ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೭: ಕೆರೆ ಶುಚಿಗೆ ನಿಂತ ‘ಮಾದರಿ’ ಕವಿ, ಸಂಗೀತಗಾರರು

ನಮ್ಮೂರಲ್ಲಿ ಒಂದು ಕೆರೆ ಇತ್ತು ಗೊತ್ತಾ, ಅದೇನು ಚೆಂದಾನೋ ಚೆಂದ. ನಾನು ಚಿಕ್ಕವನಿದ್ದಾಗ ಅಲ್ಲೇ ಈಜು ಕಲಿತಿದ್ದು, ಅದೇ ನೀರು ಕುಡಿದು ಬೆಳೆದಿದ್ದು. ನೋಡ್ತಾನೇ ಇದೀನಿ ಕೆರೆ ಸಣ್ಣದಾಗಿ ಹೋಗಿದೆ. ಅಲ್ಲೇನೂ ಇಲ್ಲ! ನನ್ನೂರಲ್ಲಿ ಕೆರೆ ಇದೆ, ನಾನು ಬೆಳೆದಿದ್ದೇ ಅಲ್ಲಿ. ಆದರೆ ಇಂದು ಜೊಂಡು, ಕಸದ ರಾಶಿ0kikkeri3 ಸೇರಿಕೊಂಡು ಬಿಟ್ಟಿದೆ. ಊರ ಹಬ್ಬಕ್ಕೆ ಹೋದಾಗ ನೋಡಿಕೊಂಡು ಬಂದೆ. ಅಲ್ಲಿ ಪೂಜೇನೂ ಮಾಡೋಕೆ ಆಗುತ್ತಿಲ್ಲ! ಹಳ್ಳಿಯಲ್ಲಿ ಬಾಲ್ಯ ಕಳೆದು, ನಗರದಲ್ಲಿ ಯೌವ್ವನ ಹಾಗೂ ಜೀವನ ಕಟ್ಟಿಕೊಂಡು, ಬಹು ಉನ್ನತ ಸ್ಥಾನದಲ್ಲಿರುವ ಜನರೂ ಸೇರಿದಂತೆ ಸಾವಿರಾರು ಜನರ ಮಾತಿದು. ಆದರೆ, ನೆನಪು, ವಿಷಾದದ ಮಾತಿಗಷ್ಟೇ ಸೀಮಿತವಾದರೆ, ಪರಿಸರ ಎಲ್ಲಿ ಉಳಿದೀತು? ಇಂತಹವರಿಗೆಲ್ಲ ವ್ಯತಿರಿಕ್ತವಾಗಿ, ಕೆರೆಯನ್ನು ಪುನಶ್ಚೇತನಗೊಳಿಸುವ ಕಾರ್ಯ ಎಲ್ಲರಿಗೂ ಮಾದರಿಯಾಗಿ ಖ್ಯಾತ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ತವರಲ್ಲಿ ನಡೆದಿದೆ.

ಇಂದು ರಾಜ್ಯದಲ್ಲಿ ಕೆರೆಗಳ ದುಸ್ಥಿತಿಯನ್ನು ನೋಡಿದರೆ ಎಂತಹವರೂ ಮರುಗುತ್ತಾರೆ. ಕನಿಷ್ಠ ‘ಅಯ್ಯೋ ನೀರಿಲ್ಲ, ಬರೀ ಕಸ’ ಎಂದಾದರೂ ಹೇಳುತ್ತಾರೆ. ಆದರೆ, ಇಂತಹ ಪರಿಸ್ಥಿತಿ ತಾವು ಬಾಲ್ಯವನ್ನು ಕಳೆದ ಕೆರೆಗೆ ಬಂದಿದ್ದರೂ ನೋಡಿಕೊಂಡು ಸುಮ್ಮನಿರುವವರು ಅಸಂಖ್ಯ. ಹಾಗೆಂದು ಅವರೇನು ಲಕ್ಷಾಂತರ ಹಣ ಕೊಟ್ಟು ಕೆರೆ ಅಭಿವೃದ್ಧಿ ಮಾಡಬೇಕೆಂದೂ ಇಲ್ಲ. ಎಲ್ಲರಿಗೂ ಅದು ಸಾಧ್ಯವಾಗದು. ಹಣ ಇದ್ದವರು ಕೂಡ ಅದನ್ನು ಮಾಡಲಾರರು. ಆದರೆ, ತಾವು ಬೆಳೆದು ಸಮಾಜದಲ್ಲಿ ಒಂದಷ್ಟು ಹೆಸರು ಗಳಿಸಿದ ಮೇಲೆ, ತಮ್ಮದೇ ಲೋಕದ ಗೆಳೆಯರನ್ನು