ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನದಿಗಳನ್ನು ನಲುಗಿಸಬೇಡಿ

ನೀರಿನ ಸಮಸ್ಯೆ ದಿನನಿತ್ಯ ಉಲ್ಬಣಗೊಳ್ಳುತ್ತಿದ್ದಂತೆ ನದಿ ಜೋಡಣೆ, ನದಿ ಮುಖ ತಿರುಗಿಸುವಿಕೆ, ಪಶ್ಚಿಮಾಭಿಮುಖವಾಗಿ ಹರಿವ ಕರ್ನಾಟಕದ ನದಿಗಳು ಇರುವುದೇ ನಮ್ಮ ಆಗತ್ಯ ಪೂರೈಸಲು ಎಂಬ ವಾದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿ ಬರುತ್ತಿದೆ. ರಾಜ್ಯದ ಎಲ್ಲ ಗ್ರಾಮೀಣ ಜನವಸತಿಗಳಿಗೆ ನದಿ ಮೂಲಗಳಿಂದ ಕುಡಿಯುವ ನೀರನ್ನು ಪೂರೈಸಲು ಸುಮಾರು 52,000 ಕೋಟಿ ರೂಪಾಯಿ ಅಗತ್ಯವಿದೆ ಎಂದು ಕಳೆದ ವರುಷ ಅಂದಾಜು ಮಾಡಿದ ವರದಿ ಬಂದಿತ್ತು. ಅಂಥ ಒಂದು ವರದಿಯ ಪ್ರಕಾರ ಕುಡಿಯುವ ನೀರು ಪೂರೈಸಲು 85 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಪಶ್ಚಿಮ ದಿಕ್ಕಿಗೆ ಹರಿದು ಸಮುದ್ರ ಸೇರುವ ನದಿಗಳ ನೀರನ್ನು ಬಳಸಿಕೊಳ್ಳುವುದರಿಂದ ಮಾತ್ರ ಈ ಬೇಡಿಕೆ ಈಡೇರಿಸಲು ಸಾಧ್ಯ ಮತ್ತು ಅದಕ್ಕಾಗಿ ಕಾರ್ಯಕ್ರಮ ರೂಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಪಶ್ಚಿಮ ಘಟ್ಟದ ಮಳೆಕಾಡುಗಳಲ್ಲಿ ಹುಟ್ಟಿ, ಅರಬ್ಬೀ ಕಡಲು ಸೇರುವ ಕರ್ನಾಟಕದ ನದಿಗಳ ನೀರು ಸಮುದ್ರಕ್ಕೆ ಹರಿದು ವ್ಯರ್ಥವಾಗುತ್ತಿದೆ ಎಂಬ ಅವೈಜ್ಞಾನಿಕ ವಾದವೂ ಸಾಕಷ್ಟು ಚರ್ಚೆಗೋಳಪಟ್ಟಿದೆ.

ಸರಳ ಭಾಷೆಯಲ್ಲಿ ಹೇಳಬೇಕೆಂದರೆ, ಈ ನದಿಗಳು ತಾವು ಹುಟ್ಟುವ ತಾಣದಿಂದ ಸಮುದ್ರ ಸೇರುವವರೆಗೂ ಅನೇಕ ತೆರನ ಜೀವಜಾಲ ಪೋಷಿಸುವ ಕರ್ಯವೆಸಗುತ್ತವೆ. ಸಿಹಿನೀರ ಮೀನುಗಳು, ಅಸಂಖ್ಯ ಆಕಶೇರುಕಗಳು, ಉಭಯವಾಸಿಗಳು, ಮತ್ತು ನೂರಾರು ವಿಧದ ಜಲಸಸ್ಯ ಪ್ರಭೇದಗಳಿಗೆ ಈ ನದಿಗಳು ಬಹು ಮುಖ್ಯ ತಾಣವಾದರೆ, ನದಿ ನೀರನ್ನೇ ಅವಲಂಬಿಸಿ ಬೇಸಾಯ ಮಾಡುವ ಕೃಷಿಕರಿಗೆ ಮತ್ತು ಸಿಹಿನೀರ ಮೀನನ್ನೇ ಅವಲಂಬಿಸಿ ಬದುಕುವ ಬೆಸ್ತರಿಗೆ ಇವು ಜೀವನಕ್ಕೋಪಾಯ. ನದಿಯ ಅಳಿವೆ ಪ್ರದೇಶಗಳು ಅನೇಕ ತೆರನ ಜೀವಿಗಳ ಸಂತಾನೋತ್ಪತ್ತಿಯ ತಾಣ. ಕರ್ನಾಟಕದ ಇಂಥ ನದಿಗಳು ತಮ್ಮ ರಭಸದ ಹರಿವಿನೊಟ್ಟಿಗೆ ಅಗಾಧ ಪ್ರಮಾಣದ ಪೋಷಕಾಂಶಗಳನ್ನು ಅರಬ್ಬೀ ಸಮುದ್ರಕ್ಕೆ ಕ್ಷಣಕ್ಷಣಕ್ಕೂ ಸೇರಿಸುವ ಪರಿಸರ ಸೂಕ್ಷ್ಮ ಕಾರ್ಯವೆಸಾಗುತ್ತಿವೆ. ಇಂಥ ಪೋಷಕಾಂಶಗಳನ್ನೇ ಅವಲಂಬಿಸಿ ಸಮುದ್ರದ ಇತರ ಜೀವಿಗಳು ಬದುಕುವ ಆಹಾರ ಸರಪಣಿ ತೀರ ಕ್ಲಿಷ್ಟವೂ, ಸೂಕ್ಷ್ಮವೂ ಆದದ್ದು. ಲಕ್ಷಾಂತರ ವರುಷಗಳಿಂದ ವಿಕಸನ ಹೊಂದಿದ ಇಂಥ ಜೀವಜಾಲದ ಸರಪಳಿಯನ್ನು ಕದಡುವ ಯಾವ ನೈತಿಕ ಹಕ್ಕೂ ನಮಗಿಲ್ಲ ಎಂಬುದನ್ನು ಅರಿಯಬೇಕಿದೆ.

