ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೬: ಇಲ್ಲೊಂದು ಅಪರೂಪದ ಸಾಂಪ್ರದಾಯಿಕ ಕೆರೆ ಹಬ್ಬ!

ದ್ವಾರದಲ್ಲಿ ಬಾಳೆಕಂದು, ಮಾವಿನ ತೋರಣ ಶೃಂಗಾರ, ಒಳಹೋದ ಕೂಡಲೇ ಹಬ್ಬಕ್ಕೆ ಬಣ್ಣಬಣ್ಣದ ಹೂವಿನ ಅಕ್ಷರಗಳ ಸುಸ್ವಾಗತ,  ವಿನಾಯಕನ ಜೊತೆಗೆ ಗಂಗಾಪೂಜೆ. ಗೋಮಾತೆಗೆ ಪೂಜಾಕೈಂಕರ್ಯ, ಮುತ್ತೈದೆಯರಿಂದ ಕೆರೆಗೆ ಬಾಗಿನ ಅರ್ಪಣ, ಚಿಣ್ಣರಿಂದ ಪರಿಸರ ಉಳಿಸಿ, ನೀರು ರಕ್ಷಿಸಿ, ಕೆರೆ ಸಂರಕ್ಷಿಸಿ ಎಂಬ ಘೋಷವಾಕ್ಯ. ಇದು ಹಲಗೇವಡೇರಹಳ್ಳಿ ಕೆರೆ ಹಬ್ಬದ ಸಂಭ್ರಮ…

Hv-kereರಾಜಧಾನಿ ಬೆಂಗಳೂರಿನ ಸೌಂದರ್ಯ ಹಾಗೂ ವಾತಾವರಣಕ್ಕೆ ಕಾರಣವಾಗಿದ್ದ ಕೆರೆಗಳು ಬಹುತೇಕರಿಗೆ ಇಂದು ಮರೆತುಹೋಗಿವೆ. ಅವುಗಳ ಮೇಲೆ ಸಮಾಧಿಸೌಧ ನಿರ್ಮಾಣ ಮಾಡುವ ಸಂಪ್ರದಾಯಕ್ಕೇ ನಾಂದಿ ಹಾಕಿ ಬಹಳ ಕಾಲ ಕಳೆದುಹೋಗಿದೆ. ಇನ್ನು ಕೆರೆ ಹಬ್ಬ ಎಂಬ ಸಾಂಪ್ರದಾಯಿಕ ಸಂಸ್ಕೃತಿ ಎಲ್ಲಿ ಉಳಿದೀತು? ಇಂತಹ ‘ಮರೆಗುಳಿ’ ಕಾಲದಲ್ಲೂ ಕೆರೆಯನ್ನು ನೆನಪಿಸಿಕೊಂಡು ಅದಕ್ಕೊಂದು ಹಬ್ಬ ಮಾಡಿ, ಸಂಪ್ರದಾಯದಲ್ಲಿ ಅದನ್ನು ಆಚರಿಸುವ ಮಹತ್ತರ ಕಾರ್ಯ ರಾಜರಾಜೇಶ್ವರಿನಗರದಲ್ಲಿ ಇತ್ತೀಚೆಗೆ ನಡೆಯಿತು. ರಾಜರಾಜೇಶ್ವರಿ ದೇವಸ್ಥಾನದಿಂದ ಕೂಗಳತೆಯ ದೂರದಲ್ಲಿರುವ ಹಲಗೇವಡೇರಹಳ್ಳಿ ಕೆರೆಯಲ್ಲಿ ಇಂತಹ ಹಬ್ಬ ಆಯೋಜಿಸಲಾಗಿತ್ತು. ಪರಿಸರ ಹಿತ ಸಂರಕ್ಷಣಾ ಸಮಿತಿ ಈ ಸಂಸ್ಕೃತಿ ಹಬ್ಬವನ್ನು ಸಂಘಟಿಸಿ, ಅದರಲ್ಲಿ ಪ್ರಮುಖವಾಗಿ ಸ್ಥಳೀಯ ವಿದ್ಯಾರ್ಥಿಗಳಿಂದಲೇ ಇಂತಹ ಕಾರ್ಯ ಮಾಡಿಸಿದ್ದು ಶ್ಲಾಘನಾರ್ಹ. ಇಂತಹ ಕೆರೆ ಹಬ್ಬದಲ್ಲಿ ಪಾಲ್ಗೊಂಡು ಅದರ ಅನುಭವದ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ.

ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿ ಕೆರೆ ಅಂದು ಚಿಣ್ಣರಿಂದ ನಳನಳಿಸುತ್ತಿತ್ತು. ರಾಜರಾಜೇಶ್ವರಿ ನಗರದ ಪರಿಸರ ಹಿತ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ‘ಕೆರೆ ಹಬ್ಬ’ದ ಸಂದರ್ಭದಲ್ಲಿ ಚಿಣ್ಣರಿಂದ ಹಿಡಿದು ವಯೋವೃದ್ಧರು ತಮ್ಮ ಪೂರ್ವಪರಂಪರೆ ಮೆರೆದರು. ಮಹಿಳೆಯರು ಗೋಪೂಜೆ, ಬಾಗಿನ, ಗಂಗಾಪೂಜೆ ಎಂದು ಸಂಪ್ರದಾಯ ಮೆರೆದರೆ, ಶಾಲಾ ಮಕ್ಕಳು ಪರಿಸರದ ಪ್ರತಿರೂಪವಾಗಿದ್ದರು.  ಮರ, ಗಿಡ, ಭೂಮಿ, ನವಿಲು, ಮೊಲ ಸೇರಿದಂತೆ ಎಲ್ಲರ ವೇಷ ಧರಿಸಿದ್ದರು. ಪರಿಸರ ರಕ್ಷಿಸಿ ಎಂಬ ಸಂದೇಶವನ್ನೂ ಸಾರಿದರು.

ಹಲಗೆವಡೇರಹಳ್ಳಿ ಕೆರೆ ಐದು ವರ್ಷದ ಹಿಂದೆ ಪಾಳುಬಿದ್ದಿತ್ತು. ಈ ಕೆರೆಯ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದು ಬಿಬಿಎಂಪಿಯ ಅಂದಿನ ಆಯುಕ್ತ ಸಿದ್ದಯ್ಯ. ಕೆರೆ ವೀಕ್ಷಣೆಯ ನಂತರದ ಮೂರು ದಿನದಲ್ಲೇ  ಅಭಿವೃದ್ಧಿ ಯೋಜನೆಗೆ ಸಮ್ಮತಿ ನೀಡಿದ್ದರು. ಆದರೆ, ಆ ಅಭಿವೃದ್ಧಿ ಕಾರ್ಯ ಆರಂಭವಾಗಲು ವರ್ಷ ಕಳೆಯಿತು. ಇದಕ್ಕೆ ಸ್ಥಳೀಯ ರಾಜಕಾರಣವೇ ಕಾರಣ. ಅದೆಲ್ಲದರ ಹೊರತಾಗಿ, ಸ್ಥಳೀಯ ನಾಗರಿಕ ಸಂಸ್ಥೆಗಳ ಹೋರಾಟದಿಂದ ಈಗ ಕೆರೆ ಒಂದು ಹಂತಕ್ಕೆ ಅಭಿವೃದ್ಧಿಯನ್ನು ಕಂಡಿದೆ. ಈ ಕೆರೆಯಲ್ಲಿ ನೀರು ನಿಂತಿರುವುದರಿಂದ ಸುತ್ತಮುತ್ತದ ಎಲ್ಲ ಕೊಳವೆಬಾವಿಗಳೂ ಮರುಪೂರಣಗೊಂಡಿವೆ. ನೀರು ನೀಡುತ್ತಿವೆ. ಅಲ್ಲದೆ, ಈ ಕೆರೆ ಪ್ರದೇಶದಲ್ಲಿ ಆಹ್ಲಾದಕರ ಪರಿಸ್ಥಿತಿಯನ್ನು ನೀಡುತ್ತಿದ್ದು, ವಾಯುವಿಹಾರಕ್ಕೆ ಹೇಳಿಮಾಡಿಸಿದ ತಾಣವಾಗಿದೆ. ಇಂತಹ ಕೆರೆಯ ಅಭಿವೃದ್ಧಿ ಹಾಗೂ ಮುಂದಿನ ಸಂರಕ್ಷಣಾ ಜವಾಬ್ದಾರಿಯನ್ನು ಅರಿವು ಮೂಡಿಸಲು ಪರಿಸರ ಹಿತಸಂರಕ್ಷಣಾ ಸಮಿತಿ ‘ಕೆರೆ ಹಬ್ಬ’ವನ್ನು ಆಯೋಜಿಸಿತ್ತು.

Hv-kere 3ಮುಂಜಾನೆ ಗಣಪ ಹಾಗೂ ಗಂಗಾಪೂಜೆ ಪ್ರಾರಂಭವಾದ ಹಬ್ಬದ ಆಚರಣೆಯಲ್ಲಿ ಸ್ಥಳೀಯ ಕಾರ್ಪೊರೇಟರ್ ನಳಿನಿ ಮಂಜು ಸಕ್ರಿಯವಾಗಿ ಭಾಗವಹಿಸಿದ್ದರು. ಇತರೆ ಮಹಿಳೆಯರೊಂದಿಗೆ ಸೇರಿಕೊಂಡು ಗೋವಿಗೆ ಪೂಜೆ ಮಾಡಿದರು, ಕೆರೆಗೆ ಬಾಗಿನ ಅರ್ಪಿಸಿದರು.  ಕೆರೆ ಉಳಿಸಿ, ನೀರು ಉಳಿಸಿ, ಪರಿಸರ ಸಂರಕ್ಷಿಸಿ ಎಂದು ಅಶ್ವಿನಿ ಶಾಲೆ, ಜ್ಞಾನಾಕ್ಷಿ ಶಾಲೆ, ಬಿಇಐ ಶಾಲೆ ಮಕ್ಕಳು ಬ್ಯಾಂಡ್ ಮೂಲಕ ಗಮನ ಸೆಳೆದರು. ಪರಿಸರ ಸಂರಕ್ಷಣೆ ಕುರಿತ ಘೋಷಣೆ ಕೂಗುತ್ತಾ ಕೆರೆಯನ್ನು ಒಂದು ಸುತ್ತು ಹಾಕಿದರು. ಇವರೊಂದಿಗೆ ಹಿರಿಯರೂ ಹೆಜ್ಜೆ ಹಾಕಿದರು. ಪರಿಸರಕ್ಕೆ ಸಂಬಂಧಿಸಿದ ವೇಷಭೂಷಣಗಳನ್ನು ಮಕ್ಕಳು ಧರಿಸಿದ್ದರು. ಇದರಲ್ಲಿ ಭೂತಾಯಿ ಸೇರಿದಂತೆ ಮರ, ಗಿಡ, ಗೋವು, ನವಿಲು, ಮೊಲ ಸೇರಿದಂತೆ ಹಲವು ರೀತಿಯ ವೇಷ ಹಾಕಿದ್ದರು. ಅಲ್ಲದೆ, ಮರ ಕಡಿದು ಪರಿಸರವನ್ನು ಹಾಳು ಮಾಡುವ ರಕ್ಕಸರ ಕರಾಳಮುಖದ ಪರಿಚಯವನ್ನೂ ಮಕ್ಕಳು ಇಲ್ಲಿ ಮಾಡಿಸಿದರು.  ಮಕ್ಕಳಿಂದ ಪರಿಸರ ಕುರಿತಾದ ಹಾಡು, ನೃತ್ಯ ಕಾರ್ಯಕ್ರಮಗಳು ನೂರಾರು ಸಂಖ್ಯೆಯಲ್ಲಿದ್ದ ಜನರ ಮನಸೂರೆಗೊಂಡವು.

HV-kere1ಬೆಂಗಳೂರು ಉಳಿಯಬೇಕಾದರೆ ಕೆರೆಗಳ ರಕ್ಷಣೆ ಮತ್ತು ಪೋಷಣೆ ಅಗತ್ಯ. ಬದುಕಲು ನೀರು ಅವಶ್ಯ.  ನೀರು, ಮರ, ಗಿಡಗಳ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣವಾಗಲಿದೆ. ಯುವ ಪೀಳಿಗೆ ನೀರು ಹಾಗೂ ಪರಿಸರದ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಇದನ್ನು ಅವರಿಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಅರಿವು ಮೂಡಿಸುತ್ತದೆ. ಇದಕ್ಕಿಂತ ಮಿಗಿಲಾಗಿ ಶಾಲೆಯಲ್ಲಿ ಶಿಕ್ಷಕರು ಅವರಿಗೆ ಕೆರೆ ಸಂರಕ್ಷಣೆ, ಪರಿಸರದ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಸಿದ್ದಪ್ಪ ತಿಳಿಸಿದರು. ಹಲಗೆವಡೇರಹಳ್ಳಿ ಕೆರೆಗೆ ಒಳಚರಂಡಿ ನೀರು ಹರಿದು ಬರುತ್ತಿದ್ದು, ಮುಂದಿನ ವರ್ಷದೊಳಗೆ ಸಂಸ್ಕರಣ ಘಟಕ ನಿರ್ಮಾಣ ಮಾಡಬೇಕೆಂದು ಸ್ಥಳೀಯ ಕಾರ್ಪೊರೇಟರ್ ನಳಿನಿ ಮಂಜು ಅವರಿಗೆ ಸಿದ್ದಪ್ಪ ಮನವಿ ಮಾಡಿದರು.