ಸೇರಿಸಿಕೊಂಡರೆ ಯಾವುದನ್ನೂ ಮಾಡಬಹುದು ಎಂದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯವರು ಮಾಡಿತೋರಿಸಿದ್ದಾರೆ. ಮೈಸೂರು ಮಲ್ಲಿಗೆ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹ ಸ್ವಾಮಿ ಅವರ ಹುಟ್ಟೂರು ಕಿಕ್ಕೇರಿ. ಇಲ್ಲಿನ ಅಮಾನಿ ಕೆರೆಯೇ ಈಗ ಪುನರುತ್ಥಾನದ ಹಂತದಲ್ಲಿದ್ದು, ಅದಕ್ಕೆಲ್ಲ ಕೈಜೋಡಿಸಿರುವವರು ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿರುವ ಮಹನೀಯರು. ಇದಕ್ಕೆ ಸಾಹಿತ್ಯ ವಹಿಸಿರುವುದು ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ.

KikkeriKrishnaಅವರ ಹೆಸರಲ್ಲೇ ಇರುವ ಕೃಷ್ಣಮೂರ್ತಿ ಅವರು ಕಿಕ್ಕೇರಿಯವರು. ಆದರೆ ಇದೀಗ ಬೆಂಗಳೂರು ನಿವಾಸಿ. ಸುಗಮ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದವರು. ಮೇಲಾಗಿ ಸಂಗೀತ ದಿಗ್ಗಜ ಸಿ.ಅಶ್ವತ್ಥ ಶಿಷ್ಯ. ಅವರು ಕಿಕ್ಕೇರಿಯಲ್ಲಿ ಆಗಾಗ ಹಲವು ಸಂಗೀತ ಕಾರ್ಯಕ್ರಮ, ಸಮಾರಂಭ ಮಾಡುತ್ತಿದ್ದಾರೆ. ಆದರೆ ಈಗ ಕೈಗೆತ್ತಿಕೊಂಡಿರುವುದು ಬಹುದೊಡ್ಡ ವಿಷಯ. ಕವಿ ಕೆಎಸ್‌ನ ಅವರ ಶತಮಾನೋತ್ಸವದ ಅಂಗವಾಗಿ ಹುಟ್ಟೂರಾದ ಕಿಕ್ಕೇರಿಯಲ್ಲಿ ಸುಗಮ ಸಂಗೀತ ಭವನ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಿಂತ ಮುಖ್ಯ ಎಂದರೆ ಅವರು ಇಲ್ಲಿ ಮೆರೆಯುತ್ತಿರುವ ಪರಿಸರ ಪ್ರೇಮ. ಪ್ರೇಮಕವಿಯ ಹೆಸರಲ್ಲಿ ಪರಿಸರ ಪ್ರೇಮ ಮೇಳೈಸಲು ಸಾಹಿತಿಗಳು, ಕವಿಗಳು, ಸಂಗೀತಗಾರರು, ಗಾಯಕರನ್ನೆಲ್ಲ ಒಟ್ಟುಗೂಡಿಸಿರುವುದು ಶ್ಲಾಘನಾರ್ಹ ಹಾಗೂ ಮಾದರಿ. ಕಿಕ್ಕೇರಿಯಲ್ಲಿರುವ ರಾಣಿ ಶಾಂತಲೆಯ ಕಾಲದಲ್ಲೂ ಪರಿಸರಯುಕ್ತವಾಗಿದ್ದ ಕಿಕ್ಕೇರಿ ಅಮಾನಿ ಕೆರೆಯ ಪುನರುಜ್ಜೀವನಕ್ಕೆ ಸಾಹಿತ್ಯ-ಸಂಗೀತ ಕ್ಷೇತ್ರದವರು ಹೆಜ್ಜೆ ಇರಿಸಿದ್ದಾರೆ.

