ಕೆಗಳು ಬರಿ ಕಾಗದದ ಮೇಲಷ್ಟೇ ಕಾಣುವಂತಾಗಬಾರದು ಅಲ್ಲವೇ? ನಗರದಲ್ಲಿರುವ ಬಾವಿ ಹಾಗೂ ಬಾವಡಿಗಳನ್ನು ಪುನರುಜ್ಜೀವನಗೊಳಿಸಿದರೆ, ನಗರ ಸೇರಿದಂತೆ ಸುತ್ತಲಿನ ಹಳ್ಳಿಗಳಿಗೆ ದಿನ ೨೪ ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ. ಇಬ್ರಾಹಿಂಪುರದ ಬಾವಿಗೆ ಶೀಘ್ರವೇ ಕಾಯಕಲ್ಪ ಒದಗುತ್ತದೆಯೆಂದು ಭಾವಿಸಿದ್ದೇನೆ”.

- ಪ್ರೊ.ಎ.ಎಲ್.ನಾಗೂರ, ಸಿಕ್ಯಾಬ್ ಕಾಲೇಜ್ ಉಪನ್ಯಾಸಕರು

 ಚಿತ್ರ-ಲೇಖನ: ರಾಮು ಬಿ.(ಮಸಳಿ)

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*