ಈಗಾಗಲೇ ಅಣೆಕಟ್ಟು ಕಟ್ಟಿ ನದಿಗಳ ಹರಿವನ್ನು ನಾವು ಸಾಕಷ್ಟು ಕಡಿತಗೊಳಿಸಿದ್ದೇವೆ. ಉದಾಹರಣೆಗೆ, ಎಂದೆಂದಿಗೂ ತುಂಬಿ ತುಳುಕಬೇಕಿದ್ದ ಶರಾವತಿ ನದಿಯ ಗೇರುಸೊಪ್ಪೆ ಸಮೀಪದ ದೃಶ್ಯ (ಚಿತ್ರ ನೋಡಿ) ನಿಜಕ್ಕೂ ಕಳವಳಕಾರಿ. ರಾಜ್ಯದ, ದೇಶದ, ಕುಡಿವ ನೀರಿನ ಸಮಸ್ಯೆಗೆ ನದಿ ಜೋಡಣೆ, ತಿರುಗಿಸುವಿಕೆಯೇ ಉತ್ತರವಾದಲ್ಲಿ ಅದು ಧೀರ್ಘ ಕಾಲೀನ ಪರಿಸರ ಸಂಬಂಧಿ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಮತ್ತು ಅದರ ಪರಿಣಾಮವನ್ನು ಮುಂದಿನ ಜನಾಂಗ ಎದುರಿಸಬೇಕಾಗುತ್ತದೆ.

ಇರುವ ಕೆರೆ, ಸರೋವರಗಳನ್ನು ಮುಚ್ಚಿ ಇನ್ನೇನೋ ಅಭಿವೃದ್ಧಿ ಸಾಧಿಸುವ ಹುಮ್ಮಸ್ಸಿನಲ್ಲಿ ನಾವು ಸಾಂಪ್ರದಾಯಿಕ ಜಲಮೂಲಗಳನ್ನು ಸಾಕಷ್ಟು ನಾಶಪಡಿಸಿದ್ದೇವೆ. ಅಂತರ್ಜಲ ಮಟ್ಟ ದಿನೇ ದಿನೇ ಕೆಳಕ್ಕಿಳಿಯುತ್ತಿರುವುದಷ್ಟೆ ಅಲ್ಲ, ಸಾಕಷ್ಟು ಕಲುಷಿತಗೊಂಡಿದೆ. ಸ್ಥಳೀಯ ಜಲ ಮೂಲಗಳ ಸಮರ್ಪಕ ನಿರ್ವಹಣೆಯಲ್ಲಿನ ವೈಫಲ್ಯ ಇಲ್ಲಿ ಉಲ್ಲೇಖಾರ್ಹ. ಪಶ್ಚಿಮ ದಿಕ್ಕಿಗೆ ಹರಿದು ಸಮುದ್ರ ಸೇರುವ ನದಿಗಳನ್ನು ಅವುಗಳಷ್ಟಕ್ಕೆ ಹರಿಯಬಿಡುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು. ಜನಸಂಖ್ಯೆ ನಿಯಂತ್ರಣ, ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ, ಇತರೆಲ್ಲ ಜೀವಜಲಕ್ಕೂ ನಮ್ಮಂತೆ ಬದುಕುವ ಹಕ್ಕಿದೆ ಎಂಬ ತಿಳಿವಳಿಕೆ ಮತ್ತು ಈ ಅಪೂರ್ವ ನೈಸರ್ಗಿಕ ಸಂಪತ್ತನ್ನು ಮುಂದಣ ಯುಗಕ್ಕೂ ಕಾಪಾಡಬೇಕಾದ ನಮ್ಮ ಜವಾಬ್ದಾರಿ ಇವುಗಳ ವೈಜ್ಞಾನಿಕ ಹಿನ್ನೆಲೆಯಲ್ಲಿ ಇಂದು ನಮ್ಮೆಲ್ಲ ನೀರಿನ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕಿದೆ. ನಮ್ಮ ನದಿಗಳು ಎಂದೆಂದಿಗೂ ಜೀವನದಿಗಳಾಗಿಯೇ ಉಳಿಯುವಂತಾಗಬೇಕು.

ಲೇಖನ ಕೃಪೆ: ರವಿ ಹೆಗಡೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*