kikkeri1 - for Nota 7 - kere manju articleಕಿಕ್ಕೇರಿಯಲ್ಲಿ ಕೆಎಸ್‌ನ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಹಲವು ಬಾರಿ ಇತ್ತ ಸುಳಿದಾಡಿದಾಗ, ಅಮಾನಿ ಕೆರೆಯಲ್ಲಿ ಸಾಕಷ್ಟು ಜೊಂಡು, ಹೂಳು ತುಂಬಿಕೊಂಡಿರುವುದು ಕೃಷ್ಣಮೂರ್ತಿ ಅವರ ಕಣ್ಣಿಗೆ ಬಿದ್ದಿದೆ. ಸುಮಾರು ಏಳು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿರುವ ಕೆರೆಯಲ್ಲಿ ಕಿಕ್ಕೇರಮ್ಮನ ಗುಡಿ ಇದೆ. ಈಕೆ ಊರಮ್ಮ. ಈಕೆಯ ಉತ್ಸವ ನಡೆಯುತ್ತದೆ. ಜೊಂಡು, ಗಿಡಗಂಟಿ ಬೆಳೆದಿದ್ದರಿಂದ ಹಲವು ವರ್ಷದಿಂದ ಕಿಕ್ಕೇರಮ್ಮನ ತೆಪ್ಪೋತ್ಸವ ನಡೆದಿರಲಿಲ್ಲ. ಇದನ್ನು ಮನಗಂಡ ಕೃಷ್ಣಮೂರ್ತಿ, ತಮ್ಮ ಸಂಗೀತ ಕ್ಷೇತ್ರದ ಗೆಳೆಯರನ್ನು ಸೇರಿಸಿಕೊಂಡು ಶ್ರಮಾದಾನಕ್ಕೆ ಇಳಿದೇ ಬಿಟ್ಟರು. ಅಮಾನಿ ಕೆರೆಯಲ್ಲಿ ಬೆಳೆದಿದ್ದ ಜೊಂಡು, ಗಿಡಗಂಟಿಯನ್ನು ತೆಗೆದು ಶುಚಿ ಮಾಡಲು ತಂಡ ನೇಮಿಸಿ, ಅವರೊಂದಿಗೆ ಗಾಯಕರಾದ ಪಿ. ಶಿವಶಂಕರ್, ಪಿ.ಎನ್. ಜಯರಾಂ, ಅಭಿಷೇಕ್, ಅಮಿತ್‌ರಾಜ್, ಕಾರ್ತಿಕ, ಸನತ್‌ಕುಮಾರ್ ಕೈಜೋಡಿಸಿದರು. ಅಷ್ಟೇ ಅಲ್ಲ, ಗ್ರಾಪಂ ಉಪಾಧ್ಯಕ್ಷ ಕೆ.ಎನ್. ನಾಗರಾಜು ಹಾಗೂ ಗ್ರಾಮ ಮುಖಂಡರು ಇವರ ಶ್ರಮಾದಾನಕ್ಕೆ ನೆರವಾದರು. ಕೆರೆಯ ಸೋಪಾನಕಟ್ಟೆಯೂ ಶುಚಿಯಾಯಿತು. ದೇವಸ್ಥಾನವೂ ಶುಚಿಯಾಯಿತು. ಕೆರೆಯಲ್ಲಿ ತೆಪ್ಪೋತ್ಸವವೂ ನಡೆಯಿತು. ಇಷ್ಟಕ್ಕೇ ಎಲ್ಲವೂ ನಿಂತಿಲ್ಲ. ಈ ಕೆರೆಯಲ್ಲೇ ಬೃಹತ್ ತೇಲುವ ವೇದಿಕೆ ನಿರ್ಮಿಸಿ ಅಲ್ಲಿ ನಾಡಿನ ಪ್ರಖ್ಯಾತರಿಂದ ಸಂಗೀತ ಕಾರ್ಯಕ್ರಮವೂ ಇದೀಗ ನಡೆಯಲಿದೆ. ಕೆಎಸ್‌ನ ಶತಮಾನೋತ್ಸವ ಅಂಗವಾಗಿ ಸುಗಮ ಸಂಗೀತ ಭವನದ ಶಂಕುಸ್ಥಾಪನೆಯ ಸಂದರ್ಭದಲ್ಲಿ ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ, ಏಪ್ರಿಲ್ ೨೯ ಮತ್ತು ೩೦ರಂದು ಕಿಕ್ಕೇರಿಯ ಅಮಾನಿ ಕೆರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಗೀತ-ನೃತ್ಯೋತ್ಸವದ ಕಾರ್ಯಕ್ರಮ ಇದಾಗಿದ್ದು, ಸಂಗೀತ-ನೃತ್ಯ ಅಕಾಡೆಮಿಯ ಸಹಕಾರವೂ ಇದೆ. ಕೆರೆಯಲ್ಲೇ ೨೫-೩೦ ಜನರು ಕೂರಬಹುದಾದ ತೇಲುವ ವೇದಿಕೆಯನ್ನು ನಿರ್ಮಿಸಿ ಈ ಕಾರ್ಯಕ್ರಮ ನಡೆಸುವುದು ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರು ಕಲ್ಪನೆ. ಜತೆಗೆ ಈ ಕಾರ್ಯಕ್ರಮದ ನಂತರ ಕೆರೆಯನ್ನು ಸಂಪೂರ್ಣ ಅಭಿವೃದ್ಧಿಯಾಗಲು ಸ್ಥಳೀಯರೊಂದಿಗೆ ಶ್ರಮಿಸಿ, ಅದನ್ನು ಪ್ರವಾಸಿ ತಾಣವನ್ನಾಗಿಸುವ ಉದ್ದೇಶವೂ ಕಿಕ್ಕೇರಿ ಕೃಷ್ಣಮೂರ್ತಿಯವರದ್ದಾಗಿದೆ. ಕಿಕ್ಕೇರಿಯನ್ನು ಕೆಎಸ್‌ನ ಅವರ ತವರು ಎಂದು ಬಿಂಬಿಸಲು ಅಮೆರಿಕದ ಅಕ್ಕ ಸಂಸ್ಥಾಪಕ ಅಧ್ಯಕ್ಷ ಅಮರನಾಥ ಗೌಡ ಕೂಡ ನೆರವಾಗಿದ್ದಾರೆ. ಅವರೂ ಕೆರೆಯ ಅಭಿವೃದ್ಧಿಗೆ ಕೈಜೋಡಿಸಲು ಮುಂದಾಗಿರುವುದು ಶ್ಲಾಘನಾರ್ಹ.

ಒಂದು ತೆಪ್ಪೋತ್ಸವ ನಡೆಸಲು ಸಾಧ್ಯವಾಗದೆ ಜೊಂಡು-ಕಸದಿಂದ ತುಂಬಿಹೋಗಿದ್ದ ಕೆರೆಯನ್ನು ಶ್ರಮಾದಾನದಿಂದ ಶುಚಿಗೊಳಿಸಲು ಸ್ನೇಹಿತರು ಹಾಗೂ ಸ್ಥಳೀಯ ಜನರನ್ನು ಹುರಿದುಂಬಿಸಿದ ಕಿಕ್ಕೇರಿ ಕೃಷ್ಣಮೂರ್ತಿ ಅವರು, ರಾಜ್ಯದ ಇತರೆ ಪ್ರದೇಶದ ಜನರಿಗೆ ಮಾದರಿ. ತನ್ನೂರು ಎಂದು ಹೇಳಿಕೊಂಡು ವೇದಿಕೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬದಲು ಪರಿಸರ ಕಾಳಜಿಯುತ, ಅದರಲ್ಲೂ ನೀರಿನ ಸೆಲೆಯಾದ ಕೆರೆಗಳನ್ನು ಉಳಿಸುವತ್ತ ಸಣ್ಣ ಪ್ರಯತ್ನವನ್ನು ‘ಪ್ರಖ್ಯಾತ’ರೆನಿಸಿಕೊಂಡವರು ಮಾಡಬೇಕು. ಆಗ ಕಿಕ್ಕೇರಿ ಎಂಬ ಐದು ಸಾವಿರ ಮನೆಗಳ ಊರಿನಲ್ಲಿ ಪುನಶ್ಚೇತನವಾಗಿರುವ ಕೆರೆ ಪ್ರತಿಯೊಂದು ಊರಿನಲ್ಲೂ ಉಳಿಯಲು ಸಾಧ್ಯ. ಇದಕ್ಕೆ ಸ್ಥಳೀಯರು, ಸಂಘ-ಸಂಸ್ಥೆಗಳೂ ನೆರವಾಗಬೇಕು.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*