HV-kere2ಪರಿಸರ ಮಾಲಿನ್ಯದೊಂದಿಗೆ ಬದುಕುತ್ತಿರುವ ನಾವೆಲ್ಲಾ ಪರಿಸರ ರಕ್ಷಣೆ ಮಾಡುವ ಪಣ ತೊಡಬೇಕು. ಈ ರೀತಿಯ ಕಾರ್ಯಕ್ರಮ ಎಲ್ಲರಿಗೂ ಪ್ರೇರೆಪಣೆಯಾಗಲಿದೆ. ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಮುಖಂಡ ಎಂ. ರಾಜ್‌ಕುಮಾರ್ ತಿಳಿಸಿದರು. ಸಮಿತಿಯ ಗೌರವ ಅಧ್ಯಕ್ಷ ಕೆ. ಭೂಪಾಲ್, ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಎಂ. ಜಿ. ನರಸಿಂಹ ಪ್ರಸಾದ್ ಹಾಗೂ ಜೆಡಿಎಸ್ ಮುಖಂಡ ರಮೇಶ್, ಕಾಂಗ್ರೆಸ್ ಮುಖಂಡ ವಿ.ಸಿ. ಚಂದ್ರು  ಉಪಸ್ಥಿತರಿದ್ದರು.

ಇಲ್ಲಿ ಹಲಗೇವಡೇರಹಳ್ಳಿ ಕೆರೆ ಹಬ್ಬ ಪ್ರಸ್ತಾಪಿಸಿದ್ದಕ್ಕೆ ಪ್ರಮುಖ ಕಾರಣವಿದೆ. ನಗರದಲ್ಲಿ ಹಲವು ಕೆರೆಗಳು ಅಸ್ತಿತ್ವಕ್ಕೇ ಹೋರಾಟ ಮಾಡುತ್ತಿವೆ. ಕೆಲವುಗಳ ಅಸ್ತಿತ್ವವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆರೆಗೊಂದು ಹಬ್ಬ ಮಾಡಿ ಹಿಂದಿನ ಸಂಸ್ಕೃತಿಯನ್ನು ತಿಳಿಸಿಕೊಡುವ ಜೊತೆಗೆ, ಮಕ್ಕಳನ್ನು ಜೊತೆಗೂಡಿಸಿಕೊಂಡು ಅವರಿಗೆ ಪರಿಸರ, ಕೆರೆಯ ಮಹತ್ವ ತಿಳಿಸಿಕೊಟ್ಟಿದ್ದು ಅತ್ಯಂತ ಶ್ಲಾಘನಾರ್ಹ. ಇದು ನಗರದಲ್ಲಿ ಇಂದಿಗೂ ಉಳಿದಿರುವ ಎಲ್ಲ ಕೆರೆಗಳಲ್ಲೂ ವರ್ಷಕ್ಕೆ ಒಂದು ಬಾರಿಯಾದರೂ ನಡೆದರೆ, ಕೆರೆಗಳ ಸ್ವಚ್ಛತೆ ಹಾಗೂ ಅದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಮಹತ್‌ಕಾರ್ಯ ಆದಂತಾಗುತ್ತದೆ. ಮತ್ತಷ್ಟು ನಾಗರಿಕರಿಗೆ, ಸಂಘ-ಸಂಸ್ಥೆಗಳಿಗೆ ಇದು ಮಾದರಿ ಆಗಬೇಕು ಎಂಬುದೇ ಉದ್ದೇಶ.

ಚಿತ್ರ-ಲೇಖನ: ಕೆರೆ ಮಂಜುನಾಥ್